Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 39

ರಚನೆಗಾರ: ದಾವೀದ.

39 “ನಾನು ಜಾಗರೂಕನಾಗಿ ಮಾತಾಡುವೆ.
    ನನ್ನ ನಾಲಿಗೆ ನನ್ನನ್ನು ಪಾಪಕ್ಕೆ ಸಿಕ್ಕಿಸದಂತೆ ನೋಡಿಕೊಳ್ಳುವೆ.
    ದುಷ್ಟರ ಮಧ್ಯದಲ್ಲಿ ಬಾಯಿಮುಚ್ಚಿಕೊಂಡಿರುವೆ” ಅಂದುಕೊಂಡೆನು.

ನಾನು ಮೌನವಾಗಿದ್ದೆನು.
    ಒಳ್ಳೆಯದನ್ನೂ ಹೇಳದೆ ಸುಮ್ಮನಿದ್ದೆನು.
    ಆದರೆ ನನ್ನ ವೇದನೆಯು ಹೆಚ್ಚಾಯಿತು.
ನಾನು ಬಹುಕೋಪಗೊಂಡಿದ್ದೆ.
    ಅದರ ಕುರಿತು ಆಲೋಚಿಸಿದಷ್ಟೂ ಕೋಪವು ಅಧಿಕವಾಯಿತು.
    ಆಗ ನಾನು ಬಾಯಿತೆರೆದು,

ಯೆಹೋವನೇ, ನನ್ನ ಗತಿಯನ್ನು ತಿಳಿಸು!
    ನನ್ನ ಈ ಅಲ್ಪ ಜೀವಿತವು ಇನ್ನೆಷ್ಟು ಕಾಲವಿರುವುದು?
    ನಾನೆಷ್ಟು ಕಾಲ ಬದುಕುವೆ?
ನೀನು ನನಗೆ ಕೇವಲ ಅಲ್ಪಾಯುಷ್ಯವನ್ನು ಕೊಟ್ಟಿರುವೆ.
    ನನ್ನ ಅಲ್ಪ ಜೀವಿತವು ನಿನ್ನ ದೃಷ್ಟಿಯಲ್ಲಿ ಗಣನೆಗೂ ಬಾರದು.
ಮನುಷ್ಯನ ಜೀವಿತವು ಕೇವಲ ಮೋಡದಂತೆ ಕ್ಷಣಿಕವಾಗಿದೆ.
    ಯಾವನೂ ಸದಾಕಾಲ ಬದುಕುವುದಿಲ್ಲ!

ನಮ್ಮ ಜೀವಿತವು ಕೇವಲ ಕನ್ನಡಿಯ ಪ್ರತಿಬಿಂಬದಂತಿದೆ.
    ನಾವು ಗಡಿಬಿಡಿಯಿಂದ ಆಸ್ತಿಯನ್ನು ಕೂಡಿಸಿಟ್ಟುಕೊಳ್ಳುತ್ತೇವೆ.
    ನಾವು ಸತ್ತ ಮೇಲೆ ಅವು ಯಾರ ಪಾಲಾಗುವುದೋ ನಮಗೆ ತಿಳಿಯದು.

ಯೆಹೋವನೇ, ನನಗಿರುವ ನಿರೀಕ್ಷೆ ಯಾವುದು?
    ನನ್ನ ನಿರೀಕ್ಷೆಯು ನೀನೇ.
ನನ್ನ ಎಲ್ಲಾ ಅಪರಾಧಗಳಿಂದ ನನ್ನನ್ನು ಬಿಡಿಸು.
    ಮೂರ್ಖರ ನಿಂದೆಗೆ ನನ್ನನ್ನು ಗುರಿಮಾಡಬೇಡ.
ನಾನು ಬಾಯಿತೆರೆದು ಮಾತಾಡುವುದಿಲ್ಲ.
    ನೀನು ನ್ಯಾಯಕ್ಕೆ ತಕ್ಕಂತೆ ಮಾಡಿರುವೆ.
10 ನನ್ನನ್ನು ಶಿಕ್ಷಿಸುವುದನ್ನು ನಿಲ್ಲಿಸು.
    ಇಲ್ಲವಾದರೆ, ನಾನು ಸತ್ತೇ ಹೋಗುವೆನು.
11 ನೀನು ಅಪರಾಧಗಳಿಗೆ ತಕ್ಕಂತೆ ಜನರನ್ನು ದಂಡಿಸಿ, ನಿನ್ನ ಜೀವಮಾರ್ಗವನ್ನು ಅವರಿಗೆ ಉಪದೇಶಿಸುವೆ.
    ನುಸಿಯು ಬಟ್ಟೆಯನ್ನು ತಿಂದುಬಿಡುವಂತೆ ಜನರಿಗೆ ಇಷ್ಟವಾದವುಗಳನ್ನು ನೀನು ನಾಶಮಾಡುವೆ.
    ಹೌದು, ನಮ್ಮ ಜೀವಿತಗಳು ಬೇಗನೆ ಕಣ್ಮರೆಯಾಗುವ ಒಂದು ಚಿಕ್ಕ ಮೋಡದಂತಿವೆ.

