Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 100

ಕೃತಜ್ಞತಾ ಸ್ತುತಿಗೀತೆ.

100 ಸಮಸ್ತ ಭೂನಿವಾಸಿಗಳೇ,
    ಯೆಹೋವನಿಗೆ ಗಾಯನ ಮಾಡಿರಿ!
ಯೆಹೋವನ ಸೇವೆಯನ್ನು ಸಂತೋಷದಿಂದ ಮಾಡಿರಿ;
    ಹರ್ಷಗೀತೆಗಳೊಡನೆ ಆತನ ಸನ್ನಿಧಿಗೆ ಬನ್ನಿರಿ!
ಯೆಹೋವನೇ ದೇವರೆಂದು ತಿಳಿದುಕೊಳ್ಳಿರಿ.
    ನಮ್ಮನ್ನು ಸೃಷ್ಟಿಸಿದವನು ಆತನೇ, ನಾವು ಆತನವರು.
    ನಾವು ಆತನ ಜನರೂ ಮಂದೆಯೂ ಆಗಿದ್ದೇವೆ.
ಕೃತಜ್ಞತಾಗೀತೆಗಳೊಡನೆ ಆತನ ಪಟ್ಟಣಕ್ಕೆ ಬನ್ನಿರಿ.
    ಸ್ತುತಿಗೀತೆಗಳೊಡನೆ ಆತನ ಆಲಯಕ್ಕೆ ಬನ್ನಿರಿ.
    ಆತನನ್ನು ಸನ್ಮಾನಿಸುತ್ತಾ ಆತನ ಹೆಸರನ್ನು ಕೊಂಡಾಡಿರಿ.
ಯೆಹೋವನು ಒಳ್ಳೆಯವನು!
    ಆತನ ಪ್ರೀತಿಯು ಶಾಶ್ವತವಾದದ್ದು,
    ಆತನ ನಂಬಿಗಸ್ತಿಕೆಯು ನಿರಂತರವಾದದ್ದು.

ಯೆಹೆಜ್ಕೇಲ 45:1-9

ಪವಿತ್ರ ಕಾರ್ಯಕ್ಕಾಗಿ ದೇಶದ ವಿಭಜನೆ

45 “ನೀನು ಚೀಟುಹಾಕಿ ಇಸ್ರೇಲರ ಕುಲಗಳಿಗನುಸಾರವಾಗಿ ದೇಶವನ್ನು ವಿಂಗಡಿಸಬೇಕು. ಆ ಸಮಯದಲ್ಲಿ ಒಂದು ಭಾಗವನ್ನು ಪ್ರತ್ಯೇಕಿಸಿಡಬೇಕು. ಅದು ಯೆಹೋವನಿಗೋಸ್ಕರ ಮೀಸಲಾಗಿಡಲ್ಪಟ್ಟದ್ದು. ಆ ಪ್ರದೇಶವು ಇಪ್ಪತ್ತೈದು ಸಾವಿರ ಮೊಳ ಉದ್ದ ಮತ್ತು ಹತ್ತು ಸಾವಿರ ಮೊಳ ಅಗಲವಿರುವದು.[a] ಈ ಎಲ್ಲಾ ಜಾಗವು ಪರಿಶುದ್ಧವಾದದ್ದು. ಆ ಪ್ರದೇಶದ ಮಧ್ಯ ಭಾಗದಲ್ಲಿ ಐನೂರು ಮೊಳ ಚೌಕದ ಸ್ಥಳ ದೇವಾಲಯಕ್ಕೆ ಮೀಸಲಾಗಿದೆ. ಈ ಭಾಗದ ಪರಿಧಿಯ ಉದ್ದಕ್ಕೂ ಐವತ್ತು ಮೊಳ ಅಗಲದ ಜಾಗವಿರುವದು. 3-4 ಪವಿತ್ರವಾದ ಪ್ರದೇಶದಲ್ಲಿ ಇಪ್ಪತ್ತೈದು ಸಾವಿರ ಮೊಳ ಉದ್ದದ ಮತ್ತು ಹತ್ತು ಸಾವಿರ ಮೊಳ ಅಗಲದ ಸ್ಥಳವು ಯಾಜಕರಿಗೆ ಸೇರಬೇಕು. ಅವರು ಯೆಹೋವನ ಸನ್ನಿಧಿಗೆ ಹೋಗಿ ಆತನ ಪವಿತ್ರಾಲಯದಲ್ಲಿ ಆತನ ಸೇವೆ ಮಾಡುವುದರಿಂದ ಪವಿತ್ರ ಪ್ರದೇಶದ ಈ ಭಾಗವು ಅವರಿಗೋಸ್ಕರವಾಗಿಯೂ ಅವರ ಮನೆಗಳಿಗೋಸ್ಕರವಾಗಿಯೂ ಇರಬೇಕು. ಆಲಯಕ್ಕಾಗಿ ಮೀಸಲಾದ ಐನೂರು ಮೊಳ ಚೌಕವಾದ ಜಾಗವು ಈ ಪವಿತ್ರ ಪ್ರದೇಶದೊಳಗಿರಬೇಕು. ಆ ಸ್ಥಳವು ಮಹಾ ಪವಿತ್ರವಾದ ಸ್ಥಳ. ಯಾಕೆಂದರೆ ಅತ್ಯಂತ ಪವಿತ್ರವಾದ ಆಲಯವು ಅಲ್ಲಿರುತ್ತದೆ. ಪವಿತ್ರ ಪ್ರದೇಶದ ಉಳಿದರ್ಧ ಭಾಗವು ಅಂದರೆ ಇಪ್ಪತ್ತೈದು ಸಾವಿರ ಮೊಳ ಉದ್ದದ ಮತ್ತು ಹತ್ತು ಸಾವಿರ ಮೊಳ ಅಗಲದ ಜಾಗವು ಲೇವಿಯರಿಗೆ ಮೀಸಲಾಗಿದೆ. ಅವರು ವಾಸಿಸುವ ಪಟ್ಟಣವು ಈ ಪ್ರದೇಶದಲ್ಲಿರುತ್ತದೆ.[b]

