Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 122

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ. ರಚನೆಗಾರ: ದಾವೀದ.

122 “ಯೆಹೋವನ ಆಲಯಕ್ಕೆ ಹೋಗೋಣ”
    ಎಂದು ಜನರು ಹೇಳಿದಾಗ ನನಗೆ ಬಹು ಸಂತೋಷವಾಯಿತು.
ನಾವು ಜೆರುಸಲೇಮಿನ ಬಾಗಿಲುಗಳ ಬಳಿಯಲ್ಲಿ ನಿಂತಿದ್ದೇವೆ.
ಇದು ಹೊಸ ಜೆರುಸಲೇಮ್!
    ಈ ಪಟ್ಟಣವು ಏಕೀಕರಣಗೊಂಡ ನಗರದಂತೆ ಮತ್ತೆ ಕಟ್ಟಲ್ಪಟ್ಟಿದೆ.
ಇಸ್ರೇಲಿನ ಕುಲಗಳವರು ಅಂದರೆ ಯೆಹೋವನ ಕುಲಗಳವರು
    ಯೆಹೋವನ ಹೆಸರನ್ನು ಕೊಂಡಾಡಲು ಅಲ್ಲಿಗೆ ಹೋಗುವರು.
ದಾವೀದನ ಕುಟುಂಬದ ರಾಜರುಗಳು ಜನರಿಗೆ
    ನ್ಯಾಯತೀರ್ಪು ನೀಡಲು ತಮ್ಮ ಸಿಂಹಾಸನಗಳನ್ನು ಅಲ್ಲಿ ಸ್ಥಾಪಿಸಿದರು.

ಜೆರುಸಲೇಮಿನ ಶಾಂತಿಗೋಸ್ಕರ ಪ್ರಾರ್ಥಿಸಿರಿ:
    “ನಿನ್ನನ್ನು ಪ್ರೀತಿಸುವ ಜನರು ಅಲ್ಲಿ ಶಾಂತಿಯನ್ನು ಕಂಡುಕೊಳ್ಳಲಿ.
    ನಿನ್ನ ಕೋಟೆಗಳೊಳಗೆ ಶಾಂತಿ ನೆಲಸಿರಲಿ
    ನಿನ್ನ ಮಹಾ ಕಟ್ಟಡಗಳಲ್ಲಿ ಸುರಕ್ಷತೆಯಿರಲಿ.”

ನನ್ನ ಸಹೋದರರ ಮತ್ತು ನೆರೆಯವರ ಒಳ್ಳೆಯದಕ್ಕಾಗಿ
    ಅಲ್ಲಿ ಶಾಂತಿ ನೆಲೆಸಿರಲೆಂದು ಪ್ರಾರ್ಥಿಸುವೆನು.
ನಮ್ಮ ದೇವರಾದ ಯೆಹೋವನ ಆಲಯಕ್ಕೋಸ್ಕರ
    ಈ ಪಟ್ಟಣಕ್ಕೆ ಒಳ್ಳೆಯದಾಗಲೆಂದು ಪ್ರಾರ್ಥಿಸುವೆನು.

