Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಅಪೊಸ್ತಲರ ಕಾರ್ಯಗಳು 11:1-18

ಪೇತ್ರನು ಜೆರುಸಲೇಮಿಗೆ ಹಿಂತಿರುಗುವನು

11 ಯೆಹೂದ್ಯರಲ್ಲದವರು ಸಹ ದೇವರ ವಾಕ್ಯವನ್ನು ಸ್ವೀಕರಿಸಿಕೊಂಡರೆಂಬುದು ಅಪೊಸ್ತಲರಿಗೂ ಜುದೇಯದ ಸಹೋದರರಿಗೂ ತಿಳಿಯಿತು. ಆದರೆ ಪೇತ್ರನು ಜೆರುಸಲೇಮಿಗೆ ಬಂದಾಗ ಕೆಲವು ಯೆಹೂದ್ಯ ವಿಶ್ವಾಸಿಗಳು[a] ಅವನೊಂದಿಗೆ ವಾದ ಮಾಡಿದರು. ಅವರು, “ಯೆಹೂದ್ಯರಲ್ಲದವರ ಮತ್ತು ಸುನ್ನತಿ ಮಾಡಿಸಿಕೊಂಡಿಲ್ಲದವರ ಮನೆಗಳಿಗೆ ನೀನು ಹೋದೆ! ನೀನು ಅವರೊಂದಿಗೆ ಊಟವನ್ನು ಸಹ ಮಾಡಿದೆ!” ಎಂದು ಹೇಳಿದರು.

ಆದ್ದರಿಂದ ಪೇತ್ರನು ನಡೆದ ಸಂಗತಿಯನ್ನೆಲ್ಲಾ ಅವರಿಗೆ ವಿವರಿಸಿದನು. ಪೇತ್ರನು ಅವರಿಗೆ, “ನಾನು ಜೊಪ್ಪ ಪಟ್ಟಣದಲ್ಲಿದ್ದೆನು. ನಾನು ಪ್ರಾರ್ಥಿಸುತ್ತಿದ್ದಾಗ ನನಗೊಂದು ದರ್ಶನವಾಯಿತು. ಆ ದರ್ಶನದಲ್ಲಿ, ಆಕಾಶದಿಂದ ಇಳಿದುಬರುತ್ತಿರುವ ಒಂದು ವಸ್ತುವನ್ನು ಕಂಡೆನು. ಅದು ದೊಡ್ಡ ತಟ್ಟೆಯಂತಿತ್ತು. ಅದರ ನಾಲ್ಕು ಮೂಲೆಗಳಲ್ಲಿ ಹಗ್ಗವನ್ನು ಕಟ್ಟಿ ಭೂಮಿಗೆ ಇಳಿಯಬಿಡಲಾಗಿತ್ತು. ಅದು ಇಳಿದು ಬಂದು ನನ್ನ ಸಮೀಪದಲ್ಲೇ ನಿಂತುಕೊಂಡಿತು. ನಾನು ಅದರೊಳಗೆ ನೋಡಿದೆನು. ಅದರಲ್ಲಿ ಪಶುಗಳೂ ಕ್ರೂರಪ್ರಾಣಿಗಳೂ ಹರಿದಾಡುವ ಕ್ರಿಮಿಕೀಟಗಳೂ ಹಾರಾಡುವ ಪಕ್ಷಿಗಳೂ ಇದ್ದವು. ಆಗ, ‘ಪೇತ್ರನೇ, ಎದ್ದೇಳು! ಇವುಗಳಲ್ಲಿ ಯಾವುದನ್ನು ಬೇಕಾದರೂ ಕೊಯ್ದುತಿನ್ನು!’ ಎಂದು ನನಗೆ ಹೇಳುವ ವಾಣಿಯನ್ನು ಕೇಳಿದೆನು.

“ಆದರೆ ನಾನು, ‘ಪ್ರಭುವೇ, ನಾನು ಹಾಗೆ ಮಾಡಲಾರೆ! ಅಪವಿತ್ರವಾದ ಮತ್ತು ಅಶುದ್ಧವಾದ ಏನನ್ನಾಗಲಿ ನಾನೆಂದೂ ತಿಂದಿಲ್ಲ’ ಎಂದು ಹೇಳಿದೆನು.

“ಆದರೆ, ‘ಇವುಗಳನ್ನು ದೇವರು ಶುದ್ಧೀಕರಿಸಿದ್ದಾನೆ. ಇವುಗಳನ್ನು ಅಶದ್ಧವೆಂದು ಹೇಳಬೇಡ!’ ಎಂದು ಆ ವಾಣಿಯು ನನಗೆ ಉತ್ತರಕೊಟ್ಟಿತು.

