Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 121

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.

121 ನಾನು ಕಣ್ಣೆತ್ತಿ ಪರ್ವತಗಳ ಕಡೆಗೆ ನೋಡುತ್ತೇನೆ.
    ನನಗೆ ಸಹಾಯವು ಎಲ್ಲಿಂದ ಬರುವುದು?
ಭೂಮ್ಯಾಕಾಶಗಳ ಸೃಷ್ಟಿಕರ್ತನಾದ ಯೆಹೋವನಿಂದಲೇ
    ನನಗೆ ಸಹಾಯವು ಬರುವುದು.
ಆತನು ನಿನ್ನನ್ನು ಬೀಳಗೊಡಿಸುವುದಿಲ್ಲ;
    ನಿನ್ನ ಸಂರಕ್ಷಕನು ನಿದ್ರೆಹೋಗುವುದಿಲ್ಲ.
ಇಸ್ರೇಲಿನ ಸಂರಕ್ಷಕನು ತೂಕಡಿಸುವುದಿಲ್ಲ,
    ನಿದ್ರಿಸುವುದೂ ಇಲ್ಲ!
ನಿನ್ನನ್ನು ಕಾಯುವವನು ಯೆಹೋವನೇ.
    ನಿನ್ನನ್ನು ರಕ್ಷಿಸಲು ಆತನು ನಿನ್ನ ಬಲಗಡೆಯಲ್ಲಿ ನಿಂತಿದ್ದಾನೆ.
ಹಗಲಲ್ಲಿ ಸೂರ್ಯನೂ
    ರಾತ್ರಿಯಲ್ಲಿ ಚಂದ್ರನೂ ನಿನ್ನನ್ನು ಬಾಧಿಸುವುದಿಲ್ಲ.
ಯೆಹೋವನು ನಿನ್ನನ್ನು ಎಲ್ಲಾ ಅಪಾಯಗಳಿಂದ ರಕ್ಷಿಸುವನು;
    ನಿನ್ನ ಪ್ರಾಣವನ್ನು ಕಾಯುವನು.
ನೀನು ಹೋಗುವಾಗಲೂ ಬರುವಾಗಲೂ ಯೆಹೋವನು ನಿನಗೆ ಸಹಾಯಮಾಡುವನು.
    ಆತನು ನಿನ್ನನ್ನು ಸದಾಕಾಲ ಕಾಪಾಡುವನು.

ಯೆಹೆಜ್ಕೇಲ 1:26-2:1

26 ಆ ಬೋಗುಣಿಯ ಮೇಲೆ ಸಿಂಹಾಸನದಂತಿದ್ದ ವಸ್ತುವು ಇತ್ತು. ಅದು ನೀಲಮಣಿಯಂತೆ ನೀಲಿ ಬಣ್ಣದ್ದಾಗಿತ್ತು. ಆ ಸಿಂಹಾಸನದ ಮೇಲೆ ಕುಳಿತುಕೊಂಡಿದ್ದ ಒಬ್ಬನು ಮನುಷ್ಯನಂತೆ ಕಾಣುತ್ತಿದ್ದನು. 27 ನಾನು ಆತನ ಸೊಂಟದ ಮೇಲ್ಭಾಗವನ್ನು ನೋಡಿದಾಗ, ಆತನು ಬೆಂಕಿಯಿಂದ ಸುತ್ತುವರಿದ ಕಾದಲೋಹದಂತೆ ಕಂಡನು. ನಾನು ಆತನ ಸೊಂಟದಿಂದ ಕೆಳಭಾಗವನ್ನು ನೋಡಿದಾಗ ಆತನು ಬೆಂಕಿಯಂತೆ ಕಂಡನು. ಆತನ ಸುತ್ತಲೂ ಪ್ರಕಾಶಮಾನವಾದ ಬೆಳಕಿತ್ತು. 28 ಆತನ ಸುತ್ತಲೂ ಇದ್ದ ಪ್ರಕಾಶವು ಮೇಘಬಿಲ್ಲಿನಂತೆಯೂ ಯೆಹೋವನ ಮಹಿಮೆಯಂತೆಯೂ ಕಾಣುತ್ತಿತ್ತು. ನಾನು ಅದನ್ನು ನೋಡಿದ ಕೂಡಲೇ ನೆಲಕ್ಕೆ ಬಿದ್ದೆನು. ಮುಖವನ್ನು ನೆಲದ ಮೇಲಿಟ್ಟು ಅಡ್ಡಬಿದ್ದೆನು. ಆಗ ನನ್ನೊಂದಿಗೆ ಮಾತನಾಡುತ್ತಿದ್ದ ಸ್ವರವನ್ನು ಕೇಳಿದೆನು.

