Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 59

ಸೌಲನು ದಾವೀದನನ್ನು ಕೊಲ್ಲಲು ಮುತ್ತಿಗೆ ಹಾಕಿದಾಗ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.

59 ನನ್ನ ದೇವರೇ, ವೈರಿಗಳಿಂದ ನನ್ನನ್ನು ಬಿಡಿಸು.
    ನನಗೆ ವಿರೋಧವಾಗಿ ಎದ್ದಿರುವ ಜನರಿಂದ ನನ್ನನ್ನು ಸಂರಕ್ಷಿಸು.
ಆ ದುಷ್ಟರಿಂದ ನನ್ನನ್ನು ವಿಮೋಚಿಸು.
    ಆ ಕೊಲೆಪಾತಕರಿಂದ ನನ್ನನ್ನು ರಕ್ಷಿಸು.
ಇಗೋ, ನನ್ನನ್ನು ಕೊಲ್ಲಲು ಬಲಿಷ್ಠರು ಹೊಂಚುಹಾಕಿದ್ದ್ದಾರೆ.
    ಆದರೆ ನಾನು ಪಾಪವನ್ನಾಗಲಿ ಅಪರಾಧವನ್ನಾಗಲಿ ಮಾಡಿಲ್ಲ.
ಅವರು ನನ್ನ ಮೇಲೆ ಆಕ್ರಮಣಮಾಡಲು ಬರುತ್ತಿದ್ದಾರೆ, ಆದರೆ ನಾನೇನು ತಪ್ಪು ಮಾಡಿಲ್ಲ.
    ಯೆಹೋವನೇ, ಸ್ವತಃ ನೀನೇ ಬಂದು ನೋಡು!
ಸೇನಾಧೀಶ್ವರನಾದ ಯೆಹೋವನೇ, ಇಸ್ರೇಲರ ದೇವರೇ, ಎದ್ದೇಳು!
    ಅವರನ್ನು ದಂಡಿಸು!
ಆ ದುಷ್ಟ ದ್ರೋಹಿಗಳಿಗೆ ಕರುಣೆಯನ್ನೇ ತೋರಬೇಡ.

ಗುರುಗುಟ್ಟುತ್ತಾ ಬೀದಿಗಳಲ್ಲಿ ಅಡ್ಡಾಡುವ ನಾಯಿಗಳಂತೆ
    ಅವರು ಸಾಯಂಕಾಲದಲ್ಲಿ ಪಟ್ಟಣದಲ್ಲೆಲ್ಲಾ ಸುತ್ತಾಡುತ್ತಾರೆ.
ತಮ್ಮ ನಾಲಿಗೆಗಳೇ ಆಯುಧಗಳೆಂಬಂತೆ
    ಅಪಮಾನಕರವಾದ ನುಡಿಗಳನ್ನು ಬೊಗಳುತ್ತಾರೆ.
    ಯಾರು ಕೇಳಿಸಿಕೊಂಡರೂ ಅವರಿಗೆ ಚಿಂತೆಯಿಲ್ಲ.

