Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 133

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ. ರಚನೆಗಾರ: ದಾವೀದ.

133 ಆಹಾ, ಸಹೋದರರು ಅನ್ಯೋನ್ಯತೆಯಿಂದಿರುವುದು
    ಎಷ್ಟೋ ಒಳ್ಳೆಯದು, ಎಷ್ಟೋ ರಮ್ಯವಾದದ್ದು.
ಅದು ಯಾಜಕನ ತಲೆಯ ಮೇಲೆ ಹಾಕಲ್ಪಟ್ಟು ಆರೋನನ ಗಡ್ಡಕ್ಕೂ
    ಅಲ್ಲಿಂದ ಅವನ ಉಡುಪುಗಳ ಮೇಲೆಯೂ ಇಳಿದುಬರುವ ಪರಿಮಳ ತೈಲದಂತಿರುವುದು;
ಅದು ಹೆರ್ಮೋನ್ ಪರ್ವತದಿಂದ ಹುಟ್ಟಿ ಚೀಯೋನ್ ಪರ್ವತದ ಮೇಲೆ ಬೀಳುವ ದಟ್ಟವಾದ ಮಂಜಿನಂತಿರುವುದು.
    ಯೆಹೋವನು ನಿತ್ಯಜೀವವೆಂಬ ತನ್ನ ಆಶೀರ್ವಾದವನ್ನು ಅನುಗ್ರಹಿಸಿದ್ದು ಚೀಯೋನಿನಲ್ಲಿಯೇ.

ಯಾಜಕಕಾಂಡ 19:9-18

“ಸುಗ್ಗಿಕಾಲದಲ್ಲಿ ನಿಮ್ಮ ಬೆಳೆಯನ್ನು ಕೊಯ್ಯುವಾಗ, ಹೊಲಗಳ ಮೂಲೆಗಳಲ್ಲಿರುವುದನ್ನೆಲ್ಲಾ ಕೊಯ್ಯಬೇಡಿರಿ; ಧಾನ್ಯವೇನಾದರೂ ನೆಲದ ಮೇಲೆ ಬಿದ್ದರೆ ಅದನ್ನು ಕೂಡಿಸಿಕೊಳ್ಳಬಾರದು. 10 ನಿಮ್ಮ ದ್ರಾಕ್ಷಿತೋಟಗಳಲ್ಲಿರುವ ದ್ರಾಕ್ಷಿಗಳನ್ನೆಲ್ಲಾ ತೆಗೆದುಕೊಳ್ಳಬೇಡಿರಿ: ನೆಲದ ಮೇಲೆ ಬೀಳುವ ದ್ರಾಕ್ಷಿಹಣ್ಣುಗಳನ್ನು ಹೆಕ್ಕಿಕೊಳ್ಳಬಾರದು. ಯಾಕೆಂದರೆ ನೀವು ಅವುಗಳನ್ನು ಬಡವರಿಗಾಗಿಯೂ ನಿಮ್ಮ ದೇಶದಲ್ಲಿ ವಾಸಿಸಲು ಬಂದ ಪರದೇಶಸ್ಥರಿಗಾಗಿಯೂ ಬಿಡಬೇಕು. ನಾನೇ ನಿಮ್ಮ ದೇವರಾದ ಯೆಹೋವನು!

11 “ನೀವು ಕದಿಯಬಾರದು; ಮೋಸಮಾಡಬಾರದು; ಒಬ್ಬರಿಗೊಬ್ಬರು ಸುಳ್ಳಾಡಬಾರದು. 12 ನೀವು ನನ್ನ ಹೆಸರನ್ನು ಉಪಯೋಗಿಸಿ ಸುಳ್ಳಾಣೆ ಇಟ್ಟುಕೊಳ್ಳಬಾರದು; ಇಲ್ಲವಾದರೆ ನೀವು ದೇವರ ಹೆಸರನ್ನು ಅಪಕೀರ್ತಿಗೆ ಗುರಿಪಡಿಸುವಿರಿ; ನಾನೇ ನಿಮ್ಮ ದೇವರಾದ ಯೆಹೋವನು!

13 “ನಿಮ್ಮ ನೆರೆಯವನಿಗೆ ಕೆಡುಕುಗಳನ್ನು ಮಾಡಬಾರದು. ನೀವು ಅವನನ್ನು ಸುಲಿಗೆ ಮಾಡಬಾರದು. ನಿಮ್ಮ ಕೂಲಿಯವರ ಕೂಲಿಯನ್ನು ಮರುದಿನದ ಮುಂಜಾನೆಯವರೆಗೆ ಹಿಡಿದಿಟ್ಟುಕೊಳ್ಳಬಾರದು.

14 “ನೀವು ಕಿವುಡನನ್ನು ಶಪಿಸಬಾರದು. ಕುರುಡನು ಬೀಳುವಂತೆ ನೀವು ಅವನ ಮುಂದೆ ಅಡ್ಡವಾಗಿ ಏನನ್ನೂ ಇಡಬಾರದು. ಆದರೆ ನೀವು ನಿಮ್ಮ ದೇವರನ್ನು ಸನ್ಮಾನಿಸಬೇಕು. ನಾನೇ ನಿಮ್ಮ ದೇವರಾದ ಯೆಹೋವನು.

