Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ವಿಮೋಚನಕಾಂಡ 34:29-35

ಮೋಶೆಯ ಹೊಳೆಯುವ ಮುಖ

29 ತರುವಾಯ ಮೋಶೆಯು ಸೀನಾಯಿ ಬೆಟ್ಟದಿಂದ ಇಳಿದು ಬಂದನು. ಒಡಂಬಡಿಕೆಯ ವಾಕ್ಯಗಳು ಬರೆಯಲ್ಪಟ್ಟಿದ್ದ ಎರಡು ಕಲ್ಲಿನ ಹಲಿಗೆಗಳನ್ನು ಅವನು ಹಿಡಿದುಕೊಂಡಿದ್ದನು. ಯೆಹೋವನು ಅವನೊಡನೆ ಮಾತಾಡಿದ್ದರಿಂದ ಅವನ ಮುಖವು ಹೊಳೆಯುತ್ತಿತ್ತು. ಆದರೆ ಮೋಶೆಗೆ ಇದು ತಿಳಿದಿರಲಿಲ್ಲ. 30 ಮೋಶೆಯ ಮುಖವು ಶುಭ್ರವಾಗಿ ಹೊಳೆಯುತ್ತಿರುವುದನ್ನು ಆರೋನನೂ ಇಸ್ರೇಲರೆಲ್ಲರೂ ನೋಡಿದರು. ಆದ್ದರಿಂದ ಅವನ ಬಳಿಗೆ ಹೋಗಲು ಅವರು ಭಯಪಟ್ಟರು. 31 ಆದರೆ ಮೋಶೆ ಅವರನ್ನು ಕರೆದನು. ಆದ್ದರಿಂದ ಆರೋನನೂ ಜನನಾಯಕರೆಲ್ಲರೂ ಮೋಶೆಯ ಬಳಿಗೆ ಹೋದರು. ಮೋಶೆಯು ಅವರೊಡನೆ ಮಾತಾಡಿದನು. 32 ಅದಾದನಂತರ, ಇಸ್ರೇಲರೆಲ್ಲರೂ ಮೋಶೆಯ ಬಳಿಗೆ ಬಂದರು. ಯೆಹೋವನು ಸೀನಾಯಿ ಬೆಟ್ಟದಲ್ಲಿ ತನಗೆ ಕೊಟ್ಟ ಆಜ್ಞೆಗಳನ್ನು ಮೋಶೆಯು ಅವರಿಗೆ ಕೊಟ್ಟನು.

33 ಮೋಶೆಯು ಜನರೊಡನೆ ಮಾತಾಡಿ ಮುಗಿಸಿದಾಗ, ತನ್ನ ಮುಖದ ಮೇಲೆ ಮುಸುಕನ್ನು ಹಾಕಿಕೊಂಡನು. 34 ಮೋಶೆಯು ಯೆಹೋವನೊಡನೆ ಮಾತಾಡಲು ಆತನ ಸನ್ನಿಧಿಗೆ ಹೋದಾಗಲೆಲ್ಲಾ ಮೋಶೆಯು ಮುಸುಕನ್ನು ತೆಗೆದಿಡುತ್ತಿದ್ದನು. ಬಳಿಕ ಮೋಶೆ ಹೊರಗೆ ಬಂದು ಯೆಹೋವನು ಆಜ್ಞಾಪಿಸಿದ ಸಂಗತಿಗಳನ್ನು ಇಸ್ರೇಲರಿಗೆ ತಿಳಿಸುತ್ತಿದ್ದನು. 35 ಮೋಶೆಯ ಮುಖವು ಶುಭ್ರವಾಗಿ ಹೊಳೆಯುತ್ತಿದ್ದುದನ್ನು ಜನರು ನೋಡಿದರು. ಆದ್ದರಿಂದ ಮೋಶೆಯು ಮುಂದಿನ ಸಾರಿ ಯೆಹೋವನೊಡನೆ ಮಾತಾಡಲು ಹೋಗುವವರೆಗೆ ತನ್ನ ಮುಖಕ್ಕೆ ಮುಸುಕು ಹಾಕಿಕೊಂಡಿರುವನು.