ಯೆಹೋವನೇ, ಅವರನ್ನು ನೋಡಿ ನಗು.
    ಅವರೆಲ್ಲರನ್ನು ಅಪಹಾಸ್ಯ ಮಾಡು.
ನನ್ನ ಬಲವೇ, ನಿನ್ನನ್ನೇ ನಿರೀಕ್ಷಿಸಿಕೊಂಡಿದ್ದೇನೆ.
    ದೇವರೇ, ಬೆಟ್ಟಗಳ ಶಿಖರದಲ್ಲಿರುವ ಆಶ್ರಯದುರ್ಗ ನೀನೇ.
10 ದೇವರು ನನ್ನನ್ನು ಪ್ರೀತಿಸುವನು; ನನ್ನ ಜಯಕ್ಕೆ ಆತನೇ ಸಹಾಯ ಮಾಡುವನು.
    ನನ್ನ ಶತ್ರುಗಳನ್ನು ಸೋಲಿಸಲು ಆತನೇ ನನಗೆ ನೆರವು ನೀಡುವನು.
11 ಯೆಹೋವನೇ, ನಮ್ಮ ಗುರಾಣಿಯೇ, ಅವರನ್ನು ಫಕ್ಕನೆ ಕೊಲ್ಲಬೇಡ, ಇಲ್ಲವಾದರೆ, ನನ್ನ ಜನರು ಮರೆತುಬಿಡಬಹುದು.
    ನನ್ನ ಒಡಯನೇ, ಸಂರಕ್ಷಕನೇ, ಅವರನ್ನು ಚದರಿಸಿಬಿಡು; ನಿನ್ನ ಬಲದಿಂದ ಸೋಲಿಸಿಬಿಡು.
12 ಆ ದುಷ್ಟರು ಶಪಿಸುತ್ತಾರೆ, ಸುಳ್ಳಾಡುತ್ತಾರೆ.
    ಅವರ ಮಾತುಗಳ ನಿಮಿತ್ತವೇ ಅವರನ್ನು ದಂಡಿಸು.
    ಅವರು ತಮ್ಮ ಗರ್ವದಿಂದಲೇ ಸಿಕ್ಕಿಬೀಳಲಿ.
13 ನೀನು ಅವರನ್ನು ಕೋಪದಿಂದ ನಾಶಮಾಡು.
    ಅವರನ್ನು ಸಂಪೂರ್ಣವಾಗಿ ನಾಶಮಾಡು.
ಯಾಕೋಬನ ವಂಶದವರನ್ನು ಆಳುತ್ತಿರುವವನು ನೀನೇ ಎಂದು ಆಗ ಲೋಕದವರಿಗೆಲ್ಲಾ ಗೊತ್ತಾಗುವುದು.

14 ಗುರುಗುಟ್ಟುತ್ತಾ ಬೀದಿಗಳಲ್ಲಿ ಅಡ್ಡಾಡುವ ನಾಯಿಗಳಂತೆ
    ಅವರು ಸಾಯಂಕಾಲದಲ್ಲಿ ಪಟ್ಟಣದಲ್ಲೆಲ್ಲಾ ಸುತ್ತಾಡುತ್ತಾರೆ.
15 ಅವರು ಊಟಕ್ಕಾಗಿ ಹುಡುಕಾಡಿದರೂ ಸಿಕ್ಕುವುದಿಲ್ಲ;
    ಮಲಗಲು ಸ್ಥಳವೂ ಸಿಕ್ಕುವುದಿಲ್ಲ.
16 ನಾನಾದರೋ ಮುಂಜಾನೆ ನಿನಗೆ ಸ್ತುತಿಗೀತೆಗಳನ್ನು ಹಾಡುವೆ;
    ನಿನ್ನ ಪ್ರೀತಿಯ ಕುರಿತು ಕೊಂಡಾಡುವೆನು;
ಯಾಕೆಂದರೆ ಇಕ್ಕಟ್ಟಿನಲ್ಲಿ ನೀನೇ ನನಗೆ ಆಶ್ರಯದುರ್ಗವಾಗಿರುವೆ.
17 ನಾನು ನಿನಗೆ ಸ್ತುತಿಗೀತೆಗಳನ್ನು ಹಾಡುವೆ.
    ಯಾಕೆಂದರೆ ನೀನೇ ನನಗೆ ಆಶ್ರಯದುರ್ಗವಾಗಿರುವೆ.
    ನನ್ನನ್ನು ಪ್ರೀತಿಸುವ ದೇವರು ನೀನೇ!

2 ರಾಜರುಗಳು 9:14-26

ಯೇಹು ಇಜ್ರೇಲಿಗೆ ಹೋಗುವನು

14 ಯೆಹೋಷಾಫಾಟನ ಮಗನೂ ನಿಂಷಿಯ ಮೊಮ್ಮಗನೂ ಆದ ಯೇಹುವು ಯೋರಾಮನ ವಿರುದ್ಧ ಒಳಸಂಚುಮಾಡಿದನು.

