Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 17

ಪ್ರಾರ್ಥನೆ. ರಚನೆಗಾರ: ದಾವೀದ.

17 ಯೆಹೋವನೇ, ನ್ಯಾಯವಾದ ನನ್ನ ಪ್ರಾರ್ಥನೆಗೆ ಕಿವಿಗೊಡು.
    ನನ್ನ ಮೊರೆಯನ್ನು ಆಲೈಸು, ನನ್ನ ಯಥಾರ್ಥವಾದ ಪ್ರಾರ್ಥನೆಗೆ ಕಿವಿಗೊಡು.
ನನ್ನ ಕುರಿತಾಗಿ ನ್ಯಾಯವಾದ ತೀರ್ಪು ನಿನ್ನಿಂದಲೇ ಬರಲಿ.
    ನೀನು ಸತ್ಯವನ್ನು ನೋಡಬಲ್ಲಾತನಾಗಿರುವೆ.
ನೀನು ನನ್ನ ಅಂತರಾಳವನ್ನು ರಾತ್ರಿಯೆಲ್ಲಾ ಪರೀಕ್ಷಿಸಿರುವೆ.
    ನೀನು ನನ್ನನ್ನು ಪುಟಕ್ಕೆ ಹಾಕಿ ಶೋಧಿಸಿದಾಗ
ನನ್ನಲ್ಲಿ ಯಾವ ದೋಷವೂ ಕಂಡುಬರಲಿಲ್ಲ.
    ನಾನು ಯಾವ ತಪ್ಪನ್ನೂ ಮಾಡಿರಲಿಲ್ಲ.
ನಿನ್ನ ಆಜ್ಞೆಗಳಿಗೆ ವಿಧೇಯನಾಗಲು
    ನನ್ನಿಂದಾದಷ್ಟು ಪ್ರಯತ್ನಿಸಿದ್ದೇನೆ.
ನಿನ್ನ ಜೀವಮಾರ್ಗದಲ್ಲೇ ಹೆಜ್ಜೆಯಿಡುತ್ತಾ ನಡೆಯುತ್ತಿದ್ದೇನೆ.
    ನನ್ನ ಪಾದವು ತಪ್ಪು ದಾರಿಗೆ ಹೋಗಲಿಲ್ಲ.
ದೇವರೇ, ನಾನು ನಿನ್ನನ್ನು ಕರೆದಾಗಲ್ಲೆಲ್ಲಾ, ನೀನು ನನಗೆ ಉತ್ತರಿಸಿದೆ.
    ಆದ್ದರಿಂದ ಈಗಲೂ ನನಗೆ ಕಿವಿಗೊಡು.
ದೇವರೇ, ನಿನ್ನಲ್ಲಿ ಭರವಸೆಯಿಟ್ಟಿರುವ ಭಕ್ತರಿಗೆ
    ನೀನು ಸಹಾಯಮಾಡುವೆ;
ಅವರು ನಿನ್ನ ಬಲಗಡೆಯಲ್ಲಿ ಸುರಕ್ಷಿತವಾಗಿರುವರು.
    ಆದ್ದರಿಂದ ನಿನ್ನ ಭಕ್ತನಾದ ನನ್ನ ಪ್ರಾರ್ಥನೆಗೂ ಕಿವಿಗೊಡು.
ನಿನ್ನ ಕಣ್ಣಿನ ಗುಡ್ಡೆಯಂತೆ ನನ್ನನ್ನು ಸಂರಕ್ಷಿಸು.
    ನಿನ್ನ ರೆಕ್ಕೆಗಳ ಮರೆಯಲ್ಲಿ ನನ್ನನ್ನು ಅಡಗಿಸಿಕೊ.
ಯೆಹೋವನೇ, ನನ್ನನ್ನು ನಾಶಮಾಡಬೇಕೆಂದಿರುವ ದುಷ್ಟರಿಂದ ನನ್ನನ್ನು ತಪ್ಪಿಸಿ ಕಾಪಾಡು.
    ನನಗೆ ಕೇಡುಮಾಡಬೇಕೆಂದು ಸುತ್ತುಗಟ್ಟಿರುವ ಜನರಿಂದ ನನ್ನನ್ನು ಸಂರಕ್ಷಿಸು.
10 ಆ ದುಷ್ಟರು ಗರ್ವಿಷ್ಠರಾಗಿದ್ದಾರೆ.
    ಅವರು ಜಂಬಕೊಚ್ಚಿಕೊಳ್ಳುತ್ತಾರೆ.
11 ಅವರು ನನ್ನನ್ನು ಬೆನ್ನಟ್ಟಿ ಬಂದು ಸುತ್ತುಗಟ್ಟಿದ್ದಾರೆ;
    ಆಕ್ರಮಣಮಾಡಲು ಸಿದ್ಧರಾಗಿದ್ದಾರೆ.[a]
12 ಅವರು ಬೇಟೆಗಾಗಿ ಕಾಯುತ್ತಿರುವ ಸಿಂಹಗಳಂತಿದ್ದಾರೆ;
    ಅಡಗಿಕೊಂಡು ಹೊಂಚುಹಾಕುತ್ತಿರುವ ಪ್ರಾಯದ ಸಿಂಹಗಳಂತಿದ್ದಾರೆ.

