Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 120

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.

120 ನಾನು ಆಪತ್ತಿನಲ್ಲಿದ್ದಾಗ
    ಯೆಹೋವನಿಗೆ ಮೊರೆಯಿಟ್ಟೆನು.
    ಆತನು ನನಗೆ ಸದುತ್ತರವನ್ನು ದಯಪಾಲಿಸಿದನು.
ಯೆಹೋವನೇ, ಸುಳ್ಳಾಡುವವರಿಂದಲೂ
    ವಂಚಕರಿಂದಲೂ ನನ್ನನ್ನು ರಕ್ಷಿಸು.

ಸುಳ್ಳುಗಾರರೇ, ನಿಮಗೆ ದೇವರಿಂದ ಬರುವ ದಂಡನೆಯನ್ನು ಬಲ್ಲಿರಾ?
    ನಿಮಗೆ ಯಾವ ಶಿಕ್ಷೆಯನ್ನು ಒದಗಿಸಬೇಕು?
ಯುದ್ಧವೀರನ ತೀಕ್ಷ್ಣವಾದ ಬಾಣದಿಂದಲೂ ಉರಿಯುವ ಕೆಂಡಗಳಿಂದಲೂ ದೇವರು ನಿಮ್ಮನ್ನು ದಂಡಿಸುವನು.

ಸುಳ್ಳುಗಾರರಾದ ನಿಮ್ಮ ಸಮೀಪದಲ್ಲಿ ವಾಸಿಸುವುದು
    ಮೇಷೆಕಿನಲ್ಲಿಯೂ ಕೇದಾರಿನ ಗುಡಾರಗಳಲ್ಲಿಯೂ[a] ವಾಸಿಸುವಂತಿರುವುದು.
ಶಾಂತಿದ್ವೇಷಕರೊಂದಿಗೆ ನಾನು ಬಹುಕಾಲ ವಾಸಿಸಿದ್ದೇನೆ.
ಶಾಂತಿ ನೆಲೆಸಿರಲಿ ಎಂದು ನಾನು ಹೇಳಿದರೂ ಅವರು ಯುದ್ಧವನ್ನೇ ಇಷ್ಟಪಡುತ್ತಾರೆ.

2 ರಾಜರುಗಳು 24:18-25:21

18 ಚಿದ್ಕೀಯನು ಆಳಲಾರಂಭಿಸಿದಾಗ ಅವನಿಗೆ ಇಪ್ಪತ್ತೊಂದು ವರ್ಷ ವಯಸ್ಸಾಗಿತ್ತು. ಅವನು ಜೆರುಸಲೇಮಿನಲ್ಲಿ ಹನ್ನೊಂದು ವರ್ಷ ಆಳಿದನು. ಅವನ ತಾಯಿಯು ಲಿಬ್ನದ ಯೆರೆಮೀಯನ ಮಗಳಾದ ಹಮೂಟಲ್ ಎಂಬ ಹೆಸರಿನವಳು. 19 ಯೆಹೋವನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನು ಚಿದ್ಕೀಯನು ಮಾಡಿದನು. ಚಿದ್ಕೀಯನು ಯೆಹೋಯಾಖೀನನು ಮಾಡಿದಂಥ ಕಾರ್ಯಗಳನ್ನು ಮಾಡಿದನು. 20 ಯೆಹೋವನ ಕೋಪದಿಂದ ಯೆಹೂದಕ್ಕೆ ಮತ್ತು ಜೆರುಸಲೇಮಿಗೆ ಇವೆಲ್ಲವೂ ಸಂಭವಿಸಿದವು. ಹೀಗೆ ಯೆಹೋವನು ಅವರನ್ನು ತನ್ನಿಂದ ದೂರಸರಿಸಿದನು. ಚಿದ್ಕೀಯನು ಬಾಬಿಲೋನ್ ರಾಜನಿಗೆ ವಿರುದ್ಧವಾಗಿ ದಂಗೆ ಎದ್ದನು.

