Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 99

99 ಯೆಹೋವನೇ ರಾಜನು!
    ಜನಾಂಗಗಳು ಭಯದಿಂದ ನಡುಗಲಿ.
ಆತನು ಕೆರೂಬಿಗಳ ಮೇಲೆ ರಾಜನಂತೆ ಕುಳಿತುಕೊಂಡಿದ್ದಾನೆ.
    ಭೂಮಿಯು ಭಯದಿಂದ ನಡುಗಲಿ.
ಚೀಯೋನಿನ ಯೆಹೋವನು ದೊಡ್ಡವನು!
    ಆತನು ಜನಾಂಗಗಳಿಗೆಲ್ಲಾ ಮಹಾನಾಯಕನಾಗಿದ್ದಾನೆ.
ಅವರೆಲ್ಲರೂ ನಿನ್ನ ಭಯಂಕರವಾದ ಹೆಸರನ್ನು ಕೊಂಡಾಡಲಿ.
    ಆತನೇ ಪರಿಶುದ್ಧನು.
ಶಕ್ತಿಪೂರ್ಣನಾದ ರಾಜನು ನ್ಯಾಯವನ್ನು ಪ್ರೀತಿಸುವನು.
    ದೇವರೇ, ನೀತಿಯನ್ನು ಸೃಷ್ಟಿಸಿದಾತನು ನೀನೇ.
    ಯಾಕೋಬ್ಯರಲ್ಲಿ ನ್ಯಾಯನೀತಿಗಳನ್ನು ಸ್ಥಾಪಿಸಿದವನು ನೀನೇ.
ನಮ್ಮ ದೇವರಾದ ಯೆಹೋವನನ್ನು ಕೊಂಡಾಡಿರಿ,
    ಆತನ ಪವಿತ್ರ ಪಾದಪೀಠಕ್ಕೆ[a] ಅಡ್ಡಬೀಳಿರಿ.
ಮೋಶೆಯೂ ಆರೋನನೂ ದೇವರ ಯಾಜಕರುಗಳಾಗಿದ್ದರು.
    ಸಮುವೇಲನೂ ಆತನ ಹೆಸರಿನಲ್ಲಿ ಪ್ರಾರ್ಥಿಸಿದನು.
ಆತನು ಅವರೆಲ್ಲರ ಪ್ರಾರ್ಥನೆಗಳಿಗೆ ಉತ್ತರಿಸಿದನು.
ಆತನು ಮೇಘಸ್ತಂಭದಿಂದ ಅವರೊಂದಿಗೆ ಮಾತಾಡಿದನು.
    ಅವರು ಆಜ್ಞೆಗಳಿಗೆ ವಿಧೇಯರಾದರು.
    ಆತನು ಅವರಿಗೆ ಧರ್ಮಶಾಸ್ತ್ರವನ್ನು ಕೊಟ್ಟನು.
ನಮ್ಮ ದೇವರಾದ ಯೆಹೋವನೇ, ನೀನು ಅವರ ಪ್ರಾರ್ಥನೆಗಳಿಗೆ ಉತ್ತರಿಸಿದೆ.
    ನೀನು ಕ್ಷಮಿಸುವ ದೇವರೆಂದೂ
    ದುಷ್ಕೃತ್ಯಗಳಿಗೆ ದಂಡಿಸುವವನೆಂದೂ ಅವರಿಗೆ ತೋರ್ಪಡಿಸಿದೆ.
ನಮ್ಮ ದೇವರಾದ ಯೆಹೋವನನ್ನು ಕೊಂಡಾಡಿರಿ.
    ಆತನ ಪವಿತ್ರ ಪರ್ವತದ ಕಡೆಗೆ ಅಡ್ಡಬಿದ್ದು ಆತನನ್ನು ಆರಾಧಿಸಿರಿ.
    ನಮ್ಮ ದೇವರಾದ ಯೆಹೋವನೇ ಪರಿಶುದ್ಧನು!

ಧರ್ಮೋಪದೇಶಕಾಂಡ 9:6-14

ನಿಮ್ಮ ದೇವರಾದ ಯೆಹೋವನು ಆ ಉತ್ತಮವಾದ ದೇಶವನ್ನು ನಿಮಗೆ ವಾಸಿಸಲು ಕೊಡುವನು. ನೀವು ಒಳ್ಳೆಯವರು ಎಂಬುದಾಗಿ ಅಲ್ಲ. ನಿಜವಾಗಿ ಹೇಳಬೇಕಾದರೆ ನೀವು ಹಠಮಾರಿಗಳು.

