Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
1 ರಾಜರುಗಳು 19:1-4

ಸಿನಾಯ್ ಬೆಟ್ಟದಲ್ಲಿ ಎಲೀಯನು

19 ರಾಜನಾದ ಅಹಾಬನು ಈಜೆಬೆಲಳಿಗೆ ಎಲೀಯನು ಮಾಡಿದ ಎಲ್ಲಾ ಕಾರ್ಯಗಳನ್ನು ಹೇಳಿದನು. ಎಲೀಯನು (ಬಾಳನ) ಪ್ರವಾದಿಗಳನ್ನೆಲ್ಲ ಖಡ್ಗದಿಂದ ಹೇಗೆ ಕೊಂದನೆಂಬುದನ್ನೂ ಅಹಾಬನು ಅವಳಿಗೆ ಹೇಳಿದನು. ಆದ್ದರಿಂದ ಈಜೆಬೆಲಳು ಎಲೀಯನ ಬಳಿಗೆ ಒಬ್ಬ ಸಂದೇಶಕನನ್ನು ಕಳುಹಿಸಿದಳು. ಈಜೆಬೆಲಳು, “ನೀನು ಆ ಪ್ರವಾದಿಗಳನ್ನು ಕೊಂದುಹಾಕಿದಂತೆ ನಾಳೆಯ ದಿನ ನಾನು ಇದೇ ಸಮಯಕ್ಕೆ ಮುಂಚೆ, ನಿನ್ನನ್ನು ಕೊಂದುಹಾಕುವೆನೆಂದು ಪ್ರಮಾಣ ಮಾಡುತ್ತೇನೆ. ನಾನು ಈ ಕಾರ್ಯದಲ್ಲಿ ವಿಜಯಿಯಾಗದಿದ್ದಲ್ಲಿ, ದೇವರುಗಳು ನನ್ನನ್ನು ಕೊಲ್ಲಲಿ” ಎಂದು ಹೇಳಿದಳು.

ಎಲೀಯನು ಇದನ್ನು ಕೇಳಿ ಭಯಗೊಂಡನು. ಅವನು ತನ್ನ ಜೀವರಕ್ಷಣೆಗಾಗಿ ಓಡಿಹೋದನು. ಅವನು ತನ್ನ ಸೇವಕನನ್ನೂ ತನ್ನ ಸಂಗಡ ಕರೆದೊಯ್ದನು. ಅವರು ಯೆಹೂದದ ಬೇರ್ಷೆಬಕ್ಕೆ ಹೋದರು. ಎಲೀಯನು ಬೇರ್ಷೆಬದಲ್ಲಿ ತನ್ನ ಸೇವಕನನ್ನು ಬಿಟ್ಟನು. ನಂತರ ಎಲೀಯನು ಮರಳುಗಾಡಿನಲ್ಲಿ ದಿನವೆಲ್ಲ ನಡೆದನು. ಎಲೀಯನು ಒಂದು ಪೊದೆಯ ಕೆಳಗೆ ಕುಳಿತುಕೊಂಡನು. ಅವನು ಸಾಯಲು ಇಚ್ಛಿಸಿ, “ಯೆಹೋವನೇ, ನನಗೆ ಜೀವನ ಸಾಕಾಗಿದೆ! ಸಾಯಲು ನನಗೆ ಅವಕಾಶ ಮಾಡು. ನಾನು ನನ್ನ ಪೂರ್ವಿಕರಿಗಿಂತಲೂ ಉತ್ತಮನೇನಲ್ಲ” ಎಂದು ಹೇಳಿದನು.

1 ರಾಜರುಗಳು 19:5-7

ನಂತರ ಎಲೀಯನು ಪೊದೆಯ ಕೆಳಗೆ ಮಲಗಿ ನಿದ್ದೆಹೋದನು. ದೂತನೊಬ್ಬನು ಎಲೀಯನ ಹತ್ತಿರಕ್ಕೆ ಬಂದು ಅವನನ್ನು ಸ್ಪರ್ಶಿಸಿ, “ಎದ್ದೇಳು! ಊಟಮಾಡು!” ಎಂದನು. ಇದ್ದಲಿನ ಮೇಲೆ ಸುಟ್ಟ ಒಂದು ರೊಟ್ಟಿಯೂ ಒಂದು ತಂಬಿಗೆ ನೀರೂ ಅವನ ತಲೆಯ ಹತ್ತಿರದಲ್ಲಿ ಇದ್ದುದನ್ನು ಎಲೀಯನು ನೋಡಿದನು. ಎಲೀಯನು ರೊಟ್ಟಿಯನ್ನು ತಿಂದು ನೀರನ್ನು ಕುಡಿದನು. ನಂತರ ಅವನು ನಿದ್ದೆ ಮಾಡಿದನು.