ಆ ಸಮಯದಲ್ಲಿ ರಾಮೋತ್‌ಗಿಲ್ಯಾದನ್ನು ಅರಾಮ್ಯರ ರಾಜನಾದ ಹಜಾಯೇಲನಿಂದ ರಕ್ಷಿಸಲು, ಯೋರಾಮನೂ ಇಸ್ರೇಲರೂ ಪ್ರಯತ್ನಿಸಿದ್ದರು. 15 ಆದರೆ ರಾಜನಾದ ಯೋರಾಮನಿಗೆ ಅರಾಮ್ಯರು ಗಾಯಗೊಳಿಸಿದ್ದರಿಂದ ಅವನು ವಾಸಿಮಾಡಿಕೊಳ್ಳಲು ಇಜ್ರೇಲಿಗೆ ಹಿಂದಿರುಗಿ ಬಂದಿದ್ದನು. (ಅರಾಮ್ಯರ ರಾಜನಾದ ಹಜಾಯೇಲನ ವಿರುದ್ಧ ಯೋರಾಮನು ಹೋರಾಟ ಮಾಡಿದಾಗ ಅರಾಮ್ಯರು ಅವನನ್ನು ಗಾಯಗೊಳಿಸಿದ್ದರು.)

ಯೇಹು ಅಧಿಕಾರಿಗಳಿಗೆ, “ನಾನು ನೂತನ ರಾಜನೆಂದು ನೀವು ಒಪ್ಪಿಕೊಂಡರೆ, ಈ ಸುದ್ದಿಯನ್ನು ಇಜ್ರೇಲಿನಲ್ಲಿ ಹೇಳಲು ಯಾರೂ ನಗರದಿಂದ ತಪ್ಪಿಸಿಕೊಂಡು ಹೋಗಲು ಅವಕಾಶ ಕೊಡದಿರಿ” ಎಂದು ಹೇಳಿದನು.

16 ಯೋರಾಮನು ಇಜ್ರೇಲಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದನು. ಯೇಹು ರಥದಲ್ಲಿ ಇಜ್ರೇಲಿಗೆ ಹೋದನು. ಯೆಹೂದದ ಅರಸನಾದ ಅಹಜ್ಯನೂ ಯೋರಾಮನನ್ನು ನೋಡಲು ಇಜ್ರೇಲಿಗೆ ಬಂದಿದ್ದನು.

17 ಇಜ್ರೇಲಿನ ಬುರುಜಿನಲ್ಲಿ ಒಬ್ಬ ಕಾವಲುಗಾರನು ನಿಂತಿದ್ದನು. ಅವನು ಯೇಹುವಿನ ದೊಡ್ಡಗುಂಪು ಬರುತ್ತಿರುವುದನ್ನು ನೋಡಿದನು. ಅವನು, “ನಾನು ಜನರ ದೊಡ್ಡ ಗುಂಪನ್ನು ನೋಡುತ್ತಿರುವೆನು” ಎಂದು ಹೇಳಿದನು.

ಯೋರಾಮನು, “ಅವರನ್ನು ಸಂಧಿಸಲು ಯಾರನ್ನಾದರೂ ಕುದುರೆಯ ಮೇಲೆ ಕಳುಹಿಸಿ, ‘ಶುಭವಾರ್ತೆಯುಂಟೋ?’ ಎಂದು ಅವನು ಅವರನ್ನು ಕೇಳಲಿ” ಎಂದು ಹೇಳಿದನು.

18 ಯೇಹುವನ್ನು ಸಂಧಿಸಲು ಒಬ್ಬನು ಕುದುರೆಯ ಮೇಲೆ ಹೋಗಿ, “ರಾಜನಾದ ಯೋರಾಮನು ‘ಶುಭವಾರ್ತೆಯುಂಟೋ?’ ಎಂದು ಕೇಳುತ್ತಾನೆ” ಅಂದನು.

ಯೇಹುವು, “ನಮ್ಮ ಶುಭವಾರ್ತೆಯಿಂದ ನೀನು ಮಾಡುವುದೇನಿದೆ! ಬಾ, ನನ್ನನ್ನು ಹಿಂಬಾಲಿಸು” ಎಂದು ಹೇಳಿದನು.

