Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 100

ಕೃತಜ್ಞತಾ ಸ್ತುತಿಗೀತೆ.

100 ಸಮಸ್ತ ಭೂನಿವಾಸಿಗಳೇ,
    ಯೆಹೋವನಿಗೆ ಗಾಯನ ಮಾಡಿರಿ!
ಯೆಹೋವನ ಸೇವೆಯನ್ನು ಸಂತೋಷದಿಂದ ಮಾಡಿರಿ;
    ಹರ್ಷಗೀತೆಗಳೊಡನೆ ಆತನ ಸನ್ನಿಧಿಗೆ ಬನ್ನಿರಿ!
ಯೆಹೋವನೇ ದೇವರೆಂದು ತಿಳಿದುಕೊಳ್ಳಿರಿ.
    ನಮ್ಮನ್ನು ಸೃಷ್ಟಿಸಿದವನು ಆತನೇ, ನಾವು ಆತನವರು.
    ನಾವು ಆತನ ಜನರೂ ಮಂದೆಯೂ ಆಗಿದ್ದೇವೆ.
ಕೃತಜ್ಞತಾಗೀತೆಗಳೊಡನೆ ಆತನ ಪಟ್ಟಣಕ್ಕೆ ಬನ್ನಿರಿ.
    ಸ್ತುತಿಗೀತೆಗಳೊಡನೆ ಆತನ ಆಲಯಕ್ಕೆ ಬನ್ನಿರಿ.
    ಆತನನ್ನು ಸನ್ಮಾನಿಸುತ್ತಾ ಆತನ ಹೆಸರನ್ನು ಕೊಂಡಾಡಿರಿ.
ಯೆಹೋವನು ಒಳ್ಳೆಯವನು!
    ಆತನ ಪ್ರೀತಿಯು ಶಾಶ್ವತವಾದದ್ದು,
    ಆತನ ನಂಬಿಗಸ್ತಿಕೆಯು ನಿರಂತರವಾದದ್ದು.

ಯೆಹೆಜ್ಕೇಲ 37:15-28

ಯೆಹೂದ ಮತ್ತು ಇಸ್ರೇಲ್ ಒಂದಾಗುವದು

15 ಯೆಹೋವನ ಸಂದೇಶವು ನನಗೆ ತಿರುಗಿ ಬಂತು. ಆತನು ಹೇಳಿದ್ದೇನೆಂದರೆ: 16 “ನರಪುತ್ರನೇ, ಒಂದು ದಂಡವನ್ನು ತೆಗೆದುಕೊಂಡು ಅದರ ಮೇಲೆ, ‘ಈ ದಂಡವು ಯೆಹೂದನಿಗೂ ಅವನ ಸ್ನೇಹಿತರಾದ ಇಸ್ರೇಲರಿಗೂ ಸೇರಿದ್ದು’ ಎಂದು ಬರೆ. ಆಮೇಲೆ ಇನ್ನೊಂದು ದಂಡವನ್ನು ತೆಗೆದುಕೊಂಡು ಅದರ ಮೇಲೆ, ‘ಎಫ್ರಾಯಿಮನ ಈ ದಂಡವು ಯೋಸೇಫನಿಗೂ ಅವನ ಸ್ನೇಹಿತರಾದ ಇಸ್ರೇಲರಿಗೂ ಸೇರಿದ್ದು’ ಎಂದು ಬರೆ. 17 ಆಮೇಲೆ ಆ ಎರಡೂ ದಂಡಗಳನ್ನು ನಿನ್ನ ಕೈಯಲ್ಲಿ ಕೂಡಿಸು. ಆಗ ಅದು ಒಂದೇ ದಂಡವಾಗುವದು.

18 “ನಿನ್ನ ಜನರು ಅದು ಏನು ಎಂದು ವಿವರಿಸಲು ಹೇಳುವರು. 19 ಅವರಿಗೆ ಹೀಗೆ ಹೇಳು: ಒಡೆಯನಾದ ಯೆಹೋವನು ಹೇಳುವುದೇನೆಂದರೆ, ‘ನಾನು ಯೋಸೇಫನ ದಂಡವನ್ನು ಎಫ್ರಾಯೀಮ್ ಮತ್ತು ಅವನ ಸ್ನೇಹಿತರಾದ ಇಸ್ರೇಲರ ಕೈಯಿಂದ ತೆಗೆದುಕೊಂಡು ಅದನ್ನು ಯೆಹೂದದ ದಂಡದೊಂದಿಗೆ ಇಟ್ಟು ಒಂದೇ ದಂಡವಾಗುವಂತೆ ಮಾಡುವೆನು. ಅವು ನನ್ನ ಕೈಯಲ್ಲಿ ಒಂದೇ ದಂಡವಾಗುತ್ತವೆ.’