ಎಸ್ತೇರಳು 9:1-5

ಯೆಹೂದ್ಯರಿಗೆ ಜಯ

ಹನ್ನೆರಡನೆಯ ತಿಂಗಳಾದ ಅದಾರ್ ಮಾಸದ ಹದಿಮೂರನೇ ದಿವಸದಲ್ಲಿ ಯೆಹೂದ್ಯರ ವೈರಿಗಳು ರಾಜಾಜ್ಞೆಗನುಸಾರವಾಗಿ ಯೆಹೂದ್ಯರನ್ನು ನಿರ್ನಾಮ ಮಾಡಬೇಕಾಗಿತ್ತು. ಅವರು ಆ ದಿವಸಕ್ಕಾಗಿ ಕಾಯುತ್ತಿರುವಾಗ ಪರಿಸ್ಥಿತಿಯು ಬದಲಾಯಿತು. ಯೆಹೂದ್ಯರು ಅವರ ಶತ್ರುಗಳಿಗಿಂತ ಬಲಾಢ್ಯರಾದರು. ರಾಜನಾದ ಅಹಷ್ವೇರೋಷನ ಸಾಮ್ರಾಜ್ಯದ ಸಂಸ್ಥಾನಗಳಲ್ಲಿದ್ದ ಯೆಹೂದ್ಯರು ತಮ್ಮನ್ನು ಕೊಲ್ಲಲು ಬರುವ ವೈರಿಗಳನ್ನು ಎದುರಿಸಲು ಒಟ್ಟಾಗಿ ಸೇರಿದರು. ಇವರಿಗೆ ವಿರುದ್ಧವಾಗಿ ಬಿದ್ದು ಹೊಡೆದಾಡಲು ಯಾರಿಗೂ ಧೈರ್ಯಸಾಲಲಿಲ್ಲ. ಯೆಹೂದ್ಯರ ಮೇಲೆ ಜನರಿಗೆ ಭೀತಿ ಉಂಟಾಯಿತು. ಅಲ್ಲದೆ ಸಂಸ್ಥಾನಗಳಲ್ಲಿದ್ದ ಅಧಿಕಾರಿಗಳು, ರಾಜ್ಯಪಾಲರು, ಆಡಳಿತಾಧಿಕಾರಿಗಳು ಯೆಹೂದ್ಯರಿಗೆ ನೆರವಾದರು. ಯಾಕೆಂದರೆ ಅವರು ಮೊರ್ದೆಕೈಗೆ ಹೆದರುತ್ತಿದ್ದರು. ಮೊರ್ದೆಕೈ ಅರಮನೆಯಲ್ಲಿ ಅತ್ಯಂತ ಪ್ರಭಾವಶಾಲಿಯಾಗಿದ್ದನು. ಸಂಸ್ಥಾನಗಳಲ್ಲಿರುವವರೆಲ್ಲರೂ ಅವನ ಪ್ರಖ್ಯಾತಿಯ ಬಗ್ಗೆ ಕೇಳಿದ್ದರು. ದಿನೇದಿನೇ ಮೊರ್ದೆಕೈ ಬಲಶಾಲಿಯಾಗುತ್ತಾ ಬಂದನು.

ತಮ್ಮ ಶತ್ರುಗಳನ್ನೆಲ್ಲಾ ಯೆಹೂದ್ಯರು ಸೋಲಿಸಿ ತಮ್ಮ ಖಡ್ಗಗಳಿಂದ ನಾಶಮಾಡಿದರು; ತಮ್ಮನ್ನು ದ್ವೇಷಿಸುತ್ತಿದ್ದವರನ್ನು ತಮಗಿಷ್ಟ ಬಂದಂತೆ ಮಾಡಿದರು.

ಎಸ್ತೇರಳು 9:18-23

ಪೂರಿಮ್ ಹಬ್ಬ

18 ಅದಾರ್ ತಿಂಗಳಿನ ಹದಿಮೂರನೇ ಮತ್ತು ಹದಿನಾಲ್ಕನೇ ದಿವಸಗಳಲ್ಲಿ ಶೂಷನ್ ನಗರದ ಯೆಹೂದ್ಯರು ಒಟ್ಟಾಗಿ ಸೇರಿಬಂದಿದ್ದರಿಂದ ಹದಿನೈದನೆಯ ದಿವಸದಲ್ಲಿ ಅವರು ವಿಶ್ರಾಂತಿ ತೆಗೆದುಕೊಂಡರು. ಹದಿನೈದನೆಯ ದಿವಸವನ್ನು ಅವರು ಸಂತಸದ ಹಬ್ಬವನ್ನಾಗಿ ಮಾಡಿದರು. 19 ದೇಶದ ಎಲ್ಲಾ ಹಳ್ಳಿಗಳಲ್ಲಿದ್ದ ಯೆಹೂದ್ಯರು ಅದಾರ್ ತಿಂಗಳಿನ ಹದಿನಾಲ್ಕನೆಯ ದಿವಸವನ್ನು ಪೂರಿಮ್ ದಿವಸವನ್ನಾಗಿ ಆಚರಿಸಿದರು. ಹದಿನಾಲ್ಕನೆಯ ದಿವಸವು ಅವರಿಗೆ ಸಂತಸದ ಹಬ್ಬ. ಆ ದಿವಸ ಅವರು ಔತಣಮಾಡಿ ಒಬ್ಬರಿಗೊಬ್ಬರು ಉಡುಗೊರೆಗಳನ್ನು ಕೊಟ್ಟು ಕಳುಹಿಸಿದರು.

