Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 20

ರಚನೆಗಾರ: ದಾವೀದ.

20 ಇಕ್ಕಟ್ಟಿನಲ್ಲಿ ಯೆಹೋವನು ನಿನ್ನ ಮೊರೆಯನ್ನು ಕೇಳಲಿ.
    ಯಾಕೋಬನ ದೇವರು ನಿನ್ನ ಹೆಸರನ್ನು ಪ್ರಖ್ಯಾತಿಪಡಿಸಲಿ.
ಆತನು ತನ್ನ ಪವಿತ್ರ ಸ್ಥಳದಿಂದ ನಿನಗೆ ಸಹಾಯಮಾಡಲಿ.
    ಚೀಯೋನಿನಿಂದ ನಿನಗೆ ಆಧಾರ ನೀಡಲಿ.
ನೀನು ಅರ್ಪಿಸಿದ ಕಾಣಿಕೆಗಳನ್ನೆಲ್ಲ ಆತನು ಜ್ಞಾಪಿಸಿಕೊಳ್ಳಲಿ.
    ನಿನ್ನ ಯಜ್ಞಗಳನ್ನೆಲ್ಲ ಆತನು ಸ್ವೀಕರಿಸಿಕೊಳ್ಳಲಿ.
ಆತನು ನಿನ್ನ ಬಯಕೆಗಳನ್ನು ಈಡೇರಿಸಲಿ.
    ನಿನ್ನ ಆಲೋಚನೆಗಳನ್ನೆಲ್ಲ ನೆರವೇರಿಸಲಿ.
ದೇವರು ನಿನಗೆ ಸಹಾಯಮಾಡುವಾಗ ಹರ್ಷಿಸುವೆವು.
    ಆತನ ಹೆಸರನ್ನು ಕೊಂಡಾಡೋಣ.
    ಯೆಹೋವನು ನಿನ್ನ ಕೋರಿಕೆಗಳನ್ನೆಲ್ಲ ನೆರವೇರಿಸಲಿ.

ಯೆಹೋವನು ತಾನು ಅಭಿಷೇಕಿಸಿದ ರಾಜನಿಗೆ ಸಹಾಯಮಾಡುತ್ತಾನೆಂದು ಈಗ ನನಗೆ ಗೊತ್ತಾಯಿತು.
    ದೇವರು ತಾನು ಆರಿಸಿಕೊಂಡ ರಾಜನಿಗೆ ಪರಲೋಕದಿಂದ ಉತ್ತರಿಸಿದನು;
    ತನ್ನ ಮಹಾಶಕ್ತಿಯಿಂದ ಅವನನ್ನು ರಕ್ಷಿಸಿದನು.
ಕೆಲವರು ತಮ್ಮ ರಥಗಳಲ್ಲಿ ಭರವಸವಿಡುವರು.
    ಕೆಲವರು ತಮ್ಮ ಸೈನಿಕರುಗಳಲ್ಲಿ ಭರವಸವಿಡುವರು.
    ನಾವಾದರೋ ನಮ್ಮ ದೇವರಾದ ಯೆಹೋವನನ್ನೇ ಜ್ಞಾಪಿಸಿಕೊಳ್ಳುವೆವು.
ಅವರು ಸೋತುಹೋದರು; ಯುದ್ಧದಲ್ಲಿ ಸತ್ತುಹೋದರು;
    ನಾವಾದರೋ ಜಯಗಳಿಸಿದೆವು! ನಾವು ಜಯಪ್ರದರಾಗಿ ನಿಂತುಕೊಳ್ಳುವೆವು!

ಯಾಕೆಂದರೆ ಯೆಹೋವನು ತಾನು ಅಭಿಷೇಕಿಸಿದ ರಾಜನನ್ನು ರಕ್ಷಿಸಿದನು!
    ನಾವು ಸಹಾಯಕ್ಕಾಗಿ ಮೊರೆಯಿಟ್ಟಾಗ ಆತನು ಸದುತ್ತರವನ್ನು ದಯಪಾಲಿಸಿದನು.

