Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 118:1-2

118 ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ.
    ಆತನು ಒಳ್ಳೆಯವನು.
    ಆತನ ಪ್ರೀತಿಯು ಶಾಶ್ವತವಾದದ್ದು!
ಇಸ್ರೇಲರೇ,
    “ಆತನ ಪ್ರೀತಿ ಶಾಶ್ವತವಾದದ್ದು” ಎಂದು ಹೇಳಿರಿ.

ಕೀರ್ತನೆಗಳು 118:14-24

14 ನನ್ನ ಬಲವೂ ಜಯಗೀತೆಯೂ ಯೆಹೋವನೇ.
    ಆತನೇ ನನ್ನನ್ನು ರಕ್ಷಿಸುವನು!
15 ಜಯೋತ್ಸವವು ನೀತಿವಂತರ ಮನೆಗಳಲ್ಲಿ ಕೇಳಿಬರುತ್ತಿದೆ.
    ಯೆಹೋವನು ತನ್ನ ಮಹಾಶಕ್ತಿಯನ್ನು ಮತ್ತೆ ತೋರಿಸಿದ್ದಾನೆ.
16 ಯೆಹೋವನ ಬಲಗೈ ಜಯಗಳಿಸಿದೆ.
    ಯೆಹೋವನು ತನ್ನ ಮಹಾಶಕ್ತಿಯನ್ನು ಮತ್ತೆ ತೋರಿದ್ದಾನೆ.

17 ನಾನು ಸಾಯುವುದಿಲ್ಲ;
    ನಾನು ಜೀವದಿಂದಿದ್ದು ಯೆಹೋವನ ಕಾರ್ಯಗಳ ಕುರಿತು ಹೇಳುತ್ತೇನೆ.
18 ಯೆಹೋವನು ನನ್ನನ್ನು ಶಿಕ್ಷಿಸಿದರೂ
    ಸಾವಿಗೀಡುಮಾಡಲಿಲ್ಲ.
19 ನೀತಿಯ ಬಾಗಿಲುಗಳೇ, ನನಗೋಸ್ಕರ ತೆರೆಯಿರಿ,
    ನಾನು ಒಳಗೆ ಬಂದು ಯೆಹೋವನನ್ನು ಆರಾಧಿಸುತ್ತೇನೆ.
20 ಅವು ಯೆಹೋವನ ಬಾಗಿಲುಗಳು.
    ನೀತಿವಂತರು ಮಾತ್ರ ಆ ಬಾಗಿಲುಗಳ ಮೂಲಕ ಹೋಗಬಲ್ಲರು.
21 ಯೆಹೋವನೇ, ನನ್ನ ಪ್ರಾರ್ಥನೆಗೆ ನೀನು ಉತ್ತರಿಸಿ
    ನನ್ನನ್ನು ರಕ್ಷಿಸಿದ್ದಕ್ಕೋಸ್ಕರ ನಿನಗೆ ಕೃತಜ್ಞತಾಸ್ತುತಿ ಮಾಡುವೆನು.

22 ಮನೆ ಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ ಮೂಲೆಗಲ್ಲಾಯಿತು.
23 ಇದು ಯೆಹೋವನಿಂದಲೇ ಆಯಿತು.
    ನಮಗಂತೂ ಇದು ಆಶ್ಚರ್ಯಕರವಾಗಿದೆ!
24 ಈ ದಿನವನ್ನು ಮಾಡಿದಾತನು ಯೆಹೋವನೇ.
    ಇಂದೇ ನಾವು ಉಲ್ಲಾಸದಿಂದ ಆನಂದಿಸೋಣ.