“ಪವಿತ್ರ ಪ್ರದೇಶ ಭಾಗದ ಪಕ್ಕದಲ್ಲಿ ಇಪ್ಪತ್ತೈದು ಸಾವಿರ ಮೊಳ ಉದ್ದದ ಮತ್ತು ಐದು ಸಾವಿರ ಮೊಳ ಅಗಲದ ಪ್ರದೇಶ ಭಾಗವು ಸಹ ಇರುತ್ತದೆ. ಇಸ್ರೇಲಿನ ಉಳಿದೆಲ್ಲ ಜನರಿಗೂ ಈ ಪ್ರದೇಶ ಭಾಗವು ಪಟ್ಟಣವಾಗಿರುತ್ತದೆ. ಅಧಿಪತಿಗೆ ಪವಿತ್ರ ಪ್ರದೇಶ ಭಾಗದ ಎರಡು ಕಡೆಗಳಲ್ಲೂ ಭೂಭಾಗಗಳಿರುವುದು. ಅಂದರೆ ಪವಿತ್ರ ಪ್ರದೇಶಕ್ಕೆ ಪಶ್ಚಿಮದಲ್ಲಿರುವ ಪಶ್ಚಿಮ ಭಾಗ ಮತ್ತು ಇಸ್ರೇಲರ ಪಟ್ಟಣದ ಪೂರ್ವ ಭೂಭಾಗ. ಇದು ಪವಿತ್ರ ಪ್ರದೇಶದ ಪೂರ್ವಭಾಗದಲ್ಲಿದೆ. ಅಧಿಪತಿಯ ಪಶ್ಚಿಮ ಭಾಗವು ಪವಿತ್ರ ಪ್ರದೇಶ ಭಾಗದ ಪಶ್ಚಿಮದ ಅಂಚಿನಿಂದ ಮೆಡಿಟರೇನಿಯನ್ ಸಮುದ್ರದವರೆಗೂ ವಿಸ್ತರಿಸಿದೆ. ಅಧಿಪತಿಯ ಪೂರ್ವ ಪ್ರದೇಶ ಭಾಗವು ಪೂರ್ವದಿಕ್ಕಿನ ಪಟ್ಟಣದ ಅಂಚಿನಿಂದ ಪೂರ್ವದ ಗಡಿಯವರೆಗೂ ವಿಸ್ತರಿಸಿದೆ. ಭೂಪ್ರದೇಶದ ಈ ಭಾಗವು ಅಧಿಪತಿಗೆ ಸೇರಿದೆ. ಹೀಗೆ, ಹಿಂದಿನ ಕಾಲದ ಅಧಿಪತಿಗಳು ಮಾಡಿದಂತೆ ಈ ಅಧಿಪತಿಯು ಜನರನ್ನು ಹಿಂಸಿಸಿ ಅವರ ಭೂಮಿಯನ್ನು ಕಸಿದುಕೊಳ್ಳುವುದಿಲ್ಲ. ಉಳಿದ ಭೂಭಾಗವು ಇಸ್ರೇಲಿನ ಇತರ ಕುಲಗಳವರಿಗೆ ಯಾವಾಗಲೂ ಸೇರಿರುತ್ತದೆ.”

