Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 23

ರಚನೆಗಾರ: ದಾವೀದ.

23 ಯೆಹೋವನೇ ನನಗೆ ಕುರುಬನು.
    ನನಗೆ ಕೊರತೆಯೇ ಇಲ್ಲ.
ಆತನು ನನ್ನನ್ನು ಹಸಿರುಗಾವಲುಗಳಲ್ಲಿ ತಂಗಿಸುವನು.
    ಪ್ರಶಾಂತವಾದ ನೀರಿನ ತೊರೆಗಳ ಬಳಿಯಲ್ಲಿ ನನ್ನನ್ನು ನಡೆಸುವನು.
ಆತನು ತನ್ನ ಹೆಸರಿಗೆ ತಕ್ಕಂತೆ ನನ್ನ ಪ್ರಾಣಕ್ಕೆ ಚೈತನ್ಯ ನೀಡಿ
    ನೀತಿಮಾರ್ಗದಲ್ಲಿ ನನ್ನನ್ನು ನಡೆಸುವನು.
ನಾನು ಕಾರ್ಗತ್ತಲಿನ ಕಣಿವೆಯಲ್ಲಿ ನಡೆಯುವಾಗಲೂ
    ನೀನು ನನ್ನೊಂದಿಗಿರುವುದರಿಂದ ಭಯಪಡುವುದಿಲ್ಲ.
    ನಿನ್ನ ದೊಣ್ಣೆಯೂ ಊರುಗೋಲೂ ನನ್ನನ್ನು ಸಂತೈಸುತ್ತವೆ.
ವೈರಿಗಳ ಎದುರಿನಲ್ಲಿ ನೀನು ನನಗೆ ಔತಣವನ್ನು ಸಿದ್ಧಪಡಿಸಿರುವೆ;
    ನನ್ನ ತಲೆಗೆ ಎಣ್ಣೆಯನ್ನು ಹಚ್ಚಿರುವೆ.
    ನನ್ನ ಪಾತ್ರೆಯು ತುಂಬಿ ಹೊರಸೂಸುತ್ತಿದೆ.
ನಿಶ್ಚಯವಾಗಿ ನನ್ನ ಜೀವಮಾನದಲ್ಲೆಲ್ಲಾ ಶುಭವೂ ಕೃಪೆಯೂ ನನ್ನೊಂದಿಗಿರುತ್ತವೆ.
    ನನ್ನ ಜೀವಮಾನವೆಲ್ಲಾ ಯೆಹೋವನ ಆಲಯದಲ್ಲೇ ವಾಸಿಸುವೆನು.

ಯೆಹೆಜ್ಕೇಲ 28:25-26

25 ನನ್ನ ಒಡೆಯನಾದ ಯೆಹೋವನು ಹೀಗೆ ಹೇಳಿದನು: “ಬೇರೆ ದೇಶಗಳಿಗೆ ನಾನು ಇಸ್ರೇಲರನ್ನು ಚದರಿಸಿದೆನು. ಆದರೆ ತಿರುಗಿ ಇಸ್ರೇಲರನ್ನೆಲ್ಲಾ ಒಟ್ಟುಗೂಡಿಸುವೆನು. ಆಗ ಆ ದೇಶದವರು ನಾನು ಪವಿತ್ರವಾದ ದೇವರೆಂದು ತಿಳಿದು ಆ ರೀತಿಯಾಗಿ ನನ್ನನ್ನು ನೋಡುವರು. ಆಗ ಇಸ್ರೇಲರು ತಮ್ಮ ದೇಶದಲ್ಲಿ ವಾಸಮಾಡುವರು. ಆ ದೇಶವನ್ನು ನನ್ನ ಸೇವಕನಾದ ಯಾಕೋಬನಿಗೆ ನಾನು ಕೊಟ್ಟಿದ್ದೆನು. 26 ಆ ದೇಶದಲ್ಲಿ ಅವರು ಸುರಕ್ಷಿತವಾಗಿ ವಾಸಿಸುವರು; ಮನೆಗಳನ್ನು ಕಟ್ಟಿ ದ್ರಾಕ್ಷಿತೋಟಗಳನ್ನು ಮಾಡುವರು. ಅವರನ್ನು ದ್ವೇಷಿಸಿದ ರಾಜ್ಯಗಳನ್ನು ದಂಡಿಸುವೆನು. ಆಗ ಇಸ್ರೇಲ್ ಜನರು ಸುರಕ್ಷಿತವಾಗಿ ಜೀವಿಸುವರು; ನಾನೇ ದೇವರಾದ ಯೆಹೋವನು ಎಂದು ತಿಳಿದುಕೊಳ್ಳುವರು.”

ಲೂಕ 12:29-32

29 “ಏನು ಊಟಮಾಡಬೇಕು? ಏನು ಕುಡಿಯಬೇಕು? ಎಂದು ಯಾವಾಗಲೂ ಆಲೋಚಿಸಬೇಡಿರಿ ಮತ್ತು ಚಿಂತಿಸಬೇಡಿರಿ. 30 ಅವುಗಳನ್ನು ಪಡೆದುಕೊಳ್ಳುವುದಕ್ಕಾಗಿ ಲೋಕದ ಜನರೆಲ್ಲರೂ ಪ್ರಯತ್ನಿಸುತ್ತಾರೆ. ಅವುಗಳ ಅವಶ್ಯಕತೆ ನಿಮಗೂ ಇದೆ ಎಂಬುದು ನಿಮ್ಮ ತಂದೆಗೆ (ದೇವರು) ತಿಳಿದಿದೆ. 31 ನೀವು ದೇವರ ರಾಜ್ಯಕ್ಕೆ ಮೊದಲನೆ ಪ್ರಾಧಾನ್ಯತೆಯನ್ನು ಕೊಡಿರಿ. ಆಗ ನಿಮಗೆ ಬೇಕಾಗಿರುವ ಉಳಿದವುಗಳನ್ನು ಕೊಡಲಾಗುವುದು.

ಹಣದಲ್ಲಿ ಭರವಸೆ ಇಡಬೇಡಿ

32 “ಚಿಕ್ಕ ಮಂದೆಯೇ, ಹೆದರಬೇಡ, ನಿಮಗೆ ರಾಜ್ಯವನ್ನು ಕೊಡಲು ನಿಮ್ಮ ತಂದೆ ಬಯಸಿದ್ದಾನೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International