Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಯೆಶಾಯ 49:1-7

ದೇವರು ತನ್ನ ವಿಶೇಷ ಸೇವಕನನ್ನು ಕರೆಯುತ್ತಾನೆ

49 ದೂರದೇಶದಲ್ಲಿರುವ ಜನರೇ, ನನ್ನ ಮಾತುಗಳಿಗೆ ಕಿವಿಗೊಡಿರಿ;
    ಭೂಮಿಯ ಮೇಲೆ ವಾಸಿಸುವ ಜನರೇ, ನನ್ನ ಮಾತುಗಳನ್ನು ಕೇಳಿರಿ.
ನಾನು ಹುಟ್ಟುವ ಮೊದಲೇ ಯೆಹೋವನು ನನ್ನನ್ನು ತನ್ನ ಸೇವೆಗಾಗಿ ಕರೆದನು.
    ನಾನು ತಾಯಿಯ ಗರ್ಭದಲ್ಲಿರುವಾಗಲೇ ಯೆಹೋವನು ನನ್ನ ಹೆಸರೆತ್ತಿ ಕರೆದನು.
ತನ್ನ ಪರವಾಗಿ ಮಾತನಾಡಲು ಯೆಹೋವನು ನನ್ನನ್ನು ಉಪಯೋಗಿಸುತ್ತಾನೆ.
ಹದವಾದ ಕತ್ತಿಯಂತೆ ನನ್ನನ್ನು ಉಪಯೋಗಿಸುತ್ತಾನೆ.
    ಅದೇ ಸಮಯದಲ್ಲಿ ನನ್ನನ್ನು ತನ್ನ ಕೈಯೊಳಗೆ ಸುರಕ್ಷಿತವಾಗಿ ಇರಿಸುತ್ತಾನೆ.
ಯೆಹೋವನು ನನ್ನನ್ನು ಬಾಣದಂತೆ ಉಪಯೋಗಿಸುತ್ತಾನೆ,
    ಅದೇ ಸಮಯದಲ್ಲಿ ಬತ್ತಳಿಕೆಯಲ್ಲಿ ನನ್ನನ್ನು ಅಡಗಿಸಿಡುತ್ತಾನೆ.

ಯೆಹೋವನು ಹೀಗೆಂದನು: “ಇಸ್ರೇಲೇ, ನೀನೇ ನನ್ನ ಸೇವಕನು.
    ನಾನು ನಿನಗೆ ಆಶ್ಚರ್ಯವಾದ ಕಾರ್ಯಗಳನ್ನು ಮಾಡುವೆನು.”

ಆಗ ನಾನು “ನಾನು ಕಷ್ಟಪಟ್ಟು ಮಾಡಿದ ಕಾರ್ಯಗಳೆಲ್ಲವೂ ನಿಷ್ಪ್ರಯೋಜನವಾದವು.
    ನಾನು ನನ್ನನ್ನೇ ಸವೆಯಿಸಿದೆನು.
    ಆದರೆ ಪ್ರಯೋಜನವಾದದ್ದನ್ನು ನಾನು ಮಾಡಲಿಲ್ಲ.
ನಾನು ನನ್ನ ಶಕ್ತಿಯನ್ನೆಲ್ಲಾ ಉಪಯೋಗಿಸಿದರೂ ಏನೂ ಮಾಡಲಾಗಲಿಲ್ಲ.
ಆದ್ದರಿಂದ ನನಗೆ ಮಾಡಬೇಕಾದುದನ್ನು ಯೆಹೋವನೇ ತೀರ್ಮಾನಿಸಲಿ.
    ನನಗೆ ದೊರಕಬೇಕಾದ ಬಹುಮಾನವನ್ನು ದೇವರೇ ತೀರ್ಮಾನಿಸಲಿ” ಎಂದು ಹೇಳಿದೆನು.
ನಾನು ಯೆಹೋವನ ಸೇವಕನಾಗಿರಬೇಕೆಂದು
    ಆತನು ನನ್ನನ್ನು ನನ್ನ ತಾಯಿಯ ಗರ್ಭದಲ್ಲಿಯೇ ರೂಪಿಸಿದನು.
ಇಸ್ರೇಲರನ್ನೂ ಯಾಕೋಬನನ್ನೂ ಆತನ ಬಳಿಗೆ ಮತ್ತೆ ಕರೆದುಕೊಂಡು ಬರಲು
    ಆತನು ನನ್ನನ್ನು ರೂಪಿಸಿದನು.
ಯೆಹೋವನು ನನ್ನನ್ನು ಸನ್ಮಾನಿಸುವನು.
    ನಾನು ಆತನಿಂದ ಬಲವನ್ನು ಹೊಂದುವೆನು.