ನ್ಯಾಯಸ್ಥಾಪಕರು 4:17-23

17 ಆದರೆ ಸೀಸೆರನು ಓಡಿಹೋದನು. ಅವನು ಯಾಯೇಲ ಎಂಬ ಒಬ್ಬ ಮಹಿಳೆ ವಾಸವಾಗಿದ್ದ ಗುಡಾರಕ್ಕೆ ಬಂದನು. ಯಾಯೇಲಳು ಹೆಬೆರನ ಹೆಂಡತಿ. ಹೆಬೆರನು ಕೇನ್ಯನಾಗಿದ್ದನು. ಹಾಚೋರಿನ ಅರಸನಾದ ಯಾಬೀನ ಮತ್ತು ಕೇನ್ಯನಾದ ಹೆಬೆರನ ಕುಟುಂಬಗಳ ಮಧ್ಯೆ ಒಳ್ಳೆಯ ಸಮಾಧಾನವಿದ್ದಿತು. ಅದಕ್ಕಾಗಿ ಸೀಸೆರನು ಯಾಯೇಲಳ ಗುಡಾರಕ್ಕೆ ಓಡಿಹೋಗಿದ್ದನು. 18 ಸೀಸೆರನು ಬರುವುದನ್ನು ಯಾಯೇಲಳು ಕಂಡಳು. ಆದ್ದರಿಂದ ಅವನನ್ನು ಬರಮಾಡಿಕೊಳ್ಳಲು ಹೊರಗೆ ಬಂದಳು. ಯಾಯೇಲಳು ಸೀಸೆರನಿಗೆ, “ಸ್ವಾಮೀ, ನನ್ನ ಗುಡಾರದೊಳಗೆ ಬನ್ನಿ, ಭಯಪಡಬೇಡಿ” ಎಂದು ಕರೆದಳು. ಆದ್ದರಿಂದ ಸೀಸೆರನು ಗುಡಾರದೊಳಗೆ ಹೋದನು. ಅವಳು ಸೀಸೆರನ ಮೇಲೆ ಕಂಬಳಿಯನ್ನು ಹೊದಿಸಿದಳು.

19 ಸೀಸೆರನು ಯಾಯೇಲಳಿಗೆ, “ನನಗೆ ಬಾಯಾರಿಕೆಯಾಗಿದೆ. ದಯವಿಟ್ಟು ಕುಡಿಯಲು ಸ್ವಲ್ಪ ನೀರನ್ನು ಕೊಡು” ಎಂದು ಕೇಳಿದನು. ಯಾಯೇಲಳ ಬಳಿ ಪ್ರಾಣಿಗಳ ಚರ್ಮದಿಂದ ಮಾಡಿದ ಒಂದು ಚೀಲವಿತ್ತು. ಆಕೆಯು ಅದರಲ್ಲಿ ಹಾಲಿಟ್ಟಿದ್ದಳು. ಯಾಯೇಲಳು ಸೀಸೆರನಿಗೆ ಒಂದು ಗುಟುಕು ಹಾಲನ್ನೇ ಕೊಟ್ಟಳು. ನಂತರ ಅವಳು ಸೀಸೆರನನ್ನು ಮುಚ್ಚಿಬಿಟ್ಟಳು.

20 ಆಗ ಸೀಸೆರನು ಯಾಯೇಲಳಿಗೆ, “ಹೋಗಿ ಗುಡಾರದ ಬಾಗಿಲಿನ ಹತ್ತಿರ ನಿಂತುಕೊಂಡಿರು. ಯಾರಾದರೂ ಬಂದು ‘ಗುಡಾರದಲ್ಲಿ ಯಾರಾದರೂ ಇದ್ದಾರೆಯೇ?’ ಎಂದು ಕೇಳಿದರೆ, ‘ಇಲ್ಲ’ ಎಂದು ಹೇಳು” ಎಂದನು.