20 “ಆ ದಂಡಗಳನ್ನು ಕೈಯಲ್ಲಿ ಹಿಡಿದುಕೊಂಡು ನಿನ್ನೆದುರಿಗೆ ಚಾಚು. ನೀನು ಅವುಗಳ ಮೇಲೆ ಹೆಸರು ಬರೆದಿರುವೆ. 21 ಯೆಹೋವನು ಹೀಗೆ ಹೇಳುತ್ತಾನೆ ಎಂದು ಆ ಜನರಿಗೆ ಹೇಳು: ‘ನಾನು ಇಸ್ರೇಲ್ ಜನರನ್ನು ಅವರು ಚದರಿದ ದೇಶಗಳಿಂದಲೂ ಸುತ್ತಲಿರುವ ದೇಶಗಳಿಂದಲೂ ಅವರನ್ನು ಒಟ್ಟುಗೂಡಿಸಿ ಅವರ ಸ್ವದೇಶಕ್ಕೆ ತರುವೆನು. 22 ಇಸ್ರೇಲಿನ ಪರ್ವತ ರಾಜ್ಯದಲ್ಲಿ ಅವರನ್ನು ಒಂದು ಜನಾಂಗವನ್ನಾಗಿ ಮಾಡುವೆನು. ಅವರೆಲ್ಲರಿಗೂ ಒಬ್ಬನೇ ರಾಜನಿರುವನು. ಅವರು ಇನ್ನು ಮುಂದೆ ಎರಡು ರಾಜ್ಯಗಳಾಗುವದಿಲ್ಲ. 23 ಅವರು ಇನ್ನು ಮೇಲೆ ವಿಗ್ರಹಗಳಿಂದ ತಮ್ಮನ್ನು ಹೊಲೆ ಮಾಡಿಕೊಳ್ಳುವದಿಲ್ಲ. ಅವರು ಪಾಪಮಾಡಿ ಸಿಕ್ಕಿಬಿದ್ದ ದೇವದ್ರೋಹದಿಂದೆಲ್ಲಾ ನಾನು ಅವರನ್ನು ಉದ್ಧರಿಸುವೆನು. ನಾನು ಅವರನ್ನು ತೊಳೆದು ಶುದ್ಧಮಾಡುವೆನು. ಅವರು ನನ್ನ ಜನರಾಗಿರುವರು. ನಾನು ಅವರ ದೇವರಾಗಿರುವೆನು.

24 “‘ನನ್ನ ಸೇವಕನಾದ ದಾವೀದನು ಅವರ ರಾಜನಾಗುವನು. ಅವರೆಲ್ಲರಿಗೆ ಒಬ್ಬನೇ ಕುರುಬನಿರುವನು. ನಾನು ಹೇಳಿದ ಮಾತುಗಳಿಗೆ ಅವರು ವಿಧೇಯರಾಗುವರು; ನನ್ನ ಕಟ್ಟಳೆ ನಿಯಮಗಳಲ್ಲಿ ಅವರು ಬಾಳುವರು. 25 ನಾನು ನನ್ನ ಸೇವಕನಾದ ಯಾಕೋಬನಿಗೆ ಕೊಟ್ಟಿರುವ ದೇಶದಲ್ಲಿ ಅವರು ವಾಸಿಸುವರು. ನಿಮ್ಮ ಪೂರ್ವಿಕರು ಆ ಪ್ರಾಂತ್ಯದಲ್ಲಿ ವಾಸವಾಗಿದ್ದರು. ನನ್ನ ಜನರು ಅಲ್ಲಿಯೇ ವಾಸಮಾಡುವರು. ಅವರೂ ಅವರ ಮಕ್ಕಳೂ ಮೊಮ್ಮಕ್ಕಳೂ ಅಲ್ಲಿ ನಿತ್ಯಕಾಲಕ್ಕೂ ಜೀವಿಸುವರು. ನನ್ನ ಸೇವಕನಾದ ದಾವೀದನು ಅವರ ನಿತ್ಯಕಾಲದ ರಾಜನು. 26 ನಾನು ಸಮಾಧಾನದ ಒಡಂಬಡಿಕೆಯನ್ನು ಅವರ ಜೊತೆ ಮಾಡುವೆನು. ಇದು ನಿರಂತರದ ಒಡಂಬಡಿಕೆಯಾಗಿರುವದು. ನಾನು ಅವರ ಸ್ವದೇಶವನ್ನು ಹಿಂತಿರುಗಿಸಿ ಕೊಡುವೆನು. ಅವರನ್ನು ಅಭಿವೃದ್ಧಿಪಡಿಸಿ ಹೆಚ್ಚಿಸುವೆನು ಮತ್ತು ಅವರ ಮಧ್ಯೆ ನನ್ನ ಪವಿತ್ರ ಸ್ಥಳವನ್ನು ಇರಿಸುವೆನು. ಇದು ನಿರಂತರವಾದ ಒಡಂಬಡಿಕೆ. 27 ನನ್ನ ಪವಿತ್ರಗುಡಾರ ಅವರೊಂದಿಗಿರುವದು. ಹೌದು, ಅವರು ನನ್ನ ಜನರಾಗಿರುವರು. ನಾನು ಅವರ ದೇವರಾಗಿರುವೆನು. 28 ಇತರ ದೇಶಗಳವರು ನಾನು ಯೆಹೋವನೆಂದು ತಿಳಿಯುವರು. ಇಸ್ರೇಲರನ್ನು ನನ್ನ ವಿಶೇಷ ಜನರೆಂದು ಅವರಿಗೆ ತಿಳಿದುಬರುವದು. ಯಾಕೆಂದರೆ ಅವರ ಮಧ್ಯೆ ನನ್ನ ಪರಿಶುದ್ಧ ಸ್ಥಾನವನ್ನು ನಿರಂತರಕ್ಕೂ ಇರಿಸುವೆನು.’”

