Revised Common Lectionary (Semicontinuous)
ಜ್ಞಾಪಕಾರ್ಥ ನೈವೇದ್ಯ ಸಮರ್ಪಣೆಯ ಹಾಡು. ರಚನೆಗಾರ: ದಾವೀದ.
38 ಯೆಹೋವನೇ, ಕೋಪದಿಂದ ನನ್ನನ್ನು ಶಿಕ್ಷಿಸಬೇಡ.
ರೋಷದಿಂದ ನನ್ನನ್ನು ಶಿಸ್ತುಗೊಳಿಸಬೇಡ.
2 ನಿನ್ನಿಂದ ನನಗೆ ನೋವಾಗಿದೆ.
ನಿನ್ನ ಬಾಣಗಳು ನನಗೆ ನಾಟಿಕೊಂಡಿವೆ.
3 ನೀನು ಶಿಕ್ಷಿಸಿದ್ದರಿಂದ ನನ್ನ ಇಡೀ ದೇಹ ಹುಣ್ಣಾಗಿದೆ.
ನಾನು ಪಾಪಮಾಡಿದ್ದರಿಂದ ನನ್ನ ಎಲುಬುಗಳೆಲ್ಲ ನೋಯುತ್ತಿವೆ.
4 ನಾನು ಅಪರಾಧಿಯಾಗಿದ್ದೇನೆ.
ನನ್ನ ಅಪರಾಧಗಳು ನನ್ನ ಭುಜಗಳ ಮೇಲೆ ಭಾರವಾದ ಹೊರೆಯಂತಿವೆ.
5 ನಾನೊಂದು ಮೂರ್ಖ ಕೆಲಸವನ್ನು ಮಾಡಿದೆನು.
ಈಗ ನನಗೆ ಕೀವು ಸೋರಿ ದುರ್ವಾಸನೆಯಿಂದಿರುವ ಹುಣ್ಣುಗಳಾಗಿವೆ.
6 ನಾನು ಬಾಗಿ ಕುಗ್ಗಿಹೋಗಿದ್ದೇನೆ.
ನಾನು ದಿನವೆಲ್ಲಾ ನಿರುತ್ಸಾಹನಾಗಿದ್ದೇನೆ.
7 ನನಗೆ ಜ್ವರವಿದೆ,
ನನ್ನ ಇಡೀ ದೇಹ ನೋಯುತ್ತಿದೆ.
8 ನನಗೆ ಬಹಳ ನೋವಿರುವುದರಿಂದ ಜೋಮು ಹಿಡಿದಂತಿದೆ.
ಹೃದಯದ ವೇದನೆಯಿಂದ ಅರಚಿಕೊಳ್ಳುತ್ತಾ ಇದ್ದೇನೆ.
9 ನನ್ನ ಒಡೆಯನೇ, ನೀನು ನನ್ನ ನರಳಾಟವನ್ನು ಕೇಳಿರುವೆ.
ನನ್ನ ನಿಟ್ಟುಸಿರು ನಿನಗೆ ಮರೆಯಾಗಿಲ್ಲ.
10 ನನ್ನ ಹೃದಯದ ವೇದನೆಯಿಂದ ಶಕ್ತಿಯು ಕುಂದಿಹೋಗಿದೆ;
ನನ್ನ ದೃಷ್ಟಿಯು ಹಿಂಗಿಹೋಗಿದೆ.
11 ನಾನು ಅಸ್ವಸ್ಥನಾಗಿರುವುದರಿಂದ
ನನ್ನ ಸ್ನೇಹಿತರಾಗಲಿ ನೆರೆಯವರಾಗಲಿ ನನ್ನನ್ನು ನೋಡಲು ಬರುವುದಿಲ್ಲ.
ನನ್ನ ಕುಟುಂಬದವರು ನನ್ನ ಸಮೀಪಕ್ಕೂ ಬರುವುದಿಲ್ಲ.
12 ನನ್ನ ವೈರಿಗಳು ಬಲೆಗಳನ್ನು ಒಡ್ಡಿದ್ದಾರೆ;
ನನ್ನ ನಾಶನದ ಕುರಿತು ಅವರು ಮಾತಾಡುತ್ತಿದ್ದಾರೆ;
ದಿನವೆಲ್ಲಾ ಕುತಂತ್ರವನ್ನು ಮಾಡುತ್ತಿದ್ದಾರೆ.
13 ಆದರೆ ನಾನು ಕಿವುಡನಂತೆ ಕೇಳದವನಾಗಿದ್ದೇನೆ.
ಮೂಕನಂತೆ ಮಾತಾಡದವನಾಗಿದ್ದೇನೆ.