20 ನಡೆದ ಸಂಗತಿಗಳನ್ನೆಲ್ಲಾ ಮೊರ್ದೆಕೈ ಬರೆದಿಟ್ಟು ಅಹಷ್ವೇರೋಷನ ಸಾಮ್ರಾಜ್ಯದಲ್ಲಿ ವಾಸಿಸಿದ್ದ ಎಲ್ಲಾ ಯೆಹೂದ್ಯರಿಗೆ, ದೂರ ಮತ್ತು ಹತ್ತಿರದಲ್ಲಿರುವ ಯೆಹೂದ್ಯರಿಗೂ ಪತ್ರ ಬರೆಯಿಸಿದನು. 21 ಅದರಲ್ಲಿ ಅವನು ಯೆಹೂದ್ಯರೆಲ್ಲರೂ ಪ್ರತೀ ವರ್ಷ ಅದಾರ್ ತಿಂಗಳಿನ ಹದಿನಾಲ್ಕನೇ ಮತ್ತು ಹದಿನೈದನೇ ದಿವಸಗಳನ್ನು ಪೂರಿಮ್ ದಿವಸಗಳನ್ನಾಗಿ ಆಚರಿಸಬೇಕು ಎಂಬದಾಗಿ ಆದೇಶ ನೀಡಿದನು. 22 ಯಾಕೆಂದರೆ ಆ ದಿವಸದಲ್ಲಿ ಯೆಹೂದ್ಯರು ತಮ್ಮ ಶತ್ರುಗಳನ್ನು ಸದೆಬಡಿದರು. ಆ ದಿವಸದಲ್ಲಿ ಅವರಿಗೆ ಶೋಕದ ಬದಲಾಗಿ ಸಂತಸವು ಒದಗಿಬಂತು. ಆ ದಿವಸದಲ್ಲಿ ಅವರ ರೋಧನವು ಹರ್ಷಧ್ವನಿಯಾಗಿ ಮಾರ್ಪಟ್ಟಿತು. ಮೊರ್ದೆಕೈಯು ಎಲ್ಲಾ ಯೆಹೂದ್ಯರಿಗೆ ಪತ್ರ ಬರೆಯಿಸಿದನು. ಆ ದಿವಸದಲ್ಲಿ ಹಬ್ಬವನ್ನು ಆಚರಿಸಿ ಒಬ್ಬರಿಗೊಬ್ಬರು ಉಡುಗೊರೆಗಳನ್ನು ಕೊಡಬೇಕು ಎಂಬುದಾಗಿ ಬರೆಯಿಸಿದನು.

23 ಮೊರ್ದೆಕೈ ಪತ್ರದಲ್ಲಿ ಬರೆದದ್ದನ್ನು ಯೆಹೂದ್ಯರು ಒಪ್ಪಿಕೊಂಡು ಆ ವರ್ಷದಲ್ಲಿ ನಡೆದ ಉತ್ಸವವು ತಮ್ಮಲ್ಲಿ ವಾರ್ಷಿಕೋತ್ಸವವಾಗಬೇಕೆಂದು ನಿರ್ಧರಿಸಿದರು.