ಯೆಹೋವನು ನನಗೆ ಹೇಳಿದ್ದೇನೆಂದರೆ:
    “ನನ್ನ ಸೇವಕನಾದ ಯಾಕೋಬನ ಕುಲಗಳನ್ನು ಮೇಲೆತ್ತಿ
    ಇಸ್ರೇಲಿನ ಅಳಿದುಳಿದವರನ್ನು ಪುನಃಸ್ಥಾಪಿಸುವೆ.
ಆದರೆ ನಿನಗೆ ಇನ್ನೊಂದು ಕೆಲಸವಿದೆ. ಅದು ಇದಕ್ಕಿಂತಲೂ ಮಹತ್ತಾದದ್ದು.
    ನಾನು ನಿನ್ನನ್ನು ಎಲ್ಲಾ ಜನಾಂಗಗಳಿಗೆ ಬೆಳಕನ್ನಾಗಿ ಮಾಡುವೆನು.
    ಲೋಕದ ಎಲ್ಲಾ ಜನರನ್ನು ರಕ್ಷಿಸಲು ನೀನು ನನ್ನ ಮಾರ್ಗವಾಗುವೆ.”

ಇಸ್ರೇಲಿನ ಪರಿಶುದ್ಧನೂ ವಿಮೋಚಕನೂ ಆದ ಯೆಹೋವನು ಇಸ್ರೇಲನ್ನು ಬಿಡಿಸುವನು.
    ಆತನು ಹೇಳುವುದೇನೆಂದರೆ, “ನನ್ನ ಸೇವಕನು ದೀನನಾಗಿದ್ದಾನೆ. ಆತನು ಅರಸರನ್ನು ಸೇವಿಸುವನು.
    ಆದರೆ ಜನರು ಆತನನ್ನು ದ್ವೇಷಿಸುವರು.
ಆದರೆ ರಾಜರುಗಳು ಅವನನ್ನು ನೋಡಿ ಎದ್ದುನಿಂತು ಗೌರವಿಸುವರು.
    ಶ್ರೇಷ್ಠ ನಾಯಕರು ಆತನ ಮುಂದೆ ಅಡ್ಡಬೀಳುವರು.”

ಇದು ಇಸ್ರೇಲರ ಪರಿಶುದ್ಧನಾದ ಯೆಹೋವನ ಚಿತ್ತಕ್ಕನುಸಾರವಾಗಿದೆ. ಆತನು ಭರವಸೆಗೆ ಯೋಗ್ಯನಾಗಿದ್ದಾನೆ. ಆತನೇ ನಿನ್ನನ್ನು ಆರಿಸಿಕೊಂಡನು.

