Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 150

150 ಯೆಹೋವನಿಗೆ ಸ್ತೋತ್ರವಾಗಲಿ!
ದೇವರನ್ನು ಆತನ ಆಲಯದಲ್ಲಿ ಸ್ತುತಿಸಿರಿ!
    ಆತನ ಶಕ್ತಿಯನ್ನು ಪರಲೋಕದಲ್ಲಿ ಸ್ತುತಿಸಿರಿ!
ಆತನ ಮಹತ್ಕಾರ್ಯಗಳಿಗಾಗಿ ಆತನನ್ನು ಸ್ತುತಿಸಿರಿ!
    ಆತನ ಮಹತ್ವಕ್ಕೆ ತಕ್ಕಂತೆ ಆತನನ್ನು ಸ್ತುತಿಸಿರಿ!
ತುತ್ತೂರಿಗಳನ್ನೂ ಕೊಂಬುಗಳನ್ನೂ ಊದುತ್ತಾ ಆತನನ್ನು ಸ್ತುತಿಸಿರಿ!
    ಹಾರ್ಪ್‌ವಾದ್ಯಗಳನ್ನೂ ಲೈರ್‌ವಾದ್ಯಗಳನ್ನೂ ನುಡಿಸುತ್ತಾ ಆತನನ್ನು ಸ್ತುತಿಸಿರಿ.
ದಮ್ಮಡಿಗಳನ್ನು ಬಡಿಯುತ್ತಾ ಕುಣಿಯುತ್ತಾ ಆತನನ್ನು ಸ್ತುತಿಸಿರಿ.
    ತಂತಿವಾದ್ಯಗಳಿಂದಲೂ ಕೊಳಲುಗಳಿಂದಲೂ ಆತನನ್ನು ಸ್ತುತಿಸಿರಿ.
ತಾಳಗಳಿಂದ ಆತನನ್ನು ಸ್ತುತಿಸಿರಿ!
    ಝಲ್ಲರಿಗಳಿಂದ ಆತನನ್ನು ಸ್ತುತಿಸಿರಿ!

ಸಮಸ್ತ ಜೀವಿಗಳೇ, ಯೆಹೋವನಿಗೆ ಸ್ತೋತ್ರಮಾಡಿರಿ!

ಯೆಹೋವನಿಗೆ ಸ್ತೋತ್ರವಾಗಲಿ!

1 ಸಮುವೇಲನು 17:32-51

32 ದಾವೀದನು ಸೌಲನಿಗೆ, “ಜನರು ಗೊಲ್ಯಾತನಿಗೆ ಹೆದರಿಕೊಳ್ಳುವುದು ಬೇಕಾಗಿಲ್ಲ. ನಾನು ನಿನ್ನ ಸೇವಕ. ನಾನು ಈ ಫಿಲಿಷ್ಟಿಯನ ವಿರುದ್ಧ ಹೋರಾಡುತ್ತೇನೆ” ಎಂದು ಹೇಳಿದನು.

33 ಸೌಲನು, “ನೀನು ಹೊರಗೆ ಹೋಗಿ ಗೊಲ್ಯಾತನೊಂದಿಗೆ ಹೋರಾಡಲು ಸಾಧ್ಯವಿಲ್ಲ. ನೀನು ಒಬ್ಬ ಸೈನಿಕನೂ ಅಲ್ಲ! ಗೊಲ್ಯಾತನು ಬಾಲ್ಯದಿಂದಲೂ ಯುದ್ಧವೀರನಾಗಿದ್ದಾನೆ” ಎಂದನು.

