Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 38

ಜ್ಞಾಪಕಾರ್ಥ ನೈವೇದ್ಯ ಸಮರ್ಪಣೆಯ ಹಾಡು. ರಚನೆಗಾರ: ದಾವೀದ.

38 ಯೆಹೋವನೇ, ಕೋಪದಿಂದ ನನ್ನನ್ನು ಶಿಕ್ಷಿಸಬೇಡ.
    ರೋಷದಿಂದ ನನ್ನನ್ನು ಶಿಸ್ತುಗೊಳಿಸಬೇಡ.
ನಿನ್ನಿಂದ ನನಗೆ ನೋವಾಗಿದೆ.
    ನಿನ್ನ ಬಾಣಗಳು ನನಗೆ ನಾಟಿಕೊಂಡಿವೆ.
ನೀನು ಶಿಕ್ಷಿಸಿದ್ದರಿಂದ ನನ್ನ ಇಡೀ ದೇಹ ಹುಣ್ಣಾಗಿದೆ.
    ನಾನು ಪಾಪಮಾಡಿದ್ದರಿಂದ ನನ್ನ ಎಲುಬುಗಳೆಲ್ಲ ನೋಯುತ್ತಿವೆ.
ನಾನು ಅಪರಾಧಿಯಾಗಿದ್ದೇನೆ.
    ನನ್ನ ಅಪರಾಧಗಳು ನನ್ನ ಭುಜಗಳ ಮೇಲೆ ಭಾರವಾದ ಹೊರೆಯಂತಿವೆ.
ನಾನೊಂದು ಮೂರ್ಖ ಕೆಲಸವನ್ನು ಮಾಡಿದೆನು.
    ಈಗ ನನಗೆ ಕೀವು ಸೋರಿ ದುರ್ವಾಸನೆಯಿಂದಿರುವ ಹುಣ್ಣುಗಳಾಗಿವೆ.
ನಾನು ಬಾಗಿ ಕುಗ್ಗಿಹೋಗಿದ್ದೇನೆ.
    ನಾನು ದಿನವೆಲ್ಲಾ ನಿರುತ್ಸಾಹನಾಗಿದ್ದೇನೆ.
ನನಗೆ ಜ್ವರವಿದೆ,
    ನನ್ನ ಇಡೀ ದೇಹ ನೋಯುತ್ತಿದೆ.
ನನಗೆ ಬಹಳ ನೋವಿರುವುದರಿಂದ ಜೋಮು ಹಿಡಿದಂತಿದೆ.
    ಹೃದಯದ ವೇದನೆಯಿಂದ ಅರಚಿಕೊಳ್ಳುತ್ತಾ ಇದ್ದೇನೆ.
ನನ್ನ ಒಡೆಯನೇ, ನೀನು ನನ್ನ ನರಳಾಟವನ್ನು ಕೇಳಿರುವೆ.
    ನನ್ನ ನಿಟ್ಟುಸಿರು ನಿನಗೆ ಮರೆಯಾಗಿಲ್ಲ.
10 ನನ್ನ ಹೃದಯದ ವೇದನೆಯಿಂದ ಶಕ್ತಿಯು ಕುಂದಿಹೋಗಿದೆ;
    ನನ್ನ ದೃಷ್ಟಿಯು ಹಿಂಗಿಹೋಗಿದೆ.
11 ನಾನು ಅಸ್ವಸ್ಥನಾಗಿರುವುದರಿಂದ
    ನನ್ನ ಸ್ನೇಹಿತರಾಗಲಿ ನೆರೆಯವರಾಗಲಿ ನನ್ನನ್ನು ನೋಡಲು ಬರುವುದಿಲ್ಲ.
    ನನ್ನ ಕುಟುಂಬದವರು ನನ್ನ ಸಮೀಪಕ್ಕೂ ಬರುವುದಿಲ್ಲ.