ಕೀರ್ತನೆಗಳು 99

99 ಯೆಹೋವನೇ ರಾಜನು!
    ಜನಾಂಗಗಳು ಭಯದಿಂದ ನಡುಗಲಿ.
ಆತನು ಕೆರೂಬಿಗಳ ಮೇಲೆ ರಾಜನಂತೆ ಕುಳಿತುಕೊಂಡಿದ್ದಾನೆ.
    ಭೂಮಿಯು ಭಯದಿಂದ ನಡುಗಲಿ.
ಚೀಯೋನಿನ ಯೆಹೋವನು ದೊಡ್ಡವನು!
    ಆತನು ಜನಾಂಗಗಳಿಗೆಲ್ಲಾ ಮಹಾನಾಯಕನಾಗಿದ್ದಾನೆ.
ಅವರೆಲ್ಲರೂ ನಿನ್ನ ಭಯಂಕರವಾದ ಹೆಸರನ್ನು ಕೊಂಡಾಡಲಿ.
    ಆತನೇ ಪರಿಶುದ್ಧನು.
ಶಕ್ತಿಪೂರ್ಣನಾದ ರಾಜನು ನ್ಯಾಯವನ್ನು ಪ್ರೀತಿಸುವನು.
    ದೇವರೇ, ನೀತಿಯನ್ನು ಸೃಷ್ಟಿಸಿದಾತನು ನೀನೇ.
    ಯಾಕೋಬ್ಯರಲ್ಲಿ ನ್ಯಾಯನೀತಿಗಳನ್ನು ಸ್ಥಾಪಿಸಿದವನು ನೀನೇ.
ನಮ್ಮ ದೇವರಾದ ಯೆಹೋವನನ್ನು ಕೊಂಡಾಡಿರಿ,
    ಆತನ ಪವಿತ್ರ ಪಾದಪೀಠಕ್ಕೆ[a] ಅಡ್ಡಬೀಳಿರಿ.
ಮೋಶೆಯೂ ಆರೋನನೂ ದೇವರ ಯಾಜಕರುಗಳಾಗಿದ್ದರು.
    ಸಮುವೇಲನೂ ಆತನ ಹೆಸರಿನಲ್ಲಿ ಪ್ರಾರ್ಥಿಸಿದನು.
ಆತನು ಅವರೆಲ್ಲರ ಪ್ರಾರ್ಥನೆಗಳಿಗೆ ಉತ್ತರಿಸಿದನು.
ಆತನು ಮೇಘಸ್ತಂಭದಿಂದ ಅವರೊಂದಿಗೆ ಮಾತಾಡಿದನು.
    ಅವರು ಆಜ್ಞೆಗಳಿಗೆ ವಿಧೇಯರಾದರು.
    ಆತನು ಅವರಿಗೆ ಧರ್ಮಶಾಸ್ತ್ರವನ್ನು ಕೊಟ್ಟನು.
ನಮ್ಮ ದೇವರಾದ ಯೆಹೋವನೇ, ನೀನು ಅವರ ಪ್ರಾರ್ಥನೆಗಳಿಗೆ ಉತ್ತರಿಸಿದೆ.
    ನೀನು ಕ್ಷಮಿಸುವ ದೇವರೆಂದೂ
    ದುಷ್ಕೃತ್ಯಗಳಿಗೆ ದಂಡಿಸುವವನೆಂದೂ ಅವರಿಗೆ ತೋರ್ಪಡಿಸಿದೆ.
ನಮ್ಮ ದೇವರಾದ ಯೆಹೋವನನ್ನು ಕೊಂಡಾಡಿರಿ.
    ಆತನ ಪವಿತ್ರ ಪರ್ವತದ ಕಡೆಗೆ ಅಡ್ಡಬಿದ್ದು ಆತನನ್ನು ಆರಾಧಿಸಿರಿ.
    ನಮ್ಮ ದೇವರಾದ ಯೆಹೋವನೇ ಪರಿಶುದ್ಧನು!