21 ಯಾಯೇಲಳು ಗುಡಾರದ ಗೂಟವನ್ನು ಮತ್ತು ಕೊಡತಿಯನ್ನು ತೆಗೆದುಕೊಂಡು ಶಬ್ದಮಾಡದೆ ಸೀಸೆರನ ಹತ್ತಿರ ಹೋದಳು. ಸೀಸೆರನು ಬಹಳ ದಣಿದಿದ್ದ ಕಾರಣ ಗಾಢನಿದ್ರೆ ಮಾಡುತ್ತಿದ್ದನು. ಯಾಯೇಲಳು ಗುಡಾರದ ಗೂಟವನ್ನು ಸೀಸೆರನ ತಲೆಯ ಒಂದು ಪಾರ್ಶ್ವದಲ್ಲಿ ಇಟ್ಟು ಕೊಡತಿಯಿಂದ ಬಲವಾಗಿ ಹೊಡೆದಳು. ಆ ಗುಡಾರದ ಗೂಟವು ಸೀಸೆರನ ತಲೆಯ ಮತ್ತೊಂದು ಪಾರ್ಶ್ವಕ್ಕೆ ತೂರಿಬಂದು ಭೂಮಿಯಲ್ಲಿ ಸೇರಿತು. ಸೀಸೆರನು ಸತ್ತನು.

22 ಅದೇ ಕ್ಷಣದಲ್ಲಿ ಬಾರಾಕನು ಯಾಯೇಲಳ ಗುಡಾರದ ಹತ್ತಿರಕ್ಕೆ ಬಂದನು. ಅವನನ್ನು ಬರಮಾಡಿಕೊಳ್ಳುವುದಕ್ಕಾಗಿ ಯಾಯೇಲಳು ಹೊರಗೆ ಬಂದು, “ಇಲ್ಲಿ ಒಳಗೆ ಬನ್ನಿ. ನೀನು ಹುಡುಕುತ್ತಿರುವ ಮನುಷ್ಯನನ್ನು ತೋರಿಸುತ್ತೇನೆ” ಎಂದಳು. ಬಾರಾಕನು ಯಾಯೇಲಳ ಜೊತೆ ಗುಡಾರವನ್ನು ಪ್ರವೇಶಿಸಿದನು. ಅಲ್ಲಿ ಬಾರಾಕನು ಕಣತಲೆಯಲ್ಲಿ ಗೂಟವನ್ನು ಜಡಿಸಿಕೊಂಡು ನೆಲದ ಮೇಲೆ ಸತ್ತು ಬಿದ್ದಿದ್ದ ಸೀಸೆರನನ್ನು ಕಂಡನು.

23 ಆ ದಿನ ದೇವರು ಇಸ್ರೇಲರಿಗಾಗಿ ಕಾನಾನ್ಯ ರಾಜನಾದ ಯಾಬೀನನನ್ನು ಸೋಲಿಸಿದನು.

ನ್ಯಾಯಸ್ಥಾಪಕರು 5:24-31

24 ಕೇನ್ಯನಾದ ಹೆಬೆರನ ಹೆಂಡತಿ ಯಾಯೇಲಳಿಗೆ
    ಎಲ್ಲ ಹೆಂಗಸರಿಗಿಂತಲೂ ಹೆಚ್ಚಿಗೆ ದೇವರ ಆಶೀರ್ವಾದವಾಗುವುದು.
25 ಸೀಸೆರನು ನೀರು ಕೇಳಿದನು;
    ಯಾಯೇಲಳು ಅವನಿಗೆ ಹಾಲು ಕೊಟ್ಟಳು.
ಅರಸನಿಗೆ ಯೋಗ್ಯವಾದ ಬಟ್ಟಲಲ್ಲಿ
    ಅವಳು ಅವನಿಗೆ ಕೆನೆಯನ್ನು ತಂದಳು.
26 ನಂತರ ಯಾಯೇಲಳು ಕೈಚಾಚಿ ಗುಡಾರದ ಗೂಟವನ್ನು ತೆಗೆದುಕೊಂಡಳು.
    ಅವಳು ಬಲಗೈಯನ್ನು ಚಾಚಿ ದೊಡ್ಡ ಕೊಡತಿಯನ್ನು ತೆಗೆದುಕೊಂಡಳು,
ಆ ಕೊಡತಿಯಿಂದ ಸೀಸೆರನ ತಲೆಯನ್ನು ಬಿರುಸಾಗಿ ಒಡೆದುಬಿಟ್ಟಳು;
    ಅವನ ಕಣತಲೆಗೆ ತಿವಿದು ಬಡಿದಳು.
27 ಅವನು ಯಾಯೇಲಳ ಪಾದಗಳ ಬಳಿಯಲ್ಲಿ
    ಬಗ್ಗಿಕೊಂಡು ಉರುಳಿಬಿದ್ದನು;
ಅವನು ಅವಳ ಪಾದಗಳ ಬಳಿಯಲ್ಲಿ ಕುಸಿದುಬಿದ್ದನು.
    ಸೀಸೆರನು ಕುಸಿದುಬಿದ್ದಲ್ಲಿಯೇ ಸತ್ತನು.

