Revised Common Lectionary (Semicontinuous)
ಯೆಹೋವನ ವಿಶೇಷ ಸೇವಕನು
42 “ನನ್ನ ಸೇವಕನನ್ನು ನೋಡಿರಿ!
ನಾನು ಆತನಿಗೆ ಬೆಂಬಲ ನೀಡುತ್ತೇನೆ.
ನಾನು ಆರಿಸಿಕೊಂಡಿದ್ದು ಆತನನ್ನೇ.
ನಾನು ಆತನನ್ನು ಮೆಚ್ಚಿಕೊಂಡಿದ್ದೇನೆ.
ನನ್ನ ಆತ್ಮವನ್ನು ಆತನಲ್ಲಿರಿಸುವೆನು.
ಆತನು ಜನಾಂಗಗಳನ್ನು ನ್ಯಾಯವಾಗಿ ತೀರ್ಪು ಮಾಡುವನು.
2 ಆತನು ಬೀದಿಗಳಲ್ಲಿ ಗಟ್ಟಿಯಾಗಿ ಮಾತನಾಡನು,
ಗಟ್ಟಿಯಾಗಿ ಕರೆಯುವದಿಲ್ಲ, ಕೂಗುವದಿಲ್ಲ.
3 ಮೃದುವಾಗಿರುವ ಆತನು ಹುಲ್ಲಿನ ಕಡ್ಡಿಯನ್ನೂ ತುಂಡುಮಾಡುವದಿಲ್ಲ.
ಕಿಡಿ ಬೆಂಕಿಯನ್ನೂ ಆತನು ಆರಿಸನು.
ಆತನು ನೀತಿಯಿಂದ ನ್ಯಾಯವಿಚಾರಣೆಮಾಡಿ ಸತ್ಯವನ್ನು ಕಂಡುಕೊಳ್ಳುವನು.
4 ಲೋಕದಲ್ಲಿ ನ್ಯಾಯವನ್ನು ಸ್ಥಾಪಿಸುವ ತನಕ
ಆತನು ಬಲಹೀನನಾಗುವದಿಲ್ಲ; ಮುಗ್ಗರಿಸುವುದೂ ಇಲ್ಲ.
ದೂರದೇಶದಲ್ಲಿರುವವರು ಸಹ ಆತನ ಬೋಧನೆಯನ್ನು ನಂಬುವರು.”
ಯೆಹೋವನೇ ಸೃಷ್ಟಿಕರ್ತ ಮತ್ತು ಆಡಳಿತಗಾರ
5 ನಿಜದೇವರಾದ ಯೆಹೋವನು ಹೀಗೆನ್ನುತ್ತಾನೆ: ಆಕಾಶವನ್ನು ನಿರ್ಮಿಸಿ ಅದನ್ನು ಭೂಮಿಯ ಮೇಲೆ ಹರಡಿದಾತನು ಯೆಹೋವನೇ. ಭೂಮಿಯ ಮೇಲಿರುವದನ್ನೆಲ್ಲಾ ಸೃಷ್ಟಿಸಿದಾತನು ಯೆಹೋವನೇ. ಭೂಮಿಯ ಮೇಲಿರುವ ಮನುಷ್ಯರಿಗೆಲ್ಲಾ ಜೀವಶ್ವಾಸವನ್ನು ಕೊಟ್ಟವನು ಆತನೇ. ಭೂಮಿಯ ಮೇಲೆ ನಡೆಯುವ ಪ್ರತಿಯೊಬ್ಬನಿಗೂ ಪ್ರಾಣವನ್ನು ಕೊಟ್ಟವನು ಆತನೇ.
6 “ಯೆಹೋವನೆಂಬ ನಾನು ನ್ಯಾಯವನ್ನು ಸ್ಥಾಪಿಸಲು ನಿನ್ನನ್ನು ಕರೆದೆನು.
ನಾನು ನಿನ್ನ ಕೈಗಳನ್ನು ಹಿಡಿದು ಸಂರಕ್ಷಿಸುವೆನು.
ಜನರೊಂದಿಗೆ ಮಾಡಿಕೊಂಡ ಒಡಂಬಡಿಕೆ ನನ್ನಲ್ಲಿದೆಯೆಂಬುದಕ್ಕೆ ನೀನು ಗುರುತಾಗಿರುವೆ.
