Revised Common Lectionary (Semicontinuous)
ಸೌಲನು ದಾವೀದನನ್ನು ಕೊಲ್ಲಲು ಮುತ್ತಿಗೆ ಹಾಕಿದಾಗ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.
59 ನನ್ನ ದೇವರೇ, ವೈರಿಗಳಿಂದ ನನ್ನನ್ನು ಬಿಡಿಸು.
ನನಗೆ ವಿರೋಧವಾಗಿ ಎದ್ದಿರುವ ಜನರಿಂದ ನನ್ನನ್ನು ಸಂರಕ್ಷಿಸು.
2 ಆ ದುಷ್ಟರಿಂದ ನನ್ನನ್ನು ವಿಮೋಚಿಸು.
ಆ ಕೊಲೆಪಾತಕರಿಂದ ನನ್ನನ್ನು ರಕ್ಷಿಸು.
3 ಇಗೋ, ನನ್ನನ್ನು ಕೊಲ್ಲಲು ಬಲಿಷ್ಠರು ಹೊಂಚುಹಾಕಿದ್ದ್ದಾರೆ.
ಆದರೆ ನಾನು ಪಾಪವನ್ನಾಗಲಿ ಅಪರಾಧವನ್ನಾಗಲಿ ಮಾಡಿಲ್ಲ.
4 ಅವರು ನನ್ನ ಮೇಲೆ ಆಕ್ರಮಣಮಾಡಲು ಬರುತ್ತಿದ್ದಾರೆ, ಆದರೆ ನಾನೇನು ತಪ್ಪು ಮಾಡಿಲ್ಲ.
ಯೆಹೋವನೇ, ಸ್ವತಃ ನೀನೇ ಬಂದು ನೋಡು!
5 ಸೇನಾಧೀಶ್ವರನಾದ ಯೆಹೋವನೇ, ಇಸ್ರೇಲರ ದೇವರೇ, ಎದ್ದೇಳು!
ಅವರನ್ನು ದಂಡಿಸು!
ಆ ದುಷ್ಟ ದ್ರೋಹಿಗಳಿಗೆ ಕರುಣೆಯನ್ನೇ ತೋರಬೇಡ.
6 ಗುರುಗುಟ್ಟುತ್ತಾ ಬೀದಿಗಳಲ್ಲಿ ಅಡ್ಡಾಡುವ ನಾಯಿಗಳಂತೆ
ಅವರು ಸಾಯಂಕಾಲದಲ್ಲಿ ಪಟ್ಟಣದಲ್ಲೆಲ್ಲಾ ಸುತ್ತಾಡುತ್ತಾರೆ.
7 ತಮ್ಮ ನಾಲಿಗೆಗಳೇ ಆಯುಧಗಳೆಂಬಂತೆ
ಅಪಮಾನಕರವಾದ ನುಡಿಗಳನ್ನು ಬೊಗಳುತ್ತಾರೆ.
ಯಾರು ಕೇಳಿಸಿಕೊಂಡರೂ ಅವರಿಗೆ ಚಿಂತೆಯಿಲ್ಲ.
8 ಯೆಹೋವನೇ, ಅವರನ್ನು ನೋಡಿ ನಗು.
ಅವರೆಲ್ಲರನ್ನು ಅಪಹಾಸ್ಯ ಮಾಡು.
9 ನನ್ನ ಬಲವೇ, ನಿನ್ನನ್ನೇ ನಿರೀಕ್ಷಿಸಿಕೊಂಡಿದ್ದೇನೆ.
ದೇವರೇ, ಬೆಟ್ಟಗಳ ಶಿಖರದಲ್ಲಿರುವ ಆಶ್ರಯದುರ್ಗ ನೀನೇ.
10 ದೇವರು ನನ್ನನ್ನು ಪ್ರೀತಿಸುವನು; ನನ್ನ ಜಯಕ್ಕೆ ಆತನೇ ಸಹಾಯ ಮಾಡುವನು.
ನನ್ನ ಶತ್ರುಗಳನ್ನು ಸೋಲಿಸಲು ಆತನೇ ನನಗೆ ನೆರವು ನೀಡುವನು.
11 ಯೆಹೋವನೇ, ನಮ್ಮ ಗುರಾಣಿಯೇ, ಅವರನ್ನು ಫಕ್ಕನೆ ಕೊಲ್ಲಬೇಡ, ಇಲ್ಲವಾದರೆ, ನನ್ನ ಜನರು ಮರೆತುಬಿಡಬಹುದು.