ಕೀರ್ತನೆಗಳು 71:1-14

71 ಯೆಹೋವನೇ, ನಿನ್ನನ್ನೇ ಆಶ್ರಯಿಸಿಕೊಂಡಿದ್ದೇನೆ;
    ಎಂದಿಗೂ ಆಶಾಭಂಗಪಡಿಸಬೇಡ.
ನೀನು ನೀತಿವಂತನಾಗಿರುವುದರಿಂದ ನನ್ನನ್ನು ರಕ್ಷಿಸುವೆ; ಬಿಡುಗಡೆಮಾಡುವೆ.
    ನನಗೆ ಕಿವಿಗೊಟ್ಟು ನನ್ನನ್ನು ರಕ್ಷಿಸು.
ನೀನೇ ನನ್ನ ಸಂರಕ್ಷಣೆಯ ಆಶ್ರಯಗಿರಿಯಾಗಿರು.
    ನನ್ನನ್ನು ರಕ್ಷಿಸಲು ಆಜ್ಞಾಪಿಸು.
ನೀನೇ ನನ್ನ ಬಂಡೆಯೂ ಕೋಟೆಯೂ ಆಗಿರುವೆ.
ನನ್ನ ದೇವರೇ, ದುಷ್ಟರಿಂದಲೂ
    ಕ್ರೂರವಾದ ಕೆಟ್ಟವರಿಂದಲೂ ನನ್ನನ್ನು ರಕ್ಷಿಸು.
ನನ್ನ ಒಡೆಯನೇ, ನನ್ನ ಬಾಲ್ಯದಿಂದಲೂ
    ನೀನೇ ನನ್ನ ನಿರೀಕ್ಷೆಯೂ ಭರವಸವೂ ಆಗಿರುವೆ.
ನಾನು ಹುಟ್ಟಿದಂದಿನಿಂದಲೂ ನಿನ್ನನ್ನೇ ಆಶ್ರಯಿಸಿಕೊಂಡಿದ್ದೇನೆ.
    ನಾನು ಜನಿಸಿದಂದಿನಿಂದಲೂ ನೀನೇ ನನಗೆ ಆಧಾರವಾಗಿರುವೆ.
    ನಾನು ನಿನ್ನನ್ನು ಕೊಂಡಾಡುತ್ತಲೇ ಇರುವೆನು.
ನಾನು ಅನೇಕರಿಗೆ ಮಾದರಿಯಾಗಿದ್ದೇನೆ.
    ಯಾಕೆಂದರೆ ನೀನೇ ನನ್ನ ಶಕ್ತಿಗೆ ಆಧಾರ.
ದಿನವೆಲ್ಲಾ ನಿನ್ನ ಅದ್ಭುತಕಾರ್ಯಗಳ ಬಗ್ಗೆ ನಿನ್ನನ್ನು ಸ್ತುತಿಸಿ ಕೊಂಡಾಡುವೆನು.
ವೃದ್ಧಾಪ್ಯದಲ್ಲಿ ನನ್ನನ್ನು ತಳ್ಳಿಬಿಡಬೇಡ.
    ಬಲವು ಕುಂದಿ ಹೋಗುತ್ತಿರುವಾಗ ಕೈಬಿಡಬೇಡ.
10 ನನ್ನ ಶತ್ರುಗಳು ಒಟ್ಟುಗೂಡಿ
    ನನ್ನನ್ನು ಕೊಲ್ಲಲು ಆಲೋಚಿಸಿಕೊಂಡಿದ್ದಾರೆ.
11 “ದೇವರು ಅವನನ್ನು ಕೈಬಿಟ್ಟಿದ್ದಾನೆ; ಬೆನ್ನಟ್ಟಿ ಅವನನ್ನು ಹಿಡಿಯಿರಿ;
    ಅವನಿಗೆ ಸಹಾಯಕರೇ ಇಲ್ಲ” ಎಂದು ಅವರು ಹೇಳಿಕೊಳ್ಳುತ್ತಿದ್ದಾರೆ.
12 ದೇವರೇ, ನನಗೆ ದೂರವಾಗಿರಬೇಡ.
    ನನ್ನ ದೇವರೇ, ಬೇಗನೇ ನನ್ನನ್ನು ರಕ್ಷಿಸು!
13 ನನ್ನ ಶತ್ರುಗಳನ್ನು ಸೋಲಿಸಿ
    ಅವರನ್ನು ಸಂಪೂರ್ಣವಾಗಿ ನಾಶಮಾಡು!
ನನಗೆ ಕೇಡುಮಾಡಬೇಕೆಂದಿರುವ ಅವರಿಗೆ
    ನಾಚಿಕೆಯೂ ಅವಮಾನವೂ ಆವರಿಸಿಕೊಳ್ಳಲಿ.
14 ನಾನಂತೂ ನಿನ್ನಲ್ಲೇ ಭರವಸವಿಟ್ಟಿರುವೆ.
    ನಿನ್ನನ್ನು ಹೆಚ್ಚೆಚ್ಚಾಗಿ ಕೊಂಡಾಡುತ್ತಿರುವೆ.