28 “ಸೀಸೆರನ ತಾಯಿ ಕಿಟಿಕಿಯ ಮೂಲಕ ನೋಡಿದಳು;
    ಆಕೆಯು ತೆರೆಯ ಮೂಲಕ ನೋಡಿ ಕೂಗಿದಳು.
‘ಸೀಸೆರನ ರಥಾಗಮನಕ್ಕೆ ಇಷ್ಟು ತಡವೇಕೆ?
    ಅವನ ರಥದ ಕುದುರೆಗಳ ಧ್ವನಿ ಬರಲು ಇಷ್ಟು ತಡವೇಕೆ?’ ಅಂದಳು.

29 “ಅವಳ ಸೇವಕಿಯರಲ್ಲಿ ಅತಿಬುದ್ಧಿವಂತಳು ಹೀಗೆ ಉತ್ತರಿಸಿದಳು.
    ಹೌದು, ಸೇವಕಿಯು ಉತ್ತರಿಸಿದಳು,
30 ‘ಖಂಡಿತವಾಗಿ ಅವರು ಗೆದ್ದಿದ್ದಾರೆ,
    ತಾವು ಸೋಲಿಸಿದ ಜನರಿಂದ ವಸ್ತುಗಳನ್ನು ಪಡೆಯುತ್ತಿದ್ದಾರೆ!
ಆ ವಸ್ತುಗಳನ್ನು ತಮ್ಮಲ್ಲಿಯೇ ಹಂಚಿಕೊಳ್ಳುತ್ತಿದ್ದಾರೆ!
    ಪ್ರತಿಯೊಬ್ಬ ಸೈನಿಕನು ಒಬ್ಬಿಬ್ಬರು ಹುಡುಗಿಯರನ್ನು ತೆಗೆದುಕೊಳ್ಳುತ್ತಿರಬೇಕು.
ಸೀಸೆರನು ವರ್ಣರಂಜಿತ ಬಟ್ಟೆಯನ್ನು ತೆಗೆದುಕೊಳ್ಳುತ್ತಿರಬಹುದು.
    ಹೌದು! ವಿಜಯಿ ಸೀಸೆರನು ಧರಿಸಲು ಬಣ್ಣಬಣ್ಣದ ಒಂದು ಬಟ್ಟೆಯನ್ನು ತೆಗೆದುಕೊಳ್ಳುತ್ತಿರಬಹುದು;
    ಅಥವಾ ಎರಡು ಬಟ್ಟೆಗಳನ್ನು ತೆಗೆದುಕೊಳ್ಳುತ್ತಿರಬಹುದು.’

31 “ಯೆಹೋವನೇ, ನಿನ್ನ ವೈರಿಗಳೆಲ್ಲಾ ಹೀಗೇ ಸಾಯಲಿ;
    ಆದರೆ ನಿನ್ನನ್ನು ಪ್ರೀತಿಸುವವರೆಲ್ಲರೂ ಬಲವಾಗಿದ್ದು ಉದಯಿಸುವ ಸೂರ್ಯನಂತೆ ಬೆಳಗಲಿ!”

ನಲವತ್ತು ವರ್ಷಗಳವರೆಗೆ ದೇಶದಲ್ಲಿ ಶಾಂತಿ ನೆಲೆಸಿತ್ತು.

