Revised Common Lectionary (Semicontinuous)
ಮೊದಲನೆ ಭಾಗ
(ಕೀರ್ತನೆಗಳು 1–41)
1 ಯಾವನು ದುಷ್ಟರ ಮಾರ್ಗವನ್ನು ಅನುಸರಿಸದೆ,
ಪಾಪಿಗಳಂತೆ ಜೀವಿಸದೆ,
ದೇವರಿಗೆ ಅವಿಧೇಯರಾದ ಜನರೊಂದಿಗೆ ಸೇರದೆ ಇರುವನೋ
ಅವನೇ ಭಾಗ್ಯವಂತನು.
2 ನೀತಿವಂತನಾದ ಅವನು ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಿಸುತ್ತಾ
ಅದನ್ನೇ ಹಗಲಿರುಳು ಧ್ಯಾನಿಸುವನು.
3 ಅವನು ನೀರಿನ ಕಾಲುವೆಗಳ ಬಳಿಯಲ್ಲಿ
ಹುಲುಸಾಗಿ ಬೆಳೆದಿರುವ ಮರದಂತಿರುವನು.
ಆ ಮರವು ತಕ್ಕಕಾಲದಲ್ಲಿ ಫಲಿಸುವುದು;
ಬಾಡದ ಎಲೆಗಳಿಂದ ಯಾವಾಗಲೂ ತುಂಬಿರುವುದು;
ಅಂತೆಯೇ ಅವನ ಕಾರ್ಯಗಳೆಲ್ಲಾ ಸಫಲವಾಗುವವು.
4 ದುಷ್ಟರಾದರೋ ಹಾಗಲ್ಲ!
ಅವರು ಗಾಳಿ ಬಡಿದುಕೊಂಡು ಹೋಗುವ ಹೊಟ್ಟಿನಂತಿರುವರು.
5 ನ್ಯಾಯತೀರ್ಪಿನ ಕಾಲ ಬಂದಾಗ ದುಷ್ಟರಿಗೆ ಅಪರಾಧಿಗಳೆಂದು ತೀರ್ಪಾಗುವುದು.
ಪಾಪಿಗಳಿಗೆ ನೀತಿವಂತರ ಮಧ್ಯದಲ್ಲಿ ಸ್ಥಳವಿರುವುದಿಲ್ಲ.
6 ಯೆಹೋವನು ನೀತಿವಂತರನ್ನು ಸಂರಕ್ಷಿಸುವನು;
ದುಷ್ಟರನ್ನಾದರೋ ನಾಶಪಡಿಸುವನು.
ಹೃದಯದ ಮೇಲೆ ಬರೆದ ಅಪರಾಧ
17 “ಯೆಹೂದದ ಜನರ ಅಪರಾಧ
ಅಳಿಸಲಾಗದ ಸ್ಥಳದಲ್ಲಿ ಬರೆಯಲಾಗಿದೆ.
ಆ ಅಪರಾಧಗಳು ಕಬ್ಬಿಣದ ಲೇಖನಿಯಿಂದ ಕಲ್ಲಿನ ಮೇಲೆ ಕೆತ್ತಲಾಗಿವೆ.
ಅವರ ಪಾಪಗಳು ವಜ್ರದ ಮೊನೆಯುಳ್ಳ ಲೇಖನಿಯಿಂದ ಕಲ್ಲಿನ ಮೇಲೆ ಕೆತ್ತಲಾಗಿವೆ.
ಅವರ ಹೃದಯವೇ ಆ ಕಲ್ಲು,
ಆ ಪಾಪಗಳು ಅವರ ಯಜ್ಞವೇದಿಕೆಗಳ ಕೊಂಬುಗಳಲ್ಲಿ ಕೆತ್ತಿವೆ.
2 ಅವರ ಮಕ್ಕಳು ಸುಳ್ಳುದೇವರುಗಳಿಗೆ ಅರ್ಪಿಸಿದ
ಯಜ್ಞವೇದಿಕೆಗಳನ್ನು ಜ್ಞಾಪಿಸಿಕೊಳ್ಳುವರು.
ಅವರು ಅಶೇರಳಿಗೆ ಅರ್ಪಿಸಿದ
ಮರದ ವಿಗ್ರಹಸ್ತಂಭಗಳನ್ನು ಜ್ಞಾಪಿಸಿಕೊಳ್ಳುವರು.
ಅವರು ಸೊಂಪಾಗಿ ಬೆಳೆದ ಮರದ ಕೆಳಗೆ
ಮತ್ತು ಬೆಟ್ಟಗಳ ಮೇಲೆ ಆ ವಸ್ತುಗಳನ್ನು ಜ್ಞಾಪಿಸಿಕೊಳ್ಳುವರು.
3 ಅವರು ಆ ವಸ್ತುಗಳನ್ನು ಬೆಟ್ಟಗಳ ಮೇಲೆಯೂ
ಬಯಲು ಪ್ರದೇಶದಲ್ಲಿಯೂ ಜ್ಞಾಪಿಸಿಕೊಳ್ಳುವರು.
ಯೆಹೂದದ ಜನರಲ್ಲಿ ಭಂಡಾರಗಳಿವೆ.
