Revised Common Lectionary (Semicontinuous)
ರಚನೆಗಾರ: ಆಸಾಫ.
77 ನಾನು ಸ್ವರವೆತ್ತಿ ದೇವರಿಗೆ ಮೊರೆಯಿಡುವೆನು.
ದೇವರೇ, ಸ್ವರವೆತ್ತಿ ಮೊರೆಯಿಡುವೆನು, ನನಗೆ ಕಿವಿಗೊಡು.
2 ನನ್ನ ಯೆಹೋವನೇ, ಇಕ್ಕಟ್ಟಿನಲ್ಲಿ ನಿನ್ನನ್ನು ಕರೆದೆನು;
ರಾತ್ರಿಯೆಲ್ಲಾ ನಿನಗಾಗಿ ಕೈಚಾಚಿಕೊಂಡಿದ್ದೆನು.
ಆದರೆ ನನ್ನ ಮನಸ್ಸು ಸಮಾಧಾನಗೊಳ್ಳಲಿಲ್ಲ.
11 ಯೆಹೋವನೇ, ನಿನ್ನ ಕಾರ್ಯಗಳನ್ನು ಜ್ಞಾಪಿಸಿಕೊಳ್ಳುವೆನು.
ಬಹುಕಾಲದ ಹಿಂದೆ ಮಾಡಿದ ಅದ್ಭುತಕಾರ್ಯಗಳನ್ನು ಜ್ಞಾಪಿಸಿಕೊಳ್ಳುವೆನು.
12 ನಿನ್ನ ಕಾರ್ಯಗಳನ್ನೆಲ್ಲಾ ಧ್ಯಾನಿಸುವೆನು;
ನಿನ್ನ ಕಾರ್ಯಗಳ ಕುರಿತಾಗಿ ಆಲೋಚಿಸುವೆನು.
13 ದೇವರೇ, ನಿನ್ನ ಮಾರ್ಗಗಳು ಪರಿಶುದ್ಧವಾಗಿವೆ.
ದೇವರೇ, ನಿನ್ನಂತೆ ಮಹತ್ವವುಳ್ಳವರು ಬೇರೆ ಯಾರೂ ಇಲ್ಲ.
14 ಅದ್ಭುತಕಾರ್ಯಗಳನ್ನು ಮಾಡಿದ ದೇವರು ನೀನೇ.
ನೀನು ಜನರಿಗೆ ನಿನ್ನ ಮಹಾಶಕ್ತಿಯನ್ನು ತೋರಿಸಿದೆ.
15 ನೀನು ನಿನ್ನ ಶಕ್ತಿಯಿಂದ ನಿನ್ನ ಜನರನ್ನು ರಕ್ಷಿಸಿದೆ.
ಯಾಕೋಬನ ಮತ್ತು ಯೋಸೇಫನ ಸಂತತಿಯವರನ್ನು ನೀನು ರಕ್ಷಿಸಿದೆ.
16 ದೇವರೇ, ನಿನ್ನನ್ನು ಕಂಡು ಜಲರಾಶಿಗಳು ಭಯಗೊಂಡವು.
ಆಳವಾದ ಜಲರಾಶಿಗಳು ಭಯದಿಂದ ನಡುಗಿದವು.
17 ದಟ್ಟವಾದ ಕಪ್ಪುಮೋಡಗಳು ಮಳೆಗರೆದವು.
ಜನರಿಗೆ ಮೇಘಮಂಡಲದಿಂದ ಗುಡುಗು ಕೇಳಿಸಿತು.
ನಿನ್ನ ಮಿಂಚಿನ ಬಾಣಗಳು ಆ ಮೋಡಗಳಲ್ಲಿ ಹಾರಿದವು.
18 ಬಿರುಗಾಳಿಯಲ್ಲಿ ನಿನ್ನ ಗುಡುಗು ಕೇಳಿಸಿತು.
ಮಿಂಚುಗಳು ಭೂಮಂಡಲವನ್ನು ಬೆಳಗಿಸಿದವು.
ಭೂಮಿಯು ಅಲ್ಲಾಡಿ ಕಂಪಿಸಿತು.