10 “ಹೀಗೆ ಮೂರು ಸಲವಾಯಿತು. ಬಳಿಕ ಆ ಇಡೀ ವಸ್ತುವನ್ನು ಆಕಾಶಕ್ಕೆ ಹಿಂತೆಗೆದುಕೊಳ್ಳಲಾಯಿತು. 11 ಅದೇ ಸಮಯದಲ್ಲಿ ನಾನಿದ್ದ ಮನೆಗೆ ಮೂರು ಮಂದಿ ಬಂದರು. ಈ ಮೂವರನ್ನು ಸೆಜರೇಯ ಪಟ್ಟಣದಿಂದ ಕಳುಹಿಸಲಾಗಿತ್ತು. 12 ಸಂದೇಹಪಡದೆ ಅವರೊಂದಿಗೆ ಹೋಗಬೇಕೆಂದು ಪವಿತ್ರಾತ್ಮನು ನನಗೆ ಹೇಳಿದನು. ಇಲ್ಲಿರುವ ಈ ಆರು ಮಂದಿ ಸಹೋದರರು ನನ್ನೊಂದಿಗೆ ಬಂದರು. ನಾವು ಕೊರ್ನೇಲಿಯನ ಮನೆಗೆ ಹೋದೆವು. 13 ತನ್ನ ಮನೆಯಲ್ಲಿ ದೇವದೂತನೊಬ್ಬನು ನಿಂತಿರುವುದನ್ನು ತಾನು ಕಂಡದ್ದರ ಬಗ್ಗೆ ಕೊರ್ನೇಲಿಯನು ನನಗೆ ಹೇಳಿದನು. ಆ ದೇವದೂತನು ಕೊರ್ನೇಲಿಯನಿಗೆ, ‘ಕೆಲವು ಜನರನ್ನು ಜೊಪ್ಪಕ್ಕೆ ಕಳುಹಿಸು. ಸೀಮೋನ್ ಪೇತ್ರನನ್ನು ಆಹ್ವಾನಿಸಿ ನಿಮ್ಮ ಬಳಿಗೆ ಬರಮಾಡಿಕೊ. 14 ಅವನು ನಿಮ್ಮೊಂದಿಗೆ ಮಾತಾಡುವನು. ಅವನು ಹೇಳುವ ಸಂಗತಿಗಳು ನಿನ್ನನ್ನೂ ನಿನ್ನ ಕುಟಂಬದವರನ್ನೂ ರಕ್ಷಿಸುತ್ತವೆ’ ಎಂದು ಹೇಳಿದನು.

15 “ನಾನು ನನ್ನ ಉಪದೇಶವನ್ನು ಆರಂಭಿಸಿದ ಮೇಲೆ, ಪ್ರಾರಂಭದಲ್ಲಿ[b] ಪವಿತ್ರಾತ್ಮನು ನಮ್ಮ ಮೇಲೆ ಬಂದಂತೆ ಅವರ ಮೇಲೆಯೂ ಬಂದನು. 16 ಆಗ ನಾನು ಪ್ರಭುವಿನ ಮಾತುಗಳನ್ನು ಜ್ಞಾಪಿಸಿಕೊಂಡೆನು. ‘ಯೋಹಾನನು ಜನರಿಗೆ ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸಿದನು, ಆದರೆ ನೀವು ಪವಿತ್ರಾತ್ಮನಲ್ಲಿ ದೀಕ್ಷಾಸ್ನಾನ ಪಡೆಯುವಿರಿ!’ ಎಂದು ಪ್ರಭುವು ಹೇಳಿದ್ದನು. 17 ಪ್ರಭುವಾದ ಯೇಸು ಕ್ರಿಸ್ತನಲ್ಲಿ ನಂಬಿಕೆಯಿಟ್ಟ ನಮಗೆ ಕೊಟ್ಟ ವರವನ್ನೇ ದೇವರು ಈ ಜನರಿಗೆ ಕೊಟ್ಟನು. ಹೀಗಿರಲು ನಾನು ದೇವರ ಕೆಲಸವನ್ನು ನಿಲ್ಲಿಸಲು ಸಾಧ್ಯವಿರಲಿಲ್ಲ” ಎಂದು ಹೇಳಿದನು.

