Revised Common Lectionary (Semicontinuous)
97 ಯೆಹೋವನು ಆಳುತ್ತಿರುವನು! ಭೂಮಿಯು ಸಂತೋಷಿಸಲಿ.
ದೂರ ದೇಶಗಳೆಲ್ಲಾ ಹರ್ಷಿಸಲಿ.
2 ಕಾರ್ಮೋಡಗಳು ಆತನನ್ನು ಕವಿದುಕೊಂಡಿವೆ.
ನೀತಿಯೂ ನ್ಯಾಯವೂ ಆತನ ರಾಜ್ಯದ ಬಲವಾಗಿವೆ.
3 ಬೆಂಕಿಯು ಆತನ ಮುಂದೆ ಹೋಗಿ
ಆತನ ಶತ್ರುಗಳನ್ನು ನಾಶಮಾಡುವುದು.
4 ಆತನ ಮಿಂಚು ಆಕಾಶದಲ್ಲಿ ಹೊಳೆಯುತ್ತದೆ.
ಜನರು ಅದನ್ನು ನೋಡಿ ಭಯಗೊಂಡಿದ್ದಾರೆ.
5 ಸಾರ್ವಭೌಮನಾದ ಯೆಹೋವನ ಎದುರಿನಲ್ಲಿ
ಬೆಟ್ಟಗಳು ಮೇಣದಂತೆ ಕರಗಿಹೋಗುತ್ತವೆ.
6 ಆಕಾಶಗಳೇ, ಆತನ ನೀತಿಯ ಕುರಿತು ಹೇಳಿರಿ!
ದೇವರ ಮಹಿಮೆಯನ್ನು ಪ್ರತಿಯೊಬ್ಬನೂ ಕಾಣಲಿ!
7 ಜನರು ತಮ್ಮ ವಿಗ್ರಹಗಳನ್ನು ಪೂಜಿಸುವರು.
ಅವರು ತಮ್ಮ “ದೇವರುಗಳ” ಬಗ್ಗೆ ಜಂಬಕೊಚ್ಚುವರು.
ಆದರೆ ಅವರು ನಾಚಿಕೆಗೀಡಾಗುವರು.
ಅವರ “ದೇವರುಗಳು” ಯೆಹೋವನಿಗೆ ಅಡ್ಡಬಿದ್ದು ಆರಾಧಿಸುತ್ತವೆ.
8 ಚೀಯೋನೇ, ಕೇಳಿ ಸಂತೋಷಪಡು!
ಯೆಹೂದದ ಪಟ್ಟಣಗಳೇ, ಆನಂದಿಸಿರಿ.
ಯಾಕೆಂದರೆ ಯೆಹೋವನ ತೀರ್ಪುಗಳು ನ್ಯಾಯವಾಗಿವೆ.
9 ಮಹೋನ್ನತನಾದ ಯೆಹೋವನೇ, ಭೂಲೋಕದ ಸರ್ವಾಧಿಪತಿ ನೀನೇ.
ಎಲ್ಲಾ ದೇವರುಗಳಲ್ಲಿ ನೀನೇ ಮಹೋನ್ನತನು.
10 ಯೆಹೋವನನ್ನು ಪ್ರೀತಿಸುವವರೇ, ದುಷ್ಟತನವನ್ನು ದ್ವೇಷಿಸಿರಿ.
ದೇವರು ತನ್ನ ಭಕ್ತರನ್ನು ಸಂರಕ್ಷಿಸುವನು.
ದೇವರು ತನ್ನ ಸದ್ಭಕ್ತರನ್ನು ಕೆಡುಕರಿಂದ ರಕ್ಷಿಸುವನು.
11 ನೀತಿವಂತರಿಗೋಸ್ಕರ ಬೆಳಕೂ ಯಥಾರ್ಥಹೃದಯವುಳ್ಳವರಿಗೆ ಸಂತೋಷವೂ ಪ್ರಕಾಶಿಸುತ್ತವೆ.
12 ನೀತಿವಂತರೇ, ಯೆಹೋವನಲ್ಲಿ ಸಂತೋಷಪಡಿರಿ!
ಆತನ ಪವಿತ್ರ ಹೆಸರನ್ನು ಸನ್ಮಾನಿಸಿರಿ!
ಮೋಶೆಯು ಯೆಹೋವನ ಮಹಿಮೆಯನ್ನು ನೋಡುವನು
12 ಮೋಶೆಯು ಯೆಹೋವನಿಗೆ, “ಈ ಜನರನ್ನು ಮುನ್ನಡೆಸಬೇಕೆಂದು ನೀನು ನನಗೆ ಹೇಳಿರುವೆ. ಆದರೆ ನನ್ನೊಂದಿಗೆ ಯಾರನ್ನು ಕಳುಹಿಸುತ್ತೀಯೆಂದು ನೀನು ಹೇಳಲಿಲ್ಲ. ನೀನು ನನಗೆ, ‘ನಾನು ನಿನ್ನನ್ನು ಚೆನ್ನಾಗಿ ಬಲ್ಲೆನು. ನಾನು ನಿನ್ನನ್ನು ಮೆಚ್ಚಿದ್ದೇನೆ’ ಎಂದು ಹೇಳಿದೆ. 13 ನಾನು ನಿನ್ನನ್ನು ನಿಜವಾಗಿಯೂ ಮೆಚ್ಚಿಸಿರುವುದಾದರೆ, ನಾನು ನಿನ್ನನ್ನು ತಿಳಿದುಕೊಳ್ಳುವಂತೆ ನಿನ್ನ ಮಾರ್ಗಗಳನ್ನು ಬೋಧಿಸು. ಆಗ ನಾನು ನಿನ್ನನ್ನು ಯಾವಾಗಲೂ ಮೆಚ್ಚಿಸಲು ಸಾಧ್ಯವಾಗುವುದು. ಇವರೆಲ್ಲರೂ ನಿನ್ನ ಜನರೆಂದು ಜ್ಞಾಪಕಮಾಡಿಕೊ” ಎಂದು ವಿಜ್ಞಾಪಿಸಿದನು.