2 ಕೊರಿಂಥದವರಿಗೆ 3:12-4:2

12 ನಮಗೆ ಈ ನಿರೀಕ್ಷೆ ಇರುವುದರಿಂದ ನಾವು ಬಹಳ ಧೈರ್ಯವಾಗಿದ್ದೇವೆ. 13 ನಾವು ಮೋಶೆಯಂತಿಲ್ಲ. ಕುಂದಿ ಹೋಗುವ ಮಹಿಮೆಯು ಅಂತ್ಯಗೊಳ್ಳುವುದನ್ನು ಇಸ್ರೇಲರು ಕಾಣದಂತೆ ಮೋಶೆಯು ತನ್ನ ಮುಖಕ್ಕೆ ಮುಸುಕು ಹಾಕಿಕೊಂಡನು. 14 ಆದರೆ ಅವರ ಬುದ್ಧಿಗೆ ಮಂಕು ಕವಿದಿದ್ದರಿಂದ ಅವರು ಅರ್ಥಮಾಡಿಕೊಳ್ಳಲಾಗಲಿಲ್ಲ. ಅವರು ಹಳೆ ಒಡಂಬಡಿಕೆಯನ್ನು ಓದುವಾಗ ಇಂದಿಗೂ ಅದೇ ಮುಸುಕು ಅರ್ಥವನ್ನು ಮರೆಮಾಡುತ್ತದೆ. ಆ ಮುಸುಕನ್ನು ತೆಗೆದು ಹಾಕಲಿಲ್ಲ. ಏಕೆಂದರೆ ಕ್ರಿಸ್ತನ ಮೂಲಕವಾಗಿ ಮಾತ್ರ ಅದು ತೆಗೆದುಹಾಕಲ್ಪಡುತ್ತದೆ. 15 ಆದರೆ ಇಂದಿಗೂ ಸಹ, ಮೋಶೆಯ ಧರ್ಮಶಾಸ್ತ್ರವನ್ನು ಓದುವಾಗ, ಅವರ ಮನಸ್ಸುಗಳ ಮೇಲೆ ಮುಸುಕು ಇರುತ್ತದೆ. 16 ಆದರೆ ಒಬ್ಬ ವ್ಯಕ್ತಿಯು ಮಾರ್ಪಾಟಾಗಿ ಪ್ರಭುವನ್ನು ಅನುಸರಿಸುವಾಗ ಆ ಮುಸುಕು ತೆಗೆಯಲ್ಪಡುವುದು. 17 ಆ ಪ್ರಭುವು ಪವಿತ್ರಾತ್ಮನೇ. ಎಲ್ಲಿ ಪ್ರಭುವಿನ ಆತ್ಮನು ಇರುತ್ತಾನೋ ಅಲ್ಲಿ ಸ್ವತಂತ್ರವಿರುತ್ತದೆ. 18 ನಮ್ಮ ಮುಖಗಳು ಮುಸುಕಿನಿಂದ ಮುಚ್ಚಲ್ಪಟ್ಟಿಲ್ಲ. ನಾವೆಲ್ಲರೂ ಮುಸುಕು ತೆರೆದ ಮುಖವುಳ್ಳವರಾಗಿದ್ದು ಪ್ರಭುವಿನ ಮಹಿಮೆಯನ್ನು ಪ್ರತಿಬಿಂಬಿಸುವ ಕನ್ನಡಿಯಂತಿದ್ದೇವೆ. ಪ್ರಭುವಿನಿಂದ ಹೊರಹೊಮ್ಮುವ ಮಹಿಮೆಯು ನಮ್ಮನ್ನು ಅಧಿಕಾಧಿಕವಾಗಿ ಮಾರ್ಪಡಿಸಿ ಆತನನ್ನೇ ಹೋಲುವಂತೆ ಮಾಡುತ್ತದೆ. ಇದೆಲ್ಲಾ ದೇವರಾತ್ಮನಾಗಿರುವ ಪ್ರಭುವಿನ ಕಾರ್ಯವೇ.

