Revised Common Lectionary (Semicontinuous)
ಜ್ಞಾಪಕಾರ್ಥ ನೈವೇದ್ಯ ಸಮರ್ಪಣೆಯ ಹಾಡು. ರಚನೆಗಾರ: ದಾವೀದ.
38 ಯೆಹೋವನೇ, ಕೋಪದಿಂದ ನನ್ನನ್ನು ಶಿಕ್ಷಿಸಬೇಡ.
ರೋಷದಿಂದ ನನ್ನನ್ನು ಶಿಸ್ತುಗೊಳಿಸಬೇಡ.
2 ನಿನ್ನಿಂದ ನನಗೆ ನೋವಾಗಿದೆ.
ನಿನ್ನ ಬಾಣಗಳು ನನಗೆ ನಾಟಿಕೊಂಡಿವೆ.
3 ನೀನು ಶಿಕ್ಷಿಸಿದ್ದರಿಂದ ನನ್ನ ಇಡೀ ದೇಹ ಹುಣ್ಣಾಗಿದೆ.
ನಾನು ಪಾಪಮಾಡಿದ್ದರಿಂದ ನನ್ನ ಎಲುಬುಗಳೆಲ್ಲ ನೋಯುತ್ತಿವೆ.
4 ನಾನು ಅಪರಾಧಿಯಾಗಿದ್ದೇನೆ.
ನನ್ನ ಅಪರಾಧಗಳು ನನ್ನ ಭುಜಗಳ ಮೇಲೆ ಭಾರವಾದ ಹೊರೆಯಂತಿವೆ.
5 ನಾನೊಂದು ಮೂರ್ಖ ಕೆಲಸವನ್ನು ಮಾಡಿದೆನು.
ಈಗ ನನಗೆ ಕೀವು ಸೋರಿ ದುರ್ವಾಸನೆಯಿಂದಿರುವ ಹುಣ್ಣುಗಳಾಗಿವೆ.
6 ನಾನು ಬಾಗಿ ಕುಗ್ಗಿಹೋಗಿದ್ದೇನೆ.
ನಾನು ದಿನವೆಲ್ಲಾ ನಿರುತ್ಸಾಹನಾಗಿದ್ದೇನೆ.
7 ನನಗೆ ಜ್ವರವಿದೆ,
ನನ್ನ ಇಡೀ ದೇಹ ನೋಯುತ್ತಿದೆ.
8 ನನಗೆ ಬಹಳ ನೋವಿರುವುದರಿಂದ ಜೋಮು ಹಿಡಿದಂತಿದೆ.
ಹೃದಯದ ವೇದನೆಯಿಂದ ಅರಚಿಕೊಳ್ಳುತ್ತಾ ಇದ್ದೇನೆ.
9 ನನ್ನ ಒಡೆಯನೇ, ನೀನು ನನ್ನ ನರಳಾಟವನ್ನು ಕೇಳಿರುವೆ.
ನನ್ನ ನಿಟ್ಟುಸಿರು ನಿನಗೆ ಮರೆಯಾಗಿಲ್ಲ.
10 ನನ್ನ ಹೃದಯದ ವೇದನೆಯಿಂದ ಶಕ್ತಿಯು ಕುಂದಿಹೋಗಿದೆ;
ನನ್ನ ದೃಷ್ಟಿಯು ಹಿಂಗಿಹೋಗಿದೆ.
11 ನಾನು ಅಸ್ವಸ್ಥನಾಗಿರುವುದರಿಂದ
ನನ್ನ ಸ್ನೇಹಿತರಾಗಲಿ ನೆರೆಯವರಾಗಲಿ ನನ್ನನ್ನು ನೋಡಲು ಬರುವುದಿಲ್ಲ.
ನನ್ನ ಕುಟುಂಬದವರು ನನ್ನ ಸಮೀಪಕ್ಕೂ ಬರುವುದಿಲ್ಲ.
