Revised Common Lectionary (Semicontinuous)
ಪ್ರಥಮ ಫಲ
26 “ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶವನ್ನು ನೀವು ಬೇಗನೆ ಪ್ರವೇಶಿಸಲಿದ್ದೀರಿ. ಆ ದೇಶವನ್ನು ಸ್ವಾಧೀನಮಾಡಿಕೊಂಡು ಅಲ್ಲಿ ನೆಲೆಸುವಿರಿ. 2 ಯೆಹೋವನು ಕೊಡುವ ಆ ದೇಶದಲ್ಲಿ ನೀವು ಪ್ರಥಮ ಬೆಳೆಯನ್ನು ಕೂಡಿಸುವಿರಿ. ಪುಟ್ಟಿಗಳಲ್ಲಿ ಧಾನ್ಯವನ್ನು ಕೂಡಿಸುವಾಗ ಪ್ರಥಮ ಭಾಗವನ್ನು ಪ್ರತ್ಯೇಕವಾಗಿಟ್ಟು ದೇವರಾದ ಯೆಹೋವನು ತನ್ನ ಆಲಯಕ್ಕಾಗಿ ಆರಿಸುವ ಸ್ಥಳಕ್ಕೆ ಅದನ್ನು ತೆಗೆದುಕೊಂಡು ಹೋಗಿ. 3 ಅಲ್ಲಿ ಸೇವೆ ಮಾಡುತ್ತಿರುವ ಯಾಜಕನಿಗೆ, ‘ಯೆಹೋವನು ನನ್ನ ಪೂರ್ವಿಕರಿಗೆ ಒಂದು ದೇಶವನ್ನು ಕೊಡುವುದಾಗಿ ವಾಗ್ದಾನ ಮಾಡಿದನು. ನಾನು ಆ ದೇಶಕ್ಕೆ ಬಂದಿರುತ್ತೇನೆ’ ಎಂದು ಹೇಳಬೇಕು.
4 “ಯಾಜಕನು ನಿಮ್ಮ ಕೈಯಲ್ಲಿರುವ ಪುಟ್ಟಿಯನ್ನು ತೆಗೆದುಕೊಂಡು ಯೆಹೋವನ ಯಜ್ಞವೇದಿಕೆಯ ಎದುರು ಇಡುವನು. 5 ಆಗ ನಿಮ್ಮ ದೇವರಾದ ಯೆಹೋವನ ಸನ್ನಿಧಾನದಲ್ಲಿ ನೀವು ಹೀಗೆ ಅರಿಕೆ ಮಾಡಬೇಕು: ‘ನಮ್ಮ ಪೂರ್ವಿಕರು ಊರೂರು ತಿರುಗುತ್ತಿದ್ದ ಅರಾಮ್ಯರಾಗಿದ್ದರು. ಅವರು ಈಜಿಪ್ಟನ್ನು ಸೇರಿ ಅಲ್ಲಿಯೇ ನೆಲೆಸಿದರು. ಅಲ್ಲಿಗೆ ಅವರು ಹೋದಾಗ ಅವರು ಕೆಲವರೇ ಆಗಿದ್ದರು. ಆದರೆ ಕಾಲಕ್ರಮೇಣ ಅವರು ದೊಡ್ಡ ಜನಾಂಗವಾಗಿ ಅಭಿವೃದ್ಧಿ ಹೊಂದಿದರು. 6 ಈಜಿಪ್ಟಿನವರು ನಮ್ಮನ್ನು ಕಠಿಣವಾಗಿ ನೋಡಿಕೊಳ್ಳುತ್ತಿದ್ದರು. ನಮ್ಮನ್ನು ಗುಲಾಮರಾಗಿ ಉಪಯೋಗಿಸಿದರು. ನಮ್ಮನ್ನು ಹಿಂಸಿಸಿ, ಕಷ್ಟಕರವಾದ ಕೆಲಸವನ್ನು ಕೊಟ್ಟರು. 