Revised Common Lectionary (Semicontinuous)
ರಚನೆಗಾರ: ದಾವೀದ.
8 ನಮ್ಮ ಒಡೆಯನಾದ ಯೆಹೋವನೇ, ನಿನ್ನ ಹೆಸರು ಭೂಲೋಕದಲ್ಲೆಲ್ಲಾ ಅತಿಶಯವಾದದ್ದು.
ನಿನ್ನ ಹೆಸರು ಪರಲೋಕದಲ್ಲೆಲ್ಲಾ ನಿನ್ನನ್ನು ಮಹಿಮೆಪಡಿಸುವುದು.
2 ಚಿಕ್ಕಮಕ್ಕಳ ಬಾಯಿಗಳೂ ಕೂಸುಗಳ ಬಾಯಿಗಳೂ ನಿನ್ನನ್ನು ಸ್ತುತಿಸಿ ಕೊಂಡಾಡುತ್ತವೆ;
ನಿನ್ನ ವೈರಿಗಳ ಬಾಯಿ ಮುಚ್ಚಿಸುವುದಕ್ಕಾಗಿಯೇ ನೀನು ಹೀಗೆ ಮಾಡಿರುವೆ.
3 ನಿನ್ನ ಕೈಕೆಲಸವಾಗಿರುವ ಆಕಾಶಮಂಡಲವನ್ನೂ
ನೀನು ಸೃಷ್ಟಿಸಿದ ಚಂದ್ರನಕ್ಷತ್ರಗಳನ್ನೂ ನೋಡಿ ಆಶ್ಚರ್ಯಗೊಳ್ಳುವೆನು.
4 ಮನುಷ್ಯರಿಗೆ ನೀನೇಕೆ ಪ್ರಾಮುಖ್ಯತೆ ಕೊಡಬೇಕು?
ನೀನೇಕೆ ಅವರನ್ನು ಜ್ಞಾಪಿಸಿಕೊಳ್ಳಬೇಕು?
ಮನುಷ್ಯರು ಎಷ್ಟರವರು?
ನೀನೇಕೆ ಅವರನ್ನು ಗಣನೆಗೆ ತೆಗೆದುಕೊಳ್ಳಬೇಕು?
5 ಆದರೆ ನೀನು ಮನುಷ್ಯರಿಗೆ ಪ್ರಾಮುಖ್ಯತೆ ಕೊಟ್ಟಿರುವೆ.
ನೀನು ಅವರನ್ನು ದೇವದೂತರಿಗಿಂತ ಸ್ವಲ್ಪವೇ ಕಡಿಮೆಯಾಗಿ ಸೃಷ್ಟಿಸಿದೆ.
ನೀನು ಅವರಿಗೆ ಪ್ರಭಾವವನ್ನೂ ಮಾನವನ್ನೂ ಕಿರೀಟವಾಗಿಟ್ಟಿರುವೆ.
6 ನೀನು ಸೃಷ್ಟಿಸಿದ ಪ್ರತಿಯೊಂದರ ಮೇಲೂ ಅವರನ್ನು ಅಧಿಪತಿಯನ್ನಾಗಿ ಮಾಡಿರುವೆ.
ನೀನು ಪ್ರತಿಯೊಂದನ್ನೂ ಅವರಿಗೆ ಅಧೀನಗೊಳಿಸಿರುವೆ.
7 ಅವರು ಎಲ್ಲಾ ಪಶುಗಳ ಮೇಲೆಯೂ ಕಾಡುಪ್ರಾಣಿಗಳ ಮೇಲೆಯೂ ದೊರೆತನ ಮಾಡುವರು.
8 ಆಕಾಶದ ಪಕ್ಷಿಗಳ ಮೇಲೆಯೂ ಸಾಗರದ ಮೀನುಗಳ ಮೇಲೆಯೂ
ದೊರೆತನ ಮಾಡುವರು.
9 ನಮ್ಮ ದೇವರಾದ ಯೆಹೋವನೇ, ನಿನ್ನ ಹೆಸರು ಭೂಲೋಕದಲ್ಲೆಲ್ಲಾ ಎಷ್ಟೋ ಅತಿಶಯವಾಗಿದೆ.
ಜ್ಞಾನ ವಿವೇಕಗಳ ಪ್ರಾಮುಖ್ಯತೆ
4 ಮಕ್ಕಳೇ, ನಿಮ್ಮ ತಂದೆಯ ಉಪದೇಶಗಳಿಗೆ ಕಿವಿಗೊಡಿ, ಗಮನವಿಟ್ಟು ಅರ್ಥಮಾಡಿಕೊಳ್ಳಿರಿ. 2 ನನ್ನ ಉಪದೇಶಗಳು ಸದುಪದೇಶಗಳಾಗಿರುವುದರಿಂದ ಅವುಗಳನ್ನು ಎಂದಿಗೂ ಮರೆಯಬೇಡಿ.
3 ನಾನು ನನ್ನ ತಂದೆಗೆ ಚಿಕ್ಕ ಮಗನಾಗಿದ್ದೆ. ನನ್ನ ತಾಯಿಗೆ ನಾನೊಬ್ಬನೇ ಮಗನು. 4 ನನ್ನ ತಂದೆ ನನಗೆ ಉಪದೇಶ ಮಾಡಿದ್ದೇನೆಂದರೆ: “ನನ್ನ ಮಾತುಗಳನ್ನು ನೆನಪುಮಾಡಿಕೊ; ನನ್ನ ಆಜ್ಞೆಗಳಿಗೆ ವಿಧೇಯನಾಗು, ಆಗ ನೀನು ಬದುಕುವೆ. 5 ಜ್ಞಾನವನ್ನು ಮತ್ತು ವಿವೇಕವನ್ನು ಪಡೆದುಕೋ! ನನ್ನ ಮಾತುಗಳನ್ನು ಮರೆಯಬೇಡ. ಯಾವಾಗಲೂ ನನ್ನ ಉಪದೇಶಗಳನ್ನು ಅನುಸರಿಸು. 6 ಜ್ಞಾನವನ್ನು ಬಿಟ್ಟು ಬೇರೆ ಕಡೆಗೆ ತಿರುಗಿಕೊಳ್ಳಬೇಡ. ಆಗ ಅದು ನಿನ್ನನ್ನು ಕಾಪಾಡುವುದು. ಜ್ಞಾನವನ್ನು ಪ್ರೀತಿಸು, ಆಗ ಅದು ನಿನ್ನನ್ನು ಕಾಪಾಡುವುದು.”
7 “ಜ್ಞಾನವನ್ನು ಪಡೆಯಲು ನೀನು ನಿರ್ಧರಿಸಿದಾಗಲೇ ಜ್ಞಾನವು ನಿನ್ನಲ್ಲಿ ಆರಂಭವಾಗುತ್ತದೆ. ಆದ್ದರಿಂದ ವಿವೇಕವನ್ನು ಪಡೆಯಲು ನಿನಗಿರುವದನ್ನೆಲ್ಲಾ ಉಪಯೋಗಿಸು. ಆಗ ನೀನು ವಿವೇಕಿಯಾಗುವೆ. 8 ಜ್ಞಾನವನ್ನು ಪ್ರೀತಿಸು, ಆಗ ಅದು ನಿನ್ನನ್ನು ಉನ್ನತಸ್ಥಾನಕ್ಕೆ ತರುವುದು. ಜ್ಞಾನವನ್ನು ಅಪ್ಪಿಕೊ; ಆಗ ಅದು ನಿನಗೆ ಸನ್ಮಾನವನ್ನು ತರುವುದು. 9 ಅದು ನಿನಗೆ ಅಂದವಾದ ಪುಷ್ಪಮಾಲೆಯಂತೆಯೂ ಸುಂದರವಾದ ಕಿರೀಟದಂತೆಯೂ ಇರುವುದು.”
ಬಾಲಕ ಯೇಸು
41 ಪ್ರತಿವರ್ಷ ಯೇಸುವಿನ ತಂದೆತಾಯಿಗಳು ಪಸ್ಕಹಬ್ಬಕ್ಕಾಗಿ[a] ಜೆರುಸಲೇಮಿಗೆ ಹೋಗುತ್ತಿದ್ದರು. 42 ಯೇಸುವಿಗೆ ಹನ್ನೆರಡು ವರ್ಷವಾಗಿದ್ದಾಗ ಎಂದಿನಂತೆ ಅವರು ಪಸ್ಕ ಹಬ್ಬಕ್ಕಾಗಿ ಜೆರುಸಲೇಮಿಗೆ ಹೋದರು. 43 ಹಬ್ಬದ ದಿನಗಳು ಮುಗಿದ ನಂತರ ಅವರು ಮನೆಗೆ ಹೋದರು. ಆದರೆ ಬಾಲಕನಾದ ಯೇಸು ಜೆರುಸಲೇಮಿನಲ್ಲಿ ಉಳಿದುಕೊಂಡನು. ಆತನ ತಂದೆತಾಯಿಗಳಿಗೆ ಇದು ತಿಳಿದಿರಲಿಲ್ಲ. ಯೇಸುವು ಯಾತ್ರಿಕರ ಗುಂಪಿನಲ್ಲಿರಬಹುದೆಂದು ಭಾವಿಸಿಕೊಂಡ 44 ಯೋಸೇಫನು ಮತ್ತು ಮರಿಯಳು ಒಂದು ದಿನವೆಲ್ಲ ಪ್ರಯಾಣ ಮಾಡಿದರು. ನಂತರ ಮಗನನ್ನು ಕಾಣದೆ ತಮ್ಮ ಕುಟುಂಬದವರ ಮತ್ತು ಆಪ್ತಸ್ನೇಹಿತರ ಮಧ್ಯದಲ್ಲಿ ಆತನಿಗಾಗಿ ಹುಡುಕತೊಡಗಿದರು. 45 ಆದರೆ ಅಲ್ಲೆಲ್ಲೂ ಕಾಣದೆ ಯೇಸುವನ್ನು ಹುಡುಕಲು ಜೆರುಸಲೇಮಿಗೆ ಮರಳಿಹೋದರು.
46 ಮೂರು ದಿನಗಳಾದ ಮೇಲೆ ಆತನನ್ನು ಕಂಡುಕೊಂಡರು. ಯೇಸುವು ದೇವಾಲಯದಲ್ಲಿ ಧಾರ್ಮಿಕ ಉಪದೇಶಕರೊಡನೆ ಕುಳಿತುಕೊಂಡು ಅವರ ಉಪದೇಶವನ್ನು ಆಲಿಸುತ್ತಾ ಮತ್ತು ಅವರಿಗೆ ಪ್ರಶೆಗಳನ್ನು ಕೇಳುತ್ತಾ ಇದ್ದನು. 47 ಆತನ ಮಾತುಗಳನ್ನು ಕೇಳಿ ಆತನ ತಿಳುವಳಿಕೆಗೂ ಆತನ ಬುದ್ಧಿವಂತಿಕೆಯ ಉತ್ತರಗಳಿಗೂ ಅವರೆಲ್ಲರೂ ಆಶ್ಚರ್ಯಪಟ್ಟರು. 48 ಯೇಸುವಿನ ತಂದೆತಾಯಿಗಳು ಆತನನ್ನು ಅಲ್ಲಿ ಕಂಡು ಆಶ್ಚರ್ಯಪಟ್ಟರು. ಮರಿಯಳು ಆತನಿಗೆ, “ಮಗನೇ, ನೀನು ನಮಗೆ ಏಕೆ ಹೀಗೆ ಮಾಡಿದೆ? ನಿನ್ನ ತಂದೆ ಮತ್ತು ನಾನು ನಿನಗಾಗಿ ಬಹಳ ಚಿಂತಿಸುತ್ತಿದ್ದೆವು. ನಿನಗೋಸ್ಕರ ನಾವು ಹುಡುಕುತ್ತಿದ್ದೆವು” ಎಂದು ಹೇಳಿದಳು.
49 ಯೇಸು ಅವರಿಗೆ, “ನೀವು ನನಗೋಸ್ಕರ ಏಕೆ ಹುಡುಕಬೇಕಿತ್ತು? ನನ್ನ ತಂದೆಯ (ದೇವರ) ಕೆಲಸ ಎಲ್ಲಿರುತ್ತದೋ ಅಲ್ಲಿ ನಾನು ಇರಬೇಕು ಎಂಬುದನ್ನು ನೀವು ತಿಳಿದಿರಬೇಕಾಗಿತ್ತು!” ಎಂದು ಹೇಳಿದನು. 50 ಆದರೆ ಆತನ ಮಾತು ಅವರಿಗೆ ಅರ್ಥವಾಗಲಿಲ್ಲ.
51 ಯೇಸು ಅವರೊಡನೆ ನಜರೇತಿಗೆ ಬಂದು ಅವರಿಗೆ ವಿಧೇಯನಾಗಿದ್ದನು. ಆತನ ತಾಯಿ ಈ ವಿಷಯಗಳನ್ನೆಲ್ಲಾ ಇನ್ನೂ ಆಲೋಚಿಸುತ್ತಿದ್ದಳು. 52 ಯೇಸುವು ಜ್ಞಾನದಲ್ಲಿಯೂ ದೇಹಬಲದಲ್ಲಿಯೂ ವೃದ್ಧಿಯಾಗುತ್ತಾ ಬಂದನು. ದೇವರಿಗೂ ಜನರಿಗೂ ಅಚ್ಚುಮೆಚ್ಚಾದನು.
Kannada Holy Bible: Easy-to-Read Version. All rights reserved. © 1997 Bible League International