Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 30

ದೇವಾಲಯದ ಪ್ರತಿಷ್ಠೆಗಾಗಿ ರಚಿಸಲ್ಪಟ್ಟಿದೆ. ರಚನೆಗಾರ: ದಾವೀದ.

30 ಯೆಹೋವನೇ, ನನ್ನನ್ನು ಇಕ್ಕಟ್ಟುಗಳಿಂದ ಮೇಲೆತ್ತಿದವನು ನೀನೇ;
    ಶತ್ರುಗಳಿಗೆ ಸೋತುಹೋಗಿ ಅವರ ಹಾಸ್ಯಕ್ಕೆ ಗುರಿಯಾಗದಂತೆ ಮಾಡಿದವನು ನೀನೇ;
    ಆದ್ದರಿಂದ ನಿನ್ನನ್ನು ಕೊಂಡಾಡುವೆನು.
ನನ್ನ ದೇವರಾದ ಯೆಹೋವನೇ, ನಾನು ನಿನಗೆ ಪ್ರಾರ್ಥಿಸಿದಾಗ
    ನೀನು ನನ್ನನ್ನು ಗುಣಪಡಿಸಿದೆ.
ಯೆಹೋವನೇ, ನೀನು ನನ್ನನ್ನು ಸಾವಿನಿಂದ ಬದುಕಿಸಿದೆ;
    ಪಾತಾಳಕ್ಕೆ ಇಳಿದುಹೋಗದಂತೆ ನನ್ನನ್ನು ಕಾಪಾಡಿದೆ.[a]

ಯೆಹೋವನ ಭಕ್ತರೇ, ಆತನನ್ನು ಕೀರ್ತಿಸಿರಿ!
    ಆತನ ಪರಿಶುದ್ಧ ಹೆಸರನ್ನು[b] ಕೊಂಡಾಡಿರಿ.
ಆತನ ಕೋಪವು ಕ್ಷಣಮಾತ್ರವಿರುವುದು.
    ಆತನ ಪ್ರೀತಿಯಾದರೋ ಶಾಶ್ವತವಾದದ್ದು.
ನಾನು ಸಂಜೆಯಲ್ಲಿ ದುಃಖದಿಂದ ಮಲಗಿಕೊಂಡರೂ
    ಮುಂಜಾನೆ ಹರ್ಷದಿಂದ ಎಚ್ಚರಗೊಳ್ಳುವೆನು.

ನಾನು ಸುರಕ್ಷಿತವಾಗಿದ್ದಾಗ
    ನನಗೆ ಕೇಡೇ ಇಲ್ಲವೆಂದುಕೊಂಡೆನು.
ಯೆಹೋವನೇ, ನಾನು ನಿನ್ನ ಕೃಪೆಗೆ ಪಾತ್ರನಾಗಿದ್ದಾಗ
    ನನ್ನನ್ನು ಯಾವುದೂ ಸೋಲಿಸಲಾರದು ಎಂದುಕೊಂಡೆನು.
ಆದರೆ ನೀನು ನನಗೆ ವಿಮುಖನಾದಾಗ
    ಭಯದಿಂದ ನಡುಗತೊಡಗಿದೆ.
ಯೆಹೋವನೇ, ನಾನು ನಿನಗೆ ಅಭಿಮುಖನಾಗಿ ಪ್ರಾರ್ಥಿಸಿದೆ;
    ಕರುಣೆತೋರು ಎಂದು ನಿನ್ನನ್ನು ಕೇಳಿಕೊಂಡೆ.
“ದೇವರೇ, ನಾನು ಸತ್ತು ಸಮಾಧಿಯೊಳಗೆ ಹೋದರೆ,
    ಅದರಿಂದ ಒಳ್ಳೆಯದೇನಾದೀತು?
ಸತ್ತವರು ಕೇವಲ ಮಣ್ಣಿನಲ್ಲಿ ಬಿದ್ದಿರುವರು!
    ಅವರು ನಿನ್ನನ್ನು ಸ್ತುತಿಸುವುದಿಲ್ಲ!
    ಶಾಶ್ವತವಾದ ನಿನ್ನ ನಂಬಿಗಸ್ತಿಕೆಯ ಕುರಿತು ಅವರು ಹೇಳುವುದಿಲ್ಲ.
10 ಯೆಹೋವನೇ, ನನ್ನ ಪ್ರಾರ್ಥನೆಯನ್ನು ಕೇಳಿ ನನಗೆ ಕರುಣೆತೋರು!
    ಯೆಹೋವನೇ, ನನಗೆ ಸಹಾಯಮಾಡು!” ಎಂದು ಕೇಳಿಕೊಂಡೆನು.