ಕಾವಲುಗಾರನು ಯೋರಾಮನಿಗೆ, “ಆ ಗುಂಪಿನ ಬಳಿಗೆ ಹೋದ ಸಂದೇಶಕನು, ಈವರೆವಿಗೂ ಹಿಂದಿರುಗಿ ಬರಲೇ ಇಲ್ಲ” ಎಂದು ಹೇಳಿದನು.

19 ಆಗ ಯೋರಾಮನು ಎರಡನೆಯವನನ್ನು ಕುದುರೆಯ ಮೇಲೆ ಕಳುಹಿಸಿದನು. ಅವನು ಯೇಹುವಿನ ಗುಂಪಿನ ಬಳಿಗೆ ಬಂದು, “ರಾಜನಾದ ಯೋರಾಮನು, ‘ಶುಭವಾರ್ತೆಯುಂಟೋ?’ ಎಂದು ಕೇಳುತ್ತಿರುವನು” ಎಂದು ಹೇಳಿದನು.

ಯೇಹುವು, “ನಮ್ಮ ಶುಭವಾರ್ತೆಯಿಂದ ನೀನು ಮಾಡುವುದೇನಿದೆ! ಬಾ, ನನ್ನನ್ನು ಹಿಂಬಾಲಿಸು” ಎಂದು ಹೇಳಿದನು.

20 ಕಾವಲುಗಾರನು ಯೋರಾಮನಿಗೆ, “ಆ ಗುಂಪಿನ ಬಳಿಗೆ ಹೋದ ಎರಡನೆಯವನೂ ಈವರೆವಿಗೂ ಹಿಂದುರುಗಿ ಬರಲೇ ಇಲ್ಲ. ರಥವನ್ನು ಓಡಿಸುತ್ತಿರುವವನು ಹುಚ್ಚನಂತೆ ರಥವನ್ನು ಓಡಿಸುತ್ತಿರುವುದನ್ನು ನೋಡಿದರೆ ಅವನು ನಿಂಷಿಯ ಮೊಮ್ಮಗನಾದ ಯೇಹುವಿರಬೇಕು!” ಎಂದು ಹೇಳಿದನು.

21 ಯೋರಾಮನು, “ನನ್ನ ರಥವನ್ನು ಸಿದ್ಧಗೊಳಿಸು!” ಎಂದು ಹೇಳಿದನು.

ಯೋರಾಮನ ಸೇವಕನು ರಥವನ್ನು ಸಿದ್ಧಗೊಳಿಸಿದನು. ಇಸ್ರೇಲಿನ ರಾಜನಾದ ಯೋರಾಮನು ಮತ್ತು ಯೆಹೂದದ ರಾಜನಾದ ಅಹಜ್ಯನು ಯೇಹುವನ್ನು ಭೇಟಿಮಾಡಲು ತಮ್ಮ ರಥಗಳಲ್ಲಿ ಹೋದರು. ಅವರು ಇಜ್ರೇಲಿನವನಾದ ನಾಬೋತನ ಹೊಲದಲ್ಲಿ ಯೇಹುವನ್ನು ಸಂಧಿಸಿದರು.

22 ಯೋರಾಮನು ಯೇಹುವನ್ನು, “ಶುಭವಾರ್ತೆಯುಂಟೋ?” ಎಂದು ಕೇಳಿದನು.

ಯೇಹುವು, “ನಿನ್ನ ತಾಯಿಯಾದ ಈಜೆಬೆಲಳು ಅನೇಕ ಅನೈತಿಕ ಮತ್ತು ಮಾಂತ್ರಿಕ ಕಾರ್ಯಗಳನ್ನು ಮಾಡುತ್ತಿರುವ ತನಕ ಶುಭವಿರುವುದಿಲ್ಲ” ಎಂದು ಉತ್ತರಿಸಿದನು.

