Revised Common Lectionary (Semicontinuous)
ರಚನೆಗಾರ: ದಾವೀದ
37 ದುಷ್ಟರನ್ನು ನೋಡಿ ಉರಿಗೊಳ್ಳಬೇಡ.
ಕೆಡುಕರನ್ನು ಕಂಡು ಹೊಟ್ಟೆಕಿಚ್ಚುಪಡಬೇಡ.
2 ದುಷ್ಟರು ಹುಲ್ಲಿನಂತೆಯೂ
ಸೊಪ್ಪಿನಂತೆಯೂ ಬೇಗನೆ ಒಣಗಿಹೋಗುವರು.
3 ನೀನು ಯೆಹೋವನಲ್ಲಿ ಭರವಸವಿಟ್ಟು ಒಳ್ಳೆಯ ಕಾರ್ಯಗಳನ್ನು ಮಾಡಿದರೆ, ದೀರ್ಘಕಾಲ ಬದುಕುವೆ;
ಭೂಮಿಯ ಅನೇಕ ಫಲಗಳನ್ನು ಅನುಭವಿಸುವೆ.
4 ಯೆಹೋವನಿಗೆ ಸಂತೋಷದಿಂದ ಸೇವೆಮಾಡು.
ನಿನಗೆ ಬೇಕಾದುದನ್ನು ಆತನೇ ಕೊಡುವನು.
5 ಯೆಹೋವನನ್ನು ಆಶ್ರಯಿಸಿಕೊ, ಆತನಲ್ಲಿ ಭರವಸವಿಡು.
ನಿನಗೆ ಅಗತ್ಯವಾದದ್ದನ್ನು ಆತನೇ ಮಾಡುವನು.
6 ನಿನ್ನ ನೀತಿಯೂ ನ್ಯಾಯವೂ
ಮಧಾಹ್ನದ ಸೂರ್ಯನಂತೆ ಪ್ರಕಾಶಿಸಲಿ.
7 ಯೆಹೋವನಲ್ಲಿ ಭರವಸವಿಟ್ಟು ಆತನ ಸಹಾಯಕ್ಕಾಗಿ ಕಾದುಕೊಂಡಿರು.
ಕೆಡುಕರ ಅಭಿವೃದ್ಧಿಯನ್ನು ಕಂಡು ಉರಿಗೊಳ್ಳಬೇಡ.
ಕೆಡುಕರ ಕುಯುಕ್ತಿಗಳು ನೆರವೇರಿದರೂ ಹೊಟ್ಟೆಕಿಚ್ಚುಪಡಬೇಡ.
8 ಕೋಪದಿಂದಿರಬೇಡ! ರೋಷದಿಂದಿರಬೇಡ! ಉರಿಗೊಳ್ಳಬೇಡ! ಅವು ನಿನ್ನನ್ನು ಕೆಡುಕಿಗೆ ನಡೆಸುತ್ತವೆ.
9 ದುಷ್ಟರಾದರೋ ನಾಶವಾಗುವರು.
ಯೆಹೋವನಲ್ಲಿ ಮೊರೆಯಿಡುವವರಾದರೋ ವಾಗ್ದಾನ ಮಾಡಲ್ಪಟ್ಟ ಭೂಮಿಯನ್ನು ಪಡೆದುಕೊಳ್ಳುವರು.
10 ಇನ್ನು ಸ್ವಲ್ಪ ಕಾಲದೊಳಗೆ ದುಷ್ಟರು ಇರುವುದೇ ಇಲ್ಲ.
ನೀನು ಅವರಿಗಾಗಿ ಹುಡುಕಿದರೂ ಅವರು ಸಿಕ್ಕುವುದಿಲ್ಲ!
11 ವಾಗ್ದಾನ ಮಾಡಲ್ಪಟ್ಟ ಭೂಮಿಯನ್ನು ದೀನರು ಪಡೆದುಕೊಳ್ಳುವರು;
ಸಮಾಧಾನವನ್ನು ಅನುಭವಿಸುವರು.
