Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 105:1-15

105 ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ. ಆತನ ಹೆಸರನ್ನು ಆರಾಧಿಸಿರಿ.
    ಆತನ ಅದ್ಭುತಕಾರ್ಯಗಳ ಕುರಿತು ಜನಾಂಗಗಳಿಗೆ ಸಾರಿ ಹೇಳಿರಿ.
ಯೆಹೋವನಿಗೆ ಗಾನಮಾಡಿರಿ; ಆತನನ್ನು ಸಂಕೀರ್ತಿಸಿರಿ.
    ಆತನ ಮಹತ್ಕಾರ್ಯಗಳ ಕುರಿತು ಕೊಂಡಾಡಿರಿ.
ಆತನ ಪವಿತ್ರ ನಾಮದಲ್ಲಿ ಹೆಮ್ಮೆಪಡಿರಿ.
    ಯೆಹೋವನ ಆರಾಧಕರೇ, ಸಂತೋಷಪಡಿರಿ.
ಯೆಹೋವನನ್ನೂ ಆತನ ಬಲವನ್ನೂ ಆಶ್ರಯಿಸಿಕೊಳ್ಳಿರಿ;
    ಸಹಾಯಕ್ಕಾಗಿ ಆತನ ಬಳಿಗೇ ಹೋಗಿರಿ.
ಆತನ ಅದ್ಭುತಕಾರ್ಯಗಳನ್ನು ಜ್ಞಾಪಿಸಿಕೊಳ್ಳಿರಿ.
    ಆತನ ಮಹತ್ಕಾರ್ಯಗಳನ್ನೂ ವಿವೇಕದ ನಿರ್ಧಾರಗಳನ್ನೂ ಜ್ಞಾಪಿಸಿಕೊಳ್ಳಿರಿ.
ನೀವು ಆತನ ಸೇವಕನಾದ ಅಬ್ರಹಾಮನ ಸಂತತಿಯವರಾಗಿದ್ದೀರಿ;
    ಆತನು ಆರಿಸಿಕೊಂಡ ಯಾಕೋಬನ ಸಂತತಿಯವರಾಗಿದ್ದೀರಿ.
ಯೆಹೋವನೇ ನಮ್ಮ ದೇವರು.
    ಆತನು ಇಡೀ ಪ್ರಪಂಚವನ್ನು ಆಳುವನು.[a]
ಆತನು ತನ್ನ ಒಡಂಬಡಿಕೆಯನ್ನು ಯಾವಾಗಲೂ ಜ್ಞಾಪಿಸಿಕೊಳ್ಳುವನು.
    ಆತನು ತನ್ನ ಆಜ್ಞೆಗಳನ್ನು ಸಾವಿರ ತಲೆಮಾರುಗಳವರೆಗೂ ಜ್ಞಾಪಿಸಿಕೊಳ್ಳುವನು.
ಆತನು ಅಬ್ರಹಾಮನೊಡನೆ ಒಡಂಬಡಿಕೆ ಮಾಡಿಕೊಂಡನು.
    ಆತನು ಇಸಾಕನಿಗೆ ವಾಗ್ದಾನ ಮಾಡಿದನು.
10 ಆತನು ಅದನ್ನು ಯಾಕೋಬನಿಗೆ ಕಟ್ಟಳೆಯನ್ನಾಗಿ ಮಾಡಿದನು.
    ದೇವರು ಇಸ್ರೇಲನೊಂದಿಗೆ ತನ್ನ ಶಾಶ್ವತವಾದ ಒಡಂಬಡಿಕೆಯನ್ನು ಮಾಡಿಕೊಂಡನು.
11 “ನಾನು ನಿನಗೆ ಕಾನಾನ್ ದೇಶವನ್ನು ಕೊಡುವೆನು.
    ಆ ದೇಶವು ನಿನ್ನದಾಗಿರುತ್ತದೆ” ಎಂದು ಆತನು ಹೇಳಿದನು.
12 ಅಬ್ರಹಾಮನ ಕುಟುಂಬವು ಚಿಕ್ಕದಾಗಿದ್ದಾಗ
    ಅವರು ಪ್ರಯಾಣಿಕರಂತೆ ಕಾನಾನಿನಲ್ಲಿ ವಾಸವಾಗಿದ್ದಾಗ,
    ಆತನು ಅವರಿಗೆ ಈ ವಾಗ್ದಾನವನ್ನು ಮಾಡಿದನು.
13 ಅವರು ದೇಶದಿಂದ ದೇಶಕ್ಕೂ
    ರಾಜ್ಯದಿಂದ ರಾಜ್ಯಕ್ಕೂ ಪ್ರಯಾಣ ಮಾಡಿದರು.
14 ಆದರೆ ಅವರಿಗೆ ಯಾರಿಂದಲೂ ಅನ್ಯಾಯವಾಗದಂತೆ ನೋಡಿಕೊಂಡನು.
    ಅವರನ್ನು ನೋಯಿಸಕೂಡದೆಂದು ಆತನು ರಾಜರುಗಳಿಗೆ ಎಚ್ಚರಿಕೆ ನೀಡಿದನು.
15 “ನಾನು ಆರಿಸಿಕೊಂಡಿರುವ ಜನರಿಗೆ ಕೇಡುಮಾಡಬೇಡಿ.
    ನನ್ನ ಪ್ರವಾದಿಗಳಿಗೆ ಯಾವ ಕೆಟ್ಟದ್ದನ್ನೂ ಮಾಡಬೇಡಿ” ಎಂದು ಆತನು ಹೇಳಿದನು.

