Revised Common Lectionary (Semicontinuous)
ಸೌಲನು ದಾವೀದನನ್ನು ಕೊಲ್ಲಲು ಮುತ್ತಿಗೆ ಹಾಕಿದಾಗ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.
59 ನನ್ನ ದೇವರೇ, ವೈರಿಗಳಿಂದ ನನ್ನನ್ನು ಬಿಡಿಸು.
ನನಗೆ ವಿರೋಧವಾಗಿ ಎದ್ದಿರುವ ಜನರಿಂದ ನನ್ನನ್ನು ಸಂರಕ್ಷಿಸು.
2 ಆ ದುಷ್ಟರಿಂದ ನನ್ನನ್ನು ವಿಮೋಚಿಸು.
ಆ ಕೊಲೆಪಾತಕರಿಂದ ನನ್ನನ್ನು ರಕ್ಷಿಸು.
3 ಇಗೋ, ನನ್ನನ್ನು ಕೊಲ್ಲಲು ಬಲಿಷ್ಠರು ಹೊಂಚುಹಾಕಿದ್ದ್ದಾರೆ.
ಆದರೆ ನಾನು ಪಾಪವನ್ನಾಗಲಿ ಅಪರಾಧವನ್ನಾಗಲಿ ಮಾಡಿಲ್ಲ.
4 ಅವರು ನನ್ನ ಮೇಲೆ ಆಕ್ರಮಣಮಾಡಲು ಬರುತ್ತಿದ್ದಾರೆ, ಆದರೆ ನಾನೇನು ತಪ್ಪು ಮಾಡಿಲ್ಲ.
ಯೆಹೋವನೇ, ಸ್ವತಃ ನೀನೇ ಬಂದು ನೋಡು!
5 ಸೇನಾಧೀಶ್ವರನಾದ ಯೆಹೋವನೇ, ಇಸ್ರೇಲರ ದೇವರೇ, ಎದ್ದೇಳು!
ಅವರನ್ನು ದಂಡಿಸು!
ಆ ದುಷ್ಟ ದ್ರೋಹಿಗಳಿಗೆ ಕರುಣೆಯನ್ನೇ ತೋರಬೇಡ.
6 ಗುರುಗುಟ್ಟುತ್ತಾ ಬೀದಿಗಳಲ್ಲಿ ಅಡ್ಡಾಡುವ ನಾಯಿಗಳಂತೆ
ಅವರು ಸಾಯಂಕಾಲದಲ್ಲಿ ಪಟ್ಟಣದಲ್ಲೆಲ್ಲಾ ಸುತ್ತಾಡುತ್ತಾರೆ.
7 ತಮ್ಮ ನಾಲಿಗೆಗಳೇ ಆಯುಧಗಳೆಂಬಂತೆ
ಅಪಮಾನಕರವಾದ ನುಡಿಗಳನ್ನು ಬೊಗಳುತ್ತಾರೆ.
ಯಾರು ಕೇಳಿಸಿಕೊಂಡರೂ ಅವರಿಗೆ ಚಿಂತೆಯಿಲ್ಲ.
8 ಯೆಹೋವನೇ, ಅವರನ್ನು ನೋಡಿ ನಗು.
ಅವರೆಲ್ಲರನ್ನು ಅಪಹಾಸ್ಯ ಮಾಡು.
9 ನನ್ನ ಬಲವೇ, ನಿನ್ನನ್ನೇ ನಿರೀಕ್ಷಿಸಿಕೊಂಡಿದ್ದೇನೆ.
ದೇವರೇ, ಬೆಟ್ಟಗಳ ಶಿಖರದಲ್ಲಿರುವ ಆಶ್ರಯದುರ್ಗ ನೀನೇ.
10 ದೇವರು ನನ್ನನ್ನು ಪ್ರೀತಿಸುವನು; ನನ್ನ ಜಯಕ್ಕೆ ಆತನೇ ಸಹಾಯ ಮಾಡುವನು.
ನನ್ನ ಶತ್ರುಗಳನ್ನು ಸೋಲಿಸಲು ಆತನೇ ನನಗೆ ನೆರವು ನೀಡುವನು.
11 ಯೆಹೋವನೇ, ನಮ್ಮ ಗುರಾಣಿಯೇ, ಅವರನ್ನು ಫಕ್ಕನೆ ಕೊಲ್ಲಬೇಡ, ಇಲ್ಲವಾದರೆ, ನನ್ನ ಜನರು ಮರೆತುಬಿಡಬಹುದು.