7 ಆಗ ನಾವು ನಮ್ಮ ಪೂರ್ವಿಕರ ದೇವರಾದ ಯೆಹೋವನಿಗೆ ಮೊರೆಯಿಟ್ಟೆವು. ಆತನು ನಮ್ಮ ಕೂಗನ್ನು ಆಲಿಸಿದನು; ನಮ್ಮ ಸಂಕಟ, ವೇದನೆಗಳನ್ನು ನೋಡಿದನು. 8 ಆಮೇಲೆ ಯೆಹೋವನು ತನ್ನ ಭುಜಪರಾಕ್ರಮದಿಂದ ನಮ್ಮನ್ನು ಈಜಿಪ್ಟಿನಿಂದ ಹೊರತಂದನು. ಆತನು ಅದ್ಭುತಕಾರ್ಯಗಳನ್ನು, ಆಶ್ಚರ್ಯಕರವಾದ ಕಾರ್ಯಗಳನ್ನು ಮಾಡಿದನು. 9 ಅಲ್ಲಿಂದ ನಮ್ಮನ್ನು ಕರೆದುತಂದು ನಮಗೆ ಈ ಒಳ್ಳೆಯ ದೇಶವನ್ನು ಕೊಟ್ಟನು. 10 ಈಗ, ಯೆಹೋವನೇ, ನೀನು ಕೊಟ್ಟ ದೇಶದಲ್ಲಿ ಬೆಳೆದ ಬೆಳೆಯಲ್ಲಿ ಪ್ರಥಮ ಫಲಗಳನ್ನು ತಂದಿದ್ದೇನೆ.’
“ಆ ಪ್ರಥಮ ಬೆಳೆಯನ್ನು ನಿಮ್ಮ ದೇವರಾದ ಯೆಹೋವನ ಮುಂದೆ ಇಟ್ಟು ಆತನನ್ನು ಆರಾಧಿಸಬೇಕು. 11 ನೀವೂ ನಿಮ್ಮ ಹೆಂಡತಿ ಮಕ್ಕಳೂ ಸೇರಿ ಅಲ್ಲಿ ಊಟಮಾಡಿ ಸಂತೋಷಿಸಬೇಕು. ನಿಮ್ಮ ಊರಿನಲ್ಲಿರುವ ಲೇವಿಯರೊಂದಿಗೆ ಮತ್ತು ಪರದೇಶಸ್ಥರೊಂದಿಗೆ ನಿಮ್ಮ ಪ್ರಥಮ ಫಲಗಳನ್ನು ಹಂಚಿಕೊಳ್ಳಿರಿ.
91 ಮಹೋನ್ನತನ ಮೊರೆಹೊಕ್ಕಿರುವವನು
ಸರ್ವಶಕ್ತನ ಆಶ್ರಯದಲ್ಲಿ ಸುರಕ್ಷಿತನಾಗಿರುವನು.
2 ನಾನು ಯೆಹೋವನಿಗೆ, “ನೀನೇ ನನ್ನ ಆಶ್ರಯಸ್ಥಾನವೂ
ನನ್ನ ಕೋಟೆಯೂ ನಾನು ಭರವಸವಿಟ್ಟಿರುವ ನನ್ನ ದೇವರೂ” ಎಂದು ಹೇಳುವೆನು.
9 ಯಾಕೆಂದರೆ ನಿನ್ನ ಭರವಸವು ಯೆಹೋವನಲ್ಲಿಯೇ.
ನಿನ್ನ ಆಶ್ರಯಸ್ಥಾನವು ಮಹೋನ್ನತನಾದ ದೇವರೇ.
10 ಯಾವ ಕೇಡೂ ನಿನಗೆ ಸಂಭವಿಸದು.
ನಿನ್ನ ಮನೆಯಲ್ಲಿ ಯಾವ ರೋಗಗಳೂ ಇರದು.