19 ನೀನು ಸಮುದ್ರದಲ್ಲಿ ಮಾರ್ಗಮಾಡಿದೆ;
ಆಳವಾದ ಜಲರಾಶಿಗಳನ್ನು ದಾಟಿದೆ.
ಆದರೆ ನಿನ್ನ ಹೆಜ್ಜೆಯ ಗುರುತು ಕಾಣಲೇ ಇಲ್ಲ.
20 ಕುರುಬನು ಕುರಿಹಿಂಡನ್ನು ಕರೆದೊಯ್ಯುವಂತೆ
ನಿನ್ನ ಜನರನ್ನು ಕರೆದೊಯ್ಯಲು ಮೋಶೆಯನ್ನೂ ಆರೋನನನ್ನೂ ಉಪಯೋಗಿಸಿದೆ.
ಅಹಜ್ಯನಿಗೆ ಒಂದು ಸಂದೇಶ
1 ಅಹಾಬನು ಸತ್ತನಂತರ, ಮೋವಾಬ್ಯರು ಇಸ್ರೇಲಿನ ಆಳ್ವಿಕೆಗೆ ವಿರೋಧವಾಗಿ ದಂಗೆ ಎದ್ದರು.
2 ಒಂದು ದಿನ, ಅಹಜ್ಯನು ಸಮಾರ್ಯದ ತನ್ನ ಮನೆಯ ಮಾಳಿಗೆಯ ಮೇಲಿದ್ದನು. ಅಹಜ್ಯನು ಮನೆಯ ಮೇಲಿನ ಮರದ ಕಂಬಗಳ ಮೂಲಕ ಕೆಳಕ್ಕೆ ಬಿದ್ದನು. ಅವನಿಗೆ ಬಹಳ ಗಾಯಗಳಾದವು. ಅಹಜ್ಯನು ಸಂದೇಶಕರನ್ನು ಕರೆದು ಅವರಿಗೆ, “ಎಕ್ರೋನಿನ ದೇವರಾದ ಬಾಳ್ಜೆಬೂಬನ ಅರ್ಚಕರ ಬಳಿಗೆ ಹೋಗಿ, ನನ್ನ ಗಾಯಗಳು ಗುಣವಾಗುತ್ತವೆಯೇ ಎಂಬುದನ್ನು ಅವರಿಂದ ತಿಳಿದುಕೊಳ್ಳಿ” ಎಂದು ಹೇಳಿದನು.
3 ಆದರೆ ಯೆಹೋವನ ದೂತನೊಬ್ಬನು ತಿಷ್ಬೀಯನಾದ ಎಲೀಯನಿಗೆ, “ರಾಜನಾದ ಅಹಜ್ಯನು ಸಮಾರ್ಯದಿಂದ ಕೆಲವು ಸಂದೇಶಕರನ್ನು ಕಳುಹಿಸಿದ್ದಾನೆ. ನೀನು ಹೋಗಿ ಅವರನ್ನು ಭೇಟಿಯಾಗಿ ಅವರಿಗೆ, ‘ಇಸ್ರೇಲಿನಲ್ಲಿಯೂ ಒಬ್ಬ ದೇವರಿದ್ದಾನೆ! ಹೀಗಿರುವಾಗ ನೀವು ಎಕ್ರೋನಿನ ದೇವರಾದ ಬಾಳ್ಜೆಬೂಬನ ಬಳಿಗೆ ಹೋಗಿ ಪ್ರಶ್ನೆಗಳನ್ನು ಕೇಳುವುದೇಕೆ? 4 ರಾಜನಾದ ಅಹಜ್ಯನಿಗೆ ಈ ಸಂಗತಿಗಳನ್ನು ತಿಳಿಸಿ: ಬಾಳ್ಜೆಬೂಬನಿಂದ ಪ್ರಶ್ನೆಗಳನ್ನು ಕೇಳುವುದಕ್ಕೆ ನೀನು ಸಂದೇಶಕರನ್ನು ಕಳುಹಿಸಿದೆ. ನೀನು ಈ ಕಾರ್ಯವನ್ನು ಮಾಡಿದುದರಿಂದ, ಯೆಹೋವನು ಹೀಗೆನ್ನುವನು: ನೀನು ನಿನ್ನ ಹಾಸಿಗೆಯಿಂದ ಮೇಲಕ್ಕೇಳುವುದಿಲ್ಲ. ನೀನು ಅಲ್ಲೇ ಸಾಯುವೆ’ ಎಂದು ತಿಳಿಸು” ಎಂಬುದಾಗಿ ಹೇಳಿದನು. ಎಲೀಯನು ಅಹಜ್ಯನ ಸೇವಕರಿಗೆ ಈ ಮಾತುಗಳನ್ನು ಹೇಳಿ ಅಲ್ಲಿಂದ ಹೊರಟುಹೋದನು.