12 ಯೆಹೋವನೇ, ನನ್ನ ಪ್ರಾರ್ಥನೆಯನ್ನು ಕೇಳು!
    ನನ್ನ ಮೊರೆಗೆ ಕಿವಿಗೊಡು!
    ನನ್ನ ಕಣ್ಣೀರನ್ನು ನೋಡು!
ನಾನು ಈ ಜೀವಿತವನ್ನು ಕೇವಲ ಒಬ್ಬ ಪ್ರಯಾಣಿಕನಂತೆ ನಿನ್ನೊಂದಿಗೆ ಸಾಗಿಸುತ್ತಿರುವೆ.
    ನನ್ನ ಎಲ್ಲಾ ಪೂರ್ವಿಕರಂತೆ, ನಾನು ಇಲ್ಲಿ ಕೇವಲ ಸ್ವಲ್ಪಕಾಲ ಜೀವಿಸುವೆನು.
13 ನೀನು ಕೋಪದಿಂದ ನನ್ನ ಕಡೆಗೆ ನೋಡಬೇಡ! ಸಾಯುವುದಕ್ಕಿಂತ ಮೊದಲು ನನಗೆ ಸಂತೋಷವಿರಲಿ.
    ಇನ್ನು ಸ್ವಲ್ಪಕಾಲದಲ್ಲಿ ನಾನು ಇಲ್ಲವಾಗುವೆನು!

ಯೆಹೆಜ್ಕೇಲ 17:1-10

ಹದ್ದುಗಳು ಮತ್ತು ದಾಕ್ಷಾಲತೆಗಳು

17 ಯೆಹೋವನ ಮಾತುಗಳು ನನಗೆ ಬಂದವು. ಆತನು ಹೇಳಿದ್ದೇನೆಂದರೆ, “ನರಪುತ್ರನೇ, ಈ ಕಥೆಯನ್ನು ಇಸ್ರೇಲ್ ಜನಾಂಗಕ್ಕೆ ಹೇಳು. ಇದರ ಅರ್ಥವೇನೆಂದು ಅವರನ್ನು ಕೇಳು. ಅವರಿಗೆ ಹೀಗೆ ಹೇಳು, ದೇವರಾದ ಯೆಹೋವನು ಹೀಗೆನ್ನುತ್ತಾನೆ:

