Revised Common Lectionary (Semicontinuous)
ಸ್ತುತಿಗೀತೆ. ರಚನೆಗಾರ: ಆಸಾಫ.
75 ದೇವರೇ, ನಿನ್ನನ್ನು ಕೊಂಡಾಡುವೆವು!
ನಿನ್ನ ಹೆಸರನ್ನು ಸ್ತುತಿಸುವೆವು; ಯಾಕೆಂದರೆ ನೀನು ನನ್ನ ಸಾಮಿಪ್ಯದಲ್ಲಿರುವೆ;
ನಿನ್ನ ಮಹತ್ಕಾರ್ಯಗಳ ಬಗ್ಗೆ ಜನರು ಹೇಳುತ್ತಲೇ ಇದ್ದಾರೆ.
2 ದೇವರು ಹೀಗೆನ್ನುತ್ತಾನೆ: “ನಾನು ನ್ಯಾಯತೀರ್ಪಿಗಾಗಿ ತಕ್ಕ ಸಮಯವನ್ನು ಗೊತ್ತುಪಡಿಸುವೆ;
ನಾನು ನೀತಿಯಿಂದಲೇ ತೀರ್ಪುಕೊಡುವೆ.
3 ಭೂಮಿಯು ಅದರ ಮೇಲಿರುವ ಸಮಸ್ತದೊಡನೆ ನಡುಗುತ್ತಿದ್ದರೂ
ಭೂಸ್ತಂಭಗಳನ್ನು ಸ್ಥಿರಗೊಳಿಸುವಾತನು ನಾನೇ.
4-5 “ಗರ್ವಿಷ್ಠರೇ, ‘ಕೊಚ್ಚಿಕೊಳ್ಳಬೇಡಿ’ ದುಷ್ಟರೇ, ‘ಅಹಂಕಾರ ಪಡಬೇಡಿ!
ಸೊಕ್ಕಿನ ಕುತ್ತಿಗೆಯಿಂದ ಮಾತಾಡಬೇಡಿ’” ಎಂದು ಹೇಳುವೆನು.
6 ಭೂಲೋಕದ ಯಾವ ಶಕ್ತಿಯೂ
ಮನುಷ್ಯನನ್ನು ಉದ್ಧಾರ ಮಾಡಲಾರದು.
7 ನ್ಯಾಯಾಧಿಪತಿಯು ದೇವರೇ.
ಯಾರನ್ನು ಉದ್ಧಾರಮಾಡಬೇಕು ಎಂಬ ನಿರ್ಣಯವನ್ನು ತೆಗೆದುಕೊಳ್ಳುವಾತನು ದೇವರೇ.
ದೇವರು ಒಬ್ಬನನ್ನು ಉನ್ನತಿಗೇರಿಸುವನು; ಮತ್ತೊಬ್ಬನನ್ನು ಅವನತಿಗಿಳಿಸುವನು.
8 ಯೆಹೋವನ ಕೈಯಲ್ಲಿ ಪಾತ್ರೆಯಿದೆ.
ಆ ಪಾತ್ರೆಯು ವಿಷ ದ್ರಾಕ್ಷಾರಸದಿಂದ ತುಂಬಿದೆ.
ಆತನು ದಂಡನೆಯೆಂಬ ಆ ವಿಷ ದ್ರಾಕ್ಷಾರಸವನ್ನು ಸುರಿಯುವನು;
ದುಷ್ಟರು ಕೊನೆಯ ತೊಟ್ಟಿನವರೆಗೂ ಅದನ್ನು ಕುಡಿಯುವರು!
9 ನಾನು ಇವುಗಳ ಬಗ್ಗೆ ಜನರಿಗೆ ಹೇಳುತ್ತಲೇ ಇರುವೆನು;
ಇಸ್ರೇಲರ ದೇವರನ್ನು ಸಂಕೀರ್ತಿಸುವೆನು.
10 ದುಷ್ಟರಿಂದ ಅಧಿಕಾರವನ್ನು ಕಿತ್ತುಕೊಂಡು
ಒಳ್ಳೆಯವರಿಗೆ ಅದನ್ನು ಒಪ್ಪಿಸಿಕೊಡುವೆನು.