23 ಯೋರಾಮನು ಓಡಿಹೋಗಲು ತನ್ನ ಕುದುರೆಗಳನ್ನು ತಿರುಗಿಸಿಕೊಂಡನು. ಯೋರಾಮನು ಅಹಜ್ಯನಿಗೆ, “ಅಹಜ್ಯನೇ, ಇದು ಒಂದು ತಂತ್ರ!” ಎಂದು ಹೇಳಿದನು.

24 ಆದರೆ ಯೇಹು ತನ್ನ ಬಿಲ್ಲನ್ನು ಸೆಳೆದು, ಶಕ್ತಿಯನ್ನೆಲ್ಲ ಒಗ್ಗೂಡಿಸಿ ಯೋರಾಮನ ಬೆನ್ನಿಗೆ ಬಾಣದಿಂದ ಹೊಡೆದನು. ಬಾಣವು ಯೋರಾಮನ ಹೃದಯವನ್ನು ಛೇದಿಸಿತು. ಯೋರಾಮನು ತನ್ನ ರಥದಲ್ಲಿಯೇ ಸತ್ತುಬಿದ್ದನು.

25 ಯೇಹು ತನ್ನ ರಥದ ಸಾರಥಿಯಾದ ಬಿದ್ಕರನಿಗೆ, “ಯೋರಾಮನ ದೇಹವನ್ನು ಎತ್ತಿ ಇಜ್ರೇಲಿಯನಾದ ನಾಬೋತನ ಹೊಲದಲ್ಲಿ ಎಸೆದುಬಿಡು. ನಾನು ಮತ್ತು ನೀನು ಯೋರಾಮನ ತಂದೆಯಾದ ಅಹಾಬನ ಸಂಗಡ ಹೋಗುತ್ತಿರುವಾಗ 26 ಯೆಹೋವನು, ‘ನೀನು ನಿನ್ನೆ ನಾಬೋತನ ಮತ್ತು ಅವನ ಮಕ್ಕಳ ರಕ್ತವನ್ನು ಯಾವ ಹೊಲದಲ್ಲಿ ಸುರಿಸಿದೆಯೋ ಅದೇ ಹೊಲದಲ್ಲಿ ನಿನಗೆ ಮುಯ್ಯಿ ತೀರಿಸುವೆನು’ ಎಂದು ಪ್ರವಾದಿಯಿಂದ ಹೇಳಿಸಿದ್ದು ನಿನಗೆ ನೆನಪಿರುವುದಲ್ಲವೇ? ಯೆಹೋವನ ಮಾತು ನೆರವೇರುವಂತೆ ಯೋರಾಮನ ದೇಹವನ್ನು ತೆಗೆದು ಅದೇ ಹೊಲದಲ್ಲಿ ಎಸೆದುಬಿಡು!” ಎಂದು ಹೇಳಿದನು.