ವಿಮೋಚನಕಾಂಡ 40:1-15

ಪವಿತ್ರಗುಡಾರದ ಸ್ಥಾಪನೆ

40 ತರುವಾಯ ಯೆಹೋವನು ಮೋಶೆಗೆ, “ಮೊದಲನೆಯ ತಿಂಗಳಿನ ಮೊದಲನೆಯ ದಿನದಲ್ಲಿ ದೇವದರ್ಶನಗುಡಾರವಾದ ಪವಿತ್ರಗುಡಾರವನ್ನು ಎತ್ತಿನಿಲ್ಲಿಸು. ಪವಿತ್ರಗುಡಾರದಲ್ಲಿ ಒಡಂಬಡಿಕೆಯ ಪೆಟ್ಟಿಗೆಯನ್ನು ಇಡು. ಪೆಟ್ಟಿಗೆಯನ್ನು ಪರದೆಯಿಂದ ಮುಚ್ಚಿಸು. ಬಳಿಕ ಮೇಜನ್ನು ಒಳಗೆ ತರಿಸಿ ಮೇಜಿನ ಮೇಲಿರಬೇಕಾದ ವಸ್ತುಗಳನ್ನು ಅದರ ಮೇಲಿರಿಸು. ದೀಪಸ್ತಂಭವನ್ನು ಗುಡಾರದಲ್ಲಿ ಇರಿಸು. ದೀಪಸ್ತಂಭದಲ್ಲಿ ಸರಿಯಾದ ಜಾಗಗಳಲ್ಲಿ ಹಣತೆಗಳನ್ನು ಇರಿಸು. ಗುಡಾರದೊಳಗೆ ಧೂಪವನ್ನು ಅರ್ಪಿಸಲು ಬಂಗಾರದ ವೇದಿಕೆಯನ್ನು ಇಡು. ವೇದಿಕೆಯನ್ನು ಒಡಂಬಡಿಕೆಯ ಪೆಟ್ಟಿಗೆಯ ಮುಂದಿರಿಸು. ಬಳಿಕ ಪವಿತ್ರಗುಡಾರದ ಪ್ರವೇಶದಲ್ಲಿ ಪರದೆಯನ್ನು ಇರಿಸು.

“ದೇವದರ್ಶನಗುಡಾರವಾದ ಪವಿತ್ರಗುಡಾರದ ಪ್ರವೇಶದ್ವಾರದ ಮುಂದೆ ಯಜ್ಞವೇದಿಕೆಯನ್ನು ಇರಿಸು. ಗಂಗಾಳವನ್ನು ದೇವದರ್ಶನಗುಡಾರ ಮತ್ತು ವೇದಿಕೆಯ ನಡುವೆ ಇರಿಸು. ಗಂಗಾಳದಲ್ಲಿ ನೀರನ್ನು ಹಾಕಿಸು. ಅಂಗಳದ ಸುತ್ತಲೂ ಪರದೆಗಳ ಗೋಡೆಯನ್ನು ನಿಲ್ಲಿಸು. ಬಳಿಕ ಅಂಗಳದ ಬಾಗಿಲಿಗೆ ಪರದೆಯನ್ನು ಹಾಕಬೇಕು.

“ಅಭಿಷೇಕತೈಲವನ್ನು ಉಪಯೋಗಿಸಿ ಪವಿತ್ರಗುಡಾರವನ್ನೂ ಅದರಲ್ಲಿರುವ ಪ್ರತಿಯೊಂದನ್ನೂ ಅಭಿಷೇಕಿಸು. ನೀನು ತೈಲವನ್ನು ಈ ವಸ್ತುಗಳ ಮೇಲೆ ಹಾಕುವಾಗ, ಅವುಗಳನ್ನು ಪವಿತ್ರಗೊಳಿಸುವೆ. 10 ಯಜ್ಞವೇದಿಕೆಯನ್ನು ಅಭಿಷೇಕಿಸು. ವೇದಿಕೆಯ ಮೇಲಿರುವ ಪ್ರತಿಯೊಂದನ್ನು ಅಭಿಷೇಕಿಸಿ ಪ್ರತಿಷ್ಠಿಸು. ಆಗ ಅದು ಬಹು ಪವಿತ್ರವಾಗುವುದು. 11 ಬಳಿಕ ಗಂಗಾಳವನ್ನೂ ಅದರ ಕೆಳಗಿರುವ ಪೀಠವನ್ನೂ ಅಭಿಷೇಕಿಸಿ ಪವಿತ್ರಗೊಳಿಸು.

12 “ಆರೋನನನ್ನೂ ಅವನ ಪುತ್ರರನ್ನೂ ದೇವದರ್ಶನಗುಡಾರದ ಬಾಗಿಲಿಗೆ ಕರೆಸು. ಅವರಿಗೆ ನೀರಿನಿಂದ ಸ್ನಾನ ಮಾಡಿಸು. 13 ಬಳಿಕ ಆರೋನನಿಗೆ ವಿಶೇಷ ಬಟ್ಟೆಯನ್ನು ತೊಡಿಸು. ತೈಲದಿಂದ ಅವನನ್ನು ಅಭಿಷೇಕಿಸಿ ಪವಿತ್ರಗೊಳಿಸು. ಆಗ ಅವನು ಯಾಜಕನಾಗಿ ನನ್ನ ಸೇವೆ ಮಾಡಬಹುದು. 14 ಬಳಿಕ ಅವನ ಪುತ್ರರಿಗೆ ಬಟ್ಟೆಗಳನ್ನು ತೊಡಿಸು. 15 ಅವರ ತಂದೆಯನ್ನು ಅಭಿಷೇಕಿಸಿದಂತೆ ಪುತ್ರರನ್ನೂ ಅಭಿಷೇಕಿಸು. ಆಗ ಅವರು ಯಾಜಕರಾಗಿ ತಲೆತಲೆಮಾರುಗಳವರೆಗೆ ನನ್ನ ಸೇವೆ ಮಾಡಬಹುದು. ನೀನು ಅವರನ್ನು ಅಭಿಷೇಕಿಸಿದಾಗ, ಅವರು ಯಾಜಕರಾಗುವರು. ಇನ್ನು ಮುಂದೆ ಆ ಕುಟುಂಬವು ಯಾಜಕರಾಗಿ ಮುಂದುವರಿಯುವುದು” ಎಂದು ಹೇಳಿದನು.