14 ನಾನು ಕಿವಿಕೇಳಿಸದವನಂತೆಯೂ
ಪ್ರತ್ಯುತ್ತರ ಕೊಡಲಾರದವನಂತೆಯೂ ಆದೆನು.
15 ಯೆಹೋವನೇ, ನಿನ್ನನ್ನೇ ನಿರೀಕ್ಷಿಸಿಕೊಂಡಿದ್ದೇನೆ.
ನನ್ನ ಒಡೆಯನಾದ ದೇವರೇ, ನನಗೆ ಉತ್ತರ ನೀಡು.
16 ನಾನು ಏನೇ ಹೇಳಿದರೂ ವೈರಿಗಳು ನನ್ನನ್ನು ನೋಡಿ ನಗುವರು.
ನನ್ನ ಕಾಯಿಲೆಯು ಪಾಪದ ಫಲವೆಂದು ಹೇಳುವರು.
17 ನಾನು ಅಪರಾಧಿಯೆಂದು ನನಗೆ ಗೊತ್ತಿದೆ;
ನನ್ನ ನೋವನ್ನು ಮರೆಯಲಾರೆ.
18 ನನ್ನ ಅಪರಾಧಗಳನ್ನು ನಿನಗೆ ಅರಿಕೆ ಮಾಡಿಕೊಂಡಿದ್ದೇನೆ.
ನನ್ನ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟಿದ್ದೇನೆ.
19 ನನ್ನ ವೈರಿಗಳು ಚುರುಕಾಗಿಯೂ ಬಲಶಾಲಿಗಳಾಗಿಯೂ ಇದ್ದಾರೆ.
ಅವರು ಎಷ್ಟೋ ಸುಳ್ಳುಗಳನ್ನು ಹೇಳಿದರು.
20 ನಾನು ಉಪಕಾರವನ್ನು ಮಾಡಿದ್ದರೂ
ನನ್ನ ವೈರಿಗಳು ನನಗೆ ಅಪಕಾರವನ್ನೇ ಮಾಡುವರು.
ನಾನು ಒಳ್ಳೆಯದನ್ನು ಮಾಡಬೇಕೆಂದರೂ
ಅವರು ನನ್ನನ್ನು ವಿರೋಧಿಸುತ್ತಾರೆ.
21 ಯೆಹೋವನೇ, ನನ್ನನ್ನು ಕೈಬಿಡಬೇಡ!
ನನ್ನ ದೇವರೇ, ನನ್ನ ಸಮೀಪದಲ್ಲೇ ಇರು!
22 ಯೆಹೋವನೇ, ನನ್ನ ರಕ್ಷಕನೇ,
ಬೇಗನೆ ಬಂದು ನನಗೆ ಸಹಾಯಮಾಡು!
ತಿಳಿಯದೆ ಮಾಡುವ ಪಾಪಗಳು
5 “ನ್ಯಾಯಾಧಿಕಾರಿಯು ತಿಳಿಸಬೇಕೆಂದು ಕೇಳಿದರೂ ಒಬ್ಬನು ತಾನು ಕಂಡದ್ದನ್ನಾಗಲಿ ಕೇಳಿದ್ದನ್ನಾಗಲಿ ತಿಳಿಸದೆ ಹೋದರೆ ಅವನು ಪಾಪಕ್ಕೆ ಗುರಿಯಾಗಿದ್ದಾನೆ.
2 “ಯಾವನಾದರೂ ಅಶುದ್ಧವಾದ ಕಾಡುಮೃಗ, ಪಶು, ಜಂತು ಇವುಗಳ ಹೆಣವನ್ನಾಗಲಿ ಅಥವಾ ಬೇರೆ ಯಾವ ಅಶುದ್ಧ ವಸ್ತುವನ್ನಾಗಲಿ ಮುಟ್ಟಿದರೆ ತಾನು ಮುಟ್ಟಿದ್ದು ತಿಳಿಯದಿದ್ದರೂ ಅವನು ಅಶುದ್ಧನೂ ದೋಷಿಯೂ ಆಗಿರುವನು.
3 “ಒಬ್ಬನು ಮತ್ತೊಬ್ಬನ ದೇಹದೊಳಗಿಂದ ಬರುವ ಯಾವುದಾದರೂ ಅಶುದ್ಧ ವಸ್ತುವನ್ನು ತಿಳಿಯದೆ ಮುಟ್ಟಿದರೂ, ತಿಳಿದುಬಂದಾಗ ಅವನು ದೋಷಿಯಾಗುವನು.