18 ಯೆಹೂದ್ಯವಿಶ್ವಾಸಿಗಳು ಈ ಸಂಗತಿಗಳನ್ನು ಕೇಳಿದಾಗ ವಾದವನ್ನು ನಿಲ್ಲಿಸಿ, ದೇವರನ್ನು ಸ್ತುತಿಸುತ್ತಾ, “ಹಾಗಾದರೆ ನಮ್ಮಂತೆಯೇ ತಮ್ಮ ಹೃದಯಗಳನ್ನು ಮಾರ್ಪಡಿಸಿಕೊಂಡು ಜೀವವನ್ನು ಹೊಂದಿಕೊಳ್ಳಲು ದೇವರು ಯೆಹೂದ್ಯರಲ್ಲದವರಿಗೂ ಅವಕಾಶ ಕೊಟ್ಟಿದ್ದಾನೆ!” ಎಂದು ಹೇಳಿದರು.

ಕೀರ್ತನೆಗಳು 148

148 ಯೆಹೋವನಿಗೆ ಸ್ತೋತ್ರವಾಗಲಿ!
ಮೇಲೋಕದಲ್ಲಿರುವ ದೇವದೂತರೇ, ಆಕಾಶಮಂಡಲದಿಂದ ಯೆಹೋವನನ್ನು ಸ್ತುತಿಸಿರಿ!
ಎಲ್ಲಾ ದೂತರುಗಳೇ, ಆತನಿಗೆ ಸ್ತೋತ್ರಮಾಡಿರಿ!
    ಆತನ ಎಲ್ಲಾ ಸೈನ್ಯಗಳೇ, ಆತನನ್ನು ಸ್ತುತಿಸಿರಿ!
ಸೂರ್ಯಚಂದ್ರರೇ, ಆತನನ್ನು ಸ್ತುತಿಸಿರಿ!
    ಆಕಾಶದಲ್ಲಿರುವ ನಕ್ಷತ್ರಗಳೇ, ಬೆಳಕುಗಳೇ, ಆತನನ್ನು ಸ್ತುತಿಸಿರಿ!
ಆತನಿಗೆ ಸ್ತೋತ್ರಮಾಡಿರಿ!
    ಆತನ ಸರ್ವಸೈನ್ಯಗಳೇ ಆತನನ್ನು ಸ್ತುತಿಸಿರಿ!
ಉನ್ನತೋನ್ನತವಾದ ಆಕಾಶವೇ, ಆತನನ್ನು ಸ್ತುತಿಸು!
    ಆಕಾಶದ ಮೇಲಿರುವ ನೀರುಗಳೇ ಆತನನ್ನು ಸ್ತುತಿಸಿರಿ!
ಅವು ಯೆಹೋವನ ಹೆಸರನ್ನು ಸ್ತುತಿಸಲಿ.
    ಆತನು ಆಜ್ಞಾಪಿಸಲು ಅವುಗಳೆಲ್ಲಾ ಸೃಷ್ಟಿಯಾದವು!
ಇವುಗಳೆಲ್ಲಾ ಶಾಶ್ವತವಾಗಿರುವಂತೆ ಆತನು ಮಾಡಿದನು.
    ಎಂದಿಗೂ ಕೊನೆಗೊಳ್ಳದ ನಿಯಮಗಳನ್ನು ಆತನು ಮಾಡಿದನು.
ಭೂಮಿಯ ಮೇಲಿರುವ ಸಮಸ್ತವೇ, ಯೆಹೋವನಿಗೆ ಸ್ತೋತ್ರಮಾಡಿರಿ!
    ಮಹಾಸಮುದ್ರ ಪ್ರಾಣಿಗಳೇ, ಆತನನ್ನು ಸ್ತುತಿಸಿರಿ!
ಆತನು ಬೆಂಕಿಯನ್ನೂ ಆಲಿಕಲ್ಲನ್ನೂ ಮಂಜನ್ನೂ
    ಹೊಗೆಯನ್ನೂ ಬಿರುಗಾಳಿಯನ್ನೂ ಉಂಟುಮಾಡಿದನು.
ಆತನು ಬೆಟ್ಟಗಳನ್ನೂ ಗುಡ್ಡಗಳನ್ನೂ
    ಹಣ್ಣಿನ ಮರಗಳನ್ನೂ ದೇವದಾರು ಮರಗಳನ್ನೂ ಸೃಷ್ಟಿಮಾಡಿದನು.
10 ಆತನು ಎಲ್ಲಾ ಕಾಡುಪ್ರಾಣಿಗಳನ್ನೂ ಪಶುಗಳನ್ನೂ ಕ್ರಿಮಿಕೀಟಗಳನ್ನೂ ಪಕ್ಷಿಗಳನ್ನೂ ಸೃಷ್ಟಿಮಾಡಿದನು.
11 ಆತನು ಭೂಮಿಯ ಮೇಲೆ ರಾಜರುಗಳನ್ನೂ ಜನಾಂಗಗಳನ್ನೂ
    ನಾಯಕರುಗಳನ್ನೂ ನ್ಯಾಯಾಧಿಪತಿಗಳನ್ನೂ ಸೃಷ್ಟಿಮಾಡಿದನು.
12 ಆತನು ಪ್ರಾಯಸ್ಥರಾದ ಸ್ತ್ರೀಪುರುಷರನ್ನೂ
    ವೃದ್ಧರನ್ನೂ ಯೌವನಸ್ಥರನ್ನೂ ಸೃಷ್ಟಿಸಿದನು.
13 ಯೆಹೋವನ ಹೆಸರನ್ನು ಕೊಂಡಾಡಿರಿ!
    ಆತನ ಹೆಸರನ್ನು ಶಾಶ್ವತವಾಗಿ ಸನ್ಮಾನಿಸಿರಿ!
    ಭೂಮ್ಯಾಕಾಶಗಳಲ್ಲಿರುವ ಸಮಸ್ತವೇ, ಆತನನ್ನು ಸ್ತುತಿಸು!
14 ಆತನು ತನ್ನ ಜನರನ್ನು ಬಲಿಷ್ಠರನ್ನಾಗಿ ಮಾಡುತ್ತಾನೆ.
    ಆತನ ಭಕ್ತರನ್ನು ಜನರು ಹೊಗಳುವರು.
    ಜನರು ಇಸ್ರೇಲರನ್ನು ಹೊಗಳುವರು.
ಆತನು ಹೋರಾಡುತ್ತಿರುವುದು ಅವರಿಗಾಗಿಯೇ.
    ಯೆಹೋವನಿಗೆ ಸ್ತೋತ್ರವಾಗಲಿ!