ತರುವಾಯ ಯೆಹೋವನ ದೂತನು ಅವನ ಬಳಿಗೆ ಮತ್ತೆ ಬಂದು ಅವನನ್ನು ತಟ್ಟಿ ಅವನಿಗೆ, “ಎದ್ದೇಳು! ಊಟಮಾಡು! ನೀನು ಊಟ ಮಾಡದಿದ್ದರೆ, ಬಹುದೂರ ನೀನು ಪ್ರಯಾಣ ಮಾಡಬೇಕಾಗಿರುವುದರಿಂದ ನಿನ್ನಲ್ಲಿ ಸಾಕಷ್ಟು ಶಕ್ತಿಯಿರುವುದಿಲ್ಲ” ಎಂದು ಹೇಳಿದನು.

1 ರಾಜರುಗಳು 19:8-15

ಎಲೀಯನು ಎದ್ದು ಊಟಮಾಡಿ ನೀರನ್ನು ಕುಡಿದನು. ಎಲೀಯನು ನಲವತ್ತು ಹಗಲು ಮತ್ತು ರಾತ್ರಿ ಪ್ರಯಾಣ ಮಾಡಲು ಸಾಕಾಗುವಷ್ಟು ಶಕ್ತಿಯನ್ನು ಆ ಆಹಾರವು ನೀಡಿತು. ಅವನು ದೇವರ ಬೆಟ್ಟವಾದ ಹೋರೇಬ್‌ಗೆ ಹೋದನು. ಎಲೀಯನು ಅಲ್ಲಿನ ಒಂದು ಗುಹೆಗೆ ಹೋಗಿ ರಾತ್ರಿಯೆಲ್ಲಾ ಅಲ್ಲಿ ಕಳೆದನು.

ಆಗ ಯೆಹೋವನು ಎಲೀಯನೊಂದಿಗೆ ಮಾತನಾಡಿ, “ಎಲೀಯನೇ, ನೀನು ಇಲ್ಲಿರುವುದೇಕೆ?” ಎಂದು ಕೇಳಿದನು.

10 ಎಲೀಯನು, “ಸರ್ವಶಕ್ತನಾದ ಯೆಹೋವ ದೇವರೇ, ನಾನು ಯಾವಾಗಲೂ ನಿನ್ನ ಸೇವೆಯನ್ನು ಮಾಡಿದೆನು. ನಾನು ನನ್ನಿಂದ ಸಾಧ್ಯವಾದಷ್ಟು ಉತ್ತಮವಾಗಿ ನಿನ್ನ ಸೇವೆಯನ್ನು ಮಾಡಿದೆನು. ಆದರೆ ಇಸ್ರೇಲಿನ ಜನರು ನಿನ್ನೊಂದಿಗೆ ತಾವು ಮಾಡಿಕೊಂಡ ಒಡಂಬಡಿಕೆಯನ್ನು ಉಲ್ಲಂಘಿಸಿದರು. ಅವರು ನಿನ್ನ ಯಜ್ಞವೇದಿಕೆಗಳನ್ನು ನಾಶಪಡಿಸಿದರು. ಅವರು ನಿನ್ನ ಪ್ರವಾದಿಗಳನ್ನು ಕೊಂದುಹಾಕಿದರು. ಇನ್ನೂ ಜೀವಂತವಾಗಿರುವ ಪ್ರವಾದಿಯು ನಾನೊಬ್ಬನು ಮಾತ್ರ. ಅವರು ಈಗ ನನ್ನನ್ನೂ ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ!” ಎಂದು ಹೇಳಿದನು.

