Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ವಿಮೋಚನಕಾಂಡ 12:1-4

ಪಸ್ಕ ಹಬ್ಬ

12 ಮೋಶೆ ಆರೋನರು ಇನ್ನೂ ಈಜಿಪ್ಟಿನಲ್ಲಿದ್ದಾಗ ಯೆಹೋವನು ಅವರೊಡನೆ ಮಾತಾಡಿ, “ಈ ತಿಂಗಳು ನಿಮಗೆ ವರ್ಷದ ಮೊದಲನೆ ತಿಂಗಳಾಗಿರುವುದು. ಈ ಆಜ್ಞೆಯು ಇಡೀ ಇಸ್ರೇಲರ ಸಮೂಹಕ್ಕೆ ಅನ್ವಯಿಸುತ್ತದೆ. ಈ ತಿಂಗಳ ಹತ್ತನೆಯ ದಿನದಲ್ಲಿ ಪ್ರತಿಯೊಬ್ಬನು ತನ್ನ ಮನೆಯಲ್ಲಿರುವ ಜನರಿಗಾಗಿ ಒಂದು ಕುರಿಮರಿಯನ್ನು ಅಥವಾ ಒಂದು ಆಡುಮರಿಯನ್ನು ಕೊಯ್ಯಬೇಕು. ಅದನ್ನು ಸಂಪೂರ್ಣವಾಗಿ ತಿನ್ನಲು ಅವನ ಮನೆಯಲ್ಲಿ ಸಾಕಷ್ಟು ಜನರಿಲ್ಲದಿದ್ದರೆ ಅವನು ತನ್ನ ನೆರೆಯವರನ್ನು ಆಮಂತ್ರಿಸಿ ಅವರೊಂದಿಗೆ ಅದರ ಮಾಂಸವನ್ನು ಹಂಚಿಕೊಳ್ಳಬೇಕು. ಪ್ರತಿಯೊಬ್ಬನಿಗೂ ತಿನ್ನಲು ಸಾಕಷ್ಟು ಮಾಂಸವಿರಬೇಕು.

ವಿಮೋಚನಕಾಂಡ 12:5-10

ಅದು ಒಂದು ವರ್ಷದ ಗಂಡು ಕುರಿಯಾಗಿರಬೇಕು ಅಥವಾ ಆಡಾಗಿರಬೇಕು. ಅಲ್ಲದೆ ಕಳಂಕ ರಹಿತವಾಗಿರಬೇಕು. ಈ ತಿಂಗಳ ಹದಿನಾಲ್ಕನೆಯ ದಿನದವರೆಗೆ ನೀವು ಆ ಪಶುವನ್ನು ಸಾಕಬೇಕು. ಅಂದು ಸಂಜೆ ಇಸ್ರೇಲರೆಲ್ಲರೂ ಆ ಪಶುಗಳನ್ನು ಕೊಯ್ಯಬೇಕು. ಈ ಪಶುಗಳ ರಕ್ತವನ್ನು ತೆಗೆದಿಟ್ಟು ಜನರು ಭೋಜನಮಾಡುವ ಮನೆಗಳ ಬಾಗಿಲಿನ ಎರಡು ನಿಲುವು ಕಂಬಗಳಿಗೂ ಮೇಲಿನ ಪಟ್ಟಿಗಳಿಗೂ ಆ ರಕ್ತವನ್ನು ಹಚ್ಚಬೇಕು.

“ಅಂದು ರಾತ್ರಿ ಆ ಪಶುವಿನ ಮಾಂಸವನ್ನು ಸುಟ್ಟು ಸಂಪೂರ್ಣವಾಗಿ ತಿನ್ನಬೇಕು. ಅದರೊಡನೆ ಕಹಿಯಾದ ಪಲ್ಯಗಳನ್ನೂ ಹುಳಿಯಿಲ್ಲದ ರೊಟ್ಟಿಯನ್ನೂ ತಿನ್ನಬೇಕು. ನೀವು ಆ ಪಶುವಿನ ಮಾಂಸವನ್ನು ಹಸಿಯಾಗಲಿ ನೀರಿನಲ್ಲಿ ಬೇಯಿಸಿಯಾಗಲಿ ತಿನ್ನಬಾರದು; ಅದರ ಮಾಂಸವನ್ನು ಬೆಂಕಿಯ ಮೇಲಿಟ್ಟು ಬೇಯಿಸಬೇಕು. ಅದರ ತಲೆ, ಕಾಲುಗಳನ್ನೂ ಒಳಗಿನ ಭಾಗಗಳನ್ನೂ ಬೆಂಕಿಯ ಮೇಲೆ ಬೇಯಿಸಬೇಕು. 10 ಅದರ ಮಾಂಸವನ್ನೆಲ್ಲಾ ಆ ರಾತ್ರಿಯಲ್ಲಿಯೇ ತಿನ್ನಬೇಕು. ಬೆಳಗಾಗುವವರೆಗೆ ಮಾಂಸವೇನಾದರೂ ಉಳಿದರೆ ಅದನ್ನು ಬೆಂಕಿಯಿಂದ ಸುಟ್ಟುಬಿಡಬೇಕು.