34 ಆದರೆ ದಾವೀದನು ಸೌಲನಿಗೆ, “ನಾನು ನಿನ್ನ ಸೇವಕ. ನಾನು ನನ್ನ ತಂದೆಯ ಕುರಿಗಳನ್ನು ಕಾಯುತ್ತಿದ್ದೆ. ಸಿಂಹವಾಗಲಿ ಕರಡಿಯಾಗಲಿ ಬಂದು ಕುರಿಮಂದೆಯಿಂದ ಕುರಿಗಳನ್ನು ಹಿಡಿದುಕೊಂಡರೆ, 35 ಆದನ್ನು ನಾನು ಅಟ್ಟಿಸಿಕೊಂಡು ಹೋಗುತ್ತಿದ್ದೆ. ನಾನು ಆ ಕ್ರೂರ ಮೃಗದ ಮೇಲೆ ಆಕ್ರಮಣ ಮಾಡಿ, ಅದರ ಬಾಯಿಂದ ಕುರಿಯನ್ನು ಬಿಡಿಸುತ್ತಿದ್ದೆನು. ಅದು ನನ್ನ ಮೇಲೆ ಆಕ್ರಮಣ ಮಾಡಿದರೆ, ನಾನು ಅದರ ಗಡ್ಡ ಹಿಡಿದು ಹೋರಾಡಿ ಅದನ್ನು ಕೊಲ್ಲುತ್ತಿದ್ದೆನು. 36 ನಾನು ಒಂದು ಸಿಂಹವನ್ನೂ ಒಂದು ಕರಡಿಯನ್ನೂ ಕೊಂದಿದ್ದೇನೆ. ಅದೇ ರೀತಿಯಲ್ಲಿ ನಾನು ಅನ್ಯದೇಶಿಯನಾದ ಗೊಲ್ಯಾತನನ್ನೂ ಕೊಂದು ಹಾಕುತ್ತೇನೆ. ಜೀವಸ್ವರೂಪನಾದ ದೇವರ ಸೈನ್ಯವನ್ನು ಹೀಯಾಳಿಸಿದ್ದರಿಂದ ಗೊಲ್ಯಾತನು ಸಾಯಲೇಬೇಕು. 37 ಯೆಹೋವನು ನನ್ನನ್ನು ಸಿಂಹದಿಂದಲೂ ಕರಡಿಯಿಂದಲೂ ರಕ್ಷಿಸಿದನು. ಯೆಹೋವನು ಈ ಗೊಲ್ಯಾತನಿಂದಲೂ ನನ್ನನ್ನು ರಕ್ಷಿಸುತ್ತಾನೆ” ಎಂದು ಹೇಳಿದನು.

ಸೌಲನು ದಾವೀದನಿಗೆ, “ಹೋಗು, ಯೆಹೋವನು ನಿನ್ನೊಂದಿಗಿರಲಿ” ಎಂದು ಹೇಳಿದನು.

38 ಸೌಲನು ತನ್ನ ಯುದ್ಧವಸ್ತ್ರಗಳನ್ನು ದಾವೀದನಿಗೆ ತೊಡಿಸಿದನು. ಸೌಲನು ತಾಮ್ರದ ಶಿರಸ್ತ್ರಾಣವನ್ನು ದಾವೀದನ ತಲೆಯ ಮೇಲಿಟ್ಟನು ಮತ್ತು ಲೋಹದ ಕವಚವನ್ನು ದಾವೀದನ ಮೈಗೆ ತೊಡಿಸಿದನು. 39 ದಾವೀದನು ಕತ್ತಿಯನ್ನು ಸಿಕ್ಕಿಸಿಕೊಂಡು, ಆ ಕಡೆ ಈ ಕಡೆ ಸುತ್ತಾಡಿದನು. ಸೌಲನ ಯುದ್ಧ ವಸ್ತ್ರಗಳನ್ನು ದಾವೀದನು ಧರಿಸಲು ಪ್ರಯತ್ನಿಸಿದನು. ಆದರೆ ದಾವೀದನಿಗೆ ಅಂತಹ ಭಾರದ ವಸ್ತ್ರಗಳನ್ನು ಧರಿಸಿ ಅಭ್ಯಾಸವಿರಲಿಲ್ಲ.