11 ಆಗ ನೀನು ನನಗೆ ಸಹಾಯಮಾಡಿ ನನ್ನ ಗೋಳಾಟವನ್ನು
    ಸಂತೋಷದ ನರ್ತನವನ್ನಾಗಿ ಮಾರ್ಪಡಿಸಿದೆ.
ನನ್ನ ಶೋಕವಸ್ತ್ರಗಳನ್ನು ತೆಗೆದುಹಾಕಿ
    ಹರ್ಷವಸ್ತ್ರಗಳನ್ನು ಹೊದಿಸಿದೆ.
12 ನಾನು ಮೌನವಾಗಿರದೆ ಸದಾಕಾಲ ನಿನ್ನನ್ನು ಸ್ತುತಿಸುವೆನು.
    ನನ್ನ ದೇವರಾದ ಯೆಹೋವನೇ, ನಿನ್ನನ್ನು ಸದಾಕಾಲ ಸ್ತುತಿಸುವೆನು.

2 ರಾಜರುಗಳು 4:8-17

ಎಲೀಷ ಮತ್ತು ಶೂನೇಮಿನ ಸ್ತ್ರೀ

ಒಂದು ದಿನ ಎಲೀಷನು ಶೂನೇಮಿಗೆ ಹೋದನು. ಪ್ರಮುಖಳಾದ ಸ್ತ್ರೀಯೊಬ್ಬಳು ಶೂನೇಮಿನಲ್ಲಿ ವಾಸಿಸುತ್ತಿದ್ದಳು. ಆ ಸ್ತ್ರೀಯು ತನ್ನ ಮನೆಯಲ್ಲಿ ಊಟಮಾಡಿಕೊಂಡು ಹೋಗುವಂತೆ ಎಲೀಷನನ್ನು ಕೇಳಿಕೊಂಡಳು. ಅಂದಿನಿಂದ ಎಲೀಷನು ಆ ಸ್ಥಳದ ಮೂಲಕ ಹೋಗುವಾಗಲೆಲ್ಲಾ ಅವಳ ಮನೆಯಲ್ಲಿ ಊಟಮಾಡುತ್ತಿದ್ದನು.

ಆ ಸ್ತ್ರೀಯು ತನ್ನ ಗಂಡನಿಗೆ, “ನೋಡಿ, ನಮ್ಮ ಮನೆಯ ದಾರಿಯಲ್ಲಿ ಹಾದುಹೋಗುವ ಎಲೀಷನು ಪರಿಶುದ್ಧನೂ ದೇವಮನುಷ್ಯನೂ ಎಂದು ನನಗೆ ತೋರುತ್ತದೆ. 10 ದಯವಿಟ್ಟು ಎಲೀಷನಿಗಾಗಿ ಮಾಳಿಗೆಯ ಮೇಲೆ ಚಿಕ್ಕದೊಂದು ಕೊಠಡಿಯನ್ನು ಕಟ್ಟೋಣ. ಆ ಕೊಠಡಿಯಲ್ಲಿ ಹಾಸಿಗೆಯೊಂದನ್ನು ಹಾಕೋಣ. ಅಲ್ಲಿ ಒಂದು ಮೇಜು, ಕುರ್ಚಿ ಮತ್ತು ದೀಪಸ್ತಂಭವನ್ನು ಇಡೋಣ. ಅವನು ನಮ್ಮ ಮನೆಗೆ ಬಂದಾಗ, ಈ ಕೊಠಡಿಯನ್ನು ತನಗಾಗಿ ಉಪಯೋಗಿಸಲಿ” ಎಂದು ಹೇಳಿದನು.