ಎಫೆಸದವರಿಗೆ 2:11-22

ಕ್ರಿಸ್ತನ ಮೂಲಕ ಸಮಾನತ್ವ

11 ನೀವು ಹುಟ್ಟಿದಂದಿನಿಂದ ಅನ್ಯಜನರಾಗಿದ್ದೀರಿ. ನಿಮ್ಮನ್ನು “ಸುನ್ನತಿಯಿಲ್ಲದವರು” ಎಂದು ಯೆಹೂದ್ಯರು ಕರೆಯುತ್ತಾರೆ. ನಿಮ್ಮನ್ನು “ಸುನ್ನತಿಯಿಲ್ಲದವರು” ಎಂದು ಕರೆಯುವ ಯೆಹೂದ್ಯರು ತಮ್ಮ ಬಗ್ಗೆ “ಸುನ್ನತಿಯವರು” ಎಂದು ಹೇಳಿಕೊಳ್ಳುತ್ತಾರೆ. (ಅವರ ಸುನ್ನತಿಯು ಶರೀರದಲ್ಲಿ ಕೈಯಿಂದ ಮಾಡಲ್ಪಡುತ್ತದೆ.) 12 ಪೂರ್ವಕಾಲದಲ್ಲಿ ನೀವು ಕ್ರಿಸ್ತನಿಲ್ಲದವರಾಗಿದ್ದಿರಿ ಎಂಬುದನ್ನು ಜ್ಞಾಪಿಸಿಕೊಳ್ಳಿರಿ. ನೀವು ಇಸ್ರೇಲಿನ ಪ್ರಜೆಗಳಾಗಿರಲಿಲ್ಲ. ದೇವರು ತನ್ನ ಜನರೊಂದಿಗೆ ಮಾಡಿಕೊಂಡಿದ್ದ ವಾಗ್ದಾನಗಳಿಗೆ ಸಂಬಂಧಪಟ್ಟ ಒಡಂಬಡಿಕೆಗಳನ್ನು ನೀವು ಹೊಂದಿರಲಿಲ್ಲ. ನಿಮಗೆ ನಿರೀಕ್ಷೆಯಿರಲಿಲ್ಲ ಮತ್ತು ನೀವು ದೇವರನ್ನು ತಿಳಿದಿರಲಿಲ್ಲ. 13 ಹೌದು, ಒಂದು ಕಾಲದಲ್ಲಿ ನೀವು ದೇವರಿಗೆ ಬಹು ದೂರವಾಗಿದ್ದಿರಿ. ಆದರೆ ಈಗ ನೀವು ಕ್ರಿಸ್ತ ಯೇಸುವಿನ ರಕ್ತದ ಮೂಲಕ ದೇವರಿಗೆ ಸಮೀಪಸ್ಥರಾದಿರಿ.

14 ಕ್ರಿಸ್ತನಿಂದ ಈಗ ನಮಗೆ ಸಮಾಧಾನ ದೊರೆತಿದೆ. ಕ್ರಿಸ್ತನು ಯೆಹೂದ್ಯರನ್ನೂ ಯೆಹೂದ್ಯರಲ್ಲದವರನ್ನೂ ಒಂದೇ ಜನಾಂಗವನ್ನಾಗಿ ಮಾಡಿದ್ದಾನೆ. ಯೆಹೂದ್ಯರೂ ಯೆಹೂದ್ಯರಲ್ಲದವರೂ ತಮ್ಮ ಮಧ್ಯೆ ಒಂದು ಅಡ್ಡಗೋಡೆಯಿದೆಯೋ ಎಂಬಂತೆ ಬೇರ್ಪಟ್ಟಿದ್ದರು. ಅವರು ಒಬ್ಬರನ್ನೊಬ್ಬರು ದ್ವೇಷಿಸಿದರು. ಆದರೆ ಕ್ರಿಸ್ತನು ತನ್ನ ದೇಹವನ್ನೇ ಅರ್ಪಿಸುವುದರ ಮೂಲಕ ದ್ವೇಷವೆಂಬ ಆ ಗೋಡೆಯನ್ನು ಕೆಡವಿದನು. 15 ಯೆಹೂದ್ಯರ ಧರ್ಮಶಾಸ್ತ್ರವು ಅನೇಕ ಆಜ್ಞೆಗಳನ್ನೂ ನಿಯಮಗಳನ್ನೂ ಹೊಂದಿತ್ತು. ಆದರೆ ಕ್ರಿಸ್ತನು ಆ ಧರ್ಮಶಾಸ್ತ್ರವನ್ನು ಅಂತಿಮಗೊಳಿಸಿದನು. ಯೆಹೂದ್ಯರನ್ನು ಮತ್ತು ಯೆಹೂದ್ಯರಲ್ಲದವರನ್ನು ತನ್ನಲ್ಲಿ ಒಂದು ಜನಾಂಗವನ್ನಾಗಿ ಮಾಡಿ ಶಾಂತಿಯನ್ನು ಸ್ಥಾಪಿಸಬೇಕೆಂಬುದೇ ಕ್ರಿಸ್ತನ ಉದ್ದೇಶವಾಗಿತ್ತು. 16 ಈ ಎರಡು ಜನಾಂಗಗಳ ನಡುವೆ ಇದ್ದ ದ್ವೇಷವನ್ನು ಕ್ರಿಸ್ತನು ಶಿಲುಬೆಯ ಮೂಲಕ ಕೊನೆಗೊಳಿಸಿದನು. ಈ ಜನಾಂಗಗಳು ಒಂದೇ ದೇಹವಾದ ಬಳಿಕ ಅವರನ್ನು ದೇವರ ಬಳಿಗೆ ನಡೆಸಬೇಕೆಂಬುದು ಕ್ರಿಸ್ತನ ಬಯಕೆಯಾಗಿತ್ತು. ಶಿಲುಬೆಯ ಮೇಲೆ ಪ್ರಾಣಕೊಡುವುದರ ಮೂಲಕ ಕ್ರಿಸ್ತನು ತನ್ನ ಈ ಬಯಕೆಯನ್ನು ಪೂರೈಸಿದನು. 17 ದೇವರಿಗೆ ದೂರವಾಗಿದ್ದ ನಿಮ್ಮ ಬಳಿಗೂ ಸಮೀಪಸ್ಥರಾಗಿದ್ದವರ ಬಳಿಗೂ ಕ್ರಿಸ್ತನು ಬಂದು ಸಮಾಧಾನದ ಕುರಿತು ಉಪದೇಶಿಸಿದನು. 18 ಹೌದು, ಕ್ರಿಸ್ತನ ಮೂಲಕ ನಾವೆಲ್ಲರೂ ಒಬ್ಬ ಆತ್ಮನಿಂದ ನಮ್ಮ ತಂದೆಯಾದ ದೇವರ ಬಳಿಗೆ ಬರಲು ಶಕ್ತರಾಗಿದ್ದೇವೆ.