ನನ್ನ ಒಡಯನೇ, ಸಂರಕ್ಷಕನೇ, ಅವರನ್ನು ಚದರಿಸಿಬಿಡು; ನಿನ್ನ ಬಲದಿಂದ ಸೋಲಿಸಿಬಿಡು.
12 ಆ ದುಷ್ಟರು ಶಪಿಸುತ್ತಾರೆ, ಸುಳ್ಳಾಡುತ್ತಾರೆ.
ಅವರ ಮಾತುಗಳ ನಿಮಿತ್ತವೇ ಅವರನ್ನು ದಂಡಿಸು.
ಅವರು ತಮ್ಮ ಗರ್ವದಿಂದಲೇ ಸಿಕ್ಕಿಬೀಳಲಿ.
13 ನೀನು ಅವರನ್ನು ಕೋಪದಿಂದ ನಾಶಮಾಡು.
ಅವರನ್ನು ಸಂಪೂರ್ಣವಾಗಿ ನಾಶಮಾಡು.
ಯಾಕೋಬನ ವಂಶದವರನ್ನು ಆಳುತ್ತಿರುವವನು ನೀನೇ ಎಂದು ಆಗ ಲೋಕದವರಿಗೆಲ್ಲಾ ಗೊತ್ತಾಗುವುದು.
14 ಗುರುಗುಟ್ಟುತ್ತಾ ಬೀದಿಗಳಲ್ಲಿ ಅಡ್ಡಾಡುವ ನಾಯಿಗಳಂತೆ
ಅವರು ಸಾಯಂಕಾಲದಲ್ಲಿ ಪಟ್ಟಣದಲ್ಲೆಲ್ಲಾ ಸುತ್ತಾಡುತ್ತಾರೆ.
15 ಅವರು ಊಟಕ್ಕಾಗಿ ಹುಡುಕಾಡಿದರೂ ಸಿಕ್ಕುವುದಿಲ್ಲ;
ಮಲಗಲು ಸ್ಥಳವೂ ಸಿಕ್ಕುವುದಿಲ್ಲ.
16 ನಾನಾದರೋ ಮುಂಜಾನೆ ನಿನಗೆ ಸ್ತುತಿಗೀತೆಗಳನ್ನು ಹಾಡುವೆ;
ನಿನ್ನ ಪ್ರೀತಿಯ ಕುರಿತು ಕೊಂಡಾಡುವೆನು;
ಯಾಕೆಂದರೆ ಇಕ್ಕಟ್ಟಿನಲ್ಲಿ ನೀನೇ ನನಗೆ ಆಶ್ರಯದುರ್ಗವಾಗಿರುವೆ.
17 ನಾನು ನಿನಗೆ ಸ್ತುತಿಗೀತೆಗಳನ್ನು ಹಾಡುವೆ.
ಯಾಕೆಂದರೆ ನೀನೇ ನನಗೆ ಆಶ್ರಯದುರ್ಗವಾಗಿರುವೆ.
ನನ್ನನ್ನು ಪ್ರೀತಿಸುವ ದೇವರು ನೀನೇ!
ಈಜೆಬೆಲಳ ಭೀಕರ ಸಾವು
30 ಯೇಹುವು ಇಜ್ರೇಲಿಗೆ ಹೋದನು. ಈಜೆಬೆಲಳಿಗೆ ಈ ಸುದ್ದಿಯು ತಿಳಿಯಿತು. ಅವಳು ತಲೆಕೂದಲನ್ನು ಸುಂದರವಾಗಿ ಕಟ್ಟಿಕೊಂಡು, ಅಲಂಕರಿಸಿಕೊಂಡಳು. ನಂತರ ಅವಳು ಹೊರಗೆ ನೋಡುತ್ತಾ ಕಿಟಕಿಯ ಹತ್ತಿರ ನಿಂತುಕೊಂಡಳು. 31 ಯೇಹು ನಗರದೊಳಕ್ಕೆ ಪ್ರವೇಶಿಸಿದನು. ಈಜೆಬೆಲಳು, “ಜಿಮ್ರಿ, ಕ್ಷೇಮವೇ! ಅವನಂತೆಯೇ ನೀನೂ ನಿನ್ನ ಒಡೆಯನನ್ನು ಕೊಂದುಹಾಕಿದೆ!” ಎಂದಳು.