ಇಬ್ರಿಯರಿಗೆ 10:19-25

ಸಮೀಪಕ್ಕೆ ಬನ್ನಿರಿ

19-20 ಸಹೋದರ ಸಹೋದರಿಯರೇ, ನಾವು ಮಹಾ ಪವಿತ್ರಸ್ಥಳವನ್ನು ಪ್ರವೇಶಿಸಲು ಸಂಪೂರ್ಣವಾಗಿ ಸ್ವತಂತ್ರರಾಗಿದ್ದೇವೆ. ಯೇಸು ನಮಗಾಗಿ ತೆರೆದಿರುವ ಹೊಸ ಮಾರ್ಗದ ಮೂಲಕ ನಾವು ಭಯವಿಲ್ಲದೆ ಪ್ರವೇಶಿಸಬಹುದು. ಅದು ಜೀವವುಳ್ಳ ಮಾರ್ಗ. ಕ್ರಿಸ್ತನ ದೇಹವೆಂಬ ತೆರೆಯ ಮೂಲಕ ಈ ಹೊಸ ಮಾರ್ಗವು ನಮ್ಮನ್ನು ಮುಂದಕ್ಕೆ ಕೊಂಡೊಯ್ಯವುದು. 21 ದೇವರ ಮನೆಯನ್ನು ಆಳಲು ನಮಗೊಬ್ಬ ಶ್ರೇಷ್ಠ ಯಾಜಕನಿರುವನು. 22 ನಾವು ತೊಳೆಯಲ್ಪಟ್ಟವರಾಗಿದ್ದು ಕೆಟ್ಟ ಮನಸ್ಸಾಕ್ಷಿಯಿಂದ ಬಿಡುಗಡೆ ಹೊಂದಿದ್ದೇವೆ. ನಮ್ಮ ದೇಹಗಳನ್ನು ಶುದ್ಧವಾದ ನೀರಿನಿಂದ ತೊಳೆಯಲಾಗಿದೆ. ಆದ್ದರಿಂದ ಪೂರ್ಣನಂಬಿಕೆಯಿಂದಲೂ ಶುದ್ಧವಾದ ಹೃದಯದಿಂದಲೂ ದೇವರ ಬಳಿಗೆ ಬರೋಣ. 23 ನಮ್ಮಲ್ಲಿರುವ ನಿರೀಕ್ಷೆಯನ್ನು ದೃಢವಾಗಿ ಕಾಯ್ದುಕೊಂಡು ಅದರ ಬಗ್ಗೆ ಜನರಿಗೆ ತಿಳಿಸುವುದರಲ್ಲಿ ದೃಢವಾಗಿರೋಣ. ದೇವರು ತನ್ನ ವಾಗ್ದಾನವನ್ನು ಈಡೇರಿಸುತ್ತಾನೆ ಎಂಬ ಭರವಸೆ ನಮ್ಮಲ್ಲಿರಬೇಕು.

ಒಬ್ಬರಿಗೊಬ್ಬರು ಸಹಾಯಮಾಡಿ ಶಕ್ತಿಯುಳ್ಳವರಾಗಿರಿ

24 ಒಬ್ಬರಿಗೊಬ್ಬರು ಹಿತಚಿಂತಕರಾಗಿರೋಣ. ಆಗ ಒಬ್ಬರಿಗೊಬ್ಬರು ಪ್ರೀತಿಯನ್ನು ತೋರ್ಪಡಿಸುವುದಕ್ಕೂ ಒಳ್ಳೆಯಕಾರ್ಯಗಳನ್ನು ಮಾಡುವುದಕ್ಕೂ ಪ್ರೋತ್ಸಾಹಿಸಲು ಸಾಧ್ಯವಾಗುತ್ತದೆ. 25 ನಾವು ಸಭೆಯಾಗಿ ಸೇರಿಬರುವುದನ್ನು ಬಿಡಬಾರದು. ಕೆಲವರು ಸಭೆಗೆ ಬರುತ್ತಿಲ್ಲ. ನಾವು ಒಟ್ಟಾಗಿ ಸೇರಿಬಂದು ಒಬ್ಬರನ್ನೊಬ್ಬರು ಬಲಪಡಿಸಬೇಕು. ಯೇಸುವು ಪ್ರತ್ಯಕ್ಷನಾಗುವ ದಿನ[a] ಸಮೀಪವಾಗುತ್ತಿರುವುದರಿಂದ ನೀವು ಇದನ್ನು ಮತ್ತಷ್ಟು ಹೆಚ್ಚಾಗಿ ಮಾಡಬೇಕು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International