ವಿಮೋಚನಕಾಂಡ 12:11-14

11 “ನೀವು ಭೋಜನ ಮಾಡುವಾಗ ಪ್ರಯಾಣ ಮಾಡುತ್ತಿರುವಂತೆ ಬಟ್ಟೆ ಧರಿಸಿಕೊಂಡಿರಬೇಕು; ಕೆರಗಳನ್ನು ಹಾಕಿಕೊಂಡು ನಿಮ್ಮ ಊರುಗೋಲನ್ನು ಕೈಯಲ್ಲಿ ಹಿಡಿದಿರಬೇಕು. ನೀವು ಅವಸವಸರವಾಗಿ ತಿನ್ನಬೇಕು. ಯಾಕೆಂದರೆ ಇದು ಯೆಹೋವನ ಪಸ್ಕಹಬ್ಬ.

12 “ಆ ರಾತ್ರಿ ನಾನು ಈಜಿಪ್ಟಿನ ಮೂಲಕ ಹಾದುಹೋಗಿ ಈಜಿಪ್ಟಿನ ಚೊಚ್ಚಲು ಪಶುಗಳನ್ನೂ ಚೊಚ್ಚಲು ಗಂಡುಮಕ್ಕಳನ್ನೂ ಕೊಲ್ಲುವೆನು; ಈಜಿಪ್ಟಿನ ಎಲ್ಲಾ ದೇವರುಗಳಿಗೆ ತೀರ್ಪು ಮಾಡುವೆನು. ನಾನೇ ಯೆಹೋವನೆಂದು ತೋರಿಸಿಕೊಡುವೆನು. 13 ಆದರೆ ನಿಮ್ಮ ಮನೆಗಳಿಗೆ ಹಚ್ಚಿರುವ ರಕ್ತವು ಒಂದು ವಿಶೇಷ ಸೂಚನೆಯಾಗಿದೆ. ನಾನು ಆ ರಕ್ತವನ್ನು ನೋಡಿದಾಗ ನಿಮ್ಮ ಮನೆಯನ್ನು ದಾಟಿಹೋಗುವೆನು.[a] ಈಜಿಪ್ಟಿನ ಜನರಿಗೆ ಕೇಡುಗಳಾಗುವಂತೆ ಮಾಡುವೆನು. ಆದರೆ ಆ ವ್ಯಾಧಿಗಳು ನಿಮಗೆ ಹಾನಿ ಮಾಡುವುದಿಲ್ಲ.

14 “ಆದ್ದರಿಂದ ನೀವು ಆ ರಾತ್ರಿಯನ್ನು ಯಾವಾಗಲೂ ಜ್ಞಾಪಿಸಿಕೊಳ್ಳುವಿರಿ. ಅದು ನಿಮಗೆ ವಿಶೇಷವಾದ ಹಬ್ಬವಾಗಿರುವುದು. ನಿಮ್ಮ ಸಂತತಿಯವರು ಈ ಹಬ್ಬದಿಂದ ಯೆಹೋವನನ್ನು ಎಂದೆಂದಿಗೂ ಸನ್ಮಾನಿಸುವರು.

ಕೀರ್ತನೆಗಳು 116:1-2

116 ಯೆಹೋವನು ನನ್ನ ಮೊರೆಯನ್ನು ಕೇಳಿದ್ದರಿಂದ
    ನಾನು ಆತನನ್ನು ಪ್ರೀತಿಸುತ್ತೇನೆ.
ನಾನು ಆತನಿಗೆ ಮೊರೆಯಿಡುವಾಗಲೆಲ್ಲಾ
    ಆತನು ನನಗೆ ಕಿವಿಗೊಡುತ್ತಾನೆ.

