Revised Common Lectionary (Semicontinuous)
93 ಯೆಹೋವನೇ ರಾಜನು.
ಆತನು ವೈಭವವನ್ನೂ ಬಲವನ್ನೂ ವಸ್ತ್ರದಂತೆ ಧರಿಸಿಕೊಂಡಿದ್ದಾನೆ.
ಆತನು ಸಿದ್ಧನಾಗಿರುವುದರಿಂದ ಇಡೀ ಪ್ರಂಪಚವೇ ಸುರಕ್ಷಿತವಾಗಿರುವುದು.
ಅದು ಕದಲುವುದೇ ಇಲ್ಲ.
2 ದೇವರೇ, ಆದಿಯಿಂದಲೂ ನಿನ್ನ ರಾಜ್ಯವು ಶಾಶ್ವತವಾಗಿದೆ.
ಆದಿಯಿಂದಲೂ ಇರುವಾತನು ನೀನೊಬ್ಬನೇ!
3 ಯೆಹೋವನೇ, ನದಿಗಳ ಶಬ್ದವು ಮೊರೆಯುತ್ತಿದೆ.
ರಭಸದಿಂದ ಬಡಿಯುತ್ತಿರುವ ಅಲೆಗಳು ಭೋರ್ಗರೆಯುತ್ತಿವೆ.
4 ಬಿರುಸಾಗಿ ಬಡಿಯುತ್ತಿರುವ ಸಮುದ್ರದ ಅಲೆಗಳು ಭೋರ್ಗರೆಯುತ್ತಾ ಪ್ರಬಲವಾಗಿವೆ.
ಆದರೆ ಉನ್ನತದಲ್ಲಿರುವ ಯೆಹೋವನು ಅದಕ್ಕಿಂತ ಎಷ್ಟೋ ಬಲಿಷ್ಠನಾಗಿದ್ದಾನೆ.
5 ಯೆಹೋವನೇ, ನಿನ್ನ ಕಟ್ಟಳೆಗಳು ಶಾಶ್ವತವಾಗಿವೆ.
ನಿನ್ನ ಪವಿತ್ರಾಲಯವು ಬಹುಕಾಲದವರೆಗೆ ಇರುತ್ತದೆ.
ದಾವೀದನೊಂದಿಗೆ ಸೇರಿದ ಇತರ ಸೈನಿಕರು
16 ಬೆನ್ಯಾಮೀನ್ ಮತ್ತು ಯೆಹೂದ ಕುಲದ ಇತರ ಜನರೂ ದಾವೀದನು ಕೋಟೆಯಲ್ಲಿ ದಾವೀದನೊಂದಿಗೆ ಸೇರಿಕೊಂಡರು. 17 ಅವರನ್ನು ಎದುರುಗೊಳ್ಳಲು ದಾವೀದನು ಹೊರಬಂದು, “ನೀವು ಸಮಾಧಾನದಿಂದ ನನಗೆ ಸಹಾಯ ಮಾಡಲು ಬಂದಿದ್ದರೆ ನಿಮ್ಮನ್ನು ಸ್ವಾಗತಿಸುತ್ತೇನೆ. ಆದರೆ ನೀವು ನನ್ನ ಮೇಲೆ ಹೊಂಚುಹಾಕಲು ಬಂದಿರುವುದಾದರೆ ನಾನು ನಿರಪರಾಧಿಯಾಗಿರುವ ಕಾರಣ ನಮ್ಮ ಪೂರ್ವಿಕರ ದೇವರು ನಿಮ್ಮನ್ನು ಶಿಕ್ಷಿಸಲಿ” ಎಂದು ಹೇಳಿದನು.
18 ಮೂವತ್ತು ಮಂದಿ ಶೂರರ ನಾಯಕನಾದ ಅಮಾಸೈಯು ಆತ್ಮನಿಂದ ತುಂಬಿದವನಾಗಿ ಹೇಳಿದ್ದೇನೆಂದರೆ:
“ದಾವೀದನೇ, ನಾವು ನಿನ್ನವರು.