14 ಯೆಹೋವನು “ನಾನೇ ನಿಮ್ಮೊಡನೆ ಬರುವೆನು. ನಾನೇ ನಿಮ್ಮನ್ನು ಮುನ್ನಡೆಸುವೆನು”[a] ಎಂದು ಉತ್ತರಿಸಿದನು.
15 ಆಗ ಮೋಶೆ ಯೆಹೋವನಿಗೆ, “ನೀನು ನಮ್ಮೊಂದಿಗೆ ಬರದಿದ್ದರೆ, ಈ ಸ್ಥಳದಿಂದ ನಮ್ಮನ್ನು ಕಳುಹಿಸಬೇಡ. 16 ಮಾತ್ರವಲ್ಲದೆ ನನಗೂ ಈ ಜನರಿಗೂ ನಿನ್ನ ದಯೆ ದೊರಕಿದೆಯೆಂದು ನಾವು ತಿಳಿದುಕೊಳ್ಳುವುದಾದರೂ ಹೇಗೆ? ನೀನು ನಮ್ಮೊಡನೆ ಬಂದರೆ, ಆಗ ನಾವು ಇದನ್ನು ಖಚಿತವಾಗಿ ತಿಳಿದುಕೊಳ್ಳುವೆವು. ನೀನು ನಮ್ಮೊಡನೆ ಬಾರದಿದ್ದರೆ, ಆಗ ನಮಗೂ ಭೂಮಿಯ ಮೇಲಿರುವ ಇತರ ಜನರಿಗೂ ಯಾವ ವ್ಯತ್ಯಾಸವಿರುವುದಿಲ್ಲ” ಎಂದು ಹೇಳಿದನು.
17 ಆಗ ಯೆಹೋವನು ಮೋಶೆಗೆ, “ನಿನ್ನ ಕೋರಿಕೆಯನ್ನು ಅನುಗ್ರಹಿಸುತ್ತೇನೆ. ನಾನು ನಿನ್ನನ್ನು ಮೆಚ್ಚಿಕೊಂಡದ್ದರಿಂದಲೇ ಇದನ್ನು ಮಾಡುತ್ತೇನೆ. ನಾನು ನಿನ್ನನ್ನು ಚೆನ್ನಾಗಿ ಬಲ್ಲೆನು” ಅಂದನು.
6 ಆ ದೇವದೂತನು ನನಗೆ, “ಈ ವಾಕ್ಯಗಳು ಸತ್ಯವಾದವುಗಳೂ ನಂಬತಕ್ಕವುಗಳೂ ಆಗಿವೆ. ಪ್ರವಾದಿಗಳ ಆತ್ಮಗಳಿಗೆ ಪ್ರಭುವೇ ದೇವರಾಗಿದ್ದಾನೆ. ಬೇಗನೆ ಸಂಭವಿಸಲಿರುವ ಸಂಗತಿಗಳನ್ನು ತನ್ನ ಸೇವಕರಿಗೆ ತೋರಿಸಲು ದೇವರು ತನ್ನ ದೂತನನ್ನು ಕಳುಹಿಸಿದ್ದಾನೆ: 7 ‘ಕೇಳಿರಿ, ನಾನು ಬೇಗನೆ ಬರುತ್ತೇನೆ! ಈ ಪುಸ್ತಕದಲ್ಲಿರುವ ಪ್ರವಾದನೆಯ ವಾಕ್ಯಗಳಿಗೆ ವಿಧೇಯತೆಯಿಂದಿರುವವನು ಧನ್ಯನಾಗುತ್ತಾನೆ’” ಎಂದು ಹೇಳಿದನು.
8 ನಾನೇ ಯೋಹಾನನು. ನಾನು ಇವುಗಳನ್ನೆಲ್ಲ ಕೇಳಿದೆನು ಮತ್ತು ನೋಡಿದೆನು. ನಾನು ಇವುಗಳನ್ನು ಕೇಳಿ, ಕಂಡಾಗ, ನನಗೆ ಇವುಗಳನ್ನೆಲ್ಲ ತೋರಿಸಿದ ದೇವದೂತನನ್ನು ಆರಾಧಿಸುವುದಕ್ಕಾಗಿ ಅವನ ಪಾದಗಳಿಗೆ ಅಡ್ಡಬಿದ್ದೆನು. 9 ಆದರೆ ಆ ದೇವದೂತನು ನನಗೆ, “ನನ್ನನ್ನು ಆರಾಧಿಸಬೇಡ! ನಾನು ನಿನ್ನಂತೆ, ಈ ಪುಸ್ತಕದಲ್ಲಿರುವ ವಾಕ್ಯಗಳಿಗೆ ವಿಧೇಯರಾಗಿರುವ ಎಲ್ಲ ಜನರಂತೆ ಮತ್ತು ನಿನ್ನ ಸಹೋದರರಾದ ಪ್ರವಾದಿಗಳಂತೆ ಒಬ್ಬ ಸೇವಕನು. ನೀನು ದೇವರನ್ನು ಆರಾಧಿಸಬೇಕು!” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International