ನೆಬೂಕದ್ನೆಚ್ಚರನು ಚಿದ್ಕೀಯನ ಆಳ್ವಿಕೆಯನ್ನು ಕೊನೆಗೊಳಿಸಿದನು

25 ಆದ್ದರಿಂದ ಬಾಬಿಲೋನ್ ರಾಜನಾದ ನೆಬೂಕದ್ನೆಚ್ಚರನು ಜೆರುಸಲೇಮಿನ ವಿರುದ್ಧ ಯುದ್ಧಮಾಡಲು ತನ್ನ ಎಲ್ಲಾ ಸೇನೆಯೊಡನೆ ಬಂದನು. ನೆಬೂಕದ್ನೆಚ್ಚರನು ಜೆರುಸಲೇಮಿನ ಸುತ್ತಲೂ ಪಾಳೆಯ ಮಾಡಿಕೊಂಡು ಮಣ್ಣಿನ ದಿಬ್ಬವನ್ನು ನಿರ್ಮಿಸಿದನು. ಅವನು ನಗರದೊಳಕ್ಕೆ ಹೋಗುವ ಮತ್ತು ನಗರದಿಂದ ಬರುವ ಜನರನ್ನು ತಡೆಯಲು ಹೀಗೆ ಮಾಡಿದನು. ಇದು ನೆಬೂಕದ್ನೆಚ್ಚರನ ಆಳ್ವಿಕೆಯ ಒಂಭತ್ತನೆಯ ವರ್ಷದ ಹತ್ತನೆಯ ತಿಂಗಳಿನ ಹತ್ತನೆಯ ದಿನದಂದು ಸಂಭವಿಸಿತು. ನೆಬೂಕದ್ನೆಚ್ಚರನ ಸೇನೆಯು ಜೆರುಸಲೇಮಿನ ಸುತ್ತಲೂ, ಚಿದ್ಕೀಯನು ಯೆಹೂದದ ರಾಜನಾದ ಹನ್ನೊಂದನೆಯ ವರ್ಷದವರೆಗೆ ನೆಲೆಸಿತು. ನಾಲ್ಕನೆಯ ತಿಂಗಳ ಒಂಭತ್ತನೆಯ ದಿನದಂದು ನಗರದಲ್ಲಿ ಭೀಕರ ಬರಗಾಲವಿತ್ತು. ಅಲ್ಲಿನ ಸಾಮಾನ್ಯರಿಗೆ ಆಹಾರವೇನೂ ಇರಲಿಲ್ಲ.

ಆಗ ನೆಬೂಕದ್ನೆಚ್ಚರನ ಸೇನೆಯು ನಗರದ ಗೋಡೆಯಲ್ಲಿ ಒಂದು ರಂಧ್ರವನ್ನು ಕೊರೆದರು. ಅಂದಿನ ರಾತ್ರಿ ರಾಜನಾದ ಚಿದ್ಕೀಯ ಮತ್ತು ಅವನ ಸೈನಿಕರೆಲ್ಲರೂ ಓಡಿಹೋದರು. ಅವರು ರಾಜನ ತೋಟದ ಎರಡು ಗೋಡೆಗಳ ಮಧ್ಯಭಾಗದ ರಹಸ್ಯ ಬಾಗಿಲಿನ ಮೂಲಕ ಓಡಿಹೋದರು. ಬಾಬಿಲೋನ್ ಸೇನೆಯು ನಗರವನ್ನು ಸುತ್ತುವರಿದಿತ್ತು. ಆದರೆ ಚಿದ್ಕೀಯ ಮತ್ತು ಅವನ ಸೇನೆಯು ಮರುಭೂಮಿಯ ರಸ್ತೆಯಲ್ಲಿ ತಪ್ಪಿಸಿಕೊಂಡರು. ಬಾಬಿಲೋನ್ ಸೇನೆಯು ರಾಜನಾದ ಚಿದ್ಕೀಯನನ್ನು ಅಟ್ಟಿಸಿಕೊಂಡು ಹೋಗಿ, ಅವನನ್ನು ಜೆರಿಕೊವಿನ ಸಮೀಪದಲ್ಲಿ ಹಿಡಿದರು.