ಮಡಕೆಗಳಲ್ಲಿರುವ ಆತ್ಮಿಕ ಭಂಡಾರ

ದೇವರು ತನ್ನ ಕೃಪೆಯಿಂದ ಈ ಸೇವೆಯನ್ನು ನಮಗೆ ಒಪ್ಪಿಸಿದ್ದಾನೆ. ಆದ್ದರಿಂದ ನಾವು ಧೈರ್ಯಗೆಡುವುದಿಲ್ಲ. ರಹಸ್ಯವಾದ ಮತ್ತು ನಾಚಿಕೆಕರವಾದ ಮಾರ್ಗಗಳಿಗೆ ನಾವು ವಿಮುಖರಾಗಿದ್ದೇವೆ. ನಾವು ಕುತಂತ್ರವನ್ನು ಉಪಯೋಗಿಸುವುದೂ ಇಲ್ಲ, ದೇವರ ಉಪದೇಶವನ್ನು ಬದಲಾಯಿಸುವುದೂ ಇಲ್ಲ. ನಾವು ಸತ್ಯವನ್ನು ಸ್ಪಷ್ಟವಾಗಿ ಬೋಧಿಸುತ್ತೇವೆ. ನಾವು ಯಾರೆಂಬುದನ್ನು ಜನರಿಗೆ ಈ ರೀತಿ ತೋರಿಸಿಕೊಡುತ್ತೇವೆ. ಹೀಗೆ ನಾವು ದೇವರ ಸಮ್ಮುಖದಲ್ಲಿ ಎಂಥಾ ಜನರಾಗಿದ್ದೇವೆ ಎಂಬುದನ್ನು ಅವರು ತಮ್ಮ ಹೃದಯಗಳಲ್ಲಿ ತಿಳಿದುಕೊಳ್ಳಬಲ್ಲರು.

ಲೂಕ 9:28-36

ಮೋಶೆ, ಎಲೀಯ ಮತ್ತು ಯೇಸು

(ಮತ್ತಾಯ 17:1-8; ಮಾರ್ಕ 9:2-8)