ಕೀರ್ತನೆಗಳು 105:16-41

16 ದೇವರು ಆ ದೇಶಕ್ಕೆ ಬರಗಾಲವನ್ನು ಬರಮಾಡಿದನು.
    ಜನರಿಗೆ ತಿನ್ನುವುದಕ್ಕೂ ಸಾಕಷ್ಟು ಆಹಾರವಿರಲಿಲ್ಲ.
17 ಆದರೆ ದೇವರು ಒಬ್ಬನನ್ನು ಅವರಿಗಿಂತ ಮುಂಚಿತವಾಗಿ ಕಳುಹಿಸಿಕೊಟ್ಟನು.
    ಗುಲಾಮತನಕ್ಕೆ ಮಾರಲ್ಪಟ್ಟ ಯೋಸೇಫನೇ ಅವನು.
18 ಅವರು ಯೋಸೇಫನ ಕಾಲುಗಳನ್ನು ಹಗ್ಗಗಳಿಂದ ಕಟ್ಟಿದರು;
    ಅವನ ಕೊರಳಿಗೆ ಕಬ್ಬಿಣದ ಬೇಡಿಯನ್ನು ಹಾಕಿದರು.
19 ಅವನ ಪ್ರವಾದನೆಯು ನೆರವೇರುವ ತನಕ ಅವನು ಗುಲಾಮನಾಗಿದ್ದನು.
    ಯೋಸೇಫನು ಸತ್ಯವಂತನೆಂದು ಯೆಹೋವನ ಸಂದೇಶವು ನಿರೂಪಿಸಿತು.
20 ಆದ್ದರಿಂದ ಈಜಿಪ್ಟಿನ ರಾಜನು ಅವನನ್ನು ಬಿಡುಗಡೆ ಮಾಡಿದನು.
    ಆ ದೇಶದ ರಾಜನು ಅವನನ್ನು ಸೆರೆಮನೆಯಿಂದ ಬಿಡಿಸಿದನು.
21 ಅರಮನೆಯ ಮೇಲ್ವಿಚಾರಕನನ್ನಾಗಿ ನೇಮಿಸಿದನು.
    ರಾಜನ ಆಸ್ತಿಯನ್ನೆಲ್ಲಾ ಯೋಸೇಫನು ನೋಡಿಕೊಂಡನು.
22 ಯೋಸೇಫನು ಇತರ ನಾಯಕರುಗಳಿಗೆ ಸಲಹೆಗಳನ್ನು ಕೊಟ್ಟನು;
    ಹಿರಿಯರಿಗೆ ಉಪದೇಶಿಸಿದನು.
23 ಬಳಿಕ ಇಸ್ರೇಲನು ಈಜಿಪ್ಟಿಗೆ ಬಂದನು.
    ಯಾಕೋಬನು ಹಾಮನ ದೇಶದಲ್ಲಿ ವಾಸಿಸಿದನು.
24 ಯಾಕೋಬನ ಕುಟುಂಬ ಬಹು ದೊಡ್ಡದಾಯಿತು.
    ಅವರು ಈಜಿಪ್ಟಿನವರಿಗಿಂತಲೂ ಬಲಿಷ್ಠರಾದರು.
25 ಆದ್ದರಿಂದ ಈಜಿಪ್ಟಿನವರು ಯಾಕೋಬನ ಕುಟುಂಬವನ್ನು ದ್ವೇಷಿಸತೊಡಗಿದರು.
    ಅವರು ತಮ್ಮ ಗುಲಾಮರ ವಿರೋಧವಾಗಿ ಸಂಚುಗಳನ್ನು ಮಾಡತೊಡಗಿದರು.
26 ಆದ್ದರಿಂದ ದೇವರು ತನ್ನ ಸೇವಕನಾದ ಮೋಶೆಯನ್ನೂ
    ತಾನು ಆರಿಸಿಕೊಂಡ ಯಾಜಕನಾದ ಆರೋನನನ್ನೂ ಕಳುಹಿಸಿದನು.
27 ಹಾಮನ ದೇಶದಲ್ಲಿ ದೇವರು ಅನೇಕ ಮಹತ್ಕಾರ್ಯಗಳನ್ನು
    ಮೋಶೆ ಆರೋನರ ಮೂಲಕವಾಗಿ ಮಾಡಿದನು.
28 ದೇವರು ಕಾರ್ಗತ್ತಲೆಯನ್ನು ಕಳುಹಿಸಿದನು;
    ಆದರೂ ಈಜಿಪ್ಟಿನವರು ಆತನಿಗೆ ಕಿವಿಗೊಡಲಿಲ್ಲ.
29 ಆದ್ದರಿಂದ ಆತನು ನೀರನ್ನು ರಕ್ತವನ್ನಾಗಿ ಮಾರ್ಪಡಿಸಿದನು,