1 ಕೊರಿಂಥದವರಿಗೆ 1:18-31

ದೇವರ ಶಕ್ತಿ ಮತ್ತು ಕ್ರಿಸ್ತನ ಜ್ಞಾನ

18 ನಾಶನ ಮಾರ್ಗದಲ್ಲಿರುವ ಜನರಿಗೆ ಶಿಲುಬೆಯ ಉಪದೇಶವು ಮೂರ್ಖತನವಾಗಿದೆ. ಆದರೆ ರಕ್ಷಣೆಯ ಮಾರ್ಗದಲ್ಲಿರುವ ನಮಗಾದರೋ ಅದು ದೇವರ ಶಕ್ತಿಯಾಗಿದೆ. 19 ಪವಿತ್ರ ಗ್ರಂಥದಲ್ಲಿ ಹೀಗೆ ಬರೆಯಲ್ಪಟ್ಟಿದೆ:

“ಜ್ಞಾನಿಗಳ ಜ್ಞಾನವನ್ನು ನಾಶಮಾಡುವೆನು.
ಬುದ್ಧಿವಂತರ ಬುದ್ಧಿಯನ್ನು ಬೆಲೆಬಾಳದಂತೆ ಮಾಡುವೆನು.”(A)

20 ಜ್ಞಾನಿಯು ಎಲ್ಲಿದ್ದಾನೆ? ವಿದ್ಯಾವಂತನು ಎಲ್ಲಿದ್ದಾನೆ? ಈ ಕಾಲದ ತತ್ವಜ್ಞಾನಿಯು ಎಲ್ಲಿದ್ದಾನೆ? ದೇವರು ಲೋಕದ ಜ್ಞಾನವನ್ನು ಮೂರ್ಖತನವನ್ನಾಗಿ ಮಾಡಿದ್ದಾನೆ. 21 ಇದು ದೇವರ ಜ್ಞಾನದ ಸಂಕಲ್ಪವಾಗಿತ್ತು. ಲೋಕವು ತನ್ನ ಸ್ವಂತ ಜ್ಞಾನದ ಮೂಲಕವಾಗಿ ದೇವರನ್ನು ತಿಳಿದುಕೊಂಡಿರಲಿಲ್ಲ. ಆದ್ದರಿಂದ ಮೂರ್ಖತನದಂತೆ ತೋರುವ ಸಂದೇಶದ ಮೂಲಕ ನಂಬುವವರನ್ನು ರಕ್ಷಿಸುವುದು ದೇವರಿಗೆ ಒಳ್ಳೆಯದೆನಿಸಿತು.

22 ಯೆಹೂದ್ಯರು ಸೂಚಕಕಾರ್ಯಗಳನ್ನು ಕೇಳುತ್ತಾರೆ. ಗ್ರೀಕರಿಗೆ ಜ್ಞಾನವು ಬೇಕಾಗಿದೆ. 23 ನಾವಾದರೋ, ಶಿಲುಬೆಗೇರಿಸಲ್ಪಟ್ಟ ಕ್ರಿಸ್ತನ ಕುರಿತಾಗಿ ಬೋಧಿಸುತ್ತೇವೆ. ಇದು ಯೆಹೂದ್ಯರಿಗೆ ದೊಡ್ಡ ಸಮಸ್ಯೆಯಾಗಿದೆ; ಯೆಹೂದ್ಯರಲ್ಲದ ಜನರಿಗೆ ಮೂರ್ಖತನದಂತೆ ತೋರುತ್ತದೆ. 24 ದೇವರಿಂದ ಕರೆಯಲ್ಪಟ್ಟಿರುವ ಜನರು ಯೆಹೂದ್ಯರಾಗಿದ್ದರೂ ಯೆಹೂದ್ಯರಲ್ಲದವರಾಗಿದ್ದರೂ ಅವರಿಗೆ ಕ್ರಿಸ್ತನು ದೇವರ ಶಕ್ತಿಯಾಗಿದ್ದಾನೆ; ಮತ್ತು ದೇವರ ಜ್ಞಾನವಾಗಿದ್ದಾನೆ. 25 ದೇವರ ಮೂಢತನವು ಸಹ ಮನುಷ್ಯರ ಜ್ಞಾನಕ್ಕಿಂತಲೂ ಶ್ರೇಷ್ಠವಾಗಿದೆ. ದೇವರ ಬಲಹೀನತೆಯು ಸಹ ಮನುಷ್ಯರ ಬಲಕ್ಕಿಂತಲೂ ಹೆಚ್ಚು ಶಕ್ತಿಯುತವಾಗಿದೆ.

