Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 53

ರಚನೆಗಾರ: ದಾವೀದ.

53 ಮೂಢರು ದೇವರಿಲ್ಲವೆಂದು ಮನಸ್ಸಿನಲ್ಲಿ ಅಂದುಕೊಳ್ಳುವರು.
    ಅವರು ಕೆಟ್ಟುಹೋಗಿದ್ದಾರೆ; ದುಷ್ಕೃತ್ಯಗಳನ್ನು ನಡೆಸುವವರಾಗಿದ್ದಾರೆ.
    ಅವರು ಒಳ್ಳೆಯದನ್ನು ಮಾಡುವುದೇ ಇಲ್ಲ.
ಮನುಷ್ಯರಲ್ಲಿ ತನಗೋಸ್ಕರ ಹುಡುಕುತ್ತಿರುವ ಬುದ್ಧಿವಂತರು ಇದ್ದಾರೋ
    ಎಂದು ದೇವರು ಪರಲೋಕದಿಂದ ನೋಡುತ್ತಿದ್ದಾನೆ.
ಆದರೆ ಪ್ರತಿಯೊಬ್ಬರೂ ದೇವರಿಗೆ ವಿಮುಖರಾಗಿದ್ದಾರೆ.
    ಪ್ರತಿಯೊಬ್ಬನೂ ಕೆಟ್ಟುಹೋಗಿದ್ದಾನೆ.
ಯಾವನೂ ಒಳ್ಳೆಯದನ್ನು ಮಾಡುತ್ತಿಲ್ಲ.
    ಇಲ್ಲ, ಒಬ್ಬನಾದರೂ ಮಾಡುತ್ತಿಲ್ಲ!

ದೇವರು ಹೀಗೆನ್ನುತ್ತಾನೆ: “ಆ ದುಷ್ಟರಿಗೆ ಖಂಡಿತವಾಗಿ ಸತ್ಯವು ತಿಳಿದಿದೆ!
    ಆದರೆ ಅವರು ನನ್ನಲ್ಲಿ ಪ್ರಾರ್ಥಿಸುತ್ತಿಲ್ಲ.
    ಆಹಾರ ತಿನ್ನುವಂತೆ ಅವರು ನನ್ನ ಜನರನ್ನು ನಾಶಮಾಡಲು ಸಿದ್ಧರಾಗಿದ್ದಾರೆ.”

ಆ ದುಷ್ಟರು ಹಿಂದೆಂದೂ ಭಯಗೊಂಡಿಲ್ಲದ ರೀತಿಯಲ್ಲಿ ಭಯಭ್ರಾಂತರಾಗುವರು!
    ಅವರು ಇಸ್ರೇಲರ ಶತ್ರುಗಳು.
ದೇವರು ಅವರನ್ನು ತಿರಸ್ಕರಿಸಿದ್ದಾನೆ.
    ಆದ್ದರಿಂದ ದೇವಜನರು ಅವರನ್ನು ಸೋಲಿಸುವರು,
ದೇವರು ಆ ದುಷ್ಟರ ಎಲುಬುಗಳನ್ನು ಚದರಿಸಿಬಿಡುವನು.

ಚೀಯೋನ್ ಪರ್ವತದ ಮೇಲಿರುವಾತನು
    ಇಸ್ರೇಲಿಗೆ ಜಯವನ್ನು ತರುವನು!
ಆಗ ದೇವರು ತನ್ನ ಜನರನ್ನು ಸೆರೆವಾಸದಿಂದ ಬರಮಾಡುವನು.
    ಯಾಕೋಬನೇ ಉಲ್ಲಾಸಿಸು!
    ಇಸ್ರೇಲೇ ಬಹು ಸಂತೋಷಪಡು.