15 “ನೀವು ಕೊಡುವ ತೀರ್ಪು ನ್ಯಾಯವಾಗಿರಬೇಕು. ಬಡವರ ಬಡತನವನ್ನಾಗಲಿ ಪ್ರಾಮುಖ್ಯರ ದೊಡ್ಡಸ್ತಿಕೆಯನ್ನಾಗಲಿ ಗಮನಿಸದೆ ಪಕ್ಷಪಾತವಿಲ್ಲದೆ ತೀರ್ಪುಕೊಡಬೇಕು. ನೀವು ನಿಮ್ಮ ನೆರೆಯವನಿಗೆ ತೀರ್ಪುಮಾಡುವಾಗ ನ್ಯಾಯದ ತೀರ್ಪುಕೊಡಿರಿ. 16 ಬೇರೆ ಜನರ ವಿರುದ್ಧ ಚಾಡಿ ಹೇಳಬಾರದು. ನಿಮ್ಮ ನೆರೆಯವನ ಪ್ರಾಣವನ್ನು ಅಪಾಯಕ್ಕೆ ಈಡುಮಾಡುವ ಯಾವ ಕಾರ್ಯವನ್ನೂ ನೀವು ಮಾಡಬಾರದು. ನಾನೇ ಯೆಹೋವನು!

17 “ನೀವು ನಿಮ್ಮ ಸಹೋದರನನ್ನು ಮನಸ್ಸಿನಲ್ಲಿ ದ್ವೇಷಿಸಬಾರದು. ನಿಮ್ಮ ಸಹೋದರನು ಏನಾದರೂ ತಪ್ಪುಮಾಡಿದರೆ, ಅವನೊಡನೆ ಅದರ ಕುರಿತು ಮಾತಾಡು. ಅವನ ಅಪರಾಧದಲ್ಲಿ ನೀವು ಪಾಲುಹೊಂದದಂತೆ ನೇರವಾಗಿ ಗದರಿಸಿ. ಆಗ ನೀವು ಅವನನ್ನು ಕ್ಷಮಿಸಬಹುದು. 18 ಜನರು ನಿಮಗೆ ಮಾಡುವ ಕೆಟ್ಟಕಾರ್ಯಗಳನ್ನು ಮರೆತುಬಿಡಿರಿ. ನಿಮ್ಮ ಜನರಲ್ಲಿ ಒಬ್ಬನಾಗಿರುವವನ ಮೇಲೆ ಸೇಡನ್ನು ತೀರಿಸಿಕೊಳ್ಳಲು ಪ್ರಯತ್ನಿಸಬೇಡಿರಿ; ದ್ವೇಷವನ್ನೂ ಇಟ್ಟುಕೊಳ್ಳಬೇಡಿ. ನಿಮ್ಮ ನೆರೆಯವನನ್ನು ನಿಮ್ಮಂತೆಯೇ ಪ್ರೀತಿಸಿರಿ. ನಾನೇ ಯೆಹೋವನು!

ಲೂಕ 10:25-28

ಒಳ್ಳೆಯ ಸಮಾರ್ಯದವನ ಸಾಮ್ಯ

25 ಆಗ ಧರ್ಮೋಪದೇಶಕನೊಬ್ಬನು ಯೇಸುವನ್ನು ಪರೀಕ್ಷಿಸಲು ಎದ್ದುನಿಂತು, “ಬೋಧಕನೇ, ನಾನು ನಿತ್ಯಜೀವ ಹೊಂದಲು ಏನು ಮಾಡಬೇಕು?” ಎಂದು ಕೇಳಿದನು.

26 ಯೇಸು ಅವನಿಗೆ, “ಧರ್ಮಶಾಸ್ತ್ರದಲ್ಲಿ ಇದರ ಕುರಿತು ಏನು ಬರೆದಿದೆ?” ಎಂದು ಕೇಳಿದನು.

27 ಅದಕ್ಕೆ ಅವನು, “‘ನೀನು ನಿನ್ನ ಪ್ರಭುವಾದ ದೇವರನ್ನು ಪೂರ್ಣಹೃದಯದಿಂದ, ಪೂರ್ಣಪ್ರಾಣದಿಂದ, ಪೂರ್ಣಶಕ್ತಿಯಿಂದ ಮತ್ತು ಪೂರ್ಣಮನಸ್ಸಿನಿಂದ ಪ್ರೀತಿಸಬೇಕು’(A) ಮತ್ತು ‘ನೀನು ನಿನ್ನನ್ನು ಪ್ರೀತಿಸುವಂತೆ ನಿನ್ನ ನೆರೆಯವರನ್ನು ಪ್ರೀತಿಸಬೇಕು’(B) ಎಂದು ಬರೆದಿದೆ” ಎಂಬುದಾಗಿ ಹೇಳಿದನು.

28 ಯೇಸು, “ನಿನ್ನ ಉತ್ತರ ಸರಿಯಾಗಿದೆ. ನೀನು ಹಾಗೆಯೇ ಮಾಡು, ಆಗ ನಿನಗೆ ನಿತ್ಯಜೀವ ದೊರೆಯುವುದು” ಅಂದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International