13 ಯೆಹೋವನೇ, ಎದ್ದೇಳು,[b] ವೈರಿಗಳ ಬಳಿಗೆ ಹೋಗು.
    ಅವರನ್ನು ಶರಣಾಗತರನ್ನಾಗಿ ಮಾಡು.
    ನಿನ್ನ ಖಡ್ಗವನ್ನು ಪ್ರಯೋಗಿಸಿ ದುಷ್ಟರಿಂದ ನನ್ನನ್ನು ರಕ್ಷಿಸು.
14 ಯೆಹೋವನೇ, ಈ ಲೋಕಕ್ಕಾಗಿಯೇ ಜೀವಿಸುವ ಜನರಿಂದ
    ನನ್ನನ್ನು ತಪ್ಪಿಸಿ ಕಾಪಾಡು.
ನಿನ್ನ ಸಹಾಯಕ್ಕಾಗಿ ಮೊರೆಯಿಡುವ ಅನೇಕರು ಕೊರತೆಯಲ್ಲಿದ್ದಾರೆ.
    ಅವರಿಗೆ ಆಹಾರವನ್ನು ಹೇರಳವಾಗಿ ದಯಪಾಲಿಸು.
    ಅವರ ಮಕ್ಕಳಿಗೂ ಮೊಮ್ಮಕ್ಕಳಿಗೂ ಬೇಕಾದದ್ದನ್ನೆಲ್ಲಾ ಒದಗಿಸಿಕೊಡು.

15 ನಾನು ನ್ಯಾಯಕ್ಕಾಗಿ ಪ್ರಾರ್ಥಿಸಿದ್ದರಿಂದ ನನಗೆ ನಿನ್ನ ಮುಖದ ದರ್ಶನವಾಗುವುದು.
    ಎಚ್ಚೆತ್ತಾಗ ನಿನ್ನ ಸ್ವರೂಪ ದರ್ಶನದಿಂದ ತೃಪ್ತನಾಗಿರುವೆನು.

