Revised Common Lectionary (Semicontinuous)
ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ. ರಚನೆಗಾರ: ದಾವೀದ.
124 ಯೆಹೋವನು ನಮ್ಮ ಕಡೆ ಇಲ್ಲದಿದ್ದಿದ್ದರೆ ನಮ್ಮ ಗತಿ ಏನಾಗುತ್ತಿತ್ತು?
ಇಸ್ರೇಲರೇ, ನನಗೆ ಉತ್ತರಹೇಳಿ.
2 ವೈರಿಗಳು ನಮ್ಮ ಮೇಲೆ ಆಕ್ರಮಣ ಮಾಡಿದಾಗ
ಯೆಹೋವನು ನಮ್ಮ ಕಡೆ ಇಲ್ಲದಿದ್ದಿದ್ದರೆ ನಮ್ಮ ಗತಿ ಏನಾಗುತ್ತಿತ್ತು?
3 ಶತ್ರುಗಳು ನಮ್ಮಮೇಲೆ ಕೋಪಗೊಂಡಾಗಲೆಲ್ಲಾ
ನಮ್ಮನ್ನು ಜೀವಂತವಾಗಿ ನುಂಗಿಬಿಡುತ್ತಿದ್ದರು.
4 ಶತ್ರುಸೈನ್ಯಗಳು ನಮ್ಮನ್ನು ಕೊಚ್ಚಿಕೊಂಡು ಹೋಗುವ
ಪ್ರವಾಹದಂತೆಯೂ ಮುಳುಗಿಸುವ ನದಿಯಂತೆಯೂ ಆಗಿರುತ್ತಿದ್ದರು.
5 ಆ ಗರ್ವಿಷ್ಠರು ನಮ್ಮ ಪಾಲಿಗೆ ಬಾಯಿಯವರೆಗೂ
ಮೇಲೇರಿ ಮುಳುಗಿಸುವ ನೀರಿನಂತಾಗುತ್ತಿದ್ದರು.
6 ಯೆಹೋವನಿಗೆ ಸ್ತೋತ್ರವಾಗಲಿ!
ನಮ್ಮ ಶತ್ರುಗಳು ನಮ್ಮನ್ನು ಹಿಡಿದು ಕೊಲ್ಲಲು ಆತನು ಅವಕಾಶ ಕೊಡಲಿಲ್ಲ.
7 ನಾವು ಬಲೆಯಿಂದ ತಪ್ಪಿಸಿಕೊಂಡ ಪಕ್ಷಿಯಂತಿದ್ದೇವೆ.
ಬಲೆಯು ಹರಿದುಹೋದದ್ದರಿಂದ ನಾವು ತಪ್ಪಿಸಿಕೊಂಡೆವು.
8 ನಮಗೆ ಸಹಾಯವು ಯೆಹೋವನಿಂದಲೇ ಬಂದಿತು.
ಭೂಮ್ಯಾಕಾಶಗಳನ್ನು ಸೃಷ್ಟಿಮಾಡಿದವನು ಆತನೇ.
4 “ಮನುಷ್ಯರೇ, ನಿಮ್ಮನ್ನೇ ಕರೆಯುತ್ತೇನೆ;
ಎಲ್ಲಾ ಜನರನ್ನು ಕರೆಯುತ್ತೇನೆ.
5 ಮೂಢರೇ, ಜಾಣತನವನ್ನು ಕಲಿತುಕೊಳ್ಳಿರಿ;
ಜ್ಞಾನಹೀನರೇ ಬುದ್ಧಿಯನ್ನು ಗ್ರಹಿಸಿಕೊಳ್ಳಿರಿ.
6 ಕೇಳಿರಿ! ಶ್ರೇಷ್ಠವಾದವುಗಳನ್ನೂ
ಯಥಾರ್ಥವಾದವುಗಳನ್ನೂ ನಿಮಗೆ ತಿಳಿಸುವೆನು.
7 ನನ್ನ ಮಾತುಗಳು ಸತ್ಯ.
ನನ್ನ ತುಟಿಗಳಿಗೆ ದುಷ್ಟತನ ಅಸಹ್ಯ.
8 ನನ್ನ ಮಾತುಗಳು ನೀತಿಯ ಮಾತುಗಳಾಗಿವೆ.
ನನ್ನ ಮಾತುಗಳಲ್ಲಿ ತಪ್ಪಾಗಲಿ ಕಪಟವಾಗಲಿ ಇಲ್ಲವೇ ಇಲ್ಲ.
9 ತಿಳುವಳಿಕೆಯುಳ್ಳವನಿಗೆ ನನ್ನ ಮಾತುಗಳು ಸ್ಪಷ್ಟವಾಗಿವೆ;
ವಿವೇಕಿಗೆ ಯಥಾರ್ಥವಾಗಿವೆ.
10 ನನ್ನ ಉಪದೇಶವನ್ನು ಬೆಳ್ಳಿಗಿಂತಲೂ
ನನ್ನ ಜ್ಞಾನೋಪದೇಶವನ್ನು ಶುದ್ಧ ಬಂಗಾರಕ್ಕಿಂತಲೂ ಉತ್ತಮವೆಂದು ಸ್ವೀಕರಿಸಿಕೊಳ್ಳಿ.
11 ಜ್ಞಾನವು ಹವಳಕ್ಕಿಂತಲೂ ಶ್ರೇಷ್ಠ,
ಮನುಷ್ಯನ ಇಷ್ಟ ವಸ್ತುಗಳೆಲ್ಲವೂ ಅದಕ್ಕೆ ಸಮವಲ್ಲ.”
ಜ್ಞಾನವು ಮಾಡುವುದೇನು
12 “ನಾನೇ ಜ್ಞಾನ.
ನಾನು ಒಳ್ಳೆಯ ನ್ಯಾಯತೀರ್ಪಿನೊಡನೆ ವಾಸಿಸುವೆ.
ನಾನು ವಿವೇಕದೊಡನೆಯೂ ಒಳ್ಳೆಯ ಆಲೋಚನೆಯೊಡನೆಯೂ ಇರುವೆನು.
13 ಯೆಹೋವನಲ್ಲಿ ಭಯಭಕ್ತಿಯಿರುವವನು ಪಾಪವನ್ನು ದ್ವೇಷಿಸುತ್ತಾನೆ.
ಜ್ಞಾನವೆಂಬ ನಾನು ಗರ್ವವನ್ನೂ ಅಹಂಭಾವವನ್ನೂ
ದುರ್ಮಾರ್ಗತನವನ್ನೂ ಸುಳ್ಳಾಡುವ ಬಾಯನ್ನೂ ದ್ವೇಷಿಸುತ್ತೇನೆ.
14 ಒಳ್ಳೆಯ ಆಲೋಚನೆಗಳೂ ಒಳ್ಳೆಯ ತೀರ್ಪುಗಳೂ ನನ್ನವೇ.
ವಿವೇಕವೂ ಸಾಮರ್ಥ್ಯವೂ ನನ್ನಲ್ಲಿವೆ.
15 ನನ್ನ ಸಹಾಯದಿಂದ ರಾಜರುಗಳು ರಾಜ್ಯವಾಳುವರು;
ಅಧಿಪತಿಗಳು ನ್ಯಾಯವಾದ ಕಾನೂನುಗಳನ್ನು ಮಾಡುವರು.
16 ನನ್ನ ಸಹಾಯದಿಂದ ಅಧಿಪತಿಗಳು ಆಡಳಿತ ಮಾಡುವರು;
ನಾಯಕರು ದೊರೆತನ ಮಾಡುವರು.
17 ನನ್ನನ್ನು ಪ್ರೀತಿಸುವವರನ್ನು ನಾನೂ ಪ್ರೀತಿಸುವೆನು;
ಬಹಳವಾಗಿ ನನ್ನನ್ನು ಹುಡುಕುವವರು ನನ್ನನ್ನು ಕಂಡುಕೊಳ್ಳುವರು.
18 ನನ್ನಲ್ಲಿಯೂ ಸಹ ಕೊಡಲು ಐಶ್ವರ್ಯವಿದೆ ಮತ್ತು ಘನತೆಯಿದೆ.
ನಾನು ಶಾಶ್ವತವಾದ ಐಶ್ವರ್ಯವನ್ನೂ ಯಶಸ್ಸನ್ನೂ ಕೊಡುವೆನು.
19 ನಾನು ಕೊಡುವಂಥವುಗಳು ಬಂಗಾರಕ್ಕಿಂತಲೂ ಶ್ರೇಷ್ಠ.
ನನ್ನ ಉಡುಗೊರೆಗಳು ಅಪ್ಪಟ ಬೆಳ್ಳಿಗಿಂತಲೂ ಉತ್ತಮ.
20 ನಾನು ನೀತಿಮಾರ್ಗದಲ್ಲಿಯೂ
ನ್ಯಾಯಮಾರ್ಗದಲ್ಲಿಯೂ ನಡೆಯುತ್ತೇನೆ.
21 ನನ್ನನ್ನು ಪ್ರೀತಿಸುವವರಿಗೆ ನಾನು ಐಶ್ವರ್ಯವನ್ನು ಕೊಡುವೆನು.
ಹೌದು, ಅವರ ಉಗ್ರಾಣಗಳನ್ನು ತುಂಬಿಸುವೆನು.
15 ಆದ್ದರಿಂದ ನೀವು ಹೇಗೆ ಜೀವಿಸುತ್ತಿದ್ದೀರಿ ಎಂಬುದರ ಬಗ್ಗೆ ಬಹು ಎಚ್ಚರಿಕೆಯಿಂದಿರಿ. ಅವಿವೇಕಿಗಳಂತೆ ಜೀವಿಸದೆ ವಿವೇಕಿಗಳಾಗಿ ಜೀವಿಸಿರಿ. 16 ಈ ದಿನಗಳು ಕೆಟ್ಟವುಗಳಾಗಿವೆ. ಆದ್ದರಿಂದ ನಿಮಗಿರುವ ಪ್ರತಿಯೊಂದು ಅವಕಾಶವನ್ನು ಒಳ್ಳೆಯದಕ್ಕಾಗಿ ಉಪಯೋಗಿಸಿರಿ. 17 ನಿಮ್ಮ ಜೀವಿತಗಳ ಬಗ್ಗೆ ಮೂರ್ಖರಾಗಿರದೆ ದೇವರ ಚಿತ್ತವೇನೆಂಬುದನ್ನು ತಿಳಿದುಕೊಳ್ಳಿರಿ. 18 ಮದ್ಯಪಾನಮಾಡಿ ಮತ್ತರಾಗಬೇಡಿ, ಅದು ಪಾಪಕೃತ್ಯಗಳಿಗೆ ನಡೆಸುತ್ತದೆ, ಆದರೆ ಯಾವಾಗಲೂ ಪವಿತ್ರಾತ್ಮಭರಿತರಾಗಿರಿ. 19 ಕೀರ್ತನೆಗಳಿಂದಲೂ ಸಂಗೀತಗಳಿಂದಲೂ ಆತ್ಮಿಕ ಹಾಡುಗಳಿಂದಲೂ ಒಬ್ಬರಿಗೊಬ್ಬರು ಮಾತಾಡಿರಿ. ನಿಮ್ಮ ಹೃದಯಗಳಲ್ಲಿ ಪ್ರಭುವಿಗೆ ವಾದ್ಯ ನುಡಿಸುತ್ತಾ ಹಾಡಿರಿ. 20 ಪ್ರತಿಯೊಂದು ವಿಷಯದಲ್ಲಿಯೂ ತಂದೆಯಾದ ದೇವರಿಗೆ ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಹೆಸರಿನಲ್ಲಿ ಯಾವಾಗಲೂ ಸ್ತೋತ್ರಮಾಡಿರಿ.
Kannada Holy Bible: Easy-to-Read Version. All rights reserved. © 1997 Bible League International