ಎಲ್ಲಾ ಜನರಿಗೆ ನೀನು ಹೊಳೆಯುವ ಪ್ರಕಾಶವಾಗಿರುವೆ.
7 ನೀನು ಕುರುಡರ ಕಣ್ಣುಗಳಿಗೆ ದೃಷ್ಟಿಯನ್ನು ಕೊಡುವೆ;
ಸೆರೆಮನೆಯಲ್ಲಿರುವ ಎಷ್ಟೋ ಜನರನ್ನು ನೀನು ಬಿಡಿಸುವೆ.
ಕತ್ತಲೆಯಲ್ಲಿ ವಾಸಿಸುವ ಎಷ್ಟೋ ಜನರನ್ನು ನೀನು ಸೆರೆಮನೆಯಿಂದ ಬಿಡಿಸುವೆ.
8 “ನಾನೇ ಕರ್ತನು.
ಯೆಹೋವನೆಂಬುದೇ ನನ್ನ ಹೆಸರು.
ನನ್ನ ಮಹಿಮೆಯನ್ನು ನಾನು ಇತರರಿಗೆ ಕೊಡೆನು.
ನನಗೆ ಸಲ್ಲತಕ್ಕ ಮಹಿಮೆಯನ್ನು ಸುಳ್ಳುದೇವರ ವಿಗ್ರಹಗಳಿಗೆ ಬಿಟ್ಟುಕೊಡೆನು.
9 ಇಗೋ, ಆದಿಯಲ್ಲಿಯೇ ಮುಂದಿನ ಸಂಗತಿಗಳನ್ನು ತಿಳಿಸಿದೆನು.
ಅವೆಲ್ಲವೂ ಸಂಭವಿಸಿದವು.
ಈಗ ಕೆಲವು ವಿಷಯಗಳು ನಿನಗೆ ಪ್ರಕಟಿಸುತ್ತೇನೆ;
ಸಂಭವಿಸುವ ಮೊದಲೇ ಅವುಗಳನ್ನು ನಿನಗೆ ತಿಳಿಸುವೆನು.”
5 ಯೆಹೋವನೇ, ನಿನ್ನ ಪ್ರೀತಿಯು ಆಕಾಶಕ್ಕಿಂತಲೂ ಉನ್ನತವಾಗಿದೆ.
ನಿನ್ನ ನಂಬಿಗಸ್ತಿಕೆಯು ಮೇಘಗಳಿಗಿಂತಲೂ ಎತ್ತರವಾಗಿದೆ.
6 ನಿನ್ನ ನೀತಿಯು ಅತ್ಯುನ್ನತವಾದ ಬೆಟ್ಟಕ್ಕಿಂತಲೂ ಎತ್ತರವಾಗಿದೆ.
ನಿನ್ನ ನ್ಯಾಯವು ಮಹಾಸಾಗರಕ್ಕಿಂತಲೂ ಆಳವಾಗಿದೆ.
ಯೆಹೋವನೇ, ಮನುಷ್ಯರನ್ನೂ ಪ್ರಾಣಿಗಳನ್ನೂ ಕಾಪಾಡುವಾತನು ನೀನೇ.
7 ನಿನ್ನ ಶಾಶ್ವತವಾದ ಪ್ರೀತಿಗಿಂತ ಅಮೂಲ್ಯವಾದದ್ದು ಬೇರೊಂದಿಲ್ಲ.
ಜನರೂ ದೇವದೂತರೂ ನಿನ್ನನ್ನೇ ಆಶ್ರಯಿಸಿಕೊಳ್ಳುವರು.
8 ನಿನ್ನ ಆಲಯದ ಸಮೃದ್ಧಿಯಿಂದ ಅವರು ನವಚೈತನ್ಯವನ್ನು ಪಡೆದುಕೊಳ್ಳುವರು.
ನಿನ್ನ ಶ್ರೇಷ್ಠ ನದಿಯಲ್ಲಿ ಕುಡಿಯಲು ಅವರಿಗೆ ಆಸ್ಪದನೀಡು.
9 ಜೀವಬುಗ್ಗೆಯು ನಿನ್ನ ಬಳಿಯಿಂದ ಹರಿಯುವುದು!
ನಾವು ಬೆಳಕನ್ನು ನೋಡುವುದು ನಿನ್ನ ಬೆಳಕಿನಿಂದಲೇ.
