Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 31:9-16

ಯೆಹೋವನೇ, ನನಗೆ ಅನೇಕ ಇಕ್ಕಟ್ಟುಗಳಿವೆ;
    ನನ್ನನ್ನು ಕರುಣಿಸು.
ಅತ್ತುಅತ್ತು ನನ್ನ ಕಣ್ಣುಗಳು ನೋಯುತ್ತಿವೆ,
    ನನ್ನ ಗಂಟಲು ನೋಯುತ್ತಿದೆ, ಹೊಟ್ಟೆಯೂ ನೋಯುತ್ತಿದೆ.
10 ನನ್ನ ಜೀವಿತವು[a] ದುಃಖದಲ್ಲಿ ಕೊನೆಗೊಳ್ಳುತ್ತಿದೆ.
    ನನ್ನ ವರ್ಷಗಳು ನಿಟ್ಟುಸಿರಿನಲ್ಲೇ ಕಳೆದುಹೋಗುತ್ತಿವೆ.
ನನ್ನ ಇಕ್ಕಟ್ಟುಗಳು ನನ್ನ ಶಕ್ತಿಯನ್ನು ಕುಂದಿಸುತ್ತಿವೆ.
    ನನ್ನ ಬಲವು ನನ್ನನ್ನು ಬಿಟ್ಟುಹೋಗುತ್ತಿದೆ.[b]
11 ವೈರಿಗಳು ನನ್ನನ್ನು ಕೀಳಾಗಿ ಕಾಣುತ್ತಿದ್ದಾರೆ;
    ನನ್ನ ನೆರೆಹೊರೆಯವರೂ ನನ್ನನ್ನು ನಿಂದಿಸುವರು;
ನನ್ನ ಸಂಬಂಧಿಕರೂ ನನ್ನ ವಿಷಯದಲ್ಲಿ ಭಯಪಡುವರು;
    ನನ್ನನ್ನು ದಾರಿಯಲ್ಲಿ ಕಂಡರೂ ಕಾಣದಂತೆ ಹೊರಟುಹೋಗುವರು.
12 ನಾನು ಸತ್ತವರಂತೆ ಯಾರ ಜ್ಞಾಪಕಕ್ಕೂ ಬಾರದವನಾದೆನು.
    ಕಳೆದುಹೋದ ಉಪಕರಣದಂತೆ ಅವರು ನನ್ನನ್ನು ಮರೆತೇಬಿಟ್ಟಿದ್ದಾರೆ.
13 ಜನರು ನನ್ನನ್ನು ಕುರಿತು ಭಯಂಕರವಾದ ಸಂಗತಿಗಳನ್ನು ಮಾತಾಡಿಕೊಳ್ಳುತ್ತಿದ್ದಾರೆ.
    ಅವರು ದಂಗೆಯೆದ್ದು ನನ್ನನ್ನು ಕೊಲ್ಲಬೇಕೆಂದುಕೊಂಡಿದ್ದಾರೆ.

14 ಯೆಹೋವನೇ, ನಾನಂತೂ ನಿನ್ನಲ್ಲೇ ಭರವಸವಿಟ್ಟಿದ್ದೇನೆ.
    ನೀನೇ ನನ್ನ ದೇವರು.
15 ನನ್ನ ಜೀವವು ನಿನ್ನ ಕೈಯಲ್ಲಿದೆ.
    ವೈರಿಗಳಿಂದ ನನ್ನನ್ನು ರಕ್ಷಿಸು; ನನ್ನನ್ನು ಅಟ್ಟಿಸಿಕೊಂಡು[c] ಬರುತ್ತಿರುವ ಜನರಿಂದ ನನ್ನನ್ನು ರಕ್ಷಿಸು.
16 ದಯವಿಟ್ಟು ನಿನ್ನ ಸೇವಕನನ್ನು ಸ್ವೀಕರಿಸಿಕೊ.
    ಕರುಣೆಯಿಂದ ನನ್ನನ್ನು ರಕ್ಷಿಸು!

