Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಅಪೊಸ್ತಲರ ಕಾರ್ಯಗಳು 9:36-43

36 ಜೊಪ್ಪ ಪಟ್ಟಣದಲ್ಲಿ ತಬಿಥಾ ಎಂಬ ಯೇಸುವಿನ ಶಿಷ್ಯಳಿದ್ದಳು. ಗ್ರೀಕ್ ಭಾಷೆಯಲ್ಲಿ ಆಕೆಯ ಹೆಸರು ದೊರ್ಕಾ ಅಂದರೆ “ಜಿಂಕೆ.” ಆಕೆಯು ಜನರಿಗೆ ಯಾವಾಗಲೂ ಒಳ್ಳೆಯ ಕಾರ್ಯಗಳನ್ನು ಮಾಡುತ್ತಿದ್ದಳು. ಆಕೆಯು ಕೊರತೆಯಲ್ಲಿದ್ದ ಜನರಿಗೆ ಯಾವಾಗಲೂ ಹಣಕೊಡುತ್ತಿದ್ದಳು. 37 ಪೇತ್ರನು ಲುದ್ದದಲ್ಲಿದ್ದಾಗ ಆಕೆಯು ಕಾಯಿಲೆಯಿಂದ ಸತ್ತುಹೋದಳು. ಜನರು ಆಕೆಯ ದೇಹವನ್ನು ತೊಳೆದು ಮೇಲ್ಮಾಳಿಗೆಯ ಒಂದು ಕೋಣೆಯಲ್ಲಿಟ್ಟರು. 38 ಪೇತ್ರನು ಲುದ್ದದಲ್ಲಿದ್ದಾನೆಂಬ ಸುದ್ದಿಯು ಜೊಪ್ಪದಲ್ಲಿದ್ದ ವಿಶ್ವಾಸಿಗಳಿಗೆ ತಿಳಿಯಿತು. (ಲುದ್ದವು ಜೊಪ್ಪದ ಸಮೀಪದಲ್ಲಿದೆ.) ಆದ್ದರಿಂದ ಅವರು ಇಬ್ಬರನ್ನು ಪೇತ್ರನ ಬಳಿಗೆ ಕಳುಹಿಸಿದರು. ಅವರು, “ತ್ವರೆ ಮಾಡು, ದಯವಿಟ್ಟು ಬೇಗನೆ ಬಾ!” ಎಂದು ಅವನನ್ನು ಬೇಡಿಕೊಂಡರು.

39 ಪೇತ್ರನು ಸಿದ್ಧನಾಗಿ ಅವರೊಂದಿಗೆ ಹೋದನು. ಅವನು ಅಲ್ಲಿಗೆ ತಲುಪಿದಾಗ, ಅವರು ಅವನನ್ನು ಮೇಲ್ಮಾಳಿಗೆಯ ಕೋಣೆಗೆ ಕರೆದುಕೊಂಡು ಹೋದರು. ವಿಧವೆಯರೆಲ್ಲ ಅಳುತ್ತಾ ಪೇತ್ರನನ್ನು ಸುತ್ತುವರಿದರು. ದೊರ್ಕಳು ಜೀವಂತವಾಗಿದ್ದಾಗ ತಮಗಾಗಿ ತಯಾರಿಸಿ ಕೊಟ್ಟ ಮೇಲಂಗಿಗಳನ್ನು ಮತ್ತು ಬಟ್ಟೆಗಳನ್ನು ಅವರು ಪೇತ್ರನಿಗೆ ತೋರಿಸಿದರು. 40 ಪೇತ್ರನು ಜನರೆಲ್ಲರನ್ನು ಕೋಣೆಯಿಂದ ಹೊರಗೆ ಕಳುಹಿಸಿ ಮೊಣಕಾಲೂರಿ ಪ್ರಾರ್ಥಿಸಿದನು. ಬಳಿಕ ಅವನು ತಬಿಥಳ ದೇಹದ ಕಡೆಗೆ ತಿರುಗಿ, “ತಬಿಥಾ, ಎದ್ದುನಿಲ್ಲು!” ಎಂದನು. ಆಕೆ ತನ್ನ ಕಣ್ಣುಗಳನ್ನು ತೆರೆದಳು. ಆಕೆಯು ಪೇತ್ರನನ್ನು ಕಂಡು ಎದ್ದು ಕುಳಿತುಕೊಂಡಳು. 41 ಅವನು ಕೈನೀಡಿ, ಎದ್ದುನಿಲ್ಲಲು ಆಕೆಗೆ ಸಹಾಯ ಮಾಡಿದನು. ಬಳಿಕ ಅವನು ವಿಶ್ವಾಸಿಗಳನ್ನು ಮತ್ತು ವಿಧವೆಯರನ್ನು ಕೋಣೆಯೊಳಗೆ ಕರೆದು ಅವರಿಗೆ ತಬಿಥಳನ್ನು ತೋರಿಸಿದನು. ಆಕೆ ಜೀವಂತವಾಗಿದ್ದಳು.