12 ನನ್ನ ವೈರಿಗಳು ಬಲೆಗಳನ್ನು ಒಡ್ಡಿದ್ದಾರೆ;
    ನನ್ನ ನಾಶನದ ಕುರಿತು ಅವರು ಮಾತಾಡುತ್ತಿದ್ದಾರೆ;
    ದಿನವೆಲ್ಲಾ ಕುತಂತ್ರವನ್ನು ಮಾಡುತ್ತಿದ್ದಾರೆ.
13 ಆದರೆ ನಾನು ಕಿವುಡನಂತೆ ಕೇಳದವನಾಗಿದ್ದೇನೆ.
    ಮೂಕನಂತೆ ಮಾತಾಡದವನಾಗಿದ್ದೇನೆ.
14 ನಾನು ಕಿವಿಕೇಳಿಸದವನಂತೆಯೂ
    ಪ್ರತ್ಯುತ್ತರ ಕೊಡಲಾರದವನಂತೆಯೂ ಆದೆನು.
15 ಯೆಹೋವನೇ, ನಿನ್ನನ್ನೇ ನಿರೀಕ್ಷಿಸಿಕೊಂಡಿದ್ದೇನೆ.
    ನನ್ನ ಒಡೆಯನಾದ ದೇವರೇ, ನನಗೆ ಉತ್ತರ ನೀಡು.
16 ನಾನು ಏನೇ ಹೇಳಿದರೂ ವೈರಿಗಳು ನನ್ನನ್ನು ನೋಡಿ ನಗುವರು.
    ನನ್ನ ಕಾಯಿಲೆಯು ಪಾಪದ ಫಲವೆಂದು ಹೇಳುವರು.
17 ನಾನು ಅಪರಾಧಿಯೆಂದು ನನಗೆ ಗೊತ್ತಿದೆ;
    ನನ್ನ ನೋವನ್ನು ಮರೆಯಲಾರೆ.
18 ನನ್ನ ಅಪರಾಧಗಳನ್ನು ನಿನಗೆ ಅರಿಕೆ ಮಾಡಿಕೊಂಡಿದ್ದೇನೆ.
    ನನ್ನ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟಿದ್ದೇನೆ.
19 ನನ್ನ ವೈರಿಗಳು ಚುರುಕಾಗಿಯೂ ಬಲಶಾಲಿಗಳಾಗಿಯೂ ಇದ್ದಾರೆ.
    ಅವರು ಎಷ್ಟೋ ಸುಳ್ಳುಗಳನ್ನು ಹೇಳಿದರು.
20 ನಾನು ಉಪಕಾರವನ್ನು ಮಾಡಿದ್ದರೂ
    ನನ್ನ ವೈರಿಗಳು ನನಗೆ ಅಪಕಾರವನ್ನೇ ಮಾಡುವರು.
ನಾನು ಒಳ್ಳೆಯದನ್ನು ಮಾಡಬೇಕೆಂದರೂ
    ಅವರು ನನ್ನನ್ನು ವಿರೋಧಿಸುತ್ತಾರೆ.
21 ಯೆಹೋವನೇ, ನನ್ನನ್ನು ಕೈಬಿಡಬೇಡ!
    ನನ್ನ ದೇವರೇ, ನನ್ನ ಸಮೀಪದಲ್ಲೇ ಇರು!
22 ಯೆಹೋವನೇ, ನನ್ನ ರಕ್ಷಕನೇ,
    ಬೇಗನೆ ಬಂದು ನನಗೆ ಸಹಾಯಮಾಡು!