28 ಯೇಸು ಈ ಸಂಗತಿಗಳನ್ನು ಹೇಳಿ ಸುಮಾರು ಎಂಟು ದಿನಗಳಾದ ನಂತರ, ಪೇತ್ರ, ಯಾಕೋಬ ಮತ್ತು ಯೋಹಾನರನ್ನು ಕರೆದುಕೊಂಡು ಪ್ರಾರ್ಥನೆ ಮಾಡುವುದಕ್ಕೆ ಬೆಟ್ಟದ ಮೇಲೆ ಹೋದನು. 29 ಯೇಸು ಪ್ರಾರ್ಥಿಸುತ್ತಿದ್ದಾಗ, ಆತನ ಮುಖವು ರೂಪಾಂತರವಾಯಿತು. ಆತನ ಬಟ್ಟೆಗಳು ಬೆಳ್ಳಗೆ ಹೊಳೆಯತೊಡಗಿದವು. 30 ಆಗ ಇಬ್ಬರು ಪ್ರವಾದಿಗಳು ಯೇಸುವಿನೊಡನೆ ಮಾತನಾಡುತ್ತಿದ್ದರು. ಅವರು ಮೋಶೆ ಮತ್ತು ಎಲೀಯ. 31 ಇವರಿಬ್ಬರು ಸಹ ಪ್ರಕಾಶಮಾನವಾಗಿ ಹೊಳೆಯುತ್ತಿದ್ದರು. ಜೆರುಸಲೇಮಿನಲ್ಲಿ ಸಂಭವಿಸಲಿಕ್ಕಿದ್ದ ಆತನ ಮರಣದ ಬಗ್ಗೆ ಅವರು ಮಾತಾಡುತ್ತಿದ್ದರು. 32 ಗಾಢನಿದ್ರೆಯಲ್ಲಿದ್ದ ಪೇತ್ರ ಮತ್ತು ಇತರರು ಎಚ್ಚೆತ್ತಾಗ ಯೇಸುವಿನ ಮಹಿಮೆಯನ್ನೂ ಯೇಸುವಿನೊಡನೆ ನಿಂತಿದ್ದ ಅವರಿಬ್ಬರನ್ನೂ ಕಂಡರು. 33 ಮೋಶೆ ಮತ್ತು ಎಲೀಯ ಆತನನ್ನು ಬಿಟ್ಟುಹೋಗುತ್ತಿರುವಾಗ, ಪೇತ್ರನು, “ಗುರುವೇ, ನಾವು ಇಲ್ಲೇ ಇರುವುದು ಒಳ್ಳೆಯದು. ಇಲ್ಲಿ ನಾವು ಮೂರು ಗುಡಾರಗಳನ್ನು ಹಾಕುತ್ತೇವೆ. ನಿನಗೊಂದು, ಮೋಶೆಗೊಂದು ಮತ್ತು ಎಲೀಯನಿಗೊಂದು” ಎಂದು ಹೇಳಿದನು. (ಪೇತ್ರನಿಗೆ ತಾನು ಏನು ಹೇಳುತ್ತಿದ್ದೇನೆಂದು ತಿಳಿಯಲಿಲ್ಲ.)

34 ಪೇತ್ರನು ಈ ಸಂಗತಿಗಳನ್ನು ಹೇಳುತ್ತಿದ್ದಾಗ, ಮೋಡವು ಬಂದು ಅವರ ಸುತ್ತಲೂ ಆವರಿಸಿತು. ಆಗ ಪೇತ್ರ, ಯಾಕೋಬ ಮತ್ತು ಯೋಹಾನನಿಗೆ ಭಯವಾಯಿತು. 35 ಮೋಡದೊಳಗಿಂದ, “ಈತನು ನನ್ನ ಮಗನು. ನಾನು ಆರಿಸಿಕೊಂಡವನು ಇವನೇ. ಈತನಿಗೆ ವಿಧೇಯರಾಗಿರಿ” ಎಂಬ ವಾಣಿ ಕೇಳಿಸಿತು.

36 ಆ ವಾಣಿ ಆದಮೇಲೆ ಅವರು ಯೇಸುವನ್ನು ಮಾತ್ರ ಕಂಡರು. ಪೇತ್ರ, ಯಾಕೋಬ, ಯೋಹಾನರು ತಾವು ಕಂಡ ಈ ಸಂಗತಿಗಳಲ್ಲಿ ಒಂದನ್ನಾದರೂ ಆ ದಿವಸಗಳಲ್ಲಿ ಯಾರಿಗೂ ತಿಳಿಸದೆ ಮೌನವಾಗಿದ್ದರು.

ಲೂಕ 9:37-43

ದೆವ್ವದಿಂದ ಪೀಡಿತನಾಗಿದ್ದ ಬಾಲಕನಿಗೆ ಬಿಡುಗಡೆ

(ಮತ್ತಾಯ 17:14-18; ಮಾರ್ಕ 9:14-27)