ಪ್ರಕಟನೆ 12:1-12

ಸ್ತ್ರೀ ಮತ್ತು ಘಟಸರ್ಪ

12 ಆಗ ಪರಲೋಕದಲ್ಲಿ ಮಹಾ ಅದ್ಭುತವು ಕಾಣಿಸಿತು. ಸೂರ್ಯನನ್ನು ಧರಿಸಿದ್ದ ಒಬ್ಬ ಸ್ತ್ರೀ ಅಲ್ಲಿದ್ದಳು. ಆಕೆಯ ಪಾದದ ಕೆಳಗೆ ಚಂದ್ರನಿದ್ದನು. ಆಕೆಯ ತಲೆಯ ಮೇಲೆ ಹನ್ನೆರಡು ನಕ್ಷತ್ರಗಳುಳ್ಳ ಒಂದು ಕಿರೀಟವಿತ್ತು. ಆಕೆಯು ಗರ್ಭಿಣಿಯಾಗಿದ್ದಳು ಆಕೆಯು ಪ್ರಸವವೇದನೆಯಿಂದ ಕೂಗಿದಳು.

ಆಗ ಪರಲೋಕದಲ್ಲಿ ಮತ್ತೊಂದು ಅದ್ಭುತವು ಕಾಣಿಸಿತು: ಕೆಂಪಾದ ಮಹಾ ಘಟಸರ್ಪವೊಂದು ಅಲ್ಲಿತ್ತು. ಆ ಘಟಸರ್ಪಕ್ಕೆ ಏಳು ತಲೆಗಳಿದ್ದು, ಪ್ರತಿಯೊಂದು ತಲೆಯ ಮೇಲೂ ಏಳು ಕಿರೀಟಗಳಿದ್ದವು. ಆ ಸರ್ಪಕ್ಕೆ ಹತ್ತು ಕೊಂಬುಗಳಿದ್ದವು. ಆ ಸರ್ಪದ ಬಾಲವು ಆಕಾಶದ ನಕ್ಷತ್ರಗಳಲ್ಲಿ ಮೂರನೆಯ ಒಂದು ಭಾಗವನ್ನು ಸೆಳೆದೆಳೆದು ಭೂಮಿಯ ಮೇಲೆ ಎಸೆಯಿತು. ಆ ಘಟಸರ್ಪವು ಪ್ರಸವ ವೇದನೆಪಡುತ್ತಿದ್ದ ಸ್ತ್ರೀಯ ಎದುರಿನಲ್ಲಿ ನಿಂತುಕೊಂಡಿತು. ಆ ಸ್ತ್ರೀಯು ಹೆರುವ ಮಗುವನ್ನು ನುಂಗಿಹಾಕಲು ಆ ಸರ್ಪವು ಕಾದುಕೊಂಡಿತ್ತು.

ಆ ಸ್ತ್ರೀಯು ಅವನು ಎಲ್ಲಾ ಜನಾಂಗಗಳನ್ನು ಕಬ್ಬಿಣದ ಕೋಲಿನಿಂದ ಆಳುವ ಒಂದು ಗಂಡು ಮಗುವನ್ನು ಹೆತ್ತಳು. ಅವಳ ಮಗುವನ್ನು ದೇವರ ಬಳಿಗೂ ಆತನ ಸಿಂಹಾಸನದ ಬಳಿಗೂ ತೆಗೆದುಕೊಂಡು ಹೋಗಲಾಯಿತು. ಆ ಸ್ತ್ರೀಯು ತನಗಾಗಿ ದೇವರು ಸಿದ್ಧಪಡಿಸಿದ್ದ ಮರುಳುಗಾಡಿನ ಒಂದು ಸ್ಥಳಕ್ಕೆ ಓಡಿಹೋದಳು. ಆ ಮರಳುಗಾಡಿನಲ್ಲಿ ಆಕೆಯನ್ನು ಸಾವಿರದ ಇನ್ನೂರ ಅರವತ್ತು ದಿನಗಳ ಕಾಲ ಪೋಷಿಸಲಾಗುವುದು.