ಯೋಬನು 1

ಒಳ್ಳೆಯ ಮನುಷ್ಯನಾದ ಯೋಬನು

ಊಚ್ ದೇಶದಲ್ಲಿ ಯೋಬನೆಂಬ ಒಬ್ಬ ಮನುಷ್ಯನಿದ್ದನು. ಅವನು ದೇವರಲ್ಲಿ ಭಯಭಕ್ತಿಯುಳ್ಳವನಾಗಿದ್ದನು; ಕೆಟ್ಟಕಾರ್ಯಗಳನ್ನು ಮಾಡದೆ ನಿರ್ದೋಷಿಯೂ ಯಥಾರ್ಥವಂತನೂ ಆಗಿದ್ದನು. ಯೋಬನಿಗೆ ಏಳು ಗಂಡುಮಕ್ಕಳೂ ಮೂರು ಹೆಣ್ಣುಮಕ್ಕಳೂ ಇದ್ದರು. ಯೋಬನಿಗೆ ಏಳು ಸಾವಿರ ಕುರಿಗಳೂ ಮೂರು ಸಾವಿರ ಒಂಟೆಗಳೂ ಒಂದು ಸಾವಿರ ಎತ್ತುಗಳೂ[a] ಮತ್ತು ಐನೂರು ಹೆಣ್ಣುಕತ್ತೆಗಳೂ ಇದ್ದವು. ಅವನಿಗೆ ಅನೇಕ ಮಂದಿ ಸೇವಕರಿದ್ದರು. ಪೂರ್ವ ದೇಶದವರಲ್ಲೆಲ್ಲಾ ಯೋಬನು ಮಹಾ ಐಶ್ವರ್ಯವಂತನಾಗಿದ್ದನು.

ಯೋಬನ ಗಂಡುಮಕ್ಕಳು ಯಾವಾಗಲೂ ಸರದಿಯ ಪ್ರಕಾರ ಔತಣಕೂಟಗಳನ್ನು ತಮ್ಮ ಮನೆಗಳಲ್ಲಿ ಏರ್ಪಡಿಸುತ್ತಿದ್ದರು; ಆ ಔತಣಕೂಟಗಳಿಗೆ ತಮ್ಮ ಸಹೋದರಿಯರನ್ನು ಸಹ ಆಹ್ವಾನಿಸುತ್ತಿದ್ದರು. ಪ್ರತಿಯೊಂದು ಔತಣಕೂಟದ ದಿನಗಳು ಮುಗಿದ ಮೇಲೆ ಯೋಬನು ಅವರನ್ನು ಶುದ್ಧೀಕರಿಸುತ್ತಿದ್ದನು. ಅದಕ್ಕಾಗಿ ಅವನು ಮುಂಜಾನೆಯಲ್ಲಿಯೇ ಎದ್ದು ತನ್ನ ಪ್ರತಿಯೊಬ್ಬ ಮಕ್ಕಳ ಹೆಸರಿನಲ್ಲಿ ಒಂದೊಂದು ಸರ್ವಾಂಗಹೋಮವನ್ನು ಅರ್ಪಿಸುತ್ತಿದ್ದನು. ಯಾಕೆಂದರೆ, “ಒಂದುವೇಳೆ ನನ್ನ ಮಕ್ಕಳು ಹೃದಯದಲ್ಲಿ ದೇವರನ್ನು ದೂಷಿಸಿ ಪಾಪಮಾಡಿರಬಹುದು” ಎಂಬುದು ಯೋಬನ ಆಲೋಚನೆಯಾಗಿತ್ತು. ತನ್ನ ಮಕ್ಕಳ ಪಾಪಕ್ಷಮೆಗಾಗಿ ಯೋಬನು ಯಾವಾಗಲೂ ಹೀಗೆ ಮಾಡುತ್ತಿದ್ದನು.

ದೇವದೂತರು ಯೆಹೋವನನ್ನು ಭೇಟಿಯಾಗುವ ದಿನ ಬಂದಿತು. ಆಗ ಸೈತಾನನು ಸಹ ಆ ದೂತರೊಂದಿಗೆ ಬಂದನು. ಯೆಹೋವನು ಸೈತಾನನಿಗೆ, “ನೀನು ಎಲ್ಲಿಗೆ ಹೋಗಿದ್ದೆ?” ಎಂದು ಕೇಳಿದನು.

ಸೈತಾನನು ಯೆಹೋವನಿಗೆ, “ನಾನು ಭೂಮಿಯ ಮೇಲೆಲ್ಲಾ ಅಲೆದಾಡುತ್ತಿದ್ದೆ” ಎಂದು ಉತ್ತರಕೊಟ್ಟನು.