5 ಸಂದೇಶಕರು ಅಹಜ್ಯನ ಬಳಿಗೆ ಹಿಂದಿರುಗಿ ಬಂದರು. ಅಹಜ್ಯನು ಸಂದೇಶಕರನ್ನು, “ನೀವು ಇಷ್ಟು ಬೇಗ ಹಿಂದಕ್ಕೆ ಬಂದುದೇಕೆ?” ಎಂದು ಕೇಳಿದನು.
6 ಸಂದೇಶಕರು ಅಹಜ್ಯನಿಗೆ, “ಒಬ್ಬನು ನಮ್ಮನ್ನು ಭೇಟಿಯಾಗಿ ನಿಮ್ಮನ್ನು ಕಳುಹಿಸಿದ ರಾಜನ ಬಳಿಗೆ ಹಿಂದಿರುಗಿ ಹೋಗಿ ಯೆಹೋವನು ಹೇಳುವುದನ್ನು ಅವನಿಗೆ ತಿಳಿಸಿ. ಯೆಹೋವನು ಹೇಳುವುದೇನೆಂದರೆ: ‘ಇಸ್ರೇಲಿನಲ್ಲಿ ಒಬ್ಬ ದೇವರಿದ್ದಾನೆ! ಹೀಗಿರುವಾಗ ನೀನು ಎಕ್ರೋನಿನ ದೇವರಾದ ಬಾಳ್ಜೆಬೂಬನನ್ನು ವಿಚಾರಿಸುವುದಕ್ಕೆ ಸಂದೇಶಕರನ್ನು ಕಳುಹಿಸಿದುದೇಕೆ? ನೀನು ಈ ಕಾರ್ಯವನ್ನು ಮಾಡಿದ್ದರಿಂದ ನಿನ್ನ ಹಾಸಿಗೆಯಿಂದ ಮೇಲಕ್ಕೇಳುವುದಿಲ್ಲ. ನೀನು ಅಲ್ಲೇ ಸಾಯುವೆ!’” ಎಂಬುದಾಗಿ ಹೇಳಿದರು.
7 ಅಹಜ್ಯನು ಸಂದೇಶಕರನ್ನು, “ನಿಮ್ಮನ್ನು ಭೇಟಿಮಾಡಿ ಈ ಮಾತುಗಳನ್ನು ತಿಳಿಸಿದ ಮನುಷ್ಯನು ಹೇಗಿದ್ದನು?” ಎಂದು ಕೇಳಿದನು.
8 ಸಂದೇಶಕರು ಅಹಜ್ಯನಿಗೆ, “ಅವನು ಉಣ್ಣೆಯ ಮೇಲಂಗಿಯನ್ನು ಧರಿಸಿದ್ದನು ಮತ್ತು ಸೊಂಟಕ್ಕೆ ಚರ್ಮದ ಪಟ್ಟಿಯನ್ನು ಕಟ್ಟಿಕೊಂಡಿದ್ದನು” ಎಂದರು.
ಆಗ ಅಹಜ್ಯನು, “ಅವನು ತಿಷ್ಬೀಯನಾದ ಎಲೀಯನು” ಎಂದು ಹೇಳಿದನು.