ಪ್ರಕಟನೆ 15:1-4

ದೇವದೂತರಿಂದ ಕೊನೆಯ ಉಪದ್ರವಗಳು

15 ನಂತರ ಪರಲೋಕದಲ್ಲಿ ಮತ್ತೊಂದು ಅದ್ಭುತವನ್ನು ನಾನು ನೋಡಿದೆನು. ಅದು ಮಹಾ ಆಶ್ಚರ್ಯಕರವಾಗಿತ್ತು. ಏಳು ಉಪದ್ರವಗಳನ್ನು ತರುವ ಏಳು ಮಂದಿ ದೇವದೂತರು ಅಲ್ಲಿದ್ದರು. ದೇವರ ಕೋಪವು ಈ ಉಪದ್ರವಗಳೊಂದಿಗೆ ಮುಗಿಯುತ್ತಿದ್ದುದರಿಂದ ಇವು ಕಡೆಯ ಉಪದ್ರವಗಳಾಗಿದ್ದವು.

ಬೆಂಕಿಯನ್ನು ಬೆರಸಿದ ಗಾಜಿನ ಸಮುದ್ರದಂತೆ ಕಾಣಿಸುವ ಏನೋ ಒಂದು ನನಗೆ ಕಾಣಿಸಿತು. ಮೃಗವನ್ನು, ಅದರ ವಿಗ್ರಹವನ್ನು ಮತ್ತು ಅದರ ಹೆಸರಿನ ಸಂಖ್ಯೆಯನ್ನು ಸೋಲಿಸಿ ಜಯಗಳಿಸಿದವರೆಲ್ಲರೂ ಸಮುದ್ರ ತೀರದಲ್ಲಿ ನಿಂತಿದ್ದರು. ದೇವರು ಅವರಿಗೆ ನೀಡಿದ ತಂತಿವಾದ್ಯಗಳು ಅವರಲ್ಲಿದ್ದವು. ಅವರು ದೇವರ ಸೇವಕನಾದ ಮೋಶೆಯ ಗೀತೆಯನ್ನು ಮತ್ತು ಕುರಿಮರಿಯಾದಾತನ ಗೀತೆಯನ್ನು ಹಾಡಿದರು:

“ಪ್ರಭುವೇ, ಸರ್ವಶಕ್ತನಾದ ದೇವರೇ,
    ನೀನು ಮಹತ್ತಾದ ಕಾರ್ಯಗಳನ್ನೂ ಆಶ್ಚರ್ಯಕರವಾದ ಕಾರ್ಯಗಳನ್ನೂ ಮಾಡುವೆ.
ಸರ್ವಜನಾಂಗಗಳ ರಾಜನೇ,
    ನಿನ್ನ ಮಾರ್ಗಗಳು ನ್ಯಾಯವೂ ಸತ್ಯವೂ ಆಗಿವೆ.
ಪ್ರಭುವೇ, ಜನರೆಲ್ಲರೂ ನಿನಗೆ ಭಯಗೊಳ್ಳುತ್ತಾರೆ;
ಜನರೆಲ್ಲರೂ ನಿನ್ನ ಹೆಸರನ್ನು ಸ್ತುತಿಸುತ್ತಾರೆ.
    ನೀನು ಮಾತ್ರ ಪರಿಶುದ್ಧನಾದವನು.
ನೀನು ಯೋಗ್ಯವಾದ ಕಾರ್ಯಗಳನ್ನು ಮಾಡುತ್ತೀ ಎಂಬುದು ಸ್ಪಷ್ಟವಾಗಿರುವುದರಿಂದ
    ಜನರೆಲ್ಲರೂ ನಿನ್ನ ಸನ್ನಿಧಿಗೆ ಬಂದು ನಿನ್ನನ್ನು ಆರಾಧಿಸುತ್ತಾರೆ.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International