11 ಆಗ ಯೆಹೋವನು ಎಲೀಯನಿಗೆ, “ಹೋಗು, ನನ್ನ ಎದುರಿಗೆ ಬೆಟ್ಟದ ಮೇಲೆ ನಿಲ್ಲು. ನಾನು ನಿನ್ನ ಬಳಿಯಲ್ಲಿ ಹಾದು ಹೋಗುತ್ತೇನೆ” ಎಂದು ಹೇಳಿದನು. ಆಗ ಬಿರುಗಾಳಿಯು ಬೀಸಿತು. ಆ ಬಿರುಗಾಳಿಯು ಬೆಟ್ಟಗಳನ್ನು ಸೀಳಿಹಾಕಿತು; ಅದು ದೊಡ್ಡ ಬಂಡೆಗಳನ್ನು ಯೆಹೋವನ ಎದುರಿನಲ್ಲಿ ಒಡೆದುಹಾಕಿತು. ಆದರೆ ಆ ಗಾಳಿಯೇ ಯೆಹೋವನಲ್ಲ! ಆ ಬಿರುಗಾಳಿಯ ನಂತರ ಅಲ್ಲಿ ಒಂದು ಭೂಕಂಪವುಂಟಾಯಿತು. ಆದರೆ ಆ ಭೂಕಂಪವು ಯೆಹೋವನಲ್ಲ. 12 ಭೂಕಂಪದ ನಂತರ ಅಲ್ಲಿ ಬೆಂಕಿ ಉಂಟಾಯಿತು. ಆದರೆ ಆ ಬೆಂಕಿಯೂ ಯೆಹೋವನಲ್ಲ. ಆ ಬೆಂಕಿಯ ನಂತರ ಸದ್ದಿಲ್ಲದ ಮೃದುವಾದ ಧ್ವನಿ ಉಂಟಾಯಿತು.

13 ಎಲೀಯನಿಗೆ ಆ ಧ್ವನಿಯು ಕೇಳಿಸಿದಾಗ, ಅವನು ತನ್ನ ಮೇಲಂಗಿಯಿಂದ ಮುಖವನ್ನು ಮುಚ್ಚಿಕೊಂಡನು. ನಂತರ ಅವನು ಗುಹೆಯ ಹತ್ತಿರಕ್ಕೆ ಹೋಗಿ, ಅದರ ದ್ವಾರದಲ್ಲಿ ನಿಂತುಕೊಂಡನು. ಆಗ ಆ ಧ್ವನಿಯು, “ಎಲೀಯನೇ, ನೀನು ಏಕೆ ಇಲ್ಲಿರುವೆ?” ಎಂದು ಅವನನ್ನು ಕೇಳಿತು.

14 ಎಲೀಯನು, “ಸರ್ವಶಕ್ತನಾದ ಯೆಹೋವ ದೇವರೇ, ನಾನು ಯಾವಾಗಲೂ ನಿನ್ನ ಸೇವೆಯನ್ನು ಮಾಡಿದೆನು. ನಾನು ನನ್ನಿಂದ ಸಾಧ್ಯವಾದಷ್ಟು ಉತ್ತಮವಾಗಿ ನಿನ್ನ ಸೇವೆಯನ್ನು ಮಾಡಿದೆನು. ಆದರೆ ಇಸ್ರೇಲಿನ ಜನರು ನಿನ್ನೊಂದಿಗೆ ತಾವು ಮಾಡಿಕೊಂಡ ಒಡಂಬಡಿಕೆಯನ್ನು ಉಲ್ಲಂಘಿಸಿದರು. ಅವರು ನಿನ್ನ ಯಜ್ಞವೇದಿಕೆಗಳನ್ನು ನಾಶಪಡಿಸಿದರು. ಅವರು ನಿನ್ನ ಪ್ರವಾದಿಗಳನ್ನು ಕೊಂದುಹಾಕಿದರು. ಇನ್ನೂ ಜೀವಂತವಾಗಿರುವ ಪ್ರವಾದಿಯು ನಾನೊಬ್ಬನು ಮಾತ್ರ. ಅವರು ಈಗ ನನ್ನನ್ನೂ ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ!” ಎಂದು ಹೇಳಿದನು.

15 ಯೆಹೋವನು, “ನೀನು ಬಂದ ದಾರಿಯಿಂದ ಹಿಂತಿರುಗಿ ದಮಸ್ಕದ ಅರಣ್ಯಕ್ಕೆ ಹೋಗು. ಅಲ್ಲಿಂದ ದಮಸ್ಕಕ್ಕೆ ಹೋಗಿ, ಹಜಾಯೇಲನನ್ನು ಅರಾಮ್ಯರ ರಾಜನನ್ನಾಗಿ ಅಭಿಷೇಕಿಸು.