39 ಯೆಹೋವನು ನೀತಿವಂತರನ್ನು ಕಾಪಾಡುತ್ತಾನೆ.
ಅವರು ಆಪತ್ತಿನಲ್ಲಿರುವಾಗ ಆತನೇ ಅವರಿಗೆ ಆಶ್ರಯಸ್ಥಾನವಾಗಿದ್ದಾನೆ.
40 ಯೆಹೋವನು ನೀತಿವಂತರಿಗೆ ಸಹಾಯಕನಾಗಿ ಅವರನ್ನು ರಕ್ಷಿಸುತ್ತಾನೆ.
ನೀತಿವಂತರು ಆತನನ್ನು ಆಶ್ರಯಿಸಿಕೊಂಡಾಗ ಆತನು ಅವರನ್ನು ದುಷ್ಟರಿಂದ ತಪ್ಪಿಸಿ ಕಾಪಾಡುವನು.
ಯೋಸೇಫನ ಸಂಚು
44 ಬಳಿಕ ಯೋಸೇಫನು ತನ್ನ ಸೇವಕನಿಗೆ ಆಜ್ಞೆಮಾಡಿದನು. ಯೋಸೇಫನು, “ಈ ಜನರು ತೆಗೆದುಕೊಂಡು ಹೋಗಬಹುದಾದಷ್ಟು ದವಸಧಾನ್ಯಗಳನ್ನು ಇವರ ಚೀಲಗಳಲ್ಲಿ ತುಂಬಿ ಪ್ರತಿಯೊಬ್ಬನ ಹಣವನ್ನೂ ಧಾನ್ಯದೊಂದಿಗೆ ಚೀಲದಲ್ಲಿಡು. 2 ಕಿರಿಯ ಸಹೋದರನ ಚೀಲದಲ್ಲಿಯೂ ಹಣವನ್ನು ಇಡು. ಅಲ್ಲದೆ ನನ್ನ ವಿಶೇಷವಾದ ಬೆಳ್ಳಿ ಬಟ್ಟಲನ್ನು ಸಹ ಅವನ ಚೀಲದಲ್ಲಿಡು” ಎಂದು ಆಜ್ಞಾಪಿಸಿದನು. ಅಂತೆಯೇ ಸೇವಕನು ಮಾಡಿದನು.
3 ಮರುದಿನ ಮುಂಜಾನೆ ಸಹೋದರರನ್ನು ಮತ್ತು ಅವರ ಕತ್ತೆಗಳನ್ನು ಅವರ ದೇಶಕ್ಕೆ ಮರಳಿ ಕಳುಹಿಸಲಾಯಿತು. 4 ಅವರು ನಗರವನ್ನು ಬಿಟ್ಟುಹೋದ ಮೇಲೆ, ಯೋಸೇಫನು ತನ್ನ ಸೇವಕನಿಗೆ, “ಹೋಗು, ಆ ಜನರನ್ನು ಹಿಂಬಾಲಿಸು. ಅವರನ್ನು ತಡೆದು ಅವರಿಗೆ, ‘ನಾವು ನಿಮಗೆ ಒಳ್ಳೆಯವರಾಗಿದ್ದೆವು; ಆದರೆ ನೀವು ನಮಗೇಕೆ ಕೆಟ್ಟದ್ದನ್ನು ಮಾಡಿದಿರಿ? ನನ್ನ ಒಡೆಯನ ಬೆಳ್ಳಿ ಬಟ್ಟಲನ್ನು ನೀವೇಕೆ ಕದ್ದುಕೊಂಡು ಬಂದಿರಿ? 5 ಈ ಬಟ್ಟಲಿನಲ್ಲಿ ನನ್ನ ಒಡೆಯನು ಕುಡಿಯುತ್ತಾನೆ. ದೇವರಿಗೆ ಪ್ರಶ್ನೆಗಳನ್ನು ಕೇಳಲು ಅವನು ಈ ಬಟ್ಟಲನ್ನೇ ಉಪಯೋಗಿಸುವನು. ನೀವು ಅವನ ಬಟ್ಟಲನ್ನು ಕದ್ದುಕೊಂಡು ತಪ್ಪುಮಾಡಿದಿರಿ’ ಎಂದು ಹೇಳು” ಎಂಬುದಾಗಿ ತಿಳಿಸಿದನು.