    ಆಗ ಅವರ ಮೀನುಗಳೆಲ್ಲಾ ಸತ್ತುಹೋದವು.
30 ಬಳಿಕ ಈಜಿಪ್ಟಿನವರ ದೇಶವು ಕಪ್ಪೆಗಳಿಂದ ತುಂಬಿಹೋಯಿತು.
    ರಾಜನು ಮಲಗುವ ಕೋಣೆಯಲ್ಲಿಯೂ ಕಪ್ಪೆಗಳಿದ್ದವು.
31 ಆತನು ಆಜ್ಞಾಪಿಸಲು
    ವಿಷದ ಹುಳಗಳೂ ಹೇನುಗಳೂ ಬಂದವು.
    ಅವು ಎಲ್ಲೆಲ್ಲಿಯೂ ಹರಡಿಕೊಂಡವು.
32 ಆತನು ಮಳೆಯನ್ನು ಕಲ್ಮಳೆಯನ್ನಾಗಿ ಪರಿವರ್ತಿಸಿದನು.
    ಅವರ ದೇಶದಲ್ಲಿ ಸಿಡಿಲುಗಳು ಹೊಡೆದವು.
33 ದೇವರು ಅವರ ದ್ರಾಕ್ಷಾಲತೆಗಳನ್ನೂ ಅಂಜೂರದ ಮರಗಳನ್ನೂ ನಾಶಮಾಡಿದನು.
    ಅವರ ದೇಶದ ಪ್ರತಿಯೊಂದು ಮರವನ್ನೂ ಆತನು ನಾಶಮಾಡಿದನು.
34 ಆತನು ಆಜ್ಞಾಪಿಸಲು ಮಿಡತೆಗಳೂ
    ಜಿಟ್ಟೆಹುಳಗಳೂ ಅಸಂಖ್ಯಾತವಾಗಿ ಬಂದವು.
35 ಮಿಡತೆಗಳೂ ಜಿಟ್ಟೆಹುಳಗಳೂ ದೇಶದಲ್ಲಿದ್ದ ಸಸಿಗಳನ್ನೆಲ್ಲಾ ತಿಂದುಬಿಟ್ಟವು.
    ಭೂಮಿಯ ಮೇಲಿದ್ದ ಬೆಳೆಗಳನ್ನೆಲ್ಲಾ ಅವು ತಿಂದುಬಿಟ್ಟವು.
36 ಬಳಿಕ ದೇವರು ಈಜಿಪ್ಟ್ ದೇಶದ
    ಎಲ್ಲಾ ಚೊಚ್ಚಲು ಗಂಡುಮಕ್ಕಳನ್ನು ಕೊಂದುಹಾಕಿದನು.
37 ಆತನು ತನ್ನ ಜನರನ್ನು ಈಜಿಪ್ಟಿನಿಂದ ಕರೆದುಕೊಂಡು ಹೋದನು.
    ಅವರು ತಮ್ಮೊಂದಿಗೆ ಬೆಳ್ಳಿಬಂಗಾರಗಳನ್ನು ತೆಗೆದುಕೊಂಡು ಬಂದರು.
    ದೇವಜನರಲ್ಲಿ ಯಾರೂ ಎಡವಿಬೀಳಲಿಲ್ಲ.
38 ದೇವಜನರು ಈಜಿಪ್ಟಿನಿಂದ ಹೊರಟಾಗ ಸಂತೋಷಪಟ್ಟರು;
    ಯಾಕೆಂದರೆ ಅವರು ದೇವಜನರಿಗೆ ಹೆದರಿಕೊಂಡಿದ್ದರು.
39 ಆತನು ಹಗಲಿನಲ್ಲಿ ನೆರಳಿಗೋಸ್ಕರ ಮೋಡವನ್ನು ಕಂಬಳಿಯಂತೆ ಹರಡಿದನು;
    ರಾತ್ರಿಯಲ್ಲಿ ಬೆಳಕಿಗಾಗಿ ಅಗ್ನಿಸ್ತಂಭವನ್ನು ದಯಪಾಲಿಸಿದನು.
40 ಜನರು ಮಾಂಸಕ್ಕಾಗಿ ಕೇಳಿಕೊಂಡಾಗ ಆತನು ಅವರಿಗೆ ಲಾವಕ್ಕಿಗಳನ್ನು ಬರಮಾಡಿದನು;
    ಪರಲೋಕದಿಂದ ಮನ್ನವನ್ನು ದಯಪಾಲಿಸಿದನು.
41 ಆತನು ಬಂಡೆಯನ್ನು ಸೀಳಿದಾಗ ನೀರು ಚಿಮ್ಮುತ್ತಾ ಹೊರಬಂದಿತು;
    ಅರಣ್ಯದಲ್ಲಿ ನದಿಯು ಹರಿಯತೊಡಗಿತು!

