Revised Common Lectionary (Semicontinuous)
9 ಯೆಹೋವನೇ, ನನಗೆ ಅನೇಕ ಇಕ್ಕಟ್ಟುಗಳಿವೆ;
ನನ್ನನ್ನು ಕರುಣಿಸು.
ಅತ್ತುಅತ್ತು ನನ್ನ ಕಣ್ಣುಗಳು ನೋಯುತ್ತಿವೆ,
ನನ್ನ ಗಂಟಲು ನೋಯುತ್ತಿದೆ, ಹೊಟ್ಟೆಯೂ ನೋಯುತ್ತಿದೆ.
10 ನನ್ನ ಜೀವಿತವು[a] ದುಃಖದಲ್ಲಿ ಕೊನೆಗೊಳ್ಳುತ್ತಿದೆ.
ನನ್ನ ವರ್ಷಗಳು ನಿಟ್ಟುಸಿರಿನಲ್ಲೇ ಕಳೆದುಹೋಗುತ್ತಿವೆ.
ನನ್ನ ಇಕ್ಕಟ್ಟುಗಳು ನನ್ನ ಶಕ್ತಿಯನ್ನು ಕುಂದಿಸುತ್ತಿವೆ.
ನನ್ನ ಬಲವು ನನ್ನನ್ನು ಬಿಟ್ಟುಹೋಗುತ್ತಿದೆ.[b]
11 ವೈರಿಗಳು ನನ್ನನ್ನು ಕೀಳಾಗಿ ಕಾಣುತ್ತಿದ್ದಾರೆ;
ನನ್ನ ನೆರೆಹೊರೆಯವರೂ ನನ್ನನ್ನು ನಿಂದಿಸುವರು;
ನನ್ನ ಸಂಬಂಧಿಕರೂ ನನ್ನ ವಿಷಯದಲ್ಲಿ ಭಯಪಡುವರು;
ನನ್ನನ್ನು ದಾರಿಯಲ್ಲಿ ಕಂಡರೂ ಕಾಣದಂತೆ ಹೊರಟುಹೋಗುವರು.
12 ನಾನು ಸತ್ತವರಂತೆ ಯಾರ ಜ್ಞಾಪಕಕ್ಕೂ ಬಾರದವನಾದೆನು.
ಕಳೆದುಹೋದ ಉಪಕರಣದಂತೆ ಅವರು ನನ್ನನ್ನು ಮರೆತೇಬಿಟ್ಟಿದ್ದಾರೆ.
13 ಜನರು ನನ್ನನ್ನು ಕುರಿತು ಭಯಂಕರವಾದ ಸಂಗತಿಗಳನ್ನು ಮಾತಾಡಿಕೊಳ್ಳುತ್ತಿದ್ದಾರೆ.
ಅವರು ದಂಗೆಯೆದ್ದು ನನ್ನನ್ನು ಕೊಲ್ಲಬೇಕೆಂದುಕೊಂಡಿದ್ದಾರೆ.
14 ಯೆಹೋವನೇ, ನಾನಂತೂ ನಿನ್ನಲ್ಲೇ ಭರವಸವಿಟ್ಟಿದ್ದೇನೆ.
ನೀನೇ ನನ್ನ ದೇವರು.
15 ನನ್ನ ಜೀವವು ನಿನ್ನ ಕೈಯಲ್ಲಿದೆ.
ವೈರಿಗಳಿಂದ ನನ್ನನ್ನು ರಕ್ಷಿಸು; ನನ್ನನ್ನು ಅಟ್ಟಿಸಿಕೊಂಡು[c] ಬರುತ್ತಿರುವ ಜನರಿಂದ ನನ್ನನ್ನು ರಕ್ಷಿಸು.
16 ದಯವಿಟ್ಟು ನಿನ್ನ ಸೇವಕನನ್ನು ಸ್ವೀಕರಿಸಿಕೊ.
ಕರುಣೆಯಿಂದ ನನ್ನನ್ನು ರಕ್ಷಿಸು!