1 ಸಮುವೇಲನು 24

ದಾವೀದನಿಂದ ಸೌಲನಿಗಾದ ಅವಮಾನ

24 ಸೌಲನು ಫಿಲಿಷ್ಟಿಯರನ್ನು ಅಟ್ಟಿಸಿಕೊಂಡು ಹೋಗಿ ಓಡಿಸಿದನಂತರ, ಅವನಿಗೆ ಜನರು, “ದಾವೀದನು ಏಂಗೆದಿಯ ಹತ್ತಿರದ ಮರಳುಗಾಡಿನಲ್ಲಿದ್ದಾನೆ” ಎಂದು ಹೇಳಿದರು.

ಇಸ್ರೇಲಿನ ಮೂರು ಸಾವಿರ ಜನರನ್ನು ಸೌಲನು ಆರಿಸಿದನು. ಸೌಲನು ಈ ಜನರೊಂದಿಗೆ ದಾವೀದನನ್ನು ಮತ್ತು ಅವನ ಜನರನ್ನು ಹುಡುಕಲು ಆರಂಭಿಸಿದನು. ಅವರು ಕಾಡು ಹೋತದ ಬಂಡೆಗಳ ಹತ್ತಿರ ಹುಡುಕಿದರು. ಸೌಲನು ರಸ್ತೆಯ ಪಕ್ಕದ ಕುರಿದೊಡ್ಡಿಗೆ ಬಂದನು. ಅಲ್ಲಿಗೆ ಸಮೀಪದಲ್ಲಿ ಒಂದು ಗವಿಯಿದ್ದಿತು. ಸೌಲನು ಶೌಚಕ್ಕೋಸ್ಕರ ಗವಿಯ ಒಳಗಡೆಗೆ ಹೋದನು. ದಾವೀದನೂ ಅವನ ಜನರೂ ಅದೇ ಗವಿಯ ಹಿಂದಗಡೆ ಅಡಗಿಕೊಂಡಿದ್ದರು. ಜನರು ದಾವೀದನಿಗೆ, “ಯೆಹೋವನು ಈ ದಿನವನ್ನೇ ಕುರಿತು ನಿನ್ನೊಂದಿಗೆ ಮಾತನಾಡಿದನು. ಯೆಹೋವನು ನಿನಗೆ, ‘ನಾನು ನಿನ್ನ ಶತ್ರುವನ್ನು ನಿನಗೆ ಒಪ್ಪಿಸುತ್ತೇನೆ. ನಿನ್ನ ಇಷ್ಟದಂತೆ ಶತ್ರುವಿಗೆ ಏನು ಬೇಕಾದರೂ ಮಾಡು’ ಎಂದು ಹೇಳಿದನು” ಎಂದರು.

ನಂತರ ದಾವೀದನು ಸೌಲನ ಹತ್ತಿರಕ್ಕೆ ತೆವಳುತ್ತಾ ಹೋಗಿ ಸೌಲನ ಅಂಗಿಯ ಒಂದು ಮೂಲೆಯನ್ನು ಕತ್ತರಿಸಿದನು. ದಾವೀದನನ್ನು ಸೌಲನು ನೋಡಲಿಲ್ಲ. ತರುವಾಯ ಸೌಲನ ಅಂಗಿಯ ಮೂಲೆಯನ್ನು ಕತ್ತರಿಸಿದ್ದಕ್ಕಾಗಿ ದಾವೀದನಿಗೆ ಅಸಮಾಧಾನವಾಯಿತು. ದಾವೀದನು ತನ್ನ ಜನರಿಗೆ, “ಸೌಲನು ಯೆಹೋವನಿಂದ ಅಭಿಷೇಕಿಸಲ್ಪಟ್ಟವನೂ ನನ್ನ ರಾಜನೂ ಆಗಿರುವುದರಿಂದ ನಾನು ಅವನ ವಿರುದ್ಧವಾಗಿ ಏನೂ ಮಾಡಬಾರದು!” ಎಂದು ಹೇಳಿದನು. ದಾವೀದನು ತನ್ನ ಜನರನ್ನು ತಡೆಯಲು ಈ ಮಾತುಗಳನ್ನು ಹೇಳಿದನು. ಸೌಲನನ್ನು ಆಕ್ರಮಿಸಲು ದಾವೀದನು ತನ್ನ ಜನರಿಗೆ ಅವಕಾಶ ಕೊಡಲಿಲ್ಲ.

ಸೌಲನು ಗವಿಯನ್ನು ಬಿಟ್ಟು ತನ್ನ ದಾರಿಯಲ್ಲಿ ಹೊರಟನು. ದಾವೀದನು ಗವಿಯಿಂದ ಹೊರಗೆ ಬಂದನು. ದಾವೀದನು ಸೌಲನಿಗೆ, “ಅರಸನೇ, ನನ್ನ ಒಡೆಯನೇ!” ಎಂದು ಕೂಗಿದನು.