32 ಯೇಹು ಕಿಟಕಿಯ ಕಡೆ ಮೇಲೆ ನೋಡಿದನು. ಅವನು, “ನನ್ನ ಪಕ್ಷದಲ್ಲಿರುವವರು ಯಾರು? ಯಾರಿದ್ದೀರಿ?” ಎಂದನು.
ಆ ಕಿಟಕಿಯಿಂದ ಇಬ್ಬರು ಮೂವರು ಕಂಚುಕಿಗಳು ಯೇಹುವಿನತ್ತ ನೋಡಿದರು. 33 ಯೇಹುವು “ಈಜೆಬೆಲಳನ್ನು ಹೊರಕ್ಕೆ ಎಸೆಯಿರಿ!” ಎಂದು ಅವರಿಗೆ ಹೇಳಿದನು.
ಆಗ ಕಂಚುಕಿಗಳು ಈಜೆಬೆಲಳನ್ನು ಕೆಳಕ್ಕೆ ಎಸೆದರು. ಈಜೆಬೆಲಳ ರಕ್ತವು ಗೋಡೆಗಳ ಮೇಲೆ ಮತ್ತು ಕುದುರೆಗಳ ಮೇಲೆ ಚಿಮ್ಮಿತು. ಕುದುರೆಗಳು ಈಜೆಬೆಲಳ ದೇಹದ ಮೇಲೆ ತುಳಿದಾಡಿದವು. 34 ಯೇಹುವು ಮನೆಯೊಳಕ್ಕೆ ಹೋಗಿ ಅನ್ನಪಾನಗಳನ್ನು ತೆಗೆದುಕೊಂಡನು. ನಂತರ ಅವನು, “ಈಗ ಶಾಪಗ್ರಸ್ತಳಾದ ಆ ಸ್ತ್ರೀಯನ್ನು ನೋಡಿ. ಅವಳು ರಾಜನ ಮಗಳಾದ್ದರಿಂದ ಸಮಾಧಿ ಮಾಡಿ” ಎಂದು ಹೇಳಿದನು.
35 ಈಜೆಬೆಲಳನ್ನು ಸಮಾಧಿಮಾಡಲು ಜನರು ಹೋದರು. ಆದರೆ ಅವರಿಗೆ ಅವಳ ದೇಹವು ಸಿಗಲಿಲ್ಲ. ಅವರಿಗೆ ಅವಳ ತಲೆಬುರುಡೆ, ಕೈಕಾಲುಗಳು ಮಾತ್ರ ಸಿಕ್ಕಿದವು. 36 ಜನರು ಹಿಂದಿರುಗಿ ಬಂದು ಯೇಹುವಿಗೆ ಅದನ್ನು ಹೇಳಿದರು. ಯೇಹುವು, “ಯೆಹೋವನು ತನ್ನ ಸೇವಕನೂ ತಿಷ್ಬೀಯನೂ ಆದ ಎಲೀಯನಿಗೆ ಈ ರೀತಿ ಸಂದೇಶ ನೀಡಲು ಹೇಳಿದ್ದನು. ಎಲೀಯನು ಹೇಳಿದ್ದೇನೆಂದರೆ: ಇಜ್ರೇಲ್ ಪ್ರದೇಶದಲ್ಲಿ ಈಜೆಬೆಲಳ ದೇಹವನ್ನು ನಾಯಿಗಳು ತಿನ್ನುತ್ತವೆ. 37 ಇಜ್ರೇಲ್ ಪ್ರದೇಶದ ಹೊಲದಲ್ಲಿ ಈಜೆಬೆಲಳ ದೇಹವು ಸಗಣಿಯಂತಿರುತ್ತದೆ. ಈಜೆಬೆಲಳ ದೇಹವನ್ನು ಜನರು ಗುರುತಿಸಲಾಗುವುದಿಲ್ಲ!” ಎಂದು ಹೇಳಿದ್ದನು.