ಇದು ನನ್ನ ಒಡೆಯನಾದ ಯೆಹೋವನ ನುಡಿಗಳು: “ಇಸ್ರೇಲ್ ಜನರನ್ನು ಆಳುವವರೇ, ಅವರನ್ನು ಕಠಿಣವಾಗಿ ಆಳುವದನ್ನು ನಿಲ್ಲಿಸಿರಿ. ಅವರನ್ನು ಸುಲುಕೊಳ್ಳುವದನ್ನು ನಿಲ್ಲಿಸಿರಿ. ನ್ಯಾಯದಿಂದಿದ್ದು ಒಳ್ಳೆಯದನ್ನೆ ಮಾಡಿರಿ. ಅವರನ್ನು ಅವರ ಮನೆಗಳಿಂದ ಹೊರಡಿಸುವದನ್ನು ನಿಲ್ಲಿಸಿರಿ.” ಇದು ನನ್ನ ಒಡೆಯನಾದ ಯೆಹೋವನ ನುಡಿ.

ಅಪೊಸ್ತಲರ ಕಾರ್ಯಗಳು 9:32-35

ಲುದ್ದ ಮತ್ತು ಜೊಪ್ಪದಲ್ಲಿ ಪೇತ್ರನು

32 ಜೆರುಸಲೇಮಿನ ಸುತ್ತಮುತ್ತಲ್ಲಿದ್ದ ಊರುಗಳಲ್ಲೆಲ್ಲಾ ಪೇತ್ರನು ಪ್ರಯಾಣ ಮಾಡುತ್ತಿರುವಾಗ ಲುದ್ದ ಎಂಬ ಊರಲ್ಲಿ ವಾಸವಾಗಿರುವ ವಿಶ್ವಾಸಿಗಳನ್ನು ಭೇಟಿಯಾಗಲು ಅಲ್ಲಿಗೆ ಹೋದನು. 33 ಅವನು ಲುದ್ದದಲ್ಲಿ ಐನೇಯಾ ಎಂಬವನನ್ನು ಕಂಡನು. ಪಾರ್ಶ್ವವಾಯು ರೋಗಿಯಾಗಿದ್ದ ಅವನು ಎಂಟು ವರ್ಷಗಳಿಂದ ಹಾಸಿಗೆ ಮೇಲಿದ್ದನು. 34 ಪೇತ್ರನು ಅವನಿಗೆ, “ಐನೇಯಾ, ಯೇಸು ಕ್ರಿಸ್ತನು ನಿನ್ನನ್ನು ಗುಣಪಡಿಸುತ್ತಾನೆ. ಎದ್ದು ನಿನ್ನ ಹಾಸಿಗೆಯನ್ನು ಎತ್ತಿಡು!” ಎಂದು ಹೇಳಿದನು. ಆ ಕೂಡಲೇ ಐನೇಯನು ಎದ್ದುನಿಂತನು. 35 ಲುದ್ದದಲ್ಲಿ ಮತ್ತು ಸಾರೋನಿನ ಬಯಲಿನಲ್ಲಿ ವಾಸವಾಗಿದ್ದ ಜನರೆಲ್ಲರು ಅವನನ್ನು ಕಂಡು ಪ್ರಭು ಯೇಸುವಿನಲ್ಲಿ ನಂಬಿಕೆ ಇಟ್ಟರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International