10 ನಿನ್ನನ್ನು ಅರಿತುಕೊಂಡವರ ಮೇಲೆ ನಿನ್ನ ಪ್ರೀತಿಯು ನೆಲೆಸಿರಲಿ.
ಯಥಾರ್ಥವಂತರಿಗೆ ಒಳ್ಳೆಯದನ್ನು ಮಾಡು.
11 ಗರ್ವಿಷ್ಠರ ಬಲೆಗೆ ನನ್ನನ್ನು ಬೀಳಿಸಬೇಡ;
ದುಷ್ಟರ ಕೈಹಿಡಿತಕ್ಕೆ ನನ್ನನ್ನು ಸಿಕ್ಕಿಸಬೇಡ.
ಹೊಸ ಒಡಂಬಡಿಕೆಗನುಸಾರವಾಗಿ ಆರಾಧನೆ
11 ಆದರೆ ಕ್ರಿಸ್ತನು ಈಗಾಗಲೇ ಪ್ರಧಾನಯಾಜಕನಾಗಿ ಬಂದಿದ್ದಾನೆ. ಈಗ ನಾವು ಹೊಂದಿರುವ ಉತ್ತಮ ಸಂಗತಿಗಳಿಗೆ ಆತನು ಪ್ರಧಾನಯಾಜಕನಾಗಿದ್ದಾನೆ. ಇತರ ಯಾಜಕರಾದರೊ ಗುಡಾರದಲ್ಲಿ ಸೇವೆಯನ್ನು ಮಾಡಿದರು. ಆದರೆ ಕ್ರಿಸ್ತನು ಗುಡಾರದಲ್ಲಿ ಸೇವೆ ಮಾಡದೆ ಅದಕ್ಕಿಂತಲೂ ಶ್ರೇಷ್ಠವಾದ ಸ್ಥಳದಲ್ಲಿ ಸೇವೆ ಮಾಡುತ್ತಾನೆ. ಅದು ಮತ್ತಷ್ಟು ಪರಿಪೂರ್ಣವಾದದ್ದು. ಅದು ಮನುಷ್ಯರಿಂದ ನಿರ್ಮಿತವಾದದ್ದಲ್ಲ. ಲೋಕಕ್ಕೆ ಸೇರಿದ್ದೂ ಅಲ್ಲ. 12 ಆತನು ಒಂದೇ ಒಂದು ಸಾರಿ ಮಹಾ ಪವಿತ್ರಸ್ಥಳಕ್ಕೆ ಪ್ರವೇಶಿಸಿದನು. ಆತನು ಹೋತಗಳ ಮತ್ತು ಹೋರಿಕರುಗಳ ರಕ್ತವನ್ನು ತೆಗೆದುಕೊಳ್ಳದೆ ತನ್ನ ಸ್ವಂತ ರಕ್ತದಿಂದಲೇ ಮಹಾ ಪವಿತ್ರಸ್ಥಳಕ್ಕೆ ಪ್ರವೇಶಿಸಿ ನಮಗೆ ನಿತ್ಯಸ್ವಾತಂತ್ರ್ಯವನ್ನು ತಂದುಕೊಟ್ಟನು.
13 ಹೋತಗಳ ಮತ್ತು ಹೋರಿಗಳ ರಕ್ತವನ್ನೂ ಹಸುಗಳ ಬೂದಿಯನ್ನೂ ಆ ಆರಾಧನೆಯ ಸ್ಥಳದಲ್ಲಿ ಪ್ರವೇಶಿಸುವಷ್ಟು ಶುದ್ಧರಾಗಿಲ್ಲದ ಜನರ ಮೇಲೆ ಚಿಮುಕಿಸಲಾಗುತ್ತಿತ್ತು. ಆ ರಕ್ತ ಮತ್ತು ಬೂದಿ ಜನರ ದೇಹಗಳನ್ನು ಮಾತ್ರ ಶುದ್ಧಿಗೊಳಿಸುತ್ತಿದ್ದವು. 14 ಆದ್ದರಿಂದ ಆತನ ರಕ್ತವು ಖಚಿತವಾಗಿ ಅದಕ್ಕಿಂತಲೂ ಹೆಚ್ಚಿನದನ್ನು ಸಾಧಿಸುತ್ತದೆ. ಆತನು ನಿತ್ಯಾತ್ಮನ ಮೂಲಕ ತನ್ನನ್ನು ತಾನೇ ದೇವರಿಗೆ ನಿಷ್ಕಳಂಕವಾದ ಯಜ್ಞವನ್ನಾಗಿ ಅರ್ಪಿಸಿಕೊಂಡನು. ಆತನ ರಕ್ತವು ನಮ್ಮನ್ನು ನಮ್ಮ ಕೆಟ್ಟಕಾರ್ಯಗಳಿಂದ ಪರಿಪೂರ್ಣವಾಗಿ ಬಿಡಿಸಿ ನಾವು ಜೀವಸ್ವರೂಪನಾದ ದೇವರನ್ನು ಆರಾಧಿಸಲು ಸಾಧ್ಯವಾಗುವಂತೆ ನಮ್ಮ ಹೃದಯವನ್ನೂ ಪರಿಶುದ್ಧಗೊಳಿಸುತ್ತದೆ.