6 ಅಂತೆಯೇ ಸೇವಕನು ಸಹೋದರರನ್ನು ಹಿಂಬಾಲಿಸಿ ಅವರನ್ನು ತಡೆದು ನಿಲ್ಲಿಸಿದನು. ಯೋಸೇಫನು ಹೇಳಿದಂತೆಯೇ ಅವನು ಅವರಿಗೆ ಹೇಳಿದನು.
7 ಆದರೆ ಸಹೋದರರು ಸೇವಕನಿಗೆ, “ರಾಜ್ಯಪಾಲನು ಈ ರೀತಿ ಹೇಳುವುದೇಕೆ? ನಾವು ಇಂಥಾ ಕೃತ್ಯವನ್ನು ಮಾಡಿಲ್ಲ. 8 ಮೊದಲು ನಮ್ಮ ಚೀಲಗಳಲ್ಲಿ ಸಿಕ್ಕಿದ ಹಣವನ್ನು ನಾವು ಕಾನಾನ್ ದೇಶದಿಂದ ಮತ್ತೆ ತಂದುಕೊಟ್ಟೆವು. ಆದ್ದರಿಂದ ಖಂಡಿತವಾಗಿ ನಾವು ನಿನ್ನ ಒಡೆಯನ ಮನೆಯಿಂದ ಬೆಳ್ಳಿಯನ್ನಾಗಲಿ ಬಂಗಾರವನ್ನಾಗಲಿ ಕದ್ದುಕೊಂಡಿಲ್ಲ. 9 ನೀನು ಬೆಳ್ಳಿಯ ಬಟ್ಟಲನ್ನು ನಮ್ಮ ಯಾರ ಚೀಲಗಳಲ್ಲಿ ಕಂಡರೂ, ಆ ವ್ಯಕ್ತಿಯು ಸಾಯಲಿ, ನೀನು ಅವನನ್ನು ಕೊಲ್ಲಬಹುದು; ನಾವು ನಿನ್ನ ಗುಲಾಮರಾಗಿರುವೆವು” ಎಂದು ಹೇಳಿದರು.
10 ಕನು, “ನೀವು ಹೇಳಿದಂತೆಯೇ ಆಗಲಿ. ಆದರೆ ನಾನು ಅವನನ್ನು ಕೊಲ್ಲುವುದಿಲ್ಲ. ಯಾರಲ್ಲಿ ಬೆಳ್ಳಿಯ ಬಟ್ಟಲು ಸಿಕ್ಕುತ್ತದೊ ಅವನು ನನ್ನ ಗುಲಾಮನಾಗಿರಬೇಕು; ಉಳಿದವರು ಹೋಗಬಹುದು” ಎಂದು ಹೇಳಿದನು.
ಸಂಚಿನಲ್ಲಿ ಬೆನ್ಯಾಮೀನನು ಸಿಕ್ಕಿಕೊಂಡದ್ದು
11 ಬಳಿಕ ಅವರು ಅವಸರದಿಂದ ತಮ್ಮ ಚೀಲಗಳನ್ನು ನೆಲದ ಮೇಲಿಟ್ಟು ಬಿಚ್ಚಿದರು. 12 ಸೇವಕನು ಚೀಲಗಳನ್ನು ಪರೀಕ್ಷಿಸಲು ಹಿರಿಯ ಸಹೋದರನಿಂದ ಆರಂಭಿಸಿ, ಕಿರಿಯವನಾದ ಬೆನ್ಯಾಮೀನನ ಚೀಲದಲ್ಲಿ ಆ ಬೆಳ್ಳಿಯ ಬಟ್ಟಲನ್ನು ಕಂಡುಕೊಂಡನು. 13 ಸಹೋದರರು ತುಂಬ ದುಃಖದಿಂದ ತಮ್ಮ ಬಟ್ಟೆಗಳನ್ನು ಹರಿದುಕೊಂಡು ತಮ್ಮ ಚೀಲಗಳನ್ನು ಮತ್ತೆ ಕತ್ತೆಗಳ ಮೇಲೇರಿಸಿಕೊಂಡು ನಗರಕ್ಕೆ ಹಿಂತಿರುಗಿದರು.