ಬಾಬಿಲೋನಿನವರು ರಾಜನಾದ ಚಿದ್ಕೀಯನನ್ನು ರಿಬ್ಲದಲ್ಲಿ ಬಾಬಿಲೋನ್ ರಾಜನಿಗೆ ಒಪ್ಪಿಸಿದರು. ಬಾಬಿಲೋನ್ ರಾಜನು ಚಿದ್ಕೀಯನನ್ನು ದಂಡಿಸಲು ತೀರ್ಮಾನಿಸಿದನು. ಅವರು ಚಿದ್ಕೀಯನ ಮಕ್ಕಳನ್ನು ಅವನ ಎದುರಿನಲ್ಲಿಯೇ ಕೊಂದುಹಾಕಿದರು. ನಂತರ ಅವರು ಚಿದ್ಕೀಯನ ಕಣ್ಣುಗಳನ್ನು ಕಿತ್ತುಹಾಕಿದರು. ಅವರು ಅವನನ್ನು ಸರಪಣಿಗಳಿಂದ ಬಂಧಿಸಿ, ಬಾಬಿಲೋನಿಗೆ ಕೊಂಡೊಯ್ದರು.

ಜೆರುಸಲೇಮನ್ನು ನಾಶಗೊಳಿಸಲಾಯಿತು

ಬಾಬಿಲೋನ್ ರಾಜನಾಗಿದ್ದ ನೆಬೂಕದ್ನೆಚ್ಚರನು ತನ್ನ ಆಳ್ವಿಕೆಯ ಹತ್ತೊಂಭತ್ತನೆಯ ವರ್ಷದ ಐದನೆಯ ತಿಂಗಳ ಏಳನೆಯ ದಿನದಂದು ಜೆರುಸಲೇಮಿಗೆ ಬಂದನು. ನೆಬೂಜರದಾನ ಎಂಬವನು ನೆಬೂಕದ್ನೆಚ್ಚರನ ರಕ್ಷಕ ದಳದ ಅಧಿಪತಿಯಾಗಿದ್ದನು. ನೆಬೂಜರದಾನನು ದೇವಾಲಯವನ್ನೂ ರಾಜನ ಅರಮನೆಯನ್ನೂ ಜೆರುಸಲೇಮಿನಲ್ಲಿದ್ದ ಮನೆಗಳನ್ನೆಲ್ಲಾ ಸುಟ್ಟುಹಾಕಿದನು. ಅವನು ಮಹಾಸೌಧಗಳನ್ನು ನಾಶಗೊಳಿಸಿದನು.

10 ನಂತರ ನೆಬೂಜರದಾನನೊಂದಿಗಿದ್ದ ಬಾಬಿಲೋನ್ ಸೈನ್ಯವು ಜೆರುಸಲೇಮಿನ ಸುತ್ತಲೂ ಇದ್ದ ಗೋಡೆಯನ್ನು ಕೆಡವಿಹಾಕಿತು. 11 ಆ ನಗರದಲ್ಲಿ ಉಳಿದಿದ್ದ ಜನರನ್ನೆಲ್ಲಾ ನೆಬೂಜರದಾನನು ಸೆರೆಹಿಡಿದನು. ರಾಜನಾದ ನೆಬೂಕದ್ನೆಚ್ಚರನಿಗೆ ವಿಧೇಯರಾಗಿರಲು ಕೆಲವು ಜನರು ಒಪ್ಪಿದರು. ಆದರೆ ನೆಬೂಜರದಾನನು ಆ ಜನರನ್ನೆಲ್ಲಾ ಸೆರೆಹಿಡಿದನು. ಅವನು ನಗರದಲ್ಲಿದ್ದ ಪ್ರತಿಯೊಬ್ಬರನ್ನೂ ಕರೆದೊಯ್ದನು. 12 ಸಾಮಾನ್ಯ ಜನರಲ್ಲಿ ತೀರ ಬಡವರಾದ ಜನರನ್ನು ಮಾತ್ರ ನೆಬೂಜರದಾನನು ಅಲ್ಲಿಯೇ ನೆಲೆಸಲು ಬಿಟ್ಟನು. ಆ ಬಡಜನರು ಅಲ್ಲಿಯೇ ನೆಲೆಸಿ, ಬೇಸಾಯಮಾಡಿ ದ್ರಾಕ್ಷಿಯನ್ನು ಬೆಳೆಯಲು ಅವರನ್ನು ಬಿಟ್ಟುಬಿಟ್ಟನು.