4 “ಒಬ್ಬನು ಆಲೋಚಿಸದೆ ಒಳ್ಳೆಯದಕ್ಕಾಗಲಿ ಕೆಟ್ಟದಕ್ಕಾಗಲಿ ಮಾತುಕೊಟ್ಟು ಮರೆತುಬಿಟ್ಟರೆ, ಅದು ಅವನ ನೆನಪಿಗೆ ಬಂದಾಗ ಅವನು ದೋಷಿಯಾಗುವನು. 5 ಈ ವಿಷಯಗಳಲ್ಲಿ ಯಾವುದಾದರೊಂದರಲ್ಲಿ ದೋಷಿಯಾದರೆ, ಅವನು ತನ್ನ ತಪ್ಪನ್ನು ಒಪ್ಪಿಕೊಂಡು ಅರಿಕೆ ಮಾಡಬೇಕು. 6 ಅವನು ದೋಷಪರಿಹಾರಕ್ಕಾಗಿ ಹೆಣ್ಣು ಕುರಿಮರಿಯನ್ನಾಗಲಿ ಹೆಣ್ಣು ಮೇಕೆಯನ್ನಾಗಲಿ ಯಜ್ಞವಾಗಿ ಸಮರ್ಪಿಸಬೇಕು. ಯಾಜಕನು ಅವನಿಗೋಸ್ಕರ ದೋಷಪರಿಹಾರ ಮಾಡುವನು.
7 “ಅವನು ಕುರಿಮರಿಯನ್ನು ಕೊಡುವುದಕ್ಕೆ ಶಕ್ತನಾಗಿಲ್ಲದಿದ್ದರೆ, ಎರಡು ಬೆಳವಕ್ಕಿಗಳನ್ನಾಗಲಿ ಅಥವಾ ಎರಡು ಪಾರಿವಾಳದ ಮರಿಗಳನ್ನಾಗಲಿ ತಂದು ಅವುಗಳಲ್ಲಿ ಒಂದನ್ನು ದೋಷಪರಿಹಾರಕ ಯಜ್ಞವನ್ನಾಗಿಯೂ ಇನ್ನೊಂದನ್ನು ಸರ್ವಾಂಗಹೋಮವಾಗಿಯೂ ಸಮರ್ಪಿಸಬೇಕು. 8 ಅವನು ಅವುಗಳನ್ನು ಯಾಜಕನ ಬಳಿಗೆ ತರಬೇಕು. ಯಾಜಕನು ಮೊದಲು ಒಂದು ಪಕ್ಷಿಯನ್ನು ದೋಷಪರಿಹಾರಕ ಯಜ್ಞವನ್ನಾಗಿ ಅರ್ಪಿಸುವನು. ಯಾಜಕನು ಪಕ್ಷಿಯ ಕುತ್ತಿಗೆಯನ್ನು ಮುರಿಯುವನು. ಆದರೆ ಯಾಜಕನು ಪಕ್ಷಿಯನ್ನು ಎರಡು ಭಾಗಗಳನ್ನಾಗಿ ವಿಭಾಗಿಸುವುದಿಲ್ಲ. 9 ಯಾಜಕನು ದೋಷಪರಿಹಾರಕ ಯಜ್ಞದಿಂದ ರಕ್ತವನ್ನು ತೆಗೆದುಕೊಂಡು ಯಜ್ಞವೇದಿಕೆಯ ಬದಿಯಲ್ಲಿ ಚಿಮಿಕಿಸಬೇಕು. ಬಳಿಕ ಯಾಜಕನು ಉಳಿದ ರಕ್ತವನ್ನು ವೇದಿಕೆಯ ಬುಡದಲ್ಲಿ ಸುರಿಯಬೇಕು. ಅದು ಪಾಪಪರಿಹಾರಕ ಯಜ್ಞವಾಗಿರುತ್ತದೆ. 10 ತರುವಾಯ ಯಾಜಕನು ಎರಡನೆಯ ಪಕ್ಷಿಯನ್ನು ಸರ್ವಾಂಗಹೋಮದ ವಿಧಿಗಳಿಗನುಸಾರವಾಗಿ ಅರ್ಪಿಸಬೇಕು. ಈ ರೀತಿಯಾಗಿ, ಯಾಜಕನು ಆ ವ್ಯಕ್ತಿಯನ್ನು ಅವನು ಮಾಡಿದ ಪಾಪದಿಂದ ಶುದ್ಧಿಗೊಳಿಸುವನು. ಆಗ ದೇವರು ಅವನನ್ನು ಕ್ಷಮಿಸುವನು.