11 ನೀನು ಹೋದಲ್ಲೆಲ್ಲಾ ನಿನ್ನನ್ನು ಕಾಯಲು ಆತನು ತನ್ನ ದೂತರಿಗೆ ಆಜ್ಞಾಪಿಸುವನು.
12 ನಿನ್ನ ಪಾದಗಳು ಕಲ್ಲಿಗೆ ತಗಲದಂತೆ ದೇವದೂತರುಗಳು
ನಿನ್ನನ್ನು ಕೈಗಳಲ್ಲಿ ಎತ್ತಿಕೊಳ್ಳುವರು.
13 ಸಿಂಹಗಳ ಮೇಲೆಯೂ ಮತ್ತು
ವಿಷಸರ್ಪಗಳ ಮೇಲೆಯೂ ನಡೆಯಲು ನೀನು ಶಕ್ತನಾಗಿರುವೆ.
14 ಯೆಹೋವನು ಹೇಳುವುದೇನೆಂದರೆ: “ನನ್ನಲ್ಲಿ ಭರವಸವಿಡುವವನನ್ನು ರಕ್ಷಿಸುವೆನು;
ನನ್ನ ಹೆಸರನ್ನು ಆರಾಧಿಸುವ ಭಕ್ತರನ್ನು ಸಂರಕ್ಷಿಸುವೆನು.
15 ನನ್ನ ಭಕ್ತರು ಸಹಾಯಕ್ಕಾಗಿ ಮೊರೆಯಿಡುವಾಗ, ಸದುತ್ತರವನ್ನು ದಯಪಾಲಿಸುವೆನು.
ಆಪತ್ತಿನಲ್ಲಿಯೂ ನಾನು ಅವರೊಂದಿಗಿರುವೆನು;
ಅವರನ್ನು ತಪ್ಪಿಸಿ ಘನಪಡಿಸುವೆನು.
16 ನನ್ನ ಭಕ್ತರಿಗೆ ದೀರ್ಘಾಯುಷ್ಯವನ್ನು ನೀಡಿ ತೃಪ್ತಿಪಡಿಸುವೆನು;
ನನ್ನ ವಿಶೇಷವಾದ ರಕ್ಷಣೆಯನ್ನು ತೋರಿಸಿ ಕಾಪಾಡುವೆನು.”
8 ಇದಲ್ಲದೆ, “ದೇವರ ವಾಕ್ಯವು ನಿಮ್ಮ ಸಮೀಪದಲ್ಲೇ ಇದೆ. ಅದು ನಿಮ್ಮ ಬಾಯಲ್ಲಿಯೂ ನಿಮ್ಮ ಹೃದಯದಲ್ಲಿಯೂ ಇದೆ” ಎಂದು ಪವಿತ್ರ ಗ್ರಂಥವು ಹೇಳುತ್ತದೆ. ನಾವು ಜನರಿಗೆ ನಂಬಿಕೆಯ ಕುರಿತಾಗಿ ಸಾರುವ ವಾಕ್ಯವೇ ಅದು. 9 “ಯೇಸುವೇ ಪ್ರಭು”ವೆಂದು ನಿನ್ನ ಬಾಯಿಯ ಮೂಲಕ ಹೇಳುವುದಾದರೆ ಮತ್ತು ಯೇಸುವನ್ನು ಸತ್ತವರೊಳಗಿಂದ ಜೀವಂತನಾಗಿ ಎಬ್ಬಿಸಿದವನು ದೇವರೇ ಎಂದು ನಿನ್ನ ಹೃದಯದಲ್ಲಿ ನಂಬುವುದಾದರೆ, ನೀನು ರಕ್ಷಣೆ ಹೊಂದುವೆ. 10 ಹೌದು, ನಾವು ನಮ್ಮ ಹೃದಯಗಳಲ್ಲಿ ನಂಬುವುದರ ಮೂಲಕ ನೀತಿವಂತರಾಗುತ್ತೇವೆ. “ನಂಬುತ್ತೇವೆ” ಎಂದು ಬಾಯಾರೆ ಹೇಳುವುದರ ಮೂಲಕ ರಕ್ಷಣೆ ಹೊಂದುತ್ತೇವೆ.