13 ಬಾಬಿಲೋನ್ ಸೈನಿಕರು ದೇವಾಲಯದಲ್ಲಿದ್ದ ತಾಮ್ರದ ಸ್ತಂಭಗಳನ್ನು ಚೂರುಚೂರು ಮಾಡಿದರು. ಅವರು ಯೆಹೋವನ ಆಲಯದಲ್ಲಿದ್ದ ತಾಮ್ರದ ದೊಡ್ಡ ತೊಟ್ಟಿಯನ್ನು ಮತ್ತು ತಾಮ್ರದ ಬಂಡಿಯನ್ನು ಚೂರುಚೂರಾಗಿ ಒಡೆದುಹಾಕಿದರು. ನಂತರ ಬಾಬಿಲೋನ್ ಸೈನಿಕರು ತಾಮ್ರದ ಚೂರುಗಳನ್ನು ಬಾಬಿಲೋನಿಗೆ ತೆಗೆದುಕೊಂಡು ಹೋದರು. 14 ಬಾಬಿಲೋನಿನವರು ದೇವಾಲಯದಲ್ಲಿ ಉಪಯೋಗಿಸುತ್ತಿದ್ದ ಬೋಗುಣಿ, ಸಲಿಕೆ, ಕತ್ತರಿ, ಧೂಪಾರತಿ ಮೊದಲಾದ ತಾಮ್ರದ ವಸ್ತುಗಳನ್ನು ತೆಗೆದುಕೊಂಡು ಹೋದರು. 15 ನೆಬೂಜರದಾನನು ಅಗ್ಗಿಷ್ಟಿಕೆಗಳನ್ನು ಮತ್ತು ಬಟ್ಟಲುಗಳನ್ನು ತೆಗೆದುಕೊಂಡು ಹೋದನು. ಅವನು ಬಂಗಾರದ ವಸ್ತುಗಳನ್ನು ಬಂಗಾರಕ್ಕಾಗಿಯೂ ಬೆಳ್ಳಿಯ ವಸ್ತುಗಳನ್ನು ಬೆಳ್ಳಿಗಾಗಿಯೂ ತೆಗೆದುಕೊಂಡು ಹೋದನು. 16 ಅವನು ತೆಗೆದುಕೊಂಡು ಹೋದ ವಸ್ತುಗಳ ಪಟ್ಟಿಯು ಹೀಗಿದೆ: ಎರಡು ತಾಮ್ರ ಕಂಬಗಳು, ಒಂದು ತೊಟ್ಟಿ ಮತ್ತು ದೇವಾಲಯಕ್ಕೆ ಸೊಲೊಮೋನನು ನಿರ್ಮಿಸಿದ್ದ ಬಂಡಿಗಳು. ಈ ವಸ್ತುಗಳ ತಾಮ್ರವು ತೂಕ ಮಾಡಲಾರದಷ್ಟು ಅಧಿಕವಾಗಿತ್ತು. 17 ಪ್ರತಿಯೊಂದು ಕಂಬವೂ ಸುಮಾರು ಇಪ್ಪತ್ತೇಳು ಅಡಿ ಉದ್ದವಾಗಿತ್ತು. ಕಂಬಗಳ ಮೇಲಿದ್ದ ಬೋದಿಗೆಗಳನ್ನು ತಾಮ್ರದಿಂದ ನಿರ್ಮಿಸಿದ್ದರು. ಪ್ರತಿಯೊಂದು ಬೋದಿಗೆಯೂ ನಾಲ್ಕುವರೆ ಅಡಿ ಉದ್ದವಾಗಿತ್ತು. ಪ್ರತಿಯೊಂದು ಬೋದಿಗೆಯ ಮೇಲೆ ಜಾಲರಿಯ ಆಕಾರವಿತ್ತು ಮತ್ತು ದಾಳಿಂಬೆ ಹಣ್ಣುಗಳ ಆಕಾರಗಳಿದ್ದವು. ಇವೆಲ್ಲವುಗಳನ್ನು ತಾಮ್ರದಿಂದಲೇ ಮಾಡಿದ್ದರು. ಎರಡು ಕಂಬಗಳೂ ಒಂದೇ ರೀತಿಯ ಆಕಾರದಲ್ಲಿದ್ದವು.