ಕೀರ್ತನೆಗಳು 116:12-19

12 ಯೆಹೋವನ ಮಹೋಪಕಾರಗಳಿಗೆ ಬದಲೇನು ಕೊಡಲಿ?
    ನನ್ನಲ್ಲಿರುವುದೆಲ್ಲ ಯೆಹೋವನದೇ.
13 ನನ್ನನ್ನು ರಕ್ಷಿಸಿದ್ದರಿಂದ ಆತನಿಗೆ ಪಾನದ್ರವ್ಯವನ್ನು ಅರ್ಪಿಸುವೆನು.
    ಆತನ ಹೆಸರಿನಲ್ಲಿ ಪ್ರಾರ್ಥಿಸುವೆನು.
14 ನಾನು ಯೆಹೋವನಿಗೆ ಮಾಡಿದ ಹರಕೆಗಳನ್ನು
    ಜನರ ಮುಂದೆ ಆತನಿಗೆ ಸಲ್ಲಿಸುವೆನು.

15 ಯೆಹೋವನು ತನ್ನ ಭಕ್ತರ ಮರಣವನ್ನು
    ಅಲ್ಪವೆಂದು ಎಣಿಸುವುದಿಲ್ಲ.
16 ಯೆಹೋವನೇ, ನಾನು ನಿನ್ನ ಸೇವಕ.
    ನಿನ್ನ ದಾಸಿಯರಲ್ಲೊಬ್ಬಳ ಮಗ.
    ನೀನೇ ನನ್ನ ಪ್ರಥಮ ಉಪಾಧ್ಯಾಯ!
17 ನಾನು ನಿನಗೆ ಕೃತಜ್ಞತಾ ಕಾಣಿಕೆಯನ್ನು ಅರ್ಪಿಸುವೆನು.
    ಆತನ ಹೆಸರಿನಲ್ಲಿ ಪ್ರಾರ್ಥಿಸುವೆನು.
18 ನನ್ನ ಹರಕೆಗಳನ್ನು
    ಯೆಹೋವನಿಗೆ ಜನರ ಮುಂದೆ ಸಲ್ಲಿಸುವೆನು.
19 ಜೆರುಸಲೇಮಿನ ದೇವಾಲಯದ ಅಂಗಳಗಳಲ್ಲಿ
    ಈ ಯಜ್ಞಗಳನ್ನು ಅರ್ಪಿಸುವೆನು.

ಯೆಹೋವನಿಗೆ ಸ್ತೋತ್ರವಾಗಲಿ!

1 ಕೊರಿಂಥದವರಿಗೆ 11:23-26

23 ನಾನು ಪ್ರಭುವಿನಿಂದ ಹೊಂದಿಕೊಂಡದ್ದನ್ನೇ ನಿಮಗೆ ಉಪದೇಶಿಸಿದೆನು. ಅದೇನೆಂದರೆ: ಯೇಸುವನ್ನು ಕೊಲ್ಲುವುದಕ್ಕಾಗಿ ಒಪ್ಪಿಸಿಕೊಟ್ಟ ರಾತ್ರಿಯಲ್ಲಿ, ಆತನು ರೊಟ್ಟಿಯನ್ನು ತೆಗೆದುಕೊಂಡು, 24 ಅದಕ್ಕಾಗಿ ಸ್ತೋತ್ರ ಸಲ್ಲಿಸಿ, ಅದನ್ನು ಮುರಿದು, “ಇದು ನನ್ನ ದೇಹ; ಇದನ್ನು ನಿಮಗೋಸ್ಕರ ಕೊಡಲಾಗಿದೆ. ನನ್ನನ್ನು ನೆನಸಿಕೊಳ್ಳುವುದಕ್ಕಾಗಿ ಹೀಗೆ ಮಾಡಿರಿ” ಎಂದು ಹೇಳಿದನು. 25 ಅದೇ ರೀತಿಯಲ್ಲಿ ಅವರು ಊಟಮಾಡಿದ ಮೇಲೆ ಯೇಸು ದ್ರಾಕ್ಷಾರಸದ ಪಾತ್ರೆಯನ್ನು ತೆಗೆದುಕೊಂಡು, “ದೇವರು ತನ್ನ ಜನರೊಂದಿಗೆ ಮಾಡಿಕೊಂಡ ಹೊಸ ಒಡಂಬಡಿಕೆಯನ್ನು ಈ ದ್ರಾಕ್ಷಾರಸ ಸೂಚಿಸುತ್ತದೆ. ಈ ಹೊಸ ಒಡಂಬಡಿಕೆ ನನ್ನ ರಕ್ತದಿಂದ ಆರಂಭವಾಗುತ್ತದೆ. ನೀವು ಇದನ್ನು ಕುಡಿಯುವಾಗಲೆಲ್ಲಾ ನನ್ನನ್ನು ನೆನಸಿಕೊಳ್ಳವವರಾಗಿದ್ದೀರಿ” ಎಂದು ಹೇಳಿದನು. 26 ನೀವು ಈ ರೊಟ್ಟಿಯನ್ನು ತಿಂದು ಈ ಪಾತ್ರೆಯಲ್ಲಿ ಕುಡಿಯುವಾಗಲೆಲ್ಲಾ ಪ್ರಭುವಿನ ಮರಣವನ್ನು ಆತನು ಬರುವ ತನಕ ಪ್ರಚುರಪಡಿಸುತ್ತೀರಿ.