ದಾವೀದನು ಸೌಲನಿಗೆ, “ನಾನು ಇವುಗಳನ್ನು ಧರಿಸಿಕೊಂಡು ಹೋರಾಡಲಾಗುವುದಿಲ್ಲ; ನನಗೆ ಇವುಗಳನ್ನು ಧರಿಸಿಕೊಂಡು ಅಭ್ಯಾಸವಿಲ್ಲ” ಎಂದು ಹೇಳಿ ಅವುಗಳನ್ನೆಲ್ಲ ತೆಗೆದು ಹಾಕಿದನು. 40 ದಾವೀದನು ತನ್ನ ಕೋಲನ್ನು ಕೈಯಲ್ಲಿ ಹಿಡಿದುಕೊಂಡು, ಕಣಿವೆಯಲ್ಲಿ ಐದು ನುಣುಪುಕಲ್ಲುಗಳನ್ನು ಆರಿಸಿಕೊಂಡು ಅವುಗಳನ್ನು ಕುರಿಕಾಯಲು ಬಳಸುವ ಚೀಲದಲ್ಲಿ ಹಾಕಿಕೊಂಡು ಕವಣೆಯನ್ನು ಕೈಯಲ್ಲಿ ಹಿಡಿದುಕೊಂಡನು. ನಂತರ ಗೊಲ್ಯಾತನನ್ನು ಎದುರಿಸಲು ಹೋದನು.

ದಾವೀದನು ಗೊಲ್ಯಾತನನ್ನು ಕೊಂದದ್ದು

41 ಫಿಲಿಷ್ಟಿಯನು (ಗೊಲ್ಯಾತನು) ದಾವೀದನ ಬಳಿಗೆ ನಿಧಾನವಾಗಿ ನಡೆಯುತ್ತಾ ಬಂದನು. ಗೊಲ್ಯಾತನ ಮುಂದೆ ಅವನ ಸಹಾಯಕನು ಗುರಾಣಿಯನ್ನು ಹೊತ್ತುಕೊಂಡು ನಡೆಯುತ್ತಾ ಹೋದನು. 42 ಗೊಲ್ಯಾತನು ದಾವೀದನನ್ನು ನೋಡಿ ನಕ್ಕನು. ದಾವೀದನು ಸೈನಿಕನಲ್ಲವೆಂಬುದು ಗೊಲ್ಯಾತನಿಗೆ ಗೊತ್ತಾಯಿತು. ದಾವೀದನು ಕೆಂಬಣ್ಣದ ಸುಂದರ ಯುವಕನಾಗಿದ್ದನು. 43 ಗೊಲ್ಯಾತನು ದಾವೀದನಿಗೆ, “ಈ ಕೋಲು ಏನಕ್ಕೆ? ನಾಯಿಯನ್ನು ಓಡಿಸುವಂತೆ ನನ್ನನ್ನು ಓಡಿಸುವುದಕ್ಕೆ ಬಂದೆಯಾ?” ಎಂದು ಕೇಳಿದನು. ಬಳಿಕ ಗೊಲ್ಯಾತನು ತನ್ನ ದೇವರ ಹೆಸರುಗಳ ಮೇಲೆ ದಾವೀದನನ್ನು ಶಪಿಸಿದನು. 44 ಗೊಲ್ಯಾತನು ದಾವೀದನಿಗೆ, “ಬಾ ಇಲ್ಲಿಗೆ, ನಿನ್ನ ದೇಹವನ್ನು ಪಕ್ಷಿಗಳಿಗೂ ಕ್ರೂರಪ್ರಾಣಿಗಳಿಗೂ ಆಹಾರವನ್ನಾಗಿ ಮಾಡುತ್ತೇನೆ!” ಎಂದನು.