ಇಷಯನ ಮಗನೇ, ನಾವು ನಿನಗೆ ಸೇರಿದವರು;
ನಿನಗೆ ಸಮಾಧಾನ ಕೋರುವವರು;
ನಿನಗೆ ಸಹಾಯ ಮಾಡುವವರಿಗೆ ಸಮಾಧಾನ ಕೋರುವೆವು;
ಯಾಕೆಂದರೆ ನಿನ್ನ ದೇವರು ನಿನಗೆ ಸಹಾಯಮಾಡುತ್ತಿದ್ದಾನೆ.”
ದಾವೀದನು ಇವರನ್ನು ಸ್ವಾಗತಿಸಿ ತನ್ನ ಸೈನ್ಯಾಧಿಪತಿಗಳನ್ನಾಗಿ ಮಾಡಿದನು.
19 ಮನಸ್ಸೆಕುಲದಿಂದಲೂ ಕೆಲವರು ದಾವೀದನನ್ನು ಸೇರಿಕೊಂಡರು. ದಾವೀದನು ಸೌಲನೊಂದಿಗೆ ಯುದ್ಧಮಾಡಲು ಫಿಲಿಷ್ಟಿಯರೊಂದಿಗೆ ಸೇರಿಕೊಂಡಾಗ ಮನಸ್ಸೆಯವರು ದಾವೀದನ ಬಳಿಗೆ ಬಂದರು. ದಾವೀದನೂ ಅವನ ಜನರೂ ನಿಜವಾಗಿಯೂ ಫಿಲಿಷ್ಟಿಯರಿಗೆ ಸಹಾಯಮಾಡಿರಲಿಲ್ಲ. ಫಿಲಿಷ್ಟಿಯ ಪ್ರಧಾನರು ದಾವೀದನು ಯುದ್ಧಕ್ಕೆ ಬರಬಾರದೆಂದು ಹೇಳಿ ಹಿಂದಕ್ಕೆ ಕಳುಹಿಸಿದರು. “ಇವನು ತನ್ನ ಅರಸನೊಟ್ಟಿಗೆ ಸೇರಿದರೆ ನಮ್ಮ ರುಂಡಗಳೇ ಕತ್ತರಿಸಲ್ಪಡುವವು” ಎಂದರು. 20 ದಾವೀದನು ಚಿಕ್ಲಗಿನಲ್ಲಿ ವಾಸವಾಗಿದ್ದಾಗ ಅವನೊಂದಿಗೆ ಸೇರಿದ ಮನಸ್ಸೆಕುಲದವರು ಯಾರೆಂದರೆ: ಅದ್ನ, ಯೋಜಾಬಾದ್, ಎದೀಗಯೇಲ್, ಮೀಕಾಯೇಲ್, ಯೋಜಾಬಾದ್, ಎಲೀಹೂ ಮತ್ತು ಚಿಲ್ಲತೈ. ಇವರೆಲ್ಲರೂ ಮನಸ್ಸೆಕುಲದ ಮುಖ್ಯಾಧಿಕಾರಿಗಳಾಗಿದ್ದರು. 21 ದಾವೀದನು ದುಷ್ಟ ಜನರ ವಿರುದ್ಧವಾಗಿ ಮಾಡಿದ ಯುದ್ಧದಲ್ಲಿ ಅವರು ಸಹಾಯಮಾಡಿದರು. ಈ ದುಷ್ಟ ಜನರು ದೇಶದಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುತ್ತಾ ದರೋಡೆ ಮಾಡುತ್ತಿದ್ದರು. ಮನಸ್ಸೆಕುಲದಿಂದ ಸೇರಿದ ಜನರೆಲ್ಲಾ ಧೈರ್ಯಶಾಲಿಗಳಾಗಿದ್ದರು. ಅವರು ದಾವೀದನ ಸೈನ್ಯದಲ್ಲಿ ಅಧಿಕಾರಿಗಳಾದರು.
