Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಯೆಶಾಯ 55:1-9

ತೃಪ್ತಿಗೊಳಿಸುವ ಆಹಾರವನ್ನು ದೇವರು ಕೊಡುತ್ತಾನೆ

55 “ಎಲೈ ಬಾಯಾರಿದ ಜನರೆಲ್ಲರೇ,
    ಬಂದು ನೀರನ್ನು ಕುಡಿಯಿರಿ.
ನಿಮ್ಮಲ್ಲಿ ಹಣವಿಲ್ಲವೆಂದು ಚಿಂತೆಮಾಡಬೇಡಿರಿ.
    ಬಂದು ಹೊಟ್ಟೆತುಂಬಾ ತಿಂದು ಕುಡಿಯಿರಿ.
ನೀವು ಹಣ ಕೊಡಬೇಕಿಲ್ಲ.
    ಹೊಟ್ಟೆತುಂಬಾ ತಿಂದು ಕುಡಿಯಿರಿ ಹಾಲಿಗೂ ದ್ರಾಕ್ಷಾರಸಕ್ಕೂ ಕ್ರಯವಿಲ್ಲ.
ಆಹಾರವಲ್ಲದ್ದಕ್ಕಾಗಿ ಹಣವನ್ನು ಯಾಕೆ ವೆಚ್ಚ ಮಾಡುತ್ತೀರಿ?
    ತೃಪ್ತಿಗೊಳಿಸದ ಆಹಾರಕ್ಕಾಗಿ ನೀವು ಯಾಕೆ ಶ್ರಮಿಸುತ್ತೀರಿ?
ಗಮನವಿಟ್ಟು ಕೇಳಿರಿ.
ನೀವು ಒಳ್ಳೆಯ ಆಹಾರವನ್ನು ತಿನ್ನುವಿರಿ; ನಿಮ್ಮ ಊಟದಲ್ಲಿ ಆನಂದಿಸುವಿರಿ.
    ಅವು ನಿಮ್ಮ ಆತ್ಮವನ್ನು ತೃಪ್ತಿಗೊಳಿಸುತ್ತವೆ.
ನಾನು ಹೇಳುವ ವಿಷಯಗಳಿಗೆ ಸರಿಯಾಗಿ ಕಿವಿಗೊಡಿರಿ.
    ನಿಮ್ಮ ಆತ್ಮಗಳು ಜೀವಿಸುವಂತೆ ನನ್ನ ಮಾತುಗಳನ್ನು ಕೇಳಿರಿ.
ನನ್ನ ಬಳಿಗೆ ಬನ್ನಿರಿ, ನಾನು ನಿಮ್ಮೊಂದಿಗೆ ಶಾಶ್ವತವಾದ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು.
    ನಾನು ದಾವೀದನೊಂದಿಗೆ ಮಾಡಿಕೊಂಡ ಒಡಂಬಡಿಕೆಯಂತೆ ಅದಿರುವುದು.
ನಾನು ದಾವೀದನಿಗೆ ಅವನನ್ನು ಪ್ರೀತಿಸುವೆನೆಂದೂ ಅವನಿಗೆ ಪ್ರಾಮಾಣಿಕನಾಗಿರುವೆನೆಂದೂ ವಾಗ್ದಾನ ಮಾಡಿದ್ದೆನು.
    ಆ ಒಡಂಬಡಿಕೆಯನ್ನು ನೀವು ಖಂಡಿತವಾಗಿ ನಂಬಬಹುದು.
ದಾವೀದನು ನನ್ನ ಸಾಮರ್ಥ್ಯದ ವಿಷಯದಲ್ಲಿ ಎಲ್ಲ ಜನಾಂಗಗಳವರಿಗೆ ಸಾಕ್ಷಿಯಾಗಿರುವಂತೆ ನಾನೇ ಮಾಡಿದೆನು.
ನಾನು ದಾವೀದನಿಗೆ, ‘ನೀನು ಅಧಿಪತಿಯಾಗುವೆ ಮತ್ತು ಅನೇಕ ಜನಾಂಗಗಳಿಗೆ ನೀನು ಸೈನ್ಯಾಧಿಪತಿಯಾಗುವೆ’ ಎಂದು ಪ್ರಮಾಣ ಮಾಡಿದೆ.”