12 ನನ್ನ ವೈರಿಗಳು ಬಲೆಗಳನ್ನು ಒಡ್ಡಿದ್ದಾರೆ;
ನನ್ನ ನಾಶನದ ಕುರಿತು ಅವರು ಮಾತಾಡುತ್ತಿದ್ದಾರೆ;
ದಿನವೆಲ್ಲಾ ಕುತಂತ್ರವನ್ನು ಮಾಡುತ್ತಿದ್ದಾರೆ.
13 ಆದರೆ ನಾನು ಕಿವುಡನಂತೆ ಕೇಳದವನಾಗಿದ್ದೇನೆ.
ಮೂಕನಂತೆ ಮಾತಾಡದವನಾಗಿದ್ದೇನೆ.
14 ನಾನು ಕಿವಿಕೇಳಿಸದವನಂತೆಯೂ
ಪ್ರತ್ಯುತ್ತರ ಕೊಡಲಾರದವನಂತೆಯೂ ಆದೆನು.
15 ಯೆಹೋವನೇ, ನಿನ್ನನ್ನೇ ನಿರೀಕ್ಷಿಸಿಕೊಂಡಿದ್ದೇನೆ.
ನನ್ನ ಒಡೆಯನಾದ ದೇವರೇ, ನನಗೆ ಉತ್ತರ ನೀಡು.
16 ನಾನು ಏನೇ ಹೇಳಿದರೂ ವೈರಿಗಳು ನನ್ನನ್ನು ನೋಡಿ ನಗುವರು.
ನನ್ನ ಕಾಯಿಲೆಯು ಪಾಪದ ಫಲವೆಂದು ಹೇಳುವರು.
17 ನಾನು ಅಪರಾಧಿಯೆಂದು ನನಗೆ ಗೊತ್ತಿದೆ;
ನನ್ನ ನೋವನ್ನು ಮರೆಯಲಾರೆ.
18 ನನ್ನ ಅಪರಾಧಗಳನ್ನು ನಿನಗೆ ಅರಿಕೆ ಮಾಡಿಕೊಂಡಿದ್ದೇನೆ.
ನನ್ನ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟಿದ್ದೇನೆ.
19 ನನ್ನ ವೈರಿಗಳು ಚುರುಕಾಗಿಯೂ ಬಲಶಾಲಿಗಳಾಗಿಯೂ ಇದ್ದಾರೆ.
ಅವರು ಎಷ್ಟೋ ಸುಳ್ಳುಗಳನ್ನು ಹೇಳಿದರು.
20 ನಾನು ಉಪಕಾರವನ್ನು ಮಾಡಿದ್ದರೂ
ನನ್ನ ವೈರಿಗಳು ನನಗೆ ಅಪಕಾರವನ್ನೇ ಮಾಡುವರು.
ನಾನು ಒಳ್ಳೆಯದನ್ನು ಮಾಡಬೇಕೆಂದರೂ
ಅವರು ನನ್ನನ್ನು ವಿರೋಧಿಸುತ್ತಾರೆ.
21 ಯೆಹೋವನೇ, ನನ್ನನ್ನು ಕೈಬಿಡಬೇಡ!
ನನ್ನ ದೇವರೇ, ನನ್ನ ಸಮೀಪದಲ್ಲೇ ಇರು!
22 ಯೆಹೋವನೇ, ನನ್ನ ರಕ್ಷಕನೇ,
ಬೇಗನೆ ಬಂದು ನನಗೆ ಸಹಾಯಮಾಡು!