15 ದೇವರಿಂದ ಕರೆಯಲ್ಪಟ್ಟ ಜನರು ದೇವರ ವಾಗ್ದಾನಗಳನ್ನು ಹೊಂದಿಕೊಳ್ಳಲೆಂದು ಕ್ರಿಸ್ತನು ಈ ಹೊಸ ಒಡಂಬಡಿಕೆಯನ್ನು ದೇವರಿಂದ ತಂದನು. ದೇವರ ಜನರು ಅವುಗಳನ್ನು ಶಾಶ್ವತವಾಗಿ ಹೊಂದಿಕೊಳ್ಳಲು ಸಾಧ್ಯ. ಏಕೆಂದರೆ ಮೊದಲನೆ ಒಡಂಬಡಿಕೆಯ ಕಾಲದಲ್ಲಿ ಮಾಡಿದ ಪಾಪಗಳಿಂದ ಜನರನ್ನು ಬಿಡುಗಡೆಗೊಳಿಸುವುದಕ್ಕಾಗಿ ಕ್ರಿಸ್ತನು ಮರಣ ಹೊಂದಿದನು.
ಬೆಥಾನಿಯಲ್ಲಿ ಯೇಸು
(ಮತ್ತಾಯ 26:6-13; ಮಾರ್ಕ 14:3-9)
12 ಪಸ್ಕಹಬ್ಬಕ್ಕೆ ಇನ್ನೂ ಆರು ದಿನಗಳಿದ್ದಾಗ ಯೇಸು ಬೆಥಾನಿಗೆ ಹೋದನು. ಲಾಜರನು ವಾಸವಾಗಿದ್ದ ಊರೇ ಬೆಥಾನಿ. (ಯೇಸು ಸತ್ತವರೊಳಗಿಂದ ಎಬ್ಬಿಸಿದ ಮನುಷ್ಯನೇ ಲಾಜರನು.) 2 ಅವರು ಯೇಸುವಿಗೆ ರಾತ್ರಿಭೋಜನವನ್ನು ಏರ್ಪಡಿಸಿದ್ದರು. ಮಾರ್ಥಳು ಊಟವನ್ನು ಬಡಿಸುತ್ತಿದ್ದಳು. ಯೇಸುವಿನೊಂದಿಗೆ ಊಟ ಮಾಡುತ್ತಿದ್ದವರಲ್ಲಿ ಲಾಜರನೂ ಒಬ್ಬನಾಗಿದ್ದನು. 3 ಆಗ ಮರಿಯಳು, ಬಹು ಬೆಲೆಬಾಳುವ ಸುಗಂಧತೈಲವನ್ನು[a] ಅರ್ಧ ಲೀಟರಿನಷ್ಟು ತೆಗೆದುಕೊಂಡು ಬಂದು, ಯೇಸುವಿನ ಪಾದಗಳಿಗೆ ಹಚ್ಚಿದಳು. ಬಳಿಕ ತನ್ನ ತಲೆ ಕೂದಲಿನಿಂದ ಆತನ ಪಾದಗಳನ್ನು ಒರೆಸಿದಳು. ಆ ಪರಿಮಳದ್ರವ್ಯದ ಸುವಾಸನೆಯು ಇಡೀ ಮನೆಯನ್ನೇ ತುಂಬಿಕೊಂಡಿತು.
