Revised Common Lectionary (Semicontinuous)
ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ. ರಚನೆಗಾರ: ದಾವೀದ.
124 ಯೆಹೋವನು ನಮ್ಮ ಕಡೆ ಇಲ್ಲದಿದ್ದಿದ್ದರೆ ನಮ್ಮ ಗತಿ ಏನಾಗುತ್ತಿತ್ತು?
ಇಸ್ರೇಲರೇ, ನನಗೆ ಉತ್ತರಹೇಳಿ.
2 ವೈರಿಗಳು ನಮ್ಮ ಮೇಲೆ ಆಕ್ರಮಣ ಮಾಡಿದಾಗ
ಯೆಹೋವನು ನಮ್ಮ ಕಡೆ ಇಲ್ಲದಿದ್ದಿದ್ದರೆ ನಮ್ಮ ಗತಿ ಏನಾಗುತ್ತಿತ್ತು?
3 ಶತ್ರುಗಳು ನಮ್ಮಮೇಲೆ ಕೋಪಗೊಂಡಾಗಲೆಲ್ಲಾ
ನಮ್ಮನ್ನು ಜೀವಂತವಾಗಿ ನುಂಗಿಬಿಡುತ್ತಿದ್ದರು.
4 ಶತ್ರುಸೈನ್ಯಗಳು ನಮ್ಮನ್ನು ಕೊಚ್ಚಿಕೊಂಡು ಹೋಗುವ
ಪ್ರವಾಹದಂತೆಯೂ ಮುಳುಗಿಸುವ ನದಿಯಂತೆಯೂ ಆಗಿರುತ್ತಿದ್ದರು.
5 ಆ ಗರ್ವಿಷ್ಠರು ನಮ್ಮ ಪಾಲಿಗೆ ಬಾಯಿಯವರೆಗೂ
ಮೇಲೇರಿ ಮುಳುಗಿಸುವ ನೀರಿನಂತಾಗುತ್ತಿದ್ದರು.
6 ಯೆಹೋವನಿಗೆ ಸ್ತೋತ್ರವಾಗಲಿ!
ನಮ್ಮ ಶತ್ರುಗಳು ನಮ್ಮನ್ನು ಹಿಡಿದು ಕೊಲ್ಲಲು ಆತನು ಅವಕಾಶ ಕೊಡಲಿಲ್ಲ.
7 ನಾವು ಬಲೆಯಿಂದ ತಪ್ಪಿಸಿಕೊಂಡ ಪಕ್ಷಿಯಂತಿದ್ದೇವೆ.
ಬಲೆಯು ಹರಿದುಹೋದದ್ದರಿಂದ ನಾವು ತಪ್ಪಿಸಿಕೊಂಡೆವು.
8 ನಮಗೆ ಸಹಾಯವು ಯೆಹೋವನಿಂದಲೇ ಬಂದಿತು.
ಭೂಮ್ಯಾಕಾಶಗಳನ್ನು ಸೃಷ್ಟಿಮಾಡಿದವನು ಆತನೇ.
ಜ್ಞಾನವು ನಿನ್ನನ್ನು ವ್ಯಭಿಚಾರದಿಂದ ದೂರವಿಡುತ್ತದೆ
7 ನನ್ನ ಮಗನೇ, ನನ್ನ ಮಾತುಗಳನ್ನು ಜ್ಞಾಪಕಮಾಡಿಕೋ, ನನ್ನ ಆಜ್ಞೆಗಳನ್ನು ಮರೆಯಬೇಡ. 2 ನನ್ನ ಆಜ್ಞೆಗಳಿಗೆ ವಿಧೇಯನಾಗು, ಆಗ ನೀನು ಜೀವಿಸುವೆ. ನಿನ್ನ ಕಣ್ಣುಗುಡ್ಡೆಗಳೋ ಎಂಬಂತೆ ನನ್ನ ಉಪದೇಶಗಳಿಗೆ ಎಚ್ಚರಿಕೆಯಿಂದ ವಿಧೇಯನಾಗಿರು. 3 ಅವುಗಳನ್ನು ನಿನ್ನ ಬೆರಳುಗಳ ಸುತ್ತಲೂ ಕಟ್ಟಿಕೊ; ನಿನ್ನ ಹೃದಯದ ಮೇಲೆ ಬರೆದುಕೊ, 4 ಜ್ಞಾನವನ್ನು ನಿನ್ನ ಸಹೋದರಿಯಂತೆ ಪ್ರೀತಿಸು. ವಿವೇಕವನ್ನು ನಿನ್ನ ಕುಟುಂಬದಂತೆ ಪ್ರೀತಿಸು.
7 ಕ್ರಿಸ್ತನು ನಮ್ಮಲ್ಲಿ ಪ್ರತಿಯೊಬ್ಬರಿಗೂ ವಿಶೇಷವಾದ ವರವನ್ನು ಕೊಟ್ಟಿದ್ದಾನೆ. ಪ್ರತಿಯೊಬ್ಬನು ಕ್ರಿಸ್ತನ ಇಷ್ಟಾನುಸಾರವಾಗಿ ವರವನ್ನು ಪಡೆದುಕೊಂಡಿದ್ದಾನೆ. 8 ಆದಕಾರಣವೇ ಪವಿತ್ರ ಗ್ರಂಥದಲ್ಲಿ ಈ ರೀತಿ ಬರೆದಿದೆ:
“ಆತನು ಆಕಾಶದ ಉನ್ನತಸ್ಥಾನಕ್ಕೆ ಏರಿಹೋದಾಗ,
ಶತ್ರುಗಳನ್ನು ಸೆರೆಯಾಳುಗಳಾಗಿ ಕೊಂಡೊಯ್ದು ಜನರಿಗೆ ದಾನಗಳನ್ನು ಮಾಡಿದನು.”(A)
9 “ಆತನು ಉನ್ನತಸ್ಥಾನಕ್ಕೆ ಏರಿಹೋದನು” ಎಂದರೆ ಆತನು ಭೂಲೋಕಕ್ಕೆ ಇಳಿದುಬಂದು, 10 ಭೂಮಿಯ ಅಧೋಭಾಗಕ್ಕೆ ಇಳಿದುಹೋಗಿ, ಅಲ್ಲಿಂದ ಆಕಾಶದ ಅತ್ಯುನ್ನತಸ್ಥಾನಕ್ಕೆ ಏರಿಹೋದನು ಎಂದರ್ಥ. ಸಮಸ್ತದಲ್ಲಿ ತಾನೇ ತುಂಬಿರಬೇಕೆಂದು ಕ್ರಿಸ್ತನು ಹಾಗೆ ಮಾಡಿದನು. 11 ಆತನು ಕೆಲವರನ್ನು ಅಪೊಸ್ತಲರನ್ನಾಗಿಯೂ ಕೆಲವರನ್ನು ಪ್ರವಾದಿಗಳನ್ನಾಗಿಯೂ ಕೆಲವರನ್ನು ಸುವಾರ್ತಿಕರನ್ನಾಗಿಯೂ ಕೆಲವರನ್ನು ಸಭಾಪಾಲಕರನ್ನಾಗಿಯೂ ಮತ್ತು ಉಪದೇಶಕರನ್ನಾಗಿಯೂ ನೇಮಿಸಿದನು. 12 ಸಭೆಯ ಸೇವೆಗೋಸ್ಕರ ದೇವರ ಪರಿಶುದ್ಧ ಜನರನ್ನು ಸಿದ್ಧಪಡಿಸುವುದಕ್ಕಾಗಿ ಆತನು ಅವರನ್ನು ನೇಮಿಸಿದನು. 13 ನಾವೆಲ್ಲರೂ ಒಂದೇ ನಂಬಿಕೆಯಿಂದಲೂ ದೇವಕುಮಾರನ ವಿಷಯವಾದ ಜ್ಞಾನದಿಂದಲೂ ಐಕ್ಯರಾಗುವತನಕ ಈ ಸೇವೆಯು ಮುಂದುವರಿಯಬೇಕು. ನಾವು ಪರಿಪೂರ್ಣರಾಗುವ ತನಕ ಅಂದರೆ ಕ್ರಿಸ್ತನ ಸರ್ವಸಂಪೂರ್ಣತೆಯನ್ನು ಮುಟ್ಟುವತನಕ ಬೆಳೆಯಬೇಕು.
14 ನಾವು ಇನ್ನು ಮೇಲೆ ಕೂಸುಗಳಾಗಿರಬಾರದು. ಸಮುದ್ರದ ಅಲೆಗಳಿಂದ ಅತ್ತಿಂದಿತ್ತ ಚಲಿಸುವ ಹಡಗಿನಂತೆ ಚಂಚಲರಾಗಿರಬಾರದು. ನಮ್ಮನ್ನು ವಂಚಿಸುವುದಕ್ಕಾಗಿ ಜನರು ಹೇಳುವ ಯಾವುದೇ ಹೊಸ ಉಪದೇಶದಿಂದಾಗಲಿ ನಾವು ಚಂಚಲರಾಗಬಾರದು. ಜನರನ್ನು ಮೋಸಗೊಳಿಸಿ ಕೆಟ್ಟದಾರಿಗೆ ನಡೆಸಬೇಕೆಂಬ ಉದ್ದೇಶದಿಂದ ಆ ದುರ್ಬೋಧಕರು ನಾನಾ ಬಗೆಯ ಕುತಂತ್ರವನ್ನು ಮಾಡುತ್ತಾರೆ. 15 ನಾವಾದರೊ ಸತ್ಯವನ್ನು ಪ್ರೀತಿಯಿಂದ ಹೇಳಬೇಕು; ಎಲ್ಲಾ ವಿಷಯಗಳಲ್ಲಿಯೂ ಬೆಳೆದು ಕ್ರಿಸ್ತನಂತಾಗಲು ಪ್ರಯತ್ನಿಸಬೇಕು. ಕ್ರಿಸ್ತನು ಶಿರಸ್ಸಾಗಿದ್ದಾನೆ ಮತ್ತು ನಾವು ದೇಹವಾಗಿದ್ದೇವೆ. 16 ಇಡೀ ದೇಹವು ಕ್ರಿಸ್ತನನ್ನು ಅವಲಂಬಿಸಿಕೊಂಡಿದೆ. ದೇಹದ ಒಂದೊಂದು ಅಂಗಗಳೂ ಒಂದಕ್ಕೊಂದು ಬಿಗಿದುಕೊಂಡಿವೆ. ಪ್ರತಿಯೊಂದು ಅಂಗವು ತನ್ನದೇ ಆದ ಕೆಲಸವನ್ನು ಮಾಡುವುದರಿಂದ ಇಡೀ ದೇಹವು ಬೆಳೆದು ಪ್ರೀತಿಯಲ್ಲಿ ಬಲವಾಗಿರಲು ಸಾಧ್ಯವಾಗುತ್ತದೆ.
Kannada Holy Bible: Easy-to-Read Version. All rights reserved. © 1997 Bible League International