ಆಗ ಯೆಹೋವನು, “ನನ್ನ ಸೇವಕನಾದ ಯೋಬನ ಬಗ್ಗೆ ಆಲೋಚಿಸಿದೆಯಾ? ಭೂಮಿಯ ಮೇಲೆ ಅವನಂತೆ ಯಾರೂ ಇಲ್ಲ. ಅವನು ದೇವರಲ್ಲಿ ಭಯಭಕ್ತಿಯುಳ್ಳವನಾಗಿದ್ದಾನೆ; ಕೆಟ್ಟಕಾರ್ಯಗಳನ್ನು ಮಾಡದೆ ನಿರ್ದೋಷಿಯೂ ಯಥಾರ್ಥವಂತನೂ ಆಗಿದ್ದಾನೆ” ಎಂದು ಹೇಳಿದನು.

ಅದಕ್ಕೆ ಸೈತಾನನು, “ಹೌದು! ಯೋಬನು ದೇವರಲ್ಲಿ ಭಯಭಕ್ತಿಯಿಟ್ಟಿರುವುದಕ್ಕೆ ಒಳ್ಳೆಯ ಕಾರಣವೊಂದಿದೆ! 10 ನೀನು ಅವನನ್ನೂ ಅವನ ಕುಟುಂಬವನ್ನೂ ಅವನ ಆಸ್ತಿಯನ್ನೂ ಸಂರಕ್ಷಿಸುತ್ತಿರುವೆ. ಅವನ ಕೆಲಸಕಾರ್ಯಗಳನ್ನು ಸಫಲಪಡಿಸುತ್ತಿರುವುದರಿಂದ ಅವನ ಸಂಪತ್ತು ದೇಶದಲ್ಲೆಲ್ಲಾ ವೃದ್ಧಿಯಾಗುತ್ತಿದೆ. 11 ಆದರೆ ಈಗ ನೀನು ನಿನ್ನ ಕೈಚಾಚಿ ಅವನ ಆಸ್ತಿಯನ್ನೆಲ್ಲಾ ನಾಶಮಾಡು. ಆಗ ಅವನು ನಿನ್ನ ಮುಖದೆದುರಿಗೆ ನಿನ್ನನ್ನು ಖಂಡಿತವಾಗಿ ದೂಷಿಸುವನು” ಎಂದು ಉತರಕೊಟ್ಟನು.

12 ಯೆಹೋವನು ಸೈತಾನನಿಗೆ, “ಸರಿ, ಯೋಬನ ಆಸ್ತಿಗೆಲ್ಲಾ ನೀನು ಏನು ಬೇಕಾದರೂ ಮಾಡು. ಆದರೆ ಅವನ ದೇಹಕ್ಕೆ ಮಾತ್ರ ನೋವನ್ನು ಮಾಡಬೇಡ” ಎಂದು ಹೇಳಿದನು.

ಬಳಿಕ ಸೈತಾನನು ಯೆಹೋವನ ಬಳಿಯಿಂದ ಹೊರಟುಹೋದನು.

ಯೋಬನಿಗಾದ ಸರ್ವನಾಶ

13 ಒಂದು ದಿನ, ಯೋಬನ ಗಂಡುಹೆಣ್ಣುಮಕ್ಕಳು ತಮ್ಮ ಹಿರಿಯ ಅಣ್ಣನ ಮನೆಯಲ್ಲಿ ಊಟಮಾಡುತ್ತಾ ದ್ರಾಕ್ಷಾರಸ ಕುಡಿಯುತ್ತಾ ಇದ್ದರು. 14 ಆಗ ಸೇವಕನೊಬ್ಬನು ಯೋಬನ ಬಳಿಗೆ ಬಂದು, “ಎತ್ತುಗಳು ಉಳುತ್ತಿದ್ದವು; ಕತ್ತೆಗಳು ಸಮೀಪದಲ್ಲಿ ಹುಲ್ಲನ್ನು ಮೇಯುತ್ತಿದ್ದವು. 15 ಆದರೆ ಶೆಬ ದೇಶದವರು ನಮ್ಮ ಮೇಲೆ ಆಕ್ರಮಣ ಮಾಡಿ ನಿನ್ನ ಪಶುಗಳನ್ನೆಲ್ಲಾ ಹೊಡೆದುಕೊಂಡು ಹೋದರು; ನಿನ್ನ ಸೇವಕರುಗಳನ್ನೆಲ್ಲಾ ಕೊಂದು ಹಾಕಿದರು; ನಾನೊಬ್ಬನು ಮಾತ್ರ ತಪ್ಪಿಸಿಕೊಂಡೆನು! ಈ ವಿಷಯವನ್ನು ತಿಳಿಸುವುದಕ್ಕಾಗಿಯೇ ನಾನು ಬಂದೆನು” ಎಂದು ಹೇಳಿದನು.