11 ಒಂದು ದಿನ ಎಲೀಷನು ಆ ಸ್ತ್ರೀಯ ಮನೆಗೆ ಬಂದನು. ಅವನು ಆ ಕೊಠಡಿಗೆ ಹೋಗಿ ವಿಶ್ರಾಂತಿಯನ್ನು ಪಡೆದನು. 12 ಎಲೀಷನು ತನ್ನ ಸೇವಕನಾದ ಗೇಹಜಿಗೆ, “ಶೂನೇಮ್ಯಳಾದ ಆ ಸ್ತ್ರೀಯನ್ನು ಕರೆದುಕೊಂಡು ಬಾ” ಎಂದು ಹೇಳಿದನು.

ಸೇವಕನು ಶೂನೇಮ್ಯಳಾದ ಆ ಸ್ತ್ರೀಯನ್ನು ಕರೆದುಕೊಂಡು ಬಂದಾಗ ಆಕೆಯು ಎಲೀಷನ ಎದುರಿನಲ್ಲಿ ನಿಂತುಕೊಂಡಳು. 13 ಎಲೀಷನು ಗೇಹಜಿಗೆ (ಸೇವಕನಿಗೆ), “ನೀನು ಆ ಸ್ತ್ರೀಯ ಬಳಿಗೆ ಹೋಗಿ, ‘ನೋಡು, ನೀನು ನಮ್ಮನ್ನು ಉಪಚರಿಸುವುದಕ್ಕಾಗಿ ನಿನ್ನಿಂದ ಸಾಧ್ಯವಾದಷ್ಟು ಮಾಡಿರುವೆ. ನಮ್ಮಿಂದ ನಿನಗೇನಾದರೂ ಉಪಕಾರವಾಗಬೇಕೇ? ನಿನ್ನ ಬಗ್ಗೆ ರಾಜನ ಬಳಿಯಲ್ಲಾದರೂ ಅಥವಾ ಸೈನ್ಯಾಧಿಕಾರಿಯ ಬಳಿಯಲ್ಲಾದರೂ ನಾವು ಮಾತನಾಡಬೇಕೇ?’ ಎಂದು ಕೇಳು” ಎಂಬುದಾಗಿ ಹೇಳಿದನು.

ಆ ಸ್ತ್ರೀಯು, “ಇಲ್ಲಿ ನಾನು ನನ್ನ ಜನರೊಡನೆ ಸುಖವಾಗಿ ಜೀವಿಸುತ್ತಿದ್ದೇನೆ” ಎಂದು ಉತ್ತರಿಸಿದಳು.

14 ಎಲೀಷನು ಗೇಹಜಿಗೆ, “ನಾನು ಅವಳಿಗೆ ಏನು ಮಾಡಲಿ?” ಎಂದು ಕೇಳಿದನು.

ಗೇಹಜಿಯು, “ನನಗೆ ತಿಳಿದಿದೆ! ಅವಳಿಗೆ ಮಕ್ಕಳಿಲ್ಲ, ಅವಳ ಗಂಡ ಮುದುಕನಾಗಿದ್ದಾನೆ” ಎಂದು ಉತ್ತರಿಸಿದನು.

15 ಆಗ ಎಲೀಷನು, “ಅವಳನ್ನು ಕರೆದುಕೊಂಡು ಬಾ” ಎಂದು ಹೇಳಿದನು.

ಗೇಹಜಿಯು ಆ ಸ್ತ್ರೀಯನ್ನು ಕರೆದನು. ಆಕೆಯು ಬಂದು ಅವನ ಬಾಗಿಲಿನ ಹತ್ತಿರ ನಿಂತಳು. 16 ಎಲೀಷನು ಆ ಸ್ತ್ರೀಗೆ, “ಮುಂದಿನ ವಸಂತಮಾಸದ ಈ ಕಾಲಕ್ಕೆ ನೀನು ನಿನ್ನ ಗಂಡುಮಗುವನ್ನು ಅಪ್ಪಿಕೊಂಡಿರುವೆ” ಎಂದು ಹೇಳಿದನು.