ನಂತರ ಪರಲೋಕದಲ್ಲಿ ಒಂದು ಯುದ್ಧವಾಯಿತು. ಮಿಕಾಯೇಲನು ಮತ್ತು ಅವನ ಸಹದೂತರು ಆ ಘಟಸರ್ಪದ ವಿರುದ್ಧ ಹೋರಾಡಿದರು. ಆ ಘಟಸರ್ಪ ಮತ್ತು ಅದರ ದೂತರೂ ಹೋರಾಡಿದರು. ಆದರೆ ಆ ಘಟಸರ್ಪವೂ ಅದರ ದೂತರೂ ಸೋತುಹೋಗಿ ಪರಲೋಕದಲ್ಲಿ ತಮ್ಮ ಸ್ಥಾನಗಳನ್ನು ಕಳೆದುಕೊಂಡರು. ಆ ಘಟಸರ್ಪವನ್ನು ಪರಲೋಕದಿಂದ (ಆ ಘಟಸರ್ಪಕ್ಕೆ ಸೈತಾನನೆಂತಲೂ ಪಿಶಾಚನೆಂತಲೂ ಹೆಸರಿದೆ. ಅದು ಲೋಕವನ್ನೆಲ್ಲಾ ತಪ್ಪು ಮಾರ್ಗಕ್ಕೆ ಎಳೆಯುತ್ತಿತ್ತು.) ಅದರ ದೂತರೊಂದಿಗೆ ಭೂಮಿಯ ಮೇಲೆ ಎಸೆಯಲಾಯಿತು.

10 ಆಗ ಪರಲೋಕದಲ್ಲಾದ ಒಂದು ಮಹಾಶಬ್ದವನ್ನು ನಾನು ಕೇಳಿದೆನು: “ನಮ್ಮ ದೇವರ ಜಯವು, ಶಕ್ತಿಯು ಮತ್ತು ರಾಜ್ಯವು ಹಾಗೂ ಆತನವನಾಗಿರುವ ಕ್ರಿಸ್ತನ ಅಧಿಕಾರವು ಈಗ ಬಂದಿವೆ. ನಮ್ಮ ಸಹೋದರರ ಮೇಲೆ ದೂಷಣೆ ಮಾಡುವವನನ್ನು ಹೊರಕ್ಕೆ ಎಸೆದಿರುವುದರಿಂದ ಇವುಗಳೆಲ್ಲಾ ಬಂದಿವೆ. ನಮ್ಮ ದೇವರ ಮುಂದೆ ಹಗಲಿರುಳು ನಮ್ಮ ಸಹೋದರರ ಬಗ್ಗೆ ಅವನು ದೂರು ಹೇಳಿದನು. 11 ನಮ್ಮ ಸಹೋದರರು ಕುರಿಮರಿಯಾದಾತನ ರಕ್ತದಿಂದಲೂ ತಮ್ಮ ವಾಕ್ಯದ ಬಲದಿಂದಲೂ ಅವನನ್ನು ಸೋಲಿಸಿದರು. ಅವರು ತಮ್ಮ ಜೀವಗಳನ್ನು ಪ್ರೀತಿಸಲಿಲ್ಲ. ಅವರು ಮರಣಕ್ಕೆ ಭಯಪಡಲಿಲ್ಲ. 12 ಆದ್ದರಿಂದ ಪರಲೋಕವೇ, ಅದರಲ್ಲಿ ವಾಸಮಾಡುವವರೆಲ್ಲರೇ, ಹರ್ಷಗೊಳ್ಳಿರಿ! ಆದರೆ ಭೂಮಿಯೇ, ಸಮುದ್ರವೇ, ಸೈತಾನನು ನಿಮ್ಮ ಬಳಿಗೆ ಬಂದಿರುವುದರಿಂದ ನಿಮಗೆ ದುರ್ಗತಿಯುಂಟಾಗುವುದು! ಸೈತಾನನು ಕೋಪದಿಂದ ತುಂಬಿಕೊಂಡಿದ್ದಾನೆ. ತನಗಿರುವುದು ಸ್ವಲ್ಪಕಾಲವೆಂಬುದು ಅವನಿಗೆ ತಿಳಿದಿದೆ.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International