ಯೆಹೋವನ ಕೋಪವನ್ನು ನೆನಪಿಗೆ ತಂದುಕೊಳ್ಳಿರಿ

“ನೀವು ಅರಣ್ಯದಲ್ಲಿ ಪ್ರಯಾಣ ಮಾಡುತ್ತಿದ್ದಾಗ ನಿಮ್ಮ ದೇವರಾದ ಯೆಹೋವನನ್ನು ನೀವು ಸಿಟ್ಟಿಗೆಬ್ಬಿಸಿದ್ದನ್ನು ಮರೆಯಬೇಡಿರಿ. ನೀವು ಈಜಿಪ್ಟ್ ದೇಶವನ್ನು ಬಿಟ್ಟುಬಂದಂದಿನಿಂದ ಈ ದಿನದ ತನಕವೂ ಆತನ ಮಾತನ್ನು ಅನುಸರಿಸಲು ನಿರಾಕರಿಸಿರುವಿರಿ. ನೀವು ಹೋರೇಬ್ ಎಂಬ ಸೀನಾಯ್ ಬೆಟ್ಟದಲ್ಲಿ ಯೆಹೋವನನ್ನು ಬಹಳ ಸಿಟ್ಟಿಗೆಬ್ಬಿಸಿದ್ದೀರಿ. ಯೆಹೋವನು ನಿಮ್ಮನ್ನು ನಾಶಪಡಿಸುವಷ್ಟು ಕೋಪಗೊಂಡಿದ್ದನು. ನಾನು ಕಲ್ಲಿನ ಹಲಗೆಗಳನ್ನು ತೆಗೆದುಕೊಂಡು ಬರಲು ಬೆಟ್ಟದ ಮೇಲೇರಿದ್ದೆನು. ಯೆಹೋವ ದೇವರು ನಿಮ್ಮೊಂದಿಗೆ ಮಾಡಿಕೊಂಡ ಒಡಂಬಡಿಕೆ ಆ ಹಲಗೆಯ ಮೇಲೆ ಬರೆಯಲ್ಪಟ್ಟಿತ್ತು. ನಾನು ಆ ಬೆಟ್ಟದ ಮೇಲೆ ನಲವತ್ತು ದಿವಸ ಹಗಲಿರುಳು ಕಳೆದೆನು. ನಾನು ಅನ್ನವನ್ನಾಗಲಿ ನೀರನ್ನಾಗಲಿ ತೆಗೆದುಕೊಳ್ಳಲಿಲ್ಲ. 10 ಯೆಹೋವನು ತನ್ನ ಬೆರಳಿನಿಂದ ಕಲ್ಲಿನ ಹಲಗೆಗಳ ಮೇಲೆ ಆಜ್ಞೆಗಳನ್ನು ಬರೆದು ನನಗೆ ಕೊಟ್ಟನು. ನೀವು ಸೀನಾಯ್ ಬೆಟ್ಟದ ಬಳಿ ಸಮೂಹವಾಗಿ ಸೇರಿಬಂದಿದ್ದಾಗ ಆತನು ಬೆಂಕಿಯ ಜ್ವಾಲೆಯೊಳಗಿಂದ ನಿಮಗೆ ತಿಳಿಸಿದ ಪ್ರತಿಯೊಂದನ್ನೂ ಬರೆದಿದ್ದನು.

11 “ಹಾಗೆ ನಲವತ್ತು ದಿನಗಳ ಅಂತ್ಯದಲ್ಲಿ ಯೆಹೋವನು ಒಡಂಬಡಿಕೆಯನ್ನು ಬರೆದಿದ್ದ ಆ ಎರಡು ಕಲ್ಲಿನ ಹಲಗೆಗಳನ್ನು ನನಗೆ ಕೊಟ್ಟನು. 12 ಆಗ ಆತನು ನನಗೆ, ‘ಎದ್ದು ಬೇಗನೆ ಕೆಳಗಿಳಿ. ಯಾಕೆಂದರೆ ನೀನು ಈಜಿಪ್ಟಿನಿಂದ ಬಿಡಿಸಿತಂದ ಜನರು ತಮ್ಮನ್ನು ತಾವೇ ಕೆಡಿಸಿಕೊಂಡಿದ್ದಾರೆ. ಇಷ್ಟು ಬೇಗನೆ ಅವರು ನನ್ನ ಆಜ್ಞೆಗಳನ್ನು ಮೀರಿದ್ದಾರೆ. ಅವರು ಬಂಗಾರವನ್ನು ಕರಗಿಸಿ ತಮಗಾಗಿ ವಿಗ್ರಹವನ್ನು ಮಾಡಿಕೊಂಡಿದ್ದಾರೆ’ ಎಂದು ಹೇಳಿದನು.

13 “ಅಲ್ಲದೆ ಯೆಹೋವನು ನನಗೆ, ‘ನಾನು ಈ ಜನರನ್ನು ಗಮನಿಸುತ್ತಿದ್ದೇನೆ. ಇವರು ತುಂಬಾ ಹಠಮಾರಿಗಳು. 14 ಇವರನ್ನು ನಾನು ಸಂಪೂರ್ಣವಾಗಿ ನಾಶಮಾಡುತ್ತೇನೆ. ಅವರ ಹೆಸರುಗಳನ್ನು ಯಾರೂ ನೆನಪಿನಲ್ಲಿಟ್ಟುಕೊಳ್ಳದಂತೆ ಮಾಡುತ್ತೇನೆ. ಆಮೇಲೆ ನಾನು ನಿನ್ನಿಂದ ಬಲಿಷ್ಠವಾದ ಮಹಾಜನಾಂಗವನ್ನು ನಿರ್ಮಿಸುತ್ತೇನೆ’ ಎಂದು ಹೇಳಿದನು.