ನನ್ನ ಒಡಯನೇ, ಸಂರಕ್ಷಕನೇ, ಅವರನ್ನು ಚದರಿಸಿಬಿಡು; ನಿನ್ನ ಬಲದಿಂದ ಸೋಲಿಸಿಬಿಡು.
12 ಆ ದುಷ್ಟರು ಶಪಿಸುತ್ತಾರೆ, ಸುಳ್ಳಾಡುತ್ತಾರೆ.
ಅವರ ಮಾತುಗಳ ನಿಮಿತ್ತವೇ ಅವರನ್ನು ದಂಡಿಸು.
ಅವರು ತಮ್ಮ ಗರ್ವದಿಂದಲೇ ಸಿಕ್ಕಿಬೀಳಲಿ.
13 ನೀನು ಅವರನ್ನು ಕೋಪದಿಂದ ನಾಶಮಾಡು.
ಅವರನ್ನು ಸಂಪೂರ್ಣವಾಗಿ ನಾಶಮಾಡು.
ಯಾಕೋಬನ ವಂಶದವರನ್ನು ಆಳುತ್ತಿರುವವನು ನೀನೇ ಎಂದು ಆಗ ಲೋಕದವರಿಗೆಲ್ಲಾ ಗೊತ್ತಾಗುವುದು.
14 ಗುರುಗುಟ್ಟುತ್ತಾ ಬೀದಿಗಳಲ್ಲಿ ಅಡ್ಡಾಡುವ ನಾಯಿಗಳಂತೆ
ಅವರು ಸಾಯಂಕಾಲದಲ್ಲಿ ಪಟ್ಟಣದಲ್ಲೆಲ್ಲಾ ಸುತ್ತಾಡುತ್ತಾರೆ.
15 ಅವರು ಊಟಕ್ಕಾಗಿ ಹುಡುಕಾಡಿದರೂ ಸಿಕ್ಕುವುದಿಲ್ಲ;
ಮಲಗಲು ಸ್ಥಳವೂ ಸಿಕ್ಕುವುದಿಲ್ಲ.
16 ನಾನಾದರೋ ಮುಂಜಾನೆ ನಿನಗೆ ಸ್ತುತಿಗೀತೆಗಳನ್ನು ಹಾಡುವೆ;
ನಿನ್ನ ಪ್ರೀತಿಯ ಕುರಿತು ಕೊಂಡಾಡುವೆನು;
ಯಾಕೆಂದರೆ ಇಕ್ಕಟ್ಟಿನಲ್ಲಿ ನೀನೇ ನನಗೆ ಆಶ್ರಯದುರ್ಗವಾಗಿರುವೆ.
17 ನಾನು ನಿನಗೆ ಸ್ತುತಿಗೀತೆಗಳನ್ನು ಹಾಡುವೆ.
ಯಾಕೆಂದರೆ ನೀನೇ ನನಗೆ ಆಶ್ರಯದುರ್ಗವಾಗಿರುವೆ.
ನನ್ನನ್ನು ಪ್ರೀತಿಸುವ ದೇವರು ನೀನೇ!