16 ಆ ಸೇವಕನು ಮಾತಾಡುತ್ತಿರುವಾಗಲೇ ಮತ್ತೊಬ್ಬ ಸೇವಕನು ಬಂದು ಯೋಬನಿಗೆ, “ಆಕಾಶದಿಂದ ಸಿಡಿಲೊಡೆದು ನಿನ್ನ ಕುರಿಗಳನ್ನೂ ಸೇವಕರುಗಳನ್ನೂ ಸಂಪೂರ್ಣವಾಗಿ ಸುಟ್ಟುಹಾಕಿತು. ನಾನೊಬ್ಬನು ಮಾತ್ರ ತಪ್ಪಿಸಿಕೊಂಡೆನು! ಇದನ್ನು ತಿಳಿಸುವುದಕ್ಕಾಗಿಯೇ ನಾನು ಬಂದೆನು” ಎಂದು ಹೇಳಿದನು.

17 ಆ ಸೇವಕನು ಮಾತಾಡುತ್ತಿರುವಾಗಲೇ ಮತ್ತೊಬ್ಬ ಸೇವಕನು ಬಂದು ಯೋಬನಿಗೆ, “ಕಸ್ದೀಯರು ಮೂರು ಗುಂಪುಗಳಾಗಿ ಬಂದು, ನಮ್ಮ ಮೇಲೆ ಆಕ್ರಮಣಮಾಡಿ, ಒಂಟೆಗಳನ್ನು ಹೊಡೆದುಕೊಂಡು ಹೋದರು! ಅಲ್ಲದೆ ನಿನ್ನ ಸೇವಕರುಗಳನ್ನು ಕೊಂದುಹಾಕಿದರು. ನಾನೊಬ್ಬನು ಮಾತ್ರ ತಪ್ಪಿಸಿಕೊಂಡೆನು. ಇದನ್ನು ನಿನಗೆ ತಿಳಿಸುವುದಕ್ಕಾಗಿಯೇ ಬಂದೆನು” ಎಂದು ಹೇಳಿದನು.

18 ಮೂರನೆಯ ಸೇವಕನು ಮಾತಾಡುತ್ತಿರುವಾಗಲೇ ಮತ್ತೊಬ್ಬ ಸೇವಕನು ಬಂದು ಯೋಬನಿಗೆ, “ನಿನ್ನ ಗಂಡು ಹೆಣ್ಣುಮಕ್ಕಳು ತಮ್ಮ ಹಿರಿಯ ಅಣ್ಣನ ಮನೆಯಲ್ಲಿ ಊಟ ಮಾಡುತ್ತಾ ದ್ರಾಕ್ಷಾರಸ ಕುಡಿಯುತ್ತಾ ಇದ್ದರು. 19 ಆಗ ಇದ್ದಕ್ಕಿದಂತೆ ಮರುಭೂಮಿಯಿಂದ ಬಿರುಗಾಳಿ ಬೀಸಿದ್ದರಿಂದ ಮನೆಯು ನಿನ್ನ ಗಂಡು ಹೆಣ್ಣುಮಕ್ಕಳ ಮೇಲೆ ಕುಸಿದು ಬಿದ್ದಿತು; ಅವರೆಲ್ಲಾ ಸತ್ತುಹೋದರು. ನಾನೊಬ್ಬನು ಮಾತ್ರ ತಪ್ಪಿಸಿಕೊಂಡೆನು! ಇದನ್ನು ನಿನಗೆ ತಿಳಿಸುವುದಕ್ಕಾಗಿಯೇ ಬಂದೆನು” ಎಂದು ಹೇಳಿದನು.