ಕೀರ್ತನೆಗಳು 42

ಎರಡನೆ ಭಾಗ

(ಕೀರ್ತನೆಗಳು 42–72)

ರಚನೆಗಾರರು: ಕೋರಹೀಯರು.

42 ದೇವರೇ, ಬಾಯಾರಿದ ಜಿಂಕೆಯು ನೀರಿನ ತೊರೆಗಳನ್ನು ಬಯಸುವಂತೆಯೇ
    ನನ್ನ ಆತ್ಮವು ನಿನ್ನನ್ನು ಬಯಸುತ್ತದೆ.
ನನ್ನ ಆತ್ಮವು ಜೀವಸ್ವರೂಪನಾದ ದೇವರಿಗಾಗಿ ಬಾಯಾರಿದೆ.
    ನಾನು ಯಾವಾಗ ಆತನನ್ನು ಸಂಧಿಸುವೆನು?
“ನಿನ್ನ ದೇವರು ಎಲ್ಲಿ?” ಎಂದು ನನ್ನ ವೈರಿಗಳು ಯಾವಾಗಲೂ ಗೇಲಿಮಾಡುವುದರಿಂದ
    ಹಗಲಿರುಳು ಕಣ್ಣೀರೇ ನನಗೆ ಆಹಾರವಾಯಿತು.

ಆಗ ನಾನು, ಹಬ್ಬದ ಉತ್ಸಾಹದಲ್ಲಿ ಜನಸಮೂಹದೊಡನೆ ಹರ್ಷಿಸುತ್ತಾ
    ಸ್ತುತಿಗೀತೆಗಳನ್ನು ಹಾಡುತ್ತಾ ಅವರನ್ನು ದೇವಾಲಯಕ್ಕೆ ಮುನ್ನಡೆಸುತ್ತಿದ್ದದ್ದನ್ನು
    ನೆನಪಿಗೆ ತಂದುಕೊಂಡು ಹೃದಯದಲ್ಲಿ ಕೊರಗುವೆ.

ನನ್ನ ಆತ್ಮವೇ, ನೀನು ವ್ಯಸನದಿಂದಿರುವುದೇಕೆ?
    ಗಲಿಬಿಲಿಗೊಂಡಿರುವುದೇಕೆ?
ದೇವರನ್ನು ನಿರೀಕ್ಷಿಸು;
    ನನ್ನ ರಕ್ಷಕನೂ ದೇವರೂ ಆಗಿರುವ ಆತನನ್ನು ಸ್ತುತಿಸುತ್ತಲೇ ಇರುವೆನು.
ನನ್ನ ದೇವರೇ, ನಾನು ಕುಗ್ಗಿಹೋಗಿದ್ದೇನೆ.
    ಆದ್ದರಿಂದ ಹೆರ್ಮೊನ್ ಪರ್ವತದಲ್ಲಿಯೂ ಜೋರ್ಡನ್ ನದಿಯ ಪ್ರದೇಶದಲ್ಲಿಯೂ
    ಮಿಸ್ಸಾರ್ ಬೆಟ್ಟದಲ್ಲಿಯೂ ನಾನು ನಿನ್ನನ್ನು ಜ್ಞಾಪಿಸಿಕೊಳ್ಳುವೆನು.
ಜಲಪಾತದ ಘೋಷದಂತೆಯೂ
    ಪ್ರವಾಹದ ಘರ್ಜನೆಯಂತೆಯೂ ಇಕ್ಕಟ್ಟುಗಳು ನನಗೆ ಬಂದಿವೆ.
ಸಮುದ್ರದ ಅಲೆಗಳಂತೆ
    ದುಃಖವು ನನ್ನನ್ನು ಆವರಿಸಿಕೊಂಡಿದೆ.