ಎಲೀಯನ ಬಗ್ಗೆ ಪ್ರವಾದಿಗಳ ವಿಚಾರ
15 ಜೆರಿಕೊದಲ್ಲಿ ಪ್ರವಾದಿಗಳ ಗುಂಪೊಂದು ಎಲೀಷನನ್ನು ಕಂಡು, “ಎಲೀಯನ ಆತ್ಮವು ಈಗ ಎಲೀಷನ ಮೇಲಿದೆ!” ಎಂದು ಹೇಳಿ ಎಲೀಷನನ್ನು ಭೇಟಿಮಾಡಲು ಬಂದರು. ಅವರು ಎಲೀಷನಿಗೆ ಸಾಷ್ಟಾಂಗನಮಸ್ಕಾರ ಮಾಡಿದರು. 16 ಅವರು ಅವನಿಗೆ, “ನೋಡು, ನಮ್ಮಲ್ಲಿ ಐವತ್ತು ಮಂದಿ ಬಲಿಷ್ಠ ಜನರಿದ್ದಾರೆ. ನಿನ್ನ ಒಡೆಯನನ್ನು ಹುಡುಕಲು ದಯವಿಟ್ಟು ಅವರಿಗೆ ಅವಕಾಶಕೊಡು. ಯೆಹೋವನ ಆತ್ಮವು ಎಲೀಯನನ್ನು ಮೇಲಕ್ಕೆ ಎತ್ತಿಕೊಂಡು ಹೋಗಿ ಯಾವುದಾದರೂ ಬೆಟ್ಟದ ಮೇಲಾಗಲಿ ಅಥವಾ ಕಣಿವೆಯಲ್ಲಾಗಲಿ ಬೀಳಿಸಿರಬೇಕು” ಎಂದು ಹೇಳಿದರು.
ಆದರೆ ಎಲೀಷನು, “ಇಲ್ಲ, ಎಲೀಯನನ್ನು ಹುಡುಕಲು ಜನರನ್ನು ಕಳುಹಿಸಬೇಡಿ!” ಎಂದು ಉತ್ತರಿಸಿದನು.
17 ಎಲೀಷನು ಕಿರಿಕಿರಿಗೊಂಡು ಒಪ್ಪಿಕೊಳ್ಳುವವರೆಗೆ ಆ ಪ್ರವಾದಿಗಳ ಗುಂಪು ಅವನನ್ನು ಬೇಡಿಕೊಂಡರು. ನಂತರ ಎಲೀಷನು, “ಸರಿ, ಎಲೀಯನನ್ನು ಹುಡುಕಲು ಜನರನ್ನು ಕಳುಹಿಸಿ” ಎಂದು ಹೇಳಿದನು.
ಪ್ರವಾದಿಗಳ ಗುಂಪು ಎಲೀಯನನ್ನು ಹುಡುಕಲು ಐವತ್ತು ಮಂದಿ ಜನರನ್ನು ಕಳುಹಿಸಿದರು. ಅವರು ಮೂರು ದಿನ ಹುಡುಕಿದರೂ ಎಲೀಯನನ್ನು ಕಂಡು ಹಿಡಿಯಲಾಗಲಿಲ್ಲ. 18 ಅವರು ಎಲೀಷನು ನೆಲೆಸಿದ್ದ ಜೆರಿಕೊವಿಗೆ ಹೋದರು. ಅವರು ಎಲೀಯನನ್ನು ಕಂಡುಹಿಡಿಯಲಾಗಲಿಲ್ಲವೆಂದು ಎಲೀಷನಿಗೆ ಹೇಳಿದರು. ಎಲೀಷನು ಅವರಿಗೆ, “ನಾನು ನಿಮಗೆ ಹೋಗಬೇಡವೆಂದು ಹೇಳಿದೆನಲ್ಲ” ಎಂದನು.
ಎಲೀಷನು ನೀರನ್ನು ಶುಚಿಗೊಳಿಸಿದನು
19 ನಗರದ ಜನರು ಎಲೀಷನಿಗೆ, “ಸ್ವಾಮೀ, ಈ ನಗರವು ಒಳ್ಳೆಯ ಸ್ಥಳದಲ್ಲಿದೆಯೆಂಬುದನ್ನು ನೀನು ನೋಡುತ್ತಿರುವೆ. ಆದರೆ ನೀರು ತುಂಬಾ ಕೆಟ್ಟಿದೆ. ಆ ಕಾರಣದಿಂದಲೇ ಈ ಭೂಮಿಯಲ್ಲಿ ಬೆಳೆಗಳನ್ನು ಬೆಳೆಯಲಾಗುತ್ತಿಲ್ಲ” ಎಂದು ಹೇಳಿದರು.
20 ಎಲೀಷನು, “ಒಂದು ಹೊಸ ಬೋಗುಣಿಯನ್ನು ತಂದು ಅದರಲ್ಲಿ ಉಪ್ಪನ್ನು ಹಾಕಿ” ಎಂದನು.