ಯಾಕೋಬನು ತೋರಿದ ಧೈರ್ಯ
33 ಯಾಕೋಬನು ಕಣ್ಣೆತ್ತಿ ನೋಡಿದಾಗ ಏಸಾವನು ನಾನೂರು ಜನರೊಂದಿಗೆ ಬರುವುದನ್ನು ಕಂಡನು. ಯಾಕೋಬನು ತನ್ನ ಕುಟುಂಬವನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಿದನು. ಲೇಯಾ ಮತ್ತು ಅವಳ ಮಕ್ಕಳು ಒಂದು ಗುಂಪಿನಲ್ಲಿದ್ದರು. ರಾಹೇಲಳು ಮತ್ತು ಯೋಸೇಫನು ಇನ್ನೊಂದು ಗುಂಪಿನಲ್ಲಿದ್ದರು. ಇಬ್ಬರು ದಾಸಿಯರು ಮತ್ತು ಅವರ ಮಕ್ಕಳು ಎರಡು ಗುಂಪುಗಳಲ್ಲಿದ್ದರು. 2 ಯಾಕೋಬನು ದಾಸಿಯರನ್ನು ಮತ್ತು ಅವರ ಮಕ್ಕಳನ್ನು ಮುಂಭಾಗದಲ್ಲಿಯೂ ಲೇಯಳನ್ನು ಮತ್ತು ಅವಳ ಮಕ್ಕಳನ್ನು ಅವರ ಹಿಂಭಾಗದಲ್ಲಿಯೂ, ರಾಹೇಲಳನ್ನು ಮತ್ತು ಯೋಸೇಫನನ್ನು ಕೊನೆಯ ಸ್ಥಳದಲ್ಲೂ ಇರಿಸಿದನು.
3 ಯಾಕೋಬನು ತಾನೇ ಮುಂದಾಗಿ ಏಸಾವನ ಬಳಿಗೆ ನಡೆದುಹೋಗುತ್ತಾ ಏಳು ಸಲ ನೆಲದ ತನಕ ಬಗ್ಗಿ ನಮಸ್ಕರಿಸಿದನು.
4 ಏಸಾವನು ಯಾಕೋಬನನ್ನು ಕಂಡಾಗ, ಓಡಿಬಂದು ತನ್ನ ಕೈಗಳಿಂದ ತಬ್ಬಿಕೊಂಡು ಅವನ ಕೊರಳಿನ ಮೇಲೆ ಮುದ್ದಿಟ್ಟನು; ಅವರಿಬ್ಬರೂ ಕಣ್ಣೀರು ಸುರಿಸಿದರು. 5 ಏಸಾವನು ಸ್ತ್ರೀಯರನ್ನು ಮತ್ತು ಮಕ್ಕಳನ್ನು ಕಣ್ಣೆತ್ತಿ ನೋಡಿ, “ನಿನ್ನೊಡನೆ ಇರುವ ಈ ಜನರು ಯಾರು?” ಎಂದು ಕೇಳಿದನು.
ಯಾಕೋಬನು, “ದೇವರು ನನಗೆ ಕೊಟ್ಟ ಮಕ್ಕಳೇ ಇವರು. ದೇವರು ನನಗೆ ಒಳ್ಳೆಯವನಾಗಿದ್ದನು” ಎಂದು ಹೇಳಿದನು.
6 ಆಮೇಲೆ ಇಬ್ಬರು ದಾಸಿಯರು ಮತ್ತು ಅವರೊಂದಿಗೆ ಇದ್ದ ಮಕ್ಕಳು ಏಸಾವನ ಬಳಿಗೆ ಹೋಗಿ ಅವನಿಗೆ ತಲೆಬಾಗಿ ನಮಸ್ಕರಿಸಿದರು. 7 ಆಮೇಲೆ ಲೇಯಾ ಮತ್ತು ಅವಳೊಂದಿಗೆ ಇದ್ದ ಮಕ್ಕಳು ಏಸಾವನ ಬಳಿಗೆ ಹೋಗಿ ಅವನಿಗೆ ತಲೆಬಾಗಿ ನಮಸ್ಕರಿಸಿದರು. ತರುವಾಯ, ರಾಹೇಲಳು ಮತ್ತು ಯೋಸೇಫನು ಏಸಾವನ ಬಳಿಗೆ ಹೋಗಿ ತಲೆಬಾಗಿ ನಮಸ್ಕರಿಸಿದರು.