ಯೆಹೋವನು ಯೆಹೆಜ್ಕೇಲನ ಸಂಗಡ ಮಾತನಾಡಿದ್ದು

ಆ ಸ್ವರವು, “ನರಪುತ್ರನೇ, ಎದ್ದೇಳು ನಾನು ನಿನ್ನೊಂದಿಗೆ ಮಾತನಾಡುತ್ತೇನೆ” ಎಂದಿತು.

ಅಪೊಸ್ತಲರ ಕಾರ್ಯಗಳು 26:1-18

ರಾಜ ಅಗ್ರಿಪ್ಪನ ಮುಂದೆ ಪೌಲನು

26 ಅಗ್ರಿಪ್ಪನು ಪೌಲನಿಗೆ, “ಈಗ ನೀನು ನಿನ್ನ ಪರವಾಗಿ ಮಾತಾಡಬಹುದು” ಎಂದು ಹೇಳಿದನು. ಆಗ ಪೌಲನು ತನ್ನ ಕೈಯೆತ್ತಿ ಮಾತಾಡಲಾರಂಭಿಸಿ ಹೀಗೆಂದನು: “ರಾಜನಾದ ಅಗ್ರಿಪ್ಪನೇ, ಯೆಹೂದ್ಯರು ನನ್ನ ಮೇಲೆ ಹೊರಿಸುತ್ತಿರುವ ಆಪಾದನೆಗಳಿಗೆಲ್ಲಾ ನಾನು ಉತ್ತರಕೊಡುವೆನು. ಇಂದು ನಿನ್ನ ಮುಂದೆ ನಿಂತುಕೊಂಡು ಪ್ರತಿವಾದ ಮಾಡುವ ಅವಕಾಶ ದೊರೆತಿರುವುದು ನನ್ನ ಭಾಗ್ಯವೆಂದೇ ಎಣಿಸುತ್ತೇನೆ. ನಾನು ನಿನ್ನೊಂದಿಗೆ ಮಾತಾಡಲು ಬಹು ಸಂತೋಷಪಡುತ್ತೇನೆ. ಯಾಕೆಂದರೆ, ಯೆಹೂದ್ಯರ ಎಲ್ಲಾ ಸಂಪ್ರದಾಯಗಳ ಬಗ್ಗೆ ಮತ್ತು ಯೆಹೂದ್ಯರು ವಾದಿಸುತ್ತಿರುವ ಸಂಗತಿಗಳ ಬಗ್ಗೆ ನಿನಗೆ ಚೆನ್ನಾಗಿ ಗೊತ್ತಿದೆ. ಆದ್ದರಿಂದ ದಯವಿಟ್ಟು ನನ್ನ ಮಾತುಗಳನ್ನು ತಾಳ್ಮೆಯಿಂದ ಆಲಿಸು.