“‘ಅಗಲವಾದ ರೆಕ್ಕೆಗಳುಳ್ಳ ದೊಡ್ಡ ಹದ್ದು (ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು) ಲೆಬನೋನಿಗೆ ಬಂದಿತು.
    ಅದರ ರೆಕ್ಕೆಗಳು ಅನೇಕ ಚುಕ್ಕೆಗಳನ್ನು ಹೊಂದಿತ್ತು.
ಆ ಹದ್ದು ದೇವದಾರು ಮರದ (ಯೆಹೂದದ ರಾಜನಾದ ಯೆಹೋಯಾಖೀನ್) ಮೇಲ್ಭಾಗವನ್ನು ಮುರಿದುಬಿಟ್ಟಿತು.
    ಅದನ್ನು ವ್ಯಾಪಾರಿಗಳ ದೇಶಕ್ಕೆ ತಂದುಹಾಕಿತು.
ನಂತರ ಆ ಹದ್ದು ದೇಶದ ಬೀಜಗಳಲ್ಲಿ ಒಂದನ್ನು (ಹಿಜ್ಕೀಯ) ತೆಗೆದುಕೊಂಡು
    ಅದನ್ನು ಒಳ್ಳೆಯ ಮಣ್ಣಿನಲ್ಲಿ ಬಿತ್ತಿತು;
ಸಮೃದ್ಧಿಕರವಾದ ನೀರಿನ ಸಮೀಪದಲ್ಲಿ ಬೆಳೆಯುವ
    ನೀರವಂಜಿಯಂತೆ ಅದನ್ನು ಬೆಳೆಯಿಸಿತು.
ಆ ಬೀಜವು ಚಿಗುರಿ, ಚಿಕ್ಕ ಜಾತಿಯ ದ್ರಾಕ್ಷಾಲತೆಯಂತೆ ನೆಲದ ಮೇಲೆ ಹಬ್ಬಿಕೊಂಡು,
    ತನ್ನ ಕೊಂಬೆಗಳನ್ನು ಗರುಡದ ಕಡೆಗೆ ಚಾಚಿಕೊಂಡು ತನ್ನ ಬೇರುಗಳನ್ನು ಬಿಟ್ಟಿತು:
ಅಂತೆಯೇ ಅದು ಲತೆಯಾಗಿ ಕೊಂಬೆಗಳನ್ನು ಬೆಳೆಸಿ,
    ಎಲೆಗಳನ್ನು ಹೊರಡಿಸಿತು.
ಆಗ ಅಗಲ ರೆಕ್ಕೆಗಳಿದ್ದ ಇನ್ನೊಂದು ಹದ್ದು ದ್ರಾಕ್ಷಾಲತೆಯನ್ನು ನೋಡಿತು.
    ಈ ಹದ್ದಿಗೆ ತುಂಬಾ ಪುಕ್ಕಗಳಿದ್ದವು.
ದ್ರಾಕ್ಷಾಲತೆಯು ತನ್ನ ಬೇರುಗಳನ್ನು
    ಹದ್ದಿನ ಕಡೆಗೆ ತಿರುಗಿಸಿತ್ತು.
ಹದ್ದಿಗೆ ನೀರು ಹಾಯಿಸಲು ಸಾಧ್ಯವಾಗುವಂತೆ
    ಅದು ತನ್ನ ರೆಂಬೆಗಳನ್ನು ಹದ್ದಿನ ಕಡೆಗೆ ಚಾಚಿಕೊಂಡಿತ್ತು.
ಅದು ತಾನು ನೆಡಲ್ಪಟ್ಟಿದ್ದ ಸ್ಥಳದಿಂದ ಬೇರೆ ಕಡೆಗೆ ತಿರುಗಿಕೊಂಡಿತು.
ಆ ದ್ರಾಕ್ಷಾಲತೆಯು ಸಮೃದ್ಧಿಕರವಾಗಿ ನೀರಿದ್ದ ಒಳ್ಳೆಯ ಭೂಮಿಯಲ್ಲಿ ನೆಡಲ್ಪಟ್ಟಿತ್ತು.
    ಕೊಂಬೆಗಳನ್ನು ಬೆಳೆಸಿ, ಹಣ್ಣುಗಳನ್ನು ಫಲಿಸಿ
    ಅಮೋಘವಾದ ದ್ರಾಕ್ಷಾಲತೆಯಾಗಬೇಕೆಂಬುದು ಅದರ ಬಯಕೆಯಾಗಿತ್ತು.’”

ನೀನು ಹೀಗೆ ಹೇಳು: ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ:
“ಆ ದ್ರಾಕ್ಷಾಲತೆಯು ಬದುಕಿ ಬೆಳೆಯುವುದೋ?
ಇಲ್ಲ. ಮೊದಲನೆ ಹದ್ದು ದ್ರಾಕ್ಷಾಲತೆಗಳ ಬೇರುಗಳನ್ನು ಎಳೆದುಹಾಕಿ,
    ಅದರ ದ್ರಾಕ್ಷಿಹಣ್ಣುಗಳನ್ನು ಕಿತ್ತುಹಾಕುವುದು.
ಆಗ ಚಿಗುರುಗಳು ಬಾಡಿ ಒಣಗಿಹೋಗುವವು.
    ಆ ಸಸಿಯು ಬಲಹೀನವಾಗುವುದು.
ಆಗ ಅದನ್ನು ಬೇರುಸಹಿತ ಕಿತ್ತುಹಾಕಲು ಮಹಾ ಬಲವಾಗಲಿ
    ಅಥವಾ ದೊಡ್ಡಸೈನ್ಯವಾಗಲಿ ಅಗತ್ಯವಿರುವದಿಲ್ಲ.
10 ಆ ಸಸಿಯು ನೆಟ್ಟಿದ ಸ್ಥಳದಲ್ಲಿ ಬೆಳೆಯುವುದೋ?
    ಇಲ್ಲ! ಪೂರ್ವದ ಬಿಸಿಗಾಳಿಯು ಬೀಸುವದು,
    ಆಗ ಸಸಿಯು ತಾನು ನೆಡಲ್ಪಟ್ಟಿದ್ದ ಸ್ಥಳದಲ್ಲೇ ಬಾಡಿಹೋಗಿ ಸಾಯುವುದು.”