2 ರಾಜರುಗಳು 4:1-7

ವಿಧವೆಯ ಬೇಡಿಕೆ

ಒಂದು ದಿನ ಪ್ರವಾದಿಮಂಡಲಿಯವರಲ್ಲೊಬ್ಬನ ಪತ್ನಿಯು ಗೋಳಾಡುತ್ತಾ ಎಲೀಷನಲ್ಲಿಗೆ ಹೋಗಿ, “ನನ್ನ ಗಂಡನು ನಿನಗೆ ಸೇವಕನಂತಿದ್ದನು. ಈಗ ನನ್ನ ಗಂಡ ಸತ್ತಿದ್ದಾನೆ! ಅವನು ಯೆಹೋವನಲ್ಲಿ ಭಯಭಕ್ತಿ ಉಳ್ಳವನಾಗಿದ್ದದು ನಿನಗೆ ತಿಳಿದಿದೆ. ಆದರೆ ಅವನು ಒಬ್ಬ ಮನುಷ್ಯನಿಗೆ ಹಣವನ್ನು ಕೊಡಬೇಕಾಗಿದೆ. ಈಗ ಆ ಮನುಷ್ಯನು ನನ್ನ ಎರಡು ಗಂಡುಮಕ್ಕಳನ್ನು ತೆಗೆದುಕೊಂಡು ತನ್ನ ಗುಲಾಮರನ್ನಾಗಿ ಮಾಡಿಕೊಳ್ಳಲು ಬರುತ್ತಿದ್ದಾನೆ!” ಎಂದು ಹೇಳಿದಳು.

ಎಲೀಷನು, “ನಾನು ನಿನಗೆ ಹೇಗೆ ಸಹಾಯ ಮಾಡಲಿ? ನಿನ್ನ ಮನೆಯಲ್ಲಿ ಏನಿದೆ? ನನಗೆ ಅದನ್ನು ತಿಳಿಸು” ಎಂದು ಕೇಳಿದನು.

ಆ ಸ್ತ್ರೀಯು, “ನನ್ನ ಮನೆಯಲ್ಲಿ ನನ್ನ ಹತ್ತಿರ ಏನೂ ಇಲ್ಲ. ನನ್ನ ಹತ್ತಿರ ಒಂದು ಪಾತ್ರೆ ಆಲೀವ್ ಎಣ್ಣೆ ಮಾತ್ರ ಇದೆ” ಎಂದು ಹೇಳಿದಳು.

ಆಗ ಎಲೀಷನು, “ಹೋಗಿ ನಿನ್ನ ನೆರೆಯವರೆಲ್ಲರಿಂದ ಪಾತ್ರೆಗಳನ್ನು ತೆಗೆದುಕೊ. ಅವು ಬರಿದಾಗಿರಬೇಕು. ಆದಷ್ಟು ಪಾತ್ರೆಗಳನ್ನು ತೆಗೆದುಕೊ. ನಂತರ ನಿನ್ನ ಮನೆಗೆ ಹೋಗಿ ಬಾಗಿಲುಗಳನ್ನು ಮುಚ್ಚು. ನೀನು ಮತ್ತು ನಿನ್ನ ಮಕ್ಕಳು ಮಾತ್ರ ಮನೆಯಲ್ಲಿರಬೇಕು. ಈ ಪಾತ್ರೆಗಳಿಗೆಲ್ಲಾ ಎಣ್ಣೆಯನ್ನು ತುಂಬಿಸಿ ಪ್ರತ್ಯೇಕವಾದ ಸ್ಥಳದಲ್ಲಿಡು” ಎಂದು ಹೇಳಿದನು.

ಆ ಸ್ತ್ರೀಯು ಎಲೀಷನ ಬಳಿಯಿಂದ ತನ್ನ ಮನೆಯೊಳಕ್ಕೆ ಹೋಗಿ ಬಾಗಿಲನ್ನು ಮುಚ್ಚಿದಳು. ಅವಳು ಮತ್ತು ಅವಳ ಮಕ್ಕಳು ಮಾತ್ರ ಮನೆಯಲ್ಲಿದ್ದರು. ಅವಳ ಮಕ್ಕಳು ಪಾತ್ರೆಗಳನ್ನು ಅವಳ ಬಳಿಗೆ ತಂದರು; ಅವಳು ಆ ಪಾತ್ರೆಗಳಿಗೆ ಎಣ್ಣೆಯನ್ನು ಸುರಿದಳು. ಅವಳು ಅನೇಕ ಪಾತ್ರೆಗಳನ್ನು ತುಂಬಿಸಿಟ್ಟು ತನ್ನ ಮಗನಿಗೆ, “ಇನ್ನೊಂದು ಪಾತ್ರೆಯನ್ನು ನನ್ನ ಬಳಿಗೆ ತೆಗೆದುಕೊಂಡು ಬಾ” ಎಂದಳು.