ಕೀರ್ತನೆಗಳು 105:42

42 ಆತನು ತನ್ನ ಸೇವಕನಾದ ಆಬ್ರಹಾಮನಿಗೆ
    ತಾನು ಮಾಡಿದ ವಾಗ್ದಾನವನ್ನು ಜ್ಞಾಪಿಸಿಕೊಂಡನು.

ಅರಣ್ಯಕಾಂಡ 14:10-24

10 ಎಲ್ಲಾ ಜನರು ಯೆಹೋಶುವನನ್ನು ಮತ್ತು ಕಾಲೇಬನನ್ನು ಕಲ್ಲೆಸೆದು ಕೊಲ್ಲಬೇಕೆಂದು ಮಾತಾಡತೊಡಗಿದರು. ಆದರೆ ಯೆಹೋವನ ಮಹಿಮೆ ದೇವದರ್ಶನಗುಡಾರ ಮೇಲೆ ಪ್ರತ್ಯಕ್ಷವಾದದ್ದು ಇಸ್ರೇಲರೆಲ್ಲರಿಗೆ ಕಾಣಿಸಿತು. ಯೆಹೋವನು ಮೋಶೆಯೊಡನೆ ಮಾತಾಡಿ, 11 “ಈ ಜನರು ಇನ್ನೆಷ್ಟು ಕಾಲದವರೆಗೆ ನನ್ನನ್ನು ತಿರಸ್ಕರಿಸುವರು? ನಾನು ಮಾಡಿದ ಎಲ್ಲಾ ಮಹತ್ಕಾರ್ಯಗಳನ್ನು ಇವರು ಪ್ರತ್ಯಕ್ಷವಾಗಿ ನೋಡಿದಾಗ್ಯೂ ಇನ್ನೆಷ್ಟು ಕಾಲದವರೆಗೆ ನನ್ನನ್ನು ನಂಬದೆ ಇರುವರು? 12 ಸರಿ, ನಾನು ಇವರಿಗೆ ವ್ಯಾಧಿಯನ್ನು ಉಂಟುಮಾಡಿ ಇವರನ್ನು ನಿರ್ಮೂಲಮಾಡಿ ಈ ಜನಕ್ಕಿಂತ ಹೆಚ್ಚಾಗಿಯೂ ಬಲಿಷ್ಠವಾಗಿಯೂ ಇರುವ ಜನಾಂಗವನ್ನು ನಿನ್ನ ಮೂಲಕವೇ ಹುಟ್ಟಿಸುವೆನು” ಎಂದು ಹೇಳಿದನು.