ಲೂಕ 12:4-12

ದೇವರಿಗೆ ಮಾತ್ರ ಭಯಪಡಿರಿ

(ಮತ್ತಾಯ 10:28-31)

ಬಳಿಕ ಯೇಸು ಜನರಿಗೆ ಹೀಗೆಂದನು: “ಗೆಳೆಯರೇ, ನಾನು ನಿಮಗೆ ಹೇಳುವುದೇನೆಂದರೆ, ಮನುಷ್ಯರಿಗೆ ಭಯಪಡಬೇಡಿ. ಅವರು ನಿಮ್ಮನ್ನು ಕೊಲ್ಲಬಹುದಷ್ಟೇ. ಆ ಬಳಿಕ ಬೇರೇನೂ ಮಾಡಲು ಅವರಿಂದಾಗದು. ನೀವು ಯಾರಿಗೆ ಭಯಪಡಬೇಕೆಂದರೆ, ನಿಮ್ಮನ್ನು ಕೊಂದು ನರಕಕ್ಕೆ ಹಾಕಲು ಅಧಿಕಾರವುಳ್ಳಾತನಿಗಷ್ಟೇ (ದೇವರಿಗೆ). ಹೌದು, ಆತನೊಬ್ಬನಿಗೇ ನೀವು ಭಯಪಡಬೇಕು.

“ಐದು ಗುಬ್ಬಿಗಳ ಬೆಲೆ ಕೇವಲ ಎರಡು ಪೈಸೆಗಳು. ಆದರೆ ದೇವರು ಅವುಗಳಲ್ಲಿ ಒಂದನ್ನೂ ಮರೆತುಬಿಡುವುದಿಲ್ಲ. ಹೌದು, ನಿಮ್ಮ ತಲೆಯಲ್ಲಿ ಎಷ್ಟು ಕೂದಲುಗಳಿವೆ ಎಂಬುದು ಸಹ ದೇವರಿಗೆ ಗೊತ್ತಿದೆ. ಹೆದರಬೇಡಿರಿ. ನೀವು ಅನೇಕ ಗುಬ್ಬಿಗಳಿಗಿಂತ ಹೆಚ್ಚು ಬೆಲೆಯುಳ್ಳವರಾಗಿದ್ದೀರಿ.

ಯೇಸುವಿನ ಕುರಿತು ನಾಚಿಕೆಪಡಬೇಡಿರಿ

(ಮತ್ತಾಯ 10:32-33; 12:32; 10:19-20)

“ನಾನು ನಿಮಗೆ ಹೇಳುವುದೇನೆಂದರೆ, ಯಾವನಾದರೂ ಬೇರೆಯವರ ಎದುರಿನಲ್ಲಿ ತಾನು ನನ್ನವನೆಂದು ಹೇಳಿದರೆ, ನಾನು ಸಹ[a] ಅವನನ್ನು ನನ್ನವನೆಂದು ದೇವದೂತರ ಮುಂದೆ ಹೇಳುವೆನು. ಆದರೆ ಯಾವನಾದರೂ ಬೇರೆಯವರ ಎದುರಿನಲ್ಲಿ ತಾನು ನನ್ನವನಲ್ಲವೆಂದು ಹೇಳಿದರೆ, ನಾನು ಸಹ ದೇವದೂತರ ಮುಂದೆ ಅವನನ್ನು ನನ್ನವನಲ್ಲವೆಂದು ಹೇಳುವೆನು.

10 “ಯಾವನಾದರೂ ಮನುಷ್ಯಕುಮಾರನಿಗೆ ವಿರೋಧವಾಗಿ ಮಾತಾಡಿದರೆ ಅವನಿಗೆ ಕ್ಷಮೆ ದೊರಕಬಹುದು. ಆದರೆ ಪವಿತ್ರಾತ್ಮನನ್ನು ದೂಷಿಸುವವನಿಗೆ ಕ್ಷಮೆಯೇ ಇಲ್ಲ.

11 “ಜನರು ನಿಮ್ಮನ್ನು ಸಭಾಮಂದಿರಗಳಿಗೂ ನ್ಯಾಯಾಧಿಪತಿಗಳ ಮತ್ತು ದೇಶಾಧಿಕಾರಿಗಳ ಬಳಿಗೂ ಎಳೆದೊಯ್ಯುವಾಗ ಅವರಿಗೆ ಏನು ಹೇಳಬೇಕೆಂದು ಚಿಂತೆ ಮಾಡಬೇಡಿ. 12 ಆ ಸಮಯದಲ್ಲಿ ನೀವು ಹೇಳಬೇಕಾದುದನ್ನು ಪವಿತ್ರಾತ್ಮನೇ ನಿಮಗೆ ತಿಳಿಸುವನು.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International