22 ದಿನದಿಂದ ದಿನಕ್ಕೆ ಹೆಚ್ಚೆಚ್ಚು ಜನರು ಬಂದು ದಾವೀದನನ್ನು ಸೇರಿಕೊಂಡಿದ್ದರಿಂದ ದಾವೀದನ ಸೈನ್ಯವು ಬಲಗೊಂಡಿತು.
5 ಸಿಂಹಾಸನದ ಮೇಲೆ ಕುಳಿತಿದ್ದವನು, “ನೋಡು! ನಾನು ಎಲ್ಲವನ್ನೂ ಹೊಸದಾಗಿ ಸೃಷ್ಟಿಸುತ್ತೇನೆ!” ಎಂದು ಹೇಳಿದನು. ನಂತರ ಆತನು, “ಈ ವಾಕ್ಯಗಳು ಸತ್ಯವಾದುವುಗಳೂ ನಂಬತಕ್ಕವುಗಳೂ ಆಗಿರುವುದರಿಂದ ಇವುಗಳನ್ನು ಬರೆ” ಎಂದು ಹೇಳಿದನು.
6 ಸಿಂಹಾಸನದ ಮೇಲೆ ಕುಳಿತಿದ್ದಾತನು ನನಗೆ ಹೀಗೆ ಹೇಳಿದನು: “ಎಲ್ಲವೂ ನೆರವೇರಿತು! ನಾನೇ ಆದಿಯೂ ಅಂತ್ಯವೂ ಆಗಿದ್ದೇನೆ. ನಾನೇ ಪ್ರಾರಂಭವೂ ಸಮಾಪ್ತಿಯೂ ಆಗಿದ್ದೇನೆ. ಬಾಯಾರಿದವರಿಗೆ ನಾನು ಜೀವಜಲದ ಬುಗ್ಗೆಯಿಂದ ನೀರನ್ನು ಉಚಿತವಾಗಿ ಕೊಡುತ್ತೇನೆ. 7 ಜಯಗಳಿಸುವವನು ಇದೆಲ್ಲವನ್ನು ಪಡೆಯುತ್ತಾನೆ. ನಾನು ಅವನ ದೇವರಾಗಿರುತ್ತೇನೆ, ಅವನು ನನ್ನ ಮಗನಾಗಿರುತ್ತಾನೆ. 8 ಆದರೆ ಹೇಡಿಗಳಿಗೆ, ನಂಬಿಕೆಯಿಲ್ಲದವರಿಗೆ, ಅಸಹ್ಯಕೃತ್ಯ ಮಾಡುವವರಿಗೆ, ಕೊಲೆಗಾರರಿಗೆ, ಲೈಂಗಿಕ ಪಾಪಮಾಡುವವರಿಗೆ, ಮಾಟಮಂತ್ರಗಾರರಿಗೆ, ವಿಗ್ರಹಾರಾಧಕರಿಗೆ, ಸುಳ್ಳುಗಾರರಿಗೆ ಸಿಕ್ಕುವ ಸ್ಥಳ ಬೆಂಕಿಗಂಧಕಗಳು ಉರಿಯುವ ಕೆರೆಯೇ. ಇದು ಎರಡನೆಯ ಮರಣವಾಗಿರುತ್ತದೆ.”