13 ಅದಕ್ಕೆ ಮೋಶೆ ಯೆಹೋವನಿಗೆ, “ನೀನು ನಿನ್ನ ಜನರಾದ ಇಸ್ರೇಲರನ್ನು ನಿನ್ನ ಶಕ್ತಿಯ ಮೂಲಕ ಈಜಿಪ್ಟಿನಿಂದ ಕರೆದುಕೊಂಡು ಬಂದೆ. ನೀನು ನಿನ್ನ ಜನರನ್ನು ನಾಶಮಾಡಿದರೆ, ಈಜಿಪ್ಟಿನವರು ಈ ಸುದ್ದಿಯನ್ನು ಕೇಳಿ ಕಾನಾನಿನ ನಿವಾಸಿಗಳಿಗೆ ಅದರ ಬಗ್ಗೆ ತಿಳಿಸುವರು. 14 ಅದಲ್ಲದೆ, ಈ ದೇಶದವರು ನೀನು ಇಸ್ರೇಲರ ಮಧ್ಯದಲ್ಲಿರುವ ಸಂಗತಿಯನ್ನು ಕೇಳಿದ್ದಾರೆ. ನೀನು ಇಸ್ರೇಲರಿಗೆ ಪ್ರತ್ಯಕ್ಷನಾಗಿ ಕಾಣಿಸಿಕೊಂಡದ್ದು ಅವರಿಗೆ ತಿಳಿದಿದೆ. ನಿನ್ನ ಮೇಘವು ಇಸ್ರೇಲರ ಮೇಲಿರುವುದು ಅವರಿಗೆ ಗೊತ್ತಿದೆ. ನೀನು ಇಸ್ರೇಲರನ್ನು ಹಗಲಲ್ಲಿ ಮೇಘಸ್ತಂಭದ ಮೂಲಕವಾಗಿಯೂ ರಾತ್ರಿಯಲ್ಲಿ ಅಗ್ನಿಸ್ತಂಭದ ಮೂಲಕವಾಗಿಯೂ ಮುನ್ನಡೆಸುತ್ತಿರುವುದು ಅವರಿಗೆ ತಿಳಿದಿದೆ. 15 ಹೀಗಿರಲಾಗಿ, ನೀನು ಒಂದೇ ಪೆಟ್ಟಿನಿಂದ ಈ ಜನರನ್ನು ಸಾಯಿಸಿದರೆ, ನಿನ್ನ ಪ್ರಖ್ಯಾತಿಯನ್ನು ಕೇಳಿದ ಜನಾಂಗಗಳವರು ನಿನ್ನ ವಿಷಯದಲ್ಲಿ, 16 ‘ಯೆಹೋವನು ಪ್ರಮಾಣಪೂರ್ವಕವಾಗಿ ವಾಗ್ದಾನಮಾಡಿದ ದೇಶದಲ್ಲಿ ಇಸ್ರೇಲರನ್ನು ಸೇರಿಸುವುದಕ್ಕೆ ಶಕ್ತಿಸಾಲದೆ ಅವರನ್ನು ಮರುಭೂಮಿಯಲ್ಲಿ ನಾಶಮಾಡಿದನು’ ಎಂದು ಮಾತಾಡಿಕೊಳ್ಳುವರು.