ಯೇಹುವನ್ನು ಅಭಿಷೇಕಿಸುವಂತೆ ಒಬ್ಬ ಯುವಪ್ರವಾದಿಗೆ ಎಲೀಷನು ತಿಳಿಸಿದನು
9 ಪ್ರವಾದಿಯಾದ ಎಲೀಷನು ಪ್ರವಾದಿಗಳ ಗುಂಪಿನಿಂದ ಒಬ್ಬನನ್ನು ಕರೆದು ಅವನಿಗೆ, “ಎಣ್ಣೆಯಿರುವ ಈ ಸಣ್ಣ ಸೀಸೆಯನ್ನು ನಿನ್ನ ಕೈಗಳಲ್ಲಿ ತೆಗೆದುಕೊಂಡು ರಾಮೋತ್‌ಗಿಲ್ಯಾದಿಗೆ ಹೋಗು. 2 ನೀನು ಅಲ್ಲಿಗೆ ಹೋದಾಗ ಯೆಹೋಷಾಫಾಟನ ಮಗನಾದ ಯೇಹುವನ್ನು ಕಂಡುಹಿಡಿ. ಯೆಹೋಷಾಫಾಟನು ನಿಂಷಿಯ ಮಗ. ಅಲ್ಲಿಗೆ ಹೋಗಿ ಅವನನ್ನು ಅವನ ಸೋದರರ ಮಧ್ಯದಿಂದ ಮೇಲಕ್ಕೆಬ್ಬಿಸಿ ಒಂದು ಒಳಕೋಣೆಗೆ ಕರೆದುಕೊಂಡು ಹೋಗು. 3 ಯೇಹುವಿನ ತಲೆಯ ಮೇಲೆ ಈ ಸಣ್ಣ ಸೀಸೆಯಲ್ಲಿರುವ ಎಣ್ಣೆಯನ್ನು ಸುರಿದುಬಿಡು. ನಂತರ ಅವನಿಗೆ, ‘ಯೆಹೋವನು ಹೀಗೆನ್ನುತ್ತಾನೆ: ನಾನು ನಿನ್ನನ್ನು ಇಸ್ರೇಲಿನ ನೂತನ ರಾಜನನ್ನಾಗಿ ಅಭಿಷೇಕಿಸಿದ್ದೇನೆ!’ ಎಂದು ಹೇಳು. ಆ ಬಳಿಕ ಬಾಗಿಲನ್ನು ತೆಗೆದು ಓಡಿಬಿಡು. ಅಲ್ಲಿ ಇರಬೇಡ!” ಎಂದು ಹೇಳಿದನು.
4 ತರುಣ ಪ್ರವಾದಿಯು ರಾಮೋತ್‌ಗಿಲ್ಯಾದಿಗೆ ಹೋದನು. 5 ಆ ತರುಣನು ಅಲ್ಲಿಗೆ ಬಂದಾಗ ಸೇನಾಧಿಪತಿಗಳು ಕುಳಿತಿರುವುದನ್ನು ನೋಡಿ, “ಸೇನಾಧಿಪತಿಯೇ, ನಿನಗೆ ಒಂದು ಸಂದೇಶವಿದೆ” ಎಂದು ಹೇಳಿದನು.
ಯೇಹುವು, “ನಾವೆಲ್ಲರೂ ಇಲ್ಲಿದ್ದೇವೆ. ನಮ್ಮಲ್ಲಿ ಸಂದೇಶವಿರುವುದು ಯಾರಿಗೆ?” ಎಂದು ಕೇಳಿದನು.
ಆ ತರುಣನು, “ಸಂದೇಶವು ಸೇನಾಧಿಪತಿಯಾದ ನಿನಗೆ” ಎಂದು ಹೇಳಿದನು.
6 ಯೇಹು ಮೇಲೆದ್ದು ಮನೆಯೊಳಕ್ಕೆ ಹೋದನು. ಆಗ ಆ ತರುಣ ಪ್ರವಾದಿಯು ಯೇಹುವಿನ ತಲೆಯ ಮೇಲೆ ಎಣ್ಣೆಯನ್ನು ಸುರಿದು ಯೇಹುವಿಗೆ, “ಇಸ್ರೇಲಿನ ದೇವರಾದ ಯೆಹೋವನು ಹೀಗೆನ್ನುವನು: ‘ಯೆಹೋವನ ಜನರಾದ ಇಸ್ರೇಲರಿಗೆ ನೂತನ ರಾಜನನ್ನಾಗಿ ನಾನು ನಿನ್ನನ್ನು ಅಭಿಷೇಕಿಸುತ್ತಿದ್ದೇನೆ. 7 ನೀನು ನಿನ್ನ ರಾಜನಾದ ಅಹಾಬನ ಕುಟುಂಬವನ್ನು ನಾಶಗೊಳಿಸಲೇಬೇಕು. ನನ್ನ ಸೇವಕರಾದ ಪ್ರವಾದಿಗಳ ಸಾವಿಗೆ ಮತ್ತು ಯೆಹೋವನ ಸೇವಕರನ್ನು ಕೊಲ್ಲಿಸಿದುದಕ್ಕೆ ಈಜೆಬೆಲಳನ್ನು ನಾನು ಈ ರೀತಿ ಶಿಕ್ಷಿಸುತ್ತೇನೆ. 