ಯಾಜಕಕಾಂಡ 23:1-8

ವಿಶೇಷ ಹಬ್ಬದ ದಿನಗಳು

23 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಇಸ್ರೇಲರಿಗೆ ಹೀಗೆ ಆಜ್ಞಾಪಿಸು: ಯೆಹೋವನಿಂದ ಆರಿಸಲ್ಪಟ್ಟ ಹಬ್ಬದದಿನಗಳಲ್ಲಿ ಪವಿತ್ರಸಭೆ ಕೂಡಬೇಕೆಂಬುದಾಗಿ ಪ್ರಕಟಿಸಬೇಕು. ಇವು ನನ್ನ ವಿಶೇಷ ಹಬ್ಬದ ದಿನಗಳು.

ಸಬ್ಬತ್ತು

“ಆರು ದಿನಗಳಲ್ಲಿ ನೀವು ಕೆಲಸಮಾಡಿರಿ. ಆದರೆ ಏಳನೆಯ ದಿನವು ವಿಶೇಷವಾದ ವಿಶ್ರಾಂತಿ ದಿನವಾದ ಸಬ್ಬತ್ತಾಗಿದೆ. ಆ ದಿನದಲ್ಲಿ ಪವಿತ್ರಸಭೆ ಕೂಡಬೇಕು. ನೀವು ಯಾವ ಕೆಲಸವನ್ನೂ ಮಾಡಬಾರದು. ನಿಮ್ಮ ಎಲ್ಲಾ ಮನೆಗಳಲ್ಲಿ ಅದು ಯೆಹೋವನಿಗೆ ಮೀಸಲಾದ ಸಬ್ಬತ್ತಾಗಿದೆ.

ಪಸ್ಕಹಬ್ಬ

“ಇವುಗಳು ಯೆಹೋವನಿಂದ ಆರಿಸಲ್ಪಟ್ಟ ಹಬ್ಬದ ದಿನಗಳು. ಆ ಕಾಲಗಳಲ್ಲಿ ದೇವಾರಾಧನೆಗಾಗಿ ಸಭೆಕೂಟಗಳು ನಡೆಸಲ್ಪಡಬೇಕು. ನೇಮಕವಾದ ದಿನಗಳಲ್ಲಿ ಇವುಗಳನ್ನು ಪ್ರಕಟಿಸಬೇಕು. ಯೆಹೋವನ ಪಸ್ಕಹಬ್ಬವು ಮೊದಲನೆ ತಿಂಗಳ ಹದಿನಾಲ್ಕನೆಯ ದಿನದ ಸಾಯಂಕಾಲ ಅಂದರೆ ಸೂರ್ಯಸ್ತಮಾನವಾದ ಸಮಯದಲ್ಲಿ ನಡೆಯುತ್ತದೆ.

ಹುಳಿಯಿಲ್ಲದ ರೊಟ್ಟಿಯ ಹಬ್ಬ

“ಅದೇ ತಿಂಗಳ ಹದಿನೈದನೆಯ ದಿನದಲ್ಲಿ ಯೆಹೋವನ ಹುಳಿಯಿಲ್ಲದ ರೊಟ್ಟಿಯ ಹಬ್ಬವಿರುತ್ತದೆ. ನೀವು ಹುಳಿಯಿಲ್ಲದ ರೊಟ್ಟಿಯನ್ನು ಏಳು ದಿನಗಳವರೆಗೆ ತಿನ್ನುವಿರಿ. ಈ ಹಬ್ಬದ ದಿನದ ಮೊದಲನೆಯ ದಿನದಲ್ಲಿ ನೀವು ವಿಶೇಷ ಸಭೆಯಾಗಿ ಸೇರಬೇಕು. ಆ ದಿನದಲ್ಲಿ ಯಾವ ಕೆಲಸವನ್ನೂ ಮಾಡಬಾರದು. ಏಳು ದಿನಗಳವರೆಗೆ ನೀವು ಯೆಹೋವನಿಗೆ ಹೋಮವನ್ನು ಅರ್ಪಿಸಬೇಕು. ಏಳನೆಯ ದಿನದಲ್ಲಿ ನೀವು ಇನ್ನೊಂದು ಬಾರಿ ವಿಶೇಷ ಸಭೆಯಾಗಿ ಸೇರಬೇಕು. ನೀವು ಆ ದಿನದಲ್ಲಿ ಯಾವ ಕೆಲಸವನ್ನೂ ಮಾಡಬಾರದು.”