ಹಗಲಲ್ಲಿ ಯೆಹೋವನು ನನಗೆ ನಿಜಪ್ರೀತಿಯನ್ನು ತೋರುವುದರಿಂದ
    ಜೀವಸ್ವರೂಪನಾದ ಆತನಿಗೆ ಪ್ರತಿ ರಾತ್ರಿಯಲ್ಲಿಯೂ ನೂತನ ಕೀರ್ತನೆಯನ್ನು ಹಾಡುವೆ; ಆತನಲ್ಲಿ ಪ್ರಾರ್ಥಿಸುವೆ.
ನನ್ನ ಬಂಡೆಯಾದ ದೇವರಿಗೆ,
    “ನೀನು ನನ್ನನ್ನು ಯಾಕೆ ಮರೆತುಬಿಟ್ಟೆ?
    ನನ್ನ ಶತ್ರುಗಳ ಕ್ರೂರತೆಯಿಂದ ನಾನೇಕೆ ಸಂಕಟಪಡಬೇಕು?” ಎಂದು ಕೇಳುವೆ.
10 ನನ್ನ ವಿರೋಧಿಗಳು ಸತತವಾಗಿ,
    “ನಿನ್ನ ದೇವರು ಎಲ್ಲಿ?” ಎಂದು ಕೇಳುವುದರಿಂದ ನನ್ನ ಮೂಳೆಗಳು ಮುರಿದಂತಾಗಿವೆ.

11 ನನ್ನ ಆತ್ಮವೇ, ನೀನು ವ್ಯಸನದಿಂದಿರುವುದೇಕೆ?
    ಗಲಿಬಿಲಿಗೊಂಡಿರುವುದೇಕೆ?
ದೇವರನ್ನು ನಿರೀಕ್ಷಿಸು;
    ನನ್ನ ರಕ್ಷಕನೂ ದೇವರೂ ಆಗಿರುವ ಆತನನ್ನು ಸ್ತುತಿಸುತ್ತಲೇ ಇರುವೆನು.

ಕೀರ್ತನೆಗಳು 43

43 ದೇವರೇ, ನನ್ನನ್ನು ನಿರಪರಾಧಿಯೆಂದು ತೀರ್ಪು ನೀಡು.
ವ್ಯಾಜ್ಯದಲ್ಲಿ ನನ್ನ ಪರವಾಗಿಯೂ ಅನ್ಯ ಜನಾಂಗಗಳಿಗೆ ವಿರೋಧವಾಗಿಯೂ ವಾದಿಸು.
ಸುಳ್ಳುಗಾರರಿಂದಲೂ ಕೆಡುಕರಿಂದಲೂ ನನ್ನನ್ನು ರಕ್ಷಿಸು.
ದೇವರೇ, ನೀನೇ ನನಗೆ ಆಶ್ರಯಸ್ಥಾನವಾಗಿರುವೆ!
    ನೀನು ನನ್ನನ್ನು ಯಾಕೆ ಕೈಬಿಟ್ಟಿರುವೆ?
ಶತ್ರು ಬಾಧೆಯಿಂದ ನಾನೇಕೆ
    ದುಃಖಿಸುತ್ತಾ ಸಂಕಟಪಡಬೇಕು?
ನಿನ್ನ ಬೆಳಕೂ ಸತ್ಯವೂ ನನ್ನ ಮೇಲೆ ಪ್ರಕಾಶಿಸಲಿ.
    ನಿನ್ನ ಬೆಳಕೂ ಸತ್ಯವೂ ನನಗೆ ಮಾರ್ಗದರ್ಶನ ನೀಡಲಿ.
    ಅವು ನನ್ನನ್ನು ನಿನ್ನ ಪವಿತ್ರ ಪರ್ವತಕ್ಕೂ ನಿನ್ನ ನಿವಾಸಕ್ಕೂ ನಡೆಸುತ್ತವೆ.
ನನ್ನ ದೇವರೇ, ನಿನ್ನ ಯಜ್ಞವೇದಿಕೆಯ ಬಳಿಗೆ ಬರುವೆನು.
    ನನ್ನ ಸಂತೋಷಕ್ಕೆ ನೀನೇ ಆಧಾರನಾಗಿರುವೆ.
ದೇವರೇ, ನನ್ನ ದೇವರೇ,
    ಹಾರ್ಪ್‌ವಾದ್ಯವನ್ನು ಬಾರಿಸುತ್ತಾ ನಿನ್ನನ್ನು ಕೊಂಡಾಡುವೆನು.

ನನ್ನ ಆತ್ಮವೇ, ನೀನು ವ್ಯಸನದಿಂದಿರುವುದೇಕೆ?
    ಗಲಿಬಿಲಿಗೊಂಡಿರುವುದೇಕೆ?
ದೇವರನ್ನು ನಿರೀಕ್ಷಿಸು;
    ನನ್ನ ರಕ್ಷಕನೂ ದೇವರೂ ಆಗಿರುವ ಆತನನ್ನು ಸ್ತುತಿಸುತ್ತಲೇ ಇರುವೆನು.