8 ಅಹಾಬನ ಕುಟುಂಬವೆಲ್ಲ ಸಾಯುತ್ತದೆ. ಅಹಾಬನ ಕುಟುಂಬದಲ್ಲಿ ಒಬ್ಬ ಗಂಡಸಾದರೂ ಜೀವಿಸಿರಲು ನಾನು ಬಿಡುವುದಿಲ್ಲ. ಆ ಗಂಡಸು ಇಸ್ರೇಲಿನಲ್ಲಿ ಸ್ವತಂತ್ರವಾಗಿರಲಿ ಇಲ್ಲವೆ ಗುಲಾಮನಾಗಿರಲಿ ಅದು ನನಗೆ ಮುಖ್ಯವಲ್ಲ. 9 ನೆಬಾಟನ ಮಗನಾದ ಯಾರೊಬ್ಬಾಮನ ಕುಟುಂಬದಂತೆ ಮತ್ತು ಅಹೀಯನ ಮಗನಾದ ಬಾಷನ ಕುಟುಂಬದಂತೆ ಅಹಾಬನ ಕುಟುಂಬವನ್ನು ನಾಶಮಾಡುತ್ತೇನೆ. 10 ಇಜ್ರೇಲಿನ ಪ್ರದೇಶದಲ್ಲಿ ಈಜೆಬೆಲಳನ್ನು ನಾಯಿಗಳು ಕಿತ್ತುತಿನ್ನುತ್ತವೆ. ಈಜೆಬೆಲಳನ್ನು ಸಮಾಧಿಮಾಡುವುದಿಲ್ಲ’” ಎಂದು ಹೇಳಿದನು.
ಬಳಿಕ ಯುವ ಪ್ರವಾದಿಯು ಬಾಗಿಲನ್ನು ತೆರೆದು ಓಡಿಹೋದನು.
ಯೇಹುವು ರಾಜನೆಂದು ಸೇವಕರು ಘೋಷಿಸುವರು
11 ಯೇಹುವು ತನ್ನ ರಾಜನ ಅಧಿಕಾರಿಗಳ ಬಳಿಗೆ ಹಿಂದಿರುಗಿದನು. ಒಬ್ಬ ಅಧಿಕಾರಿಯು ಯೇಹುವಿಗೆ, “ಶುಭವಾರ್ತೆಯೇ? ಆ ಹುಚ್ಚನು ನಿನ್ನ ಬಳಿಗೆ ಬಂದದ್ದೇಕೆ?” ಎಂದು ಕೇಳಿದರು.
ಯೇಹುವು ಸೇವಕರಿಗೆ, “ನೀವು ಆ ಮನುಷ್ಯನನ್ನು ಬಲ್ಲವರಾಗಿದ್ದೀರಿ; ಅವನ ಹುಚ್ಚಾಟದ ಮಾತುಗಳೂ ನಿಮಗೆ ತಿಳಿದಿವೆ” ಎಂದು ಉತ್ತರಿಸಿದನು.
12 ಆ ಅಧಿಕಾರಿಗಳು, “ಇಲ್ಲ! ನಮಗೆ ನಿಜವನ್ನು ಹೇಳು. ಅವನು ಹೇಳಿದುದೇನು?” ಎಂದು ಕೇಳಿದರು. ಆ ತರುಣ ಪ್ರವಾದಿಯು ತಿಳಿಸಿದ್ದ ಸಂಗತಿಗಳನ್ನು ಯೇಹುವು ಆ ಅಧಿಕಾರಿಗಳಿಗೆ ಹೇಳಿದನು. ಯೇಹುವು ಅವರಿಗೆ, “ಅವನು ಹೇಳಿದ್ದೇನೆಂದರೆ, ಯೆಹೋವನು ಹೀಗೆನ್ನುವನು: ಇಸ್ರೇಲಿನ ನೂತನ ರಾಜನನ್ನಾಗಿ ನಿನ್ನನ್ನು ನಾನು ಅಭಿಷೇಕಿಸಿದ್ದೇನೆ” ಎಂದು ಹೇಳಿದನು.
13 ಆಗ ಪ್ರತಿಯೊಬ್ಬ ಅಧಿಕಾರಿಯೂ ತಮ್ಮತಮ್ಮ ನಿಲುವಂಗಿಗಳನ್ನು ತೆಗೆದು, ಅವುಗಳನ್ನು ಮೆಟ್ಟಿಲುಗಳ ಮೇಲೆ, ಯೇಹುವಿನ ಮುಂದೆ ಇಟ್ಟರು. ಅನಂತರ ಅವರು ತುತ್ತೂರಿಯನ್ನೂದಿ, “ಯೇಹು ರಾಜನು!” ಎಂದು ಘೋಷಿಸಿದರು.