17 “ಆದ್ದರಿಂದ ಒಡೆಯನೇ, ನೀನು ಹೇಳಿದಂತೆಯೇ ನಿನ್ನ ತಾಳ್ಮೆಯು ದೀರ್ಘವಾಗಿರಲಿ. 18 ನೀನು ನಿನ್ನ ವಿಷಯದಲ್ಲಿ ‘ಯೆಹೋವನು ದೀರ್ಘಶಾಂತನು, ಬಹುಪ್ರೀತಿಯುಳ್ಳವನು, ಅಪರಾಧ, ಪಾಪಗಳನ್ನು ಕ್ಷಮಿಸುವವನಾಗಿದ್ದರೂ ಎಲ್ಲಾ ದಂಡನೆಯನ್ನು ರದ್ದುಪಡಿಸದವನು, ತಂದೆಗಳ ಪಾಪಫಲವನ್ನು ಮಕ್ಕಳ ಮೇಲೆ ಮೂರು ನಾಲ್ಕು ತಲೆಗಳವರೆಗೆ ಬರಮಾಡುವವನು’ ಎಂದು ನೀನೇ ಹೇಳಿರುವಿಯಲ್ಲಾ! 19 ನಾವು ಈಜಿಪ್ಟಿನಿಂದ ಬಂದದ್ದು ಮೊದಲುಗೊಂಡು ಇದುವರೆಗೆ ನೀನು ಈ ಜನರ ಪಾಪಗಳನ್ನು ಕ್ಷಮಿಸಿದ ಪ್ರಕಾರವೇ ಈಗಲೂ ಮಹಾಕೃಪೆಯಿಂದ ಇವರ ಪಾಪವನ್ನು ಕ್ಷಮಿಸಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ” ಎಂದು ಪ್ರಾರ್ಥಿಸಿದನು.