ಗಲಾತ್ಯದವರಿಗೆ 3:23-29

23 ಈ ನಂಬಿಕೆಯು ಬರುವುದಕ್ಕಿಂತ ಮೊದಲು ನಾವು ಧರ್ಮಶಾಸ್ತ್ರಕ್ಕೆ ಸೆರೆಯಾಳುಗಳಾಗಿದ್ದೆವು. ಬರಲಿದ್ದ ನಂಬಿಕೆಯ ಮಾರ್ಗವನ್ನು ದೇವರು ನಮಗೆ ತೋರಿಸಿಕೊಡುವ ತನಕ ನಮಗೆ ಸ್ವತಂತ್ರವಿರಲಿಲ್ಲ. 24 ಆದ್ದರಿಂದ ಕ್ರಿಸ್ತನು ಬರುವ ತನಕ ಧರ್ಮಶಾಸ್ತ್ರವು ನಮಗೆ ಯಜಮಾನನಾಗಿತ್ತು. ಕ್ರಿಸ್ತನು ಬಂದ ತರುವಾಯ ನಾವು ನಂಬಿಕೆಯ ಮೂಲಕ ನೀತಿವಂತರಾಗಿರಲು ಸಾಧ್ಯವಾಯಿತು. 25 ಈಗ ನಂಬಿಕೆಯ ಮಾರ್ಗವು ಬಂದಿದೆ. ಆದ್ದರಿಂದ ಈಗ ನಾವು ಧರ್ಮಶಾಸ್ತ್ರದ ಅಧೀನದಲ್ಲಿ ಜೀವಿಸುವುದಿಲ್ಲ.

26-27 ನೀವೆಲ್ಲರೂ ಕ್ರಿಸ್ತನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡಿದ್ದರಿಂದ ಕ್ರಿಸ್ತನನ್ನೇ ಧರಿಸಿಕೊಂಡಿರಿ. ಕ್ರಿಸ್ತ ಯೇಸುವಿನಲ್ಲಿ ನಂಬಿಕೆಯಿಡುವುದರ ಮೂಲಕ ನೀವೆಲ್ಲರೂ ದೇವರ ಮಕ್ಕಳಾಗಿದ್ದೀರೆಂಬುದನ್ನು ಇದು ತೋರಿಸುತ್ತದೆ. 28 ಈಗ ಕ್ರಿಸ್ತನಲ್ಲಿ ಯೆಹೂದ್ಯನು, ಗ್ರೀಕನು ಎಂಬ ವ್ಯತ್ಯಾಸವಿಲ್ಲ; ಸ್ವತಂತ್ರರು ಮತ್ತು ಗುಲಾಮರು ಎಂಬ ವ್ಯತ್ಯಾಸವಿಲ್ಲ; ಸ್ತ್ರೀಯರು ಮತ್ತು ಪುರುಷರು ಎಂಬ ವ್ಯತ್ಯಾಸವಿಲ್ಲ. ನೀವೆಲ್ಲರೂ ಕ್ರಿಸ್ತ ಯೇಸುವಿನಲ್ಲಿ ಒಂದೇ ಆಗಿದ್ದೀರಿ. 29 ನೀವು ಕ್ರಿಸ್ತನವರಾಗಿದ್ದೀರಿ. ಆದ್ದರಿಂದ ನೀವು ಅಬ್ರಹಾಮನ ಸಂತಾನದವರು. ದೇವರು ಅವನಿಗೆ ಮಾಡಿದ ವಾಗ್ದಾನದ ಪ್ರಕಾರ ನೀವೆಲ್ಲರೂ ದೇವರ ಆಶೀರ್ವಾದಗಳನ್ನು ಪಡೆದುಕೊಳ್ಳುವಿರಿ.