ಆ ಸ್ತ್ರೀಯು, “ದೇವಮನುಷ್ಯನೇ, ಹೀಗೆ ಹೇಳಿ ನಿನ್ನ ಸೇವಕಿಯನ್ನು ವಂಚಿಸಬೇಡ” ಎಂದು ಹೇಳಿದಳು.

17 ಆ ಸ್ತ್ರೀಯು ಗರ್ಭಿಣಿಯಾದಳು. ಎಲೀಷನು ಹೇಳಿದಂತೆ, ಮುಂದಿನ ವಂಸತದಲ್ಲಿ ಅವಳು ಒಬ್ಬ ಮಗನಿಗೆ ಜನ್ಮನೀಡಿದಳು.

ರೋಮ್ನಗರದವರಿಗೆ 7:14-25

ಮನುಷ್ಯನಲ್ಲಿ ಗೊಂದಲ

14 ಧರ್ಮಶಾಸ್ತ್ರವು ಆತ್ಮಿಕವಾದದ್ದೆಂದು ನಾವು ಬಲ್ಲೆವು. ಆದರೆ ನಾನು ಆತ್ಮಿಕನಲ್ಲ. ನಾನು ಪಾಪಕ್ಕೆ ಮಾರಲ್ಪಟ್ಟ ಗುಲಾಮನೋ ಎಂಬಂತೆ ಪಾಪವು ನನ್ನನ್ನು ಆಳುತ್ತದೆ. 15 ನಾನು ಮಾಡುವ ಕಾರ್ಯಗಳು ನನಗೇ ಅರ್ಥವಾಗುವುದಿಲ್ಲ. ನಾನು ಯಾವ ಒಳ್ಳೆಯ ಕಾರ್ಯಗಳನ್ನು ಮಾಡಬೇಕೆಂದು ಇಚ್ಛಿಸುತ್ತೇನೋ ಆ ಕಾರ್ಯಗಳನ್ನು ಮಾಡದೆ ನಾನು ದ್ವೇಷಿಸುವ ಕೆಟ್ಟಕಾರ್ಯಗಳನ್ನೇ ಮಾಡುತ್ತೇನೆ. 16 ನಾನು ಮಾಡುವ ಕೆಟ್ಟಕಾರ್ಯಗಳನ್ನು ಮಾಡಲು ನನಗೆ ಇಷ್ಟವಿಲ್ಲದಿದ್ದರೆ, ಧರ್ಮಶಾಸ್ತ್ರವು ಒಳ್ಳೆಯದೆಂದು ನಾನು ಒಪ್ಪಿಕೊಂಡಂತಾಯಿತು. 17 ಹೀಗಿರಲಾಗಿ ಈ ಕೆಟ್ಟಕಾರ್ಯಗಳನ್ನು ಮಾಡುವವನು ನಿಜವಾಗಿಯೂ ನಾನಲ್ಲ. ನನ್ನಲ್ಲಿ ವಾಸವಾಗಿರುವ ಪಾಪವೇ ಈ ಕೆಟ್ಟಕಾರ್ಯಗಳನ್ನು ಮಾಡುತ್ತದೆ. 18 ಹೌದು, ನನ್ನಲ್ಲಿ ಅಂದರೆ ನನ್ನ ಪಾಪಾಧೀನಸ್ವಭಾವದಲ್ಲಿ ಒಳ್ಳೆಯದೇನೂ ವಾಸವಾಗಿಲ್ಲವೆಂಬುದು ನನಗೆ ಗೊತ್ತಿದೆ. ಒಳ್ಳೆಯ ಕಾರ್ಯಗಳನ್ನು ಮಾಡುವುದಕ್ಕೆ ನನಗೆ ಮನಸ್ಸಿದ್ದರೂ ಅವುಗಳನ್ನು ಕಾರ್ಯಗತಗೊಳಿಸಲು ನನಗೆ ಸಾಧ್ಯವಿಲ್ಲ. 19 ನಾನು ಮಾಡಲಿಚ್ಛಿಸುವ ಒಳ್ಳೆಯ ಕಾರ್ಯಗಳನ್ನು ಮಾಡದೆ ಮಾಡಲಿಚ್ಛಿಸದಿರುವ ಕೆಟ್ಟಕಾರ್ಯಗಳನ್ನೇ ಮಾಡುತ್ತೇನೆ. 20 ಹೀಗಿರಲಾಗಿ, ನಾನು ಮಾಡಲಿಚ್ಛಿಸದಿರುವ ಕಾರ್ಯಗಳನ್ನು ನಾನು ಮಾಡಿದರೆ, ಅವುಗಳನ್ನು ಮಾಡವವನು ನಿಜವಾಗಿಯೂ ನಾನಲ್ಲ. ನನ್ನಲ್ಲಿ ವಾಸವಾಗಿರುವ ಪಾಪವೇ ಆ ಕೆಟ್ಟಕಾರ್ಯಗಳನ್ನು ಮಾಡುತ್ತದೆ.