ಲೂಕ 22:1-13

ಯೇಸುವನ್ನು ಕೊಲ್ಲಲು ಯೆಹೂದ್ಯನಾಯಕರ ಸಂಚು

(ಮತ್ತಾಯ 26:1-5,14-16; ಮಾರ್ಕ 14:1-2,10-11; ಯೋಹಾನ 11:45-53)

22 ಯೆಹೂದ್ಯರ ಹುಳಿಯಿಲ್ಲದ ರೊಟ್ಟಿಯ ಹಬ್ಬ ಅಂದರೆ ಪಸ್ಕಹಬ್ಬವು ಹತ್ತಿರವಾಗಿತ್ತು. ಮಹಾಯಾಜಕರು ಮತ್ತು ಧರ್ಮೋಪದೇಶಕರು ಯೇಸುವನ್ನು ಹೇಗೆ ಕೊಲ್ಲಬೇಕೆಂದು ಆಲೋಚಿಸುತ್ತಾ ಜನರ ಭಯದಿಂದ ತಕ್ಕ ಮಾರ್ಗವನ್ನು ಹುಡುಕತೊಡಗಿದರು.

ಯೇಸುವಿನ ವಿರುದ್ಧ ಯೂದನು ಮಾಡಿದ ಸಂಚು

ಯೇಸುವಿನ ಹನ್ನೆರಡು ಅಪೊಸ್ತಲರಲ್ಲಿ ಇಸ್ಕರಿಯೋತ ಯೂದನು ಒಬ್ಬನಾಗಿದ್ದನು. ಸೈತಾನನು ಇವನೊಳಗೆ ಪ್ರವೇಶಿಸಿ ಕೆಟ್ಟಕಾರ್ಯವೊಂದನ್ನು ಮಾಡುವಂತೆ ಪ್ರೇರೇಪಿಸಿದನು. ಯೂದನು ಮಹಾಯಾಜಕರ ಮತ್ತು ದೇವಾಲಯವನ್ನು ಕಾಯುತ್ತಿದ್ದ ಕೆಲವು ಸೈನಿಕರ ಬಳಿಗೆ ಹೋಗಿ, ಯೇಸುವನ್ನು ಹಿಡಿದುಕೊಡುವುದರ ಬಗ್ಗೆ ಅವರೊಂದಿಗೆ ಮಾತಾಡಿದನು. ಯಾಜಕರಿಗೆ ಬಹಳ ಸಂತೋಷವಾಯಿತು. ಯೇಸುವನ್ನು ತಮಗೆ ಹಿಡಿದುಕೊಟ್ಟರೆ ಹಣ ಕೊಡುವುದಾಗಿ ಅವರು ಯೂದನಿಗೆ ಮಾತುಕೊಟ್ಟರು. ಯೂದನು ಅದಕ್ಕೆ ಒಪ್ಪಿದನು. ಬಳಿಕ ಯೇಸುವನ್ನು ಅವರಿಗೆ ಹಿಡಿದುಕೊಡಲು ಉತ್ತಮವಾದ ಸಮಯಕ್ಕಾಗಿ ಕಾಯತೊಡಗಿದನು. ತನ್ನ ಈ ಕಾರ್ಯವನ್ನು ಯಾರಿಗೂ ತಿಳಿಯದಂಥ ಸಮಯದಲ್ಲಿ ಮಾಡಬೇಕೆಂಬುದು ಅವನ ಬಯಕೆಯಾಗಿತ್ತು.