ಯೋಹಾನ 13:1-17

ಯೇಸು ತನ್ನ ಶಿಷ್ಯರ ಪಾದಗಳನ್ನು ತೊಳೆಯುವನು

13 ಯೆಹೂದ್ಯರ ಪಸ್ಕಹಬ್ಬವು ಬಹು ಸಮೀಪವಾಗಿತ್ತು. ತಾನು ಈ ಲೋಕವನ್ನು ಬಿಟ್ಟು ತಂದೆಯ ಬಳಿಗೆ ಹೋಗುವ ಸಮಯ ಬಂದಿರುವುದಾಗಿ ಯೇಸುವಿಗೆ ತಿಳಿದಿತ್ತು. ಈ ಲೋಕದಲ್ಲಿದ್ದ ತನ್ನವರನ್ನು ಆತನು ಯಾವಾಗಲೂ ಪ್ರೀತಿಸುತ್ತಿದ್ದನು. ಈಗಲಾದರೋ ಅವರ ಮೇಲೆ ತನಗಿರುವ ಅಪಾರ ಪ್ರೀತಿಯನ್ನು ತೋರಿಸುವ ಕಾಲ ಆತನಿಗೆ ಬಂದಿತ್ತು.

ಯೇಸು ಮತ್ತು ಆತನ ಶಿಷ್ಯರು ರಾತ್ರಿಯ ಊಟಕ್ಕಾಗಿ ಕುಳಿತುಕೊಂಡಿದ್ದರು. ಯೇಸುವಿಗೆ ದ್ರೋಹ ಮಾಡುವಂತೆ ಸೈತಾನನು ಇಸ್ಕರಿಯೋತ ಯೂದನನ್ನು ಈಗಾಗಲೇ ಪ್ರೇರೇಪಿಸಿದ್ದನು. (ಯೂದನು ಸಿಮೋನನ ಮಗ.) ತಂದೆಯು ಪ್ರತಿಯೊಂದರ ಮೇಲೆ ತನಗೆ ಅಧಿಕಾರವನ್ನು ಕೊಟ್ಟಿದ್ದಾನೆಂಬುದು ಯೇಸುವಿಗೆ ತಿಳಿದಿತ್ತು. ಅಲ್ಲದೆ ತಾನು ದೇವರ ಬಳಿಯಿಂದ ಬಂದಿರುವುದಾಗಿಯೂ ಮತ್ತು ಈಗ ದೇವರ ಬಳಿಗೆ ಮರಳಿಹೋಗುತ್ತಿರುವುದಾಗಿಯೂ ಆತನಿಗೆ ಗೊತ್ತಿತ್ತು. ಅವರು ಊಟಮಾಡುತ್ತಿದ್ದಾಗ ಯೇಸು ಎದ್ದು ತನ್ನ ಮೇಲಂಗಿಯನ್ನು ತೆಗೆದಿಟ್ಟನು; ಅಂಗವಸ್ತ್ರವನ್ನು ಸೊಂಟಕ್ಕೆ ಕಟ್ಟಿಕೊಂಡನು. ಅನಂತರ ಒಂದು ಬೋಗುಣಿಗೆ ನೀರು ಸುರಿದುಕೊಂಡು ಶಿಷ್ಯರ ಕಾಲುಗಳನ್ನು ತೊಳೆದು ತಾನು ಕಟ್ಟಿಕೊಂಡಿದ್ದ ಅಂಗವಸ್ತ್ರದಿಂದ ಅವರ ಪಾದಗಳನ್ನು ಒರಸಿದನು.