11 ಪವಿತ್ರ ಗ್ರಂಥವು ಹೀಗೆ ಹೇಳುತ್ತದೆ: “ಆತನಲ್ಲಿ ನಂಬಿಕೆಯಿಡುವ ಯಾವ ವ್ಯಕ್ತಿಯೂ ನಾಚಿಕೆಗೆ ಗುರಿಯಾಗುವುದೇ ಇಲ್ಲ.”(A) 12 ಏಕೆಂದರೆ ಯೆಹೂದ್ಯರಿಗೂ ಯೆಹೂದ್ಯರಲ್ಲದವರಿಗೂ ಯಾವ ವ್ಯತ್ಯಾಸವೂ ಇಲ್ಲ. ಎಲ್ಲರಿಗೂ ಒಬ್ಬನೇ ಪ್ರಭು. ತನ್ನಲ್ಲಿ ನಂಬಿಕೆಯಿಡುವ ಜನರೆಲ್ಲರಿಗೆ ಪ್ರಭುವು ಅನೇಕ ಆಶೀರ್ವಾದಗಳನ್ನು ಕೊಡುತ್ತಾನೆ. 13 ಹೌದು, ಪವಿತ್ರ ಗ್ರಂಥವು ಹೇಳುವಂತೆ, “ಪ್ರಭುವಿನಲ್ಲಿ ನಂಬಿಕೆಯಿಡುವ ಪ್ರತಿಯೊಬ್ಬನು ರಕ್ಷಣೆ ಹೊಂದುವನು.”(B)
ಯೇಸುವಿಗೆ ಸೈತಾನನಿಂದಾದ ಶೋಧನೆ
(ಮತ್ತಾಯ 4:1-11; ಮಾರ್ಕ 1:12-13)
4 ಯೇಸುವು ಜೋರ್ಡನ್ ನದಿಯಿಂದ ಹಿಂತಿರುಗಿದನು. ಆತನು ಪವಿತ್ರಾತ್ಮಭರಿತನಾಗಿದ್ದನು. ಪವಿತ್ರಾತ್ಮನು ಯೇಸುವನ್ನು ಅಡವಿಗೆ ನಡಿಸಿದನು. 2 ಅಲ್ಲಿ ಸೈತಾನನು ಆತನನ್ನು ನಲವತ್ತು ದಿನಗಳವರೆಗೆ ಶೋಧಿಸಿದನು. ಆ ದಿನಗಳಲ್ಲಿ ಯೇಸು ಏನನ್ನೂ ತಿನ್ನಲಿಲ್ಲ. ತರುವಾಯ, ಯೇಸುವಿಗೆ ಬಹಳ ಹಸಿವೆಯಾಯಿತು.
3 ಆಗ ಸೈತಾನನು ಯೇಸುವಿಗೆ, “ನೀನು ದೇವರ ಮಗನಾಗಿದ್ದರೆ, ಈ ಕಲ್ಲಿಗೆ ರೊಟ್ಟಿಯಾಗು ಎಂದು ಆಜ್ಞಾಪಿಸು” ಎಂದನು.
4 ಅದಕ್ಕೆ ಯೇಸು,
“‘ಮನುಷ್ಯನು ರೊಟ್ಟಿ ತಿಂದ ಮಾತ್ರಕ್ಕೆ ಬದುಕುವುದಿಲ್ಲ.’(A)
ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ” ಎಂದು ಉತ್ತರಕೊಟ್ಟನು.