26 ಸಹೋದರ ಸಹೋದರಿಯರೇ, ದೇವರು ನಿಮ್ಮನ್ನು ಕರೆದಾಗ ನೀವು ಹೇಗಿದ್ದಿರಿ ಎಂದು ಜ್ಞಾಪಿಸಿಕೊಳ್ಳಿರಿ. ಲೋಕದ ಎಣಿಕೆಯಲ್ಲಿ ನಿಮ್ಮಲ್ಲಿ ಅನೇಕರು ಜ್ಞಾನಿಗಳಾಗಿರಲಿಲ್ಲ; ಅಧಿಕಾರಿಗಳಾಗಿರಲಿಲ್ಲ; ಪ್ರಾಮುಖ್ಯವಾದ ಕುಟುಂಬಗಳಿಗೆ ಸೇರಿದವರಾಗಿರಲಿಲ್ಲ. 27 ಆದರೆ ದೇವರು ಈ ಲೋಕದ ಜ್ಞಾನಿಗಳನ್ನು ನಾಚಿಕೆಪಡಿಸುವುದಕ್ಕಾಗಿ ಮೂಢರನ್ನು ಆರಿಸಿಕೊಂಡಿದ್ದಾನೆ; ಬಲಿಷ್ಠರನ್ನು ನಾಚಿಕೆಪಡಿಸುವುದಕ್ಕಾಗಿ ಬಲಹೀನರನ್ನು ಆರಿಸಿಕೊಂಡಿದ್ದಾನೆ. 28 ಲೋಕವು ಯಾವುದನ್ನು ಮುಖ್ಯವಲ್ಲವೆಂದು ಯೋಚಿಸುತ್ತದೆಯೋ ಯಾವುದನ್ನು ದ್ವೇಷಿಸುತ್ತದೆಯೋ ಮತ್ತು ನಿಷ್ಪ್ರಯೋಜಕವೆಂದು ಪರಿಗಣಿಸುತ್ತದೆಯೋ ಅದನ್ನು ದೇವರು ಆರಿಸಿಕೊಂಡನು. ಲೋಕವು ಯಾವುದನ್ನು ಮುಖ್ಯವೆಂದು ಯೋಚಿಸುತ್ತದೊ ಅದನ್ನು ನಾಶಪಡಿಸಲು ದೇವರು ಹೀಗೆ ಮಾಡಿದನು. 29 ಹೀಗಿರಲು ದೇವರ ಮುಂದೆ ಹೆಮ್ಮೆಪಡಲು ಯಾರಿಗೂ ಆಸ್ಪದವಿಲ್ಲ. 30 ನಿಮ್ಮನ್ನು ಕ್ರಿಸ್ತ ಯೇಸುವಿನಲ್ಲಿ ಒಂದು ಭಾಗವನ್ನಾಗಿ ಮಾಡಿದಾತನು ದೇವರೇ. ಕ್ರಿಸ್ತನು ನಮಗಾಗಿ ದೇವರಿಂದ ಬಂದ ಜ್ಞಾನವಾಗಿದ್ದಾನೆ. ನಾವು ನೀತಿವಂತರಾಗಿರುವುದಕ್ಕೆ, ಪಾಪದಿಂದ ಬಿಡುಗಡೆಯಾಗಿರುವುದಕ್ಕೆ ಮತ್ತು ಪವಿತ್ರರಾಗಿರುವುದಕ್ಕೆ ಕ್ರಿಸ್ತನೇ ಕಾರಣನಾಗಿದ್ದಾನೆ. 31 ಆದ್ದರಿಂದ ಪವಿತ್ರ ಗ್ರಂಥವು ಹೇಳುವಂತೆ, “ಹೆಮ್ಮೆಪಡುವವನು ಪ್ರಭುವಿನಲ್ಲಿ ಮಾತ್ರ ಹೆಮ್ಮೆಪಡಬೇಕು.”