20 ಆಗ ಯೋಬನು ತನ್ನ ಮೇಲಂಗಿಯನ್ನು ಹರಿದುಕೊಂಡು, ತಲೆಯನ್ನು ಬೋಳಿಸಿಕೊಂಡು, ನೆಲದ ಮೇಲೆ ಮೊಣಕಾಲೂರಿ ದೇವರಿಗೆ ಸ್ತೋತ್ರಸಲ್ಲಿಸುತ್ತಾ,

21 “ನಾನು ತಾಯಿಯ ಗರ್ಭದಿಂದ ಜನಿಸಿದಾಗ
    ಏನೂ ಇಲ್ಲದವನಾಗಿದ್ದೆನು;
ಈ ಲೋಕವನ್ನು ಬಿಟ್ಟು ಹೋಗುವಾಗಲೂ
    ಏನೂ ಇಲ್ಲದವನಾಗಿಯೇ ಹೋಗುವೆನು.
ಯೆಹೋವನೇ ಕೊಟ್ಟನು,
    ಯೆಹೋವನೇ ತೆಗೆದುಕೊಂಡನು.
ಆತನ ನಾಮಕ್ಕೆ ಸ್ತೋತ್ರವಾಗಲಿ!” ಎಂದು ಹೇಳಿದನು.

22 ಇಷ್ಟೆಲ್ಲಾ ಕಳೆದುಕೊಂಡರೂ ಯೋಬನು ಪಾಪ ಮಾಡಲಿಲ್ಲ; ದೇವರನ್ನೂ ದೂಷಿಸಲಿಲ್ಲ.

ಲೂಕ 21:34-22:6

ಎಲ್ಲಾ ಸಮಯದಲ್ಲೂ ಸಿದ್ಧರಾಗಿರಿ

34 “ಎಚ್ಚರಿಕೆ! ತಿನ್ನುವುದರಲ್ಲಿಯೂ ಕುಡಿದು ಮತ್ತರಾಗುವುದರಲ್ಲಿಯೂ ಪ್ರಾಪಂಚಿಕ ಚಿಂತೆಗಳಲ್ಲಿಯೂ ಮಗ್ನರಾಗಿರಬೇಡಿರಿ. ಇಲ್ಲವಾದರೆ, ನಿಮ್ಮ ಹೃದಯಗಳು ಭಾರವಾಗಿರುವಾಗಲೇ ಅಂತ್ಯವು ಫಕ್ಕನೆ ಬಂದೀತು. 35 ಆ ದಿವಸವು ಭೂನಿವಾಸಿಗಳೆಲ್ಲರಿಗೂ ವಿಸ್ಮಯಕರವಾಗಿರುವುದು. 36 ಆದ್ದರಿಂದ ಎಲ್ಲಾ ಸಮಯದಲ್ಲಿಯೂ ಸಿದ್ಧರಾಗಿರಿ. ನಡೆಯಲಿರುವ ಈ ಎಲ್ಲಾ ಸಂಗತಿಗಳನ್ನು ಎದುರಿಸಿ ಸುರಕ್ಷಿತವಾಗಿ ಮುಂದುವರಿಯಲು ಮತ್ತು ಮನುಷ್ಯಕುಮಾರನ ಮುಂದೆ ನಿಲ್ಲಲು ಬೇಕಾದ ಶಕ್ತಿಗಾಗಿ ಪ್ರಾರ್ಥಿಸಿರಿ.”