9 ದೇವರು ಹೇಳುವುದೇನೆಂದರೆ: “ನೋಹನ ಕಾಲದಲ್ಲಿ ನಾನು ಲೋಕವನ್ನು ಜಲಪ್ರವಾಹದ ಮೂಲಕ ಶಿಕ್ಷಿಸಿದ್ದನ್ನು ಜ್ಞಾಪಕಮಾಡಿಕೊ.
ಆ ಬಳಿಕ ನಾನು ನೋಹನಿಗೆ ಪ್ರಪಂಚವನ್ನು ಜಲಪ್ರವಾಹದಿಂದ ಇನ್ನೆಂದಿಗೂ ನಾಶಪಡಿಸುವದಿಲ್ಲ ಎಂದು ಪ್ರಮಾಣ ಮಾಡಿದೆನು.
ಅದೇ ರೀತಿಯಲ್ಲಿ ಇನ್ನೆಂದಿಗೂ ನಿನ್ನ ಮೇಲೆ ಕೋಪಗೊಳ್ಳುವುದಿಲ್ಲವೆಂತಲೂ ನಿನ್ನನ್ನು ಗದರಿಸುವುದಿಲ್ಲವೆಂತಲೂ ನಾನು ನಿನಗೆ ಪ್ರಮಾಣ ಮಾಡುತ್ತೇನೆ.”
10 ಯೆಹೋವನು ಹೇಳುವುದೇನೆಂದರೆ, “ಪರ್ವತಗಳು ಇಲ್ಲದೆ ಹೋದರೂ
ಬೆಟ್ಟಗಳು ಧೂಳಾದರೂ
ನನ್ನ ಕೃಪೆಯು ನಿನ್ನನ್ನು ಎಂದಿಗೂ ತೊರೆಯದು.
ನಾನು ನಿನ್ನೊಂದಿಗೆ ನಿತ್ಯಕಾಲದ
ಸಮಾಧಾನದಲ್ಲಿ ಇರುವೆನು.”
ಯೆಹೋವನು ನಿನಗೆ ಕರುಣೆಯನ್ನು ತೋರುವನು.
ಈ ಸಂಗತಿಗಳನ್ನು ಆತನೇ ಹೇಳಿದ್ದಾನೆ.
10 ಸಮಸ್ತವನ್ನು ಸೃಷ್ಟಿಸಿದಾತನು ದೇವರೇ. ಸಮಸ್ತವು ಆತನ ಮಹಿಮೆಗಾಗಿಯೇ ಸೃಷ್ಟಿಯಾಯಿತು. ದೇವರು ತನ್ನವರೇ ಆದ ಅನೇಕ ಜನರನ್ನು ಹೊಂದಿಕೊಂಡು ಅವರೊಂದಿಗೆ ತನ್ನ ಮಹಿಮೆಯನ್ನು ಹಂಚಿಕೊಳ್ಳಲು ಬಯಸಿದನು. ಆದ್ದರಿಂದ ಆತನು ಅವರನ್ನು ರಕ್ಷಣೆಗೆ ನಡೆಸಲು ಪರಿಪೂರ್ಣನಾದ ಒಬ್ಬಾತನನ್ನು ನಿರ್ಮಿಸಿದನು. ಆತನೇ ಯೇಸು. ದೇವರು ಆತನನ್ನು ಬಾಧೆಗಳ ಮೂಲಕವೇ ಪರಿಪೂರ್ಣನಾದ ರಕ್ಷಕನನ್ನಾಗಿ ಮಾಡಿದನು.