ದೇವರ ಶಕ್ತಿ ಮತ್ತು ಕ್ರಿಸ್ತನ ಜ್ಞಾನ
18 ನಾಶನ ಮಾರ್ಗದಲ್ಲಿರುವ ಜನರಿಗೆ ಶಿಲುಬೆಯ ಉಪದೇಶವು ಮೂರ್ಖತನವಾಗಿದೆ. ಆದರೆ ರಕ್ಷಣೆಯ ಮಾರ್ಗದಲ್ಲಿರುವ ನಮಗಾದರೋ ಅದು ದೇವರ ಶಕ್ತಿಯಾಗಿದೆ. 19 ಪವಿತ್ರ ಗ್ರಂಥದಲ್ಲಿ ಹೀಗೆ ಬರೆಯಲ್ಪಟ್ಟಿದೆ:
“ಜ್ಞಾನಿಗಳ ಜ್ಞಾನವನ್ನು ನಾಶಮಾಡುವೆನು.
ಬುದ್ಧಿವಂತರ ಬುದ್ಧಿಯನ್ನು ಬೆಲೆಬಾಳದಂತೆ ಮಾಡುವೆನು.”(A)
20 ಜ್ಞಾನಿಯು ಎಲ್ಲಿದ್ದಾನೆ? ವಿದ್ಯಾವಂತನು ಎಲ್ಲಿದ್ದಾನೆ? ಈ ಕಾಲದ ತತ್ವಜ್ಞಾನಿಯು ಎಲ್ಲಿದ್ದಾನೆ? ದೇವರು ಲೋಕದ ಜ್ಞಾನವನ್ನು ಮೂರ್ಖತನವನ್ನಾಗಿ ಮಾಡಿದ್ದಾನೆ. 21 ಇದು ದೇವರ ಜ್ಞಾನದ ಸಂಕಲ್ಪವಾಗಿತ್ತು. ಲೋಕವು ತನ್ನ ಸ್ವಂತ ಜ್ಞಾನದ ಮೂಲಕವಾಗಿ ದೇವರನ್ನು ತಿಳಿದುಕೊಂಡಿರಲಿಲ್ಲ. ಆದ್ದರಿಂದ ಮೂರ್ಖತನದಂತೆ ತೋರುವ ಸಂದೇಶದ ಮೂಲಕ ನಂಬುವವರನ್ನು ರಕ್ಷಿಸುವುದು ದೇವರಿಗೆ ಒಳ್ಳೆಯದೆನಿಸಿತು.
22 ಯೆಹೂದ್ಯರು ಸೂಚಕಕಾರ್ಯಗಳನ್ನು ಕೇಳುತ್ತಾರೆ. ಗ್ರೀಕರಿಗೆ ಜ್ಞಾನವು ಬೇಕಾಗಿದೆ. 23 ನಾವಾದರೋ, ಶಿಲುಬೆಗೇರಿಸಲ್ಪಟ್ಟ ಕ್ರಿಸ್ತನ ಕುರಿತಾಗಿ ಬೋಧಿಸುತ್ತೇವೆ. ಇದು ಯೆಹೂದ್ಯರಿಗೆ ದೊಡ್ಡ ಸಮಸ್ಯೆಯಾಗಿದೆ; ಯೆಹೂದ್ಯರಲ್ಲದ ಜನರಿಗೆ ಮೂರ್ಖತನದಂತೆ ತೋರುತ್ತದೆ. 24 ದೇವರಿಂದ ಕರೆಯಲ್ಪಟ್ಟಿರುವ ಜನರು ಯೆಹೂದ್ಯರಾಗಿದ್ದರೂ ಯೆಹೂದ್ಯರಲ್ಲದವರಾಗಿದ್ದರೂ ಅವರಿಗೆ ಕ್ರಿಸ್ತನು ದೇವರ ಶಕ್ತಿಯಾಗಿದ್ದಾನೆ; ಮತ್ತು ದೇವರ ಜ್ಞಾನವಾಗಿದ್ದಾನೆ. 25 ದೇವರ ಮೂಢತನವು ಸಹ ಮನುಷ್ಯರ ಜ್ಞಾನಕ್ಕಿಂತಲೂ ಶ್ರೇಷ್ಠವಾಗಿದೆ. ದೇವರ ಬಲಹೀನತೆಯು ಸಹ ಮನುಷ್ಯರ ಬಲಕ್ಕಿಂತಲೂ ಹೆಚ್ಚು ಶಕ್ತಿಯುತವಾಗಿದೆ.