ದೆವ್ವದಿಂದ ಪೀಡಿತನಾಗಿದ್ದ ಬಾಲಕನಿಗೆ ಬಿಡುಗಡೆ
(ಮತ್ತಾಯ 17:14-18; ಮಾರ್ಕ 9:14-27)
37 ಮರುದಿನ, ಯೇಸು, ಪೇತ್ರ, ಯಾಕೋಬ ಮತ್ತು ಯೋಹಾನ ಬೆಟ್ಟದಿಂದಿಳಿದು ಬಂದರು. ಜನರ ಬಹು ದೊಡ್ಡ ಗುಂಪೊಂದು ಯೇಸುವನ್ನು ಎದುರುಗೊಂಡಿತು. 38 ಗುಂಪಿನಲ್ಲಿದ್ದ ಒಬ್ಬ ಮನುಷ್ಯನು, “ಉಪದೇಶಕನೇ, ದಯಮಾಡಿ ಬಂದು ನನ್ನ ಮಗನನ್ನು ನೋಡು. ನನಗೆ ಅವನೊಬ್ಬನೇ ಮಗನು. 39 ದೆವ್ವವೊಂದು ನನ್ನ ಮಗನೊಳಗೆ ಬರುತ್ತದೆ. ಆಗ ಅವನು ಕೂಗಾಡುತ್ತಾನೆ. ಸ್ವಾಧೀನ ಕಳೆದುಕೊಂಡು ಬಾಯಿಂದ ನೊರೆಸುರಿಸುತ್ತಾನೆ. ದೆವ್ವವು ಅವನನ್ನು ಒದ್ದಾಡಿಸಿ ಜಜ್ಜದ ಹೊರತು ಬಿಟ್ಟುಬಿಡುವುದೇ ಇಲ್ಲ. 40 ನನ್ನ ಮಗನನ್ನು ದೆವ್ವದಿಂದ ಬಿಡಿಸಬೇಕೆಂದು ನಿನ್ನ ಶಿಷ್ಯರನ್ನೂ ಬೇಡಿಕೊಂಡೆನು. ಆದರೆ ಅವರಿಂದ ಸಾಧ್ಯವಾಗಲಿಲ್ಲ” ಎಂದು ಯೇಸುವಿಗೆ ಕೂಗಿ ಹೇಳಿದನು.
41 ಆಗ ಯೇಸು, “ನಂಬಿಕೆಯಿಲ್ಲದ ದುಷ್ಟಸಂತಾನವೇ, ಇನೆಷ್ಟು ಕಾಲ ನಾನು ನಿಮ್ಮ ಸಂಗಡ ತಾಳ್ಮೆಯಿಂದ ಇರಲಿ?” ಎಂದು ಉತ್ತರಿಸಿ, ಆ ಮನುಷ್ಯನಿಗೆ, “ನಿನ್ನ ಮಗನನ್ನು ಇಲ್ಲಿಗೆ ಕರೆದುಕೊಂಡು ಬಾ” ಅಂದನು.
42 ಆ ಹುಡುಗನು ಬರುತ್ತಿದ್ದಾಗ, ದೆವ್ವವು ಅವನನ್ನು ನೆಲಕ್ಕೆ ಅಪ್ಪಳಿಸಿತು. ಹುಡುಗನು ತನ್ನ ಸ್ವಾಧೀನ ಕಳೆದುಕೊಂಡನು. ಆಗ ಯೇಸು ದೆವ್ವವನ್ನು ಗದರಿಸಿ ಆ ಹುಡುಗನನ್ನು ಗುಣಪಡಿಸಿದನು. ಬಳಿಕ ಅವನನ್ನು ಅವನ ತಂದೆಗೆ ಒಪ್ಪಿಸಿಕೊಟ್ಟನು. 43 ಜನರೆಲ್ಲರೂ ದೇವರ ಮಹಾಶಕ್ತಿಯನ್ನು ಕಂಡು ಬೆರಗಾದರು.
ತನ್ನ ಮರಣದ ಬಗ್ಗೆ ಯೇಸುವಿನ ಪ್ರಕಟಣೆ
(ಮತ್ತಾಯ 17:22-23; ಮಾರ್ಕ 9:30-32)
ಯೇಸು ಮಾಡಿದ ಎಲ್ಲಾ ಕಾರ್ಯಗಳ ಬಗ್ಗೆ ಜನರು ಇನ್ನೂ ಆಶ್ಚರ್ಯಚಕಿತರಾಗಿದ್ದರು. ಯೇಸು ತನ್ನ ಶಿಷ್ಯರಿಗೆ,
Kannada Holy Bible: Easy-to-Read Version. All rights reserved. © 1997 Bible League International