ಯೇಸು ಸೀಮೋನ್ ಪೇತ್ರನ ಬಳಿಗೆ ಬಂದಾಗ ಪೇತ್ರನು, “ಪ್ರಭುವೇ, ನನ್ನ ಪಾದಗಳನ್ನು ನೀನು ತೊಳೆಯಕೂಡದು” ಎಂದನು.

ಯೇಸು, “ಈಗ ನಾನು ಏನು ಮಾಡುತ್ತಿರುವೆನೆಂದು ನಿನಗೆ ಗೊತ್ತಿಲ್ಲ. ಆದರೆ ಮುಂದೆ ನೀನು ಅರ್ಥಮಾಡಿಕೊಳ್ಳುವೆ” ಎಂದು ಉತ್ತರಕೊಟ್ಟನು.

ಪೇತ್ರನು, “ಇಲ್ಲ! ನನ್ನ ಪಾದಗಳನ್ನು ನೀನು ಎಂದಿಗೂ ತೊಳೆಯಕೂಡದು” ಎಂದು ಪ್ರತಿಭಟಿಸಿದನು.

ಯೇಸು, “ನಿನ್ನ ಪಾದಗಳನ್ನು ನಾನು ತೊಳೆಯದಿದ್ದರೆ, ನನ್ನಲ್ಲಿ ನಿನಗೆ ಪಾಲು ಇಲ್ಲ” ಎಂದು ಹೇಳಿದನು.

ಆಗ ಸೀಮೋನ್ ಪೇತ್ರನು, “ಪ್ರಭುವೇ, ನನ್ನ ಪಾದಗಳನ್ನು ಮಾತ್ರವಲ್ಲದೆ ನನ್ನ ಕೈಗಳನ್ನು ಮತ್ತು ತಲೆಯನ್ನೂ ತೊಳೆ!” ಎಂದು ಕೇಳಿಕೊಂಡನು.

10 ಯೇಸು, “ಸ್ನಾನಮಾಡಿಕೊಂಡವನ ದೇಹವೆಲ್ಲಾ ಶುದ್ಧವಾಗಿರುತ್ತದೆ. ಅವನು ತನ್ನ ಪಾದಗಳನ್ನು ತೊಳೆದುಕೊಂಡರೆ ಸಾಕು. ನೀವು ಸಹ ಶುದ್ಧರಾಗಿದ್ದೀರಿ, ಆದರೆ ನಿಮ್ಮಲ್ಲಿ ಪ್ರತಿಯೊಬ್ಬನೂ ಶುದ್ಧನಲ್ಲ” ಎಂದು ಹೇಳಿದನು. 11 ತನಗೆ ದ್ರೋಹ ಮಾಡುವ ವ್ಯಕ್ತಿ ಯಾರೆಂದು ಯೇಸುವಿಗೆ ತಿಳಿದಿತ್ತು. ಆದಕಾರಣ ಆತನು, “ನಿಮ್ಮಲ್ಲಿ ಪ್ರತಿಯೊಬ್ಬನೂ ಶುದ್ಧನಲ್ಲ” ಎಂದು ಹೇಳಿದನು.