ಪ್ರಕಟನೆ 21:1-6

ನೂತನ ಜೆರುಸಲೇಮ್

21 ನಂತರ ನೂತನ ಪರಲೋಕವನ್ನು ಮತ್ತು ನೂತನ ಭೂಮಿಯನ್ನು[a] ನಾನು ನೋಡಿದೆನು. ಮೊದಲನೆ ಪರಲೋಕ ಮತ್ತು ಮೊದಲನೆ ಭೂಮಿ ಅದೃಶ್ಯವಾಗಿದ್ದವು. ಅಲ್ಲಿ ಸಮುದ್ರವಿರಲಿಲ್ಲ. ಪರಿಶುದ್ಧ ನಗರವು ಪರಲೋಕದಿಂದ ದೇವರ ಬಳಿಯಿಂದ ಇಳಿದು ಬರುತ್ತಿರುವುದನ್ನು ನಾನು ನೋಡಿದೆನು. ಈ ಪರಿಶುದ್ಧ ನಗರವೇ ನೂತನ ಜೆರುಸಲೇಮ್. ವಧುವು ತನ್ನ ಪತಿಗಾಗಿ ಶೃಂಗರಿಸಿಕೊಳ್ಳುವಂತೆ ಅದನ್ನು ಸಿದ್ಧಪಡಿಸಿದ್ದರು.

ಸಿಂಹಾಸನದಿಂದ ಒಂದು ಗಟ್ಟಿಯಾದ ಧ್ವನಿಯನ್ನು ನಾನು ಕೇಳಿದೆನು. ಆ ಧ್ವನಿಯು, “ಈಗ ದೇವರ ಮನೆಯು ಜನರ ಸಂಗಡವಿದೆ. ಆತನು ಅವರೊಂದಿಗೆ ನೆಲೆಸುತ್ತಾನೆ. ಅವರು ಆತನವರಾಗಿರುತ್ತಾರೆ. ದೇವರು ತಾನೇ ಅವರೊಂದಿಗೆ ಇರುತ್ತಾನೆ ಮತ್ತು ಅವರ ದೇವರಾಗಿರುತ್ತಾನೆ. ದೇವರು ಅವರ ಕಣ್ಣೀರನ್ನೆಲ್ಲ ಒರಸಿ ಬಿಡುವನು. ಅಲ್ಲಿ ಇನ್ನು ಮರಣವಿರುವುದಿಲ್ಲ, ದುಃಖವಿರುವುದಿಲ್ಲ, ಗೋಳಾಟವಿರುವುದಿಲ್ಲ ಮತ್ತು ನೋವಿರುವುದಿಲ್ಲ. ಹಳೆಯ ಮಾರ್ಗಗಳೆಲ್ಲ ಹೋಗಿಬಿಟ್ಟವು” ಎಂದು ಹೇಳಿತು.