ಸೌಲನು ಹಿಂದಿರುಗಿ ನೋಡಿದಾಗ ದಾವೀದನು ಅವನಿಗೆ ಸಾಷ್ಟಾಂಗನಮಸ್ಕಾರಮಾಡಿ, “‘ದಾವೀದನು ನಿನಗೆ ಕೇಡುಮಾಡಲು ಸಂಚುಗಳನ್ನು ಮಾಡುತ್ತಿದ್ದಾನೆ’ ಎಂಬುದಾಗಿ ಜನರು ಹೇಳುವಾಗ ನೀನು ಕೇಳುವುದೇಕೆ? 10 ನಾನು ನಿನಗೆ ಕೇಡುಮಾಡಲು ಇಚ್ಛಿಸುವುದಿಲ್ಲ! ನೀನು ಅದನ್ನು ನಿನ್ನ ಸ್ವಂತ ಕಣ್ಣುಗಳಿಂದ ನೋಡಬಹುದು! ಈ ದಿನ ಗವಿಯಲ್ಲಿ ಯೆಹೋವನು ನಿನ್ನನ್ನು ನನಗೆ ಒಪ್ಪಿಸಿದ್ದನು. ಆದರೆ ನಾನು ನಿನ್ನನ್ನು ಕೊಲ್ಲಲು ನಿರಾಕರಿಸಿದೆ. ನಾನು ನಿನಗೆ ದಯಾಳುವಾಗಿದ್ದೆ. ‘ನಾನು ನನ್ನ ಒಡೆಯನಿಗೆ ಕೇಡು ಮಾಡುವುದಿಲ್ಲ. ಸೌಲನು ಯೆಹೋವನಿಂದ ಅಭಿಷೇಕಿಸಲ್ಪಟ್ಟ ರಾಜ!’ 11 ನನ್ನ ತಂದೆಯೇ, ನನ್ನ ಕೈಯಲ್ಲಿರುವ ಚೂರು ಬಟ್ಟೆಯನ್ನು ನೋಡು. ನಾನು ನಿನ್ನ ಅಂಗಿಯ ಮೂಲೆಯನ್ನು ಕತ್ತರಿಸಿಹಾಕಿದೆ. ನಾನು ನಿನ್ನನ್ನು ಕೊಲ್ಲಬಹುದಿತ್ತು, ಆದರೆ ಕೊಲ್ಲಲಿಲ್ಲ! ನೀನು ಇದನ್ನು ಅರ್ಥಮಾಡಿಕೊಳ್ಳಬೇಕೆಂದು ನಾನು ಬಯಸಿದ್ದೇನೆ. ನಾನು ನಿನ್ನ ವಿರುದ್ಧವಾಗಿ ಯಾವ ಸಂಚನ್ನೂ ಮಾಡುತ್ತಿಲ್ಲವೆಂದು ನೀನು ತಿಳಿದುಕೊಳ್ಳಬೇಕಾಗಿದೆ! ನಾನು ನಿನಗೆ ಯಾವ ತಪ್ಪನ್ನೂ ಮಾಡಿಲ್ಲ! ಆದರೆ ನೀನು ನನ್ನನ್ನು ಹುಡುಕುತ್ತಿರುವೆ; ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿರುವೆ. 12 ಯೆಹೋವನೇ ನಮಗೆ ನ್ಯಾಯಾಧೀಶನಾಗಿರಲಿ! ನೀನು ಮಾಡಿರುವ ತಪ್ಪಿಗಾಗಿ ಯೆಹೋವನು ನಿನ್ನನ್ನು ದಂಡಿಸಲಿ. ಆದರೆ ನಾನು ನಿನ್ನೊಡನೆ ಹೋರಾಡುವುದಿಲ್ಲ.

13 ‘ಕೆಟ್ಟಕಾರ್ಯಗಳನ್ನು ಕೆಟ್ಟ ಜನರೇ ಮಾಡುತ್ತಾರೆ!’

ಎಂಬ ಹಳೆಯ ನಾಣ್ಣುಡಿಯೊಂದಿದೆ.