8 ಏಸಾವನು, “ನಾನು ಬರುತ್ತಿರುವಾಗ ಕಂಡ ಆ ಜನರೆಲ್ಲಾ ಯಾರು? ಆ ಪಶುಗಳೆಲ್ಲಾ ಯಾತಕ್ಕೆ?” ಎಂದು ಕೇಳಿದನು.
ಯಾಕೋಬನು, “ನೀನು ನನ್ನನ್ನು ಸ್ವೀಕರಿಸಿಕೊಳ್ಳಲಿ ಎಂದು ಅವುಗಳನ್ನು ಉಡುಗೊರೆಗಳನ್ನಾಗಿ ಕಳುಹಿಸಿಕೊಟ್ಟೆನು” ಎಂದು ಹೇಳಿದನು.
9 ಆದರೆ ಏಸಾವನು, “ತಮ್ಮನೇ, ನೀನು ನನಗೆ ಉಡುಗೊರೆಗಳನ್ನು ಕೊಡಬೇಕಾಗಿಲ್ಲ, ನನಗೆ ಬೇಕಾದಷ್ಟಿದೆ” ಎಂದು ಹೇಳಿದನು.
10 ಯಾಕೋಬನು, “ಇಲ್ಲ! ನಾನು ನಿನ್ನನ್ನು ಬೇಡಿಕೊಳ್ಳುತ್ತೇನೆ; ನೀನು ನನ್ನನ್ನು ನಿಜವಾಗಿಯೂ ಸ್ವೀಕರಿಸಿಕೊಳ್ಳುವುದಾದರೆ, ನಾನು ಕೊಡುವ ಉಡುಗೊರೆಗಳನ್ನು ದಯವಿಟ್ಟು ಸ್ವೀಕರಿಸಬೇಕು. ನಿನ್ನ ಮುಖವನ್ನು ಮತ್ತೆ ನೋಡಿ ನನಗೆ ತುಂಬ ಸಂತೋಷವಾಗಿದೆ. ದೇವರ ಮುಖವನ್ನೇ ನೋಡಿದಂತಾಯಿತು. ನೀನು ನನ್ನನ್ನು ಸ್ವೀಕರಿಸಿಕೊಂಡದ್ದರಿಂದ ನನಗೆ ತುಂಬ ಸಂತೋಷವಾಗಿದೆ. 11 ಆದ್ದರಿಂದ ನಾನು ಕೊಡುವ ಈ ಉಡುಗೊರೆಗಳನ್ನು ಸ್ವೀಕರಿಸಿಕೊಳ್ಳಬೇಕೆಂದು ಬೇಡಿಕೊಳ್ಳುತ್ತಿರುವೆ. ದೇವರು ನನಗೆ ತುಂಬ ಒಳ್ಳೆಯವನಾಗಿದ್ದನು. ನನಗೆ ಬೇಕಾದದ್ದಕ್ಕಿಂತಲೂ ಹೆಚ್ಚಾಗಿ ನನ್ನಲ್ಲಿದೆ” ಎಂದು ಹೇಳಿದನು. ಹೀಗೆ ಯಾಕೋಬನು ಉಡುಗೊರೆಗಳನ್ನು ತೆಗೆದುಕೊಳ್ಳುವಂತೆ ಏಸಾವನನ್ನು ಬೇಡಿಕೊಂಡನು. ಆದ್ದರಿಂದ ಏಸಾವನು ಉಡುಗೊರೆಗಳನ್ನು ಸ್ವೀಕರಿಸಿದನು.
12 ಆಮೇಲೆ ಏಸಾವನು, “ಈಗ ನೀನು ನಿನ್ನ ಪ್ರಯಾಣವನ್ನು ಮುಂದುವರಿಸಬಹುದು. ನಾನು ನಿನ್ನ ಜೊತೆಯಲ್ಲಿ ಬರುತ್ತೇನೆ” ಎಂದು ಹೇಳಿದನು.