14 ಯೆಹೂದ ಮತ್ತು ಅವನ ಸಹೋದರರು ಯೋಸೇಫನ ಮನೆಗೆ ಹಿಂತಿರುಗಿದಾಗ ಯೋಸೇಫನು ಇನ್ನೂ ಅಲ್ಲೇ ಇದ್ದನು. ಸಹೋದರರು ನೆಲದ ಮೇಲೆ ಬಿದ್ದು ತಲೆಬಾಗಿ ನಮಸ್ಕರಿಸಿದರು. 15 ಯೋಸೇಫನು ಅವರಿಗೆ, “ನೀವು ಹೀಗೇಕೆ ಮಾಡಿದಿರಿ? ನಾನು ಶಕುನ ನೋಡಿ ರಹಸ್ಯಗಳನ್ನು ತಿಳಿದುಕೊಳ್ಳಬಲ್ಲೆನೆಂಬುದು ನಿಮಗೆ ಗೊತ್ತಿರಲಿಲ್ಲವೇ?” ಎಂದು ಕೇಳಿದನು.
16 ಯೆಹೂದನು, “ಸ್ವಾಮಿ, ನಾವು ಹೇಳುವಂಥದ್ದು ಏನೂ ಇಲ್ಲ; ವಿವರಿಸಲು ಯಾವ ದಾರಿಯೂ ಇಲ್ಲ; ನಾವು ತಪ್ಪಿತಸ್ಥರಲ್ಲವೆಂದು ತೋರಿಸಲು ಯಾವ ಮಾರ್ಗವೂ ಇಲ್ಲ. ನಾವು ಮಾಡಿದ ಬೇರೊಂದು ಕಾರ್ಯದ ನಿಮಿತ್ತ ದೇವರು ನಮ್ಮನ್ನು ತಪ್ಪಿತಸ್ಥರೆಂದು ನಿರ್ಣಯಿಸಿದ್ದಾನೆ. ಆದ್ದರಿಂದ ನಾವೆಲ್ಲರೂ ಬೆನ್ಯಾಮೀನನೂ ನಿನಗೆ ಗುಲಾಮರಾಗಿರುವೆವು” ಎಂದು ಹೇಳಿದನು.
17 ಆದರೆ ಯೋಸೇಫನು, “ನಾನು ನಿಮ್ಮೆಲ್ಲರನ್ನು ಗುಲಾಮರನ್ನಾಗಿ ಮಾಡುವುದಿಲ್ಲ; ಬಟ್ಟಲನ್ನು ಕದ್ದುಕೊಂಡವನು ಮಾತ್ರ ನನ್ನ ಗುಲಾಮನಾಗಿರಬೇಕು; ಉಳಿದ ನೀವೆಲ್ಲರೂ ನಿಮ್ಮ ತಂದೆಯ ಬಳಿಗೆ ಸಮಾಧಾನದಿಂದ ಹೋಗಬಹುದು” ಎಂದು ಹೇಳಿದನು.
12 ಪ್ರಿಯ ಮಕ್ಕಳೇ, ನಿಮ್ಮ ಪಾಪಗಳು ಕ್ರಿಸ್ತನ ಮೂಲಕ ಕ್ಷಮಿಸಲ್ಪಟ್ಟಿರುವುದರಿಂದ
ನಾನು ನಿಮಗೆ ಬರೆಯುತ್ತಿದ್ದೇನೆ.