ಅಹಜ್ಯನು ಕಳುಹಿಸಿದ ಸೇನಾಧಿಪತಿಗಳ ನಾಶನ
9 ಅಹಜ್ಯನು ಎಲೀಯನ ಬಳಿಗೆ ಒಬ್ಬ ಸೇನಾಧಿಪತಿಯನ್ನು ಮತ್ತು ಐವತ್ತು ಮಂದಿ ಜನರನ್ನು ಕಳುಹಿಸಿದನು. ಸೇನಾಧಿಪತಿಯು ಎಲೀಯನ ಬಳಿಗೆ ಹೋದನು. ಆ ಸಮಯದಲ್ಲಿ ಎಲೀಯನು ಬೆಟ್ಟದ ತುದಿಯಲ್ಲಿ ಕುಳಿತಿದ್ದನು. ಆ ಸೇನಾಧಿಪತಿಯು ಎಲೀಯನಿಗೆ, “ದೇವಮನುಷ್ಯನೇ, ರಾಜನು ಹೇಳುತ್ತಾನೆ, ‘ಕೆಳಗಿಳಿದು ಬಾ’” ಎಂದು ಹೇಳಿದನು.
10 ಎಲೀಯನು ಐವತ್ತು ಮಂದಿಯ ಸೇನಾಧಿಪತಿಗೆ, “ನಾನು ಒಬ್ಬ ದೇವಮನುಷ್ಯನಾಗಿರುವದಾದರೆ ಪರಲೋಕದಿಂದ ಬೆಂಕಿಯು ಕೆಳಗಿಳಿದು ಬಂದು ನಿನ್ನನ್ನೂ ನಿನ್ನ ಐವತ್ತು ಸೈನಿಕರನ್ನೂ ನಾಶಗೊಳಿಸಲಿ!” ಎಂದು ಉತ್ತರಿಸಿದನು.
ಆಗ ಬೆಂಕಿಯು ಪರಲೋಕದಿಂದ ಬಂದು ಆ ಸೇನಾಧಿಪತಿಯನ್ನು ಮತ್ತು ಅವನ ಐವತ್ತು ಮಂದಿ ಸೈನಿಕರನ್ನು ನಾಶಗೊಳಿಸಿತು.
11 ಅಹಜ್ಯನು ಬೇರೊಬ್ಬ ಸೇನಾಧಿಪತಿಯನ್ನು ಮತ್ತು ಐವತ್ತು ಜನರನ್ನು ಎಲೀಯನ ಬಳಿಗೆ ಕಳುಹಿಸಿದನು. ಸೇನಾಧಿಪತಿಯು ಎಲೀಯನಿಗೆ, “ದೇವಮನುಷ್ಯನೇ, ರಾಜನು ಹೇಳುತ್ತಾನೆ, ‘ತ್ವರಿತವಾಗಿ ಕೆಳಗಿಳಿದು ಬಾ!’” ಎಂದು ಹೇಳಿದನು.
12 ಎಲೀಯನು ಸೇನಾಧಿಪತಿಗೆ ಮತ್ತು ಅವನ ಐವತ್ತು ಮಂದಿ ಜನರಿಗೆ, “ನಾನು ದೇವಮನುಷ್ಯನಾಗಿದ್ದರೆ ಪರಲೋಕದಿಂದ ಬೆಂಕಿಯು ಕೆಳಗಿಳಿದು ಬಂದು ನಿನ್ನನ್ನೂ ನಿನ್ನ ಐವತ್ತು ಜನರನ್ನೂ ನಾಶಗೊಳಿಸಲಿ!” ಎಂದು ಹೇಳಿದನು.
ಆಗ ಪರಲೋಕದಿಂದ ದೇವರ ಬೆಂಕಿಯು ಇಳಿದು ಬಂದು ಸೇನಾಧಿಪತಿಯನ್ನೂ ಅವನ ಐವತ್ತು ಜನರನ್ನೂ ನಾಶಗೊಳಿಸಿತು.
ಗಲಾತ್ಯ ಕ್ರೈಸ್ತರ ಮೇಲೆ ಪೌಲನ ಪ್ರೀತಿ
8 ಪೂರ್ವಕಾಲದಲ್ಲಿ ನೀವು ದೇವರನ್ನು ತಿಳಿಯದೆ ಸುಳ್ಳು ದೇವರುಗಳಿಗೆ ಗುಲಾಮರಾಗಿದ್ದಿರಿ. 9 ಈಗಲಾದರೋ ಸತ್ಯದೇವರನ್ನು ತಿಳಿದಿದ್ದೀರಿ. ನಿಜವಾಗಿ ಹೇಳಬೇಕಾದರೆ, ನಿಮ್ಮನ್ನು ತಿಳಿದಿರುವಾತನು ದೇವರೇ. ಹೀಗಿರಲಾಗಿ ಮೊದಲು ನೀವು ಅನುಸರಿಸುತ್ತಿದ್ದ ಬಲಹೀನವೂ ನಿರುಪಯುಕ್ತವೂ ಆದ ನಿಯಮಗಳಿಗೆ ನೀವು ಯಾಕೆ ಹಿಂತಿರುಗಬೇಕು? ಅವುಗಳಿಗೆ ಮತ್ತೆ ಗುಲಾಮರಾಗಬೇಕೆಂದಿದ್ದೀರೋ? 10 ವಿಶೇಷವಾದ ದಿನಗಳ, ಮಾಸಗಳ, ಕಾಲಮಾನಗಳ ಮತ್ತು ವರ್ಷಗಳ ಕುರಿತು ಧರ್ಮಶಾಸ್ತ್ರವು ಹೇಳುವ ಉಪದೇಶವನ್ನು ಇನ್ನೂ ಅನುಸರಿಸುತ್ತಿದ್ದೀರಿ. 11 ನಿಮ್ಮ ವಿಷಯದಲ್ಲಿ ನನಗೆ ಭಯವಾಗಿದೆ. ನಿಮಗೋಸ್ಕರ ನಾನು ಪಟ್ಟ ಪ್ರಯಾಸವು ವ್ಯರ್ಥವಾಗುವುದೆಂಬ ಭಯ ನನಗಿದೆ.
12 ಸಹೋದರ ಸಹೋದರಿಯರೇ, ನಾನೂ ನಿಮ್ಮಂತಿದ್ದೆನು. ಆದ್ದರಿಂದ ದಯವಿಟ್ಟು ನನ್ನಂತೆ ಆಗಿರಿ. 13 ಮೊದಲು ನೀವು ನನಗೆ ಬಹು ಒಳ್ಳೆಯವರಾಗಿದ್ದಿರಿ. ನಾನು ನಿಮ್ಮ ಬಳಿಗೆ ಮೊದಲನೆ ಸಲ ಬಂದದ್ದು ನನ್ನ ಅನಾರೋಗ್ಯದ ನಿಮಿತ್ತವೆಂದು ನಿಮಗೆ ಗೊತ್ತಿದೆ. ನಾನು ನಿಮಗೆ ಸುವಾರ್ತೆಯನ್ನು ತಿಳಿಸಿದ್ದು ಆವಾಗಲೇ. 14 ನನ್ನ ಅನಾರೋಗ್ಯವು ನಿಮಗೆ ಹೊರೆಯಾಗಿತ್ತು. ಆದರೆ ನೀವು ನನ್ನ ವಿಷಯದಲ್ಲಿ ಬೇಸರಮಾಡಿಕೊಳ್ಳಲಿಲ್ಲ. ನೀವು ನನ್ನನ್ನು ಕಳುಹಿಸಿಬಿಡಲಿಲ್ಲ. ದೇವದೂತನೋ ಎಂಬಂತೆ ನೀವು ನನ್ನನ್ನು ಸ್ವಾಗತಿಸಿದಿರಿ; ಸ್ವತಃ ಯೇಸು ಕ್ರಿಸ್ತನೋ ಎಂಬಂತೆ ನನ್ನನ್ನು ಸ್ವೀಕರಿಸಿಕೊಂಡಿರಿ. 15 ಆಗ ನೀವು ಬಹು ಸಂತೋಷವುಳ್ಳವರಾಗಿದ್ದಿರಿ. ಆ ಆನಂದವು ಈಗ ಎಲ್ಲಿದೆ? ನನಗೆ ಸಹಾಯ ಮಾಡಲು ನೀವು ಏನು ಬೇಕಾದರೂ ಮಾಡುವುದಕ್ಕೆ ಸಿದ್ಧರಾಗಿದ್ದಿರೆಂಬುದು ನನ್ನ ನೆನಪಿನಲ್ಲಿದೆ. ಸಾಧ್ಯವಾಗಿದ್ದರೆ ನಿಮ್ಮ ಕಣ್ಣುಗಳನ್ನೇ ಕಿತ್ತು ನನಗೆ ಕೊಟ್ಟುಬಿಡುತ್ತಿದ್ದಿರಿ. 16 ನಾನು ನಿಮಗೆ ಸತ್ಯವನ್ನು ಹೇಳುವುದರಿಂದ ಈಗ ನಿಮ್ಮ ಶತ್ರುವಾಗಿದ್ದೇನೋ?
17 ನಿಮ್ಮನ್ನು ಒತ್ತಾಯಪಡಿಸುವುದಕ್ಕಾಗಿ ಆ ಜನರು ಪ್ರಯಾಸ ಪಟ್ಟು ಕೆಲಸ ಮಾಡುತ್ತಿದ್ದಾರೆ. ಆದರೆ ಒಳ್ಳೆಯ ಉದ್ದೇಶದಿಂದಲ್ಲ. ನೀವು ನಮಗೆ ವಿರುದ್ಧವಾಗಿ ತಿರುಗಿಬೀಳಬೇಕೆಂದು ಅವರು ನಿಮ್ಮನ್ನು ಒತ್ತಾಯಪಡಿಸುತ್ತಿದ್ದಾರೆ. ನೀವು ಅವರನ್ನೇ ಹೊರತು ಬೇರೆ ಯಾರನ್ನೂ ಅನುಸರಿಸಬಾರದೆಂಬುದು ಅವರ ಅಪೇಕ್ಷೆ. ನಿಮ್ಮ ವಿಷಯದಲ್ಲಿ ಜನರು ಆಸಕ್ತಿ ತೋರಿಸುವುದೇನೋ ಒಳ್ಳೆಯದು. 18 ಆದರೆ ಅವರ ಉದ್ದೇಶವು ಒಳ್ಳೆಯದಾಗಿದ್ದಾಗ ಮಾತ್ರ ನಿಮಗೆ ಒಳ್ಳೆಯದಾಗುತ್ತದೆ. ಇದು ಸತ್ಯ. ನಾನು ನಿಮ್ಮೊಂದಿಗಿರುವಾಗಲೂ ನಿಮ್ಮಿಂದ ದೂರವಿರುವಾಗಲೂ ಇದು ಸತ್ಯ. 19 ನನ್ನ ಪ್ರಿಯ ಮಕ್ಕಳೇ, ಪ್ರಸವವೇದನೆಪಡುವ ತಾಯಿಯಂತೆ ನಾನು ನಿಮ್ಮ ವಿಷಯದಲ್ಲಿ ನೋವುಳ್ಳವನಾಗಿದ್ದೇನೆ. ನೀವು ನಿಜವಾಗಿಯೂ ಕ್ರಿಸ್ತನಂತಾಗುವ ತನಕ ನನಗೆ ಈ ನೋವಿರುತ್ತದೆ. 20 ಈಗ ನಾನು ನಿಮ್ಮೊಂದಿಗಿದ್ದಿದ್ದರೆ ಬೇರೊಂದು ರೀತಿಯಲ್ಲಿ ತಿಳಿಸಬಹುದಾಗಿತ್ತು. ನಿಮ್ಮ ವಿಷಯದಲ್ಲಿ ಈಗ ಏನು ಮಾಡಬೇಕೊ ನನಗೆ ತಿಳಿಯದು.
Kannada Holy Bible: Easy-to-Read Version. All rights reserved. © 1997 Bible League International