42 ಜೊಪ್ಪದ ಎಲ್ಲಾ ಕಡೆಗಳಲ್ಲಿಯೂ ಇದ್ದ ಜನರಿಗೆ ಈ ವಿಷಯ ತಿಳಿಯಿತು. ಈ ಜನರಲ್ಲಿ ಅನೇಕರು ಪ್ರಭುವನ್ನು ನಂಬಿದರು. 43 ಪೇತ್ರನು ಅನೇಕ ದಿನಗಳವರೆಗೆ ಜೊಪ್ಪದಲ್ಲಿದ್ದನು. ಚರ್ಮಕಾರನಾದ ಸಿಮೋನನ ಮನೆಯಲ್ಲಿ ಅವನು ಇಳಿದುಕೊಂಡಿದ್ದನು.

ಕೀರ್ತನೆಗಳು 23

ರಚನೆಗಾರ: ದಾವೀದ.

23 ಯೆಹೋವನೇ ನನಗೆ ಕುರುಬನು.
    ನನಗೆ ಕೊರತೆಯೇ ಇಲ್ಲ.
ಆತನು ನನ್ನನ್ನು ಹಸಿರುಗಾವಲುಗಳಲ್ಲಿ ತಂಗಿಸುವನು.
    ಪ್ರಶಾಂತವಾದ ನೀರಿನ ತೊರೆಗಳ ಬಳಿಯಲ್ಲಿ ನನ್ನನ್ನು ನಡೆಸುವನು.
ಆತನು ತನ್ನ ಹೆಸರಿಗೆ ತಕ್ಕಂತೆ ನನ್ನ ಪ್ರಾಣಕ್ಕೆ ಚೈತನ್ಯ ನೀಡಿ
    ನೀತಿಮಾರ್ಗದಲ್ಲಿ ನನ್ನನ್ನು ನಡೆಸುವನು.
ನಾನು ಕಾರ್ಗತ್ತಲಿನ ಕಣಿವೆಯಲ್ಲಿ ನಡೆಯುವಾಗಲೂ
    ನೀನು ನನ್ನೊಂದಿಗಿರುವುದರಿಂದ ಭಯಪಡುವುದಿಲ್ಲ.
    ನಿನ್ನ ದೊಣ್ಣೆಯೂ ಊರುಗೋಲೂ ನನ್ನನ್ನು ಸಂತೈಸುತ್ತವೆ.
ವೈರಿಗಳ ಎದುರಿನಲ್ಲಿ ನೀನು ನನಗೆ ಔತಣವನ್ನು ಸಿದ್ಧಪಡಿಸಿರುವೆ;
    ನನ್ನ ತಲೆಗೆ ಎಣ್ಣೆಯನ್ನು ಹಚ್ಚಿರುವೆ.
    ನನ್ನ ಪಾತ್ರೆಯು ತುಂಬಿ ಹೊರಸೂಸುತ್ತಿದೆ.
ನಿಶ್ಚಯವಾಗಿ ನನ್ನ ಜೀವಮಾನದಲ್ಲೆಲ್ಲಾ ಶುಭವೂ ಕೃಪೆಯೂ ನನ್ನೊಂದಿಗಿರುತ್ತವೆ.
    ನನ್ನ ಜೀವಮಾನವೆಲ್ಲಾ ಯೆಹೋವನ ಆಲಯದಲ್ಲೇ ವಾಸಿಸುವೆನು.