12 ಯೇಸು ಅವರ ಪಾದಗಳನ್ನು ತೊಳೆದ ಮೇಲೆ ತನ್ನ ಮೇಲಂಗಿಯನ್ನು ಧರಿಸಿಕೊಂಡು ಮತ್ತೆ ಕುಳಿತುಕೊಂಡು ಹೀಗೆಂದನು: “ನಾನು ನಿಮಗೆ ಮಾಡಿದ್ದು ಏನೆಂದು ಅರ್ಥವಾಯಿತೇ? 13 ನೀವು ನನ್ನನ್ನು, ‘ಗುರುವೇ, ಪ್ರಭುವೇ’ ಎಂದು ಕರೆಯುತ್ತೀರಿ. ನೀವು ಹಾಗೆ ಕರೆಯುವುದು ಸರಿ. ಏಕೆಂದರೆ ನಾನು ಗುರುವೂ ಹೌದು, ಪ್ರಭುವೂ ಹೌದು. 14 ನಿಮ್ಮ ಪ್ರಭುವೂ ಗುರುವೂ ಆಗಿರುವ ನಾನು ನಿಮ್ಮ ಪಾದಗಳನ್ನು ಸೇವಕನಂತೆ ತೊಳೆದೆನು. ಆದ್ದರಿಂದ ನೀವು ಸಹ ಒಬ್ಬರ ಪಾದಗಳನ್ನು ಇನ್ನೊಬ್ಬರು ತೊಳೆಯಬೇಕು. 15 ಈ ಕಾರ್ಯಕ್ಕೆ ನಾನೇ ನಿಮಗೆ ಮಾದರಿಯಾಗಿದ್ದೇನೆ. ನಾನು ನಿಮಗೆ ಮಾಡಿದಂತೆ ನೀವೂ ಒಬ್ಬರಿಗೊಬ್ಬರು ಮಾಡಬೇಕು. 16 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಸೇವಕನು ಒಡೆಯನಿಗಿಂತ ದೊಡ್ಡವನಲ್ಲ. ಆದ್ದರಿಂದ ಕೆಲಸಕ್ಕಾಗಿ ಕಳುಹಿಸಲ್ಪಟ್ಟವನು ಕಳುಹಿಸಿದವನಿಗಿಂತ ದೊಡ್ಡವನಲ್ಲ. 17 ನೀವು ಈ ಸಂಗತಿಗಳನ್ನು ತಿಳಿದುಕೊಂಡು ಇವುಗಳನ್ನು ಕೈಕೊಂಡು ನಡೆದರೆ ಸಂತೋಷದಿಂದಿರುವಿರಿ.

ಯೋಹಾನ 13:31-35

ತನ್ನ ಮರಣದ ಬಗ್ಗೆ ಯೇಸುವಿನ ಪ್ರಕಟನೆ

31 ಯೂದನು ಹೊರಟುಹೋದ ಮೇಲೆ ಯೇಸು, “ಈಗ ಮನುಷ್ಯಕುಮಾರನಿಗೆ ಮಹಿಮೆಯಾಗುವುದು. ಅಲ್ಲದೆ, ಮನುಷ್ಯಕುಮಾರನ ಮೂಲಕ ದೇವರಿಗೂ ಮಹಿಮೆಯಾಗುವುದು. 32 ಆತನ ಮೂಲಕವಾಗಿ ದೇವರಿಗೆ ಮಹಿಮೆಯಾಗುವುದರಿಂದ ತಕ್ಷಣವೇ ದೇವರ ಮೂಲಕವಾಗಿಯೂ ಆತನಿಗೆ ಮಹಿಮೆಯಾಗುವುದು” ಎಂದನು.

33 ಯೇಸು, “ನನ್ನ ಮಕ್ಕಳೇ, ಇನ್ನು ಸ್ವಲ್ಪ ಸಮಯ ಮಾತ್ರ ನಾನು ನಿಮ್ಮೊಂದಿಗೆ ಇರುತ್ತೇನೆ. ನೀವು ನನಗಾಗಿ ಹುಡುಕುವಿರಿ. ನಾನು ಯೆಹೂದ್ಯರಿಗೆ ಹೇಳಿದ್ದನ್ನು ನಿಮಗೂ ಹೇಳುತ್ತೇನೆ. ನಾನು ಹೋಗುವಲ್ಲಿಗೆ ನೀವು ಬರಲಾರಿರಿ.

34 “ನಾನು ನಿಮಗೆ ಹೊಸ ಆಜ್ಞೆಯನ್ನು ಕೊಡುತ್ತೇನೆ. ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು. 35 ನಾನು ನಿಮ್ಮನ್ನು ಪ್ರೀತಿಸಿದಂತೆಯೇ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು. ನೀವು ಒಬ್ಬರನ್ನೊಬ್ಬರು ಪ್ರೀತಿಸಿದರೆ, ನೀವೂ ನನ್ನ ಶಿಷ್ಯರೆಂಬುದನ್ನು ಎಲ್ಲಾ ಜನರು ತಿಳಿದುಕೊಳ್ಳುವರು” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International