Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 104:24-34

24 ಯೆಹೋವನೇ, ನೀನು ಅನೇಕ ಆಶ್ಚರ್ಯಕರವಾದ ಕಾರ್ಯಗಳನ್ನು ಮಾಡಿರುವೆ.
    ನೀನು ಸೃಷ್ಟಿಸಿದ ವಸ್ತುಗಳಿಂದ ಭೂಮಿಯು ತುಂಬಿಹೋಗಿದೆ.
    ನಿನ್ನ ಪ್ರತಿಯೊಂದು ಕಾರ್ಯದಲ್ಲೂ ನಿನ್ನ ಜ್ಞಾನವನ್ನು ಕಾಣಬಲ್ಲವು.
25 ಇಗೋ ವಿಶಾಲವಾದ ಸಮುದ್ರವನ್ನು ನೋಡು.
    ಅದರೊಳಗೆ ಅನೇಕ ಬಗೆಯ ದೊಡ್ಡ ಜೀವಿಗಳೂ
    ನಾನಾ ಬಗೆಯ ಚಿಕ್ಕ ಜೀವಿಗಳೂ ಅಸಂಖ್ಯಾತವಾಗಿವೆ.
26 ನೀನು ಸೃಷ್ಟಿಸಿದ ಲಿವ್ಯಾತಾನನು ಸಮುದ್ರದಲ್ಲಿ ಆಟವಾಡುತ್ತಿದ್ದರೂ
    ಹಡಗು ಸಮುದ್ರದ ಮೇಲೆ ಸಂಚರಿಸುವುದು.

27 ಈ ಜೀವಿಗಳೆಲ್ಲಾ ನಿನ್ನನ್ನು ಅವಲಂಭಿಸಿಕೊಂಡಿವೆ.
    ಅವುಗಳಿಗೆ ಸರಿಸಮಯದಲ್ಲಿ ಆಹಾರವನ್ನು ಕೊಡುವಾತನು ನೀನೇ.
28 ಸರ್ವಜೀವಿಗಳಿಗೆ ಆಹಾರವನ್ನು ಕೊಡುವಾತನು ನೀನೇ.
    ನೀನು ಕೈತೆರೆದು ಒಳ್ಳೆಯ ಆಹಾರವನ್ನು ಕೊಡಲು ಅವು ತಿಂದು ತೃಪ್ತಿಯಾಗುತ್ತವೆ.
29 ನೀನು ಅವುಗಳಿಗೆ ವಿಮುಖನಾದಾಗ
    ಅವು ಭಯಗೊಳ್ಳುತ್ತವೆ.
ಅವುಗಳ ಶ್ವಾಸವು ಹೋಗಿ
    ಬಲಹೀನತೆಯಿಂದ ಸತ್ತು ಮತ್ತೆ ಮಣ್ಣಾಗುತ್ತವೆ.
30 ನಿನ್ನ ಜೀವಶ್ವಾಸವನ್ನು ಊದುವಾಗ ಅವು ಸೃಷ್ಟಿಯಾಗುತ್ತವೆ.
    ನೀನು ಭೂಮಿಯನ್ನು ಮತ್ತೆ ನೂತನ ಪಡಿಸುವೆ.

31 ಯೆಹೋವನ ಮಹಿಮೆಯು ಶಾಶ್ವತವಾಗಿರಲಿ!
    ಯೆಹೋವನು ತಾನು ಸೃಷ್ಟಿಸಿದವುಗಳಲ್ಲಿ ಆನಂದಿಸಲಿ.
32 ಆತನು ಭೂಮಿಯ ಕಡೆಗೆ ನೋಡಿದರೆ ಸಾಕು,
    ಭೂಮಿಯು ನಡುಗುವುದು;
ಆತನು ಬೆಟ್ಟಗಳನ್ನು ಮುಟ್ಟಿದರೆ ಸಾಕು,
    ಅವು ಜ್ವಾಲಾಮುಖಿಗಳಾಗುತ್ತವೆ.

33 ನನ್ನ ಜೀವಮಾನವೆಲ್ಲಾ ನಾನು ಯೆಹೋವನಿಗೆ ಗಾನ ಮಾಡುವೆನು.
    ನಾನು ಬದುಕಿರುವವರೆಗೂ ಆತನನ್ನು ಸಂಕೀರ್ತಿಸುವೆನು.
34 ನಾನು ಹೇಳಿದ ಈ ವಿಷಯಗಳು ಆತನನ್ನು ಸಂತೋಷಗೊಳಿಸಲಿ.
    ನಾನಾದರೋ ಯೆಹೋವನಲ್ಲಿ ಸಂತೋಷಿಸುವೆನು.

ಕೀರ್ತನೆಗಳು 104:35

35 ಪಾಪಾತ್ಮರು ಭೂಮಿಯಿಂದ ಕಾಣದೆಹೋಗಲಿ.
    ದುಷ್ಟರು ಎಂದೆಂದಿಗೂ ನಿರ್ಮೂಲವಾಗಲಿ.
ನನ್ನ ಆತ್ಮವೇ, ಯೆಹೋವನನ್ನು ಸ್ತುತಿಸು!

ಯೆಹೋವನನ್ನು ಕೊಂಡಾಡು!

2 ರಾಜರುಗಳು 2:1-15

ಎಲೀಯನ ಪರಲೋಕಾರೋಹಣ

ಯೆಹೋವನು ಎಲೀಯನನ್ನು ಸುಂಟರಗಾಳಿಯ ಮೂಲಕ ಪರಲೋಕಕ್ಕೆ ಕರೆದುಕೊಳ್ಳುವ ಕಾಲ ಹತ್ತಿರ ಬಂದಿತು. ಎಲೀಯನು ಎಲೀಷನೊಡನೆ ಗಿಲ್ಗಾಲಿನಿಂದ ಹೋದನು.

ಎಲೀಯನು ಎಲೀಷನಿಗೆ, “ದಯವಿಟ್ಟು ಇಲ್ಲಿಯೇ ಇರು; ಏಕೆಂದರೆ ಬೇತೇಲಿಗೆ ಹೋಗುವಂತೆ ಯೆಹೋವನು ನನಗೆ ಆಜ್ಞಾಪಿಸಿದ್ದಾನೆ” ಎಂದು ಹೇಳಿದನು.

ಆದರೆ ಎಲೀಷನು, “ಯೆಹೋವನಾಣೆ, ನಿನ್ನಾಣೆ, ನಾನು ನಿನ್ನನ್ನು ಬಿಟ್ಟಿರುವುದಿಲ್ಲವೆಂದು ಪ್ರಮಾಣ ಮಾಡುತ್ತೇನೆ” ಎಂದು ಹೇಳಿದನು. ಇಬ್ಬರೂ ಬೇತೇಲಿಗೆ ಹೋದರು.

ಬೇತೇಲಿನಲ್ಲಿ ಪ್ರವಾದಿಗಳ ಗುಂಪೊಂದು ಎಲೀಷನ ಬಳಿಗೆ ಬಂದು, ಅವನಿಗೆ, “ಯೆಹೋವನು ಈ ದಿನ ನಿನ್ನ ಒಡೆಯನನ್ನು ನಿನ್ನಿಂದ ತೆಗೆದುಕೊಳ್ಳುತ್ತಾನೆಂಬುದು ನಿನಗೆ ತಿಳಿದಿದೆಯೇ?” ಎಂದು ಕೇಳಿದರು.

ಎಲೀಷನು, “ಹೌದು, ನನಗೆ ಅದು ತಿಳಿದಿದೆ. ಅದರ ಬಗ್ಗೆ ಮಾತನಾಡಬೇಡಿ” ಎಂದನು.

ಎಲೀಯನು ಎಲೀಷನಿಗೆ, “ದಯವಿಟ್ಟು ಇಲ್ಲಿಯೇ ಇರು, ಏಕೆಂದರೆ ಯೆಹೋವನು ಜೆರಿಕೊವಿಗೆ ಹೋಗುವಂತೆ ನನಗೆ ಆಜ್ಞಾಪಿಸಿದ್ದಾನೆ” ಎಂದು ಹೇಳಿದನು.

ಆದರೆ ಎಲೀಷನು, “ಯೆಹೋವನಾಣೆ, ನಿನ್ನಾಣೆ, ನಾನು ನಿನ್ನನ್ನು ಬಿಟ್ಟಿರುವುದಿಲ್ಲವೆಂದು ಪ್ರಮಾಣ ಮಾಡುತ್ತೇನೆ!” ಎಂದು ಹೇಳಿದನು. ಇಬ್ಬರೂ ಜೆರಿಕೊವಿಗೆ ಹೋದರು.

ಜೆರಿಕೊದಲ್ಲಿ ಪ್ರವಾದಿಗಳ ಗುಂಪೊಂದು ಎಲೀಷನ ಬಳಿಗೆ ಬಂದು ಅವನಿಗೆ, “ಯೆಹೋವನು ಈ ದಿನ ನಿನ್ನ ಒಡೆಯನನ್ನು ನಿನ್ನಿಂದ ತೆಗೆದುಕೊಳ್ಳುತ್ತಾನೆಂಬುದು ನಿನಗೆ ತಿಳಿದಿದೆಯೇ?” ಎಂದು ಕೇಳಿದರು.

ಎಲೀಷನು, “ಹೌದು, ನನಗೆ ಅದು ತಿಳಿದಿದೆ. ಅದರ ಬಗ್ಗೆ ಮಾತನಾಡಬೇಡಿ” ಎಂದನು.

ಎಲೀಯನು ಎಲೀಷನಿಗೆ, “ದಯವಿಟ್ಟು ಇಲ್ಲಿಯೇ ಇರು, ಏಕೆಂದರೆ ಯೆಹೋವನು ಜೋರ್ಡನ್ ನದಿಗೆ ಹೋಗುವಂತೆ ನನಗೆ ಆಜ್ಞಾಪಿಸಿದ್ದಾನೆ” ಎಂದು ಹೇಳಿದನು.

ಎಲೀಷನು, “ಯೆಹೋವನಾಣೆ, ನಿನ್ನಾಣೆ, ನಾನು ನಿನ್ನನ್ನು ಬಿಟ್ಟಿರುವುದಿಲ್ಲವೆಂದು ಪ್ರಮಾಣ ಮಾಡುತ್ತೇನೆ” ಎಂದು ಹೇಳಿದನು. ಅವರಿಬ್ಬರೂ ಮುಂದೆ ಸಾಗಿದರು.

ಅವರನ್ನು ಹಿಂಬಾಲಿಸಿಕೊಂಡು ಬಂದ ಪ್ರವಾದಿಗಳ ಗುಂಪಿನಲ್ಲಿ ಐವತ್ತು ಮಂದಿ ಅಲ್ಲಿದ್ದರು. ಎಲೀಯ ಮತ್ತು ಎಲೀಷರು ಜೋರ್ಡನ್ ನದಿಯ ಹತ್ತಿರ ನಿಂತುಕೊಂಡರು. ಆ ಐವತ್ತು ಮಂದಿ ಜನರು ಎಲೀಯ ಮತ್ತು ಎಲೀಷರಿಗಿಂತ ಬಹುದೂರದಲ್ಲಿ ನಿಂತುಕೊಂಡರು. ಎಲೀಯನು ತನ್ನ ಮೇಲಂಗಿಯನ್ನು ತೆಗೆದು ಅದರಿಂದ ನೀರನ್ನು ಹೊಡೆದನು. ಆಗ ನೀರು ಎರಡು ಭಾಗವಾಗಿ ಬಲಗಡೆಯಲ್ಲಿಯೂ ಎಡಗಡೆಯಲ್ಲಿಯೂ ನಿಂತುಕೊಂಡಿತು. ನಂತರ ಎಲೀಯ ಮತ್ತು ಎಲೀಷರು ಒಣನೆಲದ ಮೇಲೆ ನದಿಯನ್ನು ದಾಟಿದರು.

ಅವರು ನದಿಯನ್ನು ದಾಟಿದ ಮೇಲೆ ಎಲೀಯನು ಎಲೀಷನಿಗೆ, “ದೇವರು ನನ್ನನ್ನು ನಿನ್ನಿಂದ ತೆಗೆದುಕೊಳ್ಳುವುದಕ್ಕೆ ಮುಂಚೆ, ನಾನು ನಿನಗೆ ಏನು ಮಾಡಬೇಕೆಂದು ನೀನು ಅಪೇಕ್ಷಿಸುವೆ?” ಎಂದು ಕೇಳಿದನು.

ಎಲೀಷನು, “ನಿನ್ನ ಆತ್ಮವು ನನ್ನ ಮೇಲೆ ಎರಡರಷ್ಟಿರಬೇಕೆಂದು ನಾನು ನಿನ್ನಲ್ಲಿ ಬೇಡುತ್ತೇನೆ” ಎಂದು ಹೇಳಿದನು.

10 ಎಲೀಯನು, “ನೀನು ಕಷ್ಟಕರವಾದುದನ್ನು ಬೇಡಿಕೊಂಡೆ. ನಿನ್ನಿಂದ ನನ್ನನ್ನು ತೆಗೆದುಕೊಳ್ಳುವಾಗ ನೀನು ನನ್ನನ್ನು ಕಂಡರೆ, ಅದು ನಿನಗೆ ದೊರೆಯುವುದು. ಆದರೆ ನಿನ್ನಿಂದ ನನ್ನನ್ನು ತೆಗೆದುಕೊಳ್ಳುವಾಗ ನೀನು ನನ್ನನ್ನು ಕಾಣದಿದ್ದರೆ, ಅದು ನಿನಗೆ ದೊರೆಯುವುದಿಲ್ಲ” ಎಂದು ಹೇಳಿದನು.

11 ಎಲೀಯ ಮತ್ತು ಎಲೀಷ ಒಟ್ಟಿಗೆ ನಡೆಯುತ್ತಾ ಮಾತನಾಡುತ್ತಿದ್ದರು. ಇದ್ದಕ್ಕಿದ್ದಂತೆ, ಕೆಲವು ಕುದುರೆಗಳು ಮತ್ತು ರಥಗಳು ಬಂದು ಎಲೀಯನನ್ನು ಎಲೀಷನಿಂದ ಬೇರ್ಪಡಿಸಿದವು. ಆ ಕುದುರೆಗಳು ಮತ್ತು ರಥಗಳು ಬೆಂಕಿಯಂತಿದ್ದವು! ನಂತರ ಎಲೀಯನು ಸುಂಟರ ಗಾಳಿಯಲ್ಲಿ ಪರಲೋಕಕ್ಕೆ ಏರಿಹೋದನು.

12 ಎಲೀಷನು ಅದನ್ನು ನೋಡಿ, “ನನ್ನ ತಂದೆಯೇ! ನನ್ನ ತಂದೆಯೇ! ಇಸ್ರೇಲಿಗೆ ರಥರಥಾಶ್ವಗಳೂ ಮತ್ತು ಅಶ್ವದಳವೂ ಆಗಿದ್ದವನೇ!” ಎಂದು ಕೂಗಿಕೊಂಡನು.

ಎಲೀಷನು ಎಲೀಯನನ್ನು ಮತ್ತೆ ನೋಡಲಿಲ್ಲ. ಎಲೀಷನು ತನ್ನ ಬಟ್ಟೆಗಳನ್ನು ಹಿಡಿದುಕೊಂಡು, ತನ್ನ ದುಃಖವನ್ನು ತೋರ್ಪಡಿಸಲು ಅವುಗಳನ್ನು ಹರಿದು ತುಂಡುತುಂಡು ಮಾಡಿದನು. 13 ಎಲೀಯನ ಮೇಲಂಗಿಯು ನೆಲದ ಮೇಲೆ ಬಿತ್ತು. ಎಲೀಷನು ಅದನ್ನು ಎತ್ತಿಕೊಂಡು ಜೋರ್ಡನ್ ನದಿ ತೀರಕ್ಕೆ ಬಂದನು. ಆ ಕಂಬಳಿಯಿಂದ ನೀರನ್ನು ಹೊಡೆದು, “ಎಲೀಯನ ದೇವರಾದ ಯೆಹೋವನು ಎಲ್ಲಿದ್ದಾನೆ?” ಎಂದು ಕೇಳಿದನು. 14 ಎಲೀಷನು ನೀರನ್ನು ಹೊಡೆದಾಗ, ನೀರು ಎರಡು ಭಾಗವಾಗಿ ಬಲಗಡೆಯಲ್ಲೂ ಎಡಗಡೆಯಲ್ಲೂ ನಿಂತುಕೊಂಡಿತು! ಎಲೀಷನು ನದಿಯನ್ನು ದಾಟಿದನು.

ಎಲೀಯನ ಬಗ್ಗೆ ಪ್ರವಾದಿಗಳ ವಿಚಾರ

15 ಜೆರಿಕೊದಲ್ಲಿ ಪ್ರವಾದಿಗಳ ಗುಂಪೊಂದು ಎಲೀಷನನ್ನು ಕಂಡು, “ಎಲೀಯನ ಆತ್ಮವು ಈಗ ಎಲೀಷನ ಮೇಲಿದೆ!” ಎಂದು ಹೇಳಿ ಎಲೀಷನನ್ನು ಭೇಟಿಮಾಡಲು ಬಂದರು. ಅವರು ಎಲೀಷನಿಗೆ ಸಾಷ್ಟಾಂಗನಮಸ್ಕಾರ ಮಾಡಿದರು.

ಲೂಕ 1:5-17

ಜಕರೀಯ ಮತ್ತು ಎಲಿಜಬೇತ್

ಹೆರೋದನು[a] ಜುದೇಯವನ್ನು ಆಳುತ್ತಿದ್ದ ಕಾಲದಲ್ಲಿ ಜಕರೀಯನೆಂಬ ಒಬ್ಬ ಯಾಜಕನಿದ್ದನು. ಜಕರೀಯನು ಅಬೀಯನ ವರ್ಗಕ್ಕೆ[b] ಸೇರಿದವನು. ಜಕರೀಯನ ಹೆಂಡತಿ ಆರೋನನ ಕುಟುಂಬದವಳು. ಆಕೆಯ ಹೆಸರು ಎಲಿಜಬೇತ್. ಜಕರೀಯನು ಮತ್ತು ಎಲಿಜಬೇತಳು ನಿಜವಾಗಿಯೂ ದೇವರ ದೃಷ್ಟಿಯಲ್ಲಿ ಒಳ್ಳೆಯವರಾಗಿದ್ದರು. ಪ್ರಭುವಿನ (ದೇವರ) ಆಜ್ಞೆಗಳನ್ನೆಲ್ಲಾ ಕೈಕೊಂಡು ನಡೆಯುತ್ತಿದ್ದ ಅವರು, ಅದೇರೀತಿ ಬಾಳಲು ಇತರರಿಗೂ ಉಪದೇಶಿಸುತ್ತಿದ್ದರು. ಅವರು ತಪ್ಪಿಲ್ಲದವರಾಗಿದ್ದರು. ಅವರಿಗೆ ಮಕ್ಕಳಿರಲಿಲ್ಲ. ಎಲಿಜಬೇತಳು ಬಂಜೆಯಾಗಿದ್ದಳು; ಮತ್ತು ಅವರಿಬ್ಬರೂ ಬಹಳ ಮುಪ್ಪಿನವರಾಗಿದ್ದರು.

ಒಮ್ಮೆ ತನ್ನ ವರ್ಗದ ಸರದಿ ಬಂದಾಗ, ಜಕರೀಯನು ದೇವರ ಸನ್ನಿಧಿಯಲ್ಲಿ ಯಾಜಕಸೇವೆ ಸಲ್ಲಿಸುತ್ತಿದ್ದನು. ಯಾಜಕರು ಧೂಪವನು ಅರ್ಪಿಸುವುದಕ್ಕಾಗಿ ತಮ್ಮ ಸಂಪ್ರದಾಯದ ಪ್ರಕಾರ ಚೀಟಿಹಾಕಿ ಒಬ್ಬ ಯಾಜಕನನ್ನು ಆರಿಸುತ್ತಿದ್ದರು. ಈ ಸಲ ಅದು ಜಕರೀಯನ ಪಾಲಿಗೆ ಬಂದಿತು. ಆದ್ದರಿಂದ ಜಕರೀಯನು ಧೂಪ ಅರ್ಪಿಸುವುದಕ್ಕಾಗಿ ಪ್ರಭುವಿನ ಆಲಯದೊಳಗೆ ಹೋದನು. 10 ಹೊರಗಡೆ ಬಹು ಜನರಿದ್ದರು. ಧೂಪವನ್ನರ್ಪಿಸುತ್ತಿದ್ದ ಸಮಯದಲ್ಲಿ ಅವರು ಪ್ರಾರ್ಥಿಸುತ್ತಿದ್ದರು.

11 ಆಗ, ಧೂಪಪೀಠದ ಬಲಗಡೆಯಲ್ಲಿ, ಪ್ರಭುವಿನ ದೂತನೊಬ್ಬನು ಬಂದು ಜಕರೀಯನ ಮುಂದೆ ನಿಂತನು. 12 ಅವನು ದೇವದೂತನನ್ನು ನೋಡಿ ಗಲಿಬಿಲಿಗೊಂಡು ಬಹು ಭಯಪಟ್ಟನು. 13 ಆದರೆ ದೇವದೂತನು ಅವನಿಗೆ, “ಜಕರೀಯನೇ, ಹೆದರಬೇಡ. ನಿನ್ನ ಪ್ರಾರ್ಥನೆ ದೇವರಿಗೆ ಕೇಳಿಸಿತು. ನಿನ್ನ ಹೆಂಡತಿಯಾದ ಎಲಿಜಬೇತಳು ಒಂದು ಗಂಡುಮಗುವನ್ನು ಹೆರುವಳು. ನೀನು ಅವನಿಗೆ ಯೋಹಾನ ಎಂದು ಹೆಸರಿಡಬೇಕು. 14 ಅವನ ಜನನದಿಂದ ನಿಮಗೆ ಹರ್ಷಾನಂದವಾಗುವುದು. ಬಹುಜನರು ಸಂತೋಷಪಡುವರು. 15 ಪ್ರಭುವಿನ ದೃಷ್ಟಿಯಲ್ಲಿ ಯೋಹಾನನು ಮಹಾಪುರುಷನಾಗಿರುವನು. ಅವನು ದ್ರಾಕ್ಷಾರಸವನ್ನಾಗಲಿ ಮದ್ಯವನ್ನಾಗಲಿ ಕುಡಿಯುವುದಿಲ್ಲ. ಯೋಹಾನನು ಹುಟ್ಟಿದಂದಿನಿಂದಲೇ ಪವಿತ್ರಾತ್ಮಭರಿತನಾಗಿರುವನು.[c]

16 “ಅನೇಕ ಯೆಹೂದ್ಯರು ತಮ್ಮ ದೇವರಾದ ಪ್ರಭುವಿನ ಕಡೆಗೆ ತಿರುಗಿಕೊಳ್ಳಲು ಅವನು ಸಹಾಯ ಮಾಡುವನು. 17 ಅವನು ಪ್ರಭುವಿಗೆ ಮುಂದೂತನಾಗಿ ಹೋಗುವನು. ಅವನು ಎಲೀಯನ[d] ಗುಣಶಕ್ತಿಗಳಿಂದ ಕೂಡಿದವನಾಗಿರುವನು; ತಂದೆ ಮತ್ತು ಮಕ್ಕಳ ನಡುವೆ ಸಮಾಧಾನವನ್ನು ಉಂಟುಮಾಡುವನು; ಅವಿಧೇಯರಾದ ಅನೇಕರನ್ನು ನೀತಿವಂತರ ಜ್ಞಾನದ ಕಡೆಗೆ ನಡೆಸುವನು; ಜನರನ್ನು ಪ್ರಭುವಿನ ಆಗಮನಕ್ಕೆ ಸಿದ್ಧಪಡಿಸುವನು” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International