ಜನರು ಎಲೀಷನ ಬಳಿಗೆ ಒಂದು ಬೋಗುಣಿಯನ್ನು ತಂದರು. 21 ನಂತರ ಎಲೀಷನು ನೆಲದಿಂದ ನೀರು ಹರಿಯುತ್ತಿದ್ದ ಸ್ಥಳಕ್ಕೆ ಹೋದನು. ಎಲೀಷನು ಉಪ್ಪನ್ನು ನೀರಿನಲ್ಲಿ ಎಸೆದು, “‘ನಾನು ಈ ನೀರನ್ನು ಶುಚಿಗೊಳಿಸಿದ್ದೇನೆ! ಇಲ್ಲಿಂದಾಚೆಗೆ ಈ ನೀರು ಯಾರಿಗೂ ಸಾವನ್ನು ಮತ್ತು ಬಂಜೆತನವನ್ನು ಉಂಟುಮಾಡುವುದಿಲ್ಲ ಮತ್ತು ಈ ಭೂಮಿಯಲ್ಲಿ ಬೆಳೆಗಳು ಬೆಳೆಯುತ್ತವೆ’ ಎಂದು ಯೆಹೋವನು ಹೇಳುತ್ತಾನೆ” ಎಂದನು.
22 ಆ ನೀರು ಶುದ್ಧವಾಯಿತು. ಇಂದು ಆ ನೀರು ಇನ್ನೂ ಶುದ್ಧವಾಗಿದೆ. ಎಲೀಷನು ಹೇಳಿದಂತೆಯೇ ಅದು ಸಂಭವಿಸಿತು.
ಇತರರನ್ನು ಪ್ರೀತಿಸಿ
7 ನನ್ನ ಪ್ರಿಯ ಸ್ನೇಹೀತರೇ, ನಾನು ನಿಮಗೆ ಹೊಸ ಆಜ್ಞೆಯನ್ನು ಬರೆಯುತ್ತಿಲ್ಲ. ಮೊದಲಿಂದಲೂ ಈ ಆಜ್ಞೆಯು ನಿಮಗಿತ್ತು. ನೀವು ಈಗಾಗಲೇ ಕೇಳಿರುವ ವಾಕ್ಯವೇ ಈ ಆಜ್ಞೆಯಾಗಿದೆ. 8 ಆದರೆ ಈ ಆಜ್ಞೆಯನ್ನು ನಾನು ನಿಮಗೆ ಹೊಸ ಆಜ್ಞೆಯೋ ಎಂಬಂತೆ ಬರೆಯುತ್ತಿದ್ದೇನೆ. ಈ ಆಜ್ಞೆಯು ಸತ್ಯವಾದದ್ದು. ಅದರ ಸತ್ಯತೆಯನ್ನು ನೀವು ಯೇಸುವಿನಲ್ಲಿಯೂ ನಿಮ್ಮಲ್ಲಿಯೂ ಕಾಣಬಹುದು. ಕತ್ತಲೆಯು ಕಳೆದುಹೋಗುತ್ತಿದೆ ಮತ್ತು ನಿಜವಾದ ಬೆಳಕು ಈಗಾಗಲೇ ಪ್ರಕಾಶಿಸುತ್ತಿದೆ.
9 “ನಾನು ಬೆಳಕಿನಲ್ಲಿದ್ದೇನೆ” ಎಂದು ಹೇಳುವವನು ತನ್ನ ಸಹೋದರನನ್ನು ದ್ವೇಷಿಸುತ್ತಿದ್ದರೆ, ಅವನಿನ್ನೂ ಅಂಧಕಾರದಲ್ಲಿದ್ದಾನೆ. 10 ತನ್ನ ಸಹೋದರನನ್ನು ಪ್ರೀತಿಸುವವನು ಬೆಳಕಿನಲ್ಲಿದ್ದಾನೆ. ಬೇರೊಬ್ಬನನ್ನು ಪಾಪಕ್ಕೆ ನಡೆಸುವಂಥದ್ದೇನೂ ಅವನಲ್ಲಿರುವುದಿಲ್ಲ. 11 ಆದರೆ ತನ್ನ ಸಹೋದರನನ್ನು ದ್ವೇಷಿಸುವವನು ಅಂಧಕಾರದಲ್ಲಿದ್ದಾನೆ. ಅವನು ಅಂಧಕಾರದಲ್ಲಿಯೇ ಜೀವಿಸುತ್ತಾನೆ. ಅವನಿಗೆ ತಾನು ಎಲ್ಲಿಗೆ ಹೋಗುತ್ತಿದ್ದೇನೆ ಎಂಬುದೇ ತಿಳಿದಿಲ್ಲ. ಏಕೆಂದರೆ ಅಂಧಕಾರವು ಅವನನ್ನು ಕುರುಡನನ್ನಾಗಿ ಮಾಡಿದೆ.
Kannada Holy Bible: Easy-to-Read Version. All rights reserved. © 1997 Bible League International