Revised Common Lectionary (Semicontinuous)
ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.
126 ಯೆಹೋವನು ನಮ್ಮನ್ನು ಸೆರೆಯಿಂದ ತಿರಿಗಿ
ಚೀಯೋನಿಗೆ ಬರಮಾಡಿದಾಗ ನಾವು ಕನಸು ಕಂಡವರಂತಿದ್ದೆವು!
2 ನಾವು ನಗುತ್ತಿದ್ದೆವು; ಹರ್ಷಗೀತೆಗಳನ್ನು ಹಾಡುತ್ತಿದ್ದೆವು.
“ಯೆಹೋವನು ಇಸ್ರೇಲರಿಗೆ ಮಹತ್ಕಾರ್ಯಗಳನ್ನು ಮಾಡಿದ್ದಾನೆ”
ಎಂದು ಅನ್ಯ ಜನಾಂಗಗಳು ಮಾತಾಡಿಕೊಂಡರು.
3 ಹೌದು, ನಾವು ಸಂತೋಷದಿಂದ್ದೇವೆ ಯಾಕೆಂದರೆ ಯೆಹೋವನು ನಮಗೋಸ್ಕರ ಮಹತ್ಕಾರ್ಯಗಳನ್ನು ಮಾಡಿದನು.
4 ಯೆಹೋವನೇ, ಬತ್ತಿಹೋದ ತೊರೆಗಳು ನೀರಿನಿಂದ
ಮತ್ತೆ ತುಂಬಿ ಹರಿಯುವಂತೆ ನಮ್ಮನ್ನು ಬಿಡಿಸು.
5 ಅಳುತ್ತಾ ಬೀಜವನ್ನು ಬಿತ್ತುವವನು
ಹರ್ಷದಿಂದ ಕೊಯ್ಯುವನು.
6 ಅಳುತ್ತಾ ಹೊಲಕ್ಕೆ ಬೀಜವನ್ನು ಹೊತ್ತುಕೊಂಡು ಹೋಗುವವನು
ಹರ್ಷದಿಂದ ಸಿವುಡುಗಳನ್ನು ಹೊತ್ತುಕೊಂಡು ಬರುವನು!
ದೇವರು ಯಾವಾಗಲೂ ತನ್ನ ಜನರೊಂದಿಗಿರುವನು
43 ಯಾಕೋಬೇ, ಯೆಹೋವನು ನಿನ್ನನ್ನು ನಿರ್ಮಿಸಿದನು. ಇಸ್ರೇಲೇ, ಯೆಹೋವನು ನಿನ್ನನ್ನು ನಿರ್ಮಿಸಿದನು. ಈಗ ಆತನು ಹೇಳುವುದೇನೆಂದರೆ: “ಭಯಪಡಬೇಡ. ನಾನೇ ನಿನ್ನನ್ನು ರಕ್ಷಿಸಿದ್ದೇನೆ. ನಾನು ನಿನಗೆ ಹೆಸರಿಟ್ಟೆನು. ನೀನು ನನ್ನವನೇ. 2 ನಿನ್ನ ಕಷ್ಟಕಾಲದಲ್ಲಿ ನಾನು ನಿನ್ನೊಂದಿಗಿರುವೆನು. ನೀನು ಜಲರಾಶಿಯನ್ನು ಹಾದುಹೋಗುವಾಗ ನಾನೇ ನಿನ್ನೊಂದಿಗಿರುವೆ. ನೀನು ನದಿಗಳನ್ನು ದಾಟುವಾಗ ಅಪಾಯಕ್ಕೆ ಗುರಿಯಾಗದಿರುವೆ. ಬೆಂಕಿಯೊಳಗಿಂದ ನಡೆಯುವಾಗ ನಿನಗೆ ಹಾನಿಯಾಗದು. 3 ಯಾಕೆಂದರೆ ಯೆಹೋವನಾದ ನಾನೇ ನಿನ್ನ ದೇವರು. ಇಸ್ರೇಲಿನ ಪರಿಶುದ್ಧನಾದ ನಾನೇ ನಿನ್ನ ರಕ್ಷಕನು. ಈಜಿಪ್ಟನ್ನು ನಿನ್ನ ವಿಮೋಚನೆಗೆ ಈಡುಮಾಡಿದ್ದೇನೆ; ನಿನ್ನನ್ನು ನನ್ನವನನ್ನಾಗಿ ಮಾಡಿಕೊಳ್ಳಲು ನಿನಗೆ ಕೂಷ್ ಮತ್ತು ಸೆಬಾ ಸೀಮೆಗಳನ್ನು ಕೊಟ್ಟೆನು. 4 ನೀನು ನನಗೆ ಅಮೂಲ್ಯನಾದುದರಿಂದ ನಾನು ನಿನ್ನನ್ನು ಗೌರವಿಸಿ ಪ್ರೀತಿಸುವೆನು. ನೀನು ವಾಸಿಸುವಂತೆ ನಾನು ನಿನಗೆ ಎಲ್ಲಾ ಜನರನ್ನು ಮತ್ತು ಜನಾಂಗಗಳನ್ನು ಕೊಡುವೆನು.