ಯೆಹೂದದ ಜನರನ್ನು ಸೆರೆಯಾಳುಗಳನ್ನಾಗಿಸಿ ಕರೆದೊಯ್ದರು

18 ನಂತರ, ನೆಬೂಜರದಾನನು, ಪ್ರಧಾನಯಾಜಕನಾದ ಸೆರಾಯನನ್ನು, ಎರಡನೆಯ ಯಾಜಕನಾದ ಚೆಫನ್ಯನನ್ನು ಮತ್ತು ಮೂವರು ದ್ವಾರಪಾಲಕರನ್ನು ಹಿಡಿದುಕೊಂಡು ಹೋದನು.

19 ನೆಬೂಜರದಾನನು ಸೇನೆಯ ಸೇನಾಧಿಕಾರಿಯೊಬ್ಬನನ್ನು ಹಿಡಿದುಕೊಂಡು ಹೋದನು. ನೆಬೂಜರದಾನನು ನಗರದಲ್ಲಿ ಸಿಕ್ಕಿದ ರಾಜನ ಐದು ಮಂದಿ ಸಲಹೆಗಾರರನ್ನು ಹಿಡಿದೊಯ್ದನು. ಅವನು ಸೇನೆಯ ಅಧಿಕಾರಿಯ ಕಾರ್ಯದರ್ಶಿಯನ್ನು ಹಿಡಿದೊಯ್ದನು. ಸೇನಾಧಿಕಾರಿಯ ಕಾರ್ಯದರ್ಶಿಯು ಸಾಮಾನ್ಯ ಜನರನ್ನು ಒಟ್ಟುಗೂಡಿಸಿ, ಅವರನ್ನು ಸೈನಿಕರನ್ನಾಗಿ ಆರಿಸುತ್ತಿದ್ದನು. ನೆಬೂಜರದಾನನು ನಗರದಲ್ಲಿ ಸಿಕ್ಕಿದ ಇತರ ಅರವತ್ತು ಮಂದಿಯನ್ನು ಹಿಡಿದೊಯ್ದನು. ಈ ಜನರು ಸಾಮಾನ್ಯ ಜನರಾಗಿದ್ದರು.

20 ನಂತರ ನೆಬೂಜರದಾನನು ಆ ಜನರನ್ನೆಲ್ಲ ರಿಬ್ಲದಲ್ಲಿದ್ದ ಬಾಬಿಲೋನ್ ರಾಜನ ಬಳಿಗೆ ಒಯ್ದನು. 21 ಬಾಬಿಲೋನ್ ರಾಜನು ಹಮಾತ್ ದೇಶದ ರಿಬ್ಲದಲ್ಲಿ ಅವರನ್ನೆಲ್ಲ ಕೊಂದುಹಾಕಿದನು. ಹೀಗೆ ಯೆಹೂದದ ಜನರನ್ನೆಲ್ಲ ಅವರ ದೇಶದಿಂದ ಸೆರೆಯಾಳುಗಳನ್ನಾಗಿಸಿ ಹಿಡಿದೊಯ್ದರು.

