Revised Common Lectionary (Semicontinuous)
ಸ್ತುತಿಗೀತೆ.
67 ದೇವರೇ, ನನ್ನನ್ನು ಕರುಣಿಸಿ ಆಶೀರ್ವದಿಸು.
ಪ್ರಸನ್ನಮುಖದಿಂದ ನಮ್ಮನ್ನು ನೋಡು.
2 ದೇವರೇ, ಸರ್ವಭೂನಿವಾಸಿಗಳು ನಿನ್ನನ್ನು ತಿಳಿದುಕೊಳ್ಳಲಿ.
ಜನರಿಗೆ ನಿನ್ನಿಂದಾಗುವ ರಕ್ಷಣೆಯನ್ನು ಸರ್ವಜನಾಂಗಗಳೂ ಕಾಣಲಿ.
3 ದೇವರೇ, ಜನಾಂಗಗಳು ನಿನ್ನನ್ನು ಕೊಂಡಾಡಲಿ!
ಸರ್ವಜನರೆಲ್ಲರೂ ನಿನ್ನನ್ನು ಸ್ತುತಿಸಲಿ!
4 ಎಲ್ಲಾ ಜನಾಂಗಗಳು ಸಂತೋಷದಿಂದ ಉಲ್ಲಾಸಿಸಲಿ.
ಯಾಕೆಂದರೆ ಜನರಿಗೆ ನ್ಯಾಯವಾದ ತೀರ್ಪುಮಾಡುವಾತನು ನೀನೇ;
ಪ್ರತಿಯೊಂದು ಜನಾಂಗವನ್ನು ಆಳುವಾತನು ನೀನೇ.
5 ದೇವರೇ, ಜನಾಂಗಗಳು ನಿನ್ನನ್ನು ಕೊಂಡಾಡಲಿ!
ಸರ್ವಜನರೆಲ್ಲರೂ ನಿನ್ನನ್ನು ಸ್ತುತಿಸಲಿ!
6 ದೇವರೇ, ನಮ್ಮ ದೇವರೇ, ನಮ್ಮನ್ನು ಆಶೀರ್ವದಿಸು.
ನಮ್ಮ ಭೂಮಿಯು ಮಹಾಸುಗ್ಗಿಯನ್ನು ಕೊಡಲಿ.
7 ಆತನು ನಮ್ಮನ್ನು ಆಶೀರ್ವದಿಸಲಿ.
ಸರ್ವಭೂನಿವಾಸಿಗಳೆಲ್ಲರೂ ಆತನಲ್ಲಿ ಭಯಭಕ್ತಿವುಳ್ಳವರಾಗಲಿ.
9 ಆಗ ನೀನು ಒಳ್ಳೆಯದನ್ನೂ ನ್ಯಾಯನೀತಿಗಳನ್ನೂ ಸನ್ಮಾರ್ಗಗಳನ್ನೂ ಅರ್ಥಮಾಡಿಕೊಳ್ಳುವೆ. 10 ಆಗ ಜ್ಞಾನವು ನಿನ್ನ ಹೃದಯದ ಒಳಗೆ ಬರುವುದು; ನಿನ್ನ ಆತ್ಮವು ತಿಳುವಳಿಕೆಯೊಡನೆ ಸಂತೋಷವಾಗಿರುವುದು.
11 ವಿವೇಕವು ನಿನ್ನನ್ನು ಕಾಪಾಡುವುದು; ಬುದ್ಧಿಯು ನಿನಗೆ ಕಾವಲಾಗಿರುವುದು; 12 ಹೀಗೆ ನೀನು ದುರ್ಮಾರ್ಗಗಳಿಂದಲೂ ಸುಳ್ಳುಗಾರರಿಂದಲೂ ತಪ್ಪಿಸಿಕೊಳ್ಳುವೆ. 13 ಅವರಾದರೋ ನೀತಿಮಾರ್ಗವನ್ನು ಬಿಟ್ಟು ಪಾಪವೆಂಬ ಕತ್ತಲೆಯಲ್ಲಿ ಜೀವಿಸುತ್ತಿದ್ದಾರೆ. 14 ಅವರಿಗೆ ಕೆಟ್ಟದ್ದನ್ನು ಮಾಡುವುದರಲ್ಲೇ ಸಂತೋಷ; ಕೆಡುಕರ ಕೆಟ್ಟಕಾರ್ಯಗಳಲ್ಲೇ ಆನಂದ. 15 ಅವರ ಮಾರ್ಗಗಳು ವಕ್ರವಾಗಿವೆ; ಅವರ ನಡತೆಗಳು ದುರ್ನಡತೆಗಳಾಗಿವೆ.