20 ಅದಕ್ಕೆ ಯೆಹೋವನು, “ನೀನು ಕೇಳಿಕೊಂಡಂತೆ ನಾನು ಜನರನ್ನು ಕ್ಷಮಿಸುವೆನು. 21 ಆದಾಗ್ಯೂ ನನ್ನ ಜೀವದಾಣೆ ಮತ್ತು ಯೆಹೋವನ ಮಹಿಮೆಯು ಭೂಲೋಕದಲ್ಲೆಲ್ಲಾ ತುಂಬಿರಬೇಕೆಂಬುವ ನಿಶ್ಚಯ ವಾಕ್ಯದ ಆಣೆ, 22 ಈಜಿಪ್ಟಿನಲ್ಲಿಯೂ ಮರುಭೂಮಿಯಲ್ಲಿಯೂ ನಾನು ನಡಿಸಿರುವ ಮಹಾತ್ಕಾರ್ಯಗಳನ್ನೂ ನನ್ನ ಮಹಿಮೆಯನ್ನೂ ನೋಡಿದ ಈ ಜನರೆಲ್ಲರೂ ಪದೇಪದೇ ನನ್ನನ್ನು ಪರೀಕ್ಷಿಸಿದ್ದರಿಂದ ಮತ್ತು ನನಗೆ ವಿಧೇಯರಾಗದಿದ್ದ ಕಾರಣ, 23 ನಾನು ಅವರ ಪೂರ್ವಿಕರಿಗೆ ಪ್ರಮಾಣಪೂರ್ವಕವಾಗಿ ವಾಗ್ದಾನ ಮಾಡಿದ ದೇಶವನ್ನು ಇವರಲ್ಲಿ ಯಾರೂ ನೋಡುವುದಿಲ್ಲ. ನನ್ನನ್ನು ತಿರಸ್ಕರಿಸಿದ ಇವರಲ್ಲಿ ಯಾರೂ ಅದನ್ನು ನೋಡುವುದಿಲ್ಲ. 24 ಆದರೆ ನನ್ನ ಸೇವಕನಾದ ಕಾಲೇಬನು ಅವರ ಹಾಗಲ್ಲ, ಅವನು ನನ್ನನ್ನು ಮನಃಪೂರ್ವಕವಾಗಿ ಹಿಂಬಾಲಿಸಿದ್ದಾನೆ. ಆದ್ದರಿಂದ ಅವನು ಸಂಚರಿಸಿ ನೋಡಿದ ದೇಶಕ್ಕೆ ಅವನನ್ನು ಬರಮಾಡುವೆನು ಮತ್ತು ಅವನ ಸಂತತಿಯವರು ಆ ದೇಶವನ್ನು ಹೊಂದುವರು.

1 ಕೊರಿಂಥದವರಿಗೆ 10:1-13

ಯೆಹೂದ್ಯರಂತಿರಬೇಡಿ

10 ಸಹೋದರ ಸಹೋದರಿಯರೇ, ಮೋಶೆಯನ್ನು ಅನುಸರಿಸಿದ ನಮ್ಮ ಪಿತೃಗಳಿಗೆ ಏನು ಸಂಭವಿಸಿತೆಂಬುದನ್ನು ನೀವು ತಿಳಿದುಕೊಳ್ಳಬೇಕೆಂದು ನಾನು ಅಪೇಕ್ಷಿಸುತ್ತೇನೆ. ಅವರೆಲ್ಲರೂ ಮೋಡದ ಕೆಳಗಿದ್ದರು; ಸಮುದ್ರದ ಮೂಲಕ ನಡೆದುಕೊಂಡು ಹೋದರು; ಮೋಶೆಯ ಶಿಷ್ಯರಾಗುವುದಕ್ಕಾಗಿ ಮೋಡದಲ್ಲಿಯೂ ಸಮುದ್ರದಲ್ಲಿಯೂ ದೀಕ್ಷಾಸ್ನಾನ ಹೊಂದಿದರು; ಒಂದೇ ಆತ್ಮಿಕ ಆಹಾರವನ್ನು ಊಟ ಮಾಡಿದರು; ತಮ್ಮೊಂದಿಗಿದ್ದ ಆತ್ಮಿಕ ಬಂಡೆಯ ನೀರನ್ನು ಕುಡಿದರು. ಆ ಬಂಡೆಯೇ ಕ್ರಿಸ್ತನು. ಆದರೂ ಅವರಲ್ಲಿ ಅನೇಕರು ದೇವರ ಮೆಚ್ಚುಗೆಗೆ ಪಾತ್ರರಾಗಲಿಲ್ಲ. ಅವರು ಮರುಭೂಮಿಯಲ್ಲಿ ಕೊಲ್ಲಲ್ಪಟ್ಟರು.