13 ಆದರೆ ಯಾಕೋಬನು ಅವನಿಗೆ, “ನನ್ನ ಮಕ್ಕಳು ಬಲಹೀನರೆಂದು ನಿನಗೆ ಗೊತ್ತಿದೆ. ನಾನು ನನ್ನ ದನಕುರಿಗಳನ್ನೂ ಅವುಗಳ ಮರಿಗಳನ್ನೂ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ಒಂದೇ ದಿನದಲ್ಲಿ ಬಹುದೂರದವರೆಗೆ ಎಡಬಿಡದೆ ನಡೆಸಿಕೊಂಡು ಹೋದರೆ, ಎಲ್ಲಾ ಪಶುಗಳು ಸತ್ತುಹೋಗುತ್ತವೆ. 14 ಆದ್ದರಿಂದ ನೀನು ಮುಂದಾಗಿ ಹೋಗು. ನಾನು ನಿನ್ನನ್ನು ನಿಧಾನವಾಗಿ ಹಿಂಬಾಲಿಸುವೆನು. ದನಕುರಿಗಳು ಮತ್ತು ಇತರ ಪಶುಗಳು ಸುರಕ್ಷಿತವಾಗಿರುವಂತೆಯೂ ನನ್ನ ಮಕ್ಕಳು ತುಂಬ ಆಯಾಸಗೊಳ್ಳದಂತೆಯೂ ನಾನು ಸಾಕಷ್ಟು ನಿಧಾನವಾಗಿ ಬಂದು ನಿನ್ನನ್ನು ಸೇಯೀರ್ನಲ್ಲಿ ಭೇಟಿಯಾಗುವೆನು” ಎಂದು ಹೇಳಿದನು.
15 ಅದಕ್ಕೆ ಏಸಾವನು, “ಹಾಗಾದರೆ ನನ್ನ ಜನರಲ್ಲಿ ಕೆಲವರನ್ನು ನಿನ್ನ ಸಹಾಯಕ್ಕಾಗಿ ಬಿಟ್ಟುಹೋಗುವೆನು” ಎಂದು ಹೇಳಿದನು.
ಆದರೆ ಯಾಕೋಬನು, “ಅದು ನಿನ್ನ ದಯೆ. ಆದರೆ ಅಂಥ ಅಗತ್ಯವೇನೂ ಇಲ್ಲ” ಎಂದು ಹೇಳಿದನು. 16 ಆದ್ದರಿಂದ ಆ ದಿನ ಏಸಾವನು ಸೇಯೀರಿಗೆ ಮರಳಿ ಪ್ರಯಾಣ ಮಾಡಿದನು. 17 ಆದರೆ ಯಾಕೋಬನು ಸುಕ್ಕೋತಿಗೆ ಹೋದನು. ಆ ಸ್ಥಳದಲ್ಲಿ ಅವನು ತನಗಾಗಿ ಒಂದು ಮನೆಯನ್ನೂ ತನ್ನ ದನಕುರಿಗಳಿಗಾಗಿ ಚಿಕ್ಕ ಕೊಟ್ಟಿಗೆಗಳನ್ನೂ ಕಟ್ಟಿಸಿದನು. ಆದ್ದರಿಂದ ಆ ಸ್ಥಳಕ್ಕೆ “ಸುಕ್ಕೋತ್” ಎಂದು ಹೆಸರಾಯಿತು.