ಅಪೊಸ್ತಲರ ಕಾರ್ಯಗಳು 10:1-8

ಪೇತ್ರ ಮತ್ತು ಕೊರ್ನೇಲಿಯ

10 ಸೆಜರೇಯ ಪಟ್ಟಣದಲ್ಲಿ ಕೊರ್ನೇಲಿಯ ಎಂಬವನಿದ್ದನು. ರೋಮಿನ ಸೈನ್ಯಕ್ಕೆ ಸೇರಿದ “ಇಟಲಿಯ ದಳ”ದಲ್ಲಿ ಅವನು ಅಧಿಕಾರಿಯಾಗಿದ್ದನು. ಕೊರ್ನೇಲಿಯನು ದೈವಭಕ್ತನಾಗಿದ್ದನು. ಅವನು ಮತ್ತು ಅವನ ಕುಟುಂಬದಲ್ಲಿ ವಾಸವಾಗಿದ್ದ ಇತರ ಎಲ್ಲಾ ಜನರು ನಿಜದೇವರನ್ನು ಆರಾಧಿಸುತ್ತಿದ್ದರು. ಅವನು ಬಡವರಿಗೆ ಧಾರಾಳವಾಗಿ ಹಣವನ್ನು ಕೊಡುತ್ತಿದ್ದನು. ಯಾವಾಗಲೂ ದೇವರಲ್ಲಿ ಪ್ರಾರ್ಥಿಸುತ್ತಿದ್ದನು. ಒಂದು ಮಧ್ಯಾಹ್ನ ಸುಮಾರು ಮೂರು ಗಂಟೆಯಲ್ಲಿ ಕೊರ್ನೇಲಿಯನಿಗೆ ಒಂದು ದರ್ಶನವಾಯಿತು. ಅವನು ಅದನ್ನು ಸ್ಪಷ್ಟವಾಗಿ ಕಂಡನು. ಆ ದರ್ಶನದಲ್ಲಿ ದೇವದೂತನೊಬ್ಬನು ಅವನ ಬಳಿಗೆ ಬಂದು, “ಕೊರ್ನೇಲಿಯನೇ” ಎಂದು ಕರೆದನು.

ಕೊರ್ನೇಲಿಯನು ದೇವದೂತನನ್ನು ಕಂಡು ಭಯದಿಂದ “ಸ್ವಾಮೀ, ನಿಮಗೇನು ಬೇಕು?” ಎಂದು ಕೇಳಿದನು.

ಆ ದೇವದೂತನು ಅವನಿಗೆ, “ದೇವರು ನಿನ್ನ ಪ್ರಾರ್ಥನೆಗಳನ್ನು ಕೇಳಿದ್ದಾನೆ. ನೀನು ಬಡವರಿಗೆ ಕೊಟ್ಟವುಗಳನ್ನು ಆತನು ನೋಡಿದ್ದಾನೆ. ದೇವರು ನಿನ್ನನ್ನು ಮೆಚ್ಚಿಕೊಂಡಿದ್ದಾನೆ. ಈಗ ಸೀಮೋನ ಎಂಬ ವ್ಯಕ್ತಿಯನ್ನು ಕರೆದುಕೊಂಡು ಬರುವುದಕ್ಕಾಗಿ ನೀನು ಜನರನ್ನು ಜೊಪ್ಪ ಪಟ್ಟಣಕ್ಕೆ ಕಳುಹಿಸು. ಸೀಮೋನನನ್ನು ‘ಪೇತ್ರ’ ಎಂತಲೂ ಕರೆಯುತ್ತಾರೆ. ಸೀಮೋನನು ಚರ್ಮಕಾರನ ಮನೆಯಲ್ಲಿ ಇಳಿದುಕೊಂಡಿದ್ದಾನೆ. ಅವನ ಮನೆಯು ಸಮುದ್ರ ತೀರದಲ್ಲಿದೆ” ಎಂದು ಹೇಳಿದನು. ಕೊರ್ನೇಲಿಯನೊಂದಿಗೆ ಮಾತಾಡಿದ ದೇವದೂತನು ಹೊರಟುಹೋದನು. ಬಳಿಕ ಕೊರ್ನೇಲಿಯನು ತನ್ನ ಸೇವಕರಲ್ಲಿ ಇಬ್ಬರನ್ನೂ ಒಬ್ಬ ಸೈನಿಕನನ್ನೂ ಕರೆದನು. ಈ ಸೈನಿಕನು ದೈವಭಕ್ತನಾಗಿದ್ದನು. ಕೊರ್ನೇಲಿಯನ ಆಪ್ತಸಹಾಯಕರಲ್ಲಿ ಇವನೂ ಒಬ್ಬನಾಗಿದ್ದನು. ಕೊರ್ನೇಲಿಯನು ಈ ಮೂವರಿಗೆ ಪ್ರತಿಯೊಂದನ್ನೂ ವಿವರಿಸಿದನು. ಬಳಿಕ ಅವರನ್ನು ಜೊಪ್ಪಕ್ಕೆ ಕಳುಹಿಸಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International