21 ಹೀಗಿರಲಾಗಿ, ನಾನು ಈ ನಿಯಮವನ್ನು ಕಲಿತುಕೊಂಡಿದ್ದೇನೆ: ನಾನು ಒಳ್ಳೆಯದನ್ನು ಮಾಡಲಿಚ್ಛಿಸುವಾಗ, ಕೆಟ್ಟದ್ದು ನನ್ನೊಳಗೇ ಇರುತ್ತದೆ. 22 ನನ್ನ ಅಂತರಂಗದಲ್ಲಿ ದೇವರ ನಿಯಮದ ವಿಷಯದಲ್ಲಿ ನಾನು ಸಂತೋಷಪಡುತ್ತೇನೆ. 23 ಆದರೆ ನನ್ನ ದೇಹದಲ್ಲಿ ಮತ್ತೊಂದು ನಿಯಮ ಕೆಲಸ ಮಾಡುತ್ತಿರುವುದನ್ನು ನಾನು ಕಾಣುತ್ತೇನೆ. ನನ್ನ ಅಂತರಂಗ ಒಪ್ಪಿಕೊಳ್ಳುವ ನಿಯಮಕ್ಕೆ ವಿರುದ್ಧವಾಗಿ ಆ ನಿಯಮ ಹೋರಾಡುತ್ತದೆ. ನನ್ನ ದೇಹದಲ್ಲಿ ಕೆಲಸ ಮಾಡುತ್ತಿರುವ ಆ ಮತ್ತೊಂದು ನಿಯಮವೇ ಪಾಪದ ನಿಯಮವಾಗಿದೆ. ಆ ನಿಯಮವು ನನ್ನನ್ನು ತನ್ನ ಸೆರೆಯಾಳನ್ನಾಗಿ ಮಾಡುತ್ತದೆ. 24 ನಾನು ದುರಾವಸ್ಥೆಗೆ ಒಳಗಾಗಿದ್ದೇನೆ. ನನಗೆ ಮರಣವನ್ನು ತರುವ ಈ ದೇಹದಿಂದ ನನ್ನನ್ನು ರಕ್ಷಿಸುವವರು ಯಾರು? 25 ದೇವರು ನನ್ನನ್ನು ರಕ್ಷಿಸುವನು! ನಮ್ಮ ಪ್ರಭುವಾದ ಕ್ರಿಸ್ತ ಯೇಸುವಿನ ಮೂಲಕ ಆತನು ದಯಪಾಲಿಸುವ ರಕ್ಷಣೆಗಾಗಿ ಆತನಿಗೆ ಸ್ತೋತ್ರವಾಗಲಿ!

ಆದ್ದರಿಂದ ನನ್ನ ಅಂತರಂಗದಲ್ಲಿ ನಾನು ದೇವರ ನಿಯಮಕ್ಕೆ ಗುಲಾಮನಾಗಿದ್ದೇನೆ. ಆದರೆ ನನ್ನ ಪಾಪಾಧೀನಸ್ವಭಾವದಲ್ಲಿ ನಾನು ಪಾಪದ ನಿಯಮಕ್ಕೆ ಗುಲಾಮನಾಗಿದ್ದೇನೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International