11 ಜನರನ್ನು ಪರಿಶುದ್ಧರನ್ನಾಗಿ ಮಾಡುವ ಯೇಸುವೂ ಮತ್ತು ಆತನಿಂದ ಪರಿಶುದ್ಧರಾಗುವ ಜನರೂ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಆದ್ದರಿಂದ ಆ ಜನರನ್ನು ಸಹೋದರರೆಂದೂ ಸಹೋದರಿಯರೆಂದೂ ಕರೆಯಲು ಆತನು (ಯೇಸು) ನಾಚಿಕೆಪಡುವುದಿಲ್ಲ. 12 ಯೇಸು ಹೇಳುತ್ತಾನೆ:
“ದೇವರೇ, ನಿನ್ನನ್ನು ಕುರಿತು ನನ್ನ ಸಹೋದರ ಸಹೋದರಿಯರಿಗೆ ತಿಳಿಸುತ್ತೇನೆ;
ನಿನ್ನ ಜನರೆಲ್ಲರ ಮುಂದೆ ನಿನ್ನ ಸ್ತೋತ್ರಗೀತೆಗಳನ್ನು ಹಾಡುತ್ತೇನೆ.”(A)
13 ಆತನು ಮತ್ತೆ ಹೇಳುತ್ತಾನೆ:
“ನಾನು ದೇವರಲ್ಲಿ ಭರವಸೆ ಇಡುತ್ತೇನೆ.”(B)
ಆತನು ಹೇಳುತ್ತಾನೆ:
“ನಾನಿಲ್ಲಿದ್ದೇನೆ. ದೇವರು ನನಗೆ ದಯಪಾಲಿಸಿರುವ ಮಕ್ಕಳು ನನ್ನೊಂದಿಗಿದ್ದಾರೆ.”(C)
14 ಆ ಮಕ್ಕಳು ಭೌತಿಕ ಶರೀರ ಹೊಂದಿದ್ದರು. ಆದ್ದರಿಂದ ಯೇಸು ತಾನೇ ಅವರಂತಾದನು. ಆತನು ತನ್ನ ಸಾವಿನ ಮೂಲಕ ಮರಣಾಧಿಕಾರಿಯನ್ನು ಅಂದರೆ ಸೈತಾನನನ್ನು ನಾಶಗೊಳಿಸಿ, 15 ಅವರನ್ನು ಬಿಡುಗಡೆಗೊಳಿಸಬೇಕೆಂದು, ಅವರಂತೆಯೇ ಆಗಿ, ಮರಣ ಹೊಂದಿದನು. ಅವರು ಮರಣಭಯದಿಂದ, ಜೀವಮಾನವೆಲ್ಲ ಗುಲಾಮರಂತೆ ಜೀವಿಸುತ್ತಿದ್ದರು. 16 ಆತನು ಸಹಾಯ ಮಾಡುವುದು ಅಬ್ರಹಾಮನ ಸಂತತಿಯವರಿಗೇ ಹೊರತು ದೇವದೂತರಿಗಲ್ಲ. 17 ಈ ಕಾರಣದಿಂದಲೇ ಆತನು ಎಲ್ಲಾ ವಿಧದಲ್ಲಿಯೂ ತನ್ನ ಸಹೋದರ ಸಹೋದರಿಯರಿಗೆ ಸಮಾನನಾಗಬೇಕಾಯಿತು. ದೇವರ ಸೇವೆಯಲ್ಲಿ ಆತನು ಜನರಿಗೆ ಕರುಣೆಯುಳ್ಳವನೂ ನಂಬಿಗಸ್ತನೂ ಆದ ಪ್ರಧಾನ ಯಾಜಕನಾದನು. ಹೀಗೆ ಆತನು ಜನರ ಪಾಪಗಳಿಗೆ ಕ್ಷಮೆಯನ್ನು ತರಲು ಸಾಧ್ಯವಾಯಿತು. 18 ತಾನೇ ಶೋಧಿಸಲ್ಪಟ್ಟು ಸಂಕಟಕ್ಕೆ ಒಳಗಾದುದರಿಂದ, ಶೋಧಿಸಲ್ಪಡುವ ಜನರಿಗೆ ಸಹಾಯ ಮಾಡಲು ಈಗ ಆತನು ಸಮರ್ಥನಾಗಿದ್ದಾನೆ.
Kannada Holy Bible: Easy-to-Read Version. All rights reserved. © 1997 Bible League International