45 ದಾವೀದನು ಫಿಲಿಷ್ಟಿಯನಿಗೆ, “ನೀನಾದರೋ ಖಡ್ಗ, ಈಟಿ ಮತ್ತು ಭರ್ಜಿಗಳನ್ನು ಹಿಡಿದುಕೊಂಡು ನನ್ನ ಬಳಿಗೆ ಬಂದಿರುವೆ. ನಾನಾದರೋ ಸರ್ವಶಕ್ತನೂ ಇಸ್ರೇಲರ ಸೈನ್ಯಗಳ ದೇವರೂ ಆಗಿರುವ ಯೆಹೋವನ ಹೆಸರಿನಲ್ಲಿ ನಿನ್ನ ಬಳಿಗೆ ಬಂದಿರುವೆ! ನೀನು ಹೀಯಾಳಿಸಿದ್ದು ಆತನನ್ನೇ. 46 ಇಂದು ನಾನು ನಿನ್ನನ್ನು ಸೋಲಿಸಲು ಯೆಹೋವನು ಸಹಾಯಮಾಡುತ್ತಾನೆ. ನಾನು ನಿನ್ನನ್ನು ಕೊಲ್ಲುತ್ತೇನೆ. ಇಂದು ನಾನು ನಿನ್ನ ತಲೆಯನ್ನು ಕತ್ತರಿಸಿ ನಿನ್ನ ದೇಹವನ್ನು ಪಕ್ಷಿಗಳಿಗೂ ಕ್ರೂರಮೃಗಗಳಿಗೂ ಆಹಾರವನ್ನಾಗಿ ಕೊಡುತ್ತೇನೆ. ಉಳಿದೆಲ್ಲ ಫಿಲಿಷ್ಟಿಯರಿಗೂ ಸಹ ನಾವು ಅದೇ ರೀತಿ ಮಾಡುತ್ತೇವೆ. ಆಗ ಇಸ್ರೇಲಿನಲ್ಲಿ ದೇವರಿದ್ದಾನೆಂಬುದು ಇಡೀ ಜಗತ್ತಿಗೆಲ್ಲ ಗೊತ್ತಾಗುವುದು! 47 ಜನರನ್ನು ರಕ್ಷಿಸಲು ಯೆಹೋವನಿಗೆ ಕತ್ತಿ ಮತ್ತು ಈಟಿಗಳ ಅಗತ್ಯವಿಲ್ಲ ಎಂಬುದು ಇಲ್ಲಿ ಸೇರಿರುವ ಜನರಿಗೆಲ್ಲ ತಿಳಿಯುತ್ತದೆ. ಇದು ಯೆಹೋವನ ಯುದ್ಧ. ಫಿಲಿಷ್ಟಿಯರನ್ನೆಲ್ಲ ಸೋಲಿಸಲು ಯೆಹೋವನು ನಮಗೆ ಸಹಾಯ ಮಾಡುತ್ತಾನೆ” ಎಂದು ಹೇಳಿದನು.

48 ಫಿಲಿಷ್ಟಿಯನಾದ ಗೊಲ್ಯಾತನು ಆಕ್ರಮಣಮಾಡಲು ದಾವೀದನ ಹತ್ತಿರಕ್ಕೆ ಬಂದನು. ದಾವೀದನೂ ಗೊಲ್ಯಾತನನ್ನು ಸಂಧಿಸಲು ವೇಗವಾಗಿ ಓಡಿದನು.

49 ದಾವೀದನು ತನ್ನ ಚೀಲದಿಂದ ಒಂದು ಕಲ್ಲನ್ನು ಹೊರತೆಗೆದನು. ಅದನ್ನು ಅವನು ಕವಣೆಯಲ್ಲಿ ಸಿಕ್ಕಿಸಿ ಬೀಸಿ ಹೊಡೆದನು. ಕವಣೆಯಿಂದ ಅವನು ಬೀಸಿದ ಕಲ್ಲು ಗೊಲ್ಯಾತನ ಹಣೆಗೆ ಬಡಿಯಿತು. ಆ ಕಲ್ಲು ಅವನ ಹಣೆಯಲ್ಲಿ ಆಳವಾದ ಗಾಯವನ್ನು ಮಾಡಿತು. ಕೂಡಲೇ ಗೊಲ್ಯಾತನು ಬೋರಲಾಗಿ ನೆಲದ ಮೇಲೆ ಬಿದ್ದನು.