“ನನ್ನ ಇಡೀ ಜೀವಮಾನದ ಬಗ್ಗೆ ಎಲ್ಲಾ ಯೆಹೂದ್ಯರಿಗೆ ಗೊತ್ತಿದೆ. ನಾನು ಆರಂಭದಿಂದ ನನ್ನ ಸ್ವದೇಶದಲ್ಲಿಯೂ ಅನಂತರ ಜೆರುಸಲೇಮಿನಲ್ಲಿಯೂ ಜೀವಿಸಿದ ರೀತಿಯನ್ನು ಅವರು ಬಲ್ಲರು. ಈ ಯೆಹೂದ್ಯರು ಬಹುಕಾಲದಿಂದಲೂ ನನ್ನನ್ನು ತಿಳಿದಿದ್ದಾರೆ. ನೀನು ಅವರನ್ನು ಕೇಳುವುದಾದರೆ, ನಾನು ಒಳ್ಳೆಯ ಫರಿಸಾಯನಾಗಿದ್ದೆನೆಂದು ಅವರು ನಿನಗೆ ಹೇಳಬಲ್ಲರು. ಯೆಹೂದ್ಯರ ಇತರ ಯಾವುದೇ ಪಂಗಡಗಿಳಿಗಿಂತಲೂ ಹೆಚ್ಚು ಎಚ್ಚರಿಕೆಯಿಂದ ಫರಿಸಾಯರು ಯೆಹೂದ್ಯ ಧರ್ಮದ ಕಟ್ಟೆಳೆಗಳಿಗೆ ವಿಧೇಯರಾಗುತ್ತಾರೆ. ದೇವರು ನಮ್ಮ ಪಿತೃಗಳಿಗೆ ಮಾಡಿದ ವಾಗ್ದಾನವನ್ನು ನಾನು ನಿರೀಕ್ಷಿಸಿಕೊಂಡಿರುವುದರಿಂದಲೇ ಈಗ ವಿಚಾರಣೆಗೆ ಗುರಿಯಾಗಿದ್ದೇನೆ. ಈ ವಾಗ್ದಾನವು ಖಂಡಿತವಾಗಿ ನೆರವೇರುತ್ತದೆ ಎಂದು ಹನ್ನೆರಡು ಕುಲಗಳ ನಮ್ಮ ಜನರು ನಿರೀಕ್ಷಿಸಿಕೊಂಡಿದ್ದಾರೆ. ಯೆಹೂದ್ಯರು ಹಗಲಿರುಳು ದೇವರ ಸೇವೆ ಮಾಡುತ್ತಿರುವುದು ಈ ನಿರೀಕ್ಷೆಯಿಂದಲೇ. ನಾನು ಸಹ ಇದೇ ನಿರೀಕ್ಷೆಯನ್ನು ಹೊಂದಿರುವುದರಿಂದ ಇವರು ನನ್ನ ಮೇಲೆ ಆಪಾದನೆಗಳನ್ನು ಹೊರಿಸಿದ್ದಾರೆ! ಸತ್ತವರನ್ನು ದೇವರು ಜೀವಂತವಾಗಿ ಎಬ್ಬಿಸುತ್ತಾನೆ ಎಂಬುದು ನಂಬತಕ್ಕದ್ದಲ್ಲವೆಂದು ನೀವು ಭಾವಿಸಿಕೊಂಡಿರುವುದೇಕೆ?

“ನಾನು ಫರಿಸಾಯನಾಗಿದ್ದಾಗ ನಜರೇತಿನ ಯೇಸುವಿನ ಹೆಸರಿಗೆ ವಿರೋಧವಾಗಿ ಅನೇಕ ಕಾರ್ಯಗಳನ್ನು ಮಾಡಬೇಕೆಂದು ಆಲೋಚಿಸಿಕೊಂಡೆನು. 10 ಜೆರುಸಲೇಮಿನಲ್ಲಿ ವಿಶ್ವಾಸಿಗಳ ವಿರೋಧವಾಗಿ ಅನೇಕ ಕಾರ್ಯಗಳನ್ನು ಮಾಡಿದೆ. ಈ ವಿಶ್ವಾಸಿಗಳಲ್ಲಿ ಅನೇಕರನ್ನು ಸೆರೆಮನೆಗೆ ಹಾಕಲು ಮಹಾಯಾಜಕರು ನನಗೆ ಅಧಿಕಾರವನ್ನು ಕೊಟ್ಟರು. ಯೇಸುವಿನ ಶಿಷ್ಯರನ್ನು ಕೊಂದಾಗ ಅದಕ್ಕೆ ನಾನೂ ನನ್ನ ಸಮ್ಮತಿಯನ್ನು ಸೂಚಿಸಿದೆ. 11 ಪ್ರತಿಯೊಂದು ಸಭಾಮಂದಿರದಲ್ಲಿಯೂ ನಾನು ಅವರನ್ನು ದಂಡಿಸಿದೆನು. ಯೇಸುವಿನ ವಿರುದ್ಧ ದೂಷಣೆಯ ಮಾತುಗಳನ್ನು ಅವರ ಬಾಯಿಂದ ಹೊರಡಿಸಲು ನಾನು ಪ್ರಯತ್ನಿಸಿದೆನು. ಆ ವಿಶ್ವಾಸಿಗಳ ಮೇಲೆ ಬಹುಕೋಪವುಳ್ಳವನಾಗಿದ್ದು ಅವರನ್ನು ಹುಡುಕಿಹುಡುಕಿ ಹಿಂಸಿಸುವುದಕ್ಕಾಗಿ ವಿದೇಶದ ಪಟ್ಟಣಗಳಿಗೂ ಹೋದೆನು.