ರೋಮ್ನಗರದವರಿಗೆ 2:12-16

12 ಧರ್ಮಶಾಸ್ತ್ರವನ್ನು ಹೊಂದಿರುವ ಜನರು ಮತ್ತು ಧರ್ಮಶಾಸ್ತ್ರದ ಬಗ್ಗೆ ಕೇಳಿಯೂ ಇಲ್ಲದ ಜನರು ಪಾಪ ಮಾಡುವಾಗ ಅವರಿಬ್ಬರಿಗೂ ಯಾವ ವ್ಯತ್ಯಾಸವಿರುವುದಿಲ್ಲ. ಧರ್ಮಶಾಸ್ತ್ರವಿಲ್ಲದವರಾಗಿ ಪಾಪ ಮಾಡುವವರು ನಾಶವಾಗುವರು. ಅದೇ ರೀತಿಯಲ್ಲಿ, ಧರ್ಮಶಾಸ್ತ್ರವನ್ನು ಹೊಂದಿದವರಾಗಿ ಪಾಪ ಮಾಡುವವರು ಧರ್ಮಶಾಸ್ತ್ರಕ್ಕನುಸಾರವಾಗಿ ತೀರ್ಪನ್ನು ಹೊಂದುವರು. 13 ಧರ್ಮಶಾಸ್ತ್ರವನ್ನು ಕೇಳಿದ ಮಾತ್ರಕ್ಕೆ ಜನರು ನೀತಿವಂತರಾಗುವುದಿಲ್ಲ. ಧರ್ಮಶಾಸ್ತ್ರ ಹೇಳುವ ಪ್ರತಿಯೊಂದಕ್ಕೂ ವಿಧೇಯರಾಗುವ ಜನರನ್ನು ಧರ್ಮಶಾಸ್ತ್ರವು ನೀತಿವಂತರನ್ನಾಗಿ ಮಾಡುತ್ತದೆ.

14 ಯೆಹೂದ್ಯರಲ್ಲದವರು ಧರ್ಮಶಾಸ್ತ್ರವನ್ನು ಹೊಂದಿಲ್ಲ. ಆದರೆ ಅವರು ಧರ್ಮಶಾಸ್ತ್ರವನ್ನು ಸ್ವಾಭಾವಿಕವಾಗಿ ಅನುಸರಿಸಿದ್ದೇಯಾದರೆ, ಅವರಿಗೆ ಧರ್ಮಶಾಸ್ತ್ರವಿಲ್ಲದಿದ್ದರೂ ಅವರ ಅಂತರಂಗವೇ ಅವರಿಗೆ ಧರ್ಮಶಾಸ್ತ್ರವಾಗುತ್ತದೆ. 15 ಧರ್ಮಶಾಸ್ತ್ರದ ಆಜ್ಞಾವಿಧಿಗಳಿಗನುಸಾರವಾಗಿ ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ತಮ್ಮ ಹೃದಯಗಳು ಬಲ್ಲವೆಂದು ಅವರು ತಮ್ಮ ನಡತೆಯಿಂದಲೇ ತೋರ್ಪಡಿಸುತ್ತಾರೆ. ಇದು ಸತ್ಯವೆಂಬುದನ್ನು ಅವರ ಮನಸ್ಸಾಕ್ಷಿಯು ಖಚಿತಪಡಿಸುತ್ತದೆ. ಅವರ ಅಂತಃಪ್ರಜ್ಞೆಯೇ ಅವರನ್ನು ದೋಷಿಗಳೆಂದೋ ಇಲ್ಲವೆ ನಿರ್ದೋಷಿಗಳೆಂದೋ ತೀರ್ಮಾನಿಸುತ್ತದೆ.

16 ಮನುಷ್ಯರ ಅಂತರಂಗದಲ್ಲಿರುವ ರಹಸ್ಯ ಸಂಗತಿಗಳಿಗೆ ದೇವರು ತೀರ್ಪುಮಾಡುವ ದಿನದಂದು ಇವುಗಳೆಲ್ಲಾ ನೆರವೇರುವವು. ದೇವರು ಯೇಸು ಕ್ರಿಸ್ತನ ಮೂಲಕ ಜನರಿಗೆ ತೀರ್ಪು ಮಾಡುತ್ತಾನೆ ಎಂಬುದಾಗಿ ಸುವಾರ್ತೆಯು ತಿಳಿಸುತ್ತದೆ. ನಾನು ಜನರಿಗೆ ತಿಳಿಸುವುದು ಆ ಸುವಾರ್ತೆಯನ್ನೇ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International