Revised Common Lectionary (Semicontinuous)
ಜ್ಞಾನ—ಒಳ್ಳೆಯ ಸ್ತ್ರೀ
8 ಕೇಳಿ! ಜ್ಞಾನವೆಂಬಾಕೆಯೂ ವಿವೇಕವೆಂಬಾಕೆಯೂ
“ಕಿವಿಗೊಡಿರಿ” ಎಂದು ನಿಮ್ಮನ್ನು ಕೂಗಿ ಕರೆಯುತ್ತಿದ್ದಾಳೆ.
2 ರಸ್ತೆಗಳ ಚೌಕಗಳ ಬಳಿಯಿರುವ
ಗುಡ್ಡದ ಮೇಲ್ಭಾಗದಲ್ಲಿ ಆಕೆಯು ನಿಂತುಕೊಂಡಿದ್ದಾಳೆ.
3 ಪಟ್ಟಣದ ಹೆಬ್ಬಾಗಿಲುಗಳ ಬಳಿಯಿಂದಲೂ
ತೆರೆದ ಬಾಗಿಲುಗಳ ಬಳಿಯಿಂದಲೂ ಕರೆಯುತ್ತಿದ್ದಾಳೆ.
4 “ಮನುಷ್ಯರೇ, ನಿಮ್ಮನ್ನೇ ಕರೆಯುತ್ತೇನೆ;
ಎಲ್ಲಾ ಜನರನ್ನು ಕರೆಯುತ್ತೇನೆ.
22 “ಯೆಹೋವನು ‘ಜ್ಞಾನ’ವೆಂಬ ನನ್ನನ್ನು
ತನ್ನ ಸೃಷ್ಟಿ ಕ್ರಮದಲ್ಲಿ ಮೊದಲು ನಿರ್ಮಿಸಿದನು.
23 ನಾನು ಆದಿಯಲ್ಲಿ ನಿರ್ಮಾಣಗೊಂಡೆನು.
ಪ್ರಪಂಚವು ಆರಂಭವಾಗುವುದಕ್ಕಿಂತ ಮೊದಲೇ ನಾನು ನಿರ್ಮಿತನಾದೆನು.
24 ನಾನು ಸಾಗರಗಳಿಗಿಂತ ಮೊದಲೇ ಜನಿಸಿದೆನು;
ಬುಗ್ಗೆಗಳ ನೀರು ಉಂಟಾಗುವುದಕ್ಕಿಂತ ಮೊದಲೇ ಜನಿಸಿದೆನು.
25 ನಾನು ಪರ್ವತಗಳಿಗಿಂತ ಮೊದಲೇ ಜನಿಸಿದೆನು; ಬೆಟ್ಟಗಳಿಗಿಂತ ಮೊದಲೇ ಹುಟ್ಟಿದೆನು.
26 ಯೆಹೋವನು ಭೂಮಿಯನ್ನು ಸೃಷ್ಟಿಸುವುದಕ್ಕಿಂತ ಮೊದಲೇ ಜ್ಞಾನವೆಂಬ ನಾನು ಹುಟ್ಟಿದೆನು.
ನಾನು ಬಯಲುಗಳಿಗಿಂತ ಮೊದಲೇ ಹುಟ್ಟಿದೆನು. ಆತನು ಭೂಮಿಯ ಮೊದಲನೆ ಧೂಳಿನ ಕಣವನ್ನು ಉಂಟುಮಾಡುವುದಕ್ಕಿಂತ ಮೊದಲೇ ನಾನು ಹುಟ್ಟಿದೆನು.
27 ಯೆಹೋವನು ಆಕಾಶವನ್ನು ಸೃಷ್ಟಿಸಿದ ಸಮಯದಲ್ಲಿ
ಜ್ಞಾನವೆಂಬ ನಾನು ಅಲ್ಲಿದ್ದೆನು.
ಆತನು ಸಾಗರದ ಎಲ್ಲೆಗಳನ್ನು ಗೊತ್ತುಪಡಿಸಿದಾಗ ಜ್ಞಾನವೆಂಬ ನಾನು ಅಲ್ಲಿದ್ದೆನು.
28 ಆತನು ಆಕಾಶದಲ್ಲಿ ಮೋಡಗಳನ್ನೂ
ಸಾಗರಗಳಲ್ಲಿ ನೀರನ್ನೂ ನೆಲೆಗೊಳಿಸಿದಾಗ ನಾನು ಅಲ್ಲಿದ್ದೆನು.
29 ಆತನು ಸಮುದ್ರಗಳ ನೀರಿಗೆ ಎಲ್ಲೆಕಟ್ಟನ್ನು ಹಾಕಿದಾಗಲೂ
ಭೂಮಿಗೆ ಅಸ್ತಿವಾರಗಳನ್ನು ಹಾಕಿದಾಗಲೂ ನಾನು ಅಲ್ಲಿದ್ದೆನು.
30 ನಾನು ಆತನ ಪಕ್ಕದಲ್ಲಿ ನಿಪುಣ ಕೆಲಸಗಾರನಂತಿದ್ದೆನು.
ನಾನು ಪ್ರತಿದಿನವೂ ಸಂತೋಷಪಡುತ್ತಾ ಆತನ ಸನ್ನಿಧಿಯಲ್ಲಿ ಯಾವಾಗಲೂ ಉಲ್ಲಾಸಿಸುತ್ತಿದ್ದೆನು.
31 ಆತನು ಸೃಷ್ಟಿಸಿದ ಭೂಲೋಕದ ವಿಷಯದಲ್ಲಿ ಉಲ್ಲಾಸಿಸುತ್ತಾ
ಮಾನವ ಸಂತಾನದ ವಿಷಯದಲ್ಲಿ ಹರ್ಷಿಸುತ್ತಾ ಇದ್ದೆನು.
ರಚನೆಗಾರ: ದಾವೀದ.
8 ನಮ್ಮ ಒಡೆಯನಾದ ಯೆಹೋವನೇ, ನಿನ್ನ ಹೆಸರು ಭೂಲೋಕದಲ್ಲೆಲ್ಲಾ ಅತಿಶಯವಾದದ್ದು.
ನಿನ್ನ ಹೆಸರು ಪರಲೋಕದಲ್ಲೆಲ್ಲಾ ನಿನ್ನನ್ನು ಮಹಿಮೆಪಡಿಸುವುದು.
2 ಚಿಕ್ಕಮಕ್ಕಳ ಬಾಯಿಗಳೂ ಕೂಸುಗಳ ಬಾಯಿಗಳೂ ನಿನ್ನನ್ನು ಸ್ತುತಿಸಿ ಕೊಂಡಾಡುತ್ತವೆ;
ನಿನ್ನ ವೈರಿಗಳ ಬಾಯಿ ಮುಚ್ಚಿಸುವುದಕ್ಕಾಗಿಯೇ ನೀನು ಹೀಗೆ ಮಾಡಿರುವೆ.
3 ನಿನ್ನ ಕೈಕೆಲಸವಾಗಿರುವ ಆಕಾಶಮಂಡಲವನ್ನೂ
ನೀನು ಸೃಷ್ಟಿಸಿದ ಚಂದ್ರನಕ್ಷತ್ರಗಳನ್ನೂ ನೋಡಿ ಆಶ್ಚರ್ಯಗೊಳ್ಳುವೆನು.
4 ಮನುಷ್ಯರಿಗೆ ನೀನೇಕೆ ಪ್ರಾಮುಖ್ಯತೆ ಕೊಡಬೇಕು?
ನೀನೇಕೆ ಅವರನ್ನು ಜ್ಞಾಪಿಸಿಕೊಳ್ಳಬೇಕು?
ಮನುಷ್ಯರು ಎಷ್ಟರವರು?
ನೀನೇಕೆ ಅವರನ್ನು ಗಣನೆಗೆ ತೆಗೆದುಕೊಳ್ಳಬೇಕು?
5 ಆದರೆ ನೀನು ಮನುಷ್ಯರಿಗೆ ಪ್ರಾಮುಖ್ಯತೆ ಕೊಟ್ಟಿರುವೆ.
ನೀನು ಅವರನ್ನು ದೇವದೂತರಿಗಿಂತ ಸ್ವಲ್ಪವೇ ಕಡಿಮೆಯಾಗಿ ಸೃಷ್ಟಿಸಿದೆ.
ನೀನು ಅವರಿಗೆ ಪ್ರಭಾವವನ್ನೂ ಮಾನವನ್ನೂ ಕಿರೀಟವಾಗಿಟ್ಟಿರುವೆ.
6 ನೀನು ಸೃಷ್ಟಿಸಿದ ಪ್ರತಿಯೊಂದರ ಮೇಲೂ ಅವರನ್ನು ಅಧಿಪತಿಯನ್ನಾಗಿ ಮಾಡಿರುವೆ.
ನೀನು ಪ್ರತಿಯೊಂದನ್ನೂ ಅವರಿಗೆ ಅಧೀನಗೊಳಿಸಿರುವೆ.
7 ಅವರು ಎಲ್ಲಾ ಪಶುಗಳ ಮೇಲೆಯೂ ಕಾಡುಪ್ರಾಣಿಗಳ ಮೇಲೆಯೂ ದೊರೆತನ ಮಾಡುವರು.
8 ಆಕಾಶದ ಪಕ್ಷಿಗಳ ಮೇಲೆಯೂ ಸಾಗರದ ಮೀನುಗಳ ಮೇಲೆಯೂ
ದೊರೆತನ ಮಾಡುವರು.
9 ನಮ್ಮ ದೇವರಾದ ಯೆಹೋವನೇ, ನಿನ್ನ ಹೆಸರು ಭೂಲೋಕದಲ್ಲೆಲ್ಲಾ ಎಷ್ಟೋ ಅತಿಶಯವಾಗಿದೆ.
ನೀತಿನಿರ್ಣಯ
5 ಹೀಗಿರಲಾಗಿ, ನಾವು ನಂಬಿಕೆಯ ಮೂಲಕ ನೀತಿವಂತರಾಗಿದ್ದೇವೆ. ಆದಕಾರಣ ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಮೂಲಕ ನಮಗೆ ದೇವರೊಂದಿಗೆ ಸಮಾಧಾನವಿದೆ. 2 ಈಗ ನಾವು ಆನಂದಿಸುತ್ತಿರುವ ದೇವರ ಕೃಪಾಶ್ರಯಕ್ಕೆ ಕ್ರಿಸ್ತನೇ ನಮ್ಮನ್ನು ನಮ್ಮ ನಂಬಿಕೆಯ ಮೂಲಕ ತಂದಿದ್ದಾನೆ. ದೇವರ ಮಹಿಮೆಯನ್ನು ಹೊಂದುವೆವು ಎಂಬ ನಿರೀಕ್ಷೆಯು ನಮಗಿರುವುದರಿಂದ ನಾವು ಬಹು ಸಂತೋಷವಾಗಿದ್ದೇವೆ. 3 ಅಲ್ಲದೆ, ನಮ್ಮ ಕಷ್ಟಸಂಕಟಗಳಲ್ಲಿಯೂ ಸಂತೋಷವಾಗಿದ್ದೇವೆ. ಏಕೆಂದರೆ, ಈ ಕಷ್ಟಸಂಕಟಗಳು ನಮ್ಮಲ್ಲಿ ಹೆಚ್ಚು ತಾಳ್ಮೆಯನ್ನು ಉಂಟುಮಾಡುತ್ತವೆ. 4 ನಾವು ಬಲಶಾಲಿಗಳಾಗಿದ್ದೇವೆ ಎಂಬುದಕ್ಕೆ ಈ ತಾಳ್ಮೆಯೇ ಆಧಾರ. ನಮಗೆ ನಿರೀಕ್ಷೆಯನ್ನು ಕೊಡುವಂಥದ್ದು ಈ ಆಧಾರವೇ. 5 ನಮ್ಮ ಈ ನಿರೀಕ್ಷೆಯು ನಮ್ಮನ್ನು ಎಂದಿಗೂ ನಿರಾಶರನ್ನಾಗಿ ಮಾಡುವುದಿಲ್ಲ. ಅದು ಎಂದಿಗೂ ವ್ಯರ್ಥವಾಗುವುದಿಲ್ಲ. ಏಕೆಂದರೆ ದೇವರು ನಮಗೆ ಉಡುಗೊರೆಯಾಗಿ ಕೊಟ್ಟಿರುವ ಪವಿತ್ರಾತ್ಮನ ಮೂಲಕ ತನ್ನ ಪ್ರೀತಿಯನ್ನು ಧಾರಾಳವಾಗಿ ಸುರಿಸಿದ್ದಾನೆ.
12 “ನಾನು ನಿಮಗೆ ತಿಳಿಸಬೇಕಾದ ಇನ್ನೂ ಅನೇಕ ಸಂಗತಿಗಳಿವೆ. ಆದರೆ ಈಗ ಆ ಸಂಗತಿಗಳನ್ನು ಸ್ವೀಕರಿಸಿಕೊಳ್ಳಲು ನಿಮಗೆ ಬಹು ಕಷ್ಟವಾಗಬಹುದು. 13 ಆದರೆ ಸತ್ಯದ ಆತ್ಮನು ಬಂದಾಗ, ಆತನು ನಿಮ್ಮನ್ನು ಸಕಲ ವಿಷಯದಲ್ಲಿಯೂ ಸತ್ಯಕ್ಕೆ ನಡೆಸುವನು. ಸತ್ಯದ ಆತ್ಮನು ಹೇಳುವುದು ಆತನ ಸ್ವಂತ ಮಾತುಗಳಲ್ಲ. ತಾನು ಕೇಳಿದ್ದನ್ನು ಮಾತ್ರ ಆತನು ಹೇಳುತ್ತಾನೆ. ಸಂಭವಿಸಲಿರುವ ಸಂಗತಿಗಳನ್ನು ಆತನು ನಿಮಗೆ ತಿಳಿಸುತ್ತಾನೆ. 14 ಸತ್ಯದ ಆತ್ಮನು ನನ್ನಿಂದಲೇ ವಿಷಯಗಳನ್ನು ತೆಗೆದುಕೊಂಡು ನಿಮಗೆ ತಿಳಿಸುವುದರ ಮೂಲಕ ನನ್ನನ್ನು ಮಹಿಮೆಪಡಿಸುವನು. 15 ನನ್ನ ತಂದೆಗೆ ಇರುವುದೆಲ್ಲಾ ನನ್ನದೇ. ಆದಕಾರಣ, ಪವಿತ್ರಾತ್ಮನು ನನ್ನಿಂದಲೇ ವಿಷಯಗಳನ್ನು ತೆಗೆದುಕೊಂಡು, ನಿಮಗೆ ತಿಳಿಸುತ್ತಾನೆ ಎಂದು ನಾನು ಹೇಳಿದೆನು.
Kannada Holy Bible: Easy-to-Read Version. All rights reserved. © 1997 Bible League International