50 ಹೀಗೆ ದಾವೀದನು ಕವಣಿಯ ಒಂದೇ ಕಲ್ಲಿನಿಂದ ಫಿಲಿಷ್ಟಿಯನನ್ನು ಹೊಡೆದು ಕೊಂದನು! ದಾವೀದನು ಕತ್ತಿಯನ್ನೂ ಹೊಂದಿರಲಿಲ್ಲ. 51 ದಾವೀದನು ಓಡುತ್ತಾ ಹೋಗಿ ಫಿಲಿಷ್ಟಿಯನ ಪಕ್ಕದಲ್ಲಿ ನಿಂತುಕೊಂಡನು. ದಾವೀದನು ಗೊಲ್ಯಾತನ ಕತ್ತಿಯನ್ನು ಒರೆಯಿಂದ ತೆಗೆದು ಅದೇ ಕತ್ತಿಯಿಂದ ಅವನ ತಲೆಯನ್ನು ಕತ್ತರಿಸಿ ಹಾಕಿದನು. ದಾವೀದನು ಈ ರೀತಿಯಲ್ಲಿ ಗೊಲ್ಯಾತನನ್ನು ಕೊಂದನು.

ಫಿಲಿಷ್ಟಿಯರು ತಮ್ಮ ನಾಯಕನು ಸತ್ತದ್ದನ್ನು ನೋಡಿದಾಗ ಹಿಂದಿರುಗಿ ಓಡಿಹೋದರು.

ಲೂಕ 24:36-40

ಯೇಸು ತನ್ನ ಶಿಷ್ಯರಿಗೆ ಕಾಣಿಸಿಕೊಂಡನು

(ಮತ್ತಾಯ 28:16-20; ಮಾರ್ಕ 16:14-18; ಯೋಹಾನ 20:19-23; ಅ.ಕಾ. 1:6-8)

36 ಅವರಿಬ್ಬರೂ ಈ ಸಂಗತಿಗಳನ್ನು ಹೇಳುತ್ತಿದ್ದಾಗ, ಯೇಸುವು ಶಿಷ್ಯರ ಗುಂಪಿನ ಮಧ್ಯದಲ್ಲಿ ನಿಂತುಕೊಂಡು ಅವರಿಗೆ, “ನಿಮಗೆ ಶಾಂತಿಯಾಗಲಿ” ಅಂದನು.

37 ಆಗ ಶಿಷ್ಯರು ಬೆರಗಾದರು. ಅವರಿಗೆ ಭಯವಾಯಿತು. ಅದು ಭೂತವೇ ಇರಬೇಕೆಂದು ಅವರು ಭಾವಿಸಿದರು. 38 ಆದರೆ ಯೇಸು, “ನೀವು ಏಕೆ ಗಲಿಬಿಲಿಗೊಂಡಿದ್ದೀರಿ? ನೀವು ಕಣ್ಣಾರೆ ಕಂಡರೂ ಏಕೆ ಸಂಶಯಪಡುತ್ತೀರಿ? 39 ನನ್ನ ಕೈಗಳನ್ನು ಮತ್ತು ಪಾದಗಳನ್ನು ನೋಡಿರಿ. ನಾನೇ ಅಲ್ಲವೇ! ನನ್ನನ್ನು ಮುಟ್ಟಿರಿ. ನನ್ನ ಈ ಜೀವಂತ ದೇಹವನ್ನು ನೀವೇ ನೋಡಿರಿ. ಭೂತಕ್ಕೆ ಈ ರೀತಿಯ ದೇಹವಿರುವುದಿಲ್ಲ” ಅಂದನು.

40 ಯೇಸು ಅವರಿಗೆ ಇದನ್ನು ಹೇಳಿದ ನಂತರ, ತನ್ನ ಕೈಗಳಲ್ಲಿ ಮತ್ತು ಪಾದಗಳಲ್ಲಿರುವ ಗಾಯದ ಗುರುತುಗಳನ್ನು ತೋರಿಸಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International