5 ಆಗ ಸೈತಾನನು ಯೇಸುವನ್ನು ಕರೆದುಕೊಂಡು ಹೋಗಿ, ಒಂದೇ ಕ್ಷಣದಲ್ಲಿ ಭೂಲೋಕದ ಎಲ್ಲಾ ರಾಜ್ಯಗಳನ್ನು ತೋರಿಸಿ, 6 “ಈ ರಾಜ್ಯಗಳೆಲ್ಲವನ್ನೂ ಇವುಗಳ ಸರ್ವಾಧಿಕಾರವನ್ನೂ ವೈಭವವನ್ನೂ ನಿನಗೆ ಕೊಡುತ್ತೇನೆ. ಇವುಗಳೆಲ್ಲಾ ನನ್ನ ಅಧೀನದಲ್ಲಿವೆ. ನಾನು ಯಾರಿಗೆ ಬೇಕಾದರೂ ಇವುಗಳನ್ನು ಕೊಡಬಲ್ಲೆ. 7 ನೀನು ನನ್ನನ್ನು ಆರಾಧಿಸುವುದಾದರೆ ಇವೆಲ್ಲವನ್ನು ನಾನು ನಿನಗೆ ಕೊಡುತ್ತೇನೆ” ಎಂದು ಹೇಳಿದನು.
8 ಅದಕ್ಕೆ ಯೇಸು,
“‘ನಿನ್ನ ಪ್ರಭುವಾದ ದೇವರೊಬ್ಬನನ್ನೇ ಆರಾಧಿಸಬೇಕು,
ಆತನೊಬ್ಬನಿಗೇ ಸೇವೆಮಾಡಬೇಕು’(B)
ಎಂಬುದಾಗಿ ಪವಿತ್ರ ಗ್ರಂಥದಲ್ಲಿ ಬರೆದಿದೆ!” ಎಂದನು.
9 ಬಳಿಕ ಸೈತಾನನು ಯೇಸುವನ್ನು ಜೆರುಸಲೇಮಿಗೆ ಕರೆದೊಯ್ದು, ದೇವಾಲಯದ ಬಹು ಎತ್ತರವಾದ ಸ್ಥಳದಲ್ಲಿ ನಿಲ್ಲಿಸಿ, “ನೀನು ದೇವರ ಮಗನಾಗಿದ್ದರೆ, ಕೆಳಕ್ಕೆ ಧುಮುಕು!
10 ‘ದೇವರು ನಿನ್ನನ್ನು ಕಾಪಾಡುವುದಕ್ಕೆ ತನ್ನ ದೂತರಿಗೆ ಅಪ್ಪಣೆಕೊಡುವನು.’(C)
11 ‘ನಿನ್ನ ಪಾದವು ಕಲ್ಲಿಗೆ ತಗಲೀತೆಂದು
ಅವರು ತಮ್ಮ ಕೈಗಳಿಂದ ನಿನ್ನನ್ನು ಎತ್ತಿಕೊಳ್ಳುವರು’(D)
ಎಂಬುದಾಗಿ ಶಾಸ್ತ್ರದಲ್ಲಿ ಬರೆದಿದೆ” ಎಂದನು.
12 ಅದಕ್ಕೆ ಯೇಸು,
“‘ನಿನ್ನ ಪ್ರಭುವಾದ ದೇವರನ್ನು ಪರೀಕ್ಷಿಸಬಾರದು’(E)
ಎಂಬುದಾಗಿಯೂ ಬರೆದಿದೆ” ಎಂದು ಉತ್ತರಿಸಿದನು.
13 ಸೈತಾನನು ಯೇಸುವನ್ನು ನಾನಾ ವಿಧದಲ್ಲಿ ಶೋಧಿಸಿದ ನಂತರ, ತಕ್ಕಕಾಲ ಬರುವ ತನಕ ಆತನನ್ನು ಬಿಟ್ಟುಹೋದನು.
Kannada Holy Bible: Easy-to-Read Version. All rights reserved. © 1997 Bible League International