ಅಧಿಕಾರಕ್ಕೆ ಅಧೀನರಾಗಿರಿ
2 ನೀವು ಎಲ್ಲಾ ವಿಷಯಗಳಲ್ಲಿ ನನ್ನನ್ನು ಜ್ಞಾಪಿಸಿಕೊಳುವುದರಿಂದ ನಿಮ್ಮನ್ನು ಹೊಗಳುತ್ತೇನೆ. ನಾನು ನಿಮಗೆ ಕೊಟ್ಟ ಉಪದೇಶಗಳನ್ನು ನೀವು ಸೂಕ್ಷ್ಮವಾಗಿ ಅನುಸರಿಸುತ್ತಿದ್ದೀರಿ. 3 ಆದರೆ ನೀವು ಈ ವಿಷಯವನ್ನೂ ಅರ್ಥಮಾಡಿಕೊಳ್ಳಬೇಕೆಂಬುದು ನನ್ನ ಆಸೆ. ಪ್ರತಿಯೊಬ್ಬ ಪುರುಷನಿಗೂ ಕ್ರಿಸ್ತನು ಶಿರಸ್ಸಾಗಿದ್ದಾನೆ; ಸ್ತ್ರೀಗೆ ಪುರುಷನು ಶಿರಸ್ಸಾಗಿದ್ದಾನೆ; ಕ್ರಿಸ್ತನಿಗೆ ದೇವರು ಶಿರಸ್ಸಾಗಿದ್ದಾನೆ.
4 ಪುರುಷನು ಪ್ರವಾದಿಸುವಾಗ ಅಥವಾ ಪ್ರಾರ್ಥಿಸುವಾಗ ತನ್ನ ತಲೆಯ ಮೇಲೆ ಮುಸುಕು ಹಾಕಿಕೊಂಡರೆ ಅದು ಅವನ ಶಿರಸ್ಸಾದ ಕ್ರಿಸ್ತನಿಗೆ ಅಪಮಾನಕರವಾಗಿದೆ. 5 ಆದರೆ ಸ್ತ್ರೀಯು ಪ್ರಾರ್ಥಿಸುವಾಗ ಅಥವಾ ಪ್ರವಾದಿಸುವಾಗ ತನ್ನ ತಲೆಗೆ ಮುಸುಕನ್ನು ಹಾಕಿಕೊಂಡಿರಬೇಕು. ಆಕೆಯು ತನ್ನ ತಲೆಗೆ ಮುಸುಕು ಹಾಕಿಲ್ಲದಿದ್ದರೆ, ಅದು ಆಕೆಯ ಶಿರಸ್ಸಾದ ಪುರುಷನಿಗೆ ಅಪಮಾನಕರವಾಗಿದೆ. ಅವಳಿಗೂ ತಲೆಯನ್ನು ಬೋಳಿಸಿಕೊಂಡಿರುವ ಸ್ತ್ರೀಗೂ ಯಾವ ವ್ಯತ್ಯಾಸವಿಲ್ಲ. 6 ಸ್ತ್ರೀಯು ತನ್ನ ತಲೆಗೆ ಮುಸುಕು ಹಾಕಿಕೊಳ್ಳದಿದ್ದರೆ, ಆಕೆಯು ತನ್ನ ತಲೆಯನ್ನು ಬೋಳಿಸಿಕೊಳ್ಳಲಿ. ತಲೆಕೂದಲನ್ನು ಕತ್ತರಿಸಿಕೊಳ್ಳುವುದಾಗಲಿ ತಲೆಯನ್ನು ಬೋಳಿಸಿಕೊಳ್ಳುವುದಾಗಲಿ ಸ್ತ್ರೀಗೆ ಅಪಮಾನಕರವಾಗಿದೆ. ಆದ್ದರಿಂದ ಆಕೆ ತನ್ನ ತಲೆಗೆ ಮುಸುಕು ಹಾಕಿಕೊಳ್ಳಬೇಕು.