ಜಕ್ಕಾಯ
19 ಒಮ್ಮೆ ಯೇಸು ಜೆರಿಕೊ ಪಟ್ಟಣದ ಮೂಲಕ ಹೋಗುತ್ತಿದ್ದನು. 2 ಆ ಪಟ್ಟಣದಲ್ಲಿ ಜಕ್ಕಾಯನೆಂಬ ಮನುಷ್ಯನಿದ್ದನು. ಅವನು ಐಶ್ವರ್ಯವಂತನೂ ಪ್ರಧಾನ ಸುಂಕವಸೂಲಿಗಾರನೂ ಆಗಿದ್ದನು. 3 ಅವನು ಯೇಸುವನ್ನು ನೋಡಲು ಬಯಸಿದನು. ಯೇಸುವನ್ನು ನೋಡುವುದಕ್ಕಾಗಿ ಇತರ ಅನೇಕ ಜನರೂ ಅಲ್ಲಿದ್ದರು. ಜಕ್ಕಾಯನು ಬಹಳ ಗಿಡ್ಡನಾಗಿದ್ದುದರಿಂದ ಆ ಜನರ ಗುಂಪಿನ ದೆಸೆಯಿಂದ ಯೇಸುವನ್ನು ನೋಡಲಾಗಲಿಲ್ಲ. 4 ಆದ್ದರಿಂದ ಅವನು ಬೇರೊಂದು ಸ್ಥಳಕ್ಕೆ ಓಡಿಹೋಗಿ ಒಂದು ಆಲದ ಮರವನ್ನು ಹತ್ತಿ ಕುಳಿತುಕೊಂಡನು. ಯೇಸು ಆ ಸ್ಥಳದ ಮೂಲಕ ಹೋಗುವನೆಂದು ಜಕ್ಕಾಯನಿಗೆ ಗೊತ್ತಿತ್ತು.
5 ಯೇಸು ಆ ಸ್ಥಳಕ್ಕೆ ಬಂದಾಗ, ಮರದ ಮೇಲೆ ಕುಳಿತಿದ್ದ ಜಕ್ಕಾಯನನ್ನು ಕಣ್ಣೆತ್ತಿ ನೋಡಿ ಅವನಿಗೆ, “ಜಕ್ಕಾಯನೇ ಬೇಗನೆ ಕೆಳಗಿಳಿದು ಬಾ! ಈ ದಿನ ನಾನು ನಿನ್ನ ಮನೆಯಲ್ಲಿ ಇಳಿದುಕೊಳ್ಳಬೇಕು” ಎಂದು ಹೇಳಿದನು.
6 ಆಗ ಜಕ್ಕಾಯನು ಬೇಗನೆ ಕೆಳಗಿಳಿದು ಬಂದು ಯೇಸುವನ್ನು ಸಂತೋಷದಿಂದ ಸ್ವಾಗತಿಸಿದನು. 7 ಜನರೆಲ್ಲರೂ ಇದನ್ನು ನೋಡಿ, “ಯೇಸು ಎಂಥವನ ಮನೆಯಲ್ಲಿ ಇಳಿದುಕೊಳ್ಳುತ್ತಾನೆ. ಜಕ್ಕಾಯನು ಪಾಪಿ!” ಎಂದು ಆಕ್ಷೇಪಣೆ ಮಾಡತೊಡಗಿದರು.
8 ಜಕ್ಕಾಯನು ಪ್ರಭುವಿಗೆ (ಯೇಸುವಿಗೆ), “ನಾನು ಜನರಿಗೆ ಉಪಕಾರ ಮಾಡಬೇಕೆಂದಿದ್ದೇನೆ. ನಾನು ನನ್ನ ಹಣದಲ್ಲಿ ಅರ್ಧವನ್ನು ಬಡವರಿಗೆ ಕೊಡುವೆನು. ನಾನು ಯಾರಿಗಾದರೂ ಮೋಸಮಾಡಿದ್ದರೆ, ಆ ವ್ಯಕ್ತಿಗೆ ಅದರ ನಾಲ್ಕರಷ್ಟು ಹೆಚ್ಚಾಗಿ ಕೊಡುತ್ತೇನೆ” ಎಂದು ಹೇಳಿದನು.
9 ಯೇಸು, “ಈ ಮನುಷ್ಯನು ಒಳ್ಳೆಯವನೇ ಸರಿ. ಇವನು ನಿಜವಾಗಿಯೂ ಅಬ್ರಹಾಮನ ಕುಟುಂಬಕ್ಕೆ ಸೇರಿದ್ದಾನೆ. ಇಂದೇ ಈ ಮನೆಗೆ ರಕ್ಷಣೆ ಆಯಿತು. 10 ಮನುಷ್ಯಕುಮಾರನು ಬಂದದ್ದು ತಪ್ಪಿಹೋದ ಜನರನ್ನು ಹುಡುಕಿ ರಕ್ಷಿಸುವುದಕ್ಕಾಗಿಯಷ್ಟೇ” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International