Revised Common Lectionary (Semicontinuous)
ರಚನೆಗಾರ: ದಾವೀದ.
29 ದೇವಪುತ್ರರೇ,[a] ಯೆಹೋವನನ್ನು ಸ್ತುತಿಸಿರಿ!
ಆತನ ಮಹಿಮೆಯನ್ನೂ ಶಕ್ತಿಯನ್ನೂ ಸ್ತುತಿಸಿರಿ.
2 ಯೆಹೋವನನ್ನು ಸ್ತುತಿಸುತ್ತಾ ಆತನ ಹೆಸರನ್ನು ಘನಪಡಿಸಿರಿ.
ಪರಿಶುದ್ಧ ವಸ್ತ್ರಗಳನ್ನು ಧರಿಸಿಕೊಂಡು ಆತನನ್ನು ಆರಾಧಿಸಿರಿ.[b]
3 ಯೆಹೋವನ ಸ್ವರವು ಸಮುದ್ರದ ಮೇಲೆ ಕೇಳಿ ಬರುವುದು.
ಮಹಾಸಾಗರದ ಮೇಲಿನ ಗುಡುಗಿನಂತೆ ಮಹಿಮಾಸ್ವರೂಪನಾದ ದೇವರ ಸ್ವರವು ಕೇಳಿಬರುವುದು.
4 ಯೆಹೋವನ ಸ್ವರವು
ಆತನ ಶಕ್ತಿಯನ್ನೂ ಮಹಿಮೆಯನ್ನೂ ತೋರ್ಪಡಿಸುವುದು.
5 ಯೆಹೋವನ ಸ್ವರವು ದೇವದಾರು ವೃಕ್ಷಗಳನ್ನು ತುಂಡುತುಂಡು ಮಾಡುತ್ತದೆ.
ಯೆಹೋವನು ಲೆಬನೋನಿನ ದೇವದಾರು ವೃಕ್ಷಗಳನ್ನೂ ಮುರಿದುಹಾಕುವನು.
6 ಯೆಹೋವನು ಲೆಬನೋನನ್ನು ನಡುಗಿಸಲು ಅದು ನರ್ತಿಸುತ್ತಿರುವ ಎಳೆಕರುವಿನಂತೆ ಕಾಣುತ್ತದೆ;
ಸಿರ್ಯೋನ್ ಪರ್ವತವು ಕಂಪಿಸುವಾಗ ಕುಣಿದಾಡುವ ಎಳೆ ಹೋರಿಯಂತೆ ಕಾಣುತ್ತದೆ.
7 ಯೆಹೋವನ ಗರ್ಜನಕ್ಕೆ ಮಿಂಚುಗಳು ಥಳಥಳನೆ ಹೊಳೆಯುತ್ತವೆ.
8 ಯೆಹೋವನ ಗರ್ಜನದಿಂದ ಅರಣ್ಯವು ಕಂಪಿಸುವುದು.
ಆತನ ಗರ್ಜನಕ್ಕೆ ಕಾದೇಶ್ ಅರಣ್ಯವು ನಡುಗುವುದು.
9 ಯೆಹೋವನ ಗರ್ಜನಕ್ಕೆ ಜಿಂಕೆಗಳು ಹೆದರಿಕೊಳ್ಳುತ್ತವೆ;
ಕಾಡಿನ ಮರಗಳು ಬರಿದಾಗುತ್ತವೆ;
ಆದರೆ ಆತನ ಆಲಯದಲ್ಲಿ ಜನರು ಆತನ ಮಹಿಮೆಯನ್ನು ಹಾಡಿಕೊಂಡಾಡುವರು.
10 ಜಲಪ್ರಳಯದ ಕಾಲದಲ್ಲೂ ಯೆಹೋವನು ರಾಜನಾಗಿದ್ದನು.
ಯೆಹೋವನು ಸದಾಕಾಲ ರಾಜನಾಗಿರುವನು.
11 ಯೆಹೋವನು ತನ್ನ ಜನರಿಗೆ ಬಲವನ್ನು ದಯಪಾಲಿಸಲಿ.
ಆತನು ತನ್ನ ಜನರಿಗೆ ಶಾಂತಿಯನ್ನು ಸ್ಥಾಪಿಸಲಿ.
ದೇವಾಲಯಕ್ಕೆ ಪವಿತ್ರ ಪೆಟ್ಟಿಗೆಯ ಆಗಮನ
2 ದಾವೀದನಗರದಲ್ಲಿದ್ದ ಅಂದರೆ ಚೀಯೋನಿನಲ್ಲಿದ್ದ ಒಡಂಬಡಿಕೆಯ ಪೆಟ್ಟಿಗೆಯನ್ನು ತರುವದಕ್ಕಾಗಿ ಸೊಲೊಮೋನನು ಇಸ್ರೇಲರ ಎಲ್ಲಾ ಹಿರಿಯರನ್ನು ಮತ್ತು ಕುಲಾಧಿಪತಿಗಳನ್ನು ಜೆರುಸಲೇಮಿಗೆ ಒಟ್ಟಾಗಿ ಕರೆಸಿದನು. 3 ಪರ್ಣಶಾಲೆಗಳ ಹಬ್ಬದ ದಿವಸ ಇಸ್ರೇಲರೆಲ್ಲರೂ ಅರಸನಾದ ಸೊಲೊಮೋನನ ಮುಂದೆ ಸೇರಿಬಂದರು. ಈ ಹಬ್ಬವು ವರ್ಷದ ಏಳನೆಯ ತಿಂಗಳಲ್ಲಿ ನಡೆಯಿತು.
4 ಇಸ್ರೇಲಿನ ಹಿರಿಯರೆಲ್ಲರೂ ಒಟ್ಟಾಗಿ ಸೇರಿಬಂದಾಗ ಲೇವಿಯರು ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯನ್ನು ಹೊತ್ತುಕೊಂಡು ಜೆರುಸಲೇಮಿಗೆ ತಂದರು. 5 ಯಾಜಕರೂ ಲೇವಿಯರೂ ದೇವದರ್ಶನದ ಗುಡಾರವನ್ನು, ಅದರ ಪವಿತ್ರ ವಸ್ತುಗಳನ್ನು ಹೊತ್ತು ಜೆರುಸಲೇಮಿಗೆ ತಂದರು. 6 ಸೊಲೊಮೋನನು ಮತ್ತು ಇಸ್ರೇಲರೆಲ್ಲರೂ ಆ ಒಡಂಬಡಿಕೆಯ ಪೆಟ್ಟಿಗೆಯ ಮುಂದೆ ನೆರೆದು ಬಂದರು. ಸೊಲೊಮೋನನು ಮತ್ತು ಎಲ್ಲಾ ಇಸ್ರೇಲರೂ ಲೆಕ್ಕವಿಲ್ಲದಷ್ಟು ಕುರಿಗಳನ್ನೂ ಹೋರಿಗಳನ್ನೂ ಯಜ್ಞ ಮಾಡಿದರು. 7 ಆಮೇಲೆ ಯಾಜಕರು ಒಡಂಬಡಿಕೆಯ ಪೆಟ್ಟಿಗೆಯನ್ನು ಅದಕ್ಕಾಗಿ ಮಾಡಿದ್ದ ಮಹಾಪರಿಶುದ್ಧ ಸ್ಥಳದ ಕೆರೂಬಿಗಳ ರೆಕ್ಕೆಗಳ ಕೆಳಗೆ ಇಟ್ಟರು. 8 ಕೆರೂಬಿಗಳ ರೆಕ್ಕೆಗಳು ಒಡಂಬಡಿಕೆಯ ಪೆಟ್ಟಿಗೆಯ ಮೇಲೆ ಚಾಚಿಕೊಂಡಿದ್ದವು. ಕೆರೂಬಿಗಳು ಆ ಪೆಟ್ಟಿಗೆಯ ಮೇಲೆಯೂ ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗಲು ಉಪಯೋಗಿಸುತ್ತಿದ್ದ ಕಂಬಗಳ ಮೇಲೆಯೂ ನಿಂತುಕೊಂಡಿದ್ದವು. 9 ಆ ಪೆಟ್ಟಿಗೆಯನ್ನು ಹೊರಲು ಜೋಡಿಸಿದ್ದ ಕೋಲುಗಳು ಉದ್ದವಾಗಿದ್ದ ಕಾರಣ ಅದರ ಕೊನೆಗಳು ಮಹಾಪರಿಶುದ್ಧ ಸ್ಥಳದ ಮುಂಭಾಗದಲ್ಲಿ ಕಾಣುತ್ತಿದ್ದವು. ಆದರೆ ದೇವಾಲಯದ ಹೊರಗಿನಿಂದ ಆ ಕೋಲುಗಳು ಯಾರಿಗೂ ಕಾಣುತ್ತಿರಲಿಲ್ಲ. ಇಂದಿಗೂ ಆ ಕೋಲುಗಳು ಅಲ್ಲಿಯೇ ಅವೆ. 10 ಒಡಂಬಡಿಕೆಯ ಪೆಟ್ಟಿಗೆಯೊಳಗೆ ಎರಡು ಕಲ್ಲಿನ ಹಲಗೆಗಳು ಮಾತ್ರ ಇದ್ದವು. ಹೋರೇಬ್ ಬೆಟ್ಟದಲ್ಲಿ ಮೋಶೆಯು ಈ ಕಲ್ಲಿನ ಹಲಗೆಗಳನ್ನು ಪೆಟ್ಟಿಗೆಯೊಳಗಿಟ್ಟನು. ಆ ಬೆಟ್ಟದಲ್ಲಿ ಯೆಹೋವನು ಈಜಿಪ್ಟಿನಿಂದ ಬಿಡುಗಡೆ ಹೊಂದಿದ ಇಸ್ರೇಲರೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡನು.
11 ಅಲ್ಲಿ ನೆರೆದುಬಂದಿದ್ದ ಯಾಜಕರೆಲ್ಲರೂ ಯಾವ ವರ್ಗವ್ಯತ್ಯಾಸವಿಲ್ಲದೆ ಆಚಾರಕ್ಕನುಸಾರವಾಗಿ ತಮ್ಮನ್ನು ಶುದ್ಧೀಕರಿಸಿಕೊಂಡರು. ಬಳಿಕ ಅವರು ಪವಿತ್ರ ಸ್ಥಳದಿಂದ ಹೊರಬಂದು ಒಟ್ಟಾಗಿ ನಿಂತುಕೊಂಡರು. 12 ಯಜ್ಞವೇದಿಕೆಯ ಪೂರ್ವ ಭಾಗದಲ್ಲಿ ಲೇವಿಯರ ಗಾಯಕರು ನಿಂತರು. ಆಸಾಫನ, ಹೇಮಾನನ ಮತ್ತು ಯೆದುತೂನನ ಗಾಯಕ ವೃಂದದವರೆಲ್ಲರೂ ಅಲ್ಲಿ ಇದ್ದರು. ಅವರ ಗಂಡುಮಕ್ಕಳೂ ಕುಟುಂಬದವರೂ ಅಲ್ಲಿದ್ದರು. ಗಾಯಕರೆಲ್ಲರೂ ಬಿಳೀ ನಾರುಮಡಿಯ ಬಟ್ಟೆಗಳನ್ನು ಉಟ್ಟಿದ್ದರು. ತಾಳ, ತಂತಿವಾದ್ಯಗಳನ್ನು ಹಿಡಿದುಕೊಂಡಿದ್ದರು. ಗಾಯಕರೊಂದಿಗೆ ನೂರಿಪ್ಪತ್ತು ಮಂದಿ ಯಾಜಕರು ತುತ್ತೂರಿಯನ್ನೂದಿದರು. 13 ಗಾಯಕರ ಸ್ವರವೂ ತುತ್ತೂರಿಗಳ ಶಬ್ದವೂ ಒಬ್ಬನದೆಯೋ ಎಂಬಂತೆ ತೋರಿಬಂತು. ಅವರು ದೇವರನ್ನು ಸ್ತುತಿಸಿ ಕೊಂಡಾಡಿದಾಗ ಒಂದೇ ಶಬ್ದವು ಹೊರಟಿತ್ತು. ಅವರು ತಮ್ಮ ತಾಳ, ತಂತಿವಾದ್ಯಗಳನ್ನು ಗಟ್ಟಿಯಾಗಿ ಬಾರಿಸಿದರು.
“ಯೆಹೋವನಿಗೆ ಸ್ತೋತ್ರವಾಗಲಿ; ಆತನು ಒಳ್ಳೆಯವನು;
ಆತನ ಪ್ರೀತಿಯು ಶಾಶ್ವತವಾದದ್ದು”
ಎಂದು ಗಾಯಕರು ಹಾಡಿದರು.
ಆಗ ದೇವಾಲಯವು ಯೆಹೋವನ ತೇಜಸ್ಸಿನಿಂದ ಕೂಡಿದ ಮೋಡದಿಂದ ತುಂಬಿಹೋಯಿತು. 14 ಆಗ ಯಾಜಕರು ನಿಂತುಕೊಂಡು ಸೇವೆಯನ್ನು ಮಾಡಲಾಗಲಿಲ್ಲ. ಯಾಕೆಂದರೆ ದೇವರ ಮಹಿಮೆಯು ದೇವಾಲಯವನ್ನು ತುಂಬಿಕೊಂಡಿತ್ತು.
ತನ್ನ ಸೇವೆಯ ಬಗ್ಗೆ ಪೌಲನ ವಿವರಣೆ
19 ಪೌಲನು ಮಾತನ್ನು ಮುಂದುವರಿಸಿ ಹೀಗೆಂದನು: “ರಾಜನಾದ ಅಗ್ರಿಪ್ಪನೇ, ನಾನು ಪರಲೋಕದ ಈ ದರ್ಶನವನ್ನು ಕಂಡ ಮೇಲೆ ಅದಕ್ಕೆ ವಿಧೇಯನಾದೆನು. 20 ನಾನು ಜನರಿಗೆ, ‘ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳಿರಿ’ ಎಂತಲೂ ಅವರಿಗಾಗಿರುವ ಮಾನಸಾಂತರವನ್ನು ಯೋಗ್ಯವಾದ ಕಾರ್ಯಗಳ ಮೂಲಕ ತೋರ್ಪಡಿಸಬೇಕೆಂತಲೂ ಹೇಳಿದೆನು. ಮೊದಲನೆಯದಾಗಿ ದಮಸ್ಕಕ್ಕೂ ಬಳಿಕ ಜೆರುಸಲೇಮಿಗೂ ಜುದೇಯದ ಪ್ರತಿಯೊಂದು ಭಾಗಕ್ಕೂ ಹೋಗಿ ಅಲ್ಲಿರುವ ಜನರಿಗೆ ಈ ಸಂಗತಿಗಳನ್ನು ತಿಳಿಸಿದೆನು. ಅಲ್ಲದೆ ಯೆಹೂದ್ಯರಲ್ಲದ ಜನರ ಬಳಿಗೂ ಹೋದೆನು.
21 “ಈ ಕಾರಣಗಳಿಂದ ಯೆಹೂದ್ಯರು ನನ್ನನ್ನು ದೇವಾಲಯದಲ್ಲಿ ಬಂಧಿಸಿ ಕೊಲ್ಲಲು ಪ್ರಯತ್ನಿಸಿದರು. 22 ಆದರೆ ದೇವರು ನನಗೆ ಸಹಾಯಮಾಡಿದನು. ಆತನು ಇಂದಿನವರೆಗೂ ನನಗೆ ಸಹಾಯಮಾಡುತ್ತಿದ್ದಾನೆ. ಆದ್ದರಿಂದಲೇ ಇಂದು ಇಲ್ಲಿ ನಿಂತುಕೊಂಡಿದ್ದೇನೆ ಮತ್ತು ನಾನು ಕಂಡ ಸಂಗತಿಗಳ ಬಗ್ಗೆ ಜನರಿಗೆಲ್ಲಾ ಸಾಕ್ಷಿ ಹೇಳುತ್ತಿದ್ದೇನೆ. ಆದರೆ ನಾನು ಯಾವ ಹೊಸದನ್ನೂ ಹೇಳದೆ, ಮೋಶೆ ಮತ್ತು ಪ್ರವಾದಿಗಳು ಮುಂದೆ ನೆರವೇರುತ್ತವೆ ಎಂದು ಹೇಳಿದ ಸಂಗತಿಗಳನ್ನೇ ಹೇಳುತ್ತಿದ್ದೇನೆ. 23 ಕ್ರಿಸ್ತನು ಬಾಧೆಪಟ್ಟು ಸತ್ತು, ಸತ್ತವರೊಳಗಿಂದ ಮೊದಲನೆಯವನಾಗಿ ಎದ್ದುಬಂದು, ಯೆಹೂದ್ಯರಿಗೂ ಯೆಹೂದ್ಯರಲ್ಲದವರಿಗೂ ಬೆಳಕನ್ನು ತರುತ್ತಾನೆಂದು ಮೋಶೆ ಮತ್ತು ಪ್ರವಾದಿಗಳು ಹೇಳಿದ್ದಾರೆ.”
ಅಗ್ರಿಪ್ಪನನ್ನು ಒಡಂಬಡಿಸಲು ಪೌಲನ ಪ್ರಯತ್ನ
24 ಪೌಲನು ತನ್ನ ಪರವಾಗಿ ಈ ಸಂಗತಿಗಳನ್ನು ಹೇಳುತ್ತಿರಲು ಫೆಸ್ತನು, “ಪೌಲನೇ, ನೀನು ಹುಚ್ಚನಾಗಿರುವೆ! ಅಧಿಕ ಅಧ್ಯಯನ ನಿನ್ನನ್ನು ಹುಚ್ಚನನ್ನಾಗಿ ಮಾಡಿದೆ!” ಎಂದು ಕೂಗಿ ಹೇಳಿದನು.
25 ಪೌಲನು, “ಮಹಾರಾಜಶ್ರೀಗಳಾದ ಫೆಸ್ತನೇ, ನಾನು ಹುಚ್ಚನಲ್ಲ. ನಾನು ಹೇಳುತ್ತಿರುವುದು ಸತ್ಯಸಂಗತಿಗಳಾಗಿವೆ. ನನ್ನ ಮಾತುಗಳು ಮೂರ್ಖನ ಮಾತುಗಳಲ್ಲ. ನಾನು ಸ್ವಸ್ಥಬುದ್ಧಿಯುಳ್ಳವನಾಗಿದ್ದೇನೆ. 26 ರಾಜನಾದ ಅಗ್ರಿಪ್ಪನಿಗೆ ಈ ಸಂಗತಿಗಳು ತಿಳಿದಿವೆ. ನಾನು ಅವನೊಂದಿಗೆ ಸ್ವತಂತ್ರವಾಗಿ ಮಾತಾಡಬಲ್ಲೆನು. ಈ ಎಲ್ಲಾ ಸಂಗತಿಗಳ ಬಗ್ಗೆ ಅವನು ಕೇಳಿದ್ದಾನೆಂದು ನನಗೆ ಗೊತ್ತಿದೆ. ಯಾಕೆಂದರೆ ಎಲ್ಲಾ ಜನರು ನೋಡಬಹುದಾದ ಸ್ಥಳದಲ್ಲಿ ಈ ಸಂಗತಿಗಳು ನೆರವೇರಿದವು. 27 ರಾಜ ಅಗ್ರಿಪ್ಪನೇ, ಪ್ರವಾದಿಗಳು ಬರೆದ ಸಂಗತಿಗಳನ್ನು ನೀನು ನಂಬುವಿಯಾ? ನೀನು ನಂಬುವೆ ಎಂದು ನನಗೆ ಗೊತ್ತಿದೆ!” ಎಂಬುದಾಗಿ ಹೇಳಿದನು.
28 ರಾಜ ಅಗ್ರಿಪ್ಪನು ಪೌಲನಿಗೆ, “ಬಹು ಸುಲಭವಾಗಿ ನನ್ನನ್ನು ಒಪ್ಪಿಸಿ ಕ್ರೈಸ್ತನನ್ನಾಗಿ ಮಾಡಬಹುದೆಂದು ನೀನು ಯೋಚಿಸಿಕೊಂಡಿರುವಿಯಾ?” ಎಂದು ಕೇಳಿದನು.
29 ಪೌಲನು, “ಸುಲಭವೋ ಕಷ್ಟವೋ ಅದು ನನಗೆ ಮುಖ್ಯವಲ್ಲ. ನೀನು ಮಾತ್ರವಲ್ಲ, ಇಂದು ನನ್ನನ್ನು ಆಲಿಸುತ್ತಿರುವ ಪ್ರತಿಯೊಬ್ಬರೂ ರಕ್ಷಣೆಹೊಂದಿ ನನ್ನಂತೆಯೇ ಆಗಬೇಕೆಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ಆದರೆ ಈ ಸಂಕೋಲೆಗಳು ಮಾತ್ರ ನಿಮಗೆ ಬೇಡ!” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International