ಪ್ರಕಟನೆ 7:9-17

ಜನರ ಮಹಾಸಮೂಹ

ಬಳಿಕ ನಾನು ನೋಡಿದಾಗ, ಜನರ ಮಹಾಸಮೂಹವನ್ನು ಕಂಡೆನು. ಅವರು ಎಣಿಸಲಾಗದಷ್ಟು ಅಸಂಖ್ಯಾತರಾಗಿದ್ದರು. ಅವರಲ್ಲಿ ಸಕಲ ಜನಾಂಗ, ಕುಲ, ಪ್ರಜೆಗಳವರೂ ಲೋಕದ ಸಕಲ ಭಾಷೆಗಳನ್ನಾಡುವವರೂ ಇದ್ದರು. ಈ ಜನರು ಸಿಂಹಾಸನದ ಮುಂದೆ ಮತ್ತು ಕುರಿಮರಿಯ (ಯೇಸು) ಮುಂದೆ ನಿಂತಿದ್ದರು. ಅವರೆಲ್ಲರೂ ಬಿಳಿ ನಿಲುವಂಗಿಗಳನ್ನು ಧರಿಸಿಕೊಂಡು ಖರ್ಜೂರದ ಗರಿಗಳನ್ನು ತಮ್ಮ ಕೈಗಳಲ್ಲಿ ಹಿಡಿದಿದ್ದರು. 10 ಅವರು ಗಟ್ಟಿಯಾದ ಧ್ವನಿಯಲ್ಲಿ, “ಸಿಂಹಾಸನದ ಮೇಲೆ ಕುಳಿತುಕೊಳ್ಳುವ ನಮ್ಮ ಪ್ರಭುವಿಗೆ ಮತ್ತು ಕುರಿಮರಿಯಾದಾತನಿಗೆ ಜಯವು ಲಭಿಸಿತು” ಎಂದು ಕೂಗಿದರು. 11 ಹಿರಿಯರು ಅಲ್ಲಿದ್ದರು ಮತ್ತು ನಾಲ್ಕು ಜೀವಿಗಳು ಅಲ್ಲಿದ್ದವು. ಅವರ ಸುತ್ತಲೂ ಮತ್ತು ಸಿಂಹಾಸನದ ಸುತ್ತಲೂ ದೇವದೂತರೆಲ್ಲಾ ನಿಂತಿದ್ದರು. ದೇವದೂತರು ಸಿಂಹಾಸನದ ಮುಂದೆ ಮೊಣಕಾಲೂರಿ ದೇವರನ್ನು ಆರಾಧಿಸಿದರು. 12 ಅವರು, “ಆಮೆನ್! ನಮ್ಮ ದೇವರಿಗೆ ಸ್ತೋತ್ರವೂ ಪ್ರಭಾವವೂ ಜ್ಞಾನವೂ ಕೃತಜ್ಞತಾಸುತ್ತಿಯೂ ಗೌರವವೂ ಅಧಿಕಾರವೂ ಮತ್ತು ಬಲವೂ ಯುಗಯುಗಾಂತರಗಳಲ್ಲಿಯೂ ಇರಲಿ. ಆಮೆನ್!” ಎಂದರು.

13 ಆಗ ಹಿರಿಯರಲ್ಲೊಬ್ಬನು, “ಬಿಳಿ ನಿಲುವಂಗಿಗಳನ್ನು ಧರಿಸಿಕೊಂಡಿರುವ ಈ ಜನರು ಯಾರು! ಅವರು ಎಲ್ಲಿಂದ ಬಂದವರು?” ಎಂದು ನನ್ನನ್ನು ಕೇಳಿದನು.

14 “ಸ್ವಾಮೀ, ಅವರು ಯಾರೆಂಬುದು ನಿಮಗೆ ತಿಳಿದಿದೆ” ಎಂದು ನಾನು ಉತ್ತರಿಸಿದೆನು.

ಆಗ ಹಿರಿಯನು, “ಈ ಜನರು ಭೀಕರ ಸಂಕಟವನ್ನು ಅನುಭವಿಸಿ ಬಂದವರು. ಅವರು ಕುರಿಮರಿಯಾದಾತನ ರಕ್ತದಿಂದ ತಮ್ಮ ನಿಲುವಂಗಿಗಳನ್ನು ತೊಳೆದುಕೊಂಡಿದ್ದಾರೆ.[a] ಈಗ ಅವರು ಶುಭ್ರವಾಗಿದ್ದಾರೆ ಮತ್ತು ಬಿಳುಪಾಗಿದ್ದಾರೆ. 15 ಆದ್ದರಿಂದ ಈ ಜನರು ಈಗ ದೇವರ ಸಿಂಹಾಸನದ ಮುಂದೆ ಇದ್ದಾರೆ. ಅವರು ದೇವರನ್ನು ಆತನ ಆಲಯದಲ್ಲಿ ಹಗಲಿರುಳು ಆರಾಧಿಸುತ್ತಾರೆ. ಸಿಂಹಾಸನದ ಮೇಲೆ ಕುಳಿತಿರುವಾತನು ಅವರನ್ನು ಸಂರಕ್ಷಿಸುತ್ತಾನೆ. 16 ಆ ಜನರಿಗೆ ಮತ್ತೆ ಹಸಿವೆಯಾಗಲಿ ಬಾಯಾರಿಕೆಯಾಗಲಿ ಸೂರ್ಯನ ತಾಪವಾಗಲಿ ಇರುವುದಿಲ್ಲ. ಅವರನ್ನು ಯಾವ ತಾಪವೂ ಸುಡುವುದಿಲ್ಲ. 17 ಸಿಂಹಾಸನದ ಮಧ್ಯೆ ಇರುವ ಕುರಿಮರಿಯಾದಾತನು ಅವರ ಕುರುಬನಾಗಿರುತ್ತಾನೆ. ಆತನು ಅವರನ್ನು ಜೀವ ನೀಡುವ ನೀರಿನ ಬುಗ್ಗೆಗಳ ಬಳಿಗೆ ಕರೆದೊಯ್ಯುತ್ತಾನೆ. ಅವರ ಕಣ್ಣುಗಳಿಂದ ತೊಟ್ಟಿಕ್ಕುವ ಕಣ್ಣೀರನ್ನೆಲ್ಲ ದೇವರು ಒರಸಿಹಾಕುತ್ತಾನೆ” ಎಂದು ಹೇಳಿದನು.