7 ಆದರೆ ಪುರುಷನು ತನ್ನ ತಲೆಗೆ ಮುಸುಕು ಹಾಕಿಕೊಳ್ಳಬಾರದು. ಏಕೆಂದರೆ, ಪುರುಷನು ದೇವರ ಸ್ವರೂಪವಾಗಿದ್ದಾನೆ ಮತ್ತು ದೇವರ ಪ್ರಭಾವವಾಗಿದ್ದಾನೆ. ಆದರೆ ಸ್ತ್ರೀಯು ಪುರುಷನ ಪ್ರಭಾವವಾಗಿದ್ದಾಳೆ. 8 ಪುರುಷನು ಸ್ತ್ರೀಯಿಂದ ಬಂದಿಲ್ಲ: ಸ್ತ್ರೀಯು ಪುರುಷನಿಂದ ಬಂದಳು. 9 ಪುರುಷನು ಸೃಷ್ಟಿಸಲ್ಪಟ್ಟದ್ದು ಸ್ತ್ರೀಗೋಸ್ಕರವಲ್ಲ. ಆದರೆ ಸ್ತ್ರೀಯು ಪುರುಷನಿಗೋಸ್ಕರ ಸೃಷ್ಟಿಸಲ್ಪಟ್ಟಳು. 10 ಆದಕಾರಣವೇ, ಸ್ತ್ರೀಯು ತಾನು ಅಧಿಕಾರದ ಅಧೀನದಲ್ಲಿರುವುದನ್ನು ಸೂಚಿಸಲು ತನ್ನ ತಲೆಗೆ ಮುಸುಕು ಹಾಕಿಕೊಳ್ಳಬೇಕು. ದೇವದೂತರ ನಿಮಿತ್ತವಾಗಿಯೂ ಸ್ತ್ರೀ ತನ್ನ ತಲೆಗೆ ಮುಸುಕು ಹಾಕಿಕೊಳ್ಳಬೇಕು.
11 ಆದರೆ ಪ್ರಭುವಿನ ದೃಷ್ಟಿಯಲ್ಲಿ ಸ್ತ್ರೀಯು ಪುರುಷನಿಗೆ ಎಷ್ಟು ಮುಖ್ಯವೋ ಪುರುಷನೂ ಸ್ತ್ರೀಗೆ ಅಷ್ಟೇ ಮುಖ್ಯ. 12 ಏಕೆಂದರೆ ಸ್ತ್ರೀಯು ಪುರುಷನಿಂದ ಬಂದದ್ದು ಸತ್ಯ. ಆದರೆ ಪುರುಷನು ಸಹ ಸ್ತ್ರೀಯ ಮೂಲಕವಾಗಿ ಹುಟ್ಟುತ್ತಾನೆ. ನಿಜವಾಗಿ ಸಮಸ್ತವೂ ದೇವರಿಂದಲೇ ಬರುತ್ತದೆ.
13 ಹೀಗಿರಲಾಗಿ, ಸ್ತ್ರೀಯು ತನ್ನ ತಲೆಗೆ ಮುಸುಕು ಹಾಕಿಕೊಳ್ಳದೆ ದೇವರಿಗೆ ಪ್ರಾರ್ಥಿಸುವುದು ಸರಿಯೋ? ನೀವೇ ತೀರ್ಮಾನಿಸಿರಿ. 14 ಮನುಷ್ಯನ ಸ್ವಭಾವವೇ ತಿಳಿಸುವಂತೆ ಉದ್ದನೆಯ ಕೂದಲನ್ನು ಹೊಂದಿರುವುದು ಪುರುಷನಿಗೆ ಅವಮಾನಕರವಾಗಿದೆ. 15 ಆದರೆ ಉದ್ದನೆಯ ಕೂದಲನ್ನು ಹೊಂದಿರುವುದು ಸ್ತ್ರೀಗೆ ಗೌರವಯುತವಾಗಿದೆ. ಉದ್ದನೆಯ ಕೂದಲನ್ನು ಸ್ತ್ರೀಯ ತಲೆಗೆ ಮುಸುಕನ್ನಾಗಿ ಕೊಡಲಾಗಿದೆ. 16 ಕೆಲವು ಜನರು ಇದರ ಬಗ್ಗೆ ಇನ್ನೂ ವಾದಮಾಡಬಯಸಬಹುದು. ಆದರೆ ಈ ಸಂಪ್ರದಾಯವು ನಮ್ಮಲ್ಲಾಗಲಿ ದೇವರ ಸಭೆಗಳಲ್ಲಾಗಲಿ ಇಲ್ಲ.
Kannada Holy Bible: Easy-to-Read Version. All rights reserved. © 1997 Bible League International