37 ಯೇಸು ಹಗಲೆಲ್ಲಾ ದೇವಾಲಯದಲ್ಲಿ ಜನರಿಗೆ ಉಪದೇಶಿಸುತ್ತಿದ್ದನು. ರಾತ್ರಿಯಲ್ಲಾದರೋ ಪಟ್ಟಣದ ಹೊರಗಿದ್ದ ಆಲಿವ್ ಮರಗಳ ಗುಡ್ಡದ ಮೇಲೆ ಇರುತ್ತಿದ್ದನು. 38 ಪ್ರತಿ ಮುಂಜಾನೆ, ಜನರೆಲ್ಲರೂ ಬೇಗನೆ ಎದ್ದು ದೇವಾಲಯದಲ್ಲಿ ಯೇಸುವಿನ ಉಪದೇಶವನ್ನು ಕೇಳುವುದಕ್ಕೆ ಹೋಗುತ್ತಿದ್ದರು.

ಯೇಸುವನ್ನು ಕೊಲ್ಲಲು ಯೆಹೂದ್ಯನಾಯಕರ ಸಂಚು

(ಮತ್ತಾಯ 26:1-5,14-16; ಮಾರ್ಕ 14:1-2,10-11; ಯೋಹಾನ 11:45-53)

22 ಯೆಹೂದ್ಯರ ಹುಳಿಯಿಲ್ಲದ ರೊಟ್ಟಿಯ ಹಬ್ಬ ಅಂದರೆ ಪಸ್ಕಹಬ್ಬವು ಹತ್ತಿರವಾಗಿತ್ತು. ಮಹಾಯಾಜಕರು ಮತ್ತು ಧರ್ಮೋಪದೇಶಕರು ಯೇಸುವನ್ನು ಹೇಗೆ ಕೊಲ್ಲಬೇಕೆಂದು ಆಲೋಚಿಸುತ್ತಾ ಜನರ ಭಯದಿಂದ ತಕ್ಕ ಮಾರ್ಗವನ್ನು ಹುಡುಕತೊಡಗಿದರು.

ಯೇಸುವಿನ ವಿರುದ್ಧ ಯೂದನು ಮಾಡಿದ ಸಂಚು

ಯೇಸುವಿನ ಹನ್ನೆರಡು ಅಪೊಸ್ತಲರಲ್ಲಿ ಇಸ್ಕರಿಯೋತ ಯೂದನು ಒಬ್ಬನಾಗಿದ್ದನು. ಸೈತಾನನು ಇವನೊಳಗೆ ಪ್ರವೇಶಿಸಿ ಕೆಟ್ಟಕಾರ್ಯವೊಂದನ್ನು ಮಾಡುವಂತೆ ಪ್ರೇರೇಪಿಸಿದನು. ಯೂದನು ಮಹಾಯಾಜಕರ ಮತ್ತು ದೇವಾಲಯವನ್ನು ಕಾಯುತ್ತಿದ್ದ ಕೆಲವು ಸೈನಿಕರ ಬಳಿಗೆ ಹೋಗಿ, ಯೇಸುವನ್ನು ಹಿಡಿದುಕೊಡುವುದರ ಬಗ್ಗೆ ಅವರೊಂದಿಗೆ ಮಾತಾಡಿದನು. ಯಾಜಕರಿಗೆ ಬಹಳ ಸಂತೋಷವಾಯಿತು. ಯೇಸುವನ್ನು ತಮಗೆ ಹಿಡಿದುಕೊಟ್ಟರೆ ಹಣ ಕೊಡುವುದಾಗಿ ಅವರು ಯೂದನಿಗೆ ಮಾತುಕೊಟ್ಟರು. ಯೂದನು ಅದಕ್ಕೆ ಒಪ್ಪಿದನು. ಬಳಿಕ ಯೇಸುವನ್ನು ಅವರಿಗೆ ಹಿಡಿದುಕೊಡಲು ಉತ್ತಮವಾದ ಸಮಯಕ್ಕಾಗಿ ಕಾಯತೊಡಗಿದನು. ತನ್ನ ಈ ಕಾರ್ಯವನ್ನು ಯಾರಿಗೂ ತಿಳಿಯದಂಥ ಸಮಯದಲ್ಲಿ ಮಾಡಬೇಕೆಂಬುದು ಅವನ ಬಯಕೆಯಾಗಿತ್ತು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International