ಯೋಹಾನ 10:22-30

ಯೇಸುವಿನ ವಿರುದ್ಧ ಯೆಹೂದ್ಯರು

22 ಜೆರುಸಲೇಮಿನಲ್ಲಿ ಆಚರಿಸುವ ಪ್ರತಿಷ್ಠೆಯ ಹಬ್ಬವು ನಡೆಯುತ್ತಿತ್ತು. ಅದು ಚಳಿಗಾಲದಲ್ಲಿ ಆಚರಿಸುವ ಹಬ್ಬ. 23 ಯೇಸು ದೇವಾಲಯದೊಳಗೆ ಸೊಲೊಮೋನನ ಆಲಯದಲ್ಲಿದ್ದನು. 24 ಯೆಹೂದ್ಯರು ಯೇಸುವಿನ ಸುತ್ತಲೂ ನೆರೆದರು. ಅವರು ಆತನಿಗೆ, “ಇನ್ನೆಷ್ಟುಕಾಲ ನೀನು ನಿನ್ನ ಬಗ್ಗೆ ನಮ್ಮನ್ನು ಆಶ್ಚರ್ಯಗೊಳಿಸುವೆ? ನೀನು ಕ್ರಿಸ್ತನಾಗಿದ್ದರೆ, ನಮಗೆ ಸ್ಪಷ್ಟವಾಗಿ ತಿಳಿಸು” ಎಂದು ಹೇಳಿದರು.

25 ಯೇಸು, “ನಾನು ಆಗಲೇ ನಿಮಗೆ ಹೇಳಿದೆನು. ಆದರೆ ನೀವು ನಂಬಲಿಲ್ಲ. ನನ್ನ ತಂದೆಯ ಹೆಸರಿನಲ್ಲಿ ನಾನು ಅದ್ಭುತಕಾರ್ಯಗಳನ್ನು ಮಾಡುತ್ತೇನೆ. ನಾನು ಯಾರೆಂಬುದನ್ನು ಆ ಅದ್ಭುತಕಾರ್ಯಗಳು ತೋರಿಸುತ್ತವೆ. 26 ಆದರೆ ನೀವು ನಂಬುವುದಿಲ್ಲ. ಏಕೆಂದರೆ ನೀವು ನನ್ನ ಕುರಿಗಳಲ್ಲ (ಜನರಲ್ಲ). 27 ನನ್ನ ಕುರಿಗಳು ನನ್ನ ಸ್ವರಕ್ಕೆ ಕಿವಿಗೊಡುತ್ತವೆ. ನಾನು ಅವುಗಳನ್ನು ಬಲ್ಲೆನು ಮತ್ತು ಅವುಗಳು ನನ್ನನ್ನು ಹಿಂಬಾಲಿಸುತ್ತವೆ. 28 ನನ್ನ ಕುರಿಗಳಿಗೆ ನಾನು ನಿತ್ಯಜೀವವನ್ನು ಕೊಡುತ್ತೇನೆ. ಅವು ಎಂದಿಗೂ ಸಾಯುವುದಿಲ್ಲ, ಮತ್ತು ಅವುಗಳನ್ನು ಯಾರೂ ನನ್ನಿಂದ ಕಸಿದುಕೊಳ್ಳಲಾರರು. 29 ನನ್ನ ಕುರಿಗಳನ್ನು ನನ್ನ ತಂದೆಯೇ ನನಗೆ ಕೊಟ್ಟನು. ಆತನು ಎಲ್ಲರಿಗಿಂತಲೂ ದೊಡ್ಡವನಾಗಿದ್ದಾನೆ. ನನ್ನ ಕುರಿಗಳನ್ನು ನನ್ನ ತಂದೆಯ ಕೈಯಿಂದ ಯಾರೂ ಕದ್ದುಕೊಳ್ಳಲಾರರು. 30 ತಂದೆಯು ಮತ್ತು ನಾನು ಒಂದೇ ಆಗಿದ್ದೇವೆ” ಎಂದು ಉತ್ತರಕೊಟ್ಟನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International