9 ಕಡೆಯ ಏಳು ಉಪದ್ರವಗಳನ್ನು ತಮ್ಮ ಪಾತ್ರೆಗಳಲ್ಲಿ ತುಂಬಿಕೊಂಡಿದ್ದ ಏಳು ಮಂದಿ ದೇವದೂತರಲ್ಲಿ ಒಬ್ಬನು ನನ್ನ ಬಳಿಗೆ ಬಂದು, “ನನ್ನ ಸಂಗಡ ಬಾ. ಕುರಿಮರಿಯಾದಾತನ ಪತ್ನಿಯಾಗಲಿರುವ ವಧುವನ್ನು ನಾನು ನಿನಗೆ ತೋರಿಸುತ್ತೇನೆ” ಎಂದನು. 10 ಆ ದೇವದೂತನು ಪವಿತ್ರಾತ್ಮವಶನಾದ ನನ್ನನ್ನು ಬಹಳ ದೊಡ್ಡದಾದ ಮತ್ತು ಎತ್ತರವಾದ ಬೆಟ್ಟಕ್ಕೆ ಕೊಂಡೊಯ್ದನು. ದೇವದೂತನು ನನಗೆ ಪವಿತ್ರ ನಗರವಾದ ಜೆರುಸಲೇಮನ್ನು ತೋರಿಸಿದನು. ಆ ನಗರವು ಪರಲೋಕದೊಳಗಿಂದ ದೇವರ ಕಡೆಯಿಂದ ಇಳಿದುಬರುತ್ತಿತ್ತು.
11 ಆ ನಗರವು ದೇವರ ಪ್ರಭಾವದಿಂದ ಪ್ರಕಾಶಿಸುತ್ತಿತ್ತು. ಅದು ಬಹು ಬೆಲೆಬಾಳುವ ವಜ್ರದಂತೆ ಪ್ರಕಾಶಿಸುತ್ತಿತ್ತು. ಅಮೂಲ್ಯ ರತ್ನದಂತೆ ಹೊಳೆಯುತ್ತಿತ್ತು. 12 ಆ ನಗರಕ್ಕೆ ಹನ್ನೆರಡು ಬಾಗಿಲುಗಳುಳ್ಳ ಅತ್ಯಂತ ಎತ್ತರವಾದ ಗೋಡೆಯಿತ್ತು. ಆ ಬಾಗಿಲುಗಳ ಬಳಿಯಲ್ಲಿ ಹನ್ನೆರಡು ಮಂದಿ ದೇವದೂತರಿದ್ದರು. ಪ್ರತಿಯೊಂದು ಬಾಗಿಲಿನ ಮೇಲೂ ಇಸ್ರೇಲಿನ ಹನ್ನೆರಡು ಕುಲಗಳಲ್ಲಿ ಒಂದು ಕುಲದ ಹೆಸರನ್ನು ಬರೆಯಲಾಗಿತ್ತು. 13 ಪೂರ್ವದಿಕ್ಕಿನಲ್ಲಿ ಮೂರು ಬಾಗಿಲುಗಳು, ಉತ್ತರದಿಕ್ಕಿನಲ್ಲಿ ಮೂರು ಬಾಗಿಲುಗಳು, ದಕ್ಷಿಣದಿಕ್ಕಿನಲ್ಲಿ ಮೂರು ಬಾಗಿಲುಗಳು ಮತ್ತು ಪಶ್ಚಿಮದಿಕ್ಕಿನಲ್ಲಿ ಮೂರು ಬಾಗಿಲುಗಳು ಇದ್ದವು. 14 ಆ ನಗರದ ಗೋಡೆಗಳನ್ನು ಹನ್ನೆರಡು ಅಡಿಪಾಯದ ಕಲ್ಲುಗಳ ಮೇಲೆ ಕಟ್ಟಲಾಗಿತ್ತು. ಆ ಕಲ್ಲುಗಳ ಮೇಲೆ ಕುರಿಮರಿಯಾದಾತನ ಹನ್ನರೆಡು ಮಂದಿ ಅಪೊಸ್ತಲರ ಹೆಸರುಗಳನ್ನು ಬರೆಯಲಾಗಿತ್ತು.
Kannada Holy Bible: Easy-to-Read Version. All rights reserved. © 1997 Bible League International