Revised Common Lectionary (Semicontinuous)
ರಚನೆಗಾರ: ದಾವೀದ.
8 ನಮ್ಮ ಒಡೆಯನಾದ ಯೆಹೋವನೇ, ನಿನ್ನ ಹೆಸರು ಭೂಲೋಕದಲ್ಲೆಲ್ಲಾ ಅತಿಶಯವಾದದ್ದು.
ನಿನ್ನ ಹೆಸರು ಪರಲೋಕದಲ್ಲೆಲ್ಲಾ ನಿನ್ನನ್ನು ಮಹಿಮೆಪಡಿಸುವುದು.
2 ಚಿಕ್ಕಮಕ್ಕಳ ಬಾಯಿಗಳೂ ಕೂಸುಗಳ ಬಾಯಿಗಳೂ ನಿನ್ನನ್ನು ಸ್ತುತಿಸಿ ಕೊಂಡಾಡುತ್ತವೆ;
ನಿನ್ನ ವೈರಿಗಳ ಬಾಯಿ ಮುಚ್ಚಿಸುವುದಕ್ಕಾಗಿಯೇ ನೀನು ಹೀಗೆ ಮಾಡಿರುವೆ.
3 ನಿನ್ನ ಕೈಕೆಲಸವಾಗಿರುವ ಆಕಾಶಮಂಡಲವನ್ನೂ
ನೀನು ಸೃಷ್ಟಿಸಿದ ಚಂದ್ರನಕ್ಷತ್ರಗಳನ್ನೂ ನೋಡಿ ಆಶ್ಚರ್ಯಗೊಳ್ಳುವೆನು.
4 ಮನುಷ್ಯರಿಗೆ ನೀನೇಕೆ ಪ್ರಾಮುಖ್ಯತೆ ಕೊಡಬೇಕು?
ನೀನೇಕೆ ಅವರನ್ನು ಜ್ಞಾಪಿಸಿಕೊಳ್ಳಬೇಕು?
ಮನುಷ್ಯರು ಎಷ್ಟರವರು?
ನೀನೇಕೆ ಅವರನ್ನು ಗಣನೆಗೆ ತೆಗೆದುಕೊಳ್ಳಬೇಕು?
5 ಆದರೆ ನೀನು ಮನುಷ್ಯರಿಗೆ ಪ್ರಾಮುಖ್ಯತೆ ಕೊಟ್ಟಿರುವೆ.
ನೀನು ಅವರನ್ನು ದೇವದೂತರಿಗಿಂತ ಸ್ವಲ್ಪವೇ ಕಡಿಮೆಯಾಗಿ ಸೃಷ್ಟಿಸಿದೆ.
ನೀನು ಅವರಿಗೆ ಪ್ರಭಾವವನ್ನೂ ಮಾನವನ್ನೂ ಕಿರೀಟವಾಗಿಟ್ಟಿರುವೆ.
6 ನೀನು ಸೃಷ್ಟಿಸಿದ ಪ್ರತಿಯೊಂದರ ಮೇಲೂ ಅವರನ್ನು ಅಧಿಪತಿಯನ್ನಾಗಿ ಮಾಡಿರುವೆ.
ನೀನು ಪ್ರತಿಯೊಂದನ್ನೂ ಅವರಿಗೆ ಅಧೀನಗೊಳಿಸಿರುವೆ.
7 ಅವರು ಎಲ್ಲಾ ಪಶುಗಳ ಮೇಲೆಯೂ ಕಾಡುಪ್ರಾಣಿಗಳ ಮೇಲೆಯೂ ದೊರೆತನ ಮಾಡುವರು.
8 ಆಕಾಶದ ಪಕ್ಷಿಗಳ ಮೇಲೆಯೂ ಸಾಗರದ ಮೀನುಗಳ ಮೇಲೆಯೂ
ದೊರೆತನ ಮಾಡುವರು.
9 ನಮ್ಮ ದೇವರಾದ ಯೆಹೋವನೇ, ನಿನ್ನ ಹೆಸರು ಭೂಲೋಕದಲ್ಲೆಲ್ಲಾ ಎಷ್ಟೋ ಅತಿಶಯವಾಗಿದೆ.
19 ಯೆಹೋವನು ಜ್ಞಾನದ ಮೂಲಕ ಭೂಮಿಯನ್ನು ಸೃಷ್ಟಿಸಿದನು. ಆತನು ವಿವೇಕದ ಮೂಲಕ ಆಕಾಶವನ್ನು ಸೃಷ್ಟಿಸಿದನು. 20 ಯೆಹೋವನು ತನ್ನ ತಿಳುವಳಿಕೆಯಿಂದ ಸಮುದ್ರಗಳನ್ನು ವಿಭಜಿಸಿದನು. ಮೋಡವು ಮಳೆಸುರಿಸುವುದಕ್ಕೆ ಆತನ ತಿಳುವಳಿಕೆಯೇ ಕಾರಣ.
21 ನನ್ನ ಮಗನೇ, ಜ್ಞಾನವನ್ನೂ ಬುದ್ಧಿಯನ್ನೂ ಭದ್ರವಾಗಿಟ್ಟುಕೋ. ನಿನ್ನ ದೃಷ್ಟಿಯು ಅವುಗಳ ಮೇಲೇ ಇರಲಿ. 22 ಜ್ಞಾನವಿವೇಕಗಳು ನಿನಗೆ ಜೀವವನ್ನೂ ನಿನ್ನ ಜೀವಿತಕ್ಕೆ ಸೌಂದರ್ಯವನ್ನೂ ನೀಡುತ್ತವೆ. 23 ಆಗ ನೀನು ಎಡವಿಬೀಳದೆ ಸುರಕ್ಷಿತವಾಗಿ ನಡೆಯುವೆ. 24 ಆಗ ನೀನು ನಿರ್ಭಯದಿಂದ ಮಲಗಿಕೊಂಡು ಸುಖವಾಗಿ ನಿದ್ರಿಸುವೆ. 25 ದುಷ್ಟರ ಮೇಲೆ ಇದ್ದಕ್ಕಿದ್ದಂತೆ ಬರುವ ಅಪಾಯಕ್ಕಾಗಲಿ ನಾಶನಕ್ಕಾಗಲಿ ಹೆದರಿಕೊಳ್ಳಬೇಡ. 26 ಯೆಹೋವನು ನಿನ್ನೊಂದಿಗಿದ್ದಾನೆ. ನೀನು ಬಲೆಗೆ ಸಿಕ್ಕಿಬೀಳದಂತೆ ಆತನು ನಿನ್ನನ್ನು ಕಾಪಾಡುತ್ತಾನೆ.
ದೇಹದ ಐಕ್ಯತೆ
4 ನಾನು ಪ್ರಭುವಿಗೆ ಸೇರಿದವನಾದ್ದರಿಂದ ಸೆರೆಯಲ್ಲಿದ್ದೇನೆ. ನೀವು ದೇವರಿಂದ ಕರಯಲ್ಪಟ್ಟಿದ್ದೀರಿ. ಆದ್ದರಿಂದ ನಿಮ್ಮ ಕರೆಯುವಿಕೆಗೆ ತಕ್ಕಂತೆ ಯೋಗ್ಯವಾಗಿ ಜೀವಿಸಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. 2 ಯಾವಾಗಲೂ ದೀನತೆಯಿಂದ, ಸಾತ್ವಿಕತೆಯಿಂದ ಮತ್ತು ತಾಳ್ಮೆಯಿಂದ ಕೂಡಿದವರಾಗಿದ್ದು ಒಬ್ಬರನ್ನೊಬ್ಬರು ಪ್ರೀತಿಯಿಂದ ಸಹಿಸಿಕೊಳ್ಳಿರಿ. 3 ನೀವು ಆತ್ಮನ ಮೂಲಕವಾಗಿ ಸಮಾಧಾನವೆಂಬ ಬಂಧನದಿಂದ ಒಂದಾಗಿದ್ದೀರಿ. ಈ ರೀತಿ ಜೀವಿಸಲು ನಿಮ್ಮಿಂದ ಸಾಧ್ಯವಾದಷ್ಟು ಪ್ರಯತ್ನಿಸಿ. ಸಮಾಧಾನವು ನಿಮ್ಮೆಲ್ಲರನ್ನು ಒಂದಾಗಿಸಲಿ. 4 ದೇಹವು ಒಂದೇ ಮತ್ತು ಆತ್ಮನು ಒಬ್ಬನೇ. ನೀವೆಲ್ಲರೂ ಒಂದೇ ನಿರೀಕ್ಷೆಯನ್ನು ಹೊಂದಿರಬೇಕೆಂದು ದೇವರು ನಿಮ್ಮನ್ನು ಕರೆದನು. 5 ಒಬ್ಬನೇ ಪ್ರಭು, ಒಂದೇ ನಂಬಿಕೆ, ಒಂದೇ ದೀಕ್ಷಾಸ್ನಾನ. 6 ಎಲ್ಲರಿಗೂ ತಂದೆಯಾಗಿರುವ ದೇವರು ಒಬ್ಬನೇ. ಆತನು ಸಮಸ್ತವನ್ನೂ ಆಳುತ್ತಾನೆ. ಆತನು ಸರ್ವವ್ಯಾಪಿಯಾಗಿದ್ದಾನೆ ಮತ್ತು ಎಲ್ಲರಲ್ಲಿ ವಾಸಿಸುವವನಾಗಿದ್ದಾನೆ.
Kannada Holy Bible: Easy-to-Read Version. All rights reserved. © 1997 Bible League International