37 ಮರುದಿನ, ಯೇಸು, ಪೇತ್ರ, ಯಾಕೋಬ ಮತ್ತು ಯೋಹಾನ ಬೆಟ್ಟದಿಂದಿಳಿದು ಬಂದರು. ಜನರ ಬಹು ದೊಡ್ಡ ಗುಂಪೊಂದು ಯೇಸುವನ್ನು ಎದುರುಗೊಂಡಿತು. 38 ಗುಂಪಿನಲ್ಲಿದ್ದ ಒಬ್ಬ ಮನುಷ್ಯನು, “ಉಪದೇಶಕನೇ, ದಯಮಾಡಿ ಬಂದು ನನ್ನ ಮಗನನ್ನು ನೋಡು. ನನಗೆ ಅವನೊಬ್ಬನೇ ಮಗನು. 39 ದೆವ್ವವೊಂದು ನನ್ನ ಮಗನೊಳಗೆ ಬರುತ್ತದೆ. ಆಗ ಅವನು ಕೂಗಾಡುತ್ತಾನೆ. ಸ್ವಾಧೀನ ಕಳೆದುಕೊಂಡು ಬಾಯಿಂದ ನೊರೆಸುರಿಸುತ್ತಾನೆ. ದೆವ್ವವು ಅವನನ್ನು ಒದ್ದಾಡಿಸಿ ಜಜ್ಜದ ಹೊರತು ಬಿಟ್ಟುಬಿಡುವುದೇ ಇಲ್ಲ. 40 ನನ್ನ ಮಗನನ್ನು ದೆವ್ವದಿಂದ ಬಿಡಿಸಬೇಕೆಂದು ನಿನ್ನ ಶಿಷ್ಯರನ್ನೂ ಬೇಡಿಕೊಂಡೆನು. ಆದರೆ ಅವರಿಂದ ಸಾಧ್ಯವಾಗಲಿಲ್ಲ” ಎಂದು ಯೇಸುವಿಗೆ ಕೂಗಿ ಹೇಳಿದನು.

41 ಆಗ ಯೇಸು, “ನಂಬಿಕೆಯಿಲ್ಲದ ದುಷ್ಟಸಂತಾನವೇ, ಇನೆಷ್ಟು ಕಾಲ ನಾನು ನಿಮ್ಮ ಸಂಗಡ ತಾಳ್ಮೆಯಿಂದ ಇರಲಿ?” ಎಂದು ಉತ್ತರಿಸಿ, ಆ ಮನುಷ್ಯನಿಗೆ, “ನಿನ್ನ ಮಗನನ್ನು ಇಲ್ಲಿಗೆ ಕರೆದುಕೊಂಡು ಬಾ” ಅಂದನು.

42 ಆ ಹುಡುಗನು ಬರುತ್ತಿದ್ದಾಗ, ದೆವ್ವವು ಅವನನ್ನು ನೆಲಕ್ಕೆ ಅಪ್ಪಳಿಸಿತು. ಹುಡುಗನು ತನ್ನ ಸ್ವಾಧೀನ ಕಳೆದುಕೊಂಡನು. ಆಗ ಯೇಸು ದೆವ್ವವನ್ನು ಗದರಿಸಿ ಆ ಹುಡುಗನನ್ನು ಗುಣಪಡಿಸಿದನು. ಬಳಿಕ ಅವನನ್ನು ಅವನ ತಂದೆಗೆ ಒಪ್ಪಿಸಿಕೊಟ್ಟನು. 43 ಜನರೆಲ್ಲರೂ ದೇವರ ಮಹಾಶಕ್ತಿಯನ್ನು ಕಂಡು ಬೆರಗಾದರು.

ತನ್ನ ಮರಣದ ಬಗ್ಗೆ ಯೇಸುವಿನ ಪ್ರಕಟಣೆ

(ಮತ್ತಾಯ 17:22-23; ಮಾರ್ಕ 9:30-32)

ಯೇಸು ಮಾಡಿದ ಎಲ್ಲಾ ಕಾರ್ಯಗಳ ಬಗ್ಗೆ ಜನರು ಇನ್ನೂ ಆಶ್ಚರ್ಯಚಕಿತರಾಗಿದ್ದರು. ಯೇಸು ತನ್ನ ಶಿಷ್ಯರಿಗೆ,

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International