13 ತಂದೆಗಳೇ, ಆದಿಯಿಂದ ಇರುವಾತನನ್ನು ನೀವು ತಿಳಿದಿರುವುದರಿಂದ
ನಾನು ನಿಮಗೆ ಬರೆಯುತ್ತಿದ್ದೇನೆ.
ಯುವಕರೇ, ನೀವು ಕೆಡುಕನನ್ನು ಸೋಲಿಸಿರುವುದರಿಂದ
ನಾನು ನಿಮಗೆ ಬರೆಯುತ್ತಿದ್ದೇನೆ.
14 ಮಕ್ಕಳೇ, ನೀವು ತಂದೆಯನ್ನು ತಿಳಿದಿರುವುದರಿಂದ
ನಾನು ನಿಮಗೆ ಬರೆಯುತ್ತಿದ್ದೇನೆ.
ತಂದೆಗಳೇ, ಆದಿಯಿಂದ ಇರುವಾತನನ್ನು ನೀವು ತಿಳಿದಿರುವುದರಿಂದ
ನಾನು ನಿಮಗೆ ಬರೆಯುತ್ತಿದ್ದೇನೆ.
ಯುವಕರೇ, ನೀವು ಬಲಶಾಲಿಗಳಾಗಿರುವುದರಿಂದ,
ದೇವರ ವಾಕ್ಯವು ನಿಮ್ಮಲ್ಲಿ ನೆಲಸಿರುವುದರಿಂದ
ಮತ್ತು ನೀವು ಕೆಡುಕನನ್ನು ಸೋಲಿಸಿರುವುದರಿಂದ
ನಾನು ನಿಮಗೆ ಬರೆಯುತ್ತಿದ್ದೇನೆ.
15 ಈ ಲೋಕವನ್ನಾಗಲಿ ಈ ಲೋಕದಲ್ಲಿರುವ ವಸ್ತುಗಳನ್ನಾಗಲಿ ನೀವು ಪ್ರೀತಿಸಬೇಡಿ. ಈ ಲೋಕವನ್ನು ಪ್ರೀತಿಸುವವನಿಗೆ ತಂದೆಯ (ದೇವರ) ಮೇಲೆ ಪ್ರೀತಿಯಿರುವುದಿಲ್ಲ. 16 ಈ ಲೋಕದಲ್ಲಿರುವ ಕೆಟ್ಟವುಗಳು ಇಂತಿವೆ: ನಮ್ಮ ಪಾಪಸ್ವಭಾವವನ್ನು ತಣಿಸಲು ಮಾಡಲಿಚ್ಛಿಸುವ ಕಾರ್ಯಗಳು, ನಾವು ನೋಡುವ ಪಾಪಪೂರಿತವಾದದ್ದನ್ನು ಪಡೆಯಲಿಚ್ಛಿಸುವುದು, ಮತ್ತು ನಮ್ಮಲ್ಲಿರುವ ವಸ್ತುಗಳಲ್ಲಿಯೇ ದುರಹಂಕಾರಪಡುವುದು. ಆದರೆ ಇವುಗಳಲ್ಲಿ ಯಾವುದೂ ತಂದೆಯಿಂದ ಬರುವುದಿಲ್ಲ. ಇವುಗಳೆಲ್ಲ ಈ ಲೋಕದಿಂದ ಬರುತ್ತವೆ. 17 ಈ ಲೋಕವು ಮತ್ತು ಜನರು ಬಯಸುವಂಥವುಗಳು ಗತಿಸಿಹೋಗುತ್ತವೆ. ಆದರೆ ದೇವರ ಚಿತ್ತಕ್ಕನುಸಾರವಾಗಿ ಮಾಡುವವನು ಸದಾಕಾಲ ಜೀವಿಸುವನು.
Kannada Holy Bible: Easy-to-Read Version. All rights reserved. © 1997 Bible League International