ಆದರೆ ಎಲ್ಲಾ ಪಾತ್ರೆಗಳು ತುಂಬಿಹೋಗಿದ್ದವು. ಅವಳ ಮಕ್ಕಳಲ್ಲಿ ಒಬ್ಬನು, “ಇಲ್ಲಿ ಯಾವ ಪಾತ್ರೆಗಳೂ ಇಲ್ಲ” ಎಂದು ಹೇಳಿದನು. ಆ ಸಮಯಕ್ಕೆ ಸರಿಯಾಗಿ ಪಾತ್ರೆಯಲ್ಲಿದ್ದ ಎಣ್ಣೆಯು ಮುಗಿದಿತ್ತು.

ಆಗ ಆ ಸ್ತ್ರೀಯು ದೇವರ ಮನುಷ್ಯನ (ಎಲೀಷನ) ಬಳಿಗೆ ಬಂದು ನಡೆದದ್ದನ್ನೆಲ್ಲಾ ತಿಳಿಸಿದಳು. ಎಲೀಷನು ಅವಳಿಗೆ, “ಹೋಗು, ಎಣ್ಣೆಯನ್ನು ಮಾರಾಟಮಾಡಿ, ನಿನ್ನ ಸಾಲವನ್ನು ತೀರಿಸು. ಉಳಿದ ಹಣದಲ್ಲಿ ನೀನು ಮತ್ತು ನಿನ್ನ ಮಕ್ಕಳು ಜೀವನಮಾಡಿ” ಎಂದು ಹೇಳಿದನು.

ಲೂಕ 9:10-17

ಐದು ಸಾವಿರಕ್ಕಿಂತಲೂ ಹೆಚ್ಚು ಜನರಿಗೆ ಊಟ

(ಮತ್ತಾಯ 14:13-21; ಮಾರ್ಕ 6:30-44; ಯೋಹಾನ 6:1-14)

10 ಅಪೊಸ್ತಲರು ಸುವಾರ್ತಾ ಪ್ರಯಾಣದಿಂದ ಹಿಂತಿರುಗಿ ಬಂದು, ತಾವು ಮಾಡಿದ ಸಂಗತಿಗಳನ್ನು ಯೇಸುವಿಗೆ ತಿಳಿಸಿದರು. ಆಗ ಆತನು ಅವರನ್ನು ಬೆತ್ಸಾಯಿದ ಊರಿನ ಸಮೀಪಕ್ಕೆ ಪ್ರತ್ಯೇಕವಾಗಿ ಕರೆದುಕೊಂಡು ಹೋದನು. ಅಲ್ಲಿ ಯೇಸು ಮತ್ತು ಆತನ ಅಪೊಸ್ತಲರನ್ನು ಬಿಟ್ಟು ಬೇರೆ ಯಾರೂ ಇರಲಿಲ್ಲ. 11 ಆದರೆ ಯೇಸು ಅಲ್ಲಿಗೆ ಹೋದದ್ದು ಜನರಿಗೆ ತಿಳಿಯಿತು. ಅವರು ಆತನನ್ನು ಹಿಂಬಾಲಿಸಿದರು. ಯೇಸು ಅವರನ್ನು ಸ್ವಾಗತಿಸಿ ದೇವರ ರಾಜ್ಯದ ಬಗ್ಗೆ ಅವರಿಗೆ ತಿಳಿಸಿದನು; ಕಾಯಿಲೆಯ ಜನರನ್ನು ವಾಸಿಮಾಡಿದನು.