ಯೋಹಾನ 12:20-36

ಜೀವ, ಮರಣಗಳ ಬಗ್ಗೆ ಯೇಸುವಿನ ಉಪದೇಶ

20 ಅಲ್ಲಿ ಗ್ರೀಕ್ ಜನರು ಸಹ ಇದ್ದರು. ಪಸ್ಕಹಬ್ಬದಲ್ಲಿ ಆರಾಧಿಸುವುದಕ್ಕಾಗಿ ಜೆರುಸಲೇಮಿಗೆ ಹೋಗಿದ್ದವರಲ್ಲಿ ಇವರೂ ಸೇರಿದ್ದರು. 21 ಈ ಗ್ರೀಕ್ ಜನರು ಫಿಲಿಪ್ಪನ ಬಳಿಗೆ ಹೋದರು. (ಫಿಲಿಪ್ಪನು ಗಲಿಲಾಯದ ಬೆತ್ಸಾಯಿ ಎಂಬ ಊರಿನವನಾಗಿದ್ದವನು.) ಅವರು, “ಸ್ವಾಮೀ, ನಾವು ಯೇಸುವನ್ನು ನೋಡಬೇಕು” ಎಂದು ಅವನನ್ನು ಕೇಳಿಕೊಂಡರು. 22 ಫಿಲಿಪ್ಪನು ಅಂದ್ರೆಯನ ಬಳಿಗೆ ಹೋಗಿ ಈ ವಿಷಯವನ್ನು ತಿಳಿಸಿದನು. ಬಳಿಕ ಅಂದ್ರೆಯನು ಮತ್ತು ಫಿಲಿಪ್ಪನು ಒಟ್ಟಾಗಿ ಯೇಸುವಿನ ಬಳಿಗೆ ಹೋಗಿ ಈ ವಿಷಯವನ್ನು ತಿಳಿಸಿದರು.

23 ಯೇಸು ಅವರಿಗೆ, “ಮನುಷ್ಯಕುಮಾರನು ತನ್ನ ಮಹಿಮೆಯನ್ನು ಹೊಂದುವ ಸಮಯ ಇದೇ ಆಗಿದೆ. 24 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಗೋಧಿಯ ಕಾಳು ಭೂಮಿಗೆ ಬಿದ್ದು ಸಾಯಲೇಬೇಕು. ಬಳಿಕ ಅದು ಬೆಳೆದು ಅನೇಕ ಕಾಳುಗಳನ್ನು ಫಲಿಸುವುದು. ಸಾಯದಿದ್ದರೆ, ಅದು ಯಾವಾಗಲೂ ಕೇವಲ ಒಂದೇ ಕಾಳಾಗಿರುವುದು. 25 ತನ್ನ ಸ್ವಂತ ಪ್ರಾಣವನ್ನು ಪ್ರೀತಿಸುವವನು ಅದನ್ನು ಕಳೆದುಕೊಳ್ಳುವನು. ಆದರೆ ಈ ಲೋಕದಲ್ಲಿ ತನ್ನ ಪ್ರಾಣವನ್ನು ದ್ವೇಷಿಸುವವನು ಅದನ್ನು ಉಳಿಸಿಕೊಳ್ಳುವನು. ಅವನು ನಿತ್ಯಜೀವವನ್ನು ಹೊಂದುವನು. 26 ನನ್ನ ಸೇವೆ ಮಾಡುವವನು ನನ್ನನ್ನು ಹಿಂಬಾಲಿಸಬೇಕು. ಆಗ ನಾನು ಇರುವಲ್ಲೆಲ್ಲಾ ನನ್ನ ಸೇವಕನು ಇರುವನು. ನನ್ನ ಸೇವೆಮಾಡುವ ಜನರನ್ನು ನನ್ನ ತಂದೆಯು ಸನ್ಮಾನಿಸುವನು” ಎಂದು ಹೇಳಿದನು.

ತನ್ನ ಮರಣದ ಕುರಿತು ಯೇಸುವಿನ ಹೇಳಿಕೆ

27 ಯೇಸು ಮಾತನ್ನು ಮುಂದುವರಿಸಿ, “ನನ್ನ ಪ್ರಾಣವು ತತ್ತರಿಸುತ್ತಿದೆ. ನಾನೇನು ಹೇಳಲಿ? ‘ತಂದೆಯೇ, ನನ್ನನ್ನು ಈ ಸಂಕಟ ಕಾಲದಿಂದ ರಕ್ಷಿಸು ಎನ್ನಬೇಕೇ?’ ಇಲ್ಲ! ಸಂಕಟಪಡುವುದಕ್ಕೋಸ್ಕರವೇ ನಾನು ಬಂದಿದ್ದೇನೆ. 28 ತಂದೆಯೇ, ನಿನ್ನ ಹೆಸರನ್ನು ಮಹಿಮೆಪಡಿಸಿಕೊ!” ಎಂದು ಹೇಳಿದನು.

ಆಗ ಪರಲೋಕದಿಂದ, “ನನ್ನ ಹೆಸರನ್ನು ಮಹಿಮೆಪಡಿಸಿಕೊಂಡಿದ್ದೇನೆ. ನಾನು ಮತ್ತೆ ಮಹಿಮೆಪಡಿಸಿಕೊಳ್ಳುವೆನು” ಎಂಬ ವಾಣಿ ಆಯಿತು.