“ನಾನು ಕೆಟ್ಟದ್ದನ್ನೇನೂ ಮಾಡಿಲ್ಲ! ನಾನು ಕೆಟ್ಟ ವ್ಯಕ್ತಿಯಲ್ಲ! ಆದ್ದರಿಂದ ನಾನು ನಿನಗೆ ಕೇಡು ಮಾಡುವುದಿಲ್ಲ! 14 ನೀನು ಯಾರನ್ನು ಅಟ್ಟಿಸಿಕೊಂಡು ಹೋಗುತ್ತಿರುವೆ? ಇಸ್ರೇಲರ ರಾಜನಾದ ನೀನು ಯಾರೊಂದಿಗೆ ಹೋರಾಡಬೇಕೆಂದಿರುವೆ? ನಿನಗೆ ಕೇಡು ಮಾಡಬಹುದಾದವನನ್ನು ನೀನು ಅಟ್ಟಿಸಿಕೊಂಡು ಹೋಗುತ್ತಿಲ್ಲ! ನೀನು ಸತ್ತ ನಾಯಿಯನ್ನೋ ಇಲ್ಲವೆ ಚಿಟ್ಟೆಯನ್ನೋ ಅಟ್ಟಿಸಿಕೊಂಡು ಹೋಗುತ್ತಿರುವೆ! 15 ಯೆಹೋವನೇ ನಮ್ಮಿಬ್ಬರಿಗೂ ನ್ಯಾಯಾಧೀಶನಾಗಿದ್ದು ತೀರ್ಪು ನೀಡಲಿ. ಯೆಹೋವನು ನನ್ನ ಪರವಾಗಿ ವಾದಿಸಿ ನಾನು ನೀತಿವಂತನೆಂದು ನಿರೂಪಿಸಿ ನನ್ನನ್ನು ನಿನ್ನಿಂದ ರಕ್ಷಿಸುತ್ತಾನೆ” ಎಂದು ಹೇಳಿದನು.

16 ದಾವೀದನು ಈ ಮಾತುಗಳನ್ನು ಹೇಳಿದಾಗ ಸೌಲನು, “ನನ್ನ ಮಗನಾದ ದಾವೀದನೇ, ಇದು ನಿನ್ನ ಧ್ವನಿಯೇ?” ಎಂದು ಕೇಳಿದನು. ನಂತರ ಸೌಲನು ಅಳಲಾರಂಭಿಸಿದನು. ಸೌಲನು ಬಹಳ ಅತ್ತನು. 17 ಸೌಲನು, “ನೀನೇ ನೀತಿವಂತನು. ನಾನು ತಪ್ಪು ಮಾಡಿದೆ. ನೀನು ನನಗೆ ಒಳ್ಳೆಯವನಾಗಿದ್ದೆ; ಆದರೆ ನಾನು ನಿನಗೆ ಕೆಟ್ಟವನಾದೆ. 18 ನೀನು ನನಗೆ ಮಾಡಿದ ಒಳ್ಳೆಯ ಕಾರ್ಯಗಳ ಬಗ್ಗೆ ನನಗೆ ತಿಳಿಸಿರುವೆ. ಯೆಹೋವನು ನನ್ನನ್ನು ನಿನ್ನ ಬಳಿಗೆ ಕರೆದು ತಂದನು, ಆದರೆ ನೀನು ನನ್ನನ್ನು ಕೊಲ್ಲಲಿಲ್ಲ. 19 ಒಬ್ಬ ಮನುಷ್ಯನು ತನ್ನ ಶತ್ರುವನ್ನು ಹಿಡಿದುಕೊಂಡರೆ, ಅವನಿಗೆ ಕೇಡನ್ನು ಮಾಡದೆ ಕಳುಹಿಸಿಬಿಡುವನೇ? ಅವನು ಶತ್ರುವಿಗೆ ಒಳ್ಳೆಯದನ್ನು ಮಾಡುವುದಿಲ್ಲ. ನೀನು ನನಗೆ ಈ ದಿನ ಒಳ್ಳೆಯದನ್ನು ಮಾಡಿರುವುದರಿಂದ ಯೆಹೋವನು ನಿನಗೆ ಒಳ್ಳೆಯದನ್ನು ಮಾಡಲಿ. 20 ನೀನು ನೂತನ ರಾಜನಾಗುವೆಯೆಂಬುದು ನನಗೆ ತಿಳಿದಿದೆ. ಇಸ್ರೇಲ್ ರಾಜ್ಯವನ್ನು ನೀನು ಆಳುವೆ. 21 ಈಗ ನೀನು ನನಗೆ ಒಂದು ಪ್ರಮಾಣವನ್ನು ಮಾಡು. ನನ್ನ ಸಂತಾನದವರನ್ನು ನೀನು ಕೊಲ್ಲುವುದಿಲ್ಲವೆಂದು ಯೆಹೋವನ ಹೆಸರಿನಲ್ಲಿ ನನಗೆ ಪ್ರಮಾಣಮಾಡು. ನನ್ನ ತಂದೆಯ ಕುಲದಲ್ಲಿ ನನ್ನ ಹೆಸರನ್ನು ನಾಶಮಾಡುವುದಿಲ್ಲವೆಂದು ಪ್ರಮಾಣ ಮಾಡು” ಎಂದು ಬೇಡಿಕೊಂಡನು.