19 ಆದ್ದರಿಂದ ಯೆಹೂದ್ಯರಲ್ಲದವರಾದ ನೀವು ಈಗ ವಿದೇಶಿಯರಲ್ಲ ಮತ್ತು ಅನ್ಯಜನರಲ್ಲ. ಈಗ ನೀವು ದೇವರ ಪರಿಶುದ್ಧ ಜನರೊಂದಿಗೆ ಪ್ರಜೆಗಳಾಗಿದ್ದೀರಿ. ನೀವು ದೇವರ ಕುಟುಂಬಕ್ಕೆ ಸೇರಿದವರಾಗಿದ್ದೀರಿ. 20 ವಿಶ್ವಾಸಿಗಳಾದ ನೀವು ದೇವರ ಸ್ವಂತ ಕಟ್ಟಡವಾಗಿದ್ದೀರಿ. ಅಪೊಸ್ತಲರೂ ಪ್ರವಾದಿಗಳೂ ಎಂಬ ಅಸ್ತಿವಾರದ ಮೇಲೆ ಆ ಕಟ್ಟಡವು ಕಟ್ಟಲ್ಪಟ್ಟಿದೆ. ಕ್ರಿಸ್ತನೇ ಆ ಕಟ್ಟಡಕ್ಕೆ ಮೂಲೆಗಲ್ಲಾಗಿದ್ದಾನೆ. 21 ಇಡೀ ಕಟ್ಟಡವು ಕ್ರಿಸ್ತನಲ್ಲಿ ಒಂದಾಗಿ ಸೇರಿಕೊಂಡಿದೆ. ಕ್ರಿಸ್ತನೇ ಅದನ್ನು ಬೆಳೆಯಿಸಿ ಪ್ರಭುವಿನಲ್ಲಿ ಪರಿಶುದ್ಧವಾದ ದೇವಾಲಯವನ್ನಾಗಿ ಮಾಡುತ್ತಾನೆ. 22 ನೀವು ಕ್ರಿಸ್ತನಲ್ಲಿ ಇತರ ಜನರೊಂದಿಗೆ (ಯೆಹೂದ್ಯರೊಂದಿಗೆ) ಕಟ್ಟಲ್ಪಡುತ್ತಿದ್ದೀರಿ. ದೇವರು ತನ್ನ ಆತ್ಮನ ಮೂಲಕ ವಾಸಿಸತಕ್ಕ ನಿವಾಸಸ್ಥಾನವಾಗಿ ನಿರ್ಮಿತರಾಗುತ್ತಿದ್ದೀರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International