12 ಅಂದು ಸಾಯಂಕಾಲ, ಹನ್ನೆರಡು ಮಂದಿ ಅಪೊಸ್ತಲರು ಯೇಸುವಿನ ಬಳಿಗೆ ಬಂದು, “ಈ ಸ್ಥಳದಲ್ಲಿ ಯಾರೂ ವಾಸವಾಗಿಲ್ಲ. ಆದ್ದರಿಂದ ಜನರನ್ನು ಕಳುಹಿಸಿಬಿಡು. ಅವರು ಸುತ್ತಮುತ್ತಲಿರುವ ಹೊಲಗಳಿಗೂ ಊರುಗಳಿಗೂ ಹೋಗಿ ಆಹಾರವನ್ನು ಕೊಂಡುಕೊಳ್ಳಲಿ ಮತ್ತು ರಾತ್ರಿ ನಿದ್ರಿಸಲು ಸ್ಥಳವನ್ನು ಹುಡುಕಿಕೊಳ್ಳಲಿ” ಎಂದು ಹೇಳಿದರು.

13 ಆದರೆ ಯೇಸು ಅಪೊಸ್ತಲರಿಗೆ, “ನೀವೇ ಅವರಿಗೆ ಸ್ವಲ್ಪ ಆಹಾರ ಕೊಡಿರಿ” ಎಂದು ಹೇಳಿದನು.

ಅದಕ್ಕೆ ಅಪೊಸ್ತಲರು, “ನಮ್ಮಲ್ಲಿ ಕೇವಲ ಐದು ರೊಟ್ಟಿ ಮತ್ತು ಎರಡು ಮೀನುಗಳಿವೆ. ನಾವೇ ಹೋಗಿ ಈ ಜನರಿಗೆಲ್ಲಾ ಆಹಾರವನ್ನು ಕೊಂಡುಕೊಳ್ಳಬೇಕೇ?” ಎಂದು ಕೇಳಿದರು. 14 (ಅಲ್ಲಿ ಸುಮಾರು ಐದು ಸಾವಿರ ಮಂದಿ ಗಂಡಸರು ಇದ್ದರು.)

ಯೇಸು ತನ್ನ ಶಿಷ್ಯರಿಗೆ, “ಇವರನ್ನು ಸುಮಾರು ಐವತ್ತೈವತ್ತು ಜನರಂತೆ ಸಾಲಾಗಿ ಕುಳ್ಳಿರಿಸಿರಿ” ಅಂದನು.

15 ಅಂತೆಯೇ ಶಿಷ್ಯರು ಮಾಡಿದರು. ಜನರೆಲ್ಲರೂ ನೆಲದ ಮೇಲೆ ಕುಳಿತುಕೊಂಡರು. 16 ಆಗ ಯೇಸು ಐದು ರೊಟ್ಟಿ ಮತ್ತು ಎರಡು ಮೀನುಗಳನ್ನು ಕೈಯಲ್ಲಿ ತೆಗೆದುಕೊಂಡು, ಆಕಾಶದ ಕಡೆಗೆ ನೋಡಿ, ಅವುಗಳಿಗಾಗಿ ದೇವರಿಗೆ ಸ್ತೋತ್ರ ಸಲ್ಲಿಸಿದನು. ಬಳಿಕ ಯೇಸು ಅವುಗಳನ್ನು ಮುರಿದು ಶಿಷ್ಯರಿಗೆ ಕೊಟ್ಟು ಜನರಿಗೆ ಹಂಚಬೇಕೆಂದು ಹೇಳಿದನು. 17 ಎಲ್ಲರೂ ತಿಂದು ತೃಪ್ತರಾದರು. ತಿನ್ನಲಾರದೆ ಬಿಟ್ಟಿದ್ದ ಆಹಾರದ ತುಂಡುಗಳನ್ನು ಶೇಖರಿಸಿದಾಗ ಹನ್ನೆರಡು ಬುಟ್ಟಿಗಳು ತುಂಬಿಹೋದವು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International