4 ಇಸ್ಕರಿಯೋತ ಯೂದನು ಅಲ್ಲಿದ್ದನು. ಅವನು ಯೇಸುವಿನ ಶಿಷ್ಯರಲ್ಲಿ ಒಬ್ಬನಾಗಿದ್ದನು. (ಮುಂದೆ, ಯೇಸುವಿಗೆ ದ್ರೋಹ ಮಾಡಿದವನು ಇವನೇ.) ಮರಿಯಳು ಮಾಡಿದ ಈ ಕಾರ್ಯವನ್ನು ಯೂದನು ಇಷ್ಟಪಡಲಿಲ್ಲ. 5 ಅವನು, “ಆ ಪರಿಮಳದ ದ್ರವ್ಯದ ಬೆಲೆ ಮುನ್ನೂರು ಬೆಳ್ಳಿನಾಣ್ಯಗಳು.[b] ಅದನ್ನು ಮಾರಿ ಆ ಹಣವನ್ನು ಬಡವರಿಗೆ ಕೊಡಬೇಕಿತ್ತು” ಎಂದು ಟೀಕಿಸಿದನು. 6 ಆದರೆ ಯೂದನಿಗೆ ಬಡವರ ಬಗ್ಗೆ ನಿಜವಾಗಿಯೂ ಚಿಂತೆಯಿರಲಿಲ್ಲ. ಅವನು ಕಳ್ಳನಾಗಿದ್ದುದರಿಂದ ಹಾಗೆ ಹೇಳಿದನು. ಶಿಷ್ಯಸಮುದಾಯಕ್ಕೋಸ್ಕರವಿದ್ದ ಹಣದ ಪೆಟ್ಟಿಗೆಯು ಅವನ ವಶದಲ್ಲಿತ್ತು. ಅವನು ಆಗಾಗ್ಗೆ ಆ ಪೆಟ್ಟಿಗೆಯಿಂದ ಹಣವನ್ನು ಕದ್ದುಕೊಳ್ಳುತ್ತಿದ್ದನು.
7 ಯೇಸು ಅವನಿಗೆ, “ಆಕೆಯನ್ನು ತಡೆಯಬೇಡ. ನನ್ನನ್ನು ಶವಸಂಸ್ಕಾರಕ್ಕೆ ಸಿದ್ಧಪಡಿಸುವ ಈ ದಿನಕ್ಕೋಸ್ಕರ ಆಕೆ ಸುಗಂಧ ದ್ರವ್ಯವನ್ನು ಶೇಖರಿಸಿದ್ದು ಒಳ್ಳೆಯದೇ ಸರಿ. 8 ಬಡವರು ಯಾವಾಗಲೂ ನಿಮ್ಮೊಂದಿಗಿರುತ್ತಾರೆ ಆದರೆ ನಾನು ನಿಮ್ಮೊಂದಿಗೆ ಯಾವಾಗಲೂ ಇರುವುದಿಲ್ಲ” ಎಂದು ಉತ್ತರಕೊಟ್ಟನು.
ಲಾಜರನ ವಿರುದ್ಧ ಸಂಚು
9 ಯೇಸು ಬೆಥಾನಿಯಲ್ಲಿದ್ದಾನೆ ಎಂಬ ಸುದ್ದಿಯನ್ನು ಅನೇಕ ಯೆಹೂದ್ಯರು ಕೇಳಿ ಆತನನ್ನೂ ಲಾಜರನನ್ನೂ ನೋಡಬೇಕೆಂದು ಅಲ್ಲಿಗೆ ಹೋದರು. ಯೇಸುವಿನಿಂದ ಜೀವಂತವಾಗಿ ಎಬ್ಬಿಸಲ್ಪಟ್ಟವನೇ ಲಾಜರನು. 10 ಆದರೆ ಮಹಾಯಾಜಕರು ಲಾಜರನನ್ನು ಸಹ ಕೊಲ್ಲಲು ಯೋಜನೆಗಳನ್ನು ಮಾಡಿದರು. 11 ಲಾಜರನ ನಿಮಿತ್ತ ಅನೇಕ ಯೆಹೂದ್ಯರು ತಮ್ಮ ನಾಯಕರನ್ನು ತೊರೆದು ಯೇಸುವಿನಲ್ಲಿ ನಂಬಿಕೆ ಇಡುತ್ತಿದ್ದರು. ಆದಕಾರಣವೇ ಯೆಹೂದ್ಯ ನಾಯಕರು ಲಾಜರನನ್ನು ಸಹ ಕೊಲ್ಲಬೇಕೆಂದಿದ್ದರು.
Kannada Holy Bible: Easy-to-Read Version. All rights reserved. © 1997 Bible League International