5 “ಆದ್ದರಿಂದ ಭಯಪಡಬೇಡ, ನಾನೇ ನಿನ್ನೊಂದಿಗಿದ್ದೇನೆ. ನಾನು ನಿನ್ನ ಮಕ್ಕಳನ್ನು ಒಟ್ಟುಗೂಡಿಸಿ ನಿನ್ನ ಬಳಿಗೆ ಕರೆತರುವೆನು. ನಾನು ಪೂರ್ವಪಶ್ಚಿಮ ದಿಕ್ಕುಗಳಿಂದ ಅವರನ್ನು ಒಟ್ಟುಗೂಡಿಸುವೆನು. 6 ನಾನು ಉತ್ತರಕ್ಕೆ ‘ನನ್ನ ಜನರನ್ನು ಬಿಟ್ಟುಕೊಡು’ ಎಂದು ಹೇಳುವೆನು. ದಕ್ಷಿಣಕ್ಕೆ, ‘ನನ್ನ ಜನರನ್ನು ಸೆರೆಮನೆಯಲ್ಲಿರಿಸಬೇಡ’ ಎಂದು ಹೇಳುವೆನು. ಬಹುದೂರ ದೇಶಗಳಿಂದ ನನ್ನ ಮಕ್ಕಳನ್ನು ನನ್ನ ಬಳಿಗೆ ಕರೆದುಕೊಂಡು ಬಾ. 7 ನನ್ನ ಹೆಸರನ್ನು ಹೊಂದಿರುವ ನನ್ನ ಜನರನ್ನೆಲ್ಲಾ ನನ್ನ ಬಳಿಗೆ ಕರೆದುಕೊಂಡು ಬಾ. ನನಗಾಗಿಯೇ ನಿರ್ಮಿಸಿದ ನನ್ನ ಜನರನ್ನು ನನ್ನ ಬಳಿಗೆ ಕರೆದುಕೊಂಡು ಬಾ. ಅವರನ್ನು ನಿರ್ಮಿಸಿದಾತನು ನಾನೇ, ಅವರು ನನ್ನವರೇ!
ತಿಮೊಥೆ ಮತ್ತು ಎಪಫ್ರೊದೀತರ ಸುದ್ದಿ
19 ನಿಮ್ಮ ಬಳಿಗೆ ತಿಮೊಥೆಯನನ್ನು ಆದಷ್ಟು ಬೇಗನೆ ಕಳುಹಿಸಿಕೊಡಲು ಪ್ರಭುವಾದ ಯೇಸುವಿನಲ್ಲಿ ನಿರೀಕ್ಷಿಸುತ್ತಿದ್ದೇನೆ. ಅವನ ಮೂಲಕ ನಿಮ್ಮ ಯೋಗಕ್ಷೇವುವನ್ನು ತಿಳಿದುಕೊಳ್ಳುವುದರಿಂದ ನನಗೆ ಪ್ರೋತ್ಸಾಹವಾಗಬಹುದು. 20 ಅವನಂತೆ ನಿಮ್ಮ ವಿಷಯದಲ್ಲಿ ನಿಜವಾಗಿಯೂ ಚಿಂತಿಸುವವರು ನನ್ನ ಬಳಿ ಯಾರೂ ಇಲ್ಲ. 21 ಉಳಿದವರು ಕೇವಲ ತಮ್ಮ ಬಗ್ಗೆ ಚಿಂತಿಸುತ್ತಾರೆಯೇ ಹೊರತು ಕ್ರಿಸ್ತ ಯೇಸುವಿನ ಸೇವೆಯ ಬಗ್ಗೆ ಚಿಂತಿಸುವುದಿಲ್ಲ. 22 ತಿಮೊಥೆಯನು ಎಂಥವನೆಂಬುದು ನಿಮಗೆ ಗೊತ್ತಿದೆ. ಮಗನು ತನ್ನ ತಂದೆಯೊಡನೆ ಸೇವೆ ಮಾಡುವಂತೆ ಅವನು ಸುವಾರ್ತೆಯನ್ನು ತಿಳಿಸುವುದರಲ್ಲಿ ನನ್ನೊಂದಿಗೆ ಸೇವೆ ಮಾಡಿದನು. 23 ನನ್ನ ಬಗ್ಗೆ ನಡೆಯುತ್ತಿರುವ ವಿಚಾರಣೆಯ ಫಲಿತಾಂಶವು ತಿಳಿದಕೂಡಲೇ ಅವನನ್ನು ನಿಮ್ಮ ಬಳಿಗೆ ಕಳುಹಿಸುತ್ತೇನೆ. 24 ಅಲ್ಲದೆ ಪ್ರಭುವಿನ ಸಹಾಯದಿಂದ ನಿಮ್ಮ ಬಳಿಗೆ ಅದಷ್ಟು ಬೇಗನೆ ಬರುತ್ತೇನೆ ಎಂಬ ಭರವಸೆ ನನಗಿದೆ.
Kannada Holy Bible: Easy-to-Read Version. All rights reserved. © 1997 Bible League International