29 ಅಲ್ಲಿ ನಿಂತಿದ್ದ ಜನರು ಈ ವಾಣಿಯನ್ನು ಕೇಳಿ “ಅದು ಗುಡುಗು” ಎಂದರು.

ಆದರೆ ಇತರರು, “ದೇವದೂತನೊಬ್ಬನು ಯೇಸುವಿನೊಂದಿಗೆ ಮಾತಾಡಿದನು!” ಎಂದರು.

30 ಯೇಸು ಜನರಿಗೆ, “ಆ ವಾಣಿಯಾದದ್ದು ನನಗೋಸ್ಕರವಲ್ಲ, ನಿಮಗೋಸ್ಕರ. 31 ಈ ಲೋಕಕ್ಕೆ ತೀರ್ಪಾಗುವ ಕಾಲ ಇದೇ ಆಗಿದೆ. ಈಗ ಈ ಲೋಕದ ಅಧಿಪತಿಯನ್ನು (ಸೈತಾನ) ಹೊರಗೆ ದಬ್ಬಲಾಗುವುದು. 32 ನಾನು ಭೂಮಿಯಿಂದ ಮೇಲೆತ್ತಲ್ಪಡುವೆನು. ಆಗ ನಾನು ಎಲ್ಲಾ ಜನರನ್ನು ನನ್ನ ಬಳಿಗೆ ಸೆಳೆದುಕೊಳ್ಳುವೆನು” ಎಂದು ಹೇಳಿದನು. 33 ತಾನು ಸಾಯುವ ರೀತಿಯನ್ನು ಯೇಸು ಈ ಮಾತಿನ ಮೂಲಕ ಸೂಚಿಸಿದನು.

34 ಜನರು, “ಕ್ರಿಸ್ತನು ಸದಾಕಾಲ ಜೀವಿಸುತ್ತಾನೆ ಎಂದು ನಮ್ಮ ಧರ್ಮಶಾಸ್ತ್ರವು ಹೇಳುತ್ತದೆ. ಹೀಗಿರಲಾಗಿ, ‘ಮನುಷ್ಯಕುಮಾರನು ಮೇಲೆತ್ತಲ್ಪಡುವನು’ ಎಂದು ನೀನು ಹೇಳುವುದೇಕೆ? ಈ ಮನುಷ್ಯಕುಮಾರನು ಯಾರು?” ಎಂದು ಕೇಳಿದರು.

35 ಅದಕ್ಕೆ ಯೇಸು, “ಇನ್ನು ಸ್ವಲ್ಪಕಾಲ ಮಾತ್ರ ಬೆಳಕು ನಿಮ್ಮೊಂದಿಗಿರುತ್ತದೆ. ಆದ್ದರಿಂದ ಬೆಳಕು ನಿಮ್ಮೊಂದಿಗೆ ಇರುವಾಗಲೇ ನಡೆಯಿರಿ. ಆಗ ಕತ್ತಲೆಯು (ಪಾಪ) ನಿಮ್ಮನ್ನು ಕವಿದುಕೊಳ್ಳುವುದಿಲ್ಲ. ಕತ್ತಲೆಯಲ್ಲಿ ನಡೆಯುವವನಿಗೆ ತಾನು ಎಲ್ಲಿಗೆ ಹೋಗುತ್ತಿದ್ದೇನೆಂಬುದು ತಿಳಿಯದು. 36 ಆದ್ದರಿಂದ ನೀವು ಬೆಳಕನ್ನು ಇನ್ನೂ ಹೊಂದಿರುವಾಗಲೇ ಅದರಲ್ಲಿ ನಂಬಿಕೆ ಇಡಿರಿ. ಆಗ ನೀವು ಬೆಳಕಿನವರಾಗುವಿರಿ” ಎಂದು ಹೇಳಿದನು. ಈ ಸಂಗತಿಗಳನ್ನು ಹೇಳಿದ ಮೇಲೆ ಯೇಸು ಅಲ್ಲಿಂದ ಹೊರಟು, ತನ್ನನ್ನು ಜನರು ಕಂಡುಕೊಳ್ಳಲಾಗದ ಸ್ಥಳಕ್ಕೆ ಹೋದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International