ಅವರು ಮಾಡಿದಂತೆ ನಾವು ಕೆಟ್ಟವುಗಳನ್ನು ಆಶಿಸಬಾರದೆಂಬುದಕ್ಕೆ ಈ ಘಟನೆಗಳು ನಮಗೆ ಎಚ್ಚರಿಕೆ ನೀಡುವ ನಿದರ್ಶನಗಳಾಗಿವೆ. ಅವರಲ್ಲಿ ಕೆಲವರು ಮಾಡಿದಂತೆ ನೀವು ವಿಗ್ರಹಗಳನ್ನು ಪೂಜಿಸಬೇಡಿ. “ಜನರು ತಿನ್ನಲು, ಕುಡಿಯಲು ಕುಳಿತುಕೊಂಡರು; ನೃತ್ಯ ಮಾಡಲು ಎದ್ದುನಿಂತರು”(A) ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ. ಅವರಲ್ಲಿ ಕೆಲವರು ಮಾಡಿದಂತೆ ನಾವು ಲೈಂಗಿಕ ಪಾಪಗಳನ್ನು ಮಾಡಬಾರದು. ಅವರಲ್ಲಿ ಇಪ್ಪತ್ತಮೂರು ಸಾವಿರ ಮಂದಿ ತಮ್ಮ ಆ ಪಾಪದ ಫಲವಾಗಿ ಒಂದೇ ದಿನದಲ್ಲಿ ಸತ್ತುಹೋದರು. ಅವರಲ್ಲಿ ಕೆಲವರು ಮಾಡಿದಂತೆ ನಾವು ಪ್ರಭುವನ್ನು ಪರೀಕ್ಷಿಸಬಾರದು. ಅದರ ಫಲವಾಗಿ ಅವರು ಹಾವುಗಳಿಂದ ಮರಣಹೊಂದಿದರು. 10 ಅವರಲ್ಲಿ ಕೆಲವರು ಮಾಡಿದಂತೆ ಗುಣುಗುಟ್ಟಬೇಡಿ. ಆ ಜನರು ಸಂಹಾರಕ ದೂತನಿಂದ ಕೊಲ್ಲಲ್ಪಟ್ಟರು.

11 ಆ ಜನರಿಗೆ ಸಂಭವಿಸಿದ ಸಂಗತಿಗಳು ನಮಗೆ ನಿದರ್ಶನಗಳಾಗಿವೆ. ನಮ್ಮನ್ನು ಎಚ್ಚರಿಸುವುದಕ್ಕಾಗಿ ಆ ಸಂಗತಿಗಳನ್ನು ಬರೆದಿಡಲಾಗಿದೆ. ಈಗ ನಾವು ಯುಗದ ಅಂತಿಮ ಕಾಲದಲ್ಲಿ ಜೀವಿಸುತ್ತಿದ್ದೇವೆ. 12 ಆದ್ದರಿಂದ ತಾನು ದೃಢವಾಗಿ ನಿಂತಿದ್ದೇನೆ ಎಂದು ಯೋಚಿಸುವ ವ್ಯಕ್ತಿಯು ಬೀಳದಂತೆ ಎಚ್ಚರಿಕೆಯಿಂದಿರಬೇಕು. 13 ಎಲ್ಲಾ ಜನರಿಗೆ ಬರುವಂತೆ ನಿಮಗೂ ಶೋಧನೆಗಳು ಬರುತ್ತವೆ. ಆದರೆ ದೇವರು ನಂಬಿಗಸ್ತನಾಗಿದ್ದಾನೆ. ನೀವು ಸಹಿಸಿಕೊಳ್ಳಲಾರದ ಶೋಧನೆಯನ್ನು ಆತನು ನಿಮಗೆ ಬರಗೊಡಿಸುವುದಿಲ್ಲ. ಶೋಧನೆಗಳು ಬಂದಾಗ, ಅವುಗಳಿಂದ ಪಾರಾಗುವ ಮಾರ್ಗವನ್ನು ಸಹ ದೇವರು ನಿಮಗೆ ಒದಗಿಸುತ್ತಾನೆ. ಆಗ ನೀವು ಅದನ್ನು ಸಹಿಸಿಕೊಳ್ಳುವುದಕ್ಕೆ ಶಕ್ತರಾಗುವಿರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International