11 “ಎರಡು ಬೆಳವಕ್ಕಿಗಳನ್ನಾಗಲಿ ಅಥವಾ ಎರಡು ಪಾರಿವಾಳದ ಮರಿಗಳನ್ನಾಗಲಿ ತರುವುದಕ್ಕೆ ಅವನು ಶಕ್ತನಾಗಿಲ್ಲದಿದ್ದರೆ, ಆಗ ಅವನು ಎಂಟು ಬಟ್ಟಲು[a] ಶ್ರೇಷ್ಠ ಗೋಧಿಹಿಟ್ಟನ್ನು ತರಬೇಕು. ಇದು ಅವನ ಪಾಪಪರಿಹಾರಕ ಯಜ್ಞವಾಗಿರುವುದು. ಅವನು ಹಿಟ್ಟಿಗೆ ಎಣ್ಣೆಯನ್ನು ಹಾಕಬಾರದು. ಅವನು ಅದರ ಮೇಲೆ ಸುಗಂಧ ಧೂಪವನ್ನು ಇಡಬಾರದು, ಯಾಕೆಂದರೆ ಅದು ಪಾಪಪರಿಹಾರಕ ಯಜ್ಞವಾಗಿರುತ್ತದೆ. 12 ಅವನು ಹಿಟ್ಟನ್ನು ಯಾಜಕನ ಬಳಿಗೆ ತರಬೇಕು. ಯಾಜಕನು ಒಂದು ಹಿಡಿಹಿಟ್ಟನ್ನು ಅದರಿಂದ ತೆಗೆದು ದೇವಾರ್ಪಿತವಾಯಿತೆಂದು ಸೂಚಿಸುವುದಕ್ಕಾಗಿ ವೇದಿಕೆಯ ಮೇಲೆ ಹೋಮಮಾಡುವನು. ಅದು ಅಗ್ನಿಯ ಮೂಲಕ ಯೆಹೋವನಿಗೆ ಅರ್ಪಿಸಿದ ಸಮರ್ಪಣೆಯಾಗಿರುವುದು. ಅದು ಪಾಪಪರಿಹಾರಕ ಸಮರ್ಪಣೆಯಾಗಿದೆ. 13 ಹೀಗೆ ಆ ವ್ಯಕ್ತಿಯನ್ನು ಅವನ ದೋಷಗಳಿಂದ ಶುದ್ಧೀಕರಿಸುವನು. ಆಗ ದೇವರು ಆ ವ್ಯಕ್ತಿಯನ್ನು ಕ್ಷಮಿಸುವನು. ಧಾನ್ಯನೈವೇದ್ಯದಲ್ಲಿರುವಂತೆಯೇ ಯಜ್ಞದಲ್ಲಿ ಉಳಿದ ಭಾಗವು ಯಾಜಕನಿಗೆ ಸೇರಿದೆ. ಧಾನ್ಯಸಮರ್ಪಣೆಯಲ್ಲಿಯೂ ಉಳಿದ ಭಾಗವು ಯಾಜಕನಿಗೆ ಸೇರಿದೆ.”
ಪಾಪ
(ಮತ್ತಾಯ 18:6-7,21-22; ಮಾರ್ಕ 9:42)
17 ಯೇಸು ತನ್ನ ಶಿಷ್ಯರಿಗೆ, “ಜನರನ್ನು ಪಾಪಕ್ಕೆ ನಡೆಸುವಂಥ ಸಂಗತಿಗಳು ಖಂಡಿತವಾಗಿ ಬರುತ್ತವೆ. ಆದರೆ ಅವುಗಳನ್ನು ಬರಮಾಡುವವನ ಗತಿಯನ್ನು ಏನು ಹೇಳಲಿ! 2 ಬಲಹೀನರಾದ ಇವರನ್ನು ಪಾಪಕ್ಕೆ ನಡೆಸುವವನು ತನ್ನ ಕುತ್ತಿಗೆಗೆ ಒಂದು ದೊಡ್ಡ ಕಲ್ಲನ್ನು ಕಟ್ಟಿಕೊಂಡು ನೀರಿನಲ್ಲಿ ಮುಳುಗುವುದೇ ಉತ್ತಮ. 3 ಆದ್ದರಿಂದ ಎಚ್ಚರಿಕೆಯಾಗಿರಿ!
“ನಿನ್ನ ಸಹೋದರನು ಪಾಪಮಾಡಿದರೆ, ಅವನನ್ನು ಖಂಡಿಸು. ಒಂದುವೇಳೆ ಅವನೇನಾದರೂ ತನ್ನ ತಪ್ಪಿಗಾಗಿ ಪಶ್ಚಾತ್ತಾಪಪಟ್ಟರೆ ಅವನನ್ನು ಕ್ಷಮಿಸು. 4 ನಿನ್ನ ಸಹೋದರನು ನಿನಗೆ ಒಂದು ದಿನದಲ್ಲಿ ಏಳು ಸಲ ತಪ್ಪುಮಾಡಿ, ಪ್ರತಿಸಲವೂ, ‘ನನ್ನನ್ನು ಕ್ಷಮಿಸು’ ಎಂದು ಕೇಳಿಕೊಂಡರೆ, ನೀನು ಅವನನ್ನು ಕ್ಷಮಿಸಬೇಕು” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International