22 ಸೌಲನ ವಂಶದವರನ್ನು ಕೊಲ್ಲುವುದಿಲ್ಲವೆಂದು ದಾವೀದನು ಪ್ರಮಾಣಮಾಡಿದನು. ನಂತರ ಸೌಲನು ಮನೆಗೆ ಹಿಂದಿರುಗಿದನು. ದಾವೀದನು ಮತ್ತು ಅವನ ಜನರು ತಾವು ಅಡಗಿಕೊಂಡಿದ್ದ ಸ್ಥಳಕ್ಕೆ ಹೊರಟುಹೋದರು.

1 ಕೊರಿಂಥದವರಿಗೆ 11:17-22

ಪ್ರಭುವಿನ ರಾತ್ರಿಭೋಜನ

17 ಈಗ ನಾನು ನಿಮಗೆ ಹೇಳಲಿರುವ ವಿಷಯದಲ್ಲಿ ನಿಮ್ಮನ್ನು ಹೊಗಳುವುದಿಲ್ಲ. ನಿಮ್ಮ ಸಭಾಕೂಟಗಳು ನಿಮಗೆ ಒಳ್ಳೆಯದನ್ನು ಮಾಡುವುದಕ್ಕಿಂತಲೂ ಹೆಚ್ಚು ಕೇಡುಗಳನ್ನೇ ಮಾಡುತ್ತವೆ. 18 ಮೊದಲನೆಯದಾಗಿ, ನೀವು ಸಭೆಯಾಗಿ ಸೇರಿಬರುವಾಗ ನಿಮ್ಮಲ್ಲಿ ಪಂಗಡಗಳಿರುವುದಾಗಿ ಕೇಳಿದ್ದೇನೆ. ಇದು ನಿಜವೆಂದು ಸ್ವಲ್ಪಮಟ್ಟಿಗೆ ನಂಬುತ್ತೇನೆ. 19 (ನಿಮ್ಮಲ್ಲಿ ಭಿನ್ನಾಭಿಪ್ರಾಯಗಳಿರುವುದು ಸಹಜ. ನಿಮ್ಮಲ್ಲಿ ಯಾರು ನಿಜವಾಗಿಯೂ ಒಳ್ಳೆಯದನ್ನು ಮಾಡುತ್ತಿದ್ದಾರೆ ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ.)

20 ನೀವೆಲ್ಲರೂ ಒಟ್ಟಾಗಿ ಸೇರಿದಾಗ ನೀವು ಮಾಡುವಂಥದ್ದು ನಿಜವಾಗಿಯೂ ಪ್ರಭುವಿನ ರಾತ್ರಿಭೋಜನವಲ್ಲ. 21 ಏಕೆಂದರೆ, ನೀವು ಊಟ ಮಾಡುವಾಗ, ಇತರರಿಗೋಸ್ಕರ ಕಾಯದೆ ಪ್ರತಿಯೊಬ್ಬರು ತಮ್ಮಷ್ಟಕ್ಕೆ ತಾವೇ ಊಟ ಮಾಡುತ್ತಾರೆ. ಕೆಲವು ಜನರಲ್ಲಿ ಊಟಮಾಡಲು ಸಾಕಷ್ಟು ಆಹಾರ ಇರುವುದಿಲ್ಲ. ಇನ್ನು ಕೆಲವರಲ್ಲಿ ತಿಂದು, ಕುಡಿದು ಮತ್ತರಾಗುವಷ್ಟು ಆಹಾರವಿರುತ್ತದೆ. 22 ನೀವು ನಿಮ್ಮ ಸ್ವಂತ ಮನೆಗಳಲ್ಲಿ ತಿನ್ನಬಹುದು, ಕುಡಿಯಬಹುದು. ದೇವರ ಸಭೆಯು ಮುಖ್ಯವಾದದ್ದಲ್ಲವೆಂದು ನೀವು ಯೋಚಿಸುವಂತೆ ತೋರುತ್ತದೆ. ನೀವು ಬಡವರನ್ನು ನಾಚಿಕೆಗೆ ಗುರಿಮಾಡುತ್ತೀರಿ. ನಾನು ನಿಮಗೆ ಏನು ಹೇಳಲಿ? ನೀವು ಮಾಡುತ್ತಿರುವ ಈ ಕಾರ್ಯಕ್ಕೋಸ್ಕರ ನಾನು ನಿಮ್ಮನ್ನು ಹೊಗಳಬೇಕೇ? ನಾನು ನಿಮ್ಮನ್ನು ಹೊಗಳುವುದಿಲ್ಲ.