ನಾನು ಅವುಗಳನ್ನು ಬೇರೆಯವರಿಗೆ ಒಪ್ಪಿಸುತ್ತೇನೆ.
ನಿಮ್ಮ ದೇಶದಲ್ಲಿದ್ದ ಎಲ್ಲಾ ಉನ್ನತಸ್ಥಳಗಳನ್ನು ಜನರು ನಾಶಮಾಡುವರು.
ಆ ಸ್ಥಳಗಳಲ್ಲಿ ಪೂಜೆಮಾಡಿ
ನೀವು ಪಾಪಕ್ಕೆ ಗುರಿಯಾಗಿರುವಿರಿ.
4 ನಾನು ನಿಮಗೆ ಕೊಟ್ಟ ಭೂಮಿಯನ್ನು ನೀವು ಕಳೆದುಕೊಳ್ಳುವಿರಿ.
ನಿಮ್ಮನ್ನು ನಿಮಗೆ ತಿಳಿಯದ ನಾಡಿನಲ್ಲಿ ನಿಮ್ಮ ಶತ್ರುಗಳ ದಾಸರನ್ನಾಗಿ ಮಾಡುವೆನು.
ಏಕೆಂದರೆ ನನಗೆ ತುಂಬಾ ಕೋಪ ಬಂದಿದೆ.
ನನ್ನ ಕೋಪವು ಉರಿಯುವ ಜ್ವಾಲೆಯಂತಿದೆ; ನೀವು ಅದರಲ್ಲಿ ಭಸ್ಮವಾಗಿ ಹೋಗುವಿರಿ.”
ಬರಿದಾದ ಹೃದಯ
(ಮತ್ತಾಯ 12:43-45)
24 “ದೆವ್ವವು ಒಬ್ಬ ವ್ಯಕ್ತಿಯಿಂದ ಹೊರಗೆ ಬಂದ ಮೇಲೆ ವಿಶ್ರಾಂತಿಗಾಗಿ ಸ್ಥಳವನ್ನು ಹುಡುಕುತ್ತಾ ನೀರಿಲ್ಲದ ಸ್ಥಳಗಳಲ್ಲಿ ಅಲೆದಾಡುತ್ತದೆ. ಆದರೆ ವಿಶ್ರಮಿಸಿಕೊಳ್ಳಲು ಅದಕ್ಕೆ ಸ್ಥಳ ದೊರೆಯುವುದಿಲ್ಲ. ಆದ್ದರಿಂದ ‘ನಾನು ಬಿಟ್ಟುಬಂದ ಮನೆಗೆ (ವ್ಯಕ್ತಿ) ಹಿಂತಿರುಗುವೆನು’ ಎಂದುಕೊಳ್ಳುತ್ತದೆ. 25 ಅದು ಆ ವ್ಯಕ್ತಿಯ ಬಳಿಗೆ ಹಿಂತಿರುಗಿ ಬಂದಾಗ, ಆ ಮನೆಯನ್ನು (ವ್ಯಕ್ತಿ) ಗುಡಿಸಿ ಅಲಂಕರಿಸಿರುವುದನ್ನು ಕಾಣುತ್ತದೆ. 26 ಆಗ ಹೊರಟುಹೋಗಿ ತನಗಿಂತಲೂ ಹೆಚ್ಚು ಕೆಟ್ಟವುಗಳಾದ ಬೇರೆ ಏಳು ದೆವ್ವಗಳನ್ನು ಕರೆದುಕೊಂಡು ಬರುತ್ತದೆ. ಬಳಿಕ ಆ ದೆವ್ವಗಳೆಲ್ಲಾ ಆ ಮನುಷ್ಯನೊಳಗೆ ಹೋಗಿ ಅಲ್ಲೇ ವಾಸಿಸುತ್ತವೆ. ಆಗ ಆ ವ್ಯಕ್ತಿಯು ಮೊದಲಿಗಿಂತಲೂ ಹೆಚ್ಚಿನ ಸಂಕಟಕ್ಕೆ ಒಳಗಾಗುತ್ತಾನೆ” ಎಂದು ಹೇಳಿದನು.
ನಿಜವಾದ ಭಾಗ್ಯವಂತರು
27 ಯೇಸು ಈ ಸಂಗತಿಗಳನ್ನು ಹೇಳಿದಾಗ, ಅಲ್ಲಿ, ಜನರೊಂದಿಗಿದ್ದ ಒಬ್ಬ ಸ್ತ್ರೀ ಯೇಸುವಿಗೆ, “ನಿನ್ನನ್ನು ಹೆತ್ತು ಪೋಷಿಸಿದ ತಾಯಿ ಭಾಗ್ಯವಂತಳೇ ಸರಿ!” ಎಂದು ಹೇಳಿದಳು.
28 ಆದರೆ ಯೇಸು, “ದೇವರ ವಾಕ್ಯವನ್ನು ಕೇಳಿ ಅದಕ್ಕೆ ವಿಧೇಯರಾಗುವ ಜನರೇ ಭಾಗ್ಯವಂತರು!” ಎಂದನು.
Kannada Holy Bible: Easy-to-Read Version. All rights reserved. © 1997 Bible League International