1 ಕೊರಿಂಥದವರಿಗೆ 15:20-34

20 ಆದರೆ ಕ್ರಿಸ್ತನು ನಿಜವಾಗಿಯೂ ಸತ್ತವರೊಳಗಿಂದ ಜೀವಂತವಾಗಿ ಎದ್ದುಬಂದಿದ್ದಾನೆ. ನಿದ್ರೆಹೋದವರಲ್ಲಿ ಅಂದರೆ ಸತ್ತುಹೋದ ಎಲ್ಲಾ ವಿಶ್ವಾಸಿಗಳಲ್ಲಿ ಆತನೇ ಪ್ರಥಮ ಫಲವಾದನು. 21 ಒಬ್ಬ ಮನುಷ್ಯನು (ಆದಾಮನು) ಮಾಡಿದ ಕಾರ್ಯದಿಂದಾಗಿ ಜನರು ಮರಣ ಹೊಂದುವಂತೆಯೇ ಒಬ್ಬ ಮನುಷ್ಯನ (ಕ್ರಿಸ್ತನ) ಮೂಲಕವಾಗಿಯೇ ಜನರು ಜೀವಂತವಾಗಿ ಎದ್ದುಬರುವರು. 22 ಆದಾಮನ ಸಂಬಂಧದಿಂದ ಎಲ್ಲರೂ ಸಾಯುತ್ತಾರೆ. ಇದೇರೀತಿ ಕ್ರಿಸ್ತನ ಸಂಬಂಧದಿಂದ ನಾವೆಲ್ಲರೂ ಮತ್ತೆ ಜೀವಂತರಾಗುತ್ತೇವೆ. 23 ಆದರೆ ಪ್ರತಿಯೊಬ್ಬನು ಕ್ರಮಬದ್ಧ ರೀತಿಯಲ್ಲಿ ಜೀವಂತವಾಗಿ ಎದ್ದುಬರುವನು. ಮೊಟ್ಟಮೊದಲನೆಯದಾಗಿ ಕ್ರಿಸ್ತನೇ ಎದ್ದುಬಂದನು. ಕ್ರಿಸ್ತನು ಮತ್ತೆ ಬರುವಾಗ ಕ್ರಿಸ್ತನಿಗೆ ಸೇರಿದ ಜನರು ಜೀವಂತವಾಗಿ ಎದ್ದುಬರುವರು. 24 ಅನಂತರ ಅಂತ್ಯ ಬರುವುದು. ಕ್ರಿಸ್ತನು ಎಲ್ಲಾ ಅಧಿಪತಿಗಳನ್ನು, ಅಧಿಕಾರಗಳನ್ನು ಮತ್ತು ಶಕ್ತಿಗಳನ್ನು ನಾಶಮಾಡುವನು. ಬಳಿಕ ಕ್ರಿಸ್ತನು ತಂದೆಯಾದ ದೇವರಿಗೆ ರಾಜ್ಯವನ್ನು ಕೊಡುವನು.

25 ದೇವರು ಎಲ್ಲಾ ಶತ್ರುಗಳನ್ನು ಕ್ರಿಸ್ತನಿಗೆ ಅಧೀನಗೊಳಿಸುವ ತನಕ ಕ್ರಿಸ್ತನು ಆಳಲೇಬೇಕು. 26 ನಾಶವಾಗುವ ಕಡೆಯ ಶತ್ರುವೆಂದರೆ ಮರಣವೇ. 27 “ದೇವರು ಸಮಸ್ತವನ್ನು ಆತನಿಗೆ ಅಧೀನಗೊಳಿಸುತ್ತಾನೆ”(A) ಎಂದು ಪವಿತ್ರಗ್ರಂಥವು ಹೇಳುತ್ತದೆ. “ಸಮಸ್ತವನ್ನು” ಕ್ರಿಸ್ತನಿಗೆ ಅಧೀನಗೊಳಿಸುತ್ತಾನೆಂದು ಹೇಳುವಾಗ, ಅದು ದೇವರನ್ನು ಒಳಗೊಂಡಿಲ್ಲ ಎಂಬುದು ಸ್ಪಷ್ಟವಾಗಿದೆ. ಸಮಸ್ತವನ್ನು ಕ್ರಿಸ್ತನಿಗೆ ಅಧೀನಗೊಳಿಸಿದಾತನು ದೇವರೇ. 28 ಸಮಸ್ತವು ತನ್ನ ಅಧೀನಕ್ಕೆ ಬಂದ ಮೇಲೆ, ಕ್ರಿಸ್ತನು ತನ್ನನ್ನೇ ದೇವರಿಗೆ ಅಧೀನಪಡಿಸಿಕೊಳ್ಳುವನು. ಸಮಸ್ತವನ್ನು ಕ್ರಿಸ್ತನಿಗೆ ಅಧೀನಪಡಿಸಿದಾತನು ದೇವರೇ. ಹೀಗೆ ದೇವರು ಸಮಸ್ತಕ್ಕೂ ಸರ್ವಾಧಿಪತಿಯಾಗುವನು.[a]