ಲೂಕ 8:26-39

ದೆವ್ವಗಳಿಂದ ಪೀಡಿತನಾಗಿದ್ದ ಮನುಷ್ಯ

(ಮತ್ತಾಯ 8:28-34; ಮಾರ್ಕ 5:1-20)

26 ಯೇಸು ಮತ್ತು ಆತನ ಶಿಷ್ಯರು ಗಲಿಲಾಯದಿಂದ ಸರೋವರವನ್ನು ದಾಟಿ, ಗೆರೆಸೇನರ ನಾಡಿಗೆ ಪ್ರಯಾಣ ಮಾಡಿದರು. 27 ಯೇಸು ದೋಣಿಯಿಂದ ಇಳಿದಾಗ, ಆ ಪಟ್ಟಣದ ಮನುಷ್ಯನೊಬ್ಬನು ಯೇಸುವಿನ ಬಳಿಗೆ ಬಂದನು. ಈ ಮನುಷ್ಯನಿಗೆ ದೆವ್ವ ಹಿಡಿದಿತ್ತು. ಬಹಳ ಕಾಲದಿಂದ ಅವನು ಬಟ್ಟೆಯನ್ನೇ ಹಾಕಿಕೊಂಡಿರಲಿಲ್ಲ. ಅವನು ಸಮಾಧಿಯ ಗವಿಗಳಲ್ಲಿ ವಾಸಿಸುತ್ತಿದ್ದನು.

28-29 ದೆವ್ವವು ಅವನನ್ನು ಪದೇಪದೇ ವಶಪಡಿಸಿಕೊಳ್ಳುತ್ತಿತ್ತು. ಆ ಮನುಷ್ಯನನ್ನು ಸೆರೆಮನೆಗೆ ಹಾಕಿ ಕೈಕಾಲುಗಳನ್ನು ಸರಪಣಿಗಳಿಂದ ಕಟ್ಟಿದರೂ ಅವನು ಅವುಗಳನ್ನು ಕಿತ್ತೊಗೆದುಬಿಡುತ್ತಿದ್ದನು. ಅವನೊಳಗಿದ್ದ ದೆವ್ವವು ಅವನನ್ನು ಜನರಿಲ್ಲದ ಸ್ಥಳಗಳಿಗೆ ಬಲವಂತವಾಗಿ ಕೊಂಡೊಯ್ಯುತ್ತಿತ್ತು. ಯೇಸು ಆ ದೆವ್ವಕ್ಕೆ, “ಅವನನ್ನು ಬಿಟ್ಟು ಹೋಗು” ಎಂದು ಆಜ್ಞಾಪಿಸಿದನು. ಆ ಮನುಷ್ಯನು ಯೇಸುವಿನ ಮುಂದೆ ಅಡ್ಡಬಿದ್ದು ಗಟ್ಟಿಯಾದ ಸ್ವರದಿಂದ, “ಯೇಸುವೇ, ಮಹೋನ್ನತನಾದ ದೇವರ ಮಗನೇ, ನನ್ನಿಂದ ನಿನಗೇನಾಗಬೇಕಾಗಿದೆ? ದಯಮಾಡಿ ನನ್ನನ್ನು ದಂಡಿಸಬೇಡ!” ಎಂದು ಕೂಗಿದನು.

30 “ನಿನ್ನ ಹೆಸರೇನು?” ಎಂದು ಯೇಸು ಕೇಳಿದನು.

“ದಂಡು” ಎಂದು ಅವನು ಉತ್ತರಿಸಿದನು. (ಏಕೆಂದರೆ ಅವನೊಳಗೆ ಅನೇಕ ದೆವ್ವಗಳು ಸೇರಿಕೊಂಡಿದ್ದವು.) 31 ತಮ್ಮನ್ನು ಪಾತಾಳಕ್ಕೆ ಕಳುಹಿಸಕೂಡದೆಂದು ಆ ದೆವ್ವಗಳು ಯೇಸುವನ್ನು ಬೇಡಿಕೊಂಡವು. 32 ಅಲ್ಲಿದ್ದ ಒಂದು ಗುಡ್ಡದ ಮೇಲೆ ಹಂದಿಗಳ ಒಂದು ದೊಡ್ಡ ಗುಂಪು ಮೇಯುತ್ತಿತ್ತು. ಹಂದಿಗಳೊಳಗೆ ಹೋಗಲು ತಮಗೆ ಅನುಮತಿ ಕೊಡಬೇಕೆಂದು ಆ ದೆವ್ವಗಳು ಯೇಸುವನ್ನು ಬೇಡಿಕೊಂಡವು. ಯೇಸು ಅವುಗಳಿಗೆ ಅನುಮತಿಕೊಟ್ಟನು. 33 ಆಗ ದೆವ್ವಗಳು ಆ ಮನುಷ್ಯನಿಂದ ಹೊರಬಂದು ಹಂದಿಗಳೊಳಗೆ ಸೇರಿಕೊಂಡವು. ಆ ಕೂಡಲೇ ಹಂದಿಗಳ ಗುಂಪು ಗುಡ್ಡದ ಕೆಳಗೆ ಓಡಿಹೋಗಿ ಸರೋವರದಲ್ಲಿ ಬಿದ್ದು ಮುಳುಗಿಹೋದವು.