ನಿನಗೆ ಗೊತ್ತಿರದ ಸ್ಥಳಗಳಲ್ಲಿ ಜನಾಂಗಗಳು ನೆಲೆಸಿವೆ.
    ಆ ದೇಶಗಳನ್ನು ನೀನು ಕರೆಯುವೆ.
ಆ ದೇಶಗಳಿಗೆ ನಿನ್ನ ಪರಿಚಯವಿರುವದಿಲ್ಲ.
    ಆದರೆ ಅವುಗಳು ನಿನ್ನ ಬಳಿಗೆ ಓಡಿಬರುವವು.
ಇವೆಲ್ಲಾ ನಿನ್ನ ದೇವರಾದ ಯೆಹೋವನ ಚಿತ್ತಕ್ಕನುಸಾರವಾಗಿ ಆಗುತ್ತವೆ.
    ಇಸ್ರೇಲಿನ ಪರಿಶುದ್ಧ ದೇವರು ನಿನ್ನನ್ನು ಗೌರವಿಸುವದರಿಂದ ಇದನ್ನು ನೆರವೇರಿಸುವನು.
ಆದ್ದರಿಂದ ಸಮಯವು ದಾಟುವ ಮೊದಲು
    ನೀವು ಯೆಹೋವನಿಗಾಗಿ ಹುಡುಕಿರಿ.
ಆತನು ಹತ್ತಿರವಿರುವಾಗಲೇ ಕರೆಯಿರಿ.
ಕೆಟ್ಟಜನರು ಕೆಟ್ಟತನದಲ್ಲಿ ಜೀವಿಸುವದನ್ನು ನಿಲ್ಲಿಸಲಿ.
    ಅವರು ಕೆಟ್ಟ ಆಲೋಚನೆಗಳನ್ನು ಮಾಡದಿರಲಿ.
ಅವರು ಯೆಹೋವನ ಬಳಿಗೆ ಹಿಂತಿರುಗಲಿ.
    ಆಗ ಯೆಹೋವನು ಅವರನ್ನು ಆದರಿಸುವನು.
ದೇವರಾದ ಯೆಹೋವನು ಕ್ಷಮಿಸುವುದರಿಂದ
    ಅವರು ಆತನ ಬಳಿಗೆ ಬರಲಿ.

ಜನರು ದೇವರನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ

ಯೆಹೋವನು ಹೇಳುವುದೇನೆಂದರೆ: “ನಿಮ್ಮ ಆಲೋಚನೆಗಳು ನನ್ನ ಆಲೋಚನೆಗಳಲ್ಲ.
    ನಿಮ್ಮ ಮಾರ್ಗಗಳು ನನ್ನ ಮಾರ್ಗಗಳಲ್ಲ.
ಆಕಾಶವು ಭೂಮಿಗಿಂತ ಎಷ್ಟು ಎತ್ತರವಾಗಿದೆಯೋ
    ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಿಗಿಂತ ಅಷ್ಟೇ ಉನ್ನತವಾಗಿವೆ;
    ನನ್ನ ಮಾರ್ಗಗಳು ನಿಮ್ಮ ಮಾರ್ಗಗಳಿಗಿಂತ ಅಷ್ಟೇ ಉನ್ನತವಾಗಿವೆ.” ಇದು ಯೆಹೋವನ ನುಡಿ.

ಕೀರ್ತನೆಗಳು 63:1-8

ದಾವೀದನು ಯೆಹೂದದ ಅರಣ್ಯದಲ್ಲಿದ್ದಾಗ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.