ಪಸ್ಕದ ಊಟಕ್ಕೆ ಸಿದ್ಧತೆ

(ಮತ್ತಾಯ 26:17-25; ಮಾರ್ಕ 14:12-21; ಯೋಹಾನ 13:21-30)

ಹುಳಿಯಿಲ್ಲದ ರೊಟ್ಟಿಯನ್ನು ತಿನ್ನುವ ದಿನ ಬಂತು. ಯೆಹೂದ್ಯರು ಪಸ್ಕದ ಕುರಿಮರಿಗಳನ್ನು ಕೊಯ್ಯುವ ದಿನ ಅದಾಗಿತ್ತು. ಯೇಸುವು ಪೇತ್ರ ಮತ್ತು ಯೋಹಾನರಿಗೆ, “ಹೋಗಿ, ಪಸ್ಕದ ಊಟವನ್ನು ನಮಗಾಗಿ ಸಿದ್ಧಮಾಡಿರಿ” ಎಂದು ಹೇಳಿದನು.

ಪೇತ್ರ ಮತ್ತು ಯೋಹಾನರು, “ಊಟವನ್ನು ಎಲ್ಲಿ ಸಿದ್ಧಮಾಡಬೇಕು?” ಎಂದು ಯೇಸುವಿಗೆ ಕೇಳಿದರು.

10 ಯೇಸು ಅವರಿಗೆ, “ಕೇಳಿರಿ! ನೀವು ಪಟ್ಟಣದೊಳಗೆ (ಜೆರುಸಲೇಮಿಗೆ) ಹೋದನಂತರ, ನೀರಿನ ಕೊಡವನ್ನು ಹೊತ್ತುಕೊಂಡು ಹೋಗುವ ಒಬ್ಬ ಮನುಷ್ಯನನ್ನು ನೋಡುವಿರಿ. ಅವನನ್ನೇ ಹಿಂಬಾಲಿಸಿರಿ. ಅವನು ಒಂದು ಮನೆಯೊಳಗೆ ಹೋಗುವನು. ನೀವು ಅವನೊಂದಿಗೆ ಹೋಗಿರಿ. 11 ಆ ಮನೆಯ ಯಜಮಾನನಿಗೆ, ‘ಗುರುವು ತನ್ನ ಶಿಷ್ಯರೊಂದಿಗೆ ಯಾವ ಕೋಣೆಯಲ್ಲಿ ಪಸ್ಕದ ಊಟವನ್ನು ಮಾಡಬೇಕೆಂಬುದನ್ನು ದಯಮಾಡಿ ತೋರಿಸು’ ಎಂದು ಹೇಳಿರಿ. 12 ಆಗ ಮನೆಯ ಯಜಮಾನನು ಮೇಲಂತಸ್ತಿನಲ್ಲಿ ಒಂದು ದೊಡ್ಡ ಕೋಣೆಯನ್ನು ತೋರಿಸುವನು. ಈ ಕೋಣೆಯು ನಿಮಗಾಗಿ ಸಿದ್ಧವಾಗಿರುವುದು. ಪಸ್ಕದ ಊಟವನ್ನು ಅಲ್ಲಿ ಸಿದ್ಧಮಾಡಿರಿ” ಅಂದನು.

13 ಆದ್ದರಿಂದ ಪೇತ್ರ ಮತ್ತು ಯೋಹಾನ ಹೊರಟರು. ಯೇಸು ಹೇಳಿದ ಹಾಗೆ ಪ್ರತಿಯೊಂದೂ ನಡೆಯಿತು. ಅವರು ಪಸ್ಕದ ಊಟವನ್ನು ಅಲ್ಲಿ ಸಿದ್ಧಮಾಡಿದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International