34 ಹಂದಿಗಳನ್ನು ಕಾಯುತ್ತಿದ್ದವರು ಓಡಿಹೋಗಿ, ನಡೆದ ಈ ಸಂಗತಿಯನ್ನು ಹೊಲಗಳಲ್ಲಿಯೂ ಊರುಗಳಲ್ಲಿಯೂ ಇದ್ದ ಜನರಿಗೆ ತಿಳಿಸಿದರು. 35 ಅದನ್ನು ನೋಡಲು ಜನರೆಲ್ಲರೂ ಯೇಸುವಿದ್ದಲ್ಲಿಗೆ ಬಂದರು. ಆ ಮನುಷ್ಯನು ಯೇಸುವಿನ ಪಾದಗಳ ಬಳಿಯಲ್ಲಿ ಕುಳಿತಿದ್ದುದನ್ನು ಅವರು ನೋಡಿದರು. ಅವನು ಬಟ್ಟೆಗಳನ್ನು ಹಾಕಿಕೊಂಡಿದ್ದನು; ಸ್ವಸ್ಥಬುದ್ಧಿಯುಳ್ಳವನಾಗಿದ್ದನು. ದೆವ್ವಗಳು ಅವನನ್ನು ಬಿಟ್ಟುಹೋಗಿದ್ದವು. ಜನರಿಗೆ ಭಯವಾಯಿತು. 36 ಯೇಸು ಆ ಮನುಷ್ಯನನ್ನು ಗುಣಪಡಿಸಿದ ರೀತಿಯನ್ನು ನೋಡಿದ್ದವರು ಆತನನ್ನು ನೋಡಲು ಬಂದ ಜನರೆಲ್ಲರಿಗೂ ಆ ಘಟನೆಯನ್ನು ವಿವರಿಸಿ ಹೇಳಿದರು. 37 ಜನರು ಯೇಸುವಿಗೆ, “ನೀನು ಇಲ್ಲಿಂದ ಹೊರಟುಹೋಗು” ಎಂದು ಕೇಳಿಕೊಂಡರು. ಏಕೆಂದರೆ ಅವರು ಬಹಳ ಭಯಗೊಂಡಿದ್ದರು.

ಆದ್ದರಿಂದ ಯೇಸು ದೋಣಿಯನ್ನು ಹತ್ತಿ ಮತ್ತೆ ಗಲಿಲಾಯಕ್ಕೆ ಹಿಂತಿರುಗಿದನು. 38 ದೆವ್ವಗಳಿಂದ ಬಿಡುಗಡೆಯಾಗಿದ್ದವನು, “ನನ್ನನ್ನು ನಿನ್ನ ಜೊತೆಯಲ್ಲೇ ಕರೆದುಕೊಂಡು ಹೋಗು,” ಎಂದು ಕೇಳಿಕೊಂಡನು. 39 ಅದಕ್ಕೆ ಯೇಸು, “ನಿನ್ನ ಮನೆಗೆ ಹಿಂತಿರುಗಿ ಹೋಗು. ದೇವರು ನಿನಗೆ ಮಾಡಿದ ಉಪಕಾರವನ್ನು ಜನರಿಗೆ ತಿಳಿಸು” ಎಂದು ಹೇಳಿ ಅವನನ್ನು ಕಳುಹಿಸಿದನು.

ಆದ್ದರಿಂದ ಆ ಮನುಷ್ಯನು ಅಲ್ಲಿಂದ ಹೊರಟುಹೋಗಿ ಯೇಸು ತನಗೆ ಮಾಡಿದ ಉಪಕಾರವನ್ನು ಊರಲ್ಲೆಲ್ಲಾ ತಿಳಿಸಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International