29 ಸತ್ತವರಿಗೆ ಪುನರುತ್ಥಾನವಿಲ್ಲವಾದರೆ ಸತ್ತುಹೋದವರಿಗೋಸ್ಕರ ದೀಕ್ಷಾಸ್ನಾನ ಮಾಡಿಸಿಕೊಂಡ ಜನರು ಏನು ಮಾಡುವರು? ಸತ್ತವರಿಗೆ ಪುನರುತ್ಥಾನವಿಲ್ಲವಾದರೆ, ಜನರು ಅವರಿಗೋಸ್ಕರ ದೀಕ್ಷಾಸ್ನಾನ ಮಾಡಿಸಿಕೊಳ್ಳುವುದೇಕೆ?

30 ನಮ್ಮ ವಿಷಯವೇನು? ನಾವು ನಮ್ಮನ್ನು ಪ್ರತಿ ತಾಸಿನಲ್ಲಿಯೂ ಅಪಾಯಕ್ಕೆ ಒಡ್ಡುವುದು ಏಕೆ? 31 ನಾನು ಪ್ರತಿದಿನವೂ ಸಾಯುತ್ತೇನೆ. ಸಹೋದರರೇ ನಮ್ಮ ಪ್ರಭುವಾದ ಕ್ರಿಸ್ತ ಯೇಸುವಿನಲ್ಲಿ ನಾನು ನಿಮ್ಮ ಬಗ್ಗೆ ಹೆಮ್ಮೆಪಡುವುದು ಎಷ್ಟು ಸತ್ಯವೋ ಅಷ್ಟೇ ಸತ್ಯ ಅದಾಗಿದೆ. 32 ಕೇವಲ ನನ್ನ ಮಾನುಷ ಸ್ವಭಾವದಿಂದ ನಾನು ಎಫೆಸದಲ್ಲಿ ದುಷ್ಟಮೃಗಗಳೊಂದಿಗೆ ಹೋರಾಡಿದ್ದರೆ, ಅದರಿಂದ ನನಗೇನು ಪ್ರಯೋಜನ? ಸತ್ತವರಿಗೆ ಪುನರುತ್ಥಾನವಿಲ್ಲದಿದ್ದರೆ, “ತಿನ್ನೋಣ, ಕುಡಿಯೋಣ, ಏಕೆಂದರೆ ನಾವು ನಾಳೆ ಸಾಯುತ್ತೇವೆ.”

33 ಮೋಸ ಹೋಗಬೇಡಿರಿ. “ದುರ್ಜನರ ಸಹವಾಸ ಸದಾಚಾರದ ಭಂಗ.” 34 ಸ್ವಸ್ಥಚಿತ್ತರಾಗಿರಿ ಮತ್ತು ಪಾಪಮಾಡುವುದನ್ನು ನಿಲ್ಲಿಸಿರಿ. ನಿಮ್ಮಲ್ಲಿ ಕೆಲವರು ದೇವರನ್ನು ಅರಿತುಕೊಂಡಿಲ್ಲ. ನಿಮಗೆ ನಾಚಿಕೆ ಆಗಲೆಂದು ಇದನ್ನು ಹೇಳುತ್ತಿದ್ದೇನೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International