ತನಗಾದ ದರ್ಶನದ ಬಗ್ಗೆ ಪೌಲನ ಸಾಕ್ಷಿ

12 “ಒಂದುಸಲ, ದಮಸ್ಕ ಪಟ್ಟಣಕ್ಕೆ ಹೋಗಲು ಮಹಾಯಾಜಕರು ನನಗೆ ಅಪ್ಪಣೆಯನ್ನೂ ಅಧಿಕಾರವನ್ನೂ ಕೊಟ್ಟರು. 13 ನಾನು ದಮಸ್ಕದ ದಾರಿಯಲ್ಲಿ ಹೋಗುತ್ತಿದ್ದೆನು. ಆಗ ಮಧ್ಯಾಹ್ನವಾಗಿತ್ತು. ಇದ್ದಕ್ಕಿದ್ದಂತೆ ಆಗ ಆಕಾಶದಿಂದ ಸೂರ್ಯನಿಗಿಂತಲೂ ಪ್ರಕಾಶಮಾನವಾದ ಬೆಳಕೊಂದು ಬಂದು ನನ್ನ ಸುತ್ತಲೂ ಮತ್ತು ನನ್ನೊಂದಿಗೆ ಪ್ರಯಾಣ ಮಾಡುತ್ತಿದ್ದವರ ಸುತ್ತಲೂ ಪ್ರಜ್ವಲಿಸಿತು. 14 ನಾವೆಲ್ಲರೂ ನೆಲಕ್ಕೆ ಬಿದ್ದೆವು. ಆಗ ವಾಣಿಯೊಂದು ಯೆಹೂದ್ಯರ ಭಾಷೆಯಲ್ಲಿ[a] ನನ್ನೊಂದಿಗೆ ಮಾತಾಡುವುದನ್ನು ಕೇಳಿದೆನು. ಆ ವಾಣಿಯು, ‘ಸೌಲನೇ, ಸೌಲನೇ, ನೀನು ನನ್ನನ್ನು ಯಾಕೆ ಹಿಂಸಿಸುತ್ತಿರುವೆ? ಮುಳ್ಳುಗೋಲನ್ನು ಒದೆಯುವುದು ನಿನಗೆ ಕಷ್ಟ’ ಎಂದು ಹೇಳಿತು.

15 “ನಾನು, ‘ಪ್ರಭುವೇ, ನೀನು ಯಾರು?’ ಎಂದೆನು.

“ಪ್ರಭುವು, ‘ನೀನು ಹಿಂಸೆಪಡಿಸುತ್ತಿರುವ ಯೇಸುವೇ ನಾನು. 16 ಎದ್ದೇಳು! ನಿನ್ನನ್ನು ನನ್ನ ಸೇವಕನನ್ನಾಗಿಯೂ ಸಾಕ್ಷಿಯನ್ನಾಗಿಯೂ ಆರಿಸಿಕೊಂಡಿದ್ದೇನೆ. ಈ ಹೊತ್ತು ನಾನು ನಿನಗೆ ಕಾಣಿಸಿಕೊಂಡದ್ದರ ವಿಷಯವಾಗಿಯೂ ನಾನು ನಿನಗೆ ಕೊಡಲಿರುವ ದರ್ಶನಗಳ ವಿಷಯವಾಗಿಯೂ ನೀನು ಜನರಿಗೆ ಸಾಕ್ಷಿಯಾಗಿರುವೆ. ಇದಕ್ಕಾಗಿಯೇ ಈ ಹೊತ್ತು ನಾನು ನಿನಗೆ ಕಾಣಿಸಿಕೊಂಡೆನು. 17 ನಿನ್ನ ಸ್ವಂತ ಜನರಿಂದಲೂ ಯೆಹೂದ್ಯರಲ್ಲದ ಜನರಿಂದಲೂ ನಿನಗೆ ಕೇಡಾಗದಂತೆ ಕಾಪಾಡುವೆನು. ನಾನು ನಿನ್ನನ್ನು ಅವರ ಬಳಿಗೆ ಕಳುಹಿಸುತ್ತಿದ್ದೇನೆ. 18 ನೀನು ಅವರಿಗೆ ಸತ್ಯವನ್ನು ತಿಳಿಸಿ ಅವರನ್ನು ಕತ್ತಲೆಯಿಂದ ಬೆಳಕಿಗೆ ಬರುವಂತೆಯೂ ಸೈತಾನನ ಅಧಿಕಾರಕ್ಕೆ ವಿಮುಖರಾಗಿ ದೇವರ ಕಡೆಗೆ ತಿರುಗಿಕೊಳ್ಳುವಂತೆಯೂ ಮಾಡಬೇಕು. ಆಗ ಅವರ ಪಾಪಗಳು ಕ್ಷಮಿಸಲ್ಪಡುತ್ತವೆ. ನನ್ನಲ್ಲಿ ನಂಬಿಕೆ ಇಡುವುದರ ಮೂಲಕ ಪವಿತ್ರರಾದ ಜನರೊಂದಿಗೆ ಅವರು ಪಾಲು ಹೊಂದುವರು’ ಎಂದನು.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International