1 ಕೊರಿಂಥದವರಿಗೆ 11:27-33

27 ಹೀಗಿರಲಾಗಿ ಒಬ್ಬನು ಪ್ರಭುವಿನ ರೊಟ್ಟಿಯನ್ನು ತಿನ್ನುವಾಗ, ಪಾತ್ರೆಯಲ್ಲಿ ಕುಡಿಯುವಾಗ ಇವುಗಳ ನಿಜವಾದ ಅರ್ಥವನ್ನು ಕಾರ್ಯಗಳ ಮೂಲಕ ತೋರ್ಪಡಿಸಬೇಕು, ಇಲ್ಲವಾದರೆ ಅವನು ಪ್ರಭುವಿನ ದೇಹಕ್ಕೂ ರಕ್ತಕ್ಕೂ ದೋಷಿಯಾಗುತ್ತಾನೆ. 28 ಪ್ರತಿಯೊಬ್ಬ ವ್ಯಕ್ತಿಯು ರೊಟ್ಟಿಯನ್ನು ತಿನ್ನುವುದಕ್ಕಿಂತಲೂ ಪಾತ್ರೆಯಲ್ಲಿ ಕುಡಿಯುವುದಕ್ಕಿಂತಲೂ ಮುಂಚಿತವಾಗಿ ತನ್ನ ಹೃದಯವನ್ನು ಪರಿಶೀಲಿಸಿಕೊಳ್ಳಬೇಕು. 29 ಯಾವನಾದರೂ ಪ್ರಭುವಿನ ದೇಹವೆಂದು ಗುರುತಿಸದೆ ರೊಟ್ಟಿಯನ್ನು ತಿಂದರೆ ಮತ್ತು ದ್ರಾಕ್ಷಾರಸವನ್ನು ಕುಡಿದರೆ ಅವನು ತಿಂದದ್ದಕ್ಕೂ ಕುಡಿದದ್ದಕ್ಕೂ ದೋಷಿಯೆಂಬ ತೀರ್ಪಿಗೆ ಒಳಗಾಗುತ್ತಾನೆ. 30 ಆದಕಾರಣವೇ, ನಿಮ್ಮ ಸಭೆಯಲ್ಲಿರುವ ಅನೇಕರು ರೋಗಿಗಳೂ ಬಲಹೀನರೂ ಆಗಿದ್ದಾರೆ ಮತ್ತು ಅನೇಕರು ಸತ್ತು ಹೋದರು. 31 ಆದರೆ ನಮ್ಮನ್ನು ನಾವೇ ಪರಿಶೋಧಿಸಿಕೊಂಡರೆ ನ್ಯಾಯತೀರ್ಪಿಗೆ ಒಳಗಾಗುವುದಿಲ್ಲ. 32 ಆದರೆ ಪ್ರಭುವು ನಮಗೆ ತೀರ್ಪು ಮಾಡುವಾಗ, ನಮಗೆ ಸರಿಯಾದ ಮಾರ್ಗವನ್ನು ತೋರಿಸುವುದಕ್ಕಾಗಿಯೂ ಈ ಲೋಕದ ಇತರ ಜನರೊಂದಿಗೆ ನಮಗೆ ಅಪರಾಧಿಗಳೆಂಬ ತೀರ್ಪಾಗದಂತೆಯೂ ಆತನು ನಮ್ಮನ್ನು ಶಿಕ್ಷಿಸುತ್ತಾನೆ.

33 ಆದ್ದರಿಂದ ನನ್ನ ಪ್ರಿಯ ಸಹೋದರ ಸಹೋದರಿಯರೇ, ನೀವು ಊಟ ಮಾಡುವುದಕ್ಕಾಗಿ ಒಟ್ಟಾಗಿ ಸೇರುವಾಗ ಒಬ್ಬರಿಗೊಬ್ಬರು ಕಾದುಕೊಂಡಿರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International