ಸಿಂಹಾಸನದ ಮೇಲೆ ಕುಳಿತಿದ್ದವನು, “ನೋಡು! ನಾನು ಎಲ್ಲವನ್ನೂ ಹೊಸದಾಗಿ ಸೃಷ್ಟಿಸುತ್ತೇನೆ!” ಎಂದು ಹೇಳಿದನು. ನಂತರ ಆತನು, “ಈ ವಾಕ್ಯಗಳು ಸತ್ಯವಾದುವುಗಳೂ ನಂಬತಕ್ಕವುಗಳೂ ಆಗಿರುವುದರಿಂದ ಇವುಗಳನ್ನು ಬರೆ” ಎಂದು ಹೇಳಿದನು.

ಸಿಂಹಾಸನದ ಮೇಲೆ ಕುಳಿತಿದ್ದಾತನು ನನಗೆ ಹೀಗೆ ಹೇಳಿದನು: “ಎಲ್ಲವೂ ನೆರವೇರಿತು! ನಾನೇ ಆದಿಯೂ ಅಂತ್ಯವೂ ಆಗಿದ್ದೇನೆ. ನಾನೇ ಪ್ರಾರಂಭವೂ ಸಮಾಪ್ತಿಯೂ ಆಗಿದ್ದೇನೆ. ಬಾಯಾರಿದವರಿಗೆ ನಾನು ಜೀವಜಲದ ಬುಗ್ಗೆಯಿಂದ ನೀರನ್ನು ಉಚಿತವಾಗಿ ಕೊಡುತ್ತೇನೆ.

ಯೋಹಾನ 13:31-35

ತನ್ನ ಮರಣದ ಬಗ್ಗೆ ಯೇಸುವಿನ ಪ್ರಕಟನೆ

31 ಯೂದನು ಹೊರಟುಹೋದ ಮೇಲೆ ಯೇಸು, “ಈಗ ಮನುಷ್ಯಕುಮಾರನಿಗೆ ಮಹಿಮೆಯಾಗುವುದು. ಅಲ್ಲದೆ, ಮನುಷ್ಯಕುಮಾರನ ಮೂಲಕ ದೇವರಿಗೂ ಮಹಿಮೆಯಾಗುವುದು. 32 ಆತನ ಮೂಲಕವಾಗಿ ದೇವರಿಗೆ ಮಹಿಮೆಯಾಗುವುದರಿಂದ ತಕ್ಷಣವೇ ದೇವರ ಮೂಲಕವಾಗಿಯೂ ಆತನಿಗೆ ಮಹಿಮೆಯಾಗುವುದು” ಎಂದನು.

33 ಯೇಸು, “ನನ್ನ ಮಕ್ಕಳೇ, ಇನ್ನು ಸ್ವಲ್ಪ ಸಮಯ ಮಾತ್ರ ನಾನು ನಿಮ್ಮೊಂದಿಗೆ ಇರುತ್ತೇನೆ. ನೀವು ನನಗಾಗಿ ಹುಡುಕುವಿರಿ. ನಾನು ಯೆಹೂದ್ಯರಿಗೆ ಹೇಳಿದ್ದನ್ನು ನಿಮಗೂ ಹೇಳುತ್ತೇನೆ. ನಾನು ಹೋಗುವಲ್ಲಿಗೆ ನೀವು ಬರಲಾರಿರಿ.

34 “ನಾನು ನಿಮಗೆ ಹೊಸ ಆಜ್ಞೆಯನ್ನು ಕೊಡುತ್ತೇನೆ. ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು. 35 ನಾನು ನಿಮ್ಮನ್ನು ಪ್ರೀತಿಸಿದಂತೆಯೇ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು. ನೀವು ಒಬ್ಬರನ್ನೊಬ್ಬರು ಪ್ರೀತಿಸಿದರೆ, ನೀವೂ ನನ್ನ ಶಿಷ್ಯರೆಂಬುದನ್ನು ಎಲ್ಲಾ ಜನರು ತಿಳಿದುಕೊಳ್ಳುವರು” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International