26 ಸಹೋದರ ಸಹೋದರಿಯರೇ, ದೇವರು ನಿಮ್ಮನ್ನು ಕರೆದಾಗ ನೀವು ಹೇಗಿದ್ದಿರಿ ಎಂದು ಜ್ಞಾಪಿಸಿಕೊಳ್ಳಿರಿ. ಲೋಕದ ಎಣಿಕೆಯಲ್ಲಿ ನಿಮ್ಮಲ್ಲಿ ಅನೇಕರು ಜ್ಞಾನಿಗಳಾಗಿರಲಿಲ್ಲ; ಅಧಿಕಾರಿಗಳಾಗಿರಲಿಲ್ಲ; ಪ್ರಾಮುಖ್ಯವಾದ ಕುಟುಂಬಗಳಿಗೆ ಸೇರಿದವರಾಗಿರಲಿಲ್ಲ. 27 ಆದರೆ ದೇವರು ಈ ಲೋಕದ ಜ್ಞಾನಿಗಳನ್ನು ನಾಚಿಕೆಪಡಿಸುವುದಕ್ಕಾಗಿ ಮೂಢರನ್ನು ಆರಿಸಿಕೊಂಡಿದ್ದಾನೆ; ಬಲಿಷ್ಠರನ್ನು ನಾಚಿಕೆಪಡಿಸುವುದಕ್ಕಾಗಿ ಬಲಹೀನರನ್ನು ಆರಿಸಿಕೊಂಡಿದ್ದಾನೆ. 28 ಲೋಕವು ಯಾವುದನ್ನು ಮುಖ್ಯವಲ್ಲವೆಂದು ಯೋಚಿಸುತ್ತದೆಯೋ ಯಾವುದನ್ನು ದ್ವೇಷಿಸುತ್ತದೆಯೋ ಮತ್ತು ನಿಷ್ಪ್ರಯೋಜಕವೆಂದು ಪರಿಗಣಿಸುತ್ತದೆಯೋ ಅದನ್ನು ದೇವರು ಆರಿಸಿಕೊಂಡನು. ಲೋಕವು ಯಾವುದನ್ನು ಮುಖ್ಯವೆಂದು ಯೋಚಿಸುತ್ತದೊ ಅದನ್ನು ನಾಶಪಡಿಸಲು ದೇವರು ಹೀಗೆ ಮಾಡಿದನು. 29 ಹೀಗಿರಲು ದೇವರ ಮುಂದೆ ಹೆಮ್ಮೆಪಡಲು ಯಾರಿಗೂ ಆಸ್ಪದವಿಲ್ಲ. 30 ನಿಮ್ಮನ್ನು ಕ್ರಿಸ್ತ ಯೇಸುವಿನಲ್ಲಿ ಒಂದು ಭಾಗವನ್ನಾಗಿ ಮಾಡಿದಾತನು ದೇವರೇ. ಕ್ರಿಸ್ತನು ನಮಗಾಗಿ ದೇವರಿಂದ ಬಂದ ಜ್ಞಾನವಾಗಿದ್ದಾನೆ. ನಾವು ನೀತಿವಂತರಾಗಿರುವುದಕ್ಕೆ, ಪಾಪದಿಂದ ಬಿಡುಗಡೆಯಾಗಿರುವುದಕ್ಕೆ ಮತ್ತು ಪವಿತ್ರರಾಗಿರುವುದಕ್ಕೆ ಕ್ರಿಸ್ತನೇ ಕಾರಣನಾಗಿದ್ದಾನೆ. 31 ಆದ್ದರಿಂದ ಪವಿತ್ರ ಗ್ರಂಥವು ಹೇಳುವಂತೆ, “ಹೆಮ್ಮೆಪಡುವವನು ಪ್ರಭುವಿನಲ್ಲಿ ಮಾತ್ರ ಹೆಮ್ಮೆಪಡಬೇಕು.”
Kannada Holy Bible: Easy-to-Read Version. All rights reserved. © 1997 Bible League International