63 ದೇವರೇ, ನೀನೇ ನನ್ನ ದೇವರು.
    ನಿನಗಾಗಿ ಕುತೂಹಲದಿಂದ ಎದುರು ನೋಡುತ್ತೇನೆ.
ನೀರಿಲ್ಲದೆ ಒಣಗಿದ ಭೂಮಿಯಂತೆ ನನ್ನ ಆತ್ಮವು ನಿನಗಾಗಿ ಬಾಯಾರಿದೆ;
    ನನ್ನ ದೇಹವು ನಿನಗಾಗಿ ಬಯಸಿದೆ.
ಹೌದು, ನಿನ್ನನ್ನು ನಿನ್ನ ಆಲಯದಲ್ಲಿ ನೋಡಿದ್ದೇನೆ,
    ನಿನ್ನ ಶಕ್ತಿಯನ್ನೂ ಮಹಿಮೆಯನ್ನೂ ಕಂಡಿದ್ದೇನೆ.
ನಿನ್ನ ಪ್ರೀತಿಯು ಜೀವಕ್ಕಿಂತಲೂ ಶ್ರೇಷ್ಠ.
    ನನ್ನ ತುಟಿಗಳು ನಿನ್ನನ್ನು ಕೊಂಡಾಡುತ್ತವೆ.
ಹೌದು, ನನ್ನ ಜೀವಮಾನವೆಲ್ಲಾ ನಿನ್ನನ್ನು ಕೊಂಡಾಡುವೆನು.
    ನಿನ್ನ ಹೆಸರಿನಲ್ಲಿ ಕೈಮುಗಿದು ಪ್ರಾರ್ಥಿಸುವೆನು.
ಮೃಷ್ಟಾನ್ನವನ್ನು ತಿಂದಿರುವವನಂತೆ ತೃಪ್ತನಾಗಿರುವೆನು.
    ನನ್ನ ಬಾಯಿ ನಿನ್ನನ್ನು ಕೊಂಡಾಡುವುದು.
ಹಾಸಿಗೆಯು ಮೇಲೆ ಮಲಗಿರುವಾಗಲೂ ನಿನ್ನನ್ನು ಜ್ಞಾಪಿಸಿಕೊಳ್ಳುವೆನು.
    ಮಧ್ಯರಾತ್ರಿಯಲ್ಲಿಯೂ ನಿನ್ನನ್ನು ನೆನಸಿಕೊಳ್ಳುವೆನು.
ನಿಜವಾಗಿಯೂ ನೀನೇ ನನಗೆ ಸಹಾಯಕ.
    ನಿನ್ನ ರೆಕ್ಕೆಗಳ ಮರೆಯಲ್ಲಿ ಆನಂದಘೋಷ ಮಾಡುವೆನು.
ನನ್ನ ಆತ್ಮವು ನಿನ್ನನ್ನು ಅಂಟಿಕೊಂಡಿರುವುದು.
    ನಿನ್ನ ಬಲಗೈ ನನ್ನ ಕೈಹಿಡಿದು ನಡೆಸುವುದು.

1 ಕೊರಿಂಥದವರಿಗೆ 10:1-13

ಯೆಹೂದ್ಯರಂತಿರಬೇಡಿ

10 ಸಹೋದರ ಸಹೋದರಿಯರೇ, ಮೋಶೆಯನ್ನು ಅನುಸರಿಸಿದ ನಮ್ಮ ಪಿತೃಗಳಿಗೆ ಏನು ಸಂಭವಿಸಿತೆಂಬುದನ್ನು ನೀವು ತಿಳಿದುಕೊಳ್ಳಬೇಕೆಂದು ನಾನು ಅಪೇಕ್ಷಿಸುತ್ತೇನೆ. ಅವರೆಲ್ಲರೂ ಮೋಡದ ಕೆಳಗಿದ್ದರು; ಸಮುದ್ರದ ಮೂಲಕ ನಡೆದುಕೊಂಡು ಹೋದರು; ಮೋಶೆಯ ಶಿಷ್ಯರಾಗುವುದಕ್ಕಾಗಿ ಮೋಡದಲ್ಲಿಯೂ ಸಮುದ್ರದಲ್ಲಿಯೂ ದೀಕ್ಷಾಸ್ನಾನ ಹೊಂದಿದರು; ಒಂದೇ ಆತ್ಮಿಕ ಆಹಾರವನ್ನು ಊಟ ಮಾಡಿದರು; ತಮ್ಮೊಂದಿಗಿದ್ದ ಆತ್ಮಿಕ ಬಂಡೆಯ ನೀರನ್ನು ಕುಡಿದರು. ಆ ಬಂಡೆಯೇ ಕ್ರಿಸ್ತನು. ಆದರೂ ಅವರಲ್ಲಿ ಅನೇಕರು ದೇವರ ಮೆಚ್ಚುಗೆಗೆ ಪಾತ್ರರಾಗಲಿಲ್ಲ. ಅವರು ಮರುಭೂಮಿಯಲ್ಲಿ ಕೊಲ್ಲಲ್ಪಟ್ಟರು.

ಅವರು ಮಾಡಿದಂತೆ ನಾವು ಕೆಟ್ಟವುಗಳನ್ನು ಆಶಿಸಬಾರದೆಂಬುದಕ್ಕೆ ಈ ಘಟನೆಗಳು ನಮಗೆ ಎಚ್ಚರಿಕೆ ನೀಡುವ ನಿದರ್ಶನಗಳಾಗಿವೆ. ಅವರಲ್ಲಿ ಕೆಲವರು ಮಾಡಿದಂತೆ ನೀವು ವಿಗ್ರಹಗಳನ್ನು ಪೂಜಿಸಬೇಡಿ. “ಜನರು ತಿನ್ನಲು, ಕುಡಿಯಲು ಕುಳಿತುಕೊಂಡರು; ನೃತ್ಯ ಮಾಡಲು ಎದ್ದುನಿಂತರು”(A) ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ. ಅವರಲ್ಲಿ ಕೆಲವರು ಮಾಡಿದಂತೆ ನಾವು ಲೈಂಗಿಕ ಪಾಪಗಳನ್ನು ಮಾಡಬಾರದು. ಅವರಲ್ಲಿ ಇಪ್ಪತ್ತಮೂರು ಸಾವಿರ ಮಂದಿ ತಮ್ಮ ಆ ಪಾಪದ ಫಲವಾಗಿ ಒಂದೇ ದಿನದಲ್ಲಿ ಸತ್ತುಹೋದರು. ಅವರಲ್ಲಿ ಕೆಲವರು ಮಾಡಿದಂತೆ ನಾವು ಪ್ರಭುವನ್ನು ಪರೀಕ್ಷಿಸಬಾರದು. ಅದರ ಫಲವಾಗಿ ಅವರು ಹಾವುಗಳಿಂದ ಮರಣಹೊಂದಿದರು. 10 ಅವರಲ್ಲಿ ಕೆಲವರು ಮಾಡಿದಂತೆ ಗುಣುಗುಟ್ಟಬೇಡಿ. ಆ ಜನರು ಸಂಹಾರಕ ದೂತನಿಂದ ಕೊಲ್ಲಲ್ಪಟ್ಟರು.

11 ಆ ಜನರಿಗೆ ಸಂಭವಿಸಿದ ಸಂಗತಿಗಳು ನಮಗೆ ನಿದರ್ಶನಗಳಾಗಿವೆ. ನಮ್ಮನ್ನು ಎಚ್ಚರಿಸುವುದಕ್ಕಾಗಿ ಆ ಸಂಗತಿಗಳನ್ನು ಬರೆದಿಡಲಾಗಿದೆ. ಈಗ ನಾವು ಯುಗದ ಅಂತಿಮ ಕಾಲದಲ್ಲಿ ಜೀವಿಸುತ್ತಿದ್ದೇವೆ. 12 ಆದ್ದರಿಂದ ತಾನು ದೃಢವಾಗಿ ನಿಂತಿದ್ದೇನೆ ಎಂದು ಯೋಚಿಸುವ ವ್ಯಕ್ತಿಯು ಬೀಳದಂತೆ ಎಚ್ಚರಿಕೆಯಿಂದಿರಬೇಕು. 13 ಎಲ್ಲಾ ಜನರಿಗೆ ಬರುವಂತೆ ನಿಮಗೂ ಶೋಧನೆಗಳು ಬರುತ್ತವೆ. ಆದರೆ ದೇವರು ನಂಬಿಗಸ್ತನಾಗಿದ್ದಾನೆ. ನೀವು ಸಹಿಸಿಕೊಳ್ಳಲಾರದ ಶೋಧನೆಯನ್ನು ಆತನು ನಿಮಗೆ ಬರಗೊಡಿಸುವುದಿಲ್ಲ. ಶೋಧನೆಗಳು ಬಂದಾಗ, ಅವುಗಳಿಂದ ಪಾರಾಗುವ ಮಾರ್ಗವನ್ನು ಸಹ ದೇವರು ನಿಮಗೆ ಒದಗಿಸುತ್ತಾನೆ. ಆಗ ನೀವು ಅದನ್ನು ಸಹಿಸಿಕೊಳ್ಳುವುದಕ್ಕೆ ಶಕ್ತರಾಗುವಿರಿ.

ಲೂಕ 13:1-9

ಹೃದಯ ಪರಿವರ್ತನೆ

13 ಅದೇ ಸಮಯದಲ್ಲಿ ಅಲ್ಲಿದ್ದ ಕೆಲವರು ಯೇಸುವಿನ ಬಳಿಗೆ ಬಂದು ಗಲಿಲಾಯದಲ್ಲಿ ಯಜ್ಞ ಅರ್ಪಿಸುತ್ತಿದ್ದವರನ್ನು ಪಿಲಾತನು[a] ಕೊಲ್ಲಿಸಿದ್ದನ್ನೂ ಅವರು ಯಜ್ಞವಾಗಿ ಅರ್ಪಿಸಿದ್ದ ಪಶುಗಳ ರಕ್ತದೊಡನೆ ಅವರ ರಕ್ತವನ್ನು ಬೆರಸಿದ್ದನ್ನೂ ಯೇಸುವಿಗೆ ತಿಳಿಸಿದರು. ಯೇಸು ಅವರಿಗೆ, “ಕೊಲೆಗೀಡಾದವರು ಗಲಿಲಾಯದ ಇತರರೆಲ್ಲರಿಗಿಂತ ಹೆಚ್ಚು ಪಾಪಿಗಳಾಗಿದ್ದರೆಂದು ಭಾವಿಸುತ್ತೀರೋ? ಇಲ್ಲ! ಅವರು ಅಂತಹ ಪಾಪಿಗಳಾಗಿರಲಿಲ್ಲ! ಆದರೆ ನೀವು ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳದಿದ್ದರೆ ಅವರಂತೆಯೇ ನಾಶವಾಗುವಿರಿ! ಸಿಲೊವಾ ಎಂಬಲ್ಲಿ ಗೋಪುರ ಕುಸಿದು ಬಿದ್ದಾಗ, ಸತ್ತುಹೋದ ಹದಿನೆಂಟು ಮಂದಿಯ ಕುರಿತು ನಿಮ್ಮ ಅಭಿಪ್ರಾಯವೇನು? ಜೆರುಸಲೇಮಿನಲ್ಲಿ ವಾಸವಾಗಿದ್ದ ಇತರರೆಲ್ಲರಿಗಿಂತಲೂ ಅವರು ಹೆಚ್ಚು ಪಾಪಿಗಳಾಗಿದ್ದರೆಂದು ಭಾವಿಸುತ್ತೀರೋ? ಅವರು ಅಂತಹ ಪಾಪಿಗಳಾಗಿರಲಿಲ್ಲ! ಆದರೆ ನೀವು ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳದಿದ್ದರೆ ಅವರಂತೆಯೇ ನಾಶವಾಗುವಿರಿ ಎಂದು ನಾನು ನಿಮಗೆ ಹೇಳುತ್ತೇನೆ!” ಎಂದು ಉತ್ತರಿಸಿದನು.

ಉಪಯೋಗವಿಲ್ಲದ ಮರ

ಯೇಸು ಈ ಸಾಮ್ಯವನ್ನು ಹೇಳಿದನು: “ಒಬ್ಬನು ತನ್ನ ತೋಟದಲ್ಲಿ ಒಂದು ಅಂಜೂರದ ಮರವನ್ನು ನೆಡಿಸಿದ್ದನು. ಒಮ್ಮೆ ಅವನು ಆ ಮರ ಹಣ್ಣು ಫಲಿಸಿರಬಹುದೆಂದು ಅಲ್ಲಿಗೆ ಬಂದನು. ಆದರೆ ಅವನು ಅದರಲ್ಲಿ ಒಂದು ಹಣ್ಣನ್ನೂ ಕಾಣಲಿಲ್ಲ. ಅವನು ತನ್ನ ತೋಟವನ್ನು ನೋಡಿಕೊಳ್ಳುವುದಕ್ಕಾಗಿ ಒಬ್ಬ ತೋಟಗಾರನನ್ನೂ ನೇಮಿಸಿದ್ದನು. ಅವನು ತನ್ನ ಆ ಸೇವಕನಿಗೆ, ‘ಈ ಮರವು ಹಣ್ಣು ಬಿಡಬಹುದೆಂದು ನಾನು ಮೂರು ವರ್ಷದಿಂದ ಕಾಯುತ್ತಿದ್ದೇನೆ. ಆದರೆ ಇದು ಹಣ್ಣನ್ನು ಬಿಡಲೇ ಇಲ್ಲ. ಇದನ್ನು ಕತ್ತರಿಸಿಹಾಕು! ಇದು ಭೂಮಿಯ ಸಾರವನ್ನೇಕೆ ವ್ಯರ್ಥಗೊಳಿಸಬೇಕು?’ ಎಂದು ಹೇಳಿದನು. ಆದರೆ ಆ ಸೇವಕನು, ‘ಯಜಮಾನನೇ, ಇನ್ನೊಂದು ವರ್ಷ ತಾಳಿಕೊ. ಅದು ಫಲವನ್ನು ಕೊಡಬಹುದು. ಅದರ ಸುತ್ತಲೂ ಅಗೆದು ಸ್ವಲ್ಪ ರಸಗೊಬ್ಬರವನ್ನು ಹಾಕುತ್ತೇನೆ. ಆಗ ಮುಂದಿನ ವರ್ಷ ಈ ಮರ ಫಲವನ್ನು ಕೊಡಬಹುದು. ಒಂದುವೇಳೆ ಇದು ಫಲವನ್ನು ಕೊಡದಿದ್ದರೆ ನೀನು ಇದನ್ನು ಕಡಿದುಹಾಕು’ ಎಂದು ಉತ್ತರಿಸಿದನು.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International