Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 77:1-2

ರಚನೆಗಾರ: ಆಸಾಫ.

77 ನಾನು ಸ್ವರವೆತ್ತಿ ದೇವರಿಗೆ ಮೊರೆಯಿಡುವೆನು.
    ದೇವರೇ, ಸ್ವರವೆತ್ತಿ ಮೊರೆಯಿಡುವೆನು, ನನಗೆ ಕಿವಿಗೊಡು.
ನನ್ನ ಯೆಹೋವನೇ, ಇಕ್ಕಟ್ಟಿನಲ್ಲಿ ನಿನ್ನನ್ನು ಕರೆದೆನು;
    ರಾತ್ರಿಯೆಲ್ಲಾ ನಿನಗಾಗಿ ಕೈಚಾಚಿಕೊಂಡಿದ್ದೆನು.
    ಆದರೆ ನನ್ನ ಮನಸ್ಸು ಸಮಾಧಾನಗೊಳ್ಳಲಿಲ್ಲ.

ಕೀರ್ತನೆಗಳು 77:11-20

11 ಯೆಹೋವನೇ, ನಿನ್ನ ಕಾರ್ಯಗಳನ್ನು ಜ್ಞಾಪಿಸಿಕೊಳ್ಳುವೆನು.
    ಬಹುಕಾಲದ ಹಿಂದೆ ಮಾಡಿದ ಅದ್ಭುತಕಾರ್ಯಗಳನ್ನು ಜ್ಞಾಪಿಸಿಕೊಳ್ಳುವೆನು.
12 ನಿನ್ನ ಕಾರ್ಯಗಳನ್ನೆಲ್ಲಾ ಧ್ಯಾನಿಸುವೆನು;
    ನಿನ್ನ ಕಾರ್ಯಗಳ ಕುರಿತಾಗಿ ಆಲೋಚಿಸುವೆನು.
13 ದೇವರೇ, ನಿನ್ನ ಮಾರ್ಗಗಳು ಪರಿಶುದ್ಧವಾಗಿವೆ.
    ದೇವರೇ, ನಿನ್ನಂತೆ ಮಹತ್ವವುಳ್ಳವರು ಬೇರೆ ಯಾರೂ ಇಲ್ಲ.
14 ಅದ್ಭುತಕಾರ್ಯಗಳನ್ನು ಮಾಡಿದ ದೇವರು ನೀನೇ.
    ನೀನು ಜನರಿಗೆ ನಿನ್ನ ಮಹಾಶಕ್ತಿಯನ್ನು ತೋರಿಸಿದೆ.
15 ನೀನು ನಿನ್ನ ಶಕ್ತಿಯಿಂದ ನಿನ್ನ ಜನರನ್ನು ರಕ್ಷಿಸಿದೆ.
    ಯಾಕೋಬನ ಮತ್ತು ಯೋಸೇಫನ ಸಂತತಿಯವರನ್ನು ನೀನು ರಕ್ಷಿಸಿದೆ.

16 ದೇವರೇ, ನಿನ್ನನ್ನು ಕಂಡು ಜಲರಾಶಿಗಳು ಭಯಗೊಂಡವು.
    ಆಳವಾದ ಜಲರಾಶಿಗಳು ಭಯದಿಂದ ನಡುಗಿದವು.
17 ದಟ್ಟವಾದ ಕಪ್ಪುಮೋಡಗಳು ಮಳೆಗರೆದವು.
    ಜನರಿಗೆ ಮೇಘಮಂಡಲದಿಂದ ಗುಡುಗು ಕೇಳಿಸಿತು.
    ನಿನ್ನ ಮಿಂಚಿನ ಬಾಣಗಳು ಆ ಮೋಡಗಳಲ್ಲಿ ಹಾರಿದವು.
18 ಬಿರುಗಾಳಿಯಲ್ಲಿ ನಿನ್ನ ಗುಡುಗು ಕೇಳಿಸಿತು.
    ಮಿಂಚುಗಳು ಭೂಮಂಡಲವನ್ನು ಬೆಳಗಿಸಿದವು.
    ಭೂಮಿಯು ಅಲ್ಲಾಡಿ ಕಂಪಿಸಿತು.
19 ನೀನು ಸಮುದ್ರದಲ್ಲಿ ಮಾರ್ಗಮಾಡಿದೆ;
    ಆಳವಾದ ಜಲರಾಶಿಗಳನ್ನು ದಾಟಿದೆ.
    ಆದರೆ ನಿನ್ನ ಹೆಜ್ಜೆಯ ಗುರುತು ಕಾಣಲೇ ಇಲ್ಲ.
20 ಕುರುಬನು ಕುರಿಹಿಂಡನ್ನು ಕರೆದೊಯ್ಯುವಂತೆ
    ನಿನ್ನ ಜನರನ್ನು ಕರೆದೊಯ್ಯಲು ಮೋಶೆಯನ್ನೂ ಆರೋನನನ್ನೂ ಉಪಯೋಗಿಸಿದೆ.

1 ರಾಜರುಗಳು 22:29-40

29 ನಂತರ ರಾಜನಾದ ಅಹಾಬನು ಮತ್ತು ರಾಜನಾದ ಯೆಹೋಷಾಫಾಟನು ಅರಾಮ್ಯರ ಸೇನೆಯ ವಿರುದ್ಧ ಹೋರಾಡಲು ರಾಮೋತಿಗೆ ಹೋದರು. ಅದು ಗಿಲ್ಯಾದಿನ ಪ್ರದೇಶವೆಂಬಲ್ಲಿ ನಡೆಯಿತು. 30 ಅಹಾಬನು ಯೆಹೋಷಾಫಾಟನಿಗೆ, “ನಾವು ಹೋರಾಟಕ್ಕೆ ಸಿದ್ಧತೆಗಳನ್ನು ಮಾಡೋಣ. ನೋಡುವುದಕ್ಕೆ ರಾಜನಲ್ಲವೆಂದು ತೋರುವಂತಹ ವಸ್ತ್ರಗಳನ್ನು ನಾನು ಧರಿಸಿಕೊಳ್ಳುತ್ತೇನೆ. ಆದರೆ ನೀನು ರಾಜನಂತೆ ತೋರುವ ನಿನ್ನ ವಿಶೇಷ ವಸ್ತ್ರಗಳನ್ನು ಧರಿಸಿಕೊ” ಎಂದನು. ಇಸ್ರೇಲಿನ ರಾಜನು, ತಾನು ರಾಜನಲ್ಲವೆಂದು ತೋರುವಂತಹ ವಸ್ತ್ರಗಳನ್ನು ಧರಿಸಿಕೊಂಡು ಹೋರಾಟವನ್ನು ಆರಂಭಿಸಿದನು.

31 ಅರಾಮ್ಯರ ರಾಜನ ಬಳಿ ಮೂವತ್ತೆರಡು ರಥಬಲದ ಅಧಿಪತಿಗಳಿದ್ದರು. ಆ ರಾಜನು ಇಸ್ರೇಲಿನ ರಾಜನನ್ನು ಕಂಡು ಹಿಡಿಯುವಂತೆ ಈ ಮೂವತ್ತೆರಡು ರಥಬಲದ ಅಧಿಪತಿಗಳಿಗೆ ಆಜ್ಞಾಪಿಸಿದ್ದನು. ಅರಾಮ್ಯರ ರಾಜನು, ಇಸ್ರೇಲಿನ ರಾಜನನ್ನು ಕೊಂದುಹಾಕುವಂತೆ ಈ ಅಧಿಕಾರಿಗಳಿಗೆ ಆಜ್ಞಾಪಿಸಿದ್ದನು; 32 ಹೋರಾಟದ ಸಂದರ್ಭದಲ್ಲಿ ರಾಜನಾದ ಯೆಹೋಷಾಫಾಟನನ್ನು ಈ ಅಧಿಪತಿಗಳು ನೋಡಿದರು. ಆ ಅಧಿಕಾರಿಗಳು ಅವನನ್ನು ಇಸ್ರೇಲಿನ ರಾಜನೆಂದು ತಿಳಿದು ಅವನನ್ನು ಕೊಲ್ಲುವುದಕ್ಕೆ ಅವರು ಹೋದರು. ಯೆಹೋಷಾಫಾಟನು ಕೂಗಿಕೊಳ್ಳಲಾರಂಭಿಸಿದನು. 33 ಅವನು ರಾಜನಾದ ಅಹಾಬನಲ್ಲವೆಂಬುದನ್ನು ಆ ಅಧಿಕಾರಿಗಳು ತಿಳಿದು ಅವನನ್ನು ಕೊಲ್ಲಲಿಲ್ಲ.

34 ಆದರೆ ಒಬ್ಬ ಸೈನಿಕನು ಯಾರಿಗೂ ಗುರಿಯಿಡದೆ ಒಂದು ಬಾಣವನ್ನು ಗಾಳಿಯಲ್ಲಿ ಹೊಡೆದನು. ಆದರೆ ಅವನ ಬಾಣವು ಇಸ್ರೇಲಿನ ರಾಜನಾದ ಅಹಾಬನಿಗೆ ಬಡಿಯಿತು. ಆ ಬಾಣವು ರಾಜನ ದೇಹದ ಕವಚದ ಸಣ್ಣ ಸಂಧಿಯಲ್ಲಿ ತಾಕಿತು. ರಾಜನಾದ ಅಹಾಬನು ತನ್ನ ರಥದ ಸಾರಥಿಗೆ, “ಒಂದು ಬಾಣವು ನನಗೆ ತಾಕಿತು! ರಥವನ್ನು ಈ ಪ್ರದೇಶದಿಂದ ಹೊರಗೆ ಓಡಿಸು. ನಾವು ಯುದ್ಧದಿಂದ ಹೊರಟುಹೋಗಬೇಕಾಗಿದೆ” ಎಂದು ಹೇಳಿದನು.

35 ಸೈನಿಕರು ಹೋರಾಡುತ್ತಲೇ ಇದ್ದರು. ರಾಜನಾದ ಅಹಾಬನು ರಥದಲ್ಲಿಯೇ ಇದ್ದನು. ಅವನು ರಥದ ಒಂದು ಪಕ್ಕಕ್ಕೆ ಒರಗಿಕೊಂಡು ನಿಂತಿದ್ದನು. ಅವನು ಅರಾಮ್ಯರ ಸೇನೆಯ ಕಡೆಗೆ ನೋಡುತ್ತಲೇ ಇದ್ದನು. ಅವನ ದೇಹದಿಂದ ಹರಿದ ರಕ್ತವು, ರಥದ ತಳದಲ್ಲಿ ಮಡುಗಟ್ಟಿತು. ಸಾಯಂಕಾಲವಾದ ಮೇಲೆ ರಾಜನು ಸತ್ತುಹೋದನು. 36 ಸೂರ್ಯನು ಮುಳುಗುತ್ತಿರಲು, ಇಸ್ರೇಲಿನ ಸೈನ್ಯದ ಪ್ರತಿಯೊಬ್ಬನು ತನ್ನ ಊರಿಗೂ ತನ್ನ ನಾಡಿಗೂ ಹೋಗಬೇಕು! ಎಂಬ ಕೂಗು ಸೈನ್ಯದಲ್ಲೆಲ್ಲಾ (ಪಾಳೆಯದಲ್ಲಿ) ಹಬ್ಬಿತು.

37 ರಾಜನಾದ ಅಹಾಬನು ಈ ರೀತಿಯಲ್ಲಿ ಸತ್ತುಹೋದನು. ಅವನ ದೇಹವನ್ನು ಕೆಲವು ಜನರು ಸಮಾರ್ಯಕ್ಕೆ ತೆಗೆದುಕೊಂಡು ಹೋದರು. ಅವರು ಅವನನ್ನು ಅಲ್ಲಿ ಸಮಾಧಿಮಾಡಿದರು. 38 ಆ ಜನರು ಅಹಾಬನ ರಥವನ್ನು ಸಮಾರ್ಯದ ಕೊಳದ ನೀರಿನಲ್ಲಿ ತೊಳೆದರು. ರಥದಲ್ಲಿದ್ದ ರಾಜನಾದ ಅಹಾಬನ ರಕ್ತವನ್ನು ನಾಯಿಗಳು ನೆಕ್ಕಿದವು. ದೇವದಾಸಿಯರು ಆ ಕೊಳದ ನೀರನ್ನು ಸ್ನಾನಕ್ಕೆ ಉಪಯೋಗಿಸುತ್ತಿದ್ದರು. ಯೆಹೋವನು ಹೇಳಿದ್ದ ರೀತಿಯಲ್ಲಿಯೇ ಈ ಸಂಗತಿಗಳು ಸಂಭವಿಸಿದವು.

39 ರಾಜನಾದ ಅಹಾಬನು ತನ್ನ ಆಳ್ವಿಕೆಯ ಕಾಲದಲ್ಲಿ ಮಾಡಿದ ಸಂಗತಿಗಳನ್ನೆಲ್ಲಾ “ಇಸ್ರೇಲಿನ ರಾಜರುಗಳ ಇತಿಹಾಸ” ಪುಸ್ತಕದಲ್ಲಿ ಬರೆದಿದ್ದಾರೆ. ರಾಜನು ತನ್ನ ಅರಮನೆಯನ್ನು ಮತ್ತಷ್ಟು ಸುಂದರವಾಗಿ ಕಾಣುವಂತೆ ಮಾಡಲು ಬಳಸಿದ ದಂತದ ಕುರಿತಾಗಿಯೂ ಆ ಪುಸ್ತಕವು ತಿಳಿಸುತ್ತದೆ. ರಾಜನು ನಿರ್ಮಿಸಿದ ನಗರಗಳ ಬಗ್ಗೆಯೂ ಆ ಪುಸ್ತಕವು ತಿಳಿಸುತ್ತದೆ. 40 ಅಹಾಬನು ಸತ್ತಾಗ ಅವನನ್ನು ಅವನ ಪೂರ್ವಿಕರೊಡನೆ ಸಮಾಧಿಮಾಡಿದರು. ಅವನ ನಂತರ ಅವನ ಮಗನಾದ ಅಹಜ್ಯನು ರಾಜನಾದನು.

1 ರಾಜರುಗಳು 22:51-53

ಇಸ್ರೇಲಿನ ರಾಜನಾದ ಅಹಜ್ಯ

51 ಅಹಜ್ಯನು ಅಹಾಬನ ಮಗ. ಯೆಹೋಷಾಫಾಟನು ಯೆಹೂದದ ರಾಜನಾಗಿದ್ದ ಹದಿನೇಳನೆಯ ವರ್ಷದಲ್ಲಿ ಅವನು ಇಸ್ರೇಲಿನ ರಾಜನಾದನು. ಅಹಜ್ಯನು ಸಮಾರ್ಯದಲ್ಲಿ ಎರಡು ವರ್ಷ ರಾಜ್ಯವಾಳಿದನು. 52 ಅಹಜ್ಯನು ಯೆಹೋವನ ವಿರುದ್ಧ ಪಾಪವನ್ನು ಮಾಡಿದನು. ಅವನು ತನ್ನ ತಂದೆಯಾದ ಅಹಾಬ, ತಾಯಿಯಾದ ಈಜೆಬೆಲ ಮತ್ತು ನೆಬಾಟನ ಮಗನಾದ ಯಾರೊಬ್ಬಾಮ ಮಾಡಿದಂತಹ ಕಾರ್ಯಗಳನ್ನೇ ಮಾಡಿದನು. ಈ ಆಡಳಿತಗಾರರೆಲ್ಲ ಇಸ್ರೇಲಿನ ಜನರನ್ನು ಮತ್ತಷ್ಟು ಪಾಪಕ್ಕೆ ನಡೆಸಿದರು. 53 ಅಹಜ್ಯನು ತನ್ನ ತಂದೆಯಂತೆಯೇ ಸುಳ್ಳುದೇವರಾದ ಬಾಳನನ್ನು ಪೂಜಿಸಿ ಅವನ ಸೇವೆ ಮಾಡಿದನು; ಇಸ್ರೇಲಿನ ದೇವರಾದ ಯೆಹೋವನನ್ನು ರೇಗಿಸಿದನು. ಯೆಹೋವನು ಮೊದಲು ಅಹಜ್ಯನ ತಂದೆಯ ಮೇಲೆ ಕೋಪಗೊಂಡಿದ್ದಂತೆ, ಅಹಜ್ಯನ ಮೇಲೂ ಕೋಪಗೊಂಡನು.

2 ಕೊರಿಂಥದವರಿಗೆ 13:5-10

ನೀವು ನಂಬಿಕೆಯಲ್ಲಿ ಜೀವಿಸುತ್ತಿದ್ದೀರೋ ಎಂಬುದನ್ನು ತಿಳಿದುಕೊಳ್ಳಲು ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿರಿ. ಕ್ರಿಸ್ತಯೇಸುವು ನಿಮ್ಮೊಳಗೆ ಇದ್ದಾನೆಂಬುದು ನಿಮಗೆ ಗೊತ್ತಿದೆ. ಆತನು ನಿಮ್ಮಲ್ಲಿಲ್ಲದಿದ್ದರೆ ನೀವು ಅಯೋಗ್ಯರಾಗಿದ್ದೀರಿ. ಆದರೆ ನಾವು ಅಯೋಗ್ಯರಲ್ಲವೆಂದು ನಿಮಗೆ ಖಚಿತವಾಗುವುದರಲ್ಲಿ ನಮಗೆ ಸಂದೇಹವಿಲ್ಲ. ನೀವು ಯಾವ ತಪ್ಪನ್ನೂ ಮಾಡದಿರಲಿ ಎಂಬುದಾಗಿ ನಾವು ದೇವರಲ್ಲಿ ಪ್ರಾರ್ಥಿಸುತ್ತೇವೆ. ನಮ್ಮನ್ನು ಅಯೋಗ್ಯರೆಂದು ಜನರು ಭಾವಿಸಿಕೊಂಡರೂ ನೀವು ಒಳ್ಳೆಯದನ್ನು ಮಾಡುವುದೇ ಮುಖ್ಯ. ಸತ್ಯಕ್ಕೆ ವಿರೋಧವಾದ ಸಂಗತಿಗಳನ್ನು ಮಾಡಲು ನಮಗೆ ಸಾಧ್ಯವಿಲ್ಲ. ಸತ್ಯದ ಪರವಾದ ಕಾರ್ಯಗಳನ್ನು ಮಾತ್ರ ಮಾಡಲು ನಮಗೆ ಸಾಧ್ಯ. ನೀವು ಶಕ್ತರಾಗಿರುವುದಾದರೆ, ನಾವು ಬಲಹೀನರಾಗಿರಲು ಸಂತೋಷಿಸುತ್ತೇವೆ. ನೀವು ನಂಬಿಕೆಯಲ್ಲಿ ಪರಿಪೂರ್ಣರಾಗಬೇಕೆಂಬುದೇ ನಮ್ಮ ಉದ್ದೇಶ. 10 ನಾನು ನಿಮ್ಮೊಂದಿಗೆ ಇಲ್ಲದಿರುವಾಗ ಈ ಸಂಗತಿಗಳನ್ನು ಬರೆಯುತ್ತಿದ್ದೇನೆ. ಏಕೆಂದರೆ ನಾನು ಬಂದಾಗ ನಿಮ್ಮನ್ನು ದಂಡಿಸುವುದಕ್ಕಾಗಿ ನನ್ನ ಅಧಿಕಾರವನ್ನು ಉಪಯೋಗಿಸುವ ಅಗತ್ಯವಿರುವುದಿಲ್ಲ. ಪ್ರಭುವು ನನಗೆ ಅಧಿಕಾರವನ್ನು ಕೊಟ್ಟಿರುವುದು ನಿಮ್ಮನ್ನು ಬಲಗೊಳಿಸುವುದಕ್ಕಾಗಿಯೇ ಹೊರತು ನಾಶಮಾಡುವುದಕ್ಕಾಗಿಯಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International