Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 29

ರಚನೆಗಾರ: ದಾವೀದ.

29 ದೇವಪುತ್ರರೇ,[a] ಯೆಹೋವನನ್ನು ಸ್ತುತಿಸಿರಿ!
    ಆತನ ಮಹಿಮೆಯನ್ನೂ ಶಕ್ತಿಯನ್ನೂ ಸ್ತುತಿಸಿರಿ.
ಯೆಹೋವನನ್ನು ಸ್ತುತಿಸುತ್ತಾ ಆತನ ಹೆಸರನ್ನು ಘನಪಡಿಸಿರಿ.
    ಪರಿಶುದ್ಧ ವಸ್ತ್ರಗಳನ್ನು ಧರಿಸಿಕೊಂಡು ಆತನನ್ನು ಆರಾಧಿಸಿರಿ.[b]
ಯೆಹೋವನ ಸ್ವರವು ಸಮುದ್ರದ ಮೇಲೆ ಕೇಳಿ ಬರುವುದು.
    ಮಹಾಸಾಗರದ ಮೇಲಿನ ಗುಡುಗಿನಂತೆ ಮಹಿಮಾಸ್ವರೂಪನಾದ ದೇವರ ಸ್ವರವು ಕೇಳಿಬರುವುದು.
ಯೆಹೋವನ ಸ್ವರವು
    ಆತನ ಶಕ್ತಿಯನ್ನೂ ಮಹಿಮೆಯನ್ನೂ ತೋರ್ಪಡಿಸುವುದು.
ಯೆಹೋವನ ಸ್ವರವು ದೇವದಾರು ವೃಕ್ಷಗಳನ್ನು ತುಂಡುತುಂಡು ಮಾಡುತ್ತದೆ.
    ಯೆಹೋವನು ಲೆಬನೋನಿನ ದೇವದಾರು ವೃಕ್ಷಗಳನ್ನೂ ಮುರಿದುಹಾಕುವನು.
ಯೆಹೋವನು ಲೆಬನೋನನ್ನು ನಡುಗಿಸಲು ಅದು ನರ್ತಿಸುತ್ತಿರುವ ಎಳೆಕರುವಿನಂತೆ ಕಾಣುತ್ತದೆ;
    ಸಿರ್ಯೋನ್ ಪರ್ವತವು ಕಂಪಿಸುವಾಗ ಕುಣಿದಾಡುವ ಎಳೆ ಹೋರಿಯಂತೆ ಕಾಣುತ್ತದೆ.
ಯೆಹೋವನ ಗರ್ಜನಕ್ಕೆ ಮಿಂಚುಗಳು ಥಳಥಳನೆ ಹೊಳೆಯುತ್ತವೆ.
ಯೆಹೋವನ ಗರ್ಜನದಿಂದ ಅರಣ್ಯವು ಕಂಪಿಸುವುದು.
    ಆತನ ಗರ್ಜನಕ್ಕೆ ಕಾದೇಶ್ ಅರಣ್ಯವು ನಡುಗುವುದು.
ಯೆಹೋವನ ಗರ್ಜನಕ್ಕೆ ಜಿಂಕೆಗಳು ಹೆದರಿಕೊಳ್ಳುತ್ತವೆ;
    ಕಾಡಿನ ಮರಗಳು ಬರಿದಾಗುತ್ತವೆ;
    ಆದರೆ ಆತನ ಆಲಯದಲ್ಲಿ ಜನರು ಆತನ ಮಹಿಮೆಯನ್ನು ಹಾಡಿಕೊಂಡಾಡುವರು.

10 ಜಲಪ್ರಳಯದ ಕಾಲದಲ್ಲೂ ಯೆಹೋವನು ರಾಜನಾಗಿದ್ದನು.
    ಯೆಹೋವನು ಸದಾಕಾಲ ರಾಜನಾಗಿರುವನು.
11 ಯೆಹೋವನು ತನ್ನ ಜನರಿಗೆ ಬಲವನ್ನು ದಯಪಾಲಿಸಲಿ.
    ಆತನು ತನ್ನ ಜನರಿಗೆ ಶಾಂತಿಯನ್ನು ಸ್ಥಾಪಿಸಲಿ.

ವಿಮೋಚನಕಾಂಡ 40:16-38

16 ಯೆಹೋವನು ಆಜ್ಞಾಪಿಸಿದಂತೆಯೇ ಪ್ರತಿಯೊಂದನ್ನೂ ಮೋಶೆಯು ಮಾಡಿದನು.

17 ಆದ್ದರಿಂದ ಪವಿತ್ರಗುಡಾರವು, ಅವರು ಈಜಿಪ್ಟನ್ನು ಬಿಟ್ಟಕಾಲದಿಂದ ಎರಡನೆಯ ವರ್ಷದ ಮೊದಲನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಸ್ಥಾಪಿಸಲ್ಪಟ್ಟಿತು. 18 ಯೆಹೋವನು ಹೇಳಿದಂತೆಯೇ ಮೋಶೆಯು ಪವಿತ್ರಗುಡಾರವನ್ನು ನಿಲ್ಲಿಸಿದನು. ಅವನು ಮೊದಲು ಗದ್ದಿಗೇಕಲ್ಲುಗಳನ್ನು ಕೆಳಗೆ ಇರಿಸಿದನು. ಬಳಿಕ ಅವನು ಗದ್ದಿಗೇಕಲ್ಲುಗಳ ಮೇಲೆ ಚೌಕಟ್ಟುಗಳನ್ನು ಇರಿಸಿದನು. ಬಳಿಕ ಅವನು ಅಗುಳಿಗಳನ್ನಿರಿಸಿ ಕಂಬಗಳನ್ನು ನಿಲ್ಲಿಸಿದನು. 19 ನಂತರ, ಮೋಶೆಯು ಪವಿತ್ರಗುಡಾರದ ಮೇಲೆ ಹೊರಗಣ ಡೇರೆಯನ್ನು ಹಾಕಿಸಿದನು. ಬಳಿಕ ಅವನು ಹೊರಗಿನ ಡೇರೆಗೆ ಮೇಲ್ಹೊದಿಕೆಯನ್ನು ಹಾಕಿಸಿದನು. ಯೆಹೋವನು ಆಜ್ಞಾಪಿಸಿದಂತೆಯೇ ಅವನು ಈ ಕಾರ್ಯಗಳನ್ನು ಮಾಡಿದನು.

20 ಮೋಶೆಯು ಒಡಂಬಡಿಕೆಯ ಆಜ್ಞಾಶಾಸನಗಳನ್ನು ತೆಗೆದುಕೊಂಡು ಪವಿತ್ರ ಪೆಟ್ಟಿಗೆಯಲ್ಲಿಟ್ಟನು. ಮೋಶೆಯು ಪೆಟ್ಟಿಗೆಯ ಎರಡು ಕಡೆಗಳಲ್ಲಿ ಕೋಲುಗಳನ್ನು ಇರಿಸಿದನು. ಬಳಿಕ ಅವನು ಪೆಟ್ಟಿಗೆಯ ಮೇಲೆ ಕೃಪಾಸನವನ್ನು ಇಟ್ಟನು. 21 ಬಳಿಕ ಮೋಶೆಯು ಪವಿತ್ರಪೆಟ್ಟಿಗೆಯನ್ನು ಪವಿತ್ರಗುಡಾರದೊಳಗೆ ತಂದನು. ಅದನ್ನು ಸಂರಕ್ಷಿಸುವುದಕ್ಕಾಗಿ ಸರಿಯಾದ ಸ್ಥಳದಲ್ಲಿ ಪರದೆಯನ್ನು ಹಾಕಿದನು. ಹೀಗೆ ಒಡಂಬಡಿಕೆ ಪೆಟ್ಟಿಗೆಯನ್ನು ಪರದೆಯ ಹಿಂಭಾಗದಲ್ಲಿರಿಸಿ ಸಂರಕ್ಷಿಸಿದನು. ಯೆಹೋವನು ಆಜ್ಞಾಪಿಸಿದಂತೆಯೇ ಇದನ್ನು ಮಾಡಿದನು. 22 ತರುವಾಯ ಮೋಶೆಯು ದೇವದರ್ಶನಗುಡಾರದಲ್ಲಿ ಮೇಜನ್ನು ಇರಿಸಿದನು. ಪವಿತ್ರಗುಡಾರದ ಉತ್ತರಭಾಗದಲ್ಲಿ ಅದನ್ನು ಇರಿಸಿದನು. ಅವನು ಅದನ್ನು ಪವಿತ್ರಸ್ಥಳದಲ್ಲಿ ಪರದೆಯ ಮುಂಭಾಗದಲ್ಲಿ ಇರಿಸಿದನು. 23 ಬಳಿಕ ಅವನು ಯೆಹೋವನ ಸನ್ನಿಧಿಯಲ್ಲಿ ಮೇಜಿನ ಮೇಲೆ ನೈವೇದ್ಯದ ರೊಟ್ಟಿಯನ್ನಿರಿಸಿದನು. ಯೆಹೋವನು ಆಜ್ಞಾಪಿಸಿದಂತೆಯೇ ಅವನು ಇದನ್ನು ಮಾಡಿದನು. 24 ಬಳಿಕ ಮೋಶೆಯು ದೀಪಸ್ತಂಭವನ್ನು ಪವಿತ್ರಗುಡಾರದೊಳಗೆ ಇರಿಸಿದನು. ಮೇಜಿಗೆ ಎದುರಾಗಿ ಗುಡಾರದ ದಕ್ಷಿಣ ಭಾಗದಲ್ಲಿ ದೀಪಸ್ತಂಭವನ್ನಿರಿಸಿದನು. 25 ತರುವಾಯ ಮೋಶೆಯು ಯೆಹೋವನ ಮುಂದಿರುವ ದೀಪಸ್ತಂಭದಲ್ಲಿ ಹಣತೆಗಳನ್ನು ಇರಿಸಿದನು. ಯೆಹೋವನು ಆಜ್ಞಾಪಿಸಿದಂತೆಯೇ ಅವನು ಇದನ್ನು ಮಾಡಿದನು.

26 ಬಳಿಕ ಮೋಶೆಯು ಚಿನ್ನದ ವೇದಿಕೆಯನ್ನು ದೇವದರ್ಶನಗುಡಾರದೊಳಗೆ ಇರಿಸಿದನು. ಅವನು ವೇದಿಕೆಯನ್ನು ಪರದೆಯ ಮುಂಭಾಗದಲ್ಲಿ ಇರಿಸಿದನು. 27 ಬಳಿಕ ಅವನು ವೇದಿಕೆಯ ಮೇಲೆ ಸುಗಂಧವಾಸನೆಯುಳ್ಳ ಧೂಪವನ್ನು ಉರಿಸಿದನು. ಯೆಹೋವನು ಅವನಿಗೆ ಆಜ್ಞಾಪಿಸಿದಂತೆಯೇ ಇದನ್ನು ಮಾಡಿದನು. 28 ಬಳಿಕ ಮೋಶೆಯು ಪವಿತ್ರಗುಡಾರದ ಬಾಗಿಲಿಗೆ ಪರದೆಯನ್ನು ಹಾಕಿಸಿದನು.

29 ಪವಿತ್ರಗುಡಾರದ ಪ್ರವೇಶದ್ವಾರದ ಬಳಿಯಲ್ಲಿ ಯಜ್ಞವೇದಿಕೆಯನ್ನು ಇರಿಸಿದನು. ಅವನು ಯೆಹೋವನಿಗಾಗಿ ಆ ವೇದಿಕೆಯ ಮೇಲೆ ಸರ್ವಾಂಗಹೋಮವನ್ನೂ ಧಾನ್ಯಸಮರ್ಪಣೆಯನ್ನೂ ಮಾಡಿದನು. ಯೆಹೋವನು ಆಜ್ಞಾಪಿಸಿದಂತೆ ಅವನು ಇದನ್ನು ಮಾಡಿದನು.

30 ತರುವಾಯ ಮೋಶೆಯು ಗಂಗಾಳವನ್ನು ದೇವದರ್ಶನಗುಡಾರ ಮತ್ತು ವೇದಿಕೆಯ ನಡುವೆ ಇಟ್ಟನು. ತೊಳೆದುಕೊಳ್ಳುವುದಕ್ಕಾಗಿ ನೀರನ್ನು ಗಂಗಾಳದಲ್ಲಿ ಹಾಕಿಸಿದನು. 31 ಮೋಶೆ, ಆರೋನ ಮತ್ತು ಆರೋನನ ಪುತ್ರರು ತಮ್ಮ ಕೈಕಾಲುಗಳನ್ನು ತೊಳೆದುಕೊಳ್ಳುವುದಕ್ಕಾಗಿ ಈ ಗಂಗಾಳವನ್ನು ಉಪಯೋಗಿಸಿದರು. 32 ಅವರು ದೇವದರ್ಶನಗುಡಾರವನ್ನು ಪ್ರವೇಶಿಸುವಾಗಲೆಲ್ಲಾ ಮತ್ತು ಯಜ್ಞವೇದಿಕೆಯ ಸಮೀಪ ಹೋಗುವಾಗಲೆಲ್ಲಾ ತಮ್ಮನ್ನು ತೊಳೆದುಕೊಳ್ಳುತ್ತಿದ್ದರು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಅವರು ಇದನ್ನು ಮಾಡಿದರು.

33 ತರುವಾಯ ಮೋಶೆಯು ಪವಿತ್ರಗುಡಾರದ ಅಂಗಳದ ಸುತ್ತಲೂ ಪರದೆಗಳನ್ನು ನಿಲ್ಲಿಸಿದನು. ಮೋಶೆಯು ವೇದಿಕೆಯನ್ನು ಅಂಗಳದಲ್ಲಿರಿಸಿದನು. ಬಳಿಕ ಅವನು ಅಂಗಳದ ಬಾಗಿಲಿಗೆ ಪರದೆಯನ್ನು ಹಾಕಿಸಿದನು. ಹೀಗೆ ಮೋಶೆ ಯೆಹೋವನು ತನಗೆ ಕೊಟ್ಟ ಎಲ್ಲಾ ಕೆಲಸವನ್ನು ಮಾಡಿ ಮುಗಿಸಿದನು.

ಯೆಹೋವನ ಮಹಿಮೆ

34 ತರುವಾಯ ಮೋಡವು ದೇವದರ್ಶನಗುಡಾರವನ್ನು ಕವಿಯಿತು. ಯೆಹೋವನ ಮಹಿಮೆಯು ಪವಿತ್ರಗುಡಾರವನ್ನು ತುಂಬಿಕೊಂಡಿತು. 35 ಮೋಡವು ದೇವದರ್ಶನಗುಡಾರದ ಮೇಲೆ ನಿಂತಿತು. ಯೆಹೋವನ ಮಹಿಮೆಯು ಪವಿತ್ರಗುಡಾರವನ್ನು ತುಂಬಿಕೊಂಡಿದ್ದರಿಂದ ಮೋಶೆಯು ಒಳಗೆ ಪ್ರವೇಶಿಸಲಾಗಲಿಲ್ಲ.

36 ಜನರು ಯಾವಾಗ ಚಲಿಸಬೇಕೆಂದು ಮೋಡವು ತೋರಿಸುತ್ತಿತ್ತು. ಮೋಡವು ಪವಿತ್ರಗುಡಾರವನ್ನು ಬಿಟ್ಟು ಮೇಲೆದ್ದಾಗ, ಜನರು ಪ್ರಯಾಣ ಮಾಡತೊಡಗುತ್ತಿದ್ದರು. 37 ಆದರೆ ಮೋಡವು ಪವಿತ್ರಗುಡಾರದ ಮೇಲಿದ್ದಾಗ ಜನರು ಪ್ರಯಾಣ ಮಾಡುತ್ತಿರಲಿಲ್ಲ. ಮೋಡವು ಮೇಲೇಳುವವರೆಗೆ ಅವರು ಅಲ್ಲೇ ಇರುತ್ತಿದ್ದರು. 38 ಹೀಗೆ ಯೆಹೋವನ ಮೋಡವು ಹಗಲಿನಲ್ಲಿ ಪವಿತ್ರಗುಡಾರದ ಮೇಲೆ ನಿಂತಿತು. ರಾತ್ರಿಯಲ್ಲಿ ಮೋಡದಲ್ಲಿ ಅಗ್ನಿಯು ಪ್ರಕಾಶಿಸುತ್ತಿತ್ತು. ಆದ್ದರಿಂದ ಇಸ್ರೇಲ್ ಜನರೆಲ್ಲರೂ ತಾವು ಪ್ರಯಾಣ ಮಾಡುವಾಗ, ಮೋಡವನ್ನು ನೋಡಬಹುದಾಗಿತ್ತು.

ಅಪೊಸ್ತಲರ ಕಾರ್ಯಗಳು 16:35-40

35 ಮರುದಿನ ಮುಂಜಾನೆ ನಾಯಕರು ಸೆರೆಮನೆಯ ಅಧಿಕಾರಿಗೆ, “ಈ ಜನರನ್ನು ಬಿಟ್ಟುಬಿಡು!” ಎಂದು ಕೆಲವು ಸೈನಿಕರ ಮೂಲಕ ಹೇಳಿ ಕಳುಹಿಸಿದರು.

36 ಸೆರೆಮನೆಯ ಅಧಿಕಾರಿಯು ಪೌಲನಿಗೆ, “ನಮ್ಮ ನಾಯಕರು ನಿಮ್ಮನ್ನು ಬಿಡುಗಡೆ ಮಾಡಬೇಕೆಂದು ಸೈನಿಕರ ಮೂಲಕ ಹೇಳಿ ಕಳುಹಿಸಿದ್ದಾರೆ. ಈಗ ನೀವು ಸಮಾಧಾನದಿಂದ ಹೋಗಿರಿ” ಎಂದು ಹೇಳಿದನು.

37 ಆದರೆ ಪೌಲನು, “ನಾವು ಏನು ತಪ್ಪು ಮಾಡಿದ್ದೇವೆಂಬುದನ್ನು ನಿಮ್ಮ ನಾಯಕರು ನಿರೂಪಿಸದೆ ನಮ್ಮನ್ನು ಜನರ ಎದುರಿನಲ್ಲಿ ಹೊಡೆಸಿ ಸೆರೆಮನೆಗೆ ಹಾಕಿಸಿದರು. ನಾವು ರೋಮಿನ ಪ್ರಜೆಗಳು. ಆದ್ದರಿಂದ ನಮಗೂ ಹಕ್ಕುಗಳಿವೆ. ಈಗ ಅವರು ನಮ್ಮನ್ನು ಗೋಪ್ಯವಾಗಿ ಬಿಡುಗಡೆ ಮಾಡಬೇಕೆಂದಿರುವರೇ? ಇಲ್ಲ! ನಾಯಕರೇ ಬಂದು ನಮ್ಮನ್ನು ಹೊರಗೆ ಕರೆದುಕೊಂಡು ಹೋಗಬೇಕು!” ಎಂದು ಹೇಳಿದನು.

38 ಆ ಸೈನಿಕರು ನಾಯಕರ ಬಳಿಗೆ ಹೋಗಿ ಪೌಲನು ಹೇಳಿದ್ದನ್ನೆಲ್ಲ ತಿಳಿಸಿದರು. ಪೌಲ ಸೀಲರು ರೋಮಿನ ಪ್ರಜೆಗಳೆಂಬುದನ್ನು ಕೇಳಿದ ಕೂಡಲೇ ನಾಯಕರಿಗೆ ಭಯವಾಯಿತು. 39 ಆದ್ದರಿಂದ ಅವರು ಪೌಲ ಸೀಲರ ಬಳಿಗ ಬಂದು ಕ್ಷಮೆ ಕೇಳಿದರು. ಅಲ್ಲದೆ ಅವರನ್ನು ಸೆರೆಮನೆಯಿಂದ ಹೊರಗೆ ಕರೆದುಕೊಂಡು ಹೋದರು ಮತ್ತು ತಮ್ಮ ಪಟ್ಟಣವನ್ನು ಬಿಟ್ಟುಹೋಗಬೇಕೆಂದು ಕೇಳಿಕೊಂಡರು. 40 ಆದರೆ ಪೌಲ ಸೀಲರು ಸೆರೆಮನೆಯಿಂದ ಹೊರಟು ಲಿಡಿಯಾಳ ಮನೆಗೆ ಹೋದರು. ಅಲ್ಲಿ ಅವರು ಕೆಲವು ವಿಶ್ವಾಸಿಗಳನ್ನು ಕಂಡು ಅವರನ್ನು ಸಂತೈಸಿದರು. ಬಳಿಕ ಪೌಲ